ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು

Last Updated 18 ಫೆಬ್ರವರಿ 2021, 19:30 IST
ಅಕ್ಷರ ಗಾತ್ರ

ಕೆಲಸದ ಸ್ಥಳದಲ್ಲಿ ಮೇಲಧಿಕಾರಿ ಅಥವಾ ತನಗಿಂತಲೂ ಉನ್ನತ ಸ್ಥಾನದಲ್ಲಿರುವ ಪುರುಷನು ನಡೆಸಿದ ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತುವ ಅಭಿಯಾನವಾಗಿ #ಮೀಟೂ ರೂಪುಗೊಂಡಿತು. 2017ರಲ್ಲಿ ಈ ಅಭಿಯಾನವು ವಿಶ್ವದಾದ್ಯಂತ ಭಾರಿ ಸದ್ದು ಮಾಡಿತು. ಆದರೆ ಈ ಅಭಿಯಾನ ಶುರುವಾದದ್ದು 2006ರಲ್ಲಿ. ಅಮೆರಿಕದ ಮಾನವ ಹಕ್ಕುಗಳ ರಕ್ಷಣಾ ಹೋರಾಟಗಾರ್ತಿ ಟರನಾ ಬರ್ಕ್ ಅವರು, ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತಲು ‘ಮೀಟೂ’ ಪದವನ್ನು ಮೊದಲು ಬಳಸಿದರು. ಆದರೆ ಈ ಅಭಿಯಾನಕ್ಕೆ ಜಾಗತಿಕ ಮನ್ನಣೆ ದೊರೆತಿದ್ದು 2017ರಲ್ಲಿ.

ಹಾಲಿವುಡ್ ನಟಿ ಅಲೈಸಾ ಮಿಲಾನೊ ಅವರು 2017ರ ಅಕ್ಟೋಬರ್ 15ರಂದು #ಮೀಟೂ ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಿದ್ದರು. ‘ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಎಲ್ಲಾ ಮಹಿಳೆಯರು #ಮೀಟೂ ಹೆಸರಿನಲ್ಲಿ ಟ್ವೀಟ್ ಮಾಡಿದರೆ, ಈ ದೌರ್ಜನ್ಯದ ತೀವ್ರತೆ ಎಷ್ಟು ಇದೆ ಎಂಬುದು ಜನಕ್ಕೆ ಗೊತ್ತಾಗುತ್ತದೆ’ ಎಂದು ಗೆಳೆಯರೊಬ್ಬರು ಹೇಳಿದರು. ನೀವು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೆ, ಪ್ರತಿಕ್ರಿಯೆಯಲ್ಲಿ ಮೀಟೂ ಎಂದು ಬರೆಯಿರಿ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬರುವುದಕ್ಕೂ 10 ದಿನ ಮೊದಲು, ಹಾಲಿವುಡ್ ನಿರ್ಮಾಪಕ ಹಾರ್ವೆ ವೀನ್‌ಸ್ಟೀನ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಲೇಖನ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾಗಿತ್ತು. ಅಲೈಸಾ ಅವರ ಟ್ವೀಟ್‌ನ ನಂತರ ಹಲವು ಮಂದಿ ಮೀಟೂ ಹೆಸರಿನಲ್ಲಿ ಟ್ವೀಟ್ ಮಾಡಲು ಆರಂಭಿಸಿದರು.

2018ರಲ್ಲಿ ಈ ಅಭಿಯಾನವು ವಿಶ್ವದ ಅನೇಕ ರಾಷ್ಟ್ರಗಳಿಗೆ ಪಸರಿಸಿತು. ಭಾರತ, ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್‌, ಮಧ್ಯಪ್ರಾಚ್ಯ ದೇಶಗಳು, ನೈಜೀರಿಯಾ, ಮೆಕ್ಸಿಕೊಗಳಲ್ಲಿ ಈ ಅಭಿಯಾನವು ತೀವ್ರತೆ ಪಡೆಯಿತು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ‘ಮೀಟೂ’ ಎಂದಷ್ಟೇ ಟ್ವೀಟ್‌ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ದೌರ್ಜನ್ಯ ಎಸಗಿದವರ ವಿವರಗಳನ್ನೂ ಹಂಚಿಕೊಳ್ಳಲು ಆರಂಭಿಸಿದರು. ಜಗತ್ತಿನ ಎಲ್ಲೆಡೆ ಈ ಅಭಿಯಾನಕ್ಕೆ ಚಾಲನೆ ನೀಡಿದವರು ಸಿನಿಮಾ ಮಂದಿಯೇ ಆಗಿದ್ದಾರೆ. ಪತ್ರಿಕೋದ್ಯಮ, ಸರ್ಕಾರಿ ಕಚೇರಿಗಳು, ಉದ್ಯಮ ಸಂಸ್ಥೆಗಳಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣಗಳೂ ಈ ಅಭಿಯಾನದ ಕಾರಣ ಬೆಳಕಿಗೆ ಬಂದವು. ಉನ್ನತ ಹುದ್ದೆಯಲ್ಲಿ ಇದ್ದವರುಕೆಲಸದ ಸ್ಥಳದಲ್ಲಿ ನಡೆಸಿದ ಅತ್ಯಾಚಾರ, ಅಸಭ್ಯ ವರ್ತನೆ, ಅಸಭ್ಯವಾಗಿ ಮೈಸೋಕಿಸುವುದು, ಅಸಭ್ಯವಾಗಿ ಮಾತನಾಡುವುದು, ಅಸಭ್ಯವಾಗಿ ನೋಡುವುದು ಮೊದಲಾದ ಕೃತ್ಯಗಳನ್ನು ಎಸಗಿದವರನ್ನೂ ಗುರಿ ಮಾಡಿ ಸಂತ್ರಸ್ತ ಮಹಿಳೆ/ಯುವತಿಯರು ಟ್ವೀಟ್ ಮಾಡಲು ಆರಂಭಿಸಿದರು.

ಈ ಎಲ್ಲಾ ದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೀಟೂ ಆರೋಪ ಕೇಳಿಬಂದರೂ, ನ್ಯಾಯಾಲಯದ ಮೆಟ್ಟಿಲು ಏರಿದ್ದು ಕೆಲವೇ ಪ್ರಕರಣಗಳು. ಆದರೆ ಆರೋಪ ಮಾಡಿದ ಯುವತಿ/ಮಹಿಳೆಯರೇ ಬೇರೆಯವರ ಕೆಂಗಣ್ಣಿಗೆ ಗುರಿಯಾಗಿದ್ದು ನಿಜ. ಆರೋಪ ಮಾಡಿದ ಹಲವರು ತಮ್ಮ ವೃತ್ತಿಬದುಕಿನಲ್ಲಿ ಹಿನ್ನಡೆ ಅನುಭವಿಸಿದ ಉದಾಹರಣೆಗಳು ಸಾಕಷ್ಟಿವೆ. ಭಾರತದಲ್ಲಿ ಇಂತಹ ಉದಾಹರಣೆಗಳ ಸಂಖ್ಯೆ ಹೆಚ್ಚು. ಆದರೆ, ಈ ಅಭಿಯಾನ ಅಂತ್ಯವಾಯಿತು ಎನ್ನುವಷ್ಟರಲ್ಲೇ ಜಗತ್ತಿನ ಎಲ್ಲೋ ಒಂದು ಕಡೆ ಮತ್ತೆ ‘ಮೀಟೂ’ ಮುನ್ನೆಲೆಗೆ ಬರುತ್ತಿದೆ. ಈ ಮೂಲಕ ಅಭಿಯಾನ ಇನ್ನೂ ಶಕ್ತವಾಗಿ ಮುನ್ನಡೆಯುತ್ತಿದೆ.

ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು

#ಮೀಟೂ ಪ್ರಕರಣಗಳು
ತನುಶ್ರೀ ದತ್ತಾ ಅವರು ಬಾಲಿವುಡ್‌ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡುವುದರೊಂದಿಗೆ ಭಾರತದಲ್ಲೂ ಮೀಟೂ ಪ್ರಕರಣಗಳು ಭಾರಿ ಸದ್ದು ಮಾಡಲು ಆರಂಭಿಸಿದವು. ನೂರಾರು ಸೆಲೆಬ್ರಿಟಿಗಳ ವಿರುದ್ಧ ಆರೋಪಗಳು ಕೇಳಿ ಬಂದವು. ಸಿನಿಮಾ, ಧಾರಾವಾಹಿಯ ಕಲಾವಿದರು, ಗಾಯಕರು, ಬರಹಗಾರರು, ಪತ್ರಕರ್ತರು ಹೆಸರುಗಳು ಮೀಟೂ ಅಭಿಯಾನದಲ್ಲಿ ಕೇಳಿ ಬಂದಿತು

ನಾನಾ ಪಾಟೇಕರ್
ಬಾಲಿವುಡ್ ನಟಿ ತನುಶ್ರೀ ದತ್ತಾ ಅವರು 2008ರಲ್ಲಿ ‘ಹಾರ್ನ್ ಓಕೆ ಪ್ಲೀಸ್’ ಚಿತ್ರದ ಸೆಟ್‌ನಲ್ಲಿ ಪ್ರಸಿದ್ಧ ನಟ ನಾನಾ ಪಾಟೇಕರ್ ಅವರಿಂದ ಲೈಂಗಿಕ ಕಿರುಕುಳ ಎದುರಿಸಿದ ಆರೋಪ ಹೊರಿಸಿದ್ದರು. ಇದು ಬಾಲಿವುಡ್‌ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಪಾಟೇಕರ್ ಈ ಆರೋಪವನ್ನು ಅಲ್ಲಗಳೆದಿದ್ದರು.

ಅನು ಮಲಿಕ್
ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಅನು ಮಲಿಕ್ ಅವರ ವಿರುದ್ಧ ಸೋನಾ ಮಹಾಪಾತ್ರ, ಶ್ವೇತಾ ಪಂಡಿತ್ ಅವರಲ್ಲದೆ ಇತರ ಇಬ್ಬರು ಮಹಿಳೆಯರು ಕೂಡ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಾಡಿದ್ದರು. ‘ಇದು ಚಾರಿತ್ರ್ಯವಧೆ ಮಾಡುವ ಯತ್ನ’ ಎಂದು ಮಲಿಕ್ ಅವರ ವಕೀಲರು ಆರೋಪಿಸಿದ್ದರು. ಪ್ರಕರಣ ಬಯಲಿಗೆ ಬಂದ ಬಳಿಕ ಮಲಿಕ್ ಅವರು ‘ಇಂಡಿಯನ್ ಐಡಲ್‌’ ಕಾರ್ಯಕ್ರಮದ ತೀರ್ಪುಗಾರ ಸ್ಥಾನ ತ್ಯಜಿಸಬೇಕಾಯಿತು.

ಸಾಜಿದ್ ಖಾನ್
ಚಲನಚಿತ್ರ ನಿರ್ಮಾಪಕ ಸಾಜಿನ್ ಖಾನ್ ಅವರ ಸಹಾಯಕಳಾಗಿ ಕೆಲಸ ಮಾಡುತ್ತಿದ್ದಾಗ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಸಲೋನಿ ಚೋಪ್ರಾ ಆರೋಪಿಸಿದ್ದರು. ಇನ್ನೂ ಕೆಲವು ಮಹಿಳೆಯರು ಇದೇ ರೀತಿಯ ಆರೋಪ ಮಾಡಿದ್ದರು. ವಿವಾದದಿಂದ ಕಂಗೆಟ್ಟ ಸಾಜಿದ್ ಖಾನ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದರೂ ‘ಹೌಸ್‌ಫುಲ್ 4’ ಚಿತ್ರದ ನಿರ್ದೇಶನದ ಹೊಣೆಯನ್ನು ತ್ಯಜಿಸಬೇಕಾಯಿತು.

ಸುಭಾಷ್ ಘಾಯ್
ಬಾಲಿವುಡ್ ನಿರ್ದೇಶಕ ಸುಭಾಷ್ ಘಾಯ್ ಅವರು ಮಾದಕ ದ್ರವ್ಯ ಸೇವಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅನಾಮಧೇಯ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಿದ್ದರು. ಮತ್ತೊಂದು ಘಟನೆಯಲ್ಲಿ ಘಾಯ್ ಅವರು ತನ್ನನ್ನು ಹಿಡಿದು ಚುಂಬಿಸಲು ಪ್ರಯತ್ನಿಸಿದ್ದರು ಎಂದು ನಟಿ ಕೇಟ್ ಶರ್ಮಾ ಹೇಳಿದ್ದರು.

ವಿಕಾಸ್ ಬಹಲ್‌
‘ಕ್ವೀನ್’ ಚಿತ್ರದಿಂದ ಹೆಸರಾಗಿರುವ ಪ್ರಶಸ್ತಿ ವಿಜೇತ ನಿರ್ದೇಶಕ ವಿಕಾಸ್ ಬಹಲ್‌ ಅವರು ‘ಫ್ಯಾಂಟಮ್ ಫಿಲ್ಮ್ಸ್‌’ನ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದರು. ಕೆಲಸದ ವೇಳೆ ಮೌಖಿಕ ಕಿರುಕುಳ, ಅನುಚಿತ ವರ್ತನೆ ಬಗ್ಗೆ ಹಲವು ಮಹಿಳೆಯರು ಆರೋಪಿಸಿದ್ದರು. ಈ ಆರೋಪಗಳಿಂದಾಗಿ ಫ್ಯಾಂಟಮ್ ಫಿಲ್ಮ್ಸ್ ಸಂಸ್ಥೆಯನ್ನೇ 2018ರ ಅಕ್ಟೋಬರ್ 5ರಂದು ಬರ್ಖಾಸ್ತು ಮಾಡಲಾಯಿತು.

ಕೈಲಾಶ್ ಖೇರ್
ಗಾಯಕಿ ಸೋನಾ ಮಹಾಪಾತ್ರ ಅವರು ಗಾಯಕ ಕೈಲಾಶ್ ಖೇರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಸಂಗೀತ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಇಬ್ಬರೂ ಭೇಟಿಯಾದಾಗ ಇಂತಹ ಘಟನೆಗಳು ನಡೆದಿದ್ದವು ಎಂಬುದು ಅವರ ಆರೋಪ. ಮತ್ತೊಬ್ಬ ಗಾಯಕಿ ವರ್ಷಾ ಸಿಂಗ್ ಧನೋಅ ಅವರೂ ಸಹ ಖೇರ್ ಅವರನ್ನು ಭೇಟಿಯಾದಾಗ ಎದುರಾದ ಆಘಾತಕಾರಿ ಘಟನೆಯನ್ನು ಯೂಟ್ಯೂಬ್‌ ಪೋಸ್ಟ್‌ನಲ್ಲಿ ದಾಖಲಿಸಿದ್ದರು. ಖೇರ್ ಅವರು ಈ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದರು.

ಅಲೋಕ್‌ನಾಥ್
ಕಿರುತೆರೆ ನಟ ಅಲೋಕ್‌ನಾಥ್ ಅವರು 19 ವರ್ಷಗಳ ಹಿಂದೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯಎಸಗಿದ್ದಾರೆ ಎಂದು ಟಿವಿ ಬರಹಗಾರ್ತಿ, ನಿರ್ಮಾಪಕಿ ಮತ್ತು ನಿರ್ದೇಶಕಿ ವಿನತಾ ನಂದಾ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದರು. ನಟಿಯರಾದ ಸಂಧ್ಯಾ ಮೃದುಲ್‌ ಮತ್ತು ನವನೀತ್‌ ನಿಶಾನ್‌ ಸೇರಿ ಹಲವು ಮಹಿಳೆಯರು ಅಲೋಕ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅಲೋಕ್‌ ನಾಥ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಆದರೆ ಅವರು ನ್ಯಾಯಾಲದಿಂದ ಜಾಮೀನು ಪಡೆದರು. ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಬರಹಗಾರ್ತಿ ವಿರುದ್ಧ ಅಲೋಕ್‌ ನಾಥ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ರಜತ್ ಕಪೂರ್
ನಟ, ನಿರ್ದೇಶಕ ರಜತ್‌ ಕಪೂರ್‌ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದನ್ನು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಬ್ಬರು ಮಹಿಳೆಯರು ತಮ್ಮ ಸಹಪತ್ರಕರ್ತೆಯೊಬ್ಬರಲ್ಲಿ ಹೇಳಿಕೊಂಡಿದ್ದರು. ಆ ಪತ್ರಕರ್ತೆ ಈ ವಿವರಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಇದಾದ ಬಳಿಕ, ರಜತ್‌ ಅವರು ಟ್ವಿಟರ್‌ ಮೂಲಕ ಕ್ಷಮೆ ಯಾಚಿಸಿದ್ದರು.

ಚೇತನ್ ಭಗತ್
ಒಂದು ದಶಕದ ಹಿಂದೆ ಜೈಪುರ ಸಾಹಿತ್ಯ ಉತ್ಸವದಲ್ಲಿ ಎರಡು ಬಾರಿ ಭೇಟಿಯಾದಾಗಲೂ ಪ್ರಸಿದ್ಧ ಲೇಖಕ ಚೇತನ್ ಭಗತ್ ಅವರು ಅಹಿತಕರವಾಗಿ ನಡೆದುಕೊಂಡರು ಎಂದು ಲೇಖಕಿ ಇರಾ ತ್ರಿವೇದಿ ಆರೋಪಿಸಿದ್ದರು. ಆದರೆ ಭಗತ್ ಅವರು ಟ್ವಿಟರ್‌ನಲ್ಲಿ ಈ ಆರೋಪಗಳನ್ನು ಅಲ್ಲಗಳೆದಿದ್ದರು. ಆದರೆ, ಅಹಿತಕರವಾಗಿ ವರ್ತಿಸಿದ್ದಕ್ಕೆ ಕ್ಷಮೆ ಕೋರಿದ್ದರು.

ಮೇಘನಾದ ಬೋಸ್
ಪತ್ರಕರ್ತ ಮೇಘನಾದ ಬೋಸ್ ಅವರು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿ, ಅನುಚಿತವಾಗಿ ಸ್ಪರ್ಶಿಸುತ್ತಾರೆ ಹಾಗೂ ಕಿರುಕುಳ ನೀಡುತ್ತಾರೆ ಎಂದು ಹಲವು ಅನಾಮಧೇಯ ಮಹಿಳೆಯರು ಹೇಳಿದ್ದರು. ಇದಕ್ಕೆ ಬೋಸ್ ಕ್ಷಮೆಯಾಚಿಸಿದ್ದರು.

ರೋಮನ್ ಪೊಲಾನ್ಸ್ಕಿ ಪರ ಅನುಕಂಪ
ಫ್ರಾನ್ಸ್‌ನಲ್ಲಿ ಚಲನಚಿತ್ರ ನಿರ್ದೇಶಕರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ2020ರ ಮಾರ್ಚ್‌ 8ರಂದು ಘೋಷಣೆಯಾಗಿತ್ತು. ಖ್ಯಾತ ನಿರ್ದೇಶಕ ರೋಮನ್ ಪೊಲಾನ್ಸ್ಕಿಗೆ ಈ ಗೌರವ ಸಂದಿತ್ತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲೇ ಖ್ಯಾತ ನಟಿ ಅಡೀಲ್ ಹೀನಲ್ ಅವರು, ‘ನಾಚಿಕೆಯಾಗಬೇಕು’ ಎಂದು ಹೊರನಡೆದಿದ್ದರು. ತಾವು 12 ವರ್ಷದ ಬಾಲಕಿಯಾಗಿದ್ದಾಗ ಪೊಲಾನ್ಸ್ಕಿ ತಮ್ಮ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಹೀನಲ್ ಆರೋಪಿಸಿದ್ದರು. ಇದರ ಬೆನ್ನಲ್ಲೇ ಇನ್ನೂ 11 ಯುವತಿಯರು ತಾವು ಬಾಲಕಿಯರಾಗಿದ್ದಾಗ ಪೊಲಾನ್ಸ್ಕಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದರು.

1978ರಲ್ಲಿ ಅಮೆರಿಕದಲ್ಲಿ ಹಾಲಿವುಡ್ ನಿರ್ದೇಶಕ ರೋಮನ್ ಪೊಲಾನ್ಸ್ಕಿ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪಗಳು ಸಾಬೀತಾಗಿದ್ದವು. ಶಿಕ್ಷೆಯಾಗುವ ಮುನ್ನ ಪೊಲಾನ್ಸ್ಕಿ ಅಮೆರಿಕ ಬಿಟ್ಟು ಫ್ರಾನ್ಸ್‌ನಲ್ಲಿ ಆಶ್ರಯ ಪಡೆದಿದ್ದರು ಎಂಬುದರ ಬಗ್ಗೆ ಹಲವು ವರದಿಗಳು ಪ್ರಕಟವಾದವು. ಆದರೆ, ಪೊಲಾನ್ಸ್ಕಿ ಪರವಾಗಿ ಅನುಕಂಪದ ಅಲೆ ಸೃಷ್ಟಿಯಾಯಿತು. ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಆರೋಪ ಮಾಡಿದ್ದ 12 ಜನರೂ ಸ್ವಾರ್ಥಿಗಳು ಎಂದು ಫ್ರಾನ್ಸ್‌ ಚಿತ್ರೋದ್ಯಮ ತೆಗಳಿತು.

ಕ್ಷಮೆ ಕೇಳಿದ್ದ ರಘು ದೀಕ್ಷಿತ್
ಗಾಯಕಿ ಚಿನ್ಮಯಿ ಶ್ರೀಪಾದ್ 2018ರ ಅಕ್ಟೋಬರ್‌ನಲ್ಲಿ ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಚಿನ್ಮಯಿ ಅವರು ತಮ್ಮ ಗೆಳತಿಯ ಪರವಾಗಿ ಈ ವಿಷಯವನ್ನು ಟ್ವೀಟ್‌ನಲ್ಲಿ ಬಹಿರಂಗಪಡಿಸಿದ್ದರು. ‘ಹಾಡಿನ ರೆಕಾರ್ಡಿಂಗ್ ವೇಳೆ ತನ್ನನ್ನು ಸೆಳೆದುಕೊಂಡು, ಮುತ್ತು ಕೊಡಲು ರಘು ದೀಕ್ಷಿತ್ ಕೇಳಿದ್ದರು. ನನ್ನನ್ನು ಸ್ಟುಡಿಯೊದ ಬಾಗಿಲಿನವರೆಗೆ ಎತ್ತಿಕೊಂಡು ಹೋಗಿದ್ದರು. ಒಮ್ಮೆ ತಮ್ಮ ಮನೆಯಲ್ಲಿ ತಮ್ಮ ತೊಡೆಯ ಮೇಲೆ ಕೂತುಕೊಳ್ಳಲು ಹೇಳಿದ್ದರು. ತಮ್ಮ ಪತ್ನಿ ರಾಕ್ಷಸಿ ಎಂದೆಲ್ಲಾ ಹೇಳಿದ್ದರು’ ಎಂದು ಗಾಯಕಿಯೊಬ್ಬರು ಮಾಡಿದ್ದ ಆರೋಪಗಳ ಸ್ಕ್ರೀನ್‌ಶಾಟ್ ಅನ್ನು ಚಿನ್ಮಯಿ ಶ್ರೀಪಾದ್ ಟ್ವೀಟ್ ಮಾಡಿದ್ದರು. ಇದು ಹೆಚ್ಚು ಸದ್ದು ಮಾಡಿತ್ತು. ಆದರೆ, ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.

ಈ ಬಗ್ಗೆ ರಘು ದೀಕ್ಷಿತ್ ಸ್ಪಷ್ಟನೆ ನೀಡಿದ್ದರು. ‘ಸ್ಟುಡಿಯೊದಲ್ಲಿ ಈ ಘಟನೆ ನಡೆದದ್ದು ನಿಜ. ಆದರೆ ಚಿನ್ಮಯಿ ವಿವರಿಸಿದಂತೆಯೇ ಎಲ್ಲವೂ ನಡೆದಿರಲಿಲ್ಲ. ನಾನು ಸಂದರ್ಭವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆ. ಅದು ತಪ್ಪು ಎಂದು ಆ ವ್ಯಕ್ತಿ ನನಗೆ ಅರ್ಥಮಾಡಿಸಿದ್ದರು. ಆಗ ನಾನು ಕ್ಷಮೆ ಕೇಳಿದ್ದೆ. ಈಗ ಬಹಿರಂಗವಾಗಿ ಕ್ಷಮೆ ಕೇಳುತ್ತಿದ್ದೇನೆ. ಖಾಸಗಿಯಾಗಿ ಮತ್ತೆ ಕ್ಷಮೆ ಕೇಳುತ್ತೇನೆ’ ಎಂದು ರಘು ದೀಕ್ಷಿತ್ ಸ್ಪಷ್ಟನೆ ನೀಡಿದ್ದರು.

ಹಾರ್ವೆ ವೀನ್‌ಸ್ಟೀನ್‌ಗೆ ಶಿಕ್ಷೆ
ಜಾಗತಿಕ ಮಟ್ಟದಲ್ಲಿ ಹೆಚ್ಚು ಸದ್ದು ಮಾಡಿದ ಮೀಟೂ ಪ್ರಕರಣ ಖ್ಯಾತ ಹಾಲಿವುಡ್ ನಿರ್ಮಾಪಕ ಹಾರ್ವೆ ವೀನ್‌ಸ್ಟೀನ್‌ ಅವರದ್ದು. ಅಲೈಸಾ ಮಿಲಾನೊ ಅವರು ವೀನ್‌ಸ್ಟೀನ್ ವಿರುದ್ದ ಆರೋಪ ಮಾಡಿದ್ದಲ್ಲದೆ, ಪೊಲೀಸ್ ದೂರು ದಾಖಲಿಸಿದ್ದರು. ಆನಂತರ ವೀನ್‌ಸ್ಟೀನ್‌ನಿಂದ ದೌರ್ಜನ್ಯಕ್ಕೆ ಒಳಗಾಗಿದ್ದೇವೆ ಎಂದು ಹತ್ತಾರು ನಟಿಯರು ಮತ್ತು ಯುವತಿಯರು ಟ್ವೀಟ್ ಮಾಡಲು ಆರಂಭಿಸಿದರು. ಒಂದು ವರ್ಷ ತುಂಬುವಷ್ಟರಲ್ಲಿ ವೀನ್‌ಸ್ಟೀನ್ ವಿರುದ್ಧವೇ 96 ಆರೋಪಗಳು ಕೇಳಿಬಂದಿದ್ದವು. ಅವುಗಳಲ್ಲಿ ಹಲವು ನ್ಯಾಯಾಲಯದ ಮೆಟ್ಟಿಲೇರಿದವು. ‘ವೀನ್‌ಸ್ಟೀನ್ ವಿರುದ್ಧ ಆರೋಪ ಮಾಡಿದ ಯಾವ ಮಹಿಳೆಯೂ, ವೀನ್‌ಸ್ಟೀನ್‌ ವಿರುದ್ಧ ಇಂತಹ ಅಲೆ ಎದ್ದುಬರಲಿದೆ ಎಂದು ಊಹಿಸಿರಲಿಕ್ಕಿಲ್ಲ’ ಎಂದು ಅಲೈಸಾ ಟ್ವೀಟ್ ಮಾಡಿದ್ದರು. ವೀನ್‌ಸ್ಟೀನ್‌ ವಿರುದ್ಧ ತನಿಖೆ ನಡೆದು 2020ರ ಏಪ್ರಿಲ್‌ನಲ್ಲಿ, ಜೈಲುಶಿಕ್ಷೆ ಘೋಷಣೆಯಾಯಿತು.

ಅರ್ಜುನ್ ಸರ್ಜಾ ವಿರುದ್ಧ ಆರೋಪ
ಕನ್ನಡದ ನಟಿ ಶ್ರುತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದರು. ವಿಸ್ಮಯ ಸಿನಿಮಾದ ಒಂದು ಹಾಡಿನ ಚಿತ್ರೀಕರಣದ ವೇಳೆ ಅರ್ಜುನ್ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಶ್ರುತಿ ಆರೋಪಿಸಿದ್ದರು. ಈ ಆರೋಪದ ವಿರುದ್ಧ ಅರ್ಜುನ್ ಸರ್ಜಾ ಪರವಾಗಿ ನಟ ಧ್ರುವ ಸರ್ಜಾ ಅವರು ₹5 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ವಿಳಂಬವಾಯಿತು. ಚಿತ್ರರಂಗದ ಹಿರಿಯರು ಈ ಇಬ್ಬರನ್ನು ಕರೆದು, ಸಂಧಾನ ನಡೆಸಲು ಯತ್ನಿಸಿದರು. ಅದು ವಿಫಲವಾಯಿತು. ಈ ಪ್ರಕರಣವನ್ನು ವಜಾ ಮಾಡಬೇಕು ಎಂದು ಶ್ರುತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು 2019ರ ಆಗಸ್ಟ್‌ನಲ್ಲಿ ವಜಾ ಮಾಡಿತ್ತು.

ಶ್ರುತಿ ಅವರು ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಅರ್ಜುನ್ ಸರ್ಜಾ ಅವರನ್ನು ಕರೆದು, ವಿಚಾರಣೆ ನಡೆಸಿದ್ದಾರೆ. ಅರ್ಜುನ ಸರ್ಜಾ ವಿರುದ್ಧ ಆರೋಪ ಮಾಡಿದ ನಂತರ ತಮಗೆ ಯಾವುದೇ ಚಿತ್ರದ ಆಫರ್‌ಗಳು ಬರುತ್ತಿಲ್ಲ ಎಂದು ಶ್ರುತಿ ಹರಿಹರನ್ ಅವರು ಒಮ್ಮೆ ಹೇಳಿಕೊಂಡಿದ್ದರು.

ಪ್ರತಿಕ್ರಿಯೆಗಳು
ದೆಹಲಿ ನ್ಯಾಯಾಲಯ ನೀಡಿರುವ ತೀರ್ಪು ಸ್ವಾಗತಾರ್ಹ. ಮಹಿಳೆಯು ತನ್ನ ಮೇಲೆ ನಡೆದ ದೌರ್ಜನ್ಯವನ್ನು ಕಾಲದ ಮಿತಿಯ ನಿರ್ಬಂಧವಿಲ್ಲದೆ ಪ್ರಶ್ನಿಸುವ, ದನಿಯೆತ್ತುವ ಮತ್ತು ನ್ಯಾಯಕ್ಕಾಗಿ ಹೋರಾಡುವ ಹಕ್ಕನ್ನು ಪುಷ್ಟೀಕರಿಸಿದಂತಾಗಿದೆ. ಮಾನನಷ್ಟಕ್ಕಿಂತ ಮಹಿಳೆಯ ಘನತೆ ಮುಖ್ಯ ಎಂಬ ಸಂದೇಶ ಸಾರಿದೆ. ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟದ ದಾರಿ ವಿಸ್ತರಣೆಗೊಂಡಂತಾಗಿದೆ. ಪುರುಷರು ಮಹಿಳೆಯನ್ನು ದೈಹಿಕ ದೃಷ್ಟಿಕೋನದ ಬದಲು ಆಕೆಯ ಅಸ್ತಿತ್ವ ಮತ್ತು ಅಸ್ಮಿತೆ ಗೌರವಿಸಬೇಕು. ಸಹಜೀವಿಯಾಗಿ ನಡೆದುಕೊಳ್ಳುವ ನಾಗರಿಕ ಬದ್ಧತೆ ತೋರಬೇಕು.

ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು


-ಕೆ ನೀಲಾ,ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ

***

ಹೆಣ್ಣು ಮಕ್ಕಳು ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಮೇಲಧಿಕಾರಿಗಳಿಂದ ಲೈಂಗಿಕ ಕಿರುಕುಳ ನಡೆದಾಗ ಅದನ್ನು ಧೈರ್ಯವಾಗಿ ಹೇಳಿದರೆ ಇಂದಿನ ಪುರುಷ ಪ್ರಧಾನ ಸಮಾಜ ಹೆಣ್ಣಿನ ಬಗ್ಗೆಯೇ ನೆಗೆಟಿವ್ ಆಗಿ ಮಾತನಾಡುತ್ತದೆ. ಸತ್ಯ ಎಂದಿಗೂ ಸತ್ಯವಾಗಿಯೇ ಇರುತ್ತದೆ. ಆದರೆ ಆ ಸತ್ಯ ಹೇಳಲು ಧೈರ್ಯ ಬರಬೇಕು. ಅದು ಇವತ್ತು ಬರಬಹುದು, ನಾಳೆ ಬರಬಹುದು.ಮೀಟೂ ಅಭಿಯಾನದಿಂದ ಹೆಣ್ಣು ಮಕ್ಕಳಿಗೆ ಧೈರ್ಯ ಬರುತ್ತಿದೆ. ಪತ್ರಕರ್ತೆ ಪ್ರಿಯಾ ರಮಣಿ ಅವರ ಪರವಾದ ತೀರ್ಪು ಹೆಣ್ಣು ಮಕ್ಕಳಿಗೆ ಒಂದು ಅಸ್ತ್ರವಾಗಿದೆ.

ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು


-ಎಂ.ವಿ.ಕಲ್ಯಾಣಿ,ಜಿಲ್ಲಾ ಅಧ್ಯಕ್ಷೆ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ತುಮಕೂರು

***

ಪತ್ರಕರ್ತೆ ಪ್ರಿಯಾ ರಮಣಿ ಅವರನ್ನು ದೆಹಲಿ ನ್ಯಾಯಾಲಯ ಖುಲಾಸೆಗೊಳಿಸಿರುವುದು ಸಮಾಜದ ಎಷ್ಟೋ ಮಹಿಳೆಯರಿಗೆ ಸಮಾಧಾನ ತರಿಸಿದೆ. ಮಹಿಳೆ ತನಗಾದ‌ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಹಕ್ಕನ್ನು ಹೊಂದಿದ್ದಾಳೆ ಎಂಬುದು ಸಾಬೀತಾಗಿದೆ.

ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು


-ಹೇಮಾ,ಉಪನ್ಯಾಸಕಿ, ಚಿಕ್ಕಬಳ್ಳಾಪುರ

***

ಲೈಂಗಿಕ ದೌರ್ಜನ್ಯ ಅನುಭವಿಸಿದ ಹೆಣ್ಣಿಗೆ, ಅದು ಬದುಕಿನುದ್ದದ ಇಂಗದ ದಾವಾನಲ. ಅದು ವಿಭಿನ್ನ ಸಾಮಾಜಿಕ ಸ್ತರದ ಮಹಿಳೆಯರಿಗೆ ಬೇರೆ ಬೇರೆಯಾಗಿರುವುದು ಸಾಧ್ಯವಿಲ್ಲ. ಆದರೆ, ಅದನ್ನು ಹೊರ ಹಾಕುವುದು, ನ್ಯಾಯಕ್ಕಾಗಿ ಅವಿರತ ಹೋರಾಡುವುದು, ಗೆಲ್ಲಲು ಸಾಧ್ಯವಾಗಿರುವುದು... ಇಂದಿಗೂ ಬೆರಳೆಣಿಕೆಯಷ್ಟು ಮಹಿಳೆಯರಿಗೆ ಮಾತ್ರ! ಈ ಸತ್ಯ, ನಮ್ಮ ಕರಾಳ ವ್ಯವಸ್ಥೆಗೆ ಹಿಡಿದ ಕನ್ನಡಿ.

ಈ ಸೂಕ್ಷ್ಮಾತಿ ಸೂಕ್ಷ್ಮತೆಯನ್ನರಿಯುವ ತಾಯ್ತನದ ಕಣ್ಣು ನ್ಯಾಯ ಸ್ಥಾನಕ್ಕೆ, ಸಮಾಜಕ್ಕೆ ತೆರೆದುಕೊಂಡಾಗಲೆಲ್ಲಾ, ಹೆಣ್ಣು ನಿಜವಾದ ಅರ್ಥದಲ್ಲಿ ಬದುಕಿದ್ದಾಳೆ. ಇಲ್ಲವಾದಾಗಲೆಲ್ಲ ಬದುಕಿದ್ದೂ ಸತ್ತಿದ್ದಾಳೆ! ಪ್ರಿಯಾ ರಮಣಿಯವರ ಈ ‘ಮೀಟೂ’ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ, ನಿಷ್ಪಕ್ಷಪಾತವಾಗಿ ವಿಶ್ಲೇಷಿಸುವ ಮೂಲಕ, ತನ್ನ ದೇಹದ ಕಾರಣಕ್ಕೇ ದಮನಕ್ಕೊಳಗಾಗಬಲ್ಲ ಹೆಣ್ಣುಸಂಕುಲದ ಪರವಾಗಿ ನಿಂತು, ನ್ಯಾಯಸ್ಥಾನ ನಂಬಿಕೆ ಹೆಚ್ಚಿಸಿಕೊಂಡಿದೆ.

ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು


-ರೂಪ ಹಾಸನ,ಲೇಖಕಿ

***

ಲೈಂಗಿಕ ದೌರ್ಜನ್ಯದ ವಿರುದ್ಧ ಮಹಿಳೆ ಧ್ವನಿ ಎತ್ತಿದಾಗ ಅವಳ ಧ್ವನಿ ಅಡಗಿಸುವ ನಿರಂತರ ಪ್ರಯತ್ನಗಳು ಎಲ್ಲ ದಿಕ್ಕುಗಳಿಂದಲೂ ನಡೆಯುತ್ತವೆ. ಎಲ್ಲ ಒತ್ತಡಗಳನ್ನು ಮೀರಿ ಪತ್ರಕರ್ತೆ ಪ್ರಿಯಾ ರಮಣಿ, ಎಂ.ಜೆ. ಅಕ್ಬರ್ ವಿರುದ್ಧ ಆರೋಪ ಮಾಡಿದ್ದರು. ಪ್ರಿಯಾ ಹೋರಾಟಕ್ಕೆ ನ್ಯಾಯಾಲಯದಲ್ಲಿ ದೊರೆತಿರುವ ಗೆಲುವು ಮಹಿಳಾ ಸಮುದಾಯಕ್ಕೆ ಬಲ ದೊರೆತಂತಾಗಿದೆ. ದೌರ್ಜನ್ಯ ನಡೆದ ಸಂದರ್ಭದಲ್ಲಿ ಮಹಿಳೆ ಯಾವುದೇ ಒತ್ತಡಕ್ಕೆ ಮಣಿಯದೇ ನಿರ್ಭಿಡೆಯಿಂದ ಮಾತನಾಡಬೇಕು. ಕೆಲವೊಮ್ಮೆ ಈ ವಿಷಯ ಹೊರಗಿಕ್ಕಲು ಸಮಯ ತಗಲಬಹುದು. ಆದರೆ, ಸತ್ಯವನ್ನು ಬಿಚ್ಚಿಟ್ಟಾಗ ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ.

ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು

-ವಿದ್ಯಾ ದಿನಕರ್,ಸಾಮಾಜಿಕ ಹೋರಾಟಗಾರ್ತಿ, ಮಂಗಳೂರು

***

ಮಹಿಳೆಯರ ರಕ್ಷಣೆಯ ಪರವಾಗಿರುವ, ಅವರಿಗೆ ಧೈರ್ಯ ತಂದುಕೊಡುವ ಈ ತೀರ್ಪನ್ನು ಸ್ವಾಗತಿಸುತ್ತೇನೆ. ಈ ಅಂಶವನ್ನು ಉಲ್ಲೇಖಿಸದೇ ಹೋಗಿದ್ದರೆ ಕೆಲವು ಪುರುಷರು ಮಾನನಷ್ಟ ಮೊಕದ್ದಮೆಯಂತಹ ಅವಕಾಶ ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಮುಂದೆ, ಮಹಿಳೆಯರು ಕೂಡ ಈ ತೀರ್ಪನ್ನು ದುರುಪಯೋಗ ಮಾಡಿಕೊಳ್ಳಬಾರದು. ಸಜ್ಜನ ಪುರುಷರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿಯೂ ನಿರ್ದಿಷ್ಟ ಕ್ರಮಗಳನ್ನು ರೂಪಿಸಬೇಕಾಗುತ್ತದೆ. ಮುಗ್ಧ ಮಹಿಳೆ ಮತ್ತು ಪುರುಷ ಇಬ್ಬರಿಗೂ ಅನ್ಯಾಯ ಆಗಬಾರದು ಎಂಬ ಉದ್ದೇಶ ನನ್ನದು.

ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು


-ತೇಜಸ್ವಿನಿ ಗೌಡ,ವಿಧಾನ ಪರಿಷತ್‌ ಬಿಜೆಪಿ ಸದಸ್ಯೆ

***

ಕೆಲವು ಗಣ್ಯರಿಗೆ ಈ ತೀರ್ಪು ಎಚ್ಚರಿಕೆಯ ಗಂಟೆ. ಉನ್ನತ ಸ್ಥಾನದಲ್ಲಿರುವವರು ಲೈಂಗಿಕ ಶೋಷಣೆ‌ ಮಾಡುವುದಿಲ್ಲ ಎಂದು ಹೇಳಲಾಗುವುದಿಲ್ಲ ಎಂಬ‌ ನ್ಯಾಯಾಲಯದ ಮಾತು ಅತ್ಯಂತ ಮಹತ್ವದ್ದು. ದೊಡ್ಡವರ ವಿರುದ್ಧ ದನಿ ಎತ್ತಿದ್ದ ಮಹಿಳೆಯರಿಗೆ ಇದರಿಂದ ನಿರಾಳತೆ ಸಿಕ್ಕಂತಾಗಿದೆ. ಅನ್ಯಾಯದ ವಿರುದ್ಧದ ಧ್ವನಿಯನ್ನು ಅಡಗಿಸುವ ಕಾರ್ಯಕ್ಕೆ ಕಡಿವಾಣ ಬಿದ್ದಂತಾಗಿದೆ. ಇಷ್ಟು ದಿನ ಏಕೆ ಸುಮ್ಮನಿದ್ದರು ಎಂದು ಸಂತ್ರಸ್ತೆಯರನ್ನೇ ಪ್ರಶ್ನಿಸುವ ಬದಲು, ಮಹಿಳೆಯರ ಬೆಂಬಲಕ್ಕೆ ಸಮಾಜವೂ ನಿಲ್ಲಬೇಕು.

ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು

-ಕೆ.ಎಸ್. ವಿಮಲಾ,ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT