ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಸಾರಿಗೆ ಇಲಾಖೆ: ಎಲ್ಲವೂ ಆನ್‌ಲೈನ್ ಸರ್ವರ್ ಆಫ್‌ಲೈನ್

Last Updated 16 ಜುಲೈ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ಚಾಲನಾ ಕಲಿಕಾ ಪರವಾನಗಿಯಿಂದ ಆದಿಯಾಗಿ ವಾಹನ ನೋಂದಣಿ ತನಕ ಸಾರಿಗೆ ಇಲಾಖೆಯ ಎಲ್ಲಾ ಸೇವೆಗಳು ಈಗ ಆನ್‌ಲೈನ್. ಆದರೆ, ಸರ್ವರ್ ಮಾತ್ರ ಆಫ್‌ಲೈನ್. ಆಗಾಗ ಕಾಡುವ ಸರ್ವರ್ ಡೌನ್ ಸಮಸ್ಯೆ ಜನರನ್ನು ಹೈರಾಣಾಗಿಸಿದೆ.

ಚಾಲನಾ ಪರವಾನಗಿ, ಕಲಿಕಾ ಪರವಾನಗಿ, ಕಂಡಕ್ಟರ್ ಪರವಾನಗಿ, ವಾಹನ ನೋಂದಣಿ, ಫ್ಯಾನ್ಸಿ ನಂಬರ್, ನ್ಯಾಷನಲ್ ಪರ್ಮಿಟ್‌, ವಾಹನಗಳ ಎಫ್‌ಸಿ (ಫಿಟ್‌ನೆಸ್ ಸರ್ಟಿಫಿಕೇಟ್‌), ತೆರಿಗೆ ಪಾವತಿ ‌ಸೇರಿ ಎಲ್ಲಾ ಸೇವೆಗಳನ್ನೂ ಈಗ ಆನ್‌ಲೈನ್ ಮಾಡಲಾಗಿದೆ. ‘ಪರಿವಾಹನ’ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ಅಧಿಕಾರಿಗಳು ಆನ್‌ಲೈನ್‌ನಲ್ಲೇ ಅನುಮೋದನೆ ನೀಡುತ್ತಾರೆ.

ಮಧ್ಯವರ್ತಿಗಳು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಈ ಪ್ರಯತ್ನವನ್ನು ಸಾರಿಗೆ ಇಲಾಖೆ ಮಾಡಿದೆ. ಈ ವ್ಯವಸ್ಥೆ ಅನುಷ್ಠಾನಕ್ಕೆ ಬಂದ ಬಳಿಕ ಸಾರಿಗೆ ಇಲಾಖೆ ಕಚೇರಿಗೆ ಬರುವ ಜನ ಕಡಿಮೆಯಾಗಿದ್ದಾರೆ. ಆದರೆ, ಸಾರಿಗೆ ಇಲಾಖೆ ಸುತ್ತಮುತ್ತ ತಲೆ ಎತ್ತಿದ್ದ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಜನ ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ಬಂದಿದೆ.

ವಾಹನಕ್ಕೆ ಎಫ್‌ಸಿ ಮಾಡಿಸಬೇಕೆಂದರೆ ವಾಯು ಮಾಲಿನ್ಯ ತಪಾಸಣೆ ಕಡ್ಡಾಯ. ಅದೂ ಕೂಡ ಆನ್‌ಲೈನ್ ವ್ಯವಸ್ಥೆಯೇ ಆಗಿದೆ, ಸರ್ವರ್ ಡೌನ್ ಆದರೆ ಎಲ್ಲವೂ ವಿಳಂಬ. ಇಷ್ಟೆಲ್ಲಾ ಸೇವೆಗಳನ್ನು ಆನ್‌ಲೈನ್ ಮಾಡಿರುವ ಸಾರಿಗೆ ಇಲಾಖೆ, ಸಾಫ್ಟ್‌ವೇರ್ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡಿಲ್ಲ. ಆನ್‌ಲೈನ್ ವ್ಯವಸ್ಥೆಗೆ ಒಗ್ಗಿಕೊಳ್ಳಲು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಜನಸಾಮಾನ್ಯರು ಪರದಾಡುವಂತಾಗಿದೆ.

ಸಾರಿಗೆ ಇಲಾಖೆ ಕಚೇರಿಗಳಲ್ಲೂ ಸರ್ವರ್ ಡೌನ್ ಸಮಸ್ಯೆ ಸಿಬ್ಬಂದಿಯನ್ನು ಕಾಡುತ್ತಿದೆ. ಅರ್ಜಿಗಳನ್ನು ಪರಿಶೀಲಿಸಲು ಸಾಧ್ಯವಾಗದೆ ಒ‌ದ್ದಾಟ ನಡೆಸಬೇಕಾದ ಪರಿಸ್ಥಿತಿ ಇದೆ. ‘12 ವರ್ಷಗಳ ಹಿಂದೆ ಖರೀದಿಸಿದ್ದ ಕಂಪ್ಯೂಟರ್‌ಗಳು ನಮ್ಮ ಕಚೇರಿಯಲ್ಲಿವೆ. ಇಲಾಖೆಗೆ ಕಂಪ್ಯೂಟರ್‌ ಎಂಜಿನಿಯರ್‌ ನೇಮಕವೇ ಆಗಿಲ್ಲ. ಇರುವ ಒಬ್ಬ ತಾಂತ್ರಿಕ ಸಿಬ್ಬಂದಿ ಎಲ್ಲಾ ಕಂಪ್ಯೂಟರ್‌ಗಳ ಉಸ್ತುವಾರಿ ನೋಡಿಕೊಳ್ಳಬೇಕು. ಅವರು ರಜೆಯಲ್ಲಿದ್ದಾಗ ಸರ್ವರ್ ಕೈಕೊಟ್ಟರೆ ಅಂದಿನ ಕೆಲಸ ಅಲ್ಲೇ ಸ್ಥಗಿತಗೊಳ್ಳುತ್ತದೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

‘ಉದ್ದೇಶವೇನೋ ಸರಿಯಾಗಿದೆ. ಆದರೆ, ಅದಕ್ಕೆ ಪೂರಕವಾದ ಸಾಫ್ಟ್‌ವೇರ್ ವ್ಯವಸ್ಥೆ ಬೇಕು. ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಂಡು ಪ್ರಾಯೋಗಿಕವಾಗಿ ಪರಿಶೀಲನೆ ನಡೆಸಿ ಅನುಷ್ಠಾನಕ್ಕೆ ತಂದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಏಕಾಏಕಿ ಆನ್‌ಲೈನ್ ವ್ಯವಸ್ಥೆಗೆ ಬದಲಾವಣೆ ಮಾಡಿದ್ದರಿಂದ ಜನ ಪರಿತಪಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ತಿಳಿವಳಿಕೆ ಇಲ್ಲದವರು ಒಂದಕ್ಕೆ ನಾಲ್ಕರಷ್ಟು ಹಣ ಕಳೆದುಕೊಳ್ಳುವುದಲ್ಲದೇ, ಸೇವೆಗಾಗಿ ವಾರಗಟ್ಟಲೆ ಕಾಯುವ ಸ್ಥಿತಿ ಇದೆ’ ಎಂದು ವಿವರಿಸಿದರು.

ಎಚ್‌ಎಸ್‌ಆರ್‌ಪಿ: ಏಕಸ್ವಾಮ್ಯದ ಅಪಾಯ

ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಪರಿಪೂರ್ಣವಾಗಿ ಜಾರಿಯಾಗಿಲ್ಲ. ಇದರ ನಡುವೆ ನಂಬರ್ ಪ್ಲೇಟ್‌ ತಯಾರಿಕೆ ಒಂದೇ ಕಂಪನಿಗೆ ವಹಿಸಲು ಸರ್ಕಾರ ಸಿದ್ಧತೆ ನಡೆಸಿದೆ.

2019ರ ಏಪ್ರಿಲ್‌ನಿಂದ ಹೊಸ ವಾಹನಗಳಿಗಷ್ಟೇ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಸಲಾಗುತ್ತಿದೆ. ಅದಕ್ಕೂ ಹಿಂದಿನ ವಾಹನಗಳನ್ನು ಈ ವ್ಯವಸ್ಥೆಗೆ ಪರಿವರ್ತಿಸುವ ಪ್ರಸ್ತಾಪ ಹಾಗೇ ಉಳಿದುಕೊಂಡಿದೆ. ರಾಜ್ಯದಲ್ಲಿ 1.7 ಕೋಟಿ ಹಳೆಯ ವಾಹನಗಳು ಎಚ್‌ಎಸ್‌ಆರ್‌ಪಿ ಆಗಿ ಬದಲಾಗಬೇಕಿದ್ದು, ಸುಮಾರು ₹600 ಕೋಟಿ ಮೊತ್ತದ ವ್ಯವಹಾರ ಇದಾಗಿದೆ.

2021ರ ಅಕ್ಟೋಬರ್‌ನಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಟೆಂಡರ್ ಪ್ರಕ್ರಿಯೆ ಆರಂಭಿಸಿತ್ತು. ₹100 ಕೋಟಿಗೂ ಕಡಿಮೆ ವಹಿವಾಟು ಹೊಂದಿರುವ ಕಂಪನಿಗಳು ಭಾಗವಹಿಸದಂತೆ ನಿರ್ಬಂಧಿಸಿದ್ದ ಷರತ್ತಿನ ವಿರುದ್ಧ ನಂಬರ್ ಪ್ಲೇಟ್ ಮಾರಾಟಗಾರ ಕಂಪನಿಗಳು ದೂರು ನೀಡಿದ್ದವು.

ನಂಬರ್ ಪ್ಲೇಟ್‌ ತಯಾರಿಸುವ ಜವಾಬ್ದಾರಿಯನ್ನು ಒಂದೇ ಕಂಪನಿಗೆ ವಹಿಸುವ ಸಿದ್ಧತೆಯನ್ನು ಸಾರಿಗೆ ಇಲಾಖೆ ಮಾಡುತ್ತಿದೆ. ಅದರ ಜತೆಗೆ ಚಾಲನಾ ಪರವಾನಗಿ (ಡಿ.ಎಲ್‌) ಮತ್ತು ಆರ್.ಸಿ ಕಾರ್ಡ್‌ಗಳನ್ನು ಮುದ್ರಿಸಲು ನೆಲಮಂಗಲದ ಬಳಿ ಕೇಂದ್ರೀಕೃತ ಪ್ರೊಸೆಸಿಂಗ್ ಕೇಂದ್ರ ತೆರೆಯಲು ಸಿದ್ಧತೆ ನಡೆಸಿದೆ.

‘ನಂಬರ್ ಪ್ಲೇಟ್ ತಯಾರಿಸಲು ಒಂದೇ ಕಂಪನಿಗೆ ಅನುಮತಿ ನೀಡಿದರೆ ಮುಂದೆ ತೊಂದರೆ ಎದುರಾಗಲಿದೆ. ನಂಬರ್ ಪ್ಲೇಟ್‌ಗಾಗಿ ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ಬರಲಿದೆ. ಅದರ ಬದಲು ನಿರ್ದಿಷ್ಟ ಮಾರ್ಗಸೂಚಿ ಸಿದ್ಧಪಡಿಸಿ ಬೇರೆ ಬೇರೆ ಕಂಪನಿಗಳಿಗೆ ಅವಕಾಶ ನೀಡಿದರೆ ಜನರಿಗೆ ಸಕಾಲಕ್ಕೆ ನಂಬರ್ ಪ್ಲೇಟ್ ದೊರಕಿಸಲು ಸಾಧ್ಯ’ ಎಂದು ಸಾರಿಗೆ ತಜ್ಞರು ಹೇಳುತ್ತಾರೆ.

‘ಎಚ್‌ಎಸ್‌ಆರ್‌ಪಿ ನಿಯಮಗಳ ಪ್ರಕಾರ, ನಂಬರ್ ಪ್ಲೇಟ್‌ ಸ್ಕ್ಯಾನ್ ಮಾಡಿದರೆ ವಾಹನದ ಚಾಸಿ ಸಂಖ್ಯೆ, ಆರ್‌.ಸಿ. ಕಾರ್ಡ್‌ ಮಾಹಿತಿ ಸೇರಿ ಎಲ್ಲವೂ ಸಿಗಬೇಕು. ಆದರೆ, ಸದ್ಯ ಹೊಸ ವಾಹನಗಳಿಗೆ ಅಳವಡಿಕೆ ಆಗುತ್ತಿರುವ ನಂಬರ್ ಪ್ಲೇಟ್‌ಗಳಲ್ಲಿ ಯಾವ ಮಾಹಿತಿಯೂ ಸಿಗುವುದಿಲ್ಲ. ಹಳೇ ನಂಬರ್ ಪ್ಲೇಟ್ ಮತ್ತು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೂ ವ್ಯತ್ಯಾಸವೇ ಇಲ್ಲ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳೇ ಹೇಳುತ್ತಾರೆ.

ಪರೀಕ್ಷೆ ನೀವೇ ಬರೆಯಬೇಕಿಲ್ಲ

ವಾಹನ ಚಾಲನೆ ಕಲಿಕಾ ಪರವಾನಗಿ (ಎಲ್‌ಎಲ್‌ಆರ್‌) ಪಡೆಯಲು ಈಗ ಆನ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ಪರವಾನಗಿ ಪಡೆಯಲು ಬಯಸುವವರು ತಾವೇ ದಾಖಲೆಗಳನ್ನು ತುಂಬಿ, ಆನ್‌ಲೈನ್‌ ಪರೀಕ್ಷೆ ಬರೆದು ಎಲ್‌ಎಲ್‌ಆರ್‌ ಪಡೆಯಬಹುದು.

ಆದರೆ, ಪರೀಕ್ಷೆ ಬರೆಯಬೇಕಾದರೆ ಕೆಲವು ಕಾನೂನು, ನಿಯಮಾವಳಿಗಳನ್ನು ಓದಬೇಕು. ಇದನ್ನು ಯಾರೂ ಇಷ್ಟಪಡುವುದಿಲ್ಲ. ಬದಲಿಗೆ ಚಾಲನಾ ತರಬೇತಿ ಸಂಸ್ಥೆಗಳಿಗೆ ಹೋಗಿ ಒಂದಷ್ಟು ದುಡ್ಡು ಕೊಡುತ್ತಾರೆ. ಈ ಸಂಸ್ಥೆಯ ಪ್ರತಿನಿಧಿಗಳು ‘ಸೇವಾ ಶುಲ್ಕ’ ಪಡೆದು, ಆನ್‌ಲೈನ್‌ನಲ್ಲಿ ದಾಖಲೆಗಳು ಅಪ್‌ಲೋಡ್‌ ಆಗುತ್ತಿದ್ದಂತೆ ಅಭ್ಯರ್ಥಿಯ ಸ್ಥಳದಲ್ಲಿ ತಾವೇ ಕುಳಿತು ಪರೀಕ್ಷೆ ಬರೆಯುತ್ತಾರೆ. ಹೀಗೆ ಪಡೆದ ಶುಲ್ಕದ ಒಂದು ಭಾಗ ಅಧಿಕಾರಿಗಳಿಗೆ ಸಲ್ಲುತ್ತದೆ. ‘ನಾವು ಪ್ರತಿ ತಿಂಗಳೂ ಇಂತಿಷ್ಟು ಹಣ ಕೊಡಲೇಬೇಕಾಗುತ್ತದೆ’ ಎನ್ನುತ್ತಾರೆ ಮಂಗಳೂರಿನ ಚಾಲನಾ ತರಬೇತಿ ಸಂಸ್ಥೆಯೊಂದರ ಪ್ರತಿನಿಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT