ಮಂಗಳವಾರ, ಜನವರಿ 19, 2021
17 °C

ಆಳ–ಅಗಲ: ಸಭ್ಯರ ಆಟಕ್ಕೆ ಜನಾಂಗ ದ್ವೇಷದ ಕಹಿ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತದ ಕ್ರಿಕೆಟಿಗರು ಆಸ್ಟ್ರೇಲಿಯಾದವರಿಗೆ ಮತ್ತೊಮ್ಮೆ ಸಮಾನತೆಯ ಪಾಠ ಕಲಿಸಿದರು.

ಅಂಗಳದೊಳಗೆ ಸ್ಲೆಡ್ಜಿಂಗ್, ಪಿಚ್‌ನಲ್ಲಿ ನುಗ್ಗಿಬಂದ ಅಪಾಯಕಾರಿ ಬೌನ್ಸರ್‌ಗಳು ಮತ್ತು ಪ್ರೇಕ್ಷಕರ ಗ್ಯಾಲರಿಯಿಂದ ತೂರಿಬಂದ ಜನಾಂಗೀಯ ನಿಂದನೆಗಳ ಬಿರುಮಳೆಯನ್ನು ಎದುರಿಸಿ ನಿಂತು ಭಾರತ ತಂಡವನ್ನು ಸೋಲಿನ ದವಡೆಯಿಂದ ಪಾರುಮಾಡಿ ‘ಸಮಬಲ’ ಮೆರೆದರು. ಬಹಳ ದಿನಗಳ ನಂತರ ಐದು ದಿನಪೂರ್ತಿ ನಡೆದ ಟೆಸ್ಟ್ ಪಂದ್ಯವನ್ನು ಕ್ರಿಕೆಟ್‌ ಪ್ರಿಯರು ಕಣ್ಮನ ತುಂಬಿಕೊಂಡರು. ಆದರೆ, ಈ ಐತಿಹಾಸಿಕ ಹೋರಾಟದ ಪಂದ್ಯವನ್ನು ನೆನಪಿಸಿಕೊಂಡಾಗಲೆಲ್ಲ ಜನಾಂಗೀಯ ನಿಂದನೆಯ ಕಮಟು ಘಾಟು ಕೂಡ ಅಡರಿಕೊಳ್ಳುವುದು ಅಷ್ಟೇ ಸತ್ಯ.

‘ಸಭ್ಯರ ಆಟ’ವೆಂದೇ ಕರೆಸಿಕೊಳ್ಳುವ ಕ್ರಿಕೆಟ್‌ನಲ್ಲಿ ವರ್ಣ ತಾರತಮ್ಯವು ಬ್ರಿಟಿಷರ ಕಾಲದಿಂದಲೂ ಇತ್ತು. ಆದರೆ  ಆಟ ಬೆಳೆದಂತೆ ನಿಯಮಗಳು ಬಂದವು. ಜಾಗೃತಿಯೂ ಮೂಡಿತು. ಯುರೋಪ್‌ಗಿಂತ ಏಷ್ಯಾದ ಕ್ರಿಕೆಟ್‌ ಶಕ್ತಿ ಪ್ರಬಲವಾಯಿತು. ಆದರೂ ಕೆಲವರ ಮನಸ್ಥಿತಿ ಬದಲಾಗಿಲ್ಲ. ಆಟದಲ್ಲಿ ತಾಂತ್ರಿಕ, ಆರ್ಥಿಕ ಬದಲಾವಣೆಗಳಾದರೂ ಹಳೆಯ ರೋಗಕ್ಕೆ ಮದ್ದು ಅರೆಯಲು ಸಾಧ್ಯವಾಗುತ್ತಿಲ್ಲ. ಅದರಲ್ಲಿಯೂ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಈ ಪಿಡುಗು ಹೆಚ್ಚು.  ಕ್ರಿಕೆಟ್ ಒಂದೇ ಅಲ್ಲ. ಭಾರತದ ವಿದ್ಯಾರ್ಥಿಗಳ ಹತ್ಯೆ ನಡೆದ ಘಟನೆಗಳೂ ಈ ಹಿಂದೆ ಆಗಿವೆ. ಉನ್ನತ ವರ್ಗ ಎಂಬ ಅಹಂಕಾರ ಮತ್ತು ಅಪರಾಧ ಹಿನ್ನೆಲೆಯ ಇತಿಹಾಸವಿರುವ ಆಸ್ಟ್ರೇಲಿಯಾದ ಕೆಲವು ಗುಂಪುಗಳಿಂದಾಗಿ ವರ್ಣಭೇದದ ಬೆಂಕಿ ಆಗಾಗ ಉರಿಯುತ್ತಿದೆ.

‘ಹಲವಾರು ವರ್ಷಗಳಿಂದ ಒಂದು ವರ್ಗದ ಜನರ ವಿರುದ್ಧ ಕೆಟ್ಟ ಭಾವನೆಗಳನ್ನು ಬಿಂಬಿಸುತ್ತ, ಇನ್ನೊಂದು ವರ್ಗವನ್ನು ಪೂರ್ವಗ್ರಹಪೀಡಿತರನ್ನಾಗಿ ಮಾಡಿರುವುದೇ ಈ ಸಮಸ್ಯೆ ಬೆಳೆಯಲು ಕಾರಣ’ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಮೈಕೆಲ್ ಹೋಲ್ಡಿಂಗ್ ಹೇಳಿದ ಮಾತು ಇಲ್ಲಿ ಪ್ರಸ್ತುತ. ಆದರೆ ಇದು ಕರಿಯ ಮತ್ತು ಬಿಳಿಯ ಜನಾಂಗಗಳಿಗೆ ಮಾತ್ರ ಸೀಮಿತವಾಗಿಲ್ಲ. ಏಷ್ಯಾ ಮೂಲದ ನಾಗರಿಕರು, ಆಸ್ಟ್ರೇಲಿಯಾ ನ್ಯೂಜಿಲೆಂಡ್‌ಗಳ ಆದಿವಾಸಿಗಳೂ ಈ ವರ್ಣದ್ವೇಷಕ್ಕೆ ತುತ್ತಾಗಿದ್ದಾರೆ.

‘ಕ್ರೀಡೆಗೆ ಜಗತ್ತನ್ನು ಬದಲಿಸುವ ತಾಕತ್ತಿದೆ.  ಏಕಕಾಲಕ್ಕೆ ಹಲವರಿಗೆ ಸ್ಪೂರ್ತಿ ತುಂಬುವ ಶಕ್ತಿ ಕ್ರೀಡೆಗೆ ಮಾತ್ರ ಇದೆ. ಯುವಜನಾಂಗದೊಂದಿಗೆ ಯುವಜನತೆಯ ಭಾಷೆಯಲ್ಲಿಯೇ ಸಂವಹನ ಮಾಡುವ ಗುಣ ಕ್ರೀಡೆಗೆ ಇದೆ’ ಎಂದು ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಹೇಳಿದ್ದರು.

ಆದರೆ, ಅಂತಹ ಒಂದು ಕ್ರೀಡಾಂಗಣದಲ್ಲಿಯೇ ಜನಾಂಗ ದ್ವೇಷ ಹೆಡೆಯಾಡಿಸುತ್ತಿರುವುದು ದುರದೃಷ್ಟಕರ. ಈ ಪಿಡುಗು ಕ್ರಿಕೆಟ್‌ಗೆ ಮಾತ್ರ ಸೀಮಿವಾಗಿಲ್ಲ. ಮಾನವಕುಲದ ಸೌಹಾರ್ದ, ಸಹಬಾಳ್ವೆ ಮೌಲ್ಯಗಳನ್ನು ಬಿಂಬಿಸುವ ಒಲಿಂಪಿಕ್ಸ್‌ನಲ್ಲಿಯೂ ಇಂತಹ ಘಟನೆಗಳು ನಡೆದಿರುವುದು ದುರದೃಷ್ಟಕರ.

ಕ್ರೀಡೆಯಲ್ಲಿ ಜನಾಂಗೀಯ ದ್ವೇಷದ ಘಟನೆಗಳು

ಕ್ರಿಕೆಟ್

* 2006: ಅಂತರರಾಷ್ಟ್ರೀಯ ಪಂದ್ಯದಲ್ಲಿ  ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹಾಶೀಂ ಆಮ್ಲಾ ಅವರನ್ನು  ವೀಕ್ಷಕ ವಿವರಣೆ ನೀಡುತ್ತಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್‌ ‘ಭಯೋತ್ಪಾದಕ’ ಎಂದು ವ್ಯಂಗ್ಯ ಮಾಡಿದ್ದರು. ಅದರಿಂದಾಗಿ ಕಾಮೆಂಟೇಟರ್ ಹುದ್ದೆಯಿಂದ ಅವರನ್ನು ತೆಗೆದುಹಾಕಲಾಗಿತ್ತು. ಬಹಿರಂಗ ಕ್ಷಮೆಯಾಚಿಸಿದ ನಂತರ ಮತ್ತೆ ಅವರು ಹುದ್ದೆಗೆ ಮರಳಿದ್ದರು.

* 2007: ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನಿ ಆಟಗಾರರನ್ನು ಅವಾಚ್ಯ ಪದಗಳಿಂದ ಹೀಯಾಳಿಸಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಹರ್ಷೆಲ್ ಗಿಬ್ಸ್‌ ಮಾತುಗಳು ಸ್ಟಂಪ್‌ ಮೈಕ್‌ನಲ್ಲಿ ಸೆರೆಯಾಗಿದ್ದವು. ಅದರಿಂದಾಗಿ ಗಿಬ್ಸ್‌ ಅವರನ್ನು ಎರಡು ಪಂದ್ಯಗಳಿಂದ ಅಮಾನತು ಮಾಡಲಾಗಿತ್ತು.

* 2008: ಸಿಡ್ನಿ ಟೆಸ್ಟ್‌ನಲ್ಲಿ ಭಾರತದ ಹರಭಜನ್ ಸಿಂಗ್ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಅವರನ್ನು ‘ಮಂಕಿ’ ಎಂದು ಜರೆದಿದ್ದಾರೆಂದು ಆರೋಪಿಸಲಾಗಿತ್ತು. ಇದು ಮಂಕಿಗೇಟ್ ಪ್ರಕರಣವೆಂದೇ ದಾಖಲಾಗಿದೆ.

* 2015: ಆಸ್ಟ್ರೇಲಿಯಾ ಕ್ರಿಕೆಟಿಗನೊಬ್ಬ ಇಂಗ್ಲೆಂಡ್‌ನ ಆಟಗಾರ ಮೊಯಿನ್ ಅಲಿ ಅವರನ್ನು ಒಸಾಮಾ (ಭಯೋತ್ಪಾದಕ) ಎಂದು ಕರೆದಿದ್ದು ವಿವಾದವಾಗಿತ್ತು.  

* 2015: ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಕ್ರೇಗ್ಎವರ್ಟನ್ ಎಂಬ ಆಟಗಾರನು ಪಾಕಿಸ್ತಾನದ ಅಜರ್ ಝೈದಿಯನ್ನು (ಸಸೆಕ್ಸ್‌ ಆಟಗಾರ) ತಮ್ಮ ದೇಶಕ್ಕೆ ಮರಳುವಂತೆ ಹಿಯಾಳಿಸಿದ್ದ

* 2015: ಸಾಮಾಜಿಕ ಜಾಲತಾಣದಲ್ಲಿ ವರ್ಣದ್ವೇಷದ ಸಂದೇಶ ಹಾಕಿದ್ದ ಜಿಂಬಾಬ್ವೆ ಕ್ರಿಕೆಟಿಗ ಮಾರ್ಕ್‌ ವರ್ಮಿಲೆನ್‌ನನ್ನು ಕ್ರಿಕೆಟ್‌ನಿಂದ ನಿಷೇಧಿಸಲಾಯಿತು

* 2019: ಜನಾಂಗೀಯ ನಿಂದನೆ ಮಾಡಿದ್ದ ಪಾಕಿಸ್ತಾನದ ಆಟಗಾರ ಸರ್ಫರಾಜ್ ಅಹಮದ್ ಅವರನ್ನು ನಾಲ್ಕು ಪಂದ್ಯಗಳಿಂದ ಅಮಾನತು ಮಾಡಲಾಗಿತ್ತು

* 2019: ನ್ಯೂಜಿಲೆಂಡ್‌ನಲ್ಲಿ ಪಂದ್ಯ ನಡೆದ ಸಂದರ್ಭದಲ್ಲಿ ಇಂಗ್ಲೆಂಡ್‌ ತಂಡದ ಬೌಲರ್ ಜೋಫ್ರಾ ಆರ್ಚರ್‌ ಅವರನ್ನು ಪ್ರೇಕ್ಷಕನೊಬ್ಬ ನಿಂದಿಸಿದ್ದ

* 2021: ಸಿಡ್ನಿ ಟೆಸ್ಟ್‌ನಲ್ಲಿ ಭಾರತದ ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ವಿರುದ್ಧ  ಪ್ರೇಕ್ಷಕರ ಒಂದು ಗುಂಪು ಜನಾಂಗೀಯ ನಿಂದನೆ ಮಾಡಿತು

ಒಲಿಂಪಿಕ್ಸ್

* 1968: ಬ್ಲ್ಯಾಕ್ ಸೆಲ್ಯೂಟ್– ಕಪ್ಪು ಜನಾಂಗದವರ ಮೇಲಿನ ದೌರ್ಜನ್ಯಗಳನ್ನು ವಿರೋಧಿಸಿ ವಿಜಯ ವೇದಿಕೆಯ ಮೇಲೆ ಪದಕ ಪಡೆದ ನಂತರ ಆಫ್ರೊ–ಅಮೆರಿಕನ್ ಅಥ್ಲೀಟ್‌ಗಳಾದ ಟಾಮಿ ಸ್ಮಿತ್ ಮತ್ತು ಜಾನ್ ಕಾರ್ಲೋಸ್ ತಮ್ಮ ಕೈಗೆ ಕಪ್ಪು ಕೈಗವಸು ಧರಿಸಿ, ಮುಷ್ಟಿಯನ್ನು ಮೇಲಕ್ಕೆತ್ತಿ, ಮುಖ ಬಗ್ಗಿಸಿ ನಿಂತರು. ಇದು ವಿಶ್ವದಾದ್ಯಂತ ಬ್ಲ್ಯಾಕ್‌ ಸೆಲ್ಯೂಟ್ ಎಂದೇ ಹೆಸರಾಯಿತು.

ಬಾಕ್ಸಿಂಗ್

* ವಿಶ್ವ ಚಾಂಪಿಯನ್‌ ಆಗಿ ಬಂದ ಕ್ಯಾಸಿಯಸ್ ಕ್ಲೆಗೆ (ಮೊಯಮ್ಮದ್ ಅಲಿ) ಬಿಳಿಯರಿಗಾಗಿ ಇದ್ದ ಹೋಟೆಲ್‌ನಲ್ಲಿ ಊಟ ಕೊಡಲು ನಿರಾಕರಿಸಲಾಯಿತು. ಅಮೆರಿಕ ವಿಶ್ವ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದರೂ ತನ್ನ ಕಪ್ಪು ಜನಾಂಗದ ಮೇಲಿರುವ ಅನಾದರ ಕಡಿಮೆಯಾಗದಿರುವುದಕ್ಕೆ ರೋಸಿಹೋದ ಕ್ಯಾಸಿಯಸ್ ತಮ್ಮ ಪದಕವನ್ನು ಒಹಿಯೊ ನದಿಗೆ ಎಸೆದರು.

ಗಾಲ್ಫ್‌

* 2011ರಲ್ಲಿ ಮಾಜಿ ಕ್ಯಾಡಿ ಸ್ಟೀವ್ ವಿಲಿಯಮ್ಸ್‌ ಗಾಲ್ಫ್‌ ದಿಗ್ಗಜ ಟೈಗರ್ ವುಡ್ಸ್ ಅವರನ್ನು ಅವಾಚ್ಯ ಪದದಿಂದ ಮೂದಲಿಸಿದ್ದರು. ನಂತರ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿ ಕ್ಷಮೆ ಕೇಳಿದರು. ಗಾಲ್ಫ್ ಕ್ರೀಡೆಯಲ್ಲಿ ಅತ್ಯಂತ ಶ್ರೀಮಂತ ಆಟಗಾರ ಟೈಗರ್ ವುಡ್ಸ್‌ ಆಫ್ರೊ–ಅಮೆರಿಕ ಮೂಲದವರು.

ಮೋಟಾರ್‌ಸ್ಪೋರ್ಟ್ಸ್‌

* ಫಾರ್ಮುಲಾ ರೇಸ್‌ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಪ್ಪು ಜನಾಂಗದ ಮೊದಲ ವ್ಯಕ್ತಿ ಲೂಯಿಸ್ ಹ್ಯಾಮಿಲ್ಟನ್. 2008ರಲ್ಲಿ ಸ್ಪ್ಯಾನಿಷ್‌ ರೇಸ್ ಸಂದರ್ಭದಲ್ಲಿ ಪ್ರೇಕ್ಷಕರಿಂದ ತೀವ್ರ ನಿಂದನೆಗೆ ತುತ್ತಾಗಿದ್ದರು.  ಅವರು ತಮ್ಮದೇ ತಂಡದ ಕೆಲವು ಬಿಳಿಯ ರೇಸ್‌ ಡ್ರೈವರ್‌ಗಳಿಂದಲೂ ಜನಾಂಗೀಯ ನಿಂದನೆಗೊಳಗಾದ ಉದಾಹರಣೆಗಳಿವೆ.

ನಿಂದನೆ ತಡೆಗೆ ಇದೆ ಕಠಿಣ ನೀತಿ


ಮೊಹಮ್ಮದ್ ಸಿರಾಜ್ ಮತ್ತು ಮಯಂಕ್ ಅಗರವಾಲ್

ಕ್ರಿಕೆಟ್‌ ‘ಸಭ್ಯರ ಆಟ’ ಎನಿಸಿಕೊಂಡಿದ್ದರೂ ಕ್ರೀಡಾಂಗಣದಲ್ಲಿ ಸಭ್ಯತೆಯ ಗಡಿಯನ್ನು ದಾಟಿದ ಉದಾಹರಣೆಗಳಿಗೆ ಕೊರತೆ ಇಲ್ಲ. ಕ್ರಿಕೆಟ್‌ ಕ್ಷೇತ್ರದ ಹಲವು ದಿಗ್ಗಜರು ಈ ಆರೋಪಕ್ಕೆ ಒಳಗಾದದ್ದಿದೆ.

ಹಾಗೆಂದು, ಕ್ರಿಕೆಟ್‌ನಲ್ಲಿ ತಾರತಮ್ಯ ಅಥವಾ ಜನಾಂಗೀಯ ನಿಂದನೆ ತಡೆಗೆ ಕಠಿಣ ನೀತಿಗಳಿಲ್ಲ ಎನ್ನುವಂತಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಈ ಬಗ್ಗೆ ಸ್ಪಷ್ಟವಾದ ನೀತಿಯನ್ನು ಹೊಂದಿದೆ. ಅಷ್ಟೇ ಅಲ್ಲ ಇಂಥ ನೀತಿಯನ್ನು ಜಾರಿ ಮಾಡುವಂತೆ ಕ್ರಿಕೆಟ್‌ ಆಡುವ ಎಲ್ಲಾ ರಾಷ್ಟ್ರಗಳ ಮಂಡಳಿಗಳಿಗೂ ಸೂಚಿಸಿದೆ.

ಐಸಿಸಿ ತಾರತಮ್ಯ ವಿರೋಧಿ ನೀತಿಯ ಪ್ರಮುಖ ಕೆಲವು ಅಂಶಗಳು:

l ಆಟಗಾರರು ಎದುರಾಳಿಗಳ ವಿರುದ್ಧ ಆಕ್ರಮಣಕಾರಿ ಮನೋಭಾವ ತೋರುವುದಾಗಲಿ, ಜನಾಂಗ, ಧರ್ಮ, ಸಂಸ್ಕೃತಿ, ಮೈಬಣ್ಣ, ಜನಾಂಗೀಯ ಮೂಲ, ರಾಷ್ಟ್ರೀಯತೆ, ಲಿಂಗ, ಲೈಂಗಿಕ ದೃಷ್ಟಿಕೋನ, ಅಂಗವೈಕಲ್ಯ, ವೈವಾಹಿಕ ಸ್ಥಿತಿ ಅಥವಾ ಮಾತೃತ್ವದ ಸ್ಥಿತಿ ಮುಂತಾದ ಯಾವುದೇ ವಿಚಾರಗಳನ್ನು ಉಲ್ಲೇಖಿಸಿ ಅವಮಾನಿಸುವುದಾಗಲಿ, ಬೆದರಿಸುವುದಾಗಲಿ ಮಾಡುವಂತಿಲ್ಲ.

l ತಾರತಮ್ಯದ ಘಟನೆ ನಡೆದರೆ, ಅಧಿಕೃತ ಸಂಸ್ಥೆಯ ಮುಖಾಂತರ ಅದನ್ನು ಐಸಿಸಿಗೆ ತಿಳಿಸಬೇಕು. ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಮಾಡುವ ಹೊಣೆ ಐಸಿಸಿಯದ್ದಾದರೂ, (ಆಟವಾಡುವ ರಾಷ್ಟ್ರಗಳ ನಡುವಿನ ಒಪ್ಪಂದಕ್ಕೆ ಅನುಗುಣವಾಗಿ) ಪ್ರಕರಣವನ್ನು ಸಂಬಂಧಪಟ್ಟ ಕ್ರಿಕೆಟ್‌ ಮಂಡಳಿಗೆ ವರ್ಗಾಯಿಸಲು ಅವಕಾಶ ಇರುತ್ತದೆ.

l ಇತರ ಕ್ರಿಕೆಟ್‌ ಮಂಡಳಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಂಡಳಿಗಳಿಗೆ ಅನ್ವಯವಾಗುವಂತೆ ಇಂಥ ನಿಯಮಗಳನ್ನು ರೂಪಿಸಬಹುದು. ಕ್ರಿಕೆಟ್‌ ಮಂಡಳಿಗಳ ನೌಕರರು, ಅಧಿಕಾರಿಗಳು, ವಾಣಿಜ್ಯ ಪಾಲುದಾರರು ಹಾಗೂ ಈ ಕ್ರೀಡೆಗೆ ಸಂಬಂಧಿಸಿದ ಎಲ್ಲರಿಗೂ ಈ ನೀತಿ ಅನ್ವಯವಾಗುತ್ತದೆ. ತಾರತಮ್ಯದ ಹೇಳಿಕೆ ನೀಡುವುದನ್ನು ಯಾವ ಕಾರಣಕ್ಕೂ ಸಹಿಸಲಾಗದು

l ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಈ ನಿಯಮ ಉಲ್ಲಂಘನೆಯಾದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುವುದು. ಕ್ರೀಡಾಪಟುಗಳು ನಿಯಮ ಉಲ್ಲಂಘಿಸಿದ್ದು ಸಾಬೀತಾದರೆ ಅವರಿಗೆ ಸಸ್ಪೆನ್ಷನ್‌ ಪಾಯಿಂಟ್‌ಗಳ ಆಧಾರದಲ್ಲಿ ನಾಲ್ಕರಿಂದ ಎಂಟು ಪಂದ್ಯಗಳವರೆಗೆ ನಿಷೇಧ ಹೇರಲು ಅವಕಾಶ ಇದೆ. ತಪ್ಪನ್ನು ಪುನರಾವರ್ತಿಸಿದರೆ ಒಂದು ವರ್ಷ ಅಥವಾ ಶಾಶ್ವತವಾಗಿ ನಿಷೇಧ ಹೇರಲೂ ಅವಕಾಶ ಇದೆ.

ವೀಕ್ಷಕರಿಗೂ ಅನ್ವಯ

ಐಸಿಸಿ ರೂಪಿಸಿದ ತಾರತಮ್ಯ ವಿರೋಧಿ ನೀತಿಯು ವೀಕ್ಷಕರಿಗೂ ಅನ್ವಯವಾಗುತ್ತದೆ. ಅದರ ಪ್ರಕಾರ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುವವರಲ್ಲಿ ಜಾಗೃತಿ ಮೂಡಿಸುವ ಹೊಣೆ ಆಯಾ ದೇಶದ ಕ್ರಿಕೆಟ್‌ ಮಂಡಳಿಗಳದ್ದಾಗಿರುತ್ತದೆ. ಕ್ರೀಡಾಂಗಣದಲ್ಲಿ ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಜಾಗೃತಿ ಮೂಡಿಸಬಹುದು.

ವೀಕ್ಷಕರು ಆಕ್ಷೇಪಾರ್ಹ ಫಲಕಗಳನ್ನು ಹಿಡಿದಿದ್ದರೆ ಕೂಡಲೇ ತೆರವುಗೊಳಿಸಬೇಕು. ನಿಯಮಗಳನ್ನು ಮೀರಿ ವರ್ತನೆ ತೋರುವವರನ್ನು ಸ್ಥಳದಿಂದ ಹೊರಹಾಕಬಹುದು ಮತ್ತು ಮುಂದೆ ಅವರು ಕ್ರೀಡಾಂಗಣಕ್ಕೆ ಬರುವುದನ್ನು ಶಾಶ್ವತವಾಗಿ ತಡೆಯಬಹುದು. ಮಾತ್ರವಲ್ಲ, ಸ್ಥಳೀಯ ನಿಯಮಗಳಿಗೆ ಅನುಗುಣವಾಗಿ ಅಂಥವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬಹುದು.

ಕಠಿಣ ಶಿಕ್ಷೆಯಾಗಿದ್ದು ಕಡಿಮೆ

ತಾರತಮ್ಯ ವಿರೋಧಿ ನೀತಿ ಉಲ್ಲಂಘಿಸಿದ ಮತ್ತು ಜನಾಂಗೀಯ ನಿಂದನೆಯ ಪ್ರಕರಣಗಳು ಸಾಕಷ್ಟು ನಡೆದಿದ್ದರೂ, ಆ ಕಾರಣಕ್ಕಾಗಿಯೇ ಶಿಕ್ಷೆಗೆ ಒಳಗಾದ ಕ್ರೀಡಾಪಟುಗಳ ಸಂಖ್ಯೆ ತೀರಾ ವಿರಳ.

ಪ್ರಕರಣ ವರದಿಯಾದ ಕೂಡಲೇ ನಿಯಮಾನುಸಾರ, ದೂರು ದಾಖಲಾಗುತ್ತದೆ. ತನಿಖೆಗೆ ಆಯೋಗ ನೇಮಕ, ವಿಚಾರಣೆ ಎಲ್ಲವೂ ನಡೆಯುತ್ತವೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಕ್ರೀಡಾಪಟುಗಳು ತಮ್ಮ ವರ್ತನೆಗೆ ಕ್ಷಮೆ ಯಾಚಿಸುವಲ್ಲಿಗೆ ಪ್ರಕರಣವನ್ನು ಇತ್ಯರ್ಥಗೊಳಿಸಿದ ಉದಾಹರಣೆಗಳೇ ಹೆಚ್ಚು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು