ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಒಳನೋಟ | ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದಿಟ್ಟ ಸಂಕಷ್ಟ: ಆದಾಯ ಕ್ಷೀಣ; ಪ್ರಾಂಗಣ ಭಣಭಣ
ಒಳನೋಟ | ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದಿಟ್ಟ ಸಂಕಷ್ಟ: ಆದಾಯ ಕ್ಷೀಣ; ಪ್ರಾಂಗಣ ಭಣಭಣ
ಹೊಡೆತ ನೀಡಿದ ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು) ಕಾಯ್ದೆ–2020
Published 17 ಜೂನ್ 2023, 19:36 IST
Last Updated 17 ಜೂನ್ 2023, 19:36 IST
ಅಕ್ಷರ ಗಾತ್ರ

ಬೆಂಗಳೂರು:  ಆಂಧ್ರಪ್ರದೇಶ ಮೂಲದ ವ್ಯಾಪಾರಿಯೊಬ್ಬರು ರಾಯಚೂರು ಜಿಲ್ಲೆಯ ವಿವಿಧ ಗ್ರಾಮಗಳ ರೈತರ ಹೊಲಗಳಿಗೇ ಹೋಗಿ ಮೆಣಸಿನಕಾಯಿ ಖರೀದಿ ಮಾಡುತ್ತಿದ್ದರು. ಆರಂಭದಲ್ಲಿ ಮೆಣಸಿನಕಾಯಿ ಖರೀದಿಸಿದ ನಂತರ ಕೆಲವರಿಗೆ ಅವರು ಹಣ ನೀಡಿದ್ದರು. ಹೀಗಾಗಿ ಅವರನ್ನು ನಂಬಿದ ಅನೇಕ ರೈತರು ಅವರಿಗೇ ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ. ಆದರೆ, ಅವರು ಈವರೆಗೆ ಹಣ ನೀಡದೆ, ಬಾಕಿ ಉಳಿಸಿಕೊಂಡಿರುವ ಮೊತ್ತ ಬರೋಬ್ಬರಿ ₹ 12 ಕೋಟಿ!

ನಾಲಿಗೆಗೆ ಕಡುಖಾರ ಸವರಿಕೊಂಡ ಅನುಭವ ಹಣ ಕಳೆದುಕೊಂಡ ರೈತರದ್ದಾಗಿದೆ. ಖಾರದ ಮೆಣಸಿನಕಾಯಿಯನ್ನು ತಿನ್ನದಿದ್ದರೂ ರೈತರು ನೀರು ಕುಡಿಯಬೇಕಾಗಿದೆ.. ಕಣ್ಣೀರೂ ಹಾಕಬೇಕಾಗಿದೆ.

‘ಈ ವ್ಯಾಪಾರಿ ವಿರುದ್ಧ ದೇವದುರ್ಗ ತಾಲ್ಲೂಕಿನ ಗಬ್ಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತರಿಗೆ ಹಣ ಕೊಡಿಸುವ ಸಲುವಾಗಿ ಅನೇಕ ಬಾರಿ ಹೋರಾಟಗಳನ್ನು ನಡೆಸಿ, ಸ್ಥಳೀಯ ಆಡಳಿತದ ಗಮನಕ್ಕೂ ತಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಕರ್ನಾಟಕ ರಾಜ್ಯ ರೈತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಪಾಟೀಲ ತಿಳಿಸಿದರು.

ರೈತರಿಂದ ಕೃಷಿ ಉತ್ಪನ್ನ ಖರೀದಿಸಿದ ದಲ್ಲಾಳಿಯೊಬ್ಬರು, ಹಣ ಕೊಡದೇ ವಂಚಿಸಿದ ಪ್ರಕರಣಗಳು ದಾವಣಗೆರೆ ಜಿಲ್ಲೆಯಲ್ಲೂ ನಡೆದಿವೆ. ರೈತರು ದೂರಿನಲ್ಲಿ ಇಂತಹ ವ್ಯಕ್ತಿಯೇ ಮೋಸ ಮಾಡಿದ್ದು ಎಂದು ಹೇಳಿದ್ದರು ಬಹಳಷ್ಟು ಎಫ್‌ಐಆರ್‌ಗಳಲ್ಲಿ ಅನಾಮದೇಯ ಮೋಸ ಮಾಡಿದ ಎಂದು ನಮೂದಿಸಲಾಗಿದೆ.

‘2022ರ ಡಿಸೆಂಬರ್‌ನಲ್ಲಿ ರೈತರಿಂದ ಭತ್ತ, ಮೆಕ್ಕೆಜೋಳ ಖರೀದಿಸಿದ ದಲ್ಲಾಳಿಯೊಬ್ಬರು ಹಣ ಕೊಡದೇ ವಂಚನೆ ಮಾಡಿದ್ದರು. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಅರವಿ ಗ್ರಾಮದ 15 ರೈತರು, ದಾವಣಗೆರೆ ಜಿಲ್ಲೆಯ ಮಾಯಕೊಂಡ, ಮೆಳ್ಳಕಟ್ಟೆ, ನಲ್ಲೂರು ಭಾಗಗಳ ನೂರಾರು ರೈತರು ಹಾಗೂ ಸಣ್ಣ ಸ್ಥಳೀಯ ವರ್ತಕರಿಗೂ ಕೋಟ್ಯಂತರ ವಂಚನೆ ಮಾಡಲಾಗಿದೆ. ಹಣ ಕೇಳಲು ಹೋದರೆ ರೌಡಿಗಳನ್ನು ಬಿಟ್ಟು ಬೆದರಿಸುತ್ತಿದ್ದಾರೆ’ ಎಂದು ರೈತರು ಆರೋಪಿಸಿದ್ದಾರೆ. ಕೆಲ ಪ್ರಕರಣಗಳು ಪೊಲೀಸ್‌ ಠಾಣೆ ಮೆಟ್ಟಿಲೇರಿ, ನಂತರ ಸಂಧಾನದ ಮೂಲಕ ಬಗೆಹರಿಸಿದ ಪ್ರಸಂಗಗಳು ಜರುಗಿವೆ ಎಂದು ವಿವರಿಸುತ್ತಾರೆ.

ಈ ರೀತಿ ಸಂಕಷ್ಟಕ್ಕೆ ಸಿಲುಕಿರುವ ರೈತರ ಅನೇಕ ಗೋಳಿನ ಕಥೆಗಳನ್ನು ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣಗಳು ಹೇಳುತ್ತವೆ.

‘ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು) ಕಾಯ್ದೆ–2020’ ಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದ್ದೇ ಇಂಥ ಸಮಸ್ಯೆಗೆ ಕಾರಣ. ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದಾಗಿ ರೈತರು ಮಾತ್ರವಲ್ಲ, ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳು ಕೂಡ ಸೊರಗುತ್ತಿವೆ. ಅವುಗಳ ಆದಾಯ ಕುಸಿಯುತ್ತಿದೆ. ಪ್ರಾಂಗಣಗಳ ನಿರ್ವಹಣೆಗಾಗಿ ಸಮಿತಿಗಳು ಹೆಣಗಾಡುತ್ತಿವೆ.

ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿ ಕೆಲಸವಿಲ್ಲದೆ ಕಾಲಕಳೆಯುತ್ತಿರುವ ದಿನಗೂಲಿ ಕಾರ್ಮಿಕರು  –ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿ ಕೆಲಸವಿಲ್ಲದೆ ಕಾಲಕಳೆಯುತ್ತಿರುವ ದಿನಗೂಲಿ ಕಾರ್ಮಿಕರು –ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ರೈತರ ಹೋರಾಟಕ್ಕೆ ಮಣಿದು ಕಾಯ್ದೆ ವಾಪಸ್: ಮೂರು ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರ, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿತು. ಈ ಸಂಬಂಧ 2020ರ ಸೆಪ್ಟೆಂಬರ್ 27ರಂದು ಅಧಿಸೂಚನೆ ಹೊರಡಿಸಿತು. ರೈತರಿಗೆ ವಿಸ್ತೃತ ಮಾರುಕಟ್ಟೆ ಒದಗಿಸುವುದು ಹಾಗೂ ಅವರ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಸಿಗುವಂತೆ ಮಾಡುವುದು ತಿದ್ದುಪಡಿಯ ಉದ್ದೇಶ ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಆದರೆ, ಈ ತಿದ್ದುಪಡಿ ವಿರುದ್ಧ ದೇಶದಾದ್ಯಂತ  ರೈತರಿಂದ ಭಾರಿ ಪ್ರತಿಭಟನೆ ನಡೆಯಿತು. ದೆಹಲಿಯ ಗಡಿಗಳನ್ನು ಬಂದ್‌ ಮಾಡಿದ್ದ ರೈತರು, ವರ್ಷಗಟ್ಟಲೇ ಮಳೆ–ಬಿಸಿಲು–ಚಳಿ ಎನ್ನದೇ ಪ್ರತಿರೋಧ ವ್ಯಕ್ತಪಡಿಸಿದರು. ಮೂರು ಕೃಷಿ ಕಾಯ್ದೆಗಳಿಗೆ ತಂದಿದ್ದ ತಿದ್ದುಪಡಿಯನ್ನು ಹಿಂಪಡೆಯುವಂತೆ ಹಿಡಿದ ಪಟ್ಟನ್ನು ಸಡಿಸಲಿಲ್ಲ. ವಿಶ್ವದ ಅನೇಕ ನಾಯಕರು, ಹೋರಾಟಗಾರರು, ಕೃಷಿತಜ್ಞರು ಕೂಡ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು.

ಕೊನೆಗೆ, ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ, ಈ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿ 2021ರ ನವೆಂಬರ್ 19ರಂದು ಹಿಂಪಡೆಯಿತು. ಆದರೆ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಮಾತ್ರ ಈ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿಲ್ಲ. ಹೀಗಾಗಿ ರಾಜ್ಯದ 167 ಎಪಿಎಂಸಿಗಳ ಸಂಕಷ್ಟ ಮುಂದುವರಿದಿದೆ. ಇದೇ ವರ್ಷದ ಜೂನ್‌ 15ರ ಸಚಿವ ಸಂಪುಟ ಸಭೆಯಲ್ಲಿ ಈ ಕಾಯ್ದೆ ವಾಪಸ್‌ ಪಡೆಯುವ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಆದರೆ ಅಧಿವೇಶದಲ್ಲಿ ಕಾಯ್ದೆಗೆ ತಿದ್ದು‍ಪಡಿ ತಂದು, ಎಪಿಎಂಸಿ ಪುನಶ್ಚೇತನವಾಗಲು ಮತ್ತು ಹಣ ಕಳೆದುಕೊಂಡ ರೈತರಿಗೆ ನ್ಯಾಯ ಸಿಗಲು ಇನ್ನಷ್ಟು ದಿನ ಕಾಯಬೇಕಾಗುತ್ತದೆ.

ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿರುವ ವ್ಯಾಪಾರಿಗಳು, ಹಣ ಸಂದಾಯ ಮಾಡಿಲ್ಲ ಎಂಬ ಆರೋಪಗಳು ವ್ಯಾಪಕವಾಗಿವೆ. ‘ರೈತರನ್ನು ವಂಚಿಸಿದ್ದಾರೆ ಎನ್ನಲಾದ ವ್ಯಾಪಾರಿಗಳ ವಿರುದ್ಧ ಕೆಲ ಜಿಲ್ಲೆಗಳಲ್ಲಿ ಎಫ್‌ಐಆರ್‌ಗಳೂ ದಾಖಲಾಗಿವೆ. ಇಂತಹ ಪ್ರಕರಣಗಳ ಕುರಿತು ಪೊಲೀಸ್‌ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ರೈತರಿಗೆ ಹಣ ಸಿಗುವಂತೆ ಮಾಡಬೇಕು’ ಎಂದು ರೈತ ಮುಖಂಡರು  ಒತ್ತಾಯಿಸುತ್ತಾರೆ.

ಕಾಯ್ದೆ ಏನು ಹೇಳುತ್ತದೆ: ‘ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು) ಕಾಯ್ದೆ–2020’ಕ್ಕೆ ತಿದ್ದುಪಡಿ ತರಲಾಗಿದ್ದು, ಇದರಡಿ ರೈತರಿಗೆ ಎಪಿಎಂಸಿ ಮಾರುಕಟ್ಟೆಗಳ ಹೊರಗಡೆಯೂ ತಮ್ಮ ಉತ್ಪನ್ನ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಈ ಕಾಯ್ದೆಯ ಸೆಕ್ಷನ್ 3ರ ಪ್ರಕಾರ, ರೈತರು ತಮ್ಮ ಉತ್ಪನ್ನಗಳನ್ನು ರಾಜ್ಯದೊಳಗೆ ಹಾಗೂ ನೆರೆ ರಾಜ್ಯಗಳಲ್ಲಿ ಮಾರಾಟ ಮಾಡಬಹುದು. ಕಾಯ್ದೆಯ ಸೆಕ್ಷನ್ 4(3)ರ ಅನ್ವಯ, ರೈತರ ಜೊತೆ ವಹಿವಾಟು ನಡೆಸುವ ವ್ಯಾಪಾರಸ್ಥರು, ರೈತರಿಗೆ ಕೊಡಬೇಕಿರುವ ಹಣವನ್ನು ಅದೇ ದಿನ ಅಥವಾ ಗರಿಷ್ಠ ಮೂರು ಕೆಲಸದ ದಿನಗಳಲ್ಲಿ ಪಾವತಿಸಬೇಕು.

ಕಾಯ್ದೆಯ ತಿದ್ದುಪಡಿಗೂ ಮುನ್ನ, ಅಧಿಸೂಚಿತ ಕೃಷಿ ಉತ್ಪನ್ನಗಳ ವ್ಯಾಪಾರವನ್ನು ಮಾರುಕಟ್ಟೆಯ ಪ್ರಾಂಗಣದಲ್ಲಿಯೇ ನಡೆಸಬೇಕು ಎಂದು ಕಾಯ್ದೆಯ ಕಲಂ 8(2)ರಡಿ ನಿರ್ಬಂಧ ಇತ್ತು. ತಾಲ್ಲೂಕಿನಾದ್ಯಂತ ಈ ಸಮಿತಿಗಳು ವ್ಯಾಪ್ತಿ ಹೊಂದಿದ್ದವು. ಅಲ್ಲದೇ, ಈ ನಿರ್ಬಂಧ ಉಲ್ಲಂಘಿಸಿದವರಿಗೆ ಕಲಂ 117ರಡಿ ದಂಡ ಹಾಗೂ ಸಜೆ ವಿಧಿಸಲು ಕೂಡ ಅವಕಾಶ ಇತ್ತು.

ತಿದ್ದುಪಡಿ ಕಾರಣದಿಂದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ನಿಯಂತ್ರಣ ಆಯಾ ಪ್ರಾಂಗಣಗಳಿಗೆ ಸೀಮಿತಗೊಂಡಿದೆ. ಅದೇ ಪ್ರಾಂಗಣದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂಬ ನಿರ್ಬಂಧ ತೆರವುಗೊಂಡಿದೆ. ಕಾಯ್ದೆಯ ಕಲಂ 8(2) ಹಾಗೂ ಕಲಂ 117 ಅನ್ನು ಕೈಬಿಡಲಾಗಿದೆ. ಹೀಗಾಗಿ ಉಲ್ಲಂಘನೆಗೆ ವಿಧಿಸುತ್ತಿದ್ದ ದಂಡ ಹಾಗೂ ಸಜೆ ಈಗ ಇಲ್ಲ. ವ್ಯಾಪಾರಿಗಳಿಗೆ ಭಯವೂ ಇಲ್ಲ.

ಕಲಬುರಗಿಯ ಎಪಿಎಂಸಿ (ಗಂಜ್‌) ಮಾರುಕಟ್ಟೆಯಲ್ಲಿ ವ್ಯಾಪಾರ ಇಲ್ಲದೆ ಖಾಲಿ ಕುಳಿತಿರುವ ಹಮಾಲರು

–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಕಲಬುರಗಿಯ ಎಪಿಎಂಸಿ (ಗಂಜ್‌) ಮಾರುಕಟ್ಟೆಯಲ್ಲಿ ವ್ಯಾಪಾರ ಇಲ್ಲದೆ ಖಾಲಿ ಕುಳಿತಿರುವ ಹಮಾಲರು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌

ಅಕ್ಕಿ, ಕೊಬ್ಬರಿ ವಹಿವಾಟು ಕುಸಿತ

ಈ ಹಿಂದೆ ಹೆಚ್ಚು ಭತ್ತ ಬೆಳೆಯುತ್ತಿದ್ದ ದಾವಣಗೆರೆ ಜಿಲ್ಲೆಯ ರೈತರು ಈಗ ಅಡಿಕೆಗೆ ಮಾರು ಹೋಗಿದ್ದಾರೆ. ಕಲ್ಪತರು ನಾಡು ಎಂದು ಪ್ರಸಿದ್ಧಿಯಾಗಿರುವ ತುಮಕೂರು, ಕೊಬ್ಬರಿ ವಹಿವಾಟಿಗೂ ಖ್ಯಾತಿ. ಈಗ ಜಿಲ್ಲೆಯಲ್ಲಿನ ಎಪಿಎಂಸಿ ಪ್ರಾಂಗಣಗಳಲ್ಲಿ ಕೊಬ್ಬರಿ ವಹಿವಾಟು ಕುಸಿದಿದೆ.

ದಾವಣಗೆರೆ ಜಿಲ್ಲೆಯಲ್ಲಿ ರೈತರು ಎಪಿಎಂಸಿ ಪ್ರಾಂಗಣಕ್ಕೆ ಭತ್ತ ತರುವುದು ಕೂಡ ಕಡಿಮೆಯಾಗಿದೆ. ತಿದ್ದುಪಡಿ ಕಾಯ್ದೆ ಪರಿಣಾಮದಿಂದಾಗಿ ರೈತರು ನೇರವಾಗಿ ಅಕ್ಕಿ ಗಿರಣಿಗಳಿಗೆ ತಮ್ಮ ಕೃಷಿ ಉತ್ಪನ್ನ ಮಾರಾಟ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ರಾಯಚೂರು ಜಿಲ್ಲೆಯ ಹಾಗೂ ಗಂಗಾವತಿ ಪ್ರಾಂಗಣ ಪರಿಸ್ಥಿತಿ ಭಿನ್ನವಾಗಿಲ್ಲ. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಅನೇಕ ದೊಡ್ಡ ರೈತರು ಭತ್ತವನ್ನು ನೇರವಾಗಿ ಮಿಲ್‌ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕೇವಲ 100ರಿಂದ 300 ಚೀಲ ಮಾರಾಟ ಮಾಡುವ ರೈತರು ಮಾತ್ರ ಎಪಿಎಂಸಿಯಲ್ಲಿ ಮಾರಾಟ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತುಮಕೂರು ಎಪಿಎಂಸಿಗೆ ಕೊಬ್ಬರಿ, ಹುಣಸೆ ಹಣ್ಣು ಹಾಗೂ ಇತರೆ ಪದಾರ್ಥಗಳ ಆವಕ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದ್ದು, ದಿನಗೂಲಿ ಕಾರ್ಮಿಕರು, ಹಮಾಲಿಗಳಿಗೆ ಕೆಲಸ ಇಲ್ಲದಂತಾಗಿದೆ. ಬೇರೆ ಉದ್ಯೋಗದ ಕಡೆ ಮುಖ ಮಾಡುತ್ತಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ತೆಂಗನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಹಿಂದಿನ ವರ್ಷಗಳಲ್ಲಿ ಕೊಬ್ಬರಿ ಮಾರಾಟಕ್ಕೆ ತಿಪಟೂರು ಎಪಿಎಂಸಿಯನ್ನೇ ರೈತರು ಅವಲಂಬಿಸಿದ್ದರು. ಜಿಲ್ಲೆಯಷ್ಟೇ ಅಲ್ಲದೆ ಪಕ್ಕದ ಮಂಡ್ಯ ಹಾಗೂ ಹಾಸನ ಜಿಲ್ಲೆಯ ರೈತರೂ ಕೊಬ್ಬರಿ ಹೊತ್ತು ಬರುತ್ತಿದ್ದರು. ಬುಧವಾರ, ಶನಿವಾರ ನಡೆಯುವ ಹರಾಜು ಸಮಯದಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಮಾರುಕಟ್ಟೆ ತುಂಬಿ ತುಳಕುತಿತ್ತು. ಹೊಸ ಕಾಯ್ದೆ ಜಾರಿ ನಂತರ ರೈತರು ಎಲ್ಲಿ ಬೇಕಾದರೂ ಕೊಬ್ಬರಿ ಮಾರಾಟ ಮಾಡಬಹುದಾಗಿದ್ದು, ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ.

ಆದಾಯಕ್ಕೆ ಹೊಡೆತ: ಕಾಯ್ದೆಯ ತಿದ್ದುಪಡಿಗೂ ಮುನ್ನ, ಅಧಿಸೂಚಿತ ಕೃಷಿ ಉತ್ಪನ್ನಗಳ ವಹಿವಾಟಿನ ಮೊತ್ತದ ಮೇಲೆ ಖರೀದಿದಾರರಿಂದ ಶೇ 1.5ರಷ್ಟು ಶುಲ್ಕ ಸಂಗ್ರಹಿಸಲಾಗುತ್ತಿತ್ತು. ಹಣ್ಣು, ತರಕಾರಿ, ಹೂವಿನಂತಹ ಉತ್ಪನ್ನಗಳ ವಹಿವಾಟಿನ ಮೊತ್ತದ ಮೇಲೆ ಶೇ 1ರಷ್ಟು ಶುಲ್ಕ ಸಂಗ್ರಹಿಸಲು ಸಮಿತಿಗಳಿಗೆ ಅವಕಾಶ ಇತ್ತು.

ಕಾಯ್ದೆಗೆ ತಿದ್ದುಪಡಿ ತಂದ ನಂತರ ಈ ಶುಲ್ಕವನ್ನು ಶೇ 0.60ಕ್ಕೆ ನಿಗದಿ ಮಾಡಲಾಗಿದೆ. ಇದು ಪ್ರಾಂಗಣದಲ್ಲಿ ನಡೆಯುವ ವಹಿವಾಟಿಗೆ ಮಾತ್ರ ಅನ್ವಯವಾಗುತ್ತದೆ. ಇದರಿಂದಾಗಿ ಮಾರುಕಟ್ಟೆ ಸಮಿತಿಗಳ ಶುಲ್ಕ ಸಂಗ್ರಹಣೆ ಗಣನೀಯವಾಗಿ ಕಡಿಮೆಯಾಗಿದೆ. ಬಹಳಷ್ಟು ವಹಿವಾಟು ಹೊರಗೇ ನಡೆಯುತ್ತಿರುವುದೇ ಎಪಿಎಂಸಿಗಳ ಆದಾಯ ಕುಸಿಯಲು ಇದು ಪ್ರಮುಖ ಕಾರಣ. ಇನ್ನು, ವರ್ತಕರು ಹೆಸರಿಗೆ ಮಾತ್ರ ಪ್ರಾಂಗಣದಲ್ಲಿ ಒಂದು ಅಂಗಡಿ ತೆರೆಯುತ್ತಾರೆ. ಕೃಷಿ ಉತ್ಪನ್ನಗಳ ಖರೀದಿಯನ್ನು ಹೊರಗೆ ನಡೆಸುತ್ತಾರೆ. ಇದು ಮತ್ತೊಂದು ರೀತಿಯಲ್ಲಿ ಎಪಿಎಂಸಿಗಳ ಆದಾಯಕ್ಕೆ ಹೊಡೆತ ನೀಡುತ್ತಿದೆ ಎಂದು ಮೂಲಗಳು ಹೇಳುತ್ತವೆ.

‘ಇನ್ನೂ ಕೆಲ ಸಂದರ್ಭಗಳಲ್ಲಿ, ಕೆಲ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಎಪಿಎಂಸಿಗಳತ್ತ ಹೋಗುತ್ತಾರೆ. ಅವರು ಇನ್ನು ಪ್ರಾಂಗಣವನ್ನೇ ತಲುಪಿರುವುದಿಲ್ಲ, ಅವರನ್ನು ಹೊರಗಡೆ ಇರುವ ವರ್ತಕರತ್ತ ಕಳುಹಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

‘ಕೆಲ ಅಡಿಕೆ ಬೆಳೆಗಾರರು ಜಿಎಸ್‌ಟಿ ತಪ್ಪಿಸುವ ಸಲುವಾಗಿ ಮುಕ್ತ ಮಾರುಕಟ್ಟೆ ಬೇಕು ಎಂಬ ವಾದ ಮಂಡಿಸುತ್ತಿದ್ದಾರೆ. ಹೊರಗಡೆ ವಹಿವಾಟು ನಡೆಸಿದರೆ, ಬಿಲ್‌ನಲ್ಲಿ ವ್ಯತ್ಯಾಸ ಮಾಡಿ, ಆ ಮೂಲಕ ಜಿಎಸ್‌ಟಿ ತಪ್ಪಿಸಬಹುದು ಎಂಬುದು ಅವರ ಲೆಕ್ಕಾಚಾರ‘ ಎಂದೂ ಈ ಅಧಿಕಾರಿ ಆರೋಪಿಸುತ್ತಾರೆ.

ನಿರ್ವಹಣೆ ಕಷ್ಟ: ಕಳೆದ ಮೂರು ವರ್ಷಗಳಲ್ಲಿ ಎಪಿಎಂಸಿಗಳಿಗೆ ಕೃಷಿ ಉತ್ಪನ್ನಗಳ ಆವಕ ಇಳಿದಿದ್ದು, ಪರಿಣಾಮವಾಗಿ ಶುಲ್ಕ ಸಂಗ್ರಹಣೆಯೂ ಕಡಿಮೆಯಾಗಿದೆ. 100ಕ್ಕೂ ಹೆಚ್ಚು ಮಾರುಕಟ್ಟೆ ಸಮಿತಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸ್ವಚ್ಛತೆ, ಭದ್ರತೆ ಸೇರಿದಂತೆ ಇತರ ಮೂಲಸೌಕರ್ಯಗಳ ನಿರ್ವಹಣೆಗೂ ತೊಂದರೆಯಾಗುತ್ತಿದೆ ಎಂದು ವಿವರಿಸುತ್ತಾರೆ.

ಈ ಮೊದಲು ರಾಯಚೂರು ಎಪಿಎಂಸಿಯ ವಾರ್ಷಿಕ ವರಮಾನ ₹ 8 ಕೋಟಿ ಇತ್ತು. ತಿದ್ದುಪಡಿ ಕಾಯ್ದೆ ಜಾರಿ ನಂತರ ₹ 3 ಕೋಟಿಗೆ ಇಳಿದಿದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ವಾರ್ಷಿಕವಾಗಿ ₹ 10 ಕೋಟಿಯಿಂದ ₹ 11 ಕೋಟಿಯವರೆಗೆ ಸೆಸ್‌ ಸಂಗ್ರಹವಾಗುತ್ತಿತ್ತು. ಈಗ ₹ 6.5 ಕೋಟಿಯಿಂದ ₹ 7 ಕೋಟಿಯಷ್ಟು ಸಂಗ್ರಹವಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಬೆಳಗಾವಿ ಜಿಲ್ಲೆಯ ಎಪಿಎಂಸಿಗಳ ಆದಾಯ 2019–20ರಲ್ಲಿ ₹15.16 ಕೋಟಿಯಷ್ಟಿತ್ತು. ಅದು ಈಗ ₹2.88 ಕೋಟಿಗೆ ಇಳಿಕೆಯಾಗಿದೆ. ಕೆಲವು ಎಪಿಎಂಸಿಗಳಲ್ಲಿ ವಹಿವಾಟು ತೀರಾ ಕುಸಿದಿದೆ’ ಎಂದು ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಬಿ.ಆರ್‌.ಜಾಲಿಬೇರಿ ಹೇಳುತ್ತಾರೆ.

ದಾವಣಗೆರೆ ಎಪಿಎಂಸಿಯಲ್ಲಿ ವರ್ಷಕ್ಕೆ ₹2 ಕೋಟಿ ಸಂಗ್ರಹವಾಗುತ್ತಿದ್ದು, ನಿರ್ವಹಣೆಗೆ ₹2.50 ಕೋಟಿ ಅಗತ್ಯವಿದೆ. ಜಗಳೂರು, ಹೊನ್ನಾಳಿ, ಹರಿಹರ ಎಪಿಎಂಸಿಗಳಲ್ಲಿ ಸಂಗ್ರಹವಾಗುತ್ತಿರುವ ಸೆಸ್‌ ಸಂಗ್ರಹವು ಅ‌ಲ್ಲಿನ ಭದ್ರತಾ ಸಿಬ್ಬಂದಿಗೆ ಸಂಬಳ ನೀಡುವುದಕ್ಕೂ ಸಾಲುತ್ತಿಲ್ಲ. ಚನ್ನಗಿರಿ ಎಪಿಎಂಸಿಯಲ್ಲಿ ತೋಟ ಉತ್ಪನ್ನಗಳ ಅಡಿಕೆ ಮಾರುಕಟ್ಟೆ ಸಂಘ (ತುಮ್ಕೋಸ್‌) ಹಾಗೂ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘಗಳು ಇರುವುದರಿಂದ ಅಲ್ಲಿ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ರಾಯಚೂರು ಎಪಿಎಂಸಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳಿಲ್ಲ. ಶುದ್ಧ ಕುಡಿಯುವ ನೀರಿಲ್ಲ. ರೈತರು ಎಪಿಎಂಸಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯಿಲ್ಲ. ರೈತ ಭವನ ನಿರ್ಮಿಸಿದರೂ ವಿಶ್ರಾಂತಿಗಾಗಿ ರೈತರಿಗೆ ನೀಡುತ್ತಿಲ್ಲ. ಈ ಅವ್ಯವಸ್ಥೆ ಬಗ್ಗೆ ಕೇಳಿದರೆ, ಈ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ ಎನ್ನುವ ಕುಂಟುನೆಪವನ್ನು ಅಧಿಕಾರಿಗಳು ಹೇಳುತ್ತಾರೆ.

ಹಾವೇರಿ ಜಿಲ್ಲೆಯ ಎಪಿಎಂಸಿಗಳ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಕಚೇರಿ ವಿದ್ಯುತ್‌ ಮತ್ತು ನೀರಿನ ಶುಲ್ಕ ಪಾವತಿಸಲಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಗುತ್ತಿಗೆ ಆಧಾರದ ಮೇಲೆ ದುಡಿಯುವ ತೂಕದವರು, ಭದ್ರತಾ ಸಿಬ್ಬಂದಿ, ಕಸ ಗುಡಿಸುವವರಿಗೂ ಹಣ ಕೊಡಲು ಎಪಿಎಂಸಿಯಿಂದ ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಹುಬ್ಬಳ್ಳಿ ಎಪಿಎಂಸಿ ಪ್ರಾಂಗಣದಲ್ಲಿ ರಸ್ತೆ ನಿರ್ಮಾಣ, ಕುಡಿಯುವ ನೀರು– ಶೌಚಾಲಯ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಕಾಮಗಾರಿಗಳು ಕುಂಠಿತಗೊಂಡಿವೆ. ಹಮಾಲರಿಗೆ ರೂಪಿಸಿದ್ದ ಗೃಹ ನಿರ್ಮಾಣ ಯೋಜನೆ ನಿಂತುಹೋಗಿದೆ ಎಂದು ಹೇಳುವ ಮೂಲಕ ಅಧಿಕಾರಿಗಳು ಸಮಿತಿಯ ಆರ್ಥಿಕ ದುಃಸ್ಥಿತಿಯನ್ನು ತೆರೆದಿಡುತ್ತಾರೆ.

ತುಮಕೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕರಿಗೆ, ಹಮಾಲಿಗಳಿಗೆ ಅಗತ್ಯ ಸೌಲಭ್ಯಗಳಿಲ್ಲ. ಕುಡಿಯುವ ನೀರಿಗೆ ಹೋಟೆಲ್‌ಗಳ ಮೊರೆ ಹೋಗುತ್ತಿದ್ದಾರೆ. ಮಾರುಕಟ್ಟೆ ಆವರಣದಲ್ಲಿರುವ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಇಲ್ಲಿಗೆ ಬರುವ ರೈತರ ವಿಶ್ರಾಂತಿಗೆ ಸೂಕ್ತ ಆಸನಗಳ ವ್ಯವಸ್ಥೆ ಇಲ್ಲ. ಖಾಲಿ ಸ್ಥಳಗಳು ಕಸದ ತೊಟ್ಟಿಗಳಾಗಿ ಬದಲಾಗಿವೆ. ಎಪಿಎಂಸಿ ಮಾರುಕಟ್ಟೆ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ.

ಕಲಬುರಗಿಯ ಎಪಿಎಂಸಿ(ಗಂಜ್‌) ಮಾರುಕಟ್ಟೆಯಲ್ಲಿ ಹಮಾಲರು ದುಡಿಮೆಗಾಗಿ ಕಾಯುತ್ತ ಕುಳಿತಿರುವುದು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಕಲಬುರಗಿಯ ಎಪಿಎಂಸಿ(ಗಂಜ್‌) ಮಾರುಕಟ್ಟೆಯಲ್ಲಿ ಹಮಾಲರು ದುಡಿಮೆಗಾಗಿ ಕಾಯುತ್ತ ಕುಳಿತಿರುವುದು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌

ಎಪಿಎಂಸಿ ಸ್ವತ್ತುಗಳ ಮೇಲೆ ಕಣ್ಣು: ಕಾಯ್ದೆ ತಿದ್ದುಪಡಿಯಾಗಿರುವ ಕಾರಣ ಸಹಜವಾಗಿಯೇ ಎಪಿಎಂಸಿ ಪ್ರಾಂಗಣಕ್ಕೆ ಕೃಷಿ ಉತ್ಪನ್ನಗಳ ಆವಕದಲ್ಲಿ ಗಣನೀಯ ಇಳಿಕೆಯಾಗಿದೆ. ಈ ಎಲ್ಲ ವಿದ್ಯಮಾನಗಳು ಎಪಿಎಂಸಿಗಳಿಗೆ ಮತ್ತೊಂದು ರೀತಿಯ ಸಂಕಷ್ಟ ತಂದೊಡ್ಡಿವೆ. ಸಾಕಷ್ಟು ಎಪಿಎಂಸಿ ಪ್ರಾಂಗಣಗಳು ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿವೆ. ದೊಡ್ಡ ಪ್ರಾಂಗಣ ಹಾಗೂ ಖಾಲಿ ಜಾಗ ಹೊಂದಿವೆ. ಈಗ, ವಹಿವಾಟು ಕುಸಿದಿರುವ ಕಾರಣ, ಈ ಖಾಲಿ ಜಾಗ, ಉಗ್ರಾಣಗಳನ್ನು ತಮ್ಮ ಬಳಕೆಗೆ ನೀಡುವಂತೆ ಕೋರಿ ಸರ್ಕಾರದ ವಿವಿಧ ಇಲಾಖೆಗಳು ಒತ್ತಡ ಹೇರಲು ಆರಂಭಿಸಿವೆ ಎಂದು ಮೂಲಗಳು ಹೇಳುತ್ತವೆ.

ಕೋರ್ಟ್‌, ಕಚೇರಿ, ಆಸ್ಪತ್ರೆಗಳನ್ನು ನಿರ್ಮಿಸಲು ಜಾಗ ನೀಡಬೇಕು ಎಂಬ ಬೇಡಿಕೆಗಳು ಹೆಚ್ಚುತ್ತಿವೆ. ಒಂದೊಮ್ಮೆ ಈ ವಿಶಾಲ ಜಾಗ, ಕಟ್ಟಡಗಳು ಕೈಬಿಟ್ಟರೆ ಮತ್ತೆ ಅವುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವುದೇ ಹೇಗೆ? ಒಂದು ವೇಳೆ, ತಿದ್ದುಪಡಿ ಕಾಯ್ದೆ ಅಧಿಕೃತವಾಗಿ ರದ್ದಾದ ನಂತರ ಮತ್ತೆ ಎಪಿಎಂಸಿಗಳಲ್ಲಿ ವಹಿವಾಟು ಚೇತರಿಸಿಕೊಳ್ಳುತ್ತದೆ. ಆಗ ಜಾಗದ ಅಭಾವ ಎದುರಾಗಿ ಮತ್ತೊಂದು ರೀತಿಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಆತಂಕ ಸಮಿತಿಗಳದ್ದು ಎಂದು ಇವೇ ಮೂಲಗಳು ಹೇಳುತ್ತವೆ.

ಇನ್ನೊಂದು ಅಪಾಯವನ್ನೂ ಅಲಕ್ಷಿಸುವಂತಿಲ್ಲ. ಒಂದು ವೇಳೆ, ಕಾರ್ಪೊರೇಟ್‌ ಕಂಪನಿಗಳ ಒತ್ತಡಕ್ಕೆ ಒಳಗಾಗಿ, ಎಪಿಎಂಸಿ ಪ್ರಾಂಗಣಗಳಲ್ಲಿನ ಉಗ್ರಾಣಗಳನ್ನು, ಖಾಲಿ ಇರುವ ಜಾಗಗಳನ್ನು ಅವುಗಳಿಗೆ ನೀಡಿದ್ದೇ ಆದಲ್ಲಿ ಸಂಕಷ್ಟ ಮತ್ತಷ್ಟೂ ಹೆಚ್ಚುತ್ತದೆ ಎಂಬ ಆತಂಕವನ್ನೂ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.

ದಿನಗೂಲಿಗಳಿಗೂ ಸಂಕಷ್ಟ: ಈ ಕೃಷಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ದಿನಗೂಲಿಗಳ ದುಡಿಮೆ ಮೇಲೆಯೂ ಪರಿಣಾಮವನ್ನುಂಟು ಮಾಡಿದೆ.

‘ವಹಿವಾಟು ಕುಸಿದಿರುವುದರಿಂದ ದಿನಗೂಲಿ/ ಹಮಾಲರಿಗೆ ಮೊದಲಿನಷ್ಟು ಕೆಲಸ ಇಲ್ಲದಂತಾಗಿದೆ. ಮುಂಚೆ ದಿನವೊಂದಕ್ಕೆ ₹ 500ರಿಂದ ₹ 700ವರೆಗೆ ಗಳಿಸುತ್ತಿದ್ದವರಿಗೆ ಇವತ್ತು ₹ 100 ಕೂಡ ಸಿಗುತ್ತಿಲ್ಲ. ಕೆಲವರು ಕೆಲಸ ಹುಡುಕಿಕೊಂಡು ಪಕ್ಕದ ಮಹಾರಾಷ್ಟ್ರದ ಸೊಲ್ಲಾಪುರ, ಪುಣೆ, ಮುಂಬೈಗೆ ಹೋಗಿದ್ದಾರೆ‘ ಎಂದು ಹುಬ್ಬಳ್ಳಿ ಎಪಿಎಂಸಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಇತರ ಎಪಿಎಂಸಿಗಳಲ್ಲಿರುವ ದಿನಗೂಲಿಗಳ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ.

ಕಾಯ್ದೆ ತಿದ್ದುಪಡಿಯನ್ನು ಸರ್ಕಾರ ವಾಪಸ್‌ ಪಡೆದರೂ ಎಪಿಎಂಸಿಗೆ ಆದಾಯ ಹೆಚ್ಚಿ, ಅಲ್ಲಿನ ಪ್ರಾಂಗಣಗಳಿಗೆ ಉತ್ತಮ ಮೂಲಸೌಕರ್ಯಗಳು ಸಿಗುವಂತಾಗಬೇಕು. ಎಪಿಎಂಸಿ ಹೊರಗೆ ವ್ಯಾಪಾರ ಮಾಡಿ ಹಣ ನೀಡದೆ ಮೋಸ ಮಾಡಿದ ವ್ಯಾಪಾರಿಗಳಿಗೆ ಶಿಕ್ಷೆಯಾಗುವ ಜೊತೆಯಲ್ಲಿ ಹಣ ಕಳೆದುಕೊಂಡ ರೈತರಿಗೆ ನ್ಯಾಯ ಸಹ ಸಿಗಬೇಕು ಎನ್ನುವುದು ಹಲವು ರೈತರ ಬಲವಾದ ಬೇಡಿಕೆ. ಈ ಪ್ರಕ್ರಿಯೆಗೆ ಸರ್ಕಾರದ ವಿವಿಧ ಇಲಾಖೆಗಳು ಮನಸ್ಸು ಮಾಡಬೇಕು.

ದಾವಣಗೆರೆಯ ಎಪಿಎಂಸಿಯಲ್ಲಿ ರೈತ ಮಹಿಳೆಯರು ಭತ್ತದ ಒಕ್ಕಣೆ ಮಾಡುತ್ತಿರುವಾಗ ಕಂಡುಬಂದಿದ್ದು ಹೀಗೆ –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್
ದಾವಣಗೆರೆಯ ಎಪಿಎಂಸಿಯಲ್ಲಿ ರೈತ ಮಹಿಳೆಯರು ಭತ್ತದ ಒಕ್ಕಣೆ ಮಾಡುತ್ತಿರುವಾಗ ಕಂಡುಬಂದಿದ್ದು ಹೀಗೆ –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್
ಹೆಸರು ಮಾತ್ರ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದೆ. ಅದರ ಪ್ರಮಾಣದಲ್ಲಿಯೂ ಕಡಿಮೆಯಾಗಿದೆ. ಉಳಿದ ಉತ್ಪನ್ನಗಳು ಹೊರಗಡೆಯೇ ಮಾರಾಟವಾಗುತ್ತಿವೆ. ಸಿಬ್ಬಂದಿ ವೆಚ್ಚ ನಿರ್ವಹಿಸುವುದು ಕಷ್ಟವಾಗುತ್ತಿದೆ.
ವೀರೇಶ ಅಂಗಡಿ ವ್ಯಾಪಾರಸ್ಥ, ಎಪಿಎಂಸಿ ಬಾಗಲಕೋಟೆ
ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವ ತೊಗರಿಯನ್ನು ವ್ಯಾಪಾರಿಗಳು ಎಪಿಎಂಸಿ ಹೊರಗಡೆ ಕಡಿಮೆ ಬೆಲೆಗೆ ಖರೀದಿಸಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಕೃತಕ ಅಭಾವ ಸೃಷ್ಟಿಸಿ ಇದೀಗ ಕ್ವಿಂಟಲ್‌ಗೆ ₹ 9000ರಿಂದ ₹ 10000ದವರೆಗೆ ಮಾರಾಟ ಮಾಡುತ್ತಿದ್ದಾರೆ.
ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಅಧ್ಯಕ್ಷ ಕರ್ನಾಟಕ ಪ್ರಾಂತ ರೈತ ಸಂಘ ಕಲಬುರಗಿ

‘ಮಾರುಕಟ್ಟೆ ಊಹಿಸಿ ಬೆಳೆಯಲಾಗುವುದಿಲ್ಲ’

ಕೃಷಿ ಅಸಂಘಟಿತ ವಲಯವಾಗಿದ್ದು ಮಾರುಕಟ್ಟೆ ಊಹಿಸಿ ಬೆಳೆಗಳನ್ನು ಬೆಳೆಯಲು ಆಗುವುದಿಲ್ಲ. ಸಾಲದ ಮೇಲಿನ ಬಡ್ಡಿ ಪ್ರಕೃತಿಯ ಅನಿಶ್ಚಿತತೆ ಉತ್ಪನ್ನಗಳನ್ನು ಶೀಘ್ರ ಮಾರಾಟ ಮಾಡುವಂತೆ ರೈತರನ್ನು ಪ್ರೇರೇಪಿಸುತ್ತದೆ. ಹಾಗಾಗಿ ಉತ್ತಮ ಬೆಲೆ ಬರುವ ಹಾಗೆ ಸ್ಪರ್ಧೆಯೊಡ್ಡಲು ರೈತರಿಂದ ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ವಿದ್ಯಮಾನಗಳನ್ನು ಅರಿತಿರುವ ಸರ್ಕಾರ ಉತ್ತಮ ಅಡಳಿತ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಬಗ್ಗೆ ಅವಲೋಕಿಸುತ್ತಿಲ್ಲ.

–ತೇಜಸ್ವಿ ವಿ. ಪಟೇಲ್ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ

‘ಏಜೆಂಟರ ಮೂಲಕ ಖರೀದಿ ಮಾಡಲಾಗುತ್ತದೆ’

‘ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಮೇಲೆ ರಾಜ್ಯ ಸರ್ಕಾರಕ್ಕೆ ಎಪಿಎಂಸಿಯಿಂದ ಹೊರಗಿರುವ ವ್ಯಾಪಾರಸ್ಥರ ಮೇಲೆ ಯಾವುದೇ ನಿಯಂತ್ರಣ ಇಲ್ಲ. ದೊಡ್ಡ ದೊಡ್ಡ ಖರೀದಿದಾರರು ಎಪಿಎಂಸಿಗೆ ಬರುತ್ತಿಲ್ಲ. ಬರೀ ಏಜೆಂಟರ ಮೂಲಕ ಉತ್ಪನ್ನ ಖರೀದಿ ಮಾಡಲಾಗುತ್ತಿದೆ. ಏಜೆಂಟರು ಒಂದೆರಡು ಬಾರಿ ಹಣ ಕೊಟ್ಟಂತೆ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ

–ರವೀಂದ್ರಗೌಡ ಪಾಟೀಲ ರೈತ ಮುಖಂಡ ಹಾವೇರಿ

‘ಸ್ಪರ್ಧಾತ್ಮಕ ಬೆಲೆ ಸಿಗದೇ ರೈತರಿಗೆ ನಷ್ಟ’

ಮನೆ ಬಾಗಿಲಿಗೆ ವರ್ತಕರು ಬಂದು ಖರೀದಿ ಮಾಡುವುದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಯಾವ ದರವಿದೆ ಎನ್ನುವುದು ಅವರಿಗೆ ಗೊತ್ತಾಗುವುದಿಲ್ಲ. ಎಪಿಎಂಸಿಯಲ್ಲಾದರೆ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚಿನ ಬೆಲೆ ಸಿಗುವ ಸಾಧ್ಯತೆ ಇರುತ್ತದೆ. ಸಾಗಾಟ ವೆಚ್ಚ ಕಡಿತ ಮಾಡುವುದಾಗಿ ಹಾಗೂ ಉತ್ಪನ್ನಗಳ ಗುಣಮಟ್ಟ ಚೆನ್ನಾಗಿಲ್ಲವೆಂದು ವ್ಯಾಪಾರಸ್ಥರು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ ಸುರೇಶ ಕಿರೇಸೂರು ಹುಬ್ಬಳ್ಳಿ ಎಪಿಎಂಸಿ ಮಾಜಿ ಅಧ್ಯಕ್ಷ  ‘ಹಳೇ ಕಾಯ್ದೆಯನ್ನೇ ಬೇಗ ಜಾರಿಗೊಳಿಸಬೇಕು’ ತಿದ್ದುಪಡಿ ಕಾಯ್ದೆ ಪ್ರಕಾರ ಮಾರುಕಟ್ಟೆ ಪ್ರಾಂಗಣದ ಹೊರಗೂ ವ್ಯಾಪಾರಸ್ಥರು ಕೊಬ್ಬರಿ ಖರೀದಿಸಬಹುದಾಗಿದೆ. ಇದರಿಂದ ಸೂಕ್ತ ಬೆಲೆ ಸಿಗುತ್ತಿಲ್ಲ. ಸರ್ಕಾರ ಹಳೆ ಕಾಯ್ದೆ ಜಾರಿಗೊಳಿಸಿ ಎಲ್ಲ ಕೊಬ್ಬರಿಯು ಮಾರುಕಟ್ಟೆ ಪ್ರಾಂಗಣದಲ್ಲೇ ವ್ಯಾಪಾರವಾಗುವಂತೆ ಮಾಡಿದರೆ ಕೊಬ್ಬರಿಗೆ ನ್ಯಾಯಯುತವಾದ ಬೆಲೆ ಸಿಗುತ್ತದೆ

–ಶ್ರೀಕಾಂತ್ ಕೆಳಹಟ್ಟಿ ಬೆಲೆ ಕಾವಲು ಸಮಿತಿ ಕಾರ್ಯದರ್ಶಿ ತಿಪಟೂರು

ಮಂಗಳೂರಿನ ಪಾಳು ಬಿದ್ದಿರುವ ಎಪಿಎಂಸಿ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರಿನ ಪಾಳು ಬಿದ್ದಿರುವ ಎಪಿಎಂಸಿ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ಭೂತಬಂಗಲೆಯಂತಾಗಿದೆ ಬೈಕಂಪಾಡಿ ಎಪಿಎಂಸಿ ಪ್ರಾಂಗಣ!

ಮಂಗಳೂರು ನಗರದಲ್ಲಿರುವ ಎಪಿಎಂಸಿ ಪ್ರಾಂಗಣ ಬೇರೆ ರೀತಿಯ ಸಮಸ್ಯೆ ಎದುರಿಸುತ್ತಿದೆ. ಪ್ರಾಂಗಣ ನಿರ್ಮಾಣವಾಗಿ ಎರಡು ದಶಕಗಳೇ ಕಳೆದಿದ್ದರೂ ಅದರ ಬಹುತೇಕ ಉಗ್ರಾಣಗಳು ಖಾಲಿ ಬಿದ್ದಿವೆ. ಬೈಕಂಪಾಡಿಯಲ್ಲಿ ₹30 ಕೋಟಿ ವೆಚ್ಚದಲ್ಲಿ ಸುಮಾರು 83 ಎಕರೆಯಲ್ಲಿ ನಿರ್ಮಿಸಿರುವ ಎಪಿಎಂಸಿ ಪ್ರಾಂಗಣಕ್ಕೆ ಸುಸಜ್ಜಿತ ಸೌಕರ್ಯಗಳನ್ನು ಕಲ್ಪಿಸಲಾಗಿದ್ದರೂ ಅದರ ಬಳಕೆಗೆ ಸಗಟು ವರ್ತಕರಾಗಲೀ ಕೃಷಿಕರಾಗಲೀ ಆಸಕ್ತಿಯನ್ನೇ ತೋರಿಲ್ಲ.

ಜಿಲ್ಲಾ ಕೇಂದ್ರದಲ್ಲಿರುವ ಈ ಎಪಿಎಂಸಿ ಪ್ರಾಂಗಣ ರಾಷ್ಟ್ರೀಯ ಹೆದ್ದಾರಿ 166ರ ಪಕ್ಕದಲ್ಲೇ ಇದೆ. ನವಮಂಗಳೂರು ಬಂದರಿನಿಂದ ಕೇವಲ 5 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಬಜಪೆಯ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹೆಚ್ಚೆಂದರೆ 20 ಕಿ.ಮೀ. ದೂರವಿರಬಹುದು ಅಷ್ಟೇ. ನವಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ಸರಕು ಸಾಗಣೆ ರೈಲು ಮಾರ್ಗವೂ ಈ ಪ್ರಾಂಗಣದ ಪಕ್ಕದಲ್ಲೇ ಹಾದುಹೋಗಿದೆ. ನಾಲ್ಕು ವಿಧಗಳ ಸಾರಿಗೆ ಸಂಪರ್ಕ ಹೊಂದಿರುವ ಈ ಎಪಿಎಂಸಿ ಪ್ರಾಂಗಣ ಈಗ ಅಕ್ಷರಶಃ ಭೂತಬಂಗಲೆಯಂತಾಗಿದೆ.

ಜಿಲ್ಲೆಯ ಅಡಿಕೆ ವ್ಯಾಪಾರ ನಗರದ ಬಂದರು ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು. ಬಂದರಿನ ಅಡಿಕೆ ಮಂಡಿಗಳ ವರ್ತಕರು ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಗೊಳ್ಳಲು ಬಿಲ್‌ಕುಲ್‌ ಒಪ್ಪಲಿಲ್ಲ. ಉಗ್ರಾಣಗಳನ್ನು ಕ್ಯಾಂಪ್ಕೊ ಸಂಸ್ಥೆ ಹಾಗೂ ಬೆರಳೆಣಿಕೆಯ ಅಡಿಕೆ ವರ್ತಕರು ಮಾತ್ರ ಇದನ್ನು ಬಳಸುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಎಪಿಎಂಸಿ ಪ್ರಾಂಗಣ ನಿರ್ಮಾಣವಾದ ಬಳಿಕ ಅಡಿಕೆ ವ್ಯಾಪಾರ ಅಲ್ಲಿಗೆ ಸ್ಥಳಾಂತರವಾಗಿದೆ. ಬೈಕಂಪಾಡಿ ಎಪಿಎಂಸಿ ಪ್ರಾಂಗಣ ಈಗ ಅಡಿಕೆ ವ್ಯಾಪಾರಕ್ಕೂ ಬಳಕೆಯಾಗುತ್ತಿಲ್ಲ.

ಕೋವಿಡ್‌ ಸಂದರ್ಭದಲ್ಲಿ ನಗರದಲ್ಲಿ ಕೇಂದ್ರೀಯ ಮಾರುಕಟ್ಟೆಯಲ್ಲಿ ಜನಸಂದಣಿ ಉಂಟಾಗುತ್ತಿತ್ತು. ಅದನ್ನು ತಪ್ಪಿಸುವ ಸಲುವಾಗಿ ಕೇಂದ್ರೀಯ ಮಾರುಕಟ್ಟೆಯಲ್ಲಿದ್ದ ಹಣ್ಣು– ತರಕಾರಿ ಮಳಿಗೆಗಳನ್ನು ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ಈ ಪ್ರಯೋಗ ಕೆಲ ತಿಂಗಳುಗಳ ಕಾಲ ಮಾತ್ರ ಯಶಸ್ವಿಯಾಗಿ ನಡೆಯಿತು. ಕ್ರಮೇಣ ವರ್ತಕರಲ್ಲಿ ಬಹುತೇಕರು ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ನಿರ್ಮಾಣವಾದ ಖಾಸಗಿ ಮಾರುಕಟ್ಟೆಗೆ ಸ್ಥಳಾಂತರಗೊಂಡರು. ಬೈಕಂಪಾಡಿ ಎಪಿಎಂಸಿ ಪ್ರಾಂಗಣದ ಕಟ್ಟಡಗಳು ಪಾಳುಬಿದ್ದಿವೆ. ಮಳಿಗೆ ಗೋದಾಮುಗಳು ಬಾಗಿಲುಗಳು ಕಿತ್ತು ಹೋಗಿವೆ. ನಿರ್ವಹಣೆ ಇಲ್ಲದೇ ಪ್ರಾಂಗಣದಲ್ಲಿ ಕಳೆ ಬೆಳೆದಿವೆ. ಈ ನಡುವೆ ಇಲ್ಲಿ ಹಣ್ಣು ತರಕಾರಿ ಮಾರುಕಟ್ಟೆ ಸಲುವಾಗಿ ₹12 ಕೋಟಿ ವೆಚ್ಚದಲ್ಲಿ ಮತ್ತೊಂದು ಕಟ್ಟಡ ನಿರ್ಮಿಸಲಾಗುತ್ತಿದೆ. ‘ಜನಪ್ರತಿನಿಧಿಗಳು ಹಾಗೂ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿಯೇ ಬೈಕಂಪಾಡಿಯ ಎಪಿಎಂಸಿ ಪ್ರಾಂಗಣ ಪಾಳುಬಿದ್ದಿದೆ. ನಾಯಕರಿಗೆ ಇಚ್ಛಾಶಕ್ತಿ ಇದ್ದರೆ ಈಗಲೂ ಇದನ್ನು ರಾಜ್ಯದಲ್ಲೇ ಅತ್ಯುತ್ತಮ ಎಪಿಎಂಸಿ ಪ್ರಾಂಗಣವನ್ನಾಗಿ ಬಳಸಬಹುದು. ಶೈತ್ಯಾಗಾರಗಳ ನಿರ್ಮಾಣಕ್ಕೂ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ರಾಜ್ಯದ ಬೇರೆ ಬೇರೆ ಎಪಿಎಂಸಿಗಳ ಜೊತೆ ಸಂಪರ್ಕ ಸಾಧಿಸಿದ್ದೇ ಆದರೆ ಇಲ್ಲಿಂದ ರಾಜ್ಯದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಬಹುದು. ಕೃಷಿ ಉತ್ಪನ್ನಗಳನ್ನು ಬೇರೆ ರಾಜ್ಯಗಳಿಗೆ ರವಾನಿಸುವುದಕ್ಕೂ ಇದನ್ನು ಬಳಸಿಕೊಳ್ಳಬಹುದು’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಎಪಿಎಂಸಿಯ ಮಾಜಿ ಅಧ್ಯಕ್ಷ ಎ.ಕೃಷ್ಣರಾಜ ಹೆಗ್ಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT