ಬುಧವಾರ, ಆಗಸ್ಟ್ 17, 2022
26 °C

ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗದ ವಿಶೇಷತೆ ಏನು?  

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Atal tunnel

ಹಿಮಾಚಲ ಪ್ರದೇಶದ ಮನಾಲಿ ಮತ್ತು ಲೇಹ್ ಅನ್ನು ಸಂಪರ್ಕಿಸುವ ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗದ ಕಾಮಗಾರಿ ಹತ್ತು ವರ್ಷಗಳ ಅವಧಿಯಲ್ಲಿ ಪೂರ್ಣಗೊಂಡಿದೆ. ಸಮುದ್ರ ಮಟ್ಟದಿಂದ ಸುಮಾರು 10,000 ಅಡಿ ಎತ್ತರದಲ್ಲಿರುವ ಹೆದ್ದಾರಿ ಸುರಂಗ ಮಾರ್ಗದ ಕೆಲಸ ಅಂದಾಜಿನ ಪ್ರಕಾರ ಆರು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿತ್ತು.

ಮನಾಲಿಯನ್ನು ಲೇಹ್‌ಗೆ ಸಂಪರ್ಕಿಸುವ ಅಟಲ್ ಸುರಂಗವು  ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ. ಈ ಸುರಂಗವನ್ನು ಪೂರ್ಣಗೊಳಿಸಲು ಅಂದಾಜು ಅವಧಿ 6 ವರ್ಷಗಳಿಗಿಂತ ಕಡಿಮೆಯಿತ್ತು. ಆದರೆ ಇದು 10 ವರ್ಷಗಳಲ್ಲಿ ಪೂರ್ಣಗೊಂಡಿದೆ ಎಂದು ಮುಖ್ಯ ಎಂಜಿನಿಯರ್ ಕೆ.ಪಿ.ಪುರುಷೋತ್ತಮನ್  ಹೇಳಿದ್ದಾರೆ.

ಈ ಸುರಂಗದಿಂದಾಗಿ ಮನಾಲಿ- ಲೇಹ್  ನಡುವಿನ ಪ್ರಯಾಣದ ಅಂತರ 46 ಕಿ.ಮೀನಷ್ಟು ಕಡಿಮೆಯಾಗಲಿದ್ದು 4 ಗಂಟೆಗಳ ಉಳಿತಾಯ ಆಗಲಿದೆ. ಚಳಿಗಾಲದಲ್ಲಿ ರೋಹ್ಟಾಂಗ್ ಪಾಸ್ 6 ತಿಂಗಳುಗಳ ಕಾಲ ಮುಚ್ಚುವುದರಿಂದ ಮನಾಲಿ - ಸರ್ಚು - ಲೇಹ್ ರಸ್ತೆಯೂ ಬಂದ್ ಆಗುತ್ತದೆ. ಹಾಗಾಗಿ ಈ ಸುರಂಗ ಮಾರ್ಗವು ಲೇಹ್- ಮನಾಲಿಯನ್ನು ಸಂಪರ್ಕಿಸುವಲ್ಲಿ ಪ್ರಧಾನ ಪಾತ್ರವಹಿಸಲಿದೆ.

ಸುರಂಗದಲ್ಲಿ ಏನೆಲ್ಲಾ ಇದೆ? 
* 9.2 ಕಿ.ಮೀ ಉದ್ದವಿರುವ ಈ ಸುರಂಗದಲ್ಲಿ ಪ್ರತಿ 60 ಮೀಟರ್‌ಗಳಿಗೆ ಸಿಸಿಟಿವಿ ಕ್ಯಾಮೆರಾ ಮತ್ತು ಸುರಂಗದ ಒಳಗಡೆ ಪ್ರತೀ 500 ಮೀಟರ್‌ಗಳಿಗೊಂದರಂತೆ ತುರ್ತು ನಿರ್ಗಮನ ಬಾಗಿಲುಗಳಿವೆ. 

*ಅಗ್ನಿ ಅನಾಹುತಗಳಿಂದ ಕಾಪಾಡಲು ಫೈರ್ ಹೈಡ್ರಾಂಟ್ಸ್ ಅಳವಡಿಸಲಾಗಿದೆ.

*ಸುರಂಗದ ಅಗಲ 10.5 ಮೀಟರ್, ಎರಡು ಬದಿಯಲ್ಲಿಯೂ 1 ಮೀಟರ್‌ನಷ್ಟು ಫುಟ್‌ಪಾತ್ ಇದೆ.

ಅಟಲ್ ಸುರಂಗ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು 
ಈ ಯೋಜನೆಯನ್ನು  1983 ರಲ್ಲಿ ಇಂದಿರಾ ಗಾಂಧಿ  ಸರ್ಕಾರ ರೂಪಿಸಿತ್ತು. ಆಮೇಲೆ ಜೂನ್ 2000ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸುರಂಗ ನಿರ್ಮಾಣದ ಕಾರ್ಯವನ್ನು ಘೋಷಿಸಿ, ಶಂಕು ಸ್ಥಾಪನೆ ಮಾಡಿದ್ದರು. ಸುರಂಗದ ಕೆಲಸ ಪದೇ ಪದೇ ನಿಂತು ಹೋಗಿ ನಂತರ 2010ರ ಜೂನ್‌ನಲ್ಲಿ ಪ್ರಾರಂಭವಾಯಿತು.

ಆರು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಆದಾಗ್ಯೂ ಇದು ಪೂರ್ಣಗೊಳ್ಳಲು 10 ವರ್ಷಗಳಿಗಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿತು. ಇದನ್ನು ತಿಂಗಳ ಕೊನೆಯಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಈ ಸುರಂಗವು ಮನಾಲಿಯನ್ನು ಲಾಹೌಲ್ ಕಣಿವೆಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಮನಾಲಿ- ರೋಹ್ಟಾಂಗ್ ಪಾಸ್ ಸರ್ಚು-ಲೇಹ್ ರಸ್ತೆಯ ರಸ್ತೆ ಕ್ರಮಿಸುವುದನ್ನು 46 ಕಿಲೋಮೀಟರ್ ಕಡಿಮೆ ಮಾಡುತ್ತದೆ. 8.8 ಕಿ.ಮೀ ಉದ್ದದ ಸುರಂಗವು ಸಮುದ್ರ ಮಟ್ಟದಿಂದ 3,000 ಮೀಟರ್ ಎತ್ತರದಲ್ಲಿದೆ. ಇದು 10.5 ಮೀಟರ್ ಅಗಲದ ಸಿಂಗಲ್ ಟ್ಯೂಬ್ ಬೈ-ಲೇನ್ ಸುರಂಗವಾಗಿದ್ದು ಒಳಗಡೆ ಅಗ್ನಿ ನಿರೋಧಕ ತುರ್ತು ಸುರಂಗವಿದೆ.

ಭದ್ರತಾ ಪಡೆಗಳಿಗೆ ಪ್ರಮುಖ ಕಾರ್ಯತಂತ್ರದ ಅಗತ್ಯ ಸಂಪರ್ಕಕ್ಕೆ ಇದು ಸಹಾಯ ಮಾಡುತ್ತದೆ.

*  ಮಾಜಿ ಪ್ರಧಾನಿ ಅಟಲ್  ಬಿಹಾರಿ ವಾಜಪೇಯಿ ಅವರ 95 ನೇ ಜನ್ಮ ದಿನಾಚರಣೆಯ ನೆನಪಿಗಾಗಿ 2019 ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ರೋಹ್ಟಾಂಗ್ ಮಾರ್ಗವನ್ನು 'ಅಟಲ್ ಸುರಂಗ' ಎಂದು ಮರುನಾಮಕರಣ ಮಾಡಿದ್ದರು.

*ಕೋವಿಡ್ ಲಾಕ್‍ಡೌನ್ ಸಮಯದಲ್ಲಿಯೂ ಸುರಂಗದ ಕೆಲಸವೇನೂ ಸ್ಥಗಿತವಾಗಿಲ್ಲ. ಸುಮಾರು 700 ಕಾರ್ಮಿಕರು ಇಲ್ಲಿ ಶ್ರಮವಹಿಸಿದ್ದಾರೆ. ಕೋವಿಡ್ ವ್ಯಾಪಿಸುತ್ತಿದ್ದ  ಹೊತ್ತಲ್ಲಿ 10 ದಿನಗಳ ಕಾಲ ಕೆಲಸವನ್ನು ಸ್ಥಗಿತಗೊಳಿಸಲಾಗಿದ್ದರೂ, ಲಾಕ್‌ಡೌನ್ ನಡುವೆಯೂ ನಿರ್ಣಾಯಕ ನಿರ್ಮಾಣ ಕಾರ್ಯಗಳು ಮುಂದುವರೆದಿತ್ತು. 

ಮಹಾರಾಷ್ಟ್ರದ  ಬಿಎಸ್‌ಎನ್‌ಎಲ್‌ನ ಸಿಜಿಎಂ ಮಾಡಿದ ಟ್ವೀಟ್‌ ಸುರಂಗದ ಕೆಲಸದಲ್ಲಿ ಕಂಪನಿಯ ಪಾಲ್ಗೊಳ್ಳುವಿಕೆ ಸೂಚಿಸುತ್ತದೆ. ಗಡಿನಾಡಿನ ಪ್ರದೇಶಗಳಲ್ಲಿನ ಕಾರ್ಯತಂತ್ರದ ಅವಶ್ಯಕತೆಗಳನ್ನು ಪೂರೈಸಲು ರೋಹ್ಟಾಂಗ್‌ನ ಅಟಲ್  ಸುರಂಗದಲ್ಲಿ ಬಿಎಸ್ಎನ್ಎಲ್‍‌ ಎಂಜಿನಿಯರ್‌ಗಳು ಮೂರು 4ಜಿ ಬಿಟಿಎಸ್ ಸ್ಥಾಪಿಸುವ  ಕೆಲಸ ಪೂರ್ಣಗೊಳಿಸಿದ್ದಾರೆ ಎಂದು ಅವರು ಟ್ವೀಟಿಸಿದ್ದರು.

*ಯಾವುದೇ ಹವಾಮಾನದಲ್ಲಿಯೂ ಪ್ರತಿದಿನ 3,000 ವಾಹನಗಳು ಈ ಮೂಲಕ ಸಂಚರಿಸಬಹುದಾಗಿದೆ. ವಾಹನಗಳ ವೇಗ ಗಂಟೆಗೆ 80ಕಿ.ಮೀ ಎಂದು ನಿಗದಿಪಡಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು