ಭಾನುವಾರ, ಫೆಬ್ರವರಿ 23, 2020
19 °C

Explainer | ಎಲ್‌ಐಸಿ: ಖಾಸಗೀಕರಣಕ್ಕೆ ಮುನ್ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

LIC

ವಿಮಾ ಕ್ಷೇತ್ರದ ದೈತ್ಯ ಸಂಸ್ಥೆ, ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಸ್ವಲ್ಪ ಪಾಲನ್ನು ಮಾರಾಟ ಮಾಡಲಾಗುವುದು ಎಂದು 2020–21ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪಾಲು ಮಾರಾಟದ ಮೂಲಕ ₹2.10 ಲಕ್ಷ ಕೋಟಿ ಸಂಗ್ರಹದ ಗುರಿಯನ್ನು ಅವರು ಹಾಕಿಕೊಂಡಿದ್ದಾರೆ. ಎಲ್‌ಐಸಿ ಮತ್ತು ಐಡಿಬಿಐ ಬ್ಯಾಂಕ್‌ನ ಷೇರು ಮಾರಾಟದ ಮೂಲಕ ₹90 ಸಾವಿರ ಕೋಟಿ ಬರಲಿದೆ ಎಂದು ನಿರ್ಮಲಾ ಹೇಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಷೇರು ಮಾರಾಟದ ಮೂಲಕ ಸಂಗ್ರಹಿಸುವ ಮೊತ್ತ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2019–20ರ ಸಾಲಿನ ಪ‍ರಿಷ್ಕೃತ ಅಂದಾಜಿನಲ್ಲಿ ಷೇರು ಮಾರಾಟದ ಮೂಲಕ ₹65 ಸಾವಿರ ಕೋಟಿ ಪಡೆಯುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, 2019ರ ಡಿಸೆಂಬರ್‌ವರೆಗೆ ₹18 ಸಾವಿರ ಕೋಟಿ ಮಾತ್ರ ಸಂಗ್ರಹವಾಗಿದೆ. ಈ ಬಾರಿ, ನಿಗದಿತ ಗುರಿ ಮುಟ್ಟುವ ವಿಶ್ವಾಸವನ್ನು ಸಚಿವೆ ವ್ಯಕ್ತಪಡಿಸಿದ್ದಾರೆ. ಬೃಹತ್‌ ಸಂಸ್ಥೆ ಎಲ್‌ಐಸಿಯ ಪಾಲನ್ನು ಮಾರಾಟ ಮಾಡಲು ಮುಂದಾಗಿರುವುದರಿಂದ ಈ ಬಾರಿ ಗುರಿ ಮುಟ್ಟುವ ಸಾಧ್ಯತೆ ಹೆಚ್ಚು. ಆದರೆ, ಎಲ್‌ಐಸಿ ಪಾಲು ಮಾರಾಟಕ್ಕೆ ಸಂಸ್ಥೆಯ ನೌಕರರ ಸಂಘದ ವಿರೋಧವೂ ಇದೆ.

ಮಾರುಕಟ್ಟೆ ಬಂಡವಾಳದಲ್ಲಿ ಮೊದಲ ಸ್ಥಾನಕ್ಕೆ

ಎಲ್‌ಐಸಿಯ ಷೇರು ಮಾರಾಟದ ಪ್ರಸ್ತಾಪವನ್ನು ನಿರ್ಮಲಾ ಸೀತಾರಾಮನ್‌ ಅವರು ಮಾಡಿದ್ದರೂ ಎಷ್ಟು ಪ್ರಮಾಣವನ್ನು ಮಾರಾಟ ಮಾಡಲಾಗುವುದು ಎಂದು ಹೇಳಿಲ್ಲ. ಶೇ 10ರಷ್ಟು ಪಾಲನ್ನು ಮಾರಾಟ ಮಾಡಿದರೂ ಷೇರು ಮಾರುಕಟ್ಟೆಗೆ ಪ್ರವೇಶಿಸಿದ ದಿನವೇ ಈ ಸಂಸ್ಥೆಯು ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ದೇಶದ ಅತಿ ದೊಡ್ಡ ಸಂಸ್ಥೆ ಎನಿಸಲಿದೆ. ಈಗ ಮುಂಚೂಣಿಯಲ್ಲಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗೂ ಟಿಸಿಎಸ್‌ ಸಂಸ್ಥೆಗಳನ್ನು ಇದು ಹಿಂದಿಕ್ಕಲಿದೆ. ಉದ್ದೇಶಿತ ಐಪಿಒ (ಸಾರ್ವಜನಿಕರಿಗೆ ಷೇರು ಖರೀದಿ ಅವಕಾಶ) ಸರ್ಕಾರಕ್ಕೆ ಭಾರಿ ಪ್ರಮಾಣದಲ್ಲಿ ಹಣವನ್ನು ತಂದುಕೊಡಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಆರು ದಶಕಗಳ ಇತಿಹಾಸ ಹೊಂದಿರುವ ಈ ಸಂಸ್ಥೆಯ ನಿರ್ವಹಣಾ ಸಂಪತ್ತಿನ ಮೌಲ್ಯವೂ ಭಾರಿ ಪ್ರಮಾಣದಲ್ಲಿದೆ. ಅವುಗಳ ಶೇ 25–30ರಷ್ಟು ಮೌಲ್ಯವನ್ನು ಲೆಕ್ಕ ಹಿಡಿದರೂ ₹8 ಲಕ್ಷದಿಂದ ₹10 ಲಕ್ಷ ಕೋಟಿಯಾಗುತ್ತದೆ. ಆದ್ದರಿಂದ ಸರ್ಕಾರವು ಹಂತಹಂತವಾಗಿ ಷೇರು ವಿಕ್ರಯ ಯೋಜನೆ ರೂಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ನೋಡಿದರೆ ಮುಕೇಶ್‌ ಅಂಬಾನಿ ನೇತೃತ್ವದ ಆರ್‌ಐಎಲ್‌ ಸಂಸ್ಥೆಯು ಮೊದಲ ಸ್ಥಾನದಲ್ಲಿ (₹8.77 ಲಕ್ಷ ಕೋಟಿ) ಮತ್ತು ಟಿಸಿಎಸ್‌ (₹8.12 ಲಕ್ಷ ಕೋಟಿ) ಎರಡನೇ ಸ್ಥಾನದಲ್ಲಿವೆ. ಎಲ್‌ಐಸಿ ಆರ್ಥಿಕವಾಗಿ ಬಲಿಷ್ಠ ಸಂಸ್ಥೆಯಾಗಿದೆ. 2019ನೇ ಸಾಲಿನಲ್ಲಿ ಸಂಸ್ಥೆಯ ನಿರ್ವಹಣೆಯಲ್ಲಿರುವ ಒಟ್ಟಾರೆ ಸಂಪತ್ತಿನ ಮೌಲ್ಯವು ₹30 ಲಕ್ಷ ಕೋಟಿಗೆ ತಲುಪಿತ್ತು.

ಹೂಡಿಕೆ ಆದಾಯ ಹಾಗೂ ಪ್ರೀಮಿಯಂಗಳನ್ನು ಸೇರಿಸಿ ಸಂಸ್ಥೆಯ ಒಟ್ಟಾರೆ ಆದಾಯವು 2018–19ನೇ ಸಾಲಿನಲ್ಲಿ ಸುಮಾರು ₹5,60,784 ಕೋಟಿ ಆಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ 7.10ರಷ್ಟು ಏರಿಕೆಯಾಗಿದೆ.

ಜೀವ ವಿಮೆಯ ಹೆಜ್ಜೆಗುರುತು

ಆಧುನಿಕ ಪರಿಕಲ್ಪನೆಯ ಜೀವವಿಮೆ 1818ರ‌ಲ್ಲಿ ಇಂಗ್ಲೆಂಡ್‌ನಿಂದ ಭಾರತಕ್ಕೆ ಅಡಿಯಿಟ್ಟಿತು. ಕೋಲ್ಕತ್ತದಲ್ಲಿ ದೇಶದ ಮೊದಲ ವಿಮೆ ಕಂಪೆನಿ ‘ಓರಿಯೆಂಟಲ್ ಲೈಫ್ ಇನ್ಶುರೆನ್ಸ್’ ಪ್ರಾರಂಭವಾಯಿತು. ಆರಂಭದಲ್ಲಿ ದೇಶದಲ್ಲಿದ್ದ ಐರೋಪ್ಯ ಸಮುದಾಯಕ್ಕೆ ಮಾತ್ರ ಜೀವವಿಮೆ ಸೌಲಭ್ಯ ಲಭ್ಯವಿತ್ತು. ಆ ಕಾಲದ ಬಹುತೇಕ ಸಂಸ್ಥೆಗಳು ಭಾರತೀಯರಿಗೆ ವಿಮೆ ಮಾಡುತ್ತಿರಲಿಲ್ಲ. ಬಾಬು ಮುತ್ಯಾಲಾಲ್ ಮೊದ ಲಾದವರ ಪರಿಶ್ರಮದಿಂದ ಭಾರತೀಯರೂ ಜೀವಿವಿಮೆಗೆ ಒಳಪಡುವಂತಾಯಿತು. ಆದರೆ ಭಾರತೀಯರನ್ನು ಎರಡನೇ ದರ್ಜೆಯ ಜನರ ರೀತಿ ಕಾಣುತ್ತಿದ್ದ ವಿಮಾ ಕಂಪೆನಿಗಳು ಹೆಚ್ಚು ಪ್ರೀಮಿಯಂ ವಿಧಿಸುತ್ತಿದ್ದವು. 1870ರಲ್ಲಿ ಶುರುವಾದ ‘ಬಾಂಬೆ ಮ್ಯೂಚುವಲ್ ಲೈಫ್ ಅಶ್ಯೂರೆನ್ಸ್ ಕಂಪೆನಿ’ಯು ಭಾರತೀಯರಿಗೆ ಸಾಮಾನ್ಯ ದರದಲ್ಲಿ ವಿಮೆ ಒದಗಿಸಿತು.

ಸ್ವದೇಶಿ ಚಳವಳಿಯ ಭಾಗವಾಗಿ ಯುನೈಟೆಡ್ ಇಂಡಿಯಾ, ನ್ಯಾಷನಲ್ ಇಂಡಿಯನ್, ನ್ಯಾಷನಲ್ ಇನ್ಶುರೆನ್ಸ್, ಕೋ ಆಪರೇಟಿವ್ ಅಶ್ಯೂರೆನ್ಸ್ ಮೊದಲಾದ ದೇಶೀ ಸಂಸ್ಥೆಗಳು ಜನ್ಮತಾಳಿದವು. 1912ರಲ್ಲಿ ಲೈಫ್ ಇನ್ಶುರೆನ್ಸ್ ಕಂಪನೀಸ್ ಆ್ಯಕ್ಟ್ ಮತ್ತು ಪ್ರಾವಿಡೆಂಟ್ ಫಂಡ್ ಆ್ಯಕ್ಟ್ ಜಾರಿಗೆ ಬಂದವು. ಆದರೆ ದೋಷದಿಂದ ಕೂಡಿದ್ದ ಈ ಕಾಯ್ದೆಗಳು  ಭಾರತೀಯರು ಹಾಗೂ ವಿದೇಶಿಯರು ಎಂದು ತಾರತಮ್ಯ ಮಾಡಿದವು. 1938ರ ಕಾಯ್ದೆಯು ಜೀವ ವಿಮೆಯೇತರ ವಿಮೆಗಳಿಗೆ ಅವಕಾಶ ಕಲ್ಪಿಸಿತು. ವಿಮಾ ಕಂಪೆನಿಗಳನ್ನು ರಾಷ್ಟ್ರೀಕರಣ ಮಾಡುವಂತೆ ದನಿ ಎದ್ದಿತು. ಕೊನೆಗೆ, 1956ರಲ್ಲಿ ಭಾರತದ ಜೀವ ವಿಮೆಯು ರಾಷ್ಟ್ರೀಕರಣಗೊಂಡಿತು. ಈ ಸಮಯದಲ್ಲಿ ಸುಮಾರು 245 ಕಂಪೆನಿಗಳು ರಾಷ್ಟ್ರೀಕರಣಕ್ಕೆ ಒಳಪಟ್ಟವು. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್‌ಐಸಿ) ಕಾಯ್ದೆಯನ್ನು ಸಂಸತ್ತು ಅನುಮೋದಿಸಿತು. ನ್ಯಾಯೋಚಿತ ದರದಲ್ಲಿ, ಗ್ರಾಮೀಣ ಭಾಗದವರನ್ನೂ ವಿಮೆಗೆ ಒಳಪಡಿಸಬೇಕು ಎಂಬ ಸದುದ್ದೇಶದೊಂದಿಗೆ 1956ರ ಸೆಪ್ಟೆಂಬರ್ 1ರಂದು ಎಲ್‌ಐಸಿ ಜೀವತಳೆಯಿತು.  

ಆರಂಭದಲ್ಲಿ 5 ಪ್ರಾದೇಶಿಕ ಕಚೇರಿಗಳು, 33 ವಿಭಾಗೀಯ ಕಚೇರಿಗಳು, 212 ಶಾಖೆಗಳು ಶುರುವಾದವು. ಕ್ರಮೇಣ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಕಚೇರಿಗಳು ತಲೆಎತ್ತಿದವು. 30 ವರ್ಷಗಳಲ್ಲಿ ವಿಮೆಯ ಖಾತರಿ ಮೊತ್ತ (ಸಮ್ ಅಶ್ಶೂರ್ಡ್) ₹200 ಕೋಟಿಯಿಂದ ₹7 ಸಾವಿರ ಕೋಟಿಗೆ ಜಿಗಿಯಿತು. ಕೆಲವು ಬ್ಯಾಂಕ್‌ಗಳ ಜತೆ ಎಲ್‌ಐಸಿ ಒಪ್ಪಂದ ಮಾಡಿಕೊಂಡಿದೆ. ಇಸಿಎಸ್‌, ಎಟಿಎಂ ಪ್ರೀಮಿಯಂ ಪಾವತಿ ಸೌಲಭ್ಯ, ಆನ್‌ಲೈನ್ ಕಿಯೋಸ್ಕ್, ಐವಿಆರ್‌ಎಸ್‌ ಸೌಲಭ್ಯಗಳನ್ನು ಪರಿಚಯಿಸಲಾಗಿದೆ. ಜೀವ ವಿಮೆ ವ್ಯವಹಾರದಲ್ಲಿ ಹಲವು ಮೈಲಿಗಲ್ಲುಗಳನ್ನು ಎಲ್‌ಐಸಿ ದಾಖಲಿಸಿದೆ.

ಷೇರು ವಿಕ್ರಯ ಯಾಕೆ?

1991ರಲ್ಲಿ ಸರ್ಕಾರವು ಹೊಸ ಆರ್ಥಿಕ ನೀತಿಯನ್ನು ರೂಪಿಸಿತು. ‘ಸರ್ಕಾರಕ್ಕೆ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಂದ ಹೂಡಿಕೆಗೆ ತಕ್ಕಂತೆ ವರಮಾನ ಬರುತ್ತಿಲ್ಲ. ಅವು ಸರ್ಕಾರದ ಆಸ್ತಿಯಾಗುವುದರ ಬದಲು, ಹೊರೆಯಾಗುತ್ತಿವೆ’ ಎಂದು ಈ ನೀತಿಯು ಸ್ಪಷ್ಟವಾಗಿ ಸೂಚಿಸಿತ್ತು.

ಅಭಿವೃದ್ಧಿಗೆ ಆಧಾರಸ್ತಂಭವಾಗಬಹುದೆಂಬ ಉದ್ದೇಶದಿಂದ ಸ್ಥಾಪಿಸಿದ್ದ ಅನೇಕ ಸಂಸ್ಥೆಗಳು ಅದಾಗಲೇ ಸರ್ಕಾರಕ್ಕೆ ಹೊರೆಯಾಗಿದ್ದವು. ಈ ಸಂಸ್ಥೆಗಳಿಂದ ಬರುವ ವರಮಾನವು ಕಡಿಮೆಯಾದ ಪರಿಣಾಮ ದೇಶದ ಆಂತರಿಕ ಉತ್ಪನ್ನ (ಜಿಡಿಪಿ) ಹಾಗೂ ಒಟ್ಟಾರೆ ಉಳಿತಾಯದ ಪ್ರಮಾಣವು ಇಳಿಕೆಯಾಗುತ್ತಲೇ ಇತ್ತು. ಇಂಥ ಸಂಸ್ಥೆಗಳ ವರಮಾನ ಇಳಿಕೆಯಾಗುವುದಕ್ಕೆ ಕಾರಣಗಳೇನು, ಷೇರುವಿಕ್ರಯದ ಅಗತ್ಯವೇನು, ಅದರಿಂದಾಗುವ ಲಾಭಗಳೇನು ಮುಂತಾದ ವಿಚಾರಗಳನ್ನು ಈ ನೀತಿಯಲ್ಲಿ ತಿಳಿಸಲಾಗಿದೆ.

ವರಮಾನ ಕುಸಿತಕ್ಕೆ ಕಾರಣ

* ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ದರ ನಿಗದಿ ನೀತಿ

* ಸಾಮರ್ಥ್ಯದ ಸಂಪೂರ್ಣ ಬಳಕೆ ಆಗದಿರುವುದು

* ಕಾರ್ಯಕ್ರಮಗಳ ಯೋಜನೆ ಮತ್ತು ಅನುಷ್ಠಾನದಲ್ಲಿ ಸಮಸ್ಯೆಗಳು

* ಕಾರ್ಮಿಕರ ಕೊರತೆ, ಆಡಳಿತ ಮತ್ತು ಕಾರ್ಮಿಕರ ಮಧ್ಯೆ ಹೊಂದಾಣಿಕೆ ಕೊರತೆ

* ಸ್ವಾಯತ್ತೆಯ ಕೊರತೆ

ಷೇರು ವಿಕ್ರಯದ ಉದ್ದೇಶ

* ಸರ್ಕಾರದ ಮೇಲಿನ ಆರ್ಥಿಕ ಹೊರೆ ಇಳಿಸುವುದು

* ಸಾರ್ವಜನಿಕ ಹಣಕಾಸಿನ ಸ್ಥಿತಿ ಉತ್ತಮಪಡಿಸುವುದು

* ಸ್ಪರ್ಧೆ ಮತ್ತು ಮಾರುಕಟ್ಟೆ ಶಿಸ್ತು ಮೂಡಿಸುವುದು

* ಷೇರುವಿಕ್ರಯದಿಂದ ಬರುವ ಹಣವನ್ನು ಅಭಿವೃದ್ಧಿ ಉದ್ದೇಶಕ್ಕೆ ಬಳಸುವುದು

* ಅತಿ ಅಗತ್ಯವಲ್ಲದ ಸೇವೆಗಳನ್ನು ಸರ್ಕಾರಿ ವ್ಯವಸ್ಥೆಯಿಂದ ಹೊರಗಿಡುವುದು

ಷೇರುವಿಕ್ರಯದ  ಅಗತ್ಯ

* ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಲ್ಲಿ ಸರ್ಕಾರದ ಸುಮಾರು ಲಕ್ಷಾಂತರ ಕೋಟಿ ರೂಪಾಯಿ ಇದೆ. ಅದು ಸರ್ಕಾರಕ್ಕೆ ಬಂದರೆ ಅಭಿವೃದ್ಧಿಗೆ ಬಳಸಬಹುದು

* ಈ ಹಣವನ್ನು ವಿತ್ತೀಯ ಕೊರತೆ ನೀಗಿಸಲು ಬಳಸಬಹುದು

* ಹಣವನ್ನು ಮೂಲಸೌಲಭ್ಯ ಅಭಿವೃದ್ಧಿ ಕ್ಷೇತ್ರಕ್ಕೆ ನೀಡಬಹುದು

* ಆರ್ಥಿಕ ವೃದ್ಧಿಗೆ ಸಹಕಾರಿಯಾಗುವ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು

* ಆರೋಗ್ಯ, ಶಿಕ್ಷಣದಂಥ ಸಾಮಾಜಿಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬಹುದು

ಮಾರಾಟ ಪ್ರಕ್ರಿಯೆ ಆರಂಭ

ಎಲ್‌ಐಸಿಯ ಸ್ವಲ್ಪ ಪಾಲನ್ನು ಷೇರುಗಳ ಮೂಲಕ ಮಾರಾಟ ಮಾಡುವ ಪ್ರಕ್ರಿಯೆಯು 2020–21ನೇ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ನಡೆಯಬಹುದು. ಆದರೆ, ಇದಕ್ಕೆ ಅಗತ್ಯವಾದ ಕಾನೂನು ಬದಲಾವಣೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಹೇಳಿದ್ದಾರೆ. 

‘2020–21ನೇ ಸಾಲಿನಲ್ಲಿ ಬಂಡವಾಳ ಹಿಂತೆಗೆಯುವಿಕೆಯ ಮೂಲಕ ₹2.1 ಲಕ್ಷ ಕೋಟಿ ಆದಾಯ ಕ್ರೋಡೀಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಎಲ್‌ಐಸಿ ಮತ್ತು ಐಡಿಬಿಐ ಬ್ಯಾಂಕ್‌ಗಳಲ್ಲಿನ ಪಾಲು ಮಾರಾಟದಿಂದ ₹90,000 ಕೋಟಿ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ. ಎಲ್‌ಐಸಿಯ ಶೇ 10ರಷ್ಟು ಪಾಲು ಮಾರಾಟ ಮಾಡಬಹುದು ಅಥವಾ ಈ ಪ್ರಮಾಣ ಇನ್ನಷ್ಟು ಕಡಿಮೆ ಇರಬಹುದು. ಸರ್ಕಾರ ಇದನ್ನು ಇನ್ನೂ ನಿರ್ಧರಿಸಿಲ್ಲ’ ಎಂದು ಅವರು ಹೇಳಿದ್ದಾರೆ. 

ಸಾರ್ವಜನಿಕರಿಗೆ ಷೇರು ಖರೀದಿಗೆ ಅವಕಾಶ (ಇನಿಷಿಯಲ್ ಪಬ್ಲಿಕ್ ಆಫರಿಂಗ್–ಐಪಿಒ) ವಿಧಾನದ ಮೂಲಕ ಎಲ್‌ಐಸಿಯ ಪಾಲನ್ನು ಮಾರಾಟ ಮಾಡಬೇಕಾಗುತ್ತದೆ. ಇದಕ್ಕಾಗಿ ಎಲ್‌ಐಸಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ರಾಜೀವ್ ಹೇಳಿದ್ದಾರೆ.

ಪಾಲಿಸಿದಾರರ ಹಿತಾಸಕ್ತಿಗೆ ಧಕ್ಕೆ ಆತಂಕ

ಸರ್ಕಾರವು ಎಲ್‌ಐಸಿಯಲ್ಲಿನ ಪಾಲನ್ನು ಮಾರಾಟ ಮಾಡುವುದರಿಂದ, ಸಂಸ್ಥೆಯ ವಿಮಾ ಪಾಲಿಸಿಗಳಲ್ಲಿ ಹಣ ಹೂಡಿರುವವರ ಹಿತಾಸಕ್ತಿಗೆ ಧಕ್ಕೆಯಾಗುವ ಆತಂಕ ವ್ಯಕ್ತವಾಗಿದೆ. ಸರ್ಕಾರದ ಈ ನಡೆಯನ್ನು ಎಲ್‌ಐಸಿ ನೌಕರರ ಸಂಘಟನೆಯೂ ವಿರೋಧಿಸಿದೆ.

‘ಎಲ್‌ಐಸಿಯಲ್ಲಿನ ಪಾಲನ್ನು ಮಾರಾಟ ಮಾಡುವುದರಿಂದ ಸಂಸ್ಥೆಯ ಪರಮಾಧಿಕಾರಕ್ಕೆ ಧಕ್ಕೆಯಾಗಲಿದೆ. ಇದು ಎಲ್‌ಐಸಿ ಪಾಲಿಸಿದಾರರ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ನಡೆ. ಎಲ್‌ಐಸಿಯ ಪಾಲನ್ನು ಮಾರಾಟ ಮಾಡುವ ನಿರ್ಧಾರದಿಂದ ಸರ್ಕಾರವು ಹಿಂದೆ ಸರಿಯದಿದ್ದರೆ, ಸಂಸ್ಥೆಯ ನೌಕರರು ದೇಶದಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಎಲ್‌ಐಸಿ ನೌಕರರ ಸಂಘಟನೆಯ ವಕ್ತಾರರು ತಿಳಿಸಿದ್ದಾರೆ. ತಮ್ಮ ಹೆಸರು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

2018ರಲ್ಲಿ ಎಲ್ಐಸಿ, ಐಡಿಬಿಐ ಬ್ಯಾಂಕ್‌ನ ಶೇ 43ರಷ್ಟು ಷೇರುಗಳನ್ನು ಖರೀದಿಸಿತ್ತು. ಆಗ ಐಡಿಬಿಐ ಬ್ಯಾಂಕಿನ ವಸೂಲಾಗದ ಸಾಲ ₹55 ಸಾವಿರ ಕೋಟಿಯಷ್ಟಿತ್ತು. ಅಲ್ಲದೆ, ಬ್ಯಾಂಕ್ ನಷ್ಟದಲ್ಲಿತ್ತು. ಹೀಗಾಗಿ ಐಡಿಬಿಐ ಬ್ಯಾಂಕ್‌ನ ಷೇರುಗಳ ಖರೀದಿಯಿಂದ, ಎಲ್ಐಸಿಯ ಪಾಲಿಸಿಯಲ್ಲಿ ಹಣ ಹೂಡಿರುವ ಸಾರ್ವಜನಿಕರಿಗೆ ನಷ್ಟವಾಗುವ ಅಪಾಯವಿದೆ ಎಂದು ಎಲ್‌ಐಸಿ ನೌಕರರ ಸಂಘಟನೆ ಮತ್ತು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿದ್ದವು.

ಎಲ್ಐಸಿ ಕಾಯ್ದೆಯ ಪ್ರಕಾರ, ಸಂಸ್ಥೆಯು ಬೇರೆ ಯಾವುದೇ ಸಂಸ್ಥೆಯಲ್ಲಿ ಹೊಂದಿರುವ ಷೇರುಗಳ ಪರಮಾಣ ಶೇ 15ರಷ್ಟನ್ನು ಮೀರುವಂತಿರಲಿಲ್ಲ. 2018ಕ್ಕೂ ಮುನ್ನ ಎಲ್‌ಐಸಿಯು ಐಡಿಬಿಐ ಬ್ಯಾಂಕ್‌ನ ಶೇ 9ರಷ್ಟು ಷೇರುಗಳನ್ನು ಹೊಂದಿತ್ತು. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತಂದು, ಇನ್ನೂ ಶೇ 43ರಷ್ಟು ಷೇರುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಯಿತು. ಐಡಿಬಿಐ ಬ್ಯಾಂಕಿನಲ್ಲಿ ಎಲ್‌ಐಸಿಯ ಷೇರುಗಳ ಪ್ರಮಾಣ ಶೇ 51ರಷ್ಟಾಯಿತು. ಆದರೆ ಐಡಿಬಿಐ ಬ್ಯಾಂಕ್‌ನ ನಷ್ಟವನ್ನು ಸರಿದೂಗಿಸಲು ಎಲ್‌ಐಸಿ ಮತ್ತೆ ಮತ್ತೆ ಹಣ ಹೂಡಿಕೆ ಮಾಡಿದೆ. ನಿರಂತರ ನಷ್ಟದಲ್ಲಿರುವ ಐಡಿಬಿಐ ಬ್ಯಾಂಕ್‌ ದಿವಾಳಿಯಾದರೆ, ಅದರ ನೇರ ಪರಿಣಾಮ ಎಲ್‌ಐಸಿ ಪಾಲಿಸಿದಾರರ ಹೂಡಿಕೆ ಮೇಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು