ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಒಳನೋಟ: ಅವಳಿ ‘ವ್ಯಾಲಿ’ಯಲ್ಲಿ ಅಪಾಯದ ಕರೆಗಂಟೆ!
ಒಳನೋಟ: ಅವಳಿ ‘ವ್ಯಾಲಿ’ಯಲ್ಲಿ ಅಪಾಯದ ಕರೆಗಂಟೆ!
ಮೂರನೇ ಹಂತದ ಶುದ್ಧೀಕರಣ ದೂರ | ಕೆರೆ ಒಡಲಿಗೆ ಪೂರ್ಣ ಸಂಸ್ಕರಿಸದ ಚರಂಡಿ ನೀರು
Published 3 ಸೆಪ್ಟೆಂಬರ್ 2023, 0:07 IST
Last Updated 3 ಸೆಪ್ಟೆಂಬರ್ 2023, 0:07 IST
ಅಕ್ಷರ ಗಾತ್ರ

ಕೋಲಾರ/ಚಿಕ್ಕಬಳ್ಳಾಪುರ: ಮೂರ‍್ನಾಲ್ಕು ವರ್ಷಗಳಿಂದ ನಾವು ಬೆಳೆಯುತ್ತಿರುವ ತರಕಾರಿ, ಸೊಪ್ಪು ಮೊದಲಿನಂತೆ ಇಲ್ಲ. ರುಚಿ, ಬಣ್ಣ ಬದಲಾಗಿದೆ. ಮೊದಲಿನ ಗುಣಮಟ್ಟ ಕಾಯ್ದುಕೊಳ್ಳಲು ಆಗುತ್ತಿಲ್ಲ. ವರ್ತಕರು ಇದೇ ಕಾರಣ ನೀಡಿ ಖರೀದಿಸಲು ಹಿಂಜರಿಯುತ್ತಿದ್ದಾರೆ.  ಸ್ಥಳೀಯ ಮಾರುಕಟ್ಟೆಯಲ್ಲೂ ಇದೇ ಕತೆ. ಏನು ಮಾಡೋದು ತೋಚುತ್ತಿಲ್ಲ...

ರಾಜಧಾನಿ ಬೆಂಗಳೂರು ಮಾರುಕಟ್ಟೆಗೆ ನಿತ್ಯ ತರಕಾರಿ, ಸೊಪ್ಪು ಪೂರೈಸುವ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರನ್ನು ಮಾತನಾಡಿಸಿದಾಗ ಸಿಗುವ ಸಾಮಾನ್ಯ ಉತ್ತರವಿದು.

ಹೀಗೇಕೆ ಎಂದು ತರಕಾರಿ ಮಂಡಿ ವರ್ತಕರನ್ನು ವಿಚಾರಿಸಿದರೆ, ‘ಹೌದು, ಈಗ ಬೆಳೆಯುವ ತರಕಾರಿ, ಸೊಪ್ಪು ಮತ್ತು ಟೊಮೆಟೊದಲ್ಲಿ ಮೊದಲಿನ ಗುಣಮಟ್ಟ ಇಲ್ಲ. ಬಹಳ ದಿನ ಸಂಗ್ರಹಿಸಿಡಲು ಆಗುತ್ತಿಲ್ಲ. ಬೇಗ ಕೊಳೆತು ಹೋಗುತ್ತಿವೆ. ಹೊರ ರಾಜ್ಯಗಳಿಗೆ ಕಳಿಸಲು ಆಗುತ್ತಿಲ್ಲ. ಕೋಲಾರ, ಚಿಕ್ಕಬಳ್ಳಾಪುರದ ತರಕಾರಿ, ಸೊಪ್ಪು ಎಂದು ಹೇಳಿದರೆ ಸಾಕು ಖರೀದಿಸಲು ಬೆಂಗಳೂರಿನ ಕೆಲ ಗ್ರಾಹಕರು ಮೂಗು ಮುರಿಯುತ್ತಾರೆ’ ಎನ್ನುವ ಕಾರಣ ಮುಂದಿಡುತ್ತಾರೆ.

ಎರಡು ವರ್ಷಗಳಿಂದ ಟೊಮೆಟೊ ಗುಣಮಟ್ಟ ಕುಸಿಯುತ್ತಿದೆ, ಬೇಗ ಕೊಳೆತು ಹೋಗುತ್ತಿದೆ. ಮೊದಲಿನಂತೆ ಬಹಳ ದಿನ ಸಂಗ್ರಹಿಸಿಡಲು ಆಗುತ್ತಿಲ್ಲ. ಯಾವುದೇ ತಳಿಯ ಟೊಮೆಟೊ ಬೆಳೆದರೂ ಮೊದಲಿನ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಟೊಮೆಟೊಗೆ ದಾರಿ ಮಧ್ಯೆಯೇ ಕೆಡುತ್ತಿದೆ. ಮೂರ‍್ನಾಲ್ಕು ವರ್ಷಗಳ ಹಿಂದೆ ಈ ರೀತಿ ಆಗುತ್ತಿರಲಿಲ್ಲ. ಟೊಮೆಟೊ ಗುಣಮಟ್ಟ ಕುಸಿಯಲು, ಫಸಲು ಕಡಿಮೆಯಾಗಲು ಕೆ.ಸಿ.ವ್ಯಾಲಿ ನೀರು ಪ್ರಮುಖ ಕಾರಣ ಎನ್ನುವುದು ಸಿಎಂಆರ್‌ ಟೊಮೆಟೊ ಮಂಡಿ ಮಾಲೀಕ ಸಿಎಂಆರ್‌ ಶ್ರೀನಾಥ್‌ ವಾದ.

‘ನನ್ನ ತಾಯಿ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಿಯಮಿತವಾಗಿ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗುತ್ತೇನೆ. ಯಾವಾಗಲೂ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಅನೇಕರು ಅಲ್ಲಿರುತ್ತಾರೆ. ಹೆಚ್ಚಿನವರು ತುರಿಕೆ, ಚರ್ಮರೋಗ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬಂದಿರುತ್ತಾರೆ. ಅದರಲ್ಲಿ ಕೆಲವರಿಗೆ ಮೂತ್ರಪಿಂಡ, ಯಕೃತ್‌ ಸಮಸ್ಯೆ ಕಾಡುತ್ತಿದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ‘ಯುವ ಧ್ವನಿ’ ಅಧ್ಯಯನ ತಂಡದ ಸಂಚಾಲಕ ಎನ್.ಗಂಗಾಧರ ರೆಡ್ಡಿ.

ಇದಕ್ಕೆಲ್ಲ ಕಾರಣ ಹುಡುಕಲು ಹೊರಟಾಗ ಸಿಕ್ಕಿದ್ದು ಕೆ.ಸಿ. ವ್ಯಾಲಿ ಮತ್ತು ಎಚ್‌.ಎನ್‌. ವ್ಯಾಲಿ ಎಂಬ ಸರ್ಕಾರದ ಜೋಡಿ ನೀರಾವರಿ ಯೋಜನೆಗಳಲ್ಲಿ ಹರಿಯುವ ಅರೆ ಸಂಸ್ಕರಿತ ಕೊಳಚೆ ನೀರು!

ಈ ಯೋಜನೆ ಅಡಿ ಬೆಂಗಳೂರಿನ ಕೊಳಚೆ ನೀರನ್ನು ಅರೆಬರೆಯಾಗಿ ಸಂಸ್ಕರಿಸಿ ಸುತ್ತಮುತ್ತಲಿನ ಕೆರೆಗಳನ್ನು ತುಂಬಿಸಲಾಗುತ್ತಿದೆ. ಇದು ಸ್ಥಳೀಯ ಜನ, ಜಾನುವಾರುಗಳ ಜೀವಕ್ಕೆ ಮಾರಕವಾಗುತ್ತಿದೆ ಎನ್ನುವುದು ರೈತರು, ಹೋರಾಟಗಾರರು, ವೈದ್ಯರು ಮತ್ತು ವರ್ತಕರ ವಾದ.

ಈ ವಾದವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪರಿಸರ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಕೂಡ ಪುರಸ್ಕರಿಸುತ್ತಾರೆ. ‘ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರನ್ನು ದೊಡ್ಡಮಟ್ಟದಲ್ಲಿ ಆರೋಗ್ಯ ಸಮಸ್ಯೆ ಕಾಡಲಿದೆ. ಕೃಷಿ, ತೋಟಗಾರಿಕೆ ಮೇಲೂ ದುಷ್ಪರಿಣಾಮ ಬೀರುತ್ತದೆ’ ಎಂದು ಅವರು ಎಚ್ಚರಿಸುತ್ತಾರೆ.

ಈ ಎಚ್ಚರಿಕೆಯನ್ನು ಅವರು ಸುಮ್ಮನೆ ನೀಡಿದ್ದಲ್ಲ. ಕೆ.ಸಿ. ವ್ಯಾಲಿ ಮತ್ತು ಎಚ್‌.ಎನ್‌. ವ್ಯಾಲಿಯಲ್ಲಿ ಅರೆ ಸಂಸ್ಕರಿಸಿದ ನೀರು ಹರಿದಿರುವ  ವರ್ತೂರು ಕೆರೆ ಸುತ್ತಮುತ್ತ ಡಾ.ರಾಮಚಂದ್ರ ಹಾಗೂ ಐಐಎಸ್‌ಸಿ ತಂಡ ಸುದೀರ್ಘವಾಗಿ ಅಧ್ಯಯನ ನಡೆಸಿದೆ. ಆ ವೇಳೆ ಅಲ್ಲಿನ ಪುಟ್ಟ ಮಕ್ಕಳನ್ನು  ಚರ್ಮರೋಗ, ಮೂತ್ರಪಿಂಡ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿರುವುದು ಪತ್ತೆಯಾಗಿದೆ.

ಶಾಪವಾದ ಅವಳಿ ಯೋಜನೆ

ಬೆಂಗಳೂರಿನ ಇಡೀ ಕೊಳಚೆ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಯ ಕೆರೆಗಳಿಗೆ ಹರಿಸುವ ಉದ್ದೇಶದಿಂದ ಹುಟ್ಟಿಕೊಂಡಿದ್ದೇ ಈ ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿ ಎಂಬ ನೀರಾವರಿ ಯೋಜನೆಗಳು. 

ಕೋರಮಂಗಲ–ಚಲ್ಲಘಟ್ಟ ಕಣಿವೆ (ಕೆ.ಸಿ.ವ್ಯಾಲಿ) ನೀರಾವರಿ ಯೋಜನೆ ಅಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 134 ಕೆರೆ ಹಾಗೂ ಹೆಬ್ಬಾಳ–ನಾಗವಾರ ಕಣಿವೆ (ಎಚ್‌.ಎನ್.ವ್ಯಾಲಿ) ಯೋಜನೆ ಅಡಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಯ 65 ಕೆರೆಗಳಿಗೆ ಅರೆ ಸಂಸ್ಕರಿಸಲಾದ ಬೆಂಗಳೂರಿನ ಚರಂಡಿ ನೀರು ಹರಿಸಲಾಗುತ್ತಿದೆ. 

ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಎರಡೂ ಯೋಜನೆ ಜಾರಿಗೊಳಿಸಲಾಯಿತು. 2018ರಲ್ಲಿ ಕೋಲಾರಕ್ಕೆ ಮತ್ತು 2020ರಲ್ಲಿ ಚಿಕ್ಕಬಳ್ಳಾಪುರಕ್ಕೆ ಅರೆ ಸಂಸ್ಕರಿತ ನೀರು ಹರಿಸಲಾಯಿತು. ಈ ಎರಡೂ ಯೋಜನೆಗಳು ಇಂದಿಗೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಿ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

‘ವ್ಯಾಲಿ’ಯಲ್ಲಿ ಕೇಂದ್ರ ನಿಯಮಾವಳಿ ಗಾಳಿಗೆ 

ಅಂತರ್ಜಲ ಮರುಪೂರಣಕ್ಕಾಗಿ ಮಹಾನಗರಗಳ ಕೊಳಚೆ ನೀರು ಬಳಸಿಕೊಳ್ಳುವ ಬಗ್ಗೆ 2013ರಲ್ಲಿಯೇ ಕೇಂದ್ರ ಸರ್ಕಾರ ದೇಶಕ್ಕೆ ಅನ್ವಯವಾಗುವ ನಿಯಮ ರೂಪಿಸಿದೆ.

ಆ ಮಾನದಂಡದ ಪ್ರಕಾರ ಚರಂಡಿಯ ಕೊಳಚೆ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿಯೇ ಕೆರೆಗಳಿಗೆ ಹರಿಸಬೇಕು.  ಹಾಗಾದರೆ ಮಾತ್ರ ಪ್ರಾಣಿ, ಪಕ್ಷಿಗಳು, ಮನುಷ್ಯನಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇಲ್ಲದಿದ್ದರೆ ಅರೆ ಸಂಸ್ಕರಿತ ನೀರು ಅಂತರ್ಜಲಕ್ಕೆ ಆಪತ್ತು ತರಲಿದೆ ಎಂದು ಎಚ್ಚರಿಸಲಾಗಿದೆ. ವಿಪರ್ಯಾಸ ಎಂದರೆ ಸಂಸ್ಕರಿಸಿದ ನೀರು ಹರಿಸಲು ಕೇಂದ್ರ ಸರ್ಕಾರ ರೂಪಿಸಿದ ಯಾವ ನಿಯಮಾವಳಿಗಳೂ ಅವಳಿ ವ್ಯಾಲಿಗಳಲ್ಲಿ ಲೆಕ್ಕಕ್ಕಿಲ್ಲ!

ಇದನ್ನು ಮನಗಂಡ ಶಾಶ್ವತ ನೀರಾವರಿ ಹೋರಾಟಗಾರರು, ವಿಜ್ಞಾನಿಗಳು, ವೈದ್ಯರು, ಪರಿಸರವಾದಿಗಳು ಈ ಯೋಜನೆಯ ಆರಂಭಕ್ಕೂ ಮುನ್ನವೇ ಧ್ವನಿ ಎತ್ತಿದ್ದಾರೆ. ಸರ್ಕಾರಕ್ಕೆ ವಿವಿಧ ಸಂಸ್ಥೆಗಳು ವೈಜ್ಞಾನಿಕ ವರದಿ ಸಹ ಸಲ್ಲಿಸಿವೆ. ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಆಂಜನೇಯ ರೆಡ್ಡಿ ವೈಜ್ಞಾನಿಕವಾಗಿ ಮೂರು ಹಂತದವರೆಗೆ ಸಂಸ್ಕರಿಸಿ ಎಂದು ನ್ಯಾಯಾಲಯದ ಮೊರೆ ಕೂಡ ಹೋಗಿದ್ದಾರೆ. ಈ ಭಾಗದ ರೈತರು ವಿವಿಧ ರೀತಿಯಲ್ಲಿ ಹೋರಾಟ, ಪ್ರತಿಭಟನೆ, ಪಾದಯಾತ್ರೆ ನಡೆಸಿದ್ದಾರೆ. ಆದರೆ, ಇವರ ಕೂಗು ಇಂದಿಗೂ ಸರ್ಕಾರಕ್ಕೆ ಕೇಳಿಸಿಲ್ಲ.

ಬೆಂಗಳೂರಿನ ಒಳಚರಂಡಿ ತ್ಯಾಜ್ಯ ನೀರಿನ ಜೊತೆಗೆ ಕೈಗಾರಿಕಾ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯವನ್ನು ಕೇವಲ ಎರಡು ಹಂತದಲ್ಲಿ ಶುದ್ಧೀಕರಿಸಿ ಜಿಲ್ಲೆಗಳ ಕೆರೆಗೆ ಹರಿಸಲಾಗುತ್ತಿದೆ. ಕೆ.ಸಿ.ವ್ಯಾಲಿ ನೀರು ಹರಿದ ಮೇಲಿನ ನರಸಾಪುರ ಕೆರೆಯ ಸ್ಥಿತಿಗತಿಯನ್ನೇ ಉದಾಹರಣೆಯಾಗಿ ನೋಡಿದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನೀಡಿರುವ ತಪಾಸಣಾ ವರದಿಯಲ್ಲಿ ಈ ಕೆರೆಯಲ್ಲಿ ಅಪಾಯಕಾರಿ ಅಂಶ ಇರುವುದು ಪತ್ತೆಯಾಗಿದೆ. ಹಾಗೆಯೇ ಲಕ್ಷ್ಮಿಸಾಗರ ಕೆರೆಯ ನೀರನ್ನು ಐಐಎಸ್‌ಸಿ ವಿಜ್ಞಾನಿಗಳು ಪರೀಕ್ಷಿಸಿದಾಗ ಭಾರಿ ಪ್ರಮಾಣದ ಲೋಹಧಾತುಗಳು ಕಂಡುಬಂದಿವೆ.

ಹಸಿರು ಬಣ್ಣಕ್ಕೆ ತಿರುಗಿದ ಕೆರೆ

ಕೋಲಾರದ ನರಸಾಪುರ ಕೆರೆಗೆ ಹರಿದು ಬಂದ ನೀರು ಹಸಿರು ಬಣ್ಣಕ್ಕೆ ತಿರುಗಿ ಆತಂಕ ಮೂಡಿಸಿತ್ತು, ಕೆಲವೆಡೆ ನೊರೆ ಕಂಡುಬಂದಿತ್ತು.  ‘ಈ ನೀರು ಕುಡಿಯಲು ಅಥವಾ ಬಳಕೆಗೆ ಯೋಗ್ಯವಲ್ಲ’ ಎಂದು ವ್ಯಾಲಿ ಯೋಜನೆ ವ್ಯಾಪ್ತಿಯ ಕೆರೆಗಳ ಬಳಿ ನಾಮಫಲಕ ಹಾಕಲಾಗಿದೆ. ಆದರೆ, ಇದನ್ನು ಅಣಕಿಸುವಂತೆ ಈ ಕೆರೆಗಳ ಅಂಗಳದಲ್ಲಿರುವ ಕೊಳವೆ ಬಾವಿಗಳಿಂದಲೇ ನಗರದ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ.

ಕೋಲಾರ ನಗರಕ್ಕೆ ನೀರುಣಿಸುವ ಅಮ್ಮೇರಹಳ್ಳಿ ಕೆರೆ, ಕೋಲಾರಮ್ಮ ಕೆರೆ ಹಾಗೂ ಮಡೇರಹಳ್ಳಿ ಕೆರೆಗಳಿಗೂ ಕೆ.ಸಿ.ವ್ಯಾಲಿಯ ಕಲುಷಿತ ನೀರು ತುಂಬಿಸಲಾಗಿದೆ. ಈ ಕೆರೆಗಳಲ್ಲಿರುವ ಕೊಳವೆಬಾವಿಗಳು ನೀರಿನಲ್ಲಿ ಮುಳುಗಿವೆ. ಅರೆ ಸಂಸ್ಕರಿತ ಕೊಳಚೆನೀರು ಭೂಮಿಯ ಗರ್ಭವನ್ನು ಸೇರಿ  ಕೊಳವೆ ಬಾವಿಗಳ ಮೂಲಕ ಅಡುಗೆ ಮನೆ ಸೇರುತ್ತಿದೆ.

ಚಿಕ್ಕಬಳ್ಳಾಪುರದ ಕಂದವಾರ ಕೆರೆಯದ್ದೂ ಇದೇ ಕತೆ. ಸಿಹಿ ನೀರು ಎಂದು ಜಕ್ಕಲಮಡುಗು ಜಲಾಶಯದ ನೀರನ್ನು ಮತ್ತು ಕಂದವಾರ ಕೆರೆ ಅಂಗಳದಲ್ಲಿರುವ ಕೊಳವೆಬಾವಿಗಳ ನೀರನ್ನು ನಗರಸಭೆಯುವರು ಮನೆಗಳಿಗೆ ಪೂರೈಸುತ್ತಿದ್ದಾರೆ. ಪಶು, ಪಕ್ಷಿಗಳು ಈ ನೀರನ್ನು ಕುಡಿಯುತ್ತಿವೆ. ಅವುಗಳ ಆರೋಗ್ಯದ ಮೇಲೂ ದುಷ್ಪರಿಣಾಮವಾಗುತ್ತಿದೆ. ಕೆರೆಗಳ ಮೀನು, ಇತರ ಜಲಚರಗಳು ಸಾಯುತ್ತಿವೆ. ಮಳೆ ಹೇರಳವಾಗಿ ಕೆರೆ ಕೋಡಿ ಬಿದ್ದಾಗ ಜನರು ಈ ಮೀನು ಹಿಡಿಯುತ್ತಾರೆ. ಅಲ್ಲಿಗೆ ವ್ಯಾಲಿಯ ಕೊಳಚೆನೀರು ಮತ್ತು ಅದರಲ್ಲಿರುವ ವಿಷವು ಅಂತರ್ಜಲ, ತರಕಾರಿ, ಮೀನು, ಹಾಲಿನ ರೂಪದಲ್ಲಿ ಜನರನ್ನು, ಹಸಿರು ಮೇವು ಮತ್ತು ನೀರಿನ ಮೂಲಕ ಜಾನುವಾರುಗಳ ಹೊಟ್ಟೆ ಸೇರುತ್ತಿದೆ!

ಅನ್ನದ ಬಟ್ಟಲಲ್ಲಿ ವಿಷ

ನೀರಿನ ದಾಹದಿಂದ ಬರಗೆಟ್ಟ ಬಯಲುನಾಡಿಗೆ ಸಂಜೀವಿನಿ ಆಗಬೇಕಿದ್ದು ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್‌.ವ್ಯಾಲಿ ಯೋಜನೆಗಳು ಈಗ ನಿಧಾನವಾಗಿ ವಿಷ ಉಣಿಸುತ್ತಿವೆ. ನಿಧಾನಗತಿಯ ವಿಷದ (ಸ್ಲೋ ಪಾಯಿಸನ್) ರೀತಿ ಕೆರೆ ನೀರು ಮತ್ತು ಅಂತರ್ಜಲದ ಮೂಲಕ ಅರೆ ಸಂಸ್ಕರಿತ ನೀರು, ತರಕಾರಿಯ ಒಡಲು ಸೇರಿ ಅಡುಗೆ ಮನೆ ಸೇರುತ್ತಿದೆ. ದೇಹ ಹೊಕ್ಕುತ್ತಿದೆ.

ಹಣ್ಣು, ತರಕಾರಿ, ಸೊಪ್ಪು ಸೇರಿದಂತೆ ತೊಟಗಾರಿಕೆ ಬೆಳೆಗಳೇ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರ ಆರ್ಥಿಕ ಬದುಕಿಗೆ ಆಧಾರ. ಈ ಉತ್ಪನ್ನಗಳಿಗೆ ಸಮೀಪದ ಪ್ರಮುಖ ಮಾರುಕಟ್ಟೆ ಎಂದರೆ ಬೆಂಗಳೂರು. ಈ ಮೂರು ಜಿಲ್ಲೆಗಳ ಹಣ್ಣು, ತರಕಾರಿ ಕೊಳಚೆ ನೀರಿನಲ್ಲಿ ಬೆಳೆದಿರುವುದು ಎನ್ನುವ ಭಾವನೆ ಮೂಡುತ್ತಿದೆ. ಪರಿಣಾಮ ಈ ಜಿಲ್ಲೆಗಳ ಹಣ್ಣು, ತರಕಾರಿಗೆ ಬೇಡಿಕೆ ಕುಸಿಯುತ್ತಿದೆ. ಕೋಲಾರದ ತರಕಾರಿ ಎಂಬ ಕಾರಣಕ್ಕೆ ಉಳಿದ ತರಕಾರಿಗಿಂತ ಕಡಿಮೆ ಹಣ ನೀಡುತ್ತಿದ್ದಾರೆ ಎಂಬುದು ಈ ಭಾಗದ ರೈತರ ದೂರು.

‘ಕೋಲಾರದ ತರಕಾರಿ ಎಂಬುದು ಗೊತ್ತಾದರೆ ಗ್ರಾಹಕರು ಖರೀದಿಗೆ ಹಿಂಜರಿಯುತ್ತಾರೆ. ಇಲ್ಲವೇ‌ ಕಡಿಮೆ ಹಣ ನೀಡುತ್ತಾರೆ. ಟೊಮೆಟೊ, ಸೊಪ್ಪು 2–3 ದಿನಕ್ಕೆ ವಾಸನೆ ಬಂದು ಕೆಟ್ಟು ಹೋಗುತ್ತಿದೆ. ಕೆ.ಸಿ.ವ್ಯಾಲಿ ಭಾಗದಲ್ಲಿ ಬೆಳೆದ ಬೆಳೆಗಳಿಗೆ ಊಜಿ ರೋಗ ಬರುತ್ತಿದೆ’ ಎನ್ನುವುದು ರೈತ ಮುಖಂಡ ಕಲ್ವಮಂಜಲಿ ರಾಮು ಶಿವಣ್ಣ ಸ್ವಾನುಭವ.

‘ಕೆ.ಸಿ.ವ್ಯಾಲಿ ನೀರು ಬಳಸಿ ಬೆಳೆದ ಹುಲ್ಲು, ಮೇವನ್ನು ಜಾನುವಾರುಗಳಿಗೆ ಹಾಕಲಾಗುತ್ತಿದೆ. ಅದೇ ನೀರನ್ನೂ ಹಾಲು ಕೊಡುವ ಹಸು, ಎಮ್ಮೆಗಳಿಗೆ ಕುಡಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಕೆ.ಸಿ.ವ್ಯಾಲಿ ಪ್ರದೇಶದ ಹಾಲು ಮತ್ತು ಇತರ ಪ್ರದೇಶದ ಹಾಲಿನ ವಾಸನೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಈ ಹಾಲು ಕುಡಿಯುವ ಮಕ್ಕಳಲ್ಲಿ ಪದೇ ಪದೇ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ.‌ ರೈತರಲ್ಲಿ ಮೈ, ಕೈ ಕೆರೆತ ಹೆಚ್ಚಿದೆ. ಕೈಗಳು ಬಿಳಿಚಿಕೊಳ್ಳುತ್ತಿವೆ. ಕಾಲುಗಳಲ್ಲಿ ಕೆಸರುಣ್ಣು ಕಾಣಿಸಿಕೊಳ್ಳುತ್ತಿದೆ’ ಎಂದು ಆರೋಪಿಸುತ್ತಾರೆ ಶಿವಣ್ಣ.

ಕೆರೆಗಳು ಕೋಡಿ ಹರಿದಾಗ ಮತ್ತೊಂದು ಕೆರೆ ಸೇರುತ್ತವೆ. ಎರಡು ವರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಉತ್ತಮವಾಗಿದೆ. ಎಚ್‌.ಎನ್.ವ್ಯಾಲಿ ಕೊಳಚೆ ನೀರಿನಿಂದ ತುಂಬಿರುವ ಕೆರೆಗಳು ಕೋಡಿ ಬಿದ್ದವು. ಕೋಡಿ ಹರಿದ ನೀರು ಬಾಗೇಪಲ್ಲಿ ಪಟ್ಟಣದ ಜನರಿಗೆ ಕುಡಿಯುವ ನೀರಿನ ಆಧಾರವಾಗಿರುವ ಚಿತ್ರಾವತಿ ಜಲಾಶಯಕ್ಕೆ ಸೇರಿತು. ಕಳೆದ ಮಳೆಗಾಲದಲ್ಲಿ ಕೋಲಾರದ ಯರಗೋಳ್‌ ಜಲಾಶಯಕ್ಕೂ ಕೆ.ಸಿ.ವ್ಯಾಲಿ ನೀರು ಬೆರೆತಿತ್ತು.

ಎಚ್‌.ಎನ್.ವ್ಯಾಲಿ ನೀರಿನಿಂದ ತುಂಬಿರುವ ಚಿಕ್ಕಬಳ್ಳಾಪುರದ ಕಂದವಾರ ಕೆರೆ 
ಎಚ್‌.ಎನ್.ವ್ಯಾಲಿ ನೀರಿನಿಂದ ತುಂಬಿರುವ ಚಿಕ್ಕಬಳ್ಳಾಪುರದ ಕಂದವಾರ ಕೆರೆ 

ಅಂತರ್ಜಲದಲ್ಲಿ ಯುರೇನಿಯಂ

2019 ಮತ್ತು 2020ರ ನಡುವೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಾಯುಗುಣ ಬದಲಾವಣೆ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ತಂಡಗಳು ನಡೆಸಿದ ಅಧ್ಯಯನದಲ್ಲಿ ರಾಜ್ಯದ 13 ಜಿಲ್ಲೆಗಳ 73 ಹಳ್ಳಿಗಳ ಅಂತರ್ಜಲದಲ್ಲಿ ಯುರೇನಿಯಂ ಪತ್ತೆ ಹಚ್ಚಿವೆ. 

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂತರ್ಜಲ ಕುರಿತು ಅಧ್ಯಯನ ನಡೆಸಲಾಗಿದ್ದು, ಇಲ್ಲಿಯ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಹೇಳಿದೆ. ಇಲ್ಲಿನ ಜನರು ಕುಡಿಯುವ ನೀರಿಗೆ ಕೊಳವೆಬಾವಿ ಆಶ್ರಯಿಸಿದ್ದಾರೆ. ಅತಿಯಾಗಿ ಅಂತರ್ಜಲ ಬಳಸುವ ಜಿಲ್ಲೆಗಳಲ್ಲಿ ಬಯಲುಸೀಮೆಯ ಜಿಲ್ಲೆಗಳೂ ಸಹ ಸೇರಿವೆ. ಇಲ್ಲಿಯ ಜನರು ನೀರಿಗಾಗಿ ಅಂತರ್ಜಲವನ್ನೇ ಆಶ್ರಯಿಸಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಂದು ಲೀಟರ್ ನೀರಿನಲ್ಲಿ 30 ಮೈಕ್ರೊ ಗ್ರಾಮ್‌ಗಿಂತ ಕಡಿಮೆ ಮತ್ತು ಅಣುಶಕ್ತಿ ನಿಯಂತ್ರಣ ಮಂಡಳಿ ಪ್ರಕಾರ 60 ಮೈಕ್ರೊ ಗ್ರಾಮ್‌ಗಿಂತಲೂ ಕಡಿಮೆ ಪ್ರಮಾಣದಲ್ಲಿ ಯುರೇನಿಯಂ ಅಂಶ ಇರಬಹುದು. ಆದರೆ, ಅಧ್ಯಯನಕ್ಕೆ ಒಳಪಟ್ಟ ಬಹಳಷ್ಟು ಗ್ರಾಮಗಳ ಅಂತರ್ಜಲದಲ್ಲಿ ಇದಕ್ಕೆ ಮೀರಿದ ಅಪಾಯದ ಮಟ್ಟದ ಯುರೇನಿಯಂ ಪ್ರಮಾಣವಿದೆ. ಗಮನಿಸಬೇಕಾದ ಅಂಶವೆಂದರೆ, ಈ ಹಳ್ಳಿಗಳ ಸುತ್ತ ಯಾವುದೇ ಕೈಗಾರಿಕೆ ಇಲ್ಲ. ಭೂಮಿಯಲ್ಲಿಯೇ ಇದು ಅಡಕವಾಗಿದೆ ಎನ್ನುವ ಅನುಮಾನವಿದೆ.

ಬೆಂಗಳೂರು ಕಸದಿಂದ ಕೆರೆ ಮಲಿನ

ಕೆ.ಸಿ.ವ್ಯಾಲಿ ನೀರು ತುಂಬಿರುವ ಕೋಲಾರದ ಕೋಲಾರಮ್ಮ ಕೆರೆಯಲ್ಲಿ ಅಳವಡಿಸಿರುವ ಕೊಳವೆ ಬಾವಿ. ಇದೇ ಕೊಳವೆ ಬಾವಿ ನೀರನ್ನು ನಗರದ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ–ಪ್ರಜಾವಾಣಿ ಚಿತ್ರ
ಕೆ.ಸಿ.ವ್ಯಾಲಿ ನೀರು ತುಂಬಿರುವ ಕೋಲಾರದ ಕೋಲಾರಮ್ಮ ಕೆರೆಯಲ್ಲಿ ಅಳವಡಿಸಿರುವ ಕೊಳವೆ ಬಾವಿ. ಇದೇ ಕೊಳವೆ ಬಾವಿ ನೀರನ್ನು ನಗರದ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ–ಪ್ರಜಾವಾಣಿ ಚಿತ್ರ

ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪ ನೂರು ಎಕರೆ ವಿಸ್ತೀರ್ಣದಲ್ಲಿ ಸ್ಥಾಪನೆಯಾಗಿರುವ ಕಸ ವಿಲೇವಾರಿ ಘಟಕಕ್ಕೆ ನಿತ್ಯ ನೂರಾರು ಲಾರಿಗಳಲ್ಲಿ ಬಿಬಿಎಂಪಿ ಕಸ ಬಂದು ಬೀಳುತ್ತಿದೆ. ಮಳೆ ನೀರಿನೊಂದಿಗೆ ಕಸ ಮತ್ತು ಅದರಲ್ಲಿರುವ ಅಪಾಯಕಾರಿ ರಾಸಾಯನಿಕ ಅಂಶಗಳು ಸರಾಗವಾಗಿ ಹರಿದು ಸುತ್ತಮುತ್ತಲಿನ ಕೆರೆಗಳ ಒಡಲು ಸೇರುತ್ತದೆ. ಇದರಿಂದ ಅಂತರ್ಜಲ ಸಹ ಕಲುಷಿತವಾಗುತ್ತಿದೆ. ಶುದ್ಧಕುಡಿಯುವ ನೀರಿನ ಘಟಕದಿಂದ ಬರುವ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ! 

ಬೆಂಗಳೂರಿನ ಕೊಳಚೆ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸುವುದಾಗಿ ಕಳೆದ ಬಜೆಟ್‌ನಲ್ಲಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಅದು ಕಾರ್ಯಗತವಾಗಲಿಲ್ಲ. ಇನ್ನೂ ಅರೆ ಸಂಸ್ಕರಿತ ಕೊಳಚೆ ನೀರು ಕೆರೆಗಳನ್ನು ಸೇರುತ್ತಿದೆ.

ಈ ಎರಡು ಯೋಜನೆಗಳ ಜಾರಿಗೆ ತಂದಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಈಗ ಮತ್ತೆ ಅಧಿಕಾರಕ್ಕೆ ಬಂದಿದೆ. ಈ ಹಿಂದೆ ಮೂರು ಹಂತದ ಶುದ್ಧೀಕರಣಕ್ಕಾಗಿ ಹೋರಾಟ ನಡೆಸಿದ್ದ ಸಚಿವ ಕೆ.ಎಚ್‌.ಮುನಿಯಪ್ಪ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅಧಿಕಾರ ಹಿಡಿದ ಪಕ್ಷದಲ್ಲಿದ್ದಾರೆ. ಮೂರು ಹಂತದ ಶುದ್ಧೀಕರಣಕ್ಕಾಗಿ ನಡೆದಿರುವ ಹೋರಾಟದ ಕೂಗನ್ನು ಸರ್ಕಾರ ಕೇಳಿಸಿಕೊಳ್ಳದಿದ್ದರೆ ವಿಜ್ಞಾನಿಗಳು ಎಚ್ಚರಿಸಿದಂತೆ ಈ ಭಾಗದ ಜನರು ಕೆಲವೇ ವರ್ಷಗಳಲ್ಲಿ ರೋಗಗಳಿಗೆ ತುತ್ತಾಗಲಿದ್ದಾರೆ. ಇಲ್ಲಿಯ ತರಕಾರಿ, ಸೊಪ್ಪು, ಹಣ್ಣು ಬೆಲೆ ಕಳೆದುಕೊಳ್ಳಲಿವೆ!

ಕೆ.ಸಿ.ವ್ಯಾಲಿ ನೀರು ತುಂಬಿರುವ ಕೋಲಾರದ ಕೋಲಾರಮ್ಮ ಕೆರೆಯಲ್ಲಿ ಬೆಳೆದಿರುವ ಕಳೆ ಸಸ್ಯ
ಕೆ.ಸಿ.ವ್ಯಾಲಿ ನೀರು ತುಂಬಿರುವ ಕೋಲಾರದ ಕೋಲಾರಮ್ಮ ಕೆರೆಯಲ್ಲಿ ಬೆಳೆದಿರುವ ಕಳೆ ಸಸ್ಯ
  • 3ನೇ ಹಂತದ ಶುದ್ಧೀಕರಣದ ಬಳಿಕ ಕೊಳಚೆ ನೀರಿನಲ್ಲಿರುವ ನೈಟ್ರೇಟ್‌ ಸೀಸ ರಂಜಕದಂತಹ ರಾಸಾಯನಿಕ ಸೋಸಿ ತೆಗೆಯಬಹುದು 

  • ಅಪಾಯಕಾರಿ ಸೂಕ್ಷ್ಮಾಣು ಜೀವಿ ಹಾಗೂ ಬ್ಯಾಕ್ಟೀರಿಯಾ ನಿವಾರಣೆ

  • ಕೈಗಾರಿಕೆ ವಾಣಿಜ್ಯ ಹಾಗೂ ಆಸ್ಪತ್ರೆ ತ್ಯಾಜ್ಯಗಳ ಅಪಾಯಕಾರಿ ರಾಸಾಯನಿಕಗಳಿಗೆ ಕಡಿವಾಣ 

  • ಜಾನುವಾರುಗಳಿಗೆ ಕುಡಿಯಲು ಬಳಸಬಹುದು

  • ಕೃಷಿ ತೋಟಗಾರಿಕೆಗೆ ಬಳಸಬಹುದು

ಮೂರನೇ ಹಂತದ ಶುದ್ಧೀಕರಣಕ್ಕೆ ವಿಳಂಬ ಏಕೆ?

  • ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಬಳಿ ಮೂರನೇ ಹಂತದ ಶುದ್ಧೀಕರಣ ತಂತ್ರಜ್ಞಾನ ಯಂತ್ರೋಪಕರಣ ಇಲ್ಲ. ವಿದೇಶದಿಂದ ಆಮದು ಮಾಡಿಕೊಳ್ಳಬೇಕು.

  • ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನೀಡಿದ ವರದಿ ತಿರಸ್ಕರಿಸಿ ಕೇಂದ್ರ ಸರ್ಕಾರದ ಮಾನದಂಡ ಉಲ್ಲಂಘಿಸಿ ಖಾಸಗಿ ಸಂಸ್ಥೆ ವರದಿಗೆ ಮಣೆ. 

  • ಶುದ್ಧೀಕರಣ ಘಟಕ ಸ್ಥಾಪನೆ ಆಧುನೀಕರಣ ಹಾಗೂ ನಿರ್ವಹಣೆ ಬಿಡಬ್ಲ್ಯುಎಸ್‌ಎಸ್‌ಬಿ ವ್ಯಾಪ್ತಿಗೆ ಬರುತ್ತದೆ.

  • ಶುದ್ಧೀಕರಣ ತಂತ್ರಜ್ಞಾನ ಗುಣಮಟ್ಟ ನಿರ್ವಹಣೆ ಅಭಿವೃದ್ಧಿಯಲ್ಲಿ ಸಣ್ಣ ನೀರಾವರಿ ಇಲಾಖೆ ಯಾವುದೇ ಜವಾಬ್ದಾರಿ ಇಲ್ಲ. ಎರಡನೇ ಹಂತದ ಸಂಸ್ಕರಣೆ ಮಾಡಿದ ನೀರನ್ನು ಪೈಪ್‌ ಮೂಲಕ ಸರಬರಾಜು ಮಾಡುವುದಷ್ಟೇ ಆ ಇಲಾಖೆಯ ಜವಾಬ್ದಾರಿ. 

ಕೆ.ಸಿ.ವ್ಯಾಲಿಯಿಂದ ಹೊಸ ಸಮಸ್ಯೆ ಉದ್ಭವ

  • 2018ರ ಜೂನ್‌ನಲ್ಲಿ ಕೋಲಾರದ ಲಕ್ಷ್ಮಿಸಾಗರ ಕೆರೆಗೆ ಕೆ.ಸಿ.ವ್ಯಾಲಿ ನೀರು ಪಂಪ್‌ ಮಾಡಲಾಯಿತು. ಅದರಲ್ಲಿ ನೊರೆ ಕಲ್ಮಶ ಇತ್ತು

  • ಕಲುಷಿತ ನೀರಿನಲ್ಲಿ ವೇಗವಾಗಿ ಬೆಳೆಯುವ ಅಪಾಯಕಾರಿ ಕಳೆಯಾದ ಕತ್ತೆಕಿವಿ (ವಾಟರ್‌ ಹಯಸಿಂಥ್‌) ಕೆರೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಲಕ್ಷ್ಮಿಸಾಗರ ಕೋಲಾರಮ್ಮ ಕೆರೆಯಲ್ಲಿ ಈ ಕಳೆ ಬೆಳೆದಿದೆ.

  • ನೀರಿನ ಬಣ್ಣದಲ್ಲಿ ಬದಲಾವಣೆ ಗಬ್ಬು ವಾಸನೆ. ವಾಸನೆ ಹೋಗಲಾಡಿಸಲು ಕ್ಲೋರಿನ್‌ ಅಂಶ ಹೆಚ್ಚು ಬಳಸದಿದ್ದರಿಂದ ಕೊಳವೆ ಬಾವಿ ಪೈಪ್‌ ತುಕ್ಕು ಹಿಡಿಯುತ್ತಿವೆ. 

  • ಕೆ.ಸಿ.ವ್ಯಾಲಿ ವ್ಯಾಪ್ತಿಯ ಕೆರೆಗಳ ಸುತ್ತ ಬೆಳೆದ ತರಕಾರಿಯಲ್ಲಿ ರಾಸಾಯನಿಕ ಹಾಗೂ ಲೋಹಧಾತು ಅಂಶ  ಸೇರಿಕೊಂಡು ಗುಣಮಟ್ಟ ತಗ್ಗಿದೆ. ಬೇಡಿಕೆ ಕಡಿಮೆಯಾಗಿದೆ.

  • ತರಕಾರಿ ಸೊಪ್ಪು ಬೇಗ ಬಾಡುತ್ತಿದ್ದು ಗುಣಮಟ್ಟ ಕುಸಿದಿದೆ. ರುಚಿ ಬಣ್ಣ ಬದಲಾಗಿದೆ. 

  • ಜನ ಜಾನುವಾರುಗಳಲ್ಲಿ ಚರ್ಮರೋಗ ಹಾಗೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ (ಮೊದಲ ಪುಟದಿಂದ) ಕೆ.ಸಿ ಮತ್ತು ಎಚ್‌.ಎನ್.ವ್ಯಾಲಿ ನೀರಿನಲ್ಲಿ ಕೈಗಾರಿಕೆ ಮತ್ತು ಆಸ್ಪತ್ರೆ ತ್ಯಾಜ್ಯ ಸೇರಿವೆ. ಆದ್ದರಿಂದ ಮೂರನೇ ಹಂತದ ಶುದ್ಧೀಕರಣ ಅತ್ಯಗತ್ಯ. ಅಂತರ್ಜಲ ಮರುಪೂರಣಕ್ಕೆ ಈ ಯೋಜನೆ ಅಗತ್ಯವಾಗಿದ್ದರೂ ಕೇವಲ ಎರಡು ಹಂತದಲ್ಲಿ ನೀರನ್ನು ಸಂಸ್ಕರಿಸಿದರೆ ಖಂಡಿತ ಸುರಕ್ಷಿತ ಅಲ್ಲ. ಸದ್ಯಕ್ಕೆ ಸಮಸ್ಯೆ ಗೋಚರಿಸದಿದ್ದರೂ ಭವಿಷ್ಯದಲ್ಲಿ ಖಂಡಿತ ಅಪಾಯ ಕಾದಿದೆ. ಎರಡು ವರ್ಷದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರಿ ಮಳೆ ಆಗಿದೆ. ಹೀಗಾಗಿ ಸಮಸ್ಯೆ ತೀವ್ರಗೊಂಡಿಲ್ಲ.  ಎರಡು ಹಂತದ ಶುದ್ಧೀಕರಣದ ನಂತರವೂ ನೀರಿನಲ್ಲಿ ಕ್ಯಾಡ್ಮಿಯಂ ಕ್ರೋಮಿಯಂ ತಾಮ್ರ ನಿಕೆಲ್‌ ಸೀಸ ಜಿಂಕ್‌ ಮುಂತಾದ ಲೋಹಧಾತು ರಾಸಾಯನಿಕ ಅಂಶ ಕಂಡು ಬಂದಿವೆ. ಇವು ಆಹಾರದಲ್ಲಿ ಸೇರಿ ‌ಆರೋಗ್ಯದ ಮೇಲೆ ಭಾರಿ ಪರಿಣಾಮ ಉಂಟು ಮಾಡುತ್ತಿವೆ. ವರ್ತೂರು ಕೆರೆ ಸುತ್ತ ಅಂತರ್ಜಲ ಕಲುಷಿತಗೊಂಡಿದೆ. ಇಲ್ಲಿ ಬೆಳೆದ ಮೂಲಂಗಿ ಗಜ್ಜರಿ ಕೋಸು ಹಾಗೂ ತರಕಾರಿಯಲ್ಲಿ ಲೋಹಧಾತುವಿನ ಅಂಶ ಕಂಡು ಬಂದಿದೆ. ಆ ಪ್ರದೇಶದ ಬಾವಿ ಕೊಳವೆಬಾವಿ ನೀರಿನಲ್ಲಿ ನೈಟ್ರೇಟ್‌ ಅಂಶ ಪತ್ತೆಯಾಗಿದೆ.   ಇಲ್ಲಿ ಬೆಳೆದ ತರಕಾರಿ ಸೊಪ್ಪುಗಳನ್ನು ದೀರ್ಘ ಕಾಲ ಸೇವಿಸಿದರೆ ಕಿಡ್ನಿ ವೈಫಲ್ಯ ಯಕೃತ್‌ ಸಮಸ್ಯೆ ಹೃದಯ ಸಂಬಂಧಿ ಕಾಯಿಲೆ ಚರ್ಮ ವ್ಯಾಧಿ ಕಾಣಿಸಿಕೊಳ್ಳುತ್ತವೆ. ವರ್ತೂರು ಸುತ್ತಮುತ್ತ ನಾವು ನಡೆಸಿದ ಅಧ್ಯಯನದಲ್ಲಿ ಚಿಕ್ಕ ಮಕ್ಕಳಲ್ಲಿ ಆರೋಗ್ಯ ಮತ್ತು ಕಿಡ್ನಿ ಸಮಸ್ಯೆ ಕಂಡುಬಂದಿದೆ. ಈ ಬಗ್ಗೆ ವರದಿ ನೀಡಿದರೂ ಅಧಿಕಾರಿಗಳು ಕಾರ್ಯಗತಗೊಳಿಸಿಲ್ಲ. ಕೊಳಚೆ ನೀರನ್ನು ನೈಸರ್ಗಿಕವಾಗಿ ಶುದ್ಧಗೊಳಿಸಿ ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಸೋಸಿ ತೆಗೆಯಬಹುದು. ಜಕ್ಕೂರು ಕೆರೆಯಲ್ಲಿ ಈಗಾಗಲೇ ಈ ಪ್ರಯೋಗ ಮಾಡಲಾಗಿದೆ. ಆದರೆ ಸರ್ಕಾರದ ವಿವಿಧ ಇಲಾಖೆಯಲ್ಲಿರುವ ವಿಜ್ಞಾನಿಗಳು ಸರ್ಕಾರಕ್ಕೆ ಬೇಕಾದಂತೆ ವರದಿ ನೀಡಿದ್ದಾರೆ. ಇದು ಹೆಚ್ಚು ದಿನ ನಡೆಯಲ್ಲ.
–ಡಾ.ಟಿ.ವಿ.ರಾಮಚಂದ್ರ ಪರಿಸರ ವಿಜ್ಞಾನಿ ಭಾರತೀಯ ವಿಜ್ಞಾನ ಸಂಸ್ಥೆ ( ಐಐಎಸ್‌ಸಿ) ಬೆಂಗಳೂರು
ಬಯಲುಸೀಮೆ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸುವ ಹೆಸರಲ್ಲಿ ಜಲಮೂಲಗಳನ್ನು ಕಲುಷಿತಗೊಳಿಸಲಾಗುತ್ತಿದೆ.  ಕೆ.ಸಿ.ವ್ಯಾಲಿ ಮೊದಲ ಹಂತದಿಂದ ಉಂಟಾಗಬಹುದಾದ ಅನಾಹುತಗಳ ಬಗ್ಗೆ ತಜ್ಞರ ಎಚ್ಚರಿಕೆ ಕಡೆಗಣಿಸಿ ಸರ್ಕಾರ ಈಗ ಎರಡನೇ ಹಂತದ ಕಾಮಗಾರಿಗೆ ಮುಂದಾಗಿದೆ. 272 ಕೆರೆಗಳಿಗೆ ನೀರು ಹರಿಸಲು ಪೈಪ್‌ಲೈನ್‌ ಹಾಗೂ ಪಂಪ್‌ಹೌಸ್‌ ಕಾಮಗಾರಿ ಆರಂಭವಾಗಿದೆ. ಭರವಸೆ ನೀಡಿದಂತೆ ಮೊದಲ ಹಂತದಲ್ಲಿ 134 ಕೆರೆ ತುಂಬಿಲ್ಲ. ಮೂರನೇ ಹಂತದ ಶುದ್ಧೀಕರಣ ಘಟಕ ತೆರೆದಿಲ್ಲ. ಆದರೂ ಸರ್ಕಾರ ವಿಸ್ತರಣೆಗೆ ಮುಂದಾಗಿದೆ. ಅರೆ ಸಂಸ್ಕರಿತ ನೀರನ್ನಾದರೂ ಹರಿಸಿರುವುದೇ ಪುಣ್ಯ ಎನ್ನುವಂತೆ ರಾಜಕಾರಣಿಗಳು ಮಾತನಾಡುತ್ತಿದ್ದಾರೆ. ಮೂರು ಹಂತದಲ್ಲಿ ಶುದ್ಧೀಕರಿಸಿದ ನಂತರವೇ ನೀರು ಹರಿಸುವಂತೆ ಯೋಜನೆ ಜಾರಿಗೂ ಮುಂಚೆಯೇ ಹೋರಾಟ ನಡೆಸುತ್ತಿದ್ದೇವೆ. ಭವಿಷ್ಯದಲ್ಲಿ ಎದುರಾಗಬಹುದಾದ ಅನಾಹುತಗಳ ಬಗ್ಗೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ವಿಜ್ಞಾನಿಗಳು ಈ ಬಗ್ಗೆ ವರದಿ ನೀಡಿದ್ದಾರೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ.  
–ಆರ್.ಆಂಜನೇಯ ರೆಡ್ಡಿ ಅಧ್ಯಕ್ಷ ಶಾಶ್ವತ ನೀರಾವರಿ ಹೋರಾಟ ಸಮಿತಿ ಚಿಕ್ಕಬಳ್ಳಾಪುರ
ಕೋಲಾರ ನಗರದ ಸುತ್ತಮುತ್ತಲಿನ ಕೋಲಾರಮ್ಮ ಅಮ್ಮೇರಹಳ್ಳಿ ಮಡೇರಹಳ್ಳಿ ಹಾಗೂ ಕೋಡಿಕಣ್ಣೂರು ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲಾಗುತ್ತಿದೆ. ಇದಕ್ಕೂ ಮುನ್ನ ಈ ಕೆರೆಗಳ ನೀರನ್ನು ಕೋಲಾರ ನಗರದ ಜನರಿಗೆ ಕುಡಿಯಲು ಪೂರೈಸಲಾಗುತಿತ್ತು. ಬರಗಾಲ ಬಂದಾಗ ಈ ಕೆರೆಯೊಳಗೆ ಕೋಲಾರ ನಗರಸಭೆಯು ನೂರಕ್ಕೂ ಅಧಿಕ ಕೊಳವೆಬಾವಿ ಕೊರೆಸಿ ಪಂಪ್‌ ಹಾಗೂ ಮೋಟಾರ್ ಅಳವಡಿಸಿ ನೀರು ಸರಬರಾಜು ಮಾಡುತಿತ್ತು. ಕೆಲ ಕೊಳವೆ ಬಾವಿಗಳಿಗೆ ಮುಚ್ಚಳ ಕೂಡ ಅಳವಡಿಸಿಲ್ಲ. ಕೆ.ಸಿ.ವ್ಯಾಲಿ ನೀರು ಹರಿಸಿ ಜಲಮೂಲದ ಜೊತೆಗೆ ಕೊಳವೆಬಾವಿ ನೀರನ್ನೂ ಕಲುಷಿತಗೊಳಿಸಲಾಗಿದೆ. ಕುಡಿಯುವ ನೀರಿನ ಉದ್ದೇಶದ ಯರಗೋಳ್‌ ಜಲಾಶಯದ ಒಡಲನ್ನೂ ಕೆ.ಸಿ.ವ್ಯಾಲಿ ನೀರು ಸೇರುತ್ತಿದೆ.
–ಗಾಂಧಿನಗರ ನಾರಾಯಣಸ್ವಾಮಿ ಜನಪರ ವೇದಿಕೆ ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT