ಶನಿವಾರ, ಮೇ 30, 2020
27 °C

Explainer | ಕೊರೊನಾ ವಿರುದ್ಧ ಮೊಸ್ಸಾದ್‌ ‘ಅಸ್ತ್ರ’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ರೇಲ್‌ನ ಆರೋಗ್ಯ ಸಚಿವರು ಏಪ್ರಿಲ್‌ ತಿಂಗಳ ಆರಂಭದಲ್ಲಿ ಕೊರೊನಾವೈರಸ್‌ ಸೋಂಕಿಗೆ ಒಳಗಾದಾಗ ಅವರ ಸಂಪರ್ಕದಲ್ಲಿದ್ದ ಎಲ್ಲ ಉನ್ನತ ಅಧಿಕಾರಿಗಳನ್ನೂ ಕ್ವಾರಂಟೈನ್‌ನಲ್ಲಿ ಇರಿಸಲಾಯಿತು. ಹೀಗೆ ಕ್ವಾರಂಟೈನ್‌ಗೆ ಒಳಗಾದವರಲ್ಲಿ ಈ ಅಧಿಕಾರಿಗಳ ಗುಂಪಿಗೆ ಸಂಬಂಧಪಡದ ವ್ಯಕ್ತಿಯೊಬ್ಬರೂ ಇದ್ದರು. ಹಲವು ದಂತಕಥೆಗಳಿಗೆ ಕಾರಣವಾದ ಇಸ್ರೇಲ್‌ನ ಗುಪ್ತಚರ ಸಂಸ್ಥೆ ‘ಮೊಸ್ಸಾದ್‌’ನ ನಿರ್ದೇಶಕ ಅವರಾಗಿದ್ದರು. 

ದೇಶ ರಕ್ಷಣೆಗಾಗಿ ವಿದೇಶಗಳಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುವ ಮೊಸ್ಸಾದ್‌ ಅಧಿಕಾರಿಗಳು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಾಮಾನ್ಯವಾಗಿ ಪಾಲ್ಗೊಳ್ಳುವುದಿಲ್ಲ. ಹೀಗಾಗಿ ಆರೋಗ್ಯ ಸಚಿವರ ಜತೆಯಲ್ಲಿ ಮೊಸ್ಸಾದ್‌ನ ನಿರ್ದೇಶಕರು ಇದ್ದುದು ಎಲ್ಲರಿಗೂ ಸೋಜಿಗ ಉಂಟುಮಾಡಿತ್ತು. ಹೌದುss, ದೇಶದ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಮೊಸ್ಸಾದ್ ನಿರ್ದೇಶಕ ಯೊಸ್ಸಿ ಕೊಹೆನ್ ಅವರು ಆರೋಗ್ಯ ಸಚಿವ ಯಾಕೊವ್ ಲಿಟ್ಜ್‌ಮನ್ ಕೊಠಡಿಯಲ್ಲಿ ಏಕೆ ಇರುತ್ತಿದ್ದರು?

ಕೊಹೆನ್ ಅವರ ‘ಶಕ್ತಿಶಾಲಿ’ ಗುಪ್ತಚರ ಸಂಸ್ಥೆಯು ಕೊರೊನಾ ವಿರುದ್ಧ ದೇಶ ನಡೆಸಿದ ಹೋರಾಟದಲ್ಲಿ ಸಂಪೂರ್ಣ ತೊಡಗಿಸಿಕೊಂಡಿತ್ತು. ಇಸ್ರೇಲ್‌ನ ವೈದ್ಯಕೀಯ ಮತ್ತು ರಕ್ಷಣಾ ಇಲಾಖೆಗಳ ಅಧಿಕಾರಿಗಳ ಪ್ರಕಾರ, ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಬೇಕಾದ ವೈದ್ಯಕೀಯ ಉಪಕರಣ ಹಾಗೂ ಅವುಗಳ ತಯಾರಿಕಾ ತಂತ್ರಜ್ಞಾನವನ್ನು ವಿದೇಶಗಳಿಂದ ದೇಶಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಅದೇ ಮೊಸ್ಸಾದ್‌.

ಸೋಂಕು ಹರಡುವಿಕೆ ಹೆಚ್ಚುತ್ತಿರುವ ಸಮಯದಲ್ಲಿ ಲಭ್ಯವಿರುವ ಅಲ್ಪಪ್ರಮಾಣದ ವೈದ್ಯಕೀಯ ಪರಿಕರಗಳನ್ನು ಪಡೆಯಲು ಹಲವು ದೇಶಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಎಲ್ಲಿಂದ ನೆರವು ಸಿಗಬಹುದು ಎಂದು ಆಸೆಗಣ್ಣಿನಿಂದ ನೋಡುತ್ತಿರುವ ಅವುಗಳು, ಕೆಲವೊಮ್ಮೆ ಧಮಕಿ ಹಾಕಿ ತಮಗೆ ಬೇಕಾಗಿದ್ದನ್ನು ಗಿಟ್ಟಿಸಿಕೊಳ್ಳಲು ಹಿಂದೆ–ಮುಂದೆ ನೋಡುತ್ತಿಲ್ಲ. ಕೊರೊನಾವೈರಸ್‌ ವಿರುದ್ಧ ಹೋರಾಡುತ್ತಿರುವ ಇರಾನ್‌ನಿಂದ ಸದ್ಯ ಯಾವುದೇ ಭದ್ರತಾ ಆತಂಕವಿಲ್ಲ ಎಂದು ನಿಶ್ಚಯಿಸಿದ ಮೊಸ್ಸಾದ್‌, ತಕ್ಷಣ ಇಸ್ರೇಲ್‌ ಅನ್ನು ಆರೋಗ್ಯ ತುರ್ತು ಪರಿಸ್ಥಿತಿಯಿಂದ ಮೇಲೆತ್ತುವ ಹೋರಾಟಕ್ಕೆ ಧುಮುಕಿತು ಎನ್ನುತ್ತಾರೆ ಅದರ ಕಾರ್ಯಾಚರಣೆಯನ್ನು ಬಲ್ಲವರು.

ಇಸ್ರೇಲ್‌ನಲ್ಲಿ ಕೊರೊನಾ ಪ್ರಕರಣಗಳು ಭೀಕರ ಸ್ವರೂಪ ತಾಳಲಿವೆ ಎಂಬುದಾಗಿ ಆರಂಭದಲ್ಲಿ ಊಹಿಸಲಾಗಿತ್ತು. ಆದರೆ ಹಾಗಾಗಲಿಲ್ಲ. 16 ಸಾವಿರ ಪ್ರಕರಣಗಳು ಅಲ್ಲಿ ದಾಖಲಾಗಿದ್ದು, 137 ಮಂದಿ ಮೃತಪಟ್ಟಿದ್ದಾರೆ. ತೀವ್ರ ಬಾಧಿತ ದೇಶಗಳ ಪಟ್ಟಿಯಲ್ಲಿ ಇಸ್ರೇಲ್ ಇಲ್ಲ ಎಂದರೆ ಅದರಲ್ಲಿ ಮೊಸ್ಸಾದ್ ಪಾತ್ರ ಇಲ್ಲದಿಲ್ಲ. 

ಕೋವಿಡ್ ವ್ಯಾಪಿಸಿದಂತೆಲ್ಲಾ, ಹೆಚ್ಚಿನ ಪ್ರಮಾಣದ ವೆಂಟಿಲೇಟರ್‌ಗಳು ಹಾಗೂ ವೈದ್ಯಕೀಯ ಸಾಮಗ್ರಿಗಳ ಅಗತ್ಯವಿದೆ ಎಂದು ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಶೇಬಾ ಮೆಡಿಕಲ್ ಸೆಂಟರ್‌ನ ಅಧಿಕಾರಿಗಳು ಫೆಬ್ರುವರಿ ಆರಂಭದಲ್ಲಿ ತಿಳಿಸಿದ್ದರು. ಬಹುಶಃ ಇದೇ ಸಮಯದಲ್ಲಿ ಕೊಹೆನ್ ಅವರನ್ನು ಆಸ್ಪತ್ರೆಯ ಮಹಾ ನಿರ್ದೇಶಕ ಯಿತ್‌ಶಾಕ್ ಕ್ರೇಯಿಸ್ ಖಾಸಗಿ ಸಮಾರಂಭವೊಂದರಲ್ಲಿ ಭೇಟಿ ಮಾಡಿದ್ದರು. ಕೊಹೆನ್ ಅವರ ಕಾರ್ಯಾಚರಣೆ ಶುರುವಾಗಿದ್ದು ಇಲ್ಲಿಂದ. 

ಇಸ್ರೇಲಿನ ಆರೋಗ್ಯ ವ್ಯವಸ್ಥೆಗೆ ಮೊಸ್ಸಾದ್ ಹೇಗೆಲ್ಲಾ ಸಹಾಯ ಮಾಡಬಹುದು ಎಂದು ಕೊಹೆನ್ ಲೆಕ್ಕಾಚಾರ ಹಾಕತೊಡಗಿದರು. ತುರ್ತಾಗಿ ಬೇಕಿರುವ ಉಪಕರಣಗಳ ಪಟ್ಟಿಯನ್ನು ಕ್ರೇಯಿಸ್ ನೀಡಿದರು. ಬಳಿಕ ಆರೋಗ್ಯ ಇಲಾಖೆಯೂ ಮತ್ತೊಂದು ಪಟ್ಟಿಯನ್ನು ಕೊಹೆನ್‌ ಅವರಿಗೆ ಕಳುಹಿಸಿಕೊಟ್ಟಿತು. ಈ ಎಲ್ಲ ಪರಿಕರಗಳು ಎಲ್ಲೆಲ್ಲಿ ಸಿಗಬಹುದು ಎಂದು ತನ್ನ ಅಂತರರಾಷ್ಟ್ರೀಯ ಜಾಲದ ಮೂಲಕ ಮೊಸ್ಸಾದ್ ಹುಡುಕಾಟ ಆರಂಭಿಸಿತು.

ದೇಶದಾದ್ಯಂತ ವೈದ್ಯಕೀಯ ಸಲಕರಣೆಗಳನ್ನು ವಿತರಿಸಲು ಮಾರ್ಚ್‌ ಆರಂಭದಲ್ಲಿ ಶೇಬಾದಲ್ಲಿ ನಿಯಂತ್ರಣ ಕೇಂದ್ರವನ್ನು ತೆರೆಯಲಾಯಿತು. ಅದರ ಮುಖ್ಯಸ್ಥನ ಹೊಣೆಯನ್ನು ಸ್ವತಃ ಕೊಹೆನ್‌ ಹೊತ್ತುಕೊಂಡರು. ಮೊಸ್ಸಾದ್‌ನ ಕೆಲವು ಪ್ರತಿನಿಧಿಗಳು, ರಕ್ಷಣಾ ಇಲಾಖೆಯ ಖರೀದಿ ಘಟಕದ ಅಧಿಕಾರಿಗಳು ಮತ್ತು ಮಿಲಿಟರಿ ಗುಪ್ತಚರ ವಿಭಾಗ ಯುನಿಟ್‌–18ನ ಪ್ರತಿನಿಧಿಗಳು ಅವರ ತಂಡದಲ್ಲಿದ್ದರು.

ವಿದೇಶಗಳಿಂದ ನಮಗೆ ವೈದ್ಯಕೀಯ ಉಪಕರಣ ಹಾಗೂ ತಂತ್ರಜ್ಞಾನ ಸಿಗುವಲ್ಲಿ ಮೊಸ್ಸಾದ್‌ನ ಪಾತ್ರ ಮಹತ್ವದ್ದಾಗಿದೆ ಎಂದು ಕ್ರೇಯಿಸ್ ಹೇಳುತ್ತಾರೆ. ಮೊಸ್ಸಾದ್ ಮಾಡಿದ ಸಹಾಯವೇನು ಹಾಗೂ ಉಪಕರಣಗಳನ್ನು ಎಲ್ಲಿಂದ ತರಿಸಲಾಯಿತು ಎಂಬ ಮಾಹಿತಿ ನೀಡಲು ಅವರು ನಿರಾಕರಿಸುತ್ತಾರೆ. ಆದರೆ ಮೊಸ್ಸಾದ್ ತನ್ನ ಅಂತರರಾಷ್ಟ್ರೀಯ ಸಂಪರ್ಕವನ್ನು ಬಳಸಿಕೊಂಡು ದೇಶದಲ್ಲಿ ಉಂಟಾಗಬಹುದಾದ ವೈದ್ಯಕೀಯ ಉಪಕರಣಗಳ ಕೊರತೆಯನ್ನು ಬಹುವಾಗಿ ನೀಗಿಸಿತು ಎಂದು ಅದರ ಕಾರ್ಯಾಚರಣೆ ವಿಧಾನವನ್ನು ಚೆನ್ನಾಗಿ ಬಲ್ಲ ಮಾಜಿ ಅಧಿಕಾರಿಗಳು ಹೇಳುತ್ತಾರೆ. 

ಲಿಟ್ಜ್‌ಮನ್ ನೇತೃತ್ವದ ಆರೋಗ್ಯ ಸಚಿವಾಲಯವು ಪಡೆದುಕೊಳ್ಳಲು ಸಾಧ್ಯವಿಲ್ಲದಷ್ಟು ವೆಂಟಿಲೇಟರ್‌ಗಳು ಹಾಗೂ ಸೋಂಕು ತಪಾಸಣೆ ಸಾಮಗ್ರಿಗಳನ್ನು ಇಸ್ರೇಲ್‌ಗೆ ಮೊಸ್ಸಾದ್ ತರಿಸಿಕೊಟ್ಟಿತು. ಇದಕ್ಕೆ ಬೆಲೆಕಟ್ಟಲಾಗದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸುತ್ತಾರೆ. ಕೆಲ ದೇಶಗಳು ಉಪಕರಣಗಳ ತಯಾರಕರಿಗೆ ಬೇಡಿಕೆ ಸಲ್ಲಿಸಿ ಕಾಯುತ್ತಿದ್ದರೆ, ಮೊಸ್ಸಾದ್‌, ಅಂತಹ ಉಪಕರಣಗಳನ್ನು ಸದ್ದಿಲ್ಲದೆ ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕೆಲವು ಪ್ರಕರಣಗಳಲ್ಲಿ, ವಿವಿಧ ದೇಶಗಳ ಗುಪ್ತಚರ ಅಧಿಕಾರಿಗಳನ್ನು ಕೊಹೆನ್ ನೇರವಾಗಿ ಸಂಪರ್ಕಿಸಿದ್ದಾರೆ. ಹೀಗಾಗಿ ಉಪಕರಣಗಳ ಖರೀದಿ ತ್ವರಿತಗತಿಯಲ್ಲಿ ಆಗಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ, ಆಯಾ ದೇಶಗಳ ಮುಖ್ಯಸ್ಥರ ಜತೆಯೂ ಕೊಹೆನ್ ನೇರವಾಗಿ ಮಾತುಕತೆ ನಡೆಸಿದ್ದಿದೆ. ಆದರೆ ಶಿಷ್ಟಾಚಾರದ ಕಾರಣ, ಮಾಹಿತಿ ಬಹಿರಂಗಪಡಿಸಲು ಅಧಿಕಾರಿಗಳುನಿರಾಕರಿಸುತ್ತಾರೆ. 

ಸಾಮಗ್ರಿಗಳನ್ನು ಪಡೆಯಲು ಇತರ ದೇಶಗಳು ಪೈಪೋಟಿಗೆ ಇಳಿದಾಗ, ಸ್ಪರ್ಧೆ ತೀವ್ರಗೊಂಡಾಗ, ಹೋರಾಟವು ನ್ಯಾಯೋಚಿತವಾಗಿ ನಡೆಯಲಾರದು. ಮೊಸ್ಸಾದ್ ಕೂಡಾ ತೆರೆಮರೆಯ ಆಟ ಆಡಿಲ್ಲ ಎಂಬುದನ್ನು ಅದನ್ನು ತಿಳಿದ ಯಾರೂ ಅಲ್ಲಗಳೆಯುತ್ತಿಲ್ಲ. ಕೆಲ ಉಪಕರಣಗಳು ಚೀನಾದಿಂದ ಬಂದಿವೆ ಎಂದು ಅವುಗಳನ್ನು ಸ್ವೀಕರಿಸಿದ ಒಬ್ಬರು ಮಾಹಿತಿ ನೀಡುತ್ತಾರೆ. ಇಸ್ರೇಲ್‌ನ ರಕ್ಷಣಾ ಇಲಾಖೆ ಸಹ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಮಾರ್ಗದಲ್ಲಿ ವೈದ್ಯಕೀಯ ಉಪಕರಣಗಳನ್ನು ತರಿಸಿ ಕೊಡುವಲ್ಲಿ ನೆರವಾಗಿದೆ.

ದೃಷ್ಟಿಗೆ ಗೋಚರವಾಗದ ಶತ್ರುಗಳು ದಾಳಿ ಇಟ್ಟಾಗಲೂ ಮೊಸ್ಸಾದ್ ದೇಶದ ರಕ್ಷಣೆಗೆ ಬಂದೇ ಬರುತ್ತದೆ ಎಂಬುದು ಮತ್ತೆ ಸಾಬೀತಾಗಿದೆ.

ವಿಫಲ ಯತ್ನಗಳ ಕಥೆಗಳೂ ಇವೆ
ಮೊಸ್ಸಾದ್ ನಡೆಸಿದ ಎಲ್ಲ ಕಾರ್ಯಾಚರಣೆಗಳೂ ಯಶಸ್ವಿಯಾಗಿಲ್ಲ. ಜರ್ಮನಿಯಿಂದ ಬರಬೇಕಿದ್ದ ವೈದ್ಯಕೀಯ ಸಾಮಗ್ರಿಯು ಅಲ್ಲಿನ ಕಾರ್ಖಾನೆಯಲ್ಲೇ ಸರ್ಕಾರದಿಂದ ಜಪ್ತಿಯಾಗಿತ್ತು. ಭಾರತದಿಂದ ಇಸ್ರೇಲ್‌ಗೆ ರವಾನೆಯಾಗಬೇಕಿದ್ದ ಸ್ಯಾನಿಟೈಸರ್‌ ಸಂಗ್ರಹವು ಸುಂಕ ಅಧಿಕಾರಿಗಳ ಪರಿಶೀಲನೆಯಿಂದ ವಿಳಂಬವಾಯಿತು. ಕೊನೆಗೆ ಆಮದು ಬೇಡಿಕೆಯನ್ನೇ ಮೊಸ್ಸಾದ್‌ ರದ್ದುಗೊಳಿಸಬೇಕಾಯಿತು.

ರಹಸ್ಯ ರಾಜತಾಂತ್ರಿಕ ಕೊಹೆನ್: ಪ್ರತಿಕೂಲವಾಗಿದ್ದ ಮಧ್ಯಪ್ರಾಚ್ಯ ಹಾಗೂ ಏಷ್ಯಾದ ವಿವಿಧ ದೇಶಗಳ ಜತೆಗಿನ ಸಂಬಂಧ ಸುಧಾರಣೆಗೆ ಮೊಸ್ಸಾದ್ ಹತ್ತಾರು ವರ್ಷಗಳಿಂದ ಶ್ರಮಿಸುತ್ತಿದೆ. ಕೊಹೆನ್ ಅವರು ಯುಎಇ, ಈಜಿಪ್ಟ್, ಸೌದಿ ಅರೇಬಿಯಾ, ಜೋರ್ಡನ್, ಕತಾರ್‌ ದೇಶಗಳ ಮುಖ್ಯಸ್ಥರು ಹಾಗೂ ಅಲ್ಲಿನ ಗುಪ್ತಚರ ಮುಖ್ಯಸ್ಥರನ್ನು ನಿಯಮಿತವಾಗಿ ಭೇಟಿ ಮಾಡುತ್ತಿದ್ದರು ಎನ್ನುವುದು ಮೊಸ್ಸಾದ್‌ನ ಅಂತರಂಗ ಬಲ್ಲವರ ಮಾತು. 

ವೈರಿ ರಾಷ್ಟ್ರಗಳಿಂದಲೂ ಬಂದ ಸಾಮಗ್ರಿ 
ರಾಜತಾಂತ್ರಿಕ ಸಂಬಂಧವನ್ನೇ ಕಡಿದುಕೊಂಡಿರುವ ಪಕ್ಕದ ಅರಬ್‌ ರಾಷ್ಟ್ರಗಳಿಂದಲೂ ಇಸ್ರೇಲ್‌ಗೆ ಉಪಕರಣಗಳು ಬಂದಿವೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಆದರೆ, ಇಸ್ರೇಲ್‌ನ ಅಧಿಕಾರಿಗಳು ಅದನ್ನು ಖಚಿತಪಡಿಸಲು ಸಿದ್ಧರಿಲ್ಲ. 

ಮೊಸ್ಸಾದ್ ಕಾರ್ಯಾಚರಣೆಯು ಆರೋಗ್ಯ ಸಚಿವಾಲಯಕ್ಕೆ ಮುಜುಗರ ತಂದಿಟ್ಟಿದೆ. ಗುಪ್ತಚರ ಸಂಸ್ಥೆಯು ವಹಿಸಿದ ಪಾತ್ರದ ಕುರಿತು ಮಾಹಿತಿ ನೀಡಲು ಸಿದ್ಧವಿಲ್ಲ. ಆದರೆ, ಕೊರೊನಾ ವೈರಸ್‌ನ ತಪಾಸಣೆಗೆ ಬೇಕಾದ ಲಕ್ಷ ಕಿಟ್‌ಗಳು ಮಾರ್ಚ್ 19ರಂದು ವಿಶೇಷ ವಿಮಾನದಲ್ಲಿ ಇಸ್ರೇಲ್ ತಲುಪಿವೆ. ಎರಡನೇ ಹಂತದಲ್ಲಿ 15 ಲಕ್ಷ ಸರ್ಜಿಕಲ್ ಮಾಸ್ಕ್, ಹತ್ತು ಸಾವಿರ ಎನ್95 ಮಾಸ್ಕ್, ರಕ್ಷಣಾ ಕವಚ ಹಾಗೂ ಔಷಧಿಗಳನ್ನು ಮೊಸ್ಸಾದ್ ತರಿಸಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ. 

ಇಸ್ರೇಲ್‌ನಲ್ಲಿ ಸೋಂಕು ಪತ್ತೆ ಪರೀಕ್ಷೆ ನಡೆಸುವ ಪ್ರಯೋಗಾಲಯಗಳಿಗೆ ಹೊರ ದೇಶಗಳಿಂದ ತಂತ್ರಜ್ಞಾನದ ನೆರವು ಕೊಡಿಸುವಲ್ಲಿಯೂ ಕೊಹೆನ್ ಅವರ ಪಡೆ ಯಶಸ್ವಿಯಾಗಿದೆ. ಅದು ಪೂರೈಸಿದ ತಾಂತ್ರಿಕ ಕೌಶಲ ಬಳಸಿಕೊಂಡು ತಿಂಗಳಲ್ಲಿ 2.5 ಕೋಟಿ ರಕ್ಷಣಾ ಮಾಸ್ಕ್ ತಯಾರಿಸುವ ಸಾಮರ್ಥ್ಯ ಆ ದೇಶಕ್ಕೆ ಸಿಕ್ಕಿದೆ. ಬೇಡಿಕೆ ಹೆಚ್ಚಿದಂತೆಲ್ಲ, ವೈರಸ್ ಪೀಡಿತ ಯಾವ ದೇಶವೂ ಈ ಉಪಕರಣಗಳನ್ನು ರಫ್ತು ಮಾಡಲು ಮುಂದಾಗುವುದಿಲ್ಲ ಎಂಬುದನ್ನು ಮೊಸ್ಸಾದ್‌ ಬಹುಬೇಗನೇ ಅರಿತಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆ ಇರದ ದೇಶಗಳ ಗುಪ್ತಚರ ಸಂಸ್ಥೆಗಳ ಜತೆಗೆ ವ್ಯವಹರಿಸುವುದು ಹೆಚ್ಚು ಸುಲಭ ಎಂಬುದು ಈ ಏಜೆನ್ಸಿಯ ಅಧಿಕಾರಿಯೊಬ್ಬರ ಮಾತು. ಏಕೆಂದರೆ, ಅಂತಹ ದೇಶಗಳ ಆಡಳಿತದಲ್ಲಿ ಗುಪ್ತಚರ ಸಂಸ್ಥೆಗಳ ಮಾತು ತುಸು ಹೆಚ್ಚೇ ನಡೆಯುತ್ತದೆ. 

ಮೊಸ್ಸಾದ್‌ ಸಾಹಸದ ಈ ಪರಿ...
ಅಡಾಲ್ಫ್‌ ಹಿಟ್ಲರ್‌ನ ನೆಚ್ಚಿನ ಬಂಟನಾಗಿದ್ದ ನಾಜಿ ಸೇನೆಯ ಅಡಾಲ್ಫ್‌ ಐಷ್ಮನ್‌ನನ್ನು 1960ರಲ್ಲಿ ಸೆರೆ ಹಿಡಿದು ತಂದಿದ್ದು ಇದೇ ಮೊಸ್ಸಾದ್‌ ಪಡೆ. ಇಸ್ರೇಲ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಕೊನೆಗೆ ಆತನಿಗೆ ಮರಣದಂಡನೆ ವಿಧಿಸಲಾಯಿತು. 1972ರ ಮ್ಯೂನಿಕ್‌ ಒಲಿಂಪಿಕ್‌ ಕೂಟದಲ್ಲಿ ಪಾಲ್ಗೊಂಡಿದ್ದ ಇಸ್ರೇಲ್‌ ಕ್ರೀಡಾಪಟುಗಳನ್ನು ಹತ್ಯೆ ಮಾಡಿದವರ ವಿರುದ್ಧ ಸೇಡು ತೀರಿಸಿಕೊಂಡಿದ್ದು ಸಹ ಇದೇ ಪಡೆ.

ಇದು 1976ರಲ್ಲಿ ನಡೆದ ಘಟನೆ. ಟೆಲ್‌ ಅವಿವ್‌ನಿಂದ ಪ್ಯಾರಿಸ್‌ಗೆ ಹೊರಟಿದ್ದ ವಿಮಾನವನ್ನು ಹೈಜಾಕ್‌ ಮಾಡಿದ್ದ ಪ್ಯಾಲೆಸ್ಟೀನ್‌‌ನ ಉಗ್ರರು ಆ ವಿಮಾನದಲ್ಲಿದ್ದ ಇಸ್ರೇಲ್‌ ಪ್ರಜೆಗಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಆ ವಿಮಾನ ಉಗಾಂಡಾದ ಎಂಟೆಬೆಯಲ್ಲಿ ಲ್ಯಾಂಡ್‌ ಆಗಿತ್ತು. ಸುಮಾರು ನಾಲ್ಕುಸಾವಿರ ಕಿ.ಮೀ. ದೂರದಲ್ಲಿದ್ದ ಎಂಟೆಬೆಗೆ ರಾತ್ರಿ ವೇಳೆಯಲ್ಲಿ ದಾಳಿಯಿಟ್ಟ ಇಸ್ರೇಲ್‌ ಸೇನೆ, ಉಗ್ರರನ್ನು ಕೊಂದು, ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆದೊಯ್ದಿತ್ತು. ಈ ಕಾರ್ಯಾಚರಣೆಯಲ್ಲೂ ಮೊಸ್ಸಾದ್‌ ಮಹತ್ವದ ಪಾತ್ರ ವಹಿಸಿತ್ತು. ತನ್ನ ಬದ್ಧ ವೈರಿ ಇರಾನ್‌ಗೆ 2018ರಲ್ಲಿ ನುಗ್ಗಿದ್ದ ಮೊಸ್ಸಾದ್‌ ಪ್ರತಿನಿಧಿಗಳು, ಅಲ್ಲಿಂದ ಅಣುಶಕ್ತಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಕದ್ದು ತಂದಿದ್ದರು.


ಮೊಸ್ಸಾದ್ ನಿರ್ದೇಶಕ ಯೊಸ್ಸಿ ಕೊಹೆನ್

ಅಡ್ಡ ದಾರಿಯಲ್ಲಿಯೂ ಸಂಚಾರ
‘ಕೋವಿಡ್‌ ತಡೆಗಾಗಿ ಬಳಸುವ ಉಪಕರಣಗಳ ಕೊರತೆಯು ಜಗತ್ತನ್ನು ತೀವ್ರವಾಗಿ ಕಾಡಲಿದೆ. ಉಪಕರಣಗಳ ಕೊರತೆಯಿಂದಲೇ ಜನರು ಸಾಯುತ್ತಿದ್ದಾರೆ. ಆದರೆ, ಇಸ್ರೇಲ್‌ಗೆ ಅಂತಹ ಸ್ಥಿತಿ ಬರುವುದಿಲ್ಲ’ ಎಂದು ಇಸ್ರೇಲ್‌ನ ಸುದ್ದಿವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ಮೊಸ್ಸಾದ್‌ನ ಏಜೆಂಟ್‌ ಒಬ್ಬರು ಹೇಳಿದ್ದಾರೆ. ತಮ್ಮ ಹೆಸರನ್ನು ಅವರು ‘ಎಚ್‌’ ಎಂದು ಮಾತ್ರ ಉಲ್ಲೇಖಿಸಿದ್ದಾರೆ.

ವಿವಿಧ ದೇಶಗಳಿಂದ ಸಾಧನಗಳನ್ನು ತರಿಸಿಕೊಳ್ಳಲು ಯಾವ ಕಾರ್ಯತಂತ್ರ ಅನುಸರಿಸಲಾಯಿತು ಎಂಬುದನ್ನು ‘ಎಚ್‌’ ಬಾಯಿ ಬಿಟ್ಟಿಲ್ಲ. ಇಸ್ರೇಲ್‌ಗೆ ಇಷ್ಟೊಂದು ಪ್ರಮಾಣದಲ್ಲಿ ಸಾಧನಗಳನ್ನು ತರಿಸಿಕೊಂಡಿರುವುದರಲ್ಲಿ ಕಳ್ಳತನದ ಪಾತ್ರವೂ ಇದೆಯೇ ಎಂಬ ಪ್ರಶ್ನೆಗೆ, ‘ನಾವು ಕದ್ದದ್ದು ಹೌದು, ಆದರೆ ಸ್ವಲ್ಪ ಮಾತ್ರ’ ಎಂದು ಅವರು ಉತ್ತರಿಸಿದ್ದಾರೆ.

ಇಸ್ರೇಲ್‌ ಮಾತ್ರವಲ್ಲದೆ ಇತರ ಕೆಲವು ದೇಶಗಳು ಕೂಡ ಕೋವಿಡ್‌ ತಡೆ ಸಲಕರಣೆಗಳಿಗಾಗಿ ‘ಅಡ್ಡ ದಾರಿ’ಯ ಮೊರೆ ಹೋಗಿವೆ ಎಂದು ಹೇಳಲಾಗುತ್ತಿದೆ. ಒಂದು ದೇಶಕ್ಕೆ ತಲುಪಬೇಕಿದ್ದ ಸಾಧನಗಳನ್ನು ಬೇರೊಂದು ದೇಶವು ಕಬಳಿಸಿದ್ದರಿಂದಾಗಿ ಐರೋಪ್ಯ ಒಕ್ಕೂಟದ ಹಲವು ದೇಶಗಳ ನಡುವಣ ಸಂಬಂಧ ಹಳಸಿದೆ ಎಂಬ ವರದಿಗಳೂ ಪ್ರಕಟವಾಗಿವೆ.

ಕೊರೊನಾ ಪಿಡುಗಿನಿಂತ ತತ್ತರಿಸಿರುವ ಫ್ರಾನ್ಸ್‌, ಸುರಕ್ಷತಾ ಸಾಧನಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರೆ, ಕೆಲವೊಮ್ಮೆ ಅದರ ಸಂತ್ರಸ್ತ ದೇಶವೂ ಆಗಿದೆ. ಫ್ರಾನ್ಸ್‌ ತಲುಪಬೇಕಿದ್ದ ಗವಸುಗಳನ್ನು ಅಮೆರಿಕದ ಅಧಿಕಾರಿಗಳು ವಶಕ್ಕೆ ಪಡೆದ ಪ್ರಕರಣವೂ ವರದಿಯಾಗಿದೆ.

ಇಸ್ರೇಲ್‌ ಗುಪ್ತಚರ ಪಡೆಯ ವಿರಾಟ್‌ರೂಪ

* ₹ 2.08 ಲಕ್ಷ ಕೋಟಿ: ಮೊಸ್ಸಾದ್‌ನ ವಾರ್ಷಿಕ ಬಜೆಟ್‌

* 7,000: ಉದ್ಯೋಗಿಗಳನ್ನು ಮೊಸ್ಸಾದ್‌ ಹೊಂದಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು