ಮಂಗಳವಾರ, ನವೆಂಬರ್ 29, 2022
29 °C

HAL: 15 ಯುದ್ಧ ಹೆಲಿಕಾಪ್ಟರ್‌ಗಳು ಸೇನೆಗೆ ಸೇರ್ಪಡೆ; ತಿಳಿಯಲೇಬೇಕಾದ 10 ಅಂಶಗಳು

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಆಗಸದಿಂದಲೇ ಕ್ಷಿಪಣಿಗಳು ಮತ್ತು ಇನ್ನಿತರ ಅಸ್ತ್ರಗಳನ್ನು ಹಾರಿಸಿ ವೈಮಾನಿಕ ಗುರಿಗಳನ್ನು ಧ್ವಂಸಗೊಳಿಸುವ ಜತೆಗೆ ಬಹುವಿಧದ ಪಾತ್ರ ವಹಿಸುವ ಸಾಮರ್ಥ್ಯದ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು (ಎಲ್‌ಸಿಎಚ್‌) ಭಾರತೀಯ ವಾಯುಪಡೆ ಸೋಮವಾರ ಅಧಿಕೃತವಾಗಿ ಸೇರ್ಪಡೆ ಮಾಡಿಕೊಂಡಿತು.

ಜೋಧ್‌ಪುರದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಾಯುಪಡೆ ಮುಖ್ಯಸ್ಥ ವಿ.ಆರ್. ಚೌಧರಿ ಅವರ ಸಮ್ಮುಖದಲ್ಲಿ ಹೆಲಿಕಾಪ್ಟರ್‌ಗಳು ಸೇನೆಗೆ ಸೇರ್ಪಡೆಯಾಗಿವೆ. ಮೊದಲ ಬ್ಯಾಚ್‌ನಲ್ಲಿ ಒಟ್ಟು 15 ವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. 10 ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ ಹಾಗೂ 5 ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

ಈ ಹೆಲಿಕಾಪ್ಟರ್‌ಗಳ ಬಗ್ಗೆ ತಿಳಿದುಕೊಳ್ಳಲೇ ಬೇಕಾದ 10 ಅಂಶಗಳು...

1) ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಈ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಸಂಪೂರ್ಣ ದೇಶಿಯ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಿದೆ.

2) ಈ ಲಘು ಯುದ್ಧ ಹೆಲಿಕಾಪ್ಟರ್‌ಗಳಿಗೆ ‘ಪ್ರಚಂಡ‘ ಎಂದು ನಾಮಕರಣ ಮಾಡಲಾಗಿದೆ.

3) ‘ಪ್ರಚಂಡ‘ ಹೆಲಿಕಾಪ್ಟರ್‌ಗಳನ್ನು ಅತಿ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆಗೆ ನಿಯೋಜಿಸುವಂತೆ ವಿನ್ಯಾಸಗೊಳಿಸಲಾಗಿದೆ.

4) ಎರಡು ಎಂಜಿನ್‌ಗಳನ್ನು ಹೊಂದಿರುವ ಈ ಹೆಲಿಕಾಪ್ಟರ್‌ಗಳು ಆಗಸದಿಂದಲೇ ಕ್ಷಿಪಣಿಗಳು ಮತ್ತು ವಿವಿಧ ಶಸ್ತ್ರಾಸ್ತ್ರಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿವೆ.

5) ‘ಪ್ರಚಂಡ‘ ಹೆಲಿಕಾಪ್ಟರ್‌ 5.8 ಟನ್ ತೂಕವನ್ನು ಹೊಂದಿದೆ. ಇದು 20 ಎಂಎಂ ಟರೆಂಟ್‌ ಗನ್ ಮತ್ತು 70 ಎಂಎಂ ಕ್ಷಿಪಣಿಗಳನ್ನು ಸಿಡಿಸಲಿದೆ.

6) ಹೆಲಿಕಾಪ್ಟರ್‌ನ ಮತ್ತೊಂದು ವಿಶೇಷತೆ ಎಂದರೆ, ಸಿಯಾಚಿನ್‌ನಂತಹ ಅತಿ ಎತ್ತರ ನೀರ್ಗಲ್ಲು ಪ್ರದೇಶದಲ್ಲೂ, ಮರುಭೂಮಿಯಲ್ಲೂ ಸಮರ್ಥ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

7) ₹3,887 ಕೋಟಿ ವೆಚ್ಚದಲ್ಲಿ 15 ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ನಿರ್ಮಾಣ ಮಾಡಲಾಗಿದೆ.

8) ಮುಂದಿನ ದಿನಗಳಲ್ಲಿ ಇನ್ನೂ 95 ಹೆಲಿಕಾಪ್ಟರ್‌ಗಳನ್ನು ನಿರ್ಮಾಣ ಮಾಡಿ ಸೇನೆಗೆ ಸೇರ್ಪಡೆ ಮಾಡುವ ಗುರಿಯನ್ನು ಎಚ್‌ಎಎಲ್‌ ಹೊಂದಿದೆ. 

9) ಪ್ರಚಂಡ ಹೆಲಿಕಾಪ್ಟರ್‌ಗಳು ಕಾಡ್ಗಿಚ್ಚು ನಂದಿಸಲು, ವಿವಿಧ ಮಾನವ ನಿರ್ಮಿತ ದಂಗೆಗಳ ವಿರುದ್ಧ ಕಾರ್ಯಾಚರಣೆ ಮಾಡಲು ಬಳಕೆಯಾಗಲಿವೆ.

10) ಈ ಹೆಲಿಕಾಪ್ಟರ್‌ಗಳು ವೇಗವಾಗಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿವೆ. ಹಾಗೂ ಒಂದೇ ಕಡೇ ಹಲವು ಗಂಟೆಗಳ ಕಾಲ ಹಾರಟ ಮಾಡಬಲ್ಲವು ಎಂದು ಭಾರತೀಯ ವಾಯುಪಡೆ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು