ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸವಾಲಿನ ಸುಳಿಯಲ್ಲಿ ಹೈನೋದ್ಯಮ

Last Updated 5 ಫೆಬ್ರುವರಿ 2022, 20:13 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಯಥೇಚ್ಛ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗಿ, ಹೈನುಗಾರಿಕೆ ನೆಚ್ಚಿಕೊಂಡಿದ್ದ ಅನ್ನದಾತರಲ್ಲಿ ನೆಮ್ಮದಿ ಮೂಡ ತೊಡಗಿದ ಹೊತ್ತಿನಲ್ಲೇ ಕೋವಿಡ್‌ ವಕ್ಕರಿಸಿತ್ತು. ಸೋಂಕು ಹಾವಳಿ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿದ ಬಳಿಕ ಈ ಉದ್ಯಮ ಚೇತರಿಕೆಯತ್ತ ಸಾಗಿತ್ತು.

ಈ ಚೇತರಿಕೆಯ ಸಂದರ್ಭದಲ್ಲಿ ಬ್ರ್ಯಾಂಡ್‌ಗೆ ಧಕ್ಕೆ ತರುವಂತಹ ನಕಲಿ ತುಪ್ಪ, ಕಳಪೆ ಹಾಲು ಪ್ರಕರಣಗಳು ಮತ್ತು ಹಾಲಿನ ಪುಡಿಯ ಪರಿವರ್ತನೆಯಿಂದ ಸುಮಾರು ₹80 ಕೋಟಿಗೂ ಹೆಚ್ಚು ನಷ್ಟವಾಗಿರುವುದು ಹೈನುಗಾರಿಕೆ ಮೇಲೆ ಪರಿಣಾಮ ಬೀರಲಾರಂಭಿಸಿದೆ.

ಈ ಸಂಕಟಗಳ ನಡುವೆಯೂ, ರಾಜ್ಯದಲ್ಲಿನ 25 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಜತೆ ದಿನನಿತ್ಯ ವಹಿವಾಟು ನಡೆಸುವ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಎಲ್ಲ ತೊಡಕುಗಳನ್ನು ನಿವಾರಿಸಿಕೊಂಡು ಮತ್ತೆ ಪುಟದೇಳುವ ಉತ್ಸಾಹದಲ್ಲಿದೆ.

ರಾಜ್ಯದಲ್ಲಿ ಪ್ರತಿ ದಿನ 84 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ವಿಧಿಸಿದ ನಿರ್ಬಂಧಗಳಿಂದಾಗಿ ಹೆಚ್ಚುವರಿ ಹಾಲಿನ ಮಾರಾಟ ಸಮಸ್ಯೆಯಾಗಿತ್ತು. ಕೋವಿಡ್‌–19 ಬಳಿಕ ಉದ್ಯೋಗ ಕಳೆದುಕೊಂಡ ಹಲವರು ಹೈನುಗಾರಿಕೆಯನ್ನು ಕೈಗೊಂ ಡಿದ್ದು ಸಹ ಹಾಲು ಉತ್ಪಾದನೆ ಹೆಚ್ಚಳ ವಾಗಲು ಕಾರಣವಾಗಿತ್ತು.

ಸಂಪೂರ್ಣ ಲಾಕ್‌ಡೌನ್‌ ವಿಧಿಸಿದ ಸಂದರ್ಭದಲ್ಲಿ 25 ಲಕ್ಷ ಲೀಟರ್‌ ಹೆಚ್ಚುವರಿಯಾಗಿ ಉಳಿಯುತ್ತಿತ್ತು. ಈ ಹಾಲು ಮಾರಾಟ ಮಾಡುವುದು ಕೆಎಂಎಫ್‌ಗೂ ತಲೆನೋವಾಗಿ ಪರಿಣಮಿಸಿತ್ತು. ಆಗ ಸರ್ಕಾರದ ವತಿಯಿಂದ ಜನರಿಗೆ ಉಚಿತವಾಗಿ ಹಾಲು ವಿತರಿಸಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿತ್ತು. ಜತೆಗೆ, ಹಾಲಿನ ಪುಡಿ ತಯಾರಿಕೆಗೆ ಆದ್ಯತೆ ನೀಡಲಾಯಿತು. ಆರ್ಥಿಕವಾಗಿ ಹೊರೆಯಾಗಿರುವ ಹಾಲಿನ ಪುಡಿ ತಯಾರಿಸುವುದು ಮತ್ತು ಮಾರಾಟ ಮಾಡುವುದು ಈಗಲೂ ಸಮಸ್ಯೆಯಾಗಿದೆ.

ಕೋವಿಡ್‌ ಸಂದರ್ಭದಲ್ಲಿ ನಂದಿನಿ ಐಸ್‌ಕ್ರೀಂ ಮಾರಾಟಕ್ಕೂ ತೀವ್ರ ಹೊಡೆತ ಬಿದ್ದಿತ್ತು. ಮಾರಾಟ ಬಹುತೇಕ ಶೂನ್ಯ ಹಂತಕ್ಕೆ ತಲುಪಿತ್ತು. ಈಗ ಮತ್ತೆ ಚೇತರಿಸಿಕೊಳ್ಳುತ್ತಿದ್ದು, ಜನವರಿ ತಿಂಗಳಲ್ಲಿ 8 ಸಾವಿರ ಲೀಟರ್ ಐಸ್‌ಕ್ರೀಂ ಮಾರಾಟವಾಗಿದೆ. ಈ ಬಾರಿಯ ಬೇಸಿಗೆಯಲ್ಲಿ 25 ಸಾವಿರದಿಂದ 30 ಸಾವಿರ ಲೀಟರ್‌ವರೆಗೆ ಮಾರಾಟವಾಗುವ ನಿರೀಕ್ಷೆ ಇದೆ ಎನ್ನುವ ವಿಶ್ವಾಸ ಅಧಿಕಾರಿಗಳದ್ದು.

ಹೈನುಗಾರಿಕೆ ಉದ್ಯಮವು ಸ್ಥಿತ್ಯಂತರಗಳ ನಡುವೆಯೂ ಸಮೃದ್ಧಿಯ ಸನ್ನಿವೇಶ ತಲುಪಿದೆ. ರಾಜ್ಯದ ಮಾರುಕಟ್ಟೆಯಲ್ಲಿ ಶೇಕಡ 70ಕ್ಕೂ ಹೆಚ್ಚು ಪಾಲು ಹೊಂದಿರುವ ಕೆಎಂಫ್‌, ಈಗ ಪ್ರತಿ ದಿನ 1 ಕೋಟಿ ಕೆ.ಜಿಗೂ ಹೆಚ್ಚು ಹಾಲು ಉತ್ಪಾದಿಸುವ ಗುರಿ ಹೊಂದಿದೆ.

ಹಾಲಿನ ಹೊಸ ಉತ್ಪನ್ನಗಳನ್ನು ದೇಶದಾದ್ಯಂತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಖಾಸಗಿ ಕಂಪನಿಗಳು ಕೆಎಂಎಫ್‌ಗೆ ದಿನೇ ದಿನೇ ಸ್ಪರ್ಧೆ ನೀಡುತ್ತಿವೆ. ಹಳ್ಳಿಗಳಿಂದಲೇ ಹಾಲು ಸಂಗ್ರಹಿಸಿ, ಪೂರೈಸುವ ಸಮಗ್ರ ವ್ಯವಸ್ಥೆಯನ್ನು ರೂಪಿಸಿದ್ದು, ತುಪ್ಪ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿವೆ. ಸುಧಾರಣೆ ಕ್ರಮಗಳನ್ನು ಕೈಗೊಂಡು ಮಾರುಕಟ್ಟೆಯಲ್ಲಿ ನಮ್ಮ ಪಾಲು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಕೆಎಂಎಫ್‌ ಅಧಿಕಾರಿಗಳು ಪ್ರತಿಪಾದಿಸುತ್ತಾರೆ.

ಪ್ರೋತ್ಸಾಹ ಧನ ವಿಳಂಬ

ಸರ್ಕಾರ ಹಾಲಿನ ಪ್ರೋತ್ಸಾಹ ಧನವನ್ನು ಸಕಾಲಕ್ಕೆ ನೀಡುತ್ತಿಲ್ಲ ಎನ್ನುವ ದೂರು ರೈತರದ್ದು.

ಪ್ರತಿ ಲೀಟರ್‌ಗೆ ₹4ರಿಂದ ₹5 ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ನಾಲ್ಕೈದು ತಿಂಗಳು ಬಾಕಿ ಉಳಿಸಿಕೊಳ್ಳುವುದು ಸಾಮಾನ್ಯವಾಗಿದೆ.

‘ಸರ್ಕಾರ ಸಕಾಲಕ್ಕೆ ಎಂದೂ ಪ್ರೋತ್ಸಾಹ ಧನ ನೀಡಿಲ್ಲ. ಕನಿಷ್ಠ ನಾಲ್ಕು ತಿಂಗಳು ವಿಳಂಬವಾಗುತ್ತಿದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ದೂರಿದ್ದಾರೆ.

‘ನಂದಿನಿ’ ಬ್ರ್ಯಾಂಡ್‌ ಮೌಲ್ಯವರ್ದನೆಯತ್ತ ಹೆಜ್ಜೆ

ಹೆಚ್ಚುವರಿ ಹಾಲಿನ ಸದ್ಬಳಕೆ ಮತ್ತು ವಹಿವಾಟು ವಿಸ್ತರಿಸಲು ರಾಷ್ಟ್ರಮಟ್ಟದಲ್ಲೇ ‘ನಂದಿನಿ’ ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸುವ ಯೋಜನೆಯನ್ನು ಕೆಎಂಎಫ್‌ ರೂಪಿಸಿದೆ.

ಹೊಸ ತಂತ್ರಜ್ಞಾನ ಮೂಲಕ ಸುರಕ್ಷಿತ ಹಾಲಿನ ಉತ್ಪನ್ನಗಳು ಪೂರೈಸಲು ಉದ್ದೇಶಿಸಲಾಗಿದೆ. ಉತ್ಪನ್ನಗಳ ಮೇಲೆಯೂ ಹಾಲೊಗ್ರಾಂ ಮತ್ತು ಕ್ಯೂಆರ್‌ ಕೋಡ್‌ ಹಾಕಲು ಯೋಜನೆ ರೂಪಿಸಲಾಗಿದೆ.

12 ವಿವಿಧ ರೀತಿಯ ‘ಪ್ರೀಮಿಯಂ’ ಚಾಕೊಲೇಟ್‌ಗಳನ್ನು ತಯಾರಿಸಲು ಯೋಜನೆ ರೂಪಿಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಚಾರದಲ್ಲಿರುವ ಚಾಕೊಲೇಟ್‌ಗಳ ಮಾದರಿಯಲ್ಲೇ ‘ಬ್ರ್ಯಾಂಡಿಂಗ್‌’ ರೂಪಿಸಲಾಗುತ್ತಿದೆ. ಹಾಲಿನ ಪುಡಿ ಬಳಸಿ ಈ ಚಾಕೊಲೇಟ್‌ಗಳನ್ನು ತಯಾರಿಸಿ, ‘ನಂದಿನಿ ಗುಡ್‌ ಲೈಫ್‌’ ಹೆಸರಿನಲ್ಲಿ ದೇಶದಾದ್ಯಂತ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ ಹಾಲು ಒಕ್ಕೂಟದಲ್ಲಿ ₹160 ಕೋಟಿ ವೆಚ್ಚದಲ್ಲಿ ‘ಪೆಟ್‌ ಬಾಟಲ್‌’ ಘಟಕ ಸ್ಥಾಪಿಸಲಾಗುತ್ತಿದೆ. ಸುವಾಸಿತ ಹಾಲು, ಮಿಲ್ಕ್‌ ಶೇಕ್‌, ಲಸ್ಸಿ, ಮಜ್ಜಿಗೆ ಮುಂತಾದ 19 ಹಾಲಿನ ಉತ್ಪನ್ನಗಳನ್ನು ಈ ಪೆಟ್‌ ಬಾಟಲ್‌ಗಳಲ್ಲಿ ಭರ್ತಿ ಮಾಡಿ ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT