ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಎಮ್ಮೆಯ ಹಾಲನ್ನು ಎಮ್ಮೆಗೇ ಕುಡಿಸುವ ಸ್ಥಿತಿ!

ಪಾಕೆಟ್‌ ಹಾಲಿನ ಪೈಪೋಟಿಗೆ ಬಸವಳಿದ ಗೌಳಿಗರು
Last Updated 5 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಕಲಬುರಗಿ: ‘ನಾಲ್ಕು ತಲೆಮಾರುಗಳಿಂದ ಗೌಳಿತನವೇ ನಮ್ಮ ಮನೆಯ ಕಾಯಕ. ಹೈನುಗಾರಿಕೆಯಿಂದ ಬಂದ ಆದಾಯದಲ್ಲೇ ಅಜ್ಜ ದೊಡ್ಡ ಮನೆ ಕಟ್ಟಿ ಶ್ರೀಮಂತರೂ ಆಗಿದ್ದರು. ಆದರೆ, ಪಾಕೆಟ್‌ ಹಾಲು ಬಂದ ಮೇಲೆ ಮನೆ, ಮನೆಗೆ ಹಾಲು ಹಾಕುವುದು ಕಡಿಮೆಯಾಗಿದೆ. ಎಷ್ಟೋ ಸಾರಿ ಎಮ್ಮೆಯ ಹಾಲನ್ನು ಎಮ್ಮೆಗೇ ಕುಡಿಸುವ ಪರಿಸ್ಥಿತಿಯೂ ಬರುತ್ತದೆ...’

ಕಲಬುರಗಿಯ ಐವಾನ್‌ ಇ ಶಾಹಿ ಪ್ರದೇಶದ ನಿವಾಸಿ ಆನಂದ ಬಾಬುರಾವ್‌ ಗೌಳಿ ಅವರು ತಮ್ಮ ಕುಲಕಸುಬಿನ ಬಗ್ಗೆ ಹೇಳಿದ ಮಾತುಗಳಿವು.

‘ನಾಲ್ವರು ಸಹೋದರರಿದ್ದು, ಯಾರೂ ಎಸ್ಸೆಸ್ಸೆಲ್ಸಿ ನಂತರ ಓದಲು ಆಗಲಿಲ್ಲ. ನಾಲ್ವರೂ ಸೇರಿಕೊಂಡು 30 ಎಮ್ಮೆ ಸಾಕಿದ್ದೇವೆ. ತಂದೆ, ತಾಯಿ ಸೇರಿ 12 ಜನರ ಅವಿಭಕ್ತ ಕುಟುಂಬ ನಮ್ಮದು. ನಾವು ಎಮ್ಮೆಗಳನ್ನು ಸಾಕುತ್ತಿದ್ದೇವೆ; ಎಮ್ಮೆಗಳೂ ನಮ್ಮನ್ನು ಸಾಕುತ್ತಿವೆ. ಎಮ್ಮೆಗಳಿಗೆ ಕಷ್ಟವಾದಾಗ ನಮ್ಮ ಬದುಕೂ ಕಷ್ಟವಾಗುತ್ತದೆ’ ಎನ್ನುತ್ತಾರೆ ಅವರು.

ಸಮೀಪದಲ್ಲಿ ಕೆರೆಗಳೇ ಇಲ್ಲದ ಕಾರಣ ಎಮ್ಮೆಗಳ ಮೈ ತೊಳೆಯುವುದು ದೊಡ್ಡ ತಲೆನೋವು. ಬೋರ್‌ವೆಲ್‌ನಿಂದ ಕುಡಿಯುವ ನೀರು ತರಬೇಕು. ಬೇಸಿಗೆಯಲ್ಲಿ ನೀರು– ಮೇವು ಸಿಗದ ಕಾರಣ ಹಾಲು ಉತ್ಪಾದನೆಯೂ ಕುಸಿಯುತ್ತದೆ. ಇದೇ ಕಾರಣಕ್ಕೆ ಈ ಹಿಂದೆ 18 ಎಮ್ಮೆಗಳನ್ನು ಸಾಕಿದ್ದ ಜಡಿಮಲ್ಲಿಕಾರ್ಜುನ ಅವರು ಈಗ ಎರಡನ್ನು ಮಾತ್ರ ಉಳಿಸಿಕೊಂಡಿದ್ದಾರೆ.

ಪಾಕೆಟ್‌ಗೆ ಜೋತುಬಿದ್ದ ಜನ: ಕೆಎಂಎಫ್‌ನ ಮಳಿಗೆಗಳನ್ನು ಈಗ ಗಲ್ಲಿಗಲ್ಲಿಗೂ ತೆರೆಯುತ್ತಿದ್ದಾರೆ. ಮೇಲಾಗಿ, ಕಲಬುರಗಿ ನಗರವೊಂದಕ್ಕೇ ಮಹಾರಾಷ್ಟ್ರದಿಂದ ಪ್ರತಿ ದಿನ 80 ಸಾವಿರ ಲೀಟರ್‌ ಹಾಲು ಬರುತ್ತದೆ ಎನ್ನುವುದು ಕಲಬುರ್ಗಿ–ಬೀದರ್‌–ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ಅವರ ಮಾಹಿತಿ. ಒಕ್ಕೂಟದ ಡೇರಿಗೆ ಪ್ರತಿ ದಿನ 60 ಸಾವಿರ ಲೀಟರ್‌ ಹಾಲು ಮಾರಾಟ ಮಾಡುತ್ತಾರೆ. ಡೇರಿಗಳ ಸವಾಲುಗಳನ್ನು ದಾಟಿಕೊಂಡು ಗೌಳಿಗರು ಮನೆಮನೆ ಹಾಲು ಹಾಕಿ ಜೀವನ ಸಾಗಿಸುತ್ತಿದ್ದಾರೆ.

‘ಕೆಎಂಎಫ್‌ನವರು ಲೀಟರ್‌ಗೆ ₹ 50ರಿಂದ ₹ 52ರಷ್ಟು ದರ ನೀಡುತ್ತಾರೆ. ಮನೆಗಳಿಗೇ ಹೋಗಿ ಹಾಲು ಹಾಕಿದರೆ
₹ 60 ದರವಿದೆ. ಹೋಟೆಲ್‌ಗಳವರು ₹ 55ಕ್ಕೆ ಖರೀದಿಸುತ್ತಾರೆ.ಡೇರಿಗಿಂತ ಮನೆಗೆ ಹಾಲು ಹಾಕುವುದೇ ಲೇಸು. ಆದರೆ, ಬಹಳಷ್ಟು ಜನ ಈಗ ಪಾಕೆಟ್‌, ಟೆಟ್ರಾಪ್ಯಾಕ್‌ ಹಾಲಿನ ಮೊರೆ ಹೋಗಿದ್ದಾರೆ. ಇದರಿಂದ ದುಡಿಮೆಗೆ ತಕ್ಕ ಫಲ ಸಿಗುತ್ತಿಲ್ಲ’ ಎನ್ನುವುದು ಸ್ಟೇಷನ್‌ ಬಜಾರ್‌ ನಿವಾಸಿ ಕೃಷ್ಣಾಬಾಯಿ ಗೌಳಿ ಅವರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT