ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಏರ್‌ಪೋರ್ಟ್ ಟೇಕಾಫ್‌ಗೇ ಗ್ರಹಣ

Published 19 ಆಗಸ್ಟ್ 2023, 23:45 IST
Last Updated 19 ಆಗಸ್ಟ್ 2023, 23:45 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಸೋದ್ಯಮ, ಸರಕು ಸಾಗಣೆ, ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನ ನೀಡಲು ವಿಮಾನ ಸೌಲಭ್ಯ ಪೂರಕ. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ, ದೂರದೃಷ್ಟಿಯ ಕೊರತೆಯಿಂದ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ವಿಮಾನ ನಿಲ್ದಾಣಗಳ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಒಂದೆರಡು ಕಡೆ ಕಾಮಗಾರಿ ಪೂರ್ಣಗೊಂಡಿದ್ದರೂ ವಿಮಾನಗಳ ಹಾರಾಟ ಆರಂಭವಾಗಿಲ್ಲ.

ಬೆಂಗಳೂರು ಕೇಂದ್ರಿತ ಮಾಹಿತಿ ತಂತ್ರಜ್ಞಾನ, ಉದ್ಯಮಗಳು ಎರಡು– ಮೂರನೇ ಶ್ರೇಣಿಯ ನಗರಗಳಿಗೂ ವಿಸ್ತರಣೆ ಆಗಬೇಕಿದೆ. ಆ ಮೂಲಕ, ಅಭಿವೃದ್ಧಿ– ಆರ್ಥಿಕ ಚಟುವಟಿಕೆಗೆ ವೇಗ ಸಿಗಬೇಕಿದೆ ಎನ್ನುವುದು ಸರ್ಕಾರದ ಆಶಯ. ಈ ಉದ್ದೇಶದಿಂದ ಪ್ರಮುಖ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣದ  ಯೋಜನೆಗಳು ರೂಪುಗೊಂಡರೂ ಅನುಷ್ಠಾನ ಆಮೆಗತಿಯಲ್ಲಿದೆ.

ಕಾರವಾರ, ಬಳ್ಳಾರಿ, ರಾಯಚೂರು, ಕೊಪ್ಪಳ, ದಾವಣಗೆರೆ ವಿಮಾನ ನಿಲ್ದಾಣಗಳ ಕಾಮಗಾರಿಯೇ ಟೇಕಾಫ್‌ ಆಗಿಲ್ಲ. ಈ ಯೋಜನೆಗಳೆಲ್ಲಾ ಕಾರ್ಯಸಾಧ್ಯತಾ ವರದಿ ಹಂತದಲ್ಲಿವೆ.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆ ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮೈಸೂರು, ಬೀದರ್ ಮತ್ತು ವಿಜಯನಗರ ವಿಮಾನ ನಿಲ್ದಾಣಗಳು ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತಿವೆ.

ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಿಟ್ಟರೆ, ರಾಜ್ಯದ ಎರಡನೇ ಅತೀ ಹೆಚ್ಚು ಪ್ರಯಾಣಿಕ ದಟ್ಟಣೆಯ ವಿಮಾನ ನಿಲ್ದಾಣ ಮಂಗಳೂರಿನದ್ದು.

ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ‘ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ’ವನ್ನು (ಕೆಎಸ್‌ಐ ಐಡಿಸಿ)‌ ನೋಡಲ್‌ ಏಜೆನ್ಸಿಯಾಗಿ ರಾಜ್ಯ ಸರ್ಕಾರ ನೇಮಿಸಿದೆ. ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ -ಉಡಾನ್‌ (ಉಡೇ ದೇಶ್‌ ಕಾ ಆಮ್‌ ನಾಗರಿಕ್‌) ಅನುಸಾರ ವಿಮಾನ ನಿಲ್ದಾಣ, ಏರ್‌ಸ್ಟ್ರಿಪ್‌ಗಳ ಅಭಿವೃದ್ಧಿಗೆ ಕೆಎಸ್‌ಐಡಿಸಿ ಮುಂದಾಗಿದೆ. ಆದರೆ, ‘ಉಡಾನ್’ಗೆ ಪೂರಕವಾಗಿ ರಾಜ್ಯದಲ್ಲಿ ವಿಮಾನ ನಿಲ್ದಾಣಗಳು ನಿರ್ಮಾಣ ಆಗಿಲ್ಲ ಎನ್ನುವ ಆರೋಪಗಳಿವೆ.

ಶಿವಮೊಗ್ಗ, ವಿಜಯಪುರ, ಹಾಸನ, ರಾಯಚೂರು, ದಾವಣಗೆರೆ, ಕೊಪ್ಪಳ, ಬಳ್ಳಾರಿ, ಕಾರವಾರ ಸೇರಿ ರಾಜ್ಯದ 14 ಜಿಲ್ಲೆಗಳಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪಿಸಲು ಉದ್ದೇಶಿಸಲಾಗಿದೆ. ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಇದೇ 31ರಂದು ವಿಮಾನ ಹಾರಾಟಕ್ಕೆ ಮುಹೂರ್ತ ನಿಗದಿಯಾಗಿದೆ. ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಯೂ ಇಷ್ಟೊತ್ತಿಗೆ ಮುಗಿಯಬೇಕಿತ್ತು. ಆದರೆ ಕಾಮಗಾರಿ ಆಮೆಗತಿಯಲ್ಲಿದೆ.

ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಕೆಎಸ್ಐಐಡಿಸಿಗೆ ವಹಿಸಿದೆ. ಆ ಮೂಲಕ, ರಾಜ್ಯ ಸರ್ಕಾರದ ಸಂಸ್ಥೆಯೊಂದು ನಿರ್ವಹಿಸಲಿರುವ ರಾಜ್ಯದ ಮೊದಲ ವಿಮಾನ ನಿಲ್ದಾಣ ಇದಾಗಲಿದೆ.

ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಯೂ ಇಷ್ಟೊತ್ತಿಗೆ ಮುಗಿಯಬೇಕಿತ್ತು. ಆದರೆ ಕಾಮಗಾರಿ ಆಮೆಗತಿಯಲ್ಲಿದೆ.

ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಕೆಎಸ್ಐಐಡಿಸಿಗೆ ವಹಿಸಿದೆ. ಆ ಮೂಲಕ, ರಾಜ್ಯ ಸರ್ಕಾರದ ಸಂಸ್ಥೆಯೊಂದು ನಿರ್ವಹಿಸಲಿರುವ ರಾಜ್ಯದ ಮೊದಲ ವಿಮಾನ ನಿಲ್ದಾಣ ಇದಾಗಲಿದೆ.

ರಾಜ್ಯದ ಉಳಿದ ಕಡೆ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣಗಳ ಕಾಮಗಾರಿಯು ಭೂಸ್ವಾಧೀನ, ಟೆಂಡರ್‌ ವಿಳಂಬ ಮತ್ತಿತರ ಕಾರಣಗಳಿಗೆ ನನೆಗುದಿಯಲ್ಲಿದೆ.

ರಾಜ್ಯದಲ್ಲಿ ವಾಯುಯಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡಲು ಸಮಗ್ರ ನಾಗರಿಕ ವಿಮಾನಯಾನ ನೀತಿ ರೂಪಿಸುವುದಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿದೆ. ವಿಜಯಪುರ ವಿಮಾನ ನಿಲ್ದಾಣ ಪ್ರಸಕ್ತ ಸಾಲಿನಲ್ಲಿಯೇ ಕಾರ್ಯಾಚರಣೆ ಮಾಡುವುದು ಹಾಗೂ ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಹೊಸತಾಗಿ ಏರ್‌ಸ್ಟ್ರಿಪ್‌ ನಿರ್ಮಾಣದ ಪ್ರಸ್ತಾಪವೂ ಆಯವ್ಯಯದಲ್ಲಿದೆ.

ನಾಗರಿಕ ವಿಮಾನಯಾನ ಸಂಪರ್ಕದ ಮೂಲಕ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಜತೆಗೆ ಆರ್ಥಿಕ ಪುನಃಶ್ಚೇತನದ ಉದ್ದೇಶದಿಂದ ಕಾಳಿ ನದಿ, ಬೈಂದೂರು, ಮಲ್ಪೆ, ಮಂಗಳೂರು, ತುಂಗಭದ್ರಾ, ಕೆಆರ್‌ಎಸ್‌, ಲಿಂಗನಮಕ್ಕಿ, ಆಲಮಟ್ಟಿ ಮತ್ತು ಹಿಡಕಲ್‌ ಜಲಾಶಯಗಳಲ್ಲಿ ವಾಟರ್‌ ಏರೋಡ್ರೋಮ್ಸ್‌ ಅಭಿವೃದ್ಧಿಪಡಿಸಲು ಯೋಚಿಸಲಾಗಿತ್ತು. ಮಡಿಕೇರಿ, ಚಿಕ್ಕಮಗಳೂರು ಮತ್ತು ಹಂಪಿಯಲ್ಲಿ ಹೆಲಿಪೋರ್ಟ್‌ಗಳನ್ನು ಸ್ಥಾಪಿಸಲು ಕಾರ್ಯಸಾಧ್ಯತೆ ಮತ್ತು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವ, ಚಿಕ್ಕಮಗಳೂರು, ಹರಿಹರ, ಕುಶಾಲನಗರ, ಅಥಣಿಯಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ಚಿಂತನೆಯೂ ನಡೆದಿತ್ತು. ಆದರೆ, ಇದ್ಯಾವುದೂ ನನಸಾಗಿಲ್ಲ.

ಆರ್ಥಿಕವಾಗಿ ಲಾಭ:

ಮಹಾರಾಷ್ಟ್ರದ ಶಿರಡಿಯಲ್ಲಿರುವ ವಿಮಾನ ನಿಲ್ದಾಣವನ್ನು ಅಲ್ಲಿನ ಸರ್ಕಾರವೇ ನಿರ್ವಹಿಸುತ್ತಿದೆ. 2-3 ರಾಜ್ಯಗಳು ಇದೇ ಮಾದರಿಯನ್ನು ಅನುಸರಿಸುತ್ತಿವೆ. ರಾಜ್ಯದಲ್ಲಿಯೂ ಮುಂದಿನ ದಿನಗಳಲ್ಲಿ ನಿರ್ಮಿಸುವ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ತಾನೇ ವಹಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದರಿಂದ ಆರ್ಥಿಕವಾಗಿ ಲಾಭವಾಗಲಿದೆ ಎನ್ನುವ ಲೆಕ್ಕಾಚಾರ ಕೆಎಸ್‌ಐಐಡಿಸಿ ಅಧಿಕಾರಿಗಳದ್ದು.

ವಿಜಯಪುರ ವಿಮಾನ ನಿಲ್ದಾಣ: ನಗರ ಹೊರವಲಯದ ಬುರಾಣಪುರದಲ್ಲಿ ₹ 347.92 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ. ವಿಮಾನ ನಿಲ್ದಾಣ ಕಾಮಗಾರಿಗೆ ನಿಯಮಗಳ ಪ್ರಕಾರ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಟೆಂಡರ್ ಕರೆಯಬೇಕು. ಆದರೆ, ಹಿಂದಿನ ಬಿಜೆಪಿ ಸರ್ಕಾರ ಲೋಕೋಪಯೋಗಿ ಇಲಾಖೆಗೆ ಈ ಕೆಲಸವನ್ನು ವಹಿಸಿದೆ. ಇಲ್ಲಿ ಮೊದಲ ಹಂತದಲ್ಲಿ ₹ 216.09 ಕೋಟಿಯಲ್ಲಿ 3,050 ಮೀ. ಉದ್ದದ ರನ್ ವೇ ನಿರ್ಮಾಣ, ಪೆರಿಫೆರಲ್‌ ರಸ್ತೆ, ಏಪ್ರಾನ್, ಟ್ಯಾಕ್ಸಿವೇ, ಸಂಪರ್ಕ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಈಗಾಗಲೇ ಶೇ 84.27ರಷ್ಟು ಪ್ರಗತಿ ಆಗಿದೆ. ಪ್ರಯಾಣಿಕರ ಟರ್ಮಿನಲ್‌ ಕಟ್ಟಡ, ಎಟಿಸಿ ಕಟ್ಟಡ, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ವಾಚ್‌ ಟವರ್‌, ಯು.ಜಿ ಟ್ಯಾಂಕ್‌ ನಿರ್ಮಾಣ ಮುಂತಾದ ಕಾಮಗಾರಿಗಳ ಎರಡನೇ ಹಂತದ ₹ 86.20 ಕೋಟಿ ವೆಚ್ಚದ ಕಾಮಗಾರಿ ಶೇ 67.28ರಷ್ಟು ಪೂರ್ಣಗೊಂಡಿದೆ.

ಮೂರನೇ ಹಂತದಲ್ಲಿ (₹19.39 ಕೋಟಿ) ಎಲೆಕ್ಟ್ರೋ–ಮೆಕ್ಯಾನಿಕಲ್‌ ಸಾಧನಗಳ ಕಾಮಗಾರಿ ಶೇ 30.70ರಷ್ಟು ಪೂರ್ಣಗೊಂಡಿದೆ. ನಿಲ್ದಾಣವನ್ನು ಎಟಿಆರ್-72 ಕಿರು ವಿಮಾನ ಹಾರಾಟಕ್ಕೆ ಪೂರಕವಾದ ಕಾಮಗಾರಿಯ ಬದಲು ಏರ್‌ಬಸ್‌ 320 ವಿಮಾನಗಳ ಹಾರಾಟಕ್ಕಾಗಿ ಉನ್ನತೀಕರಿಸಿರುವುದರಿಂದ ಹೆಚ್ಚುವರಿಯಾಗಿ ₹ 127.92 ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಇಲ್ಲಿ ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಎಂ.ಬಿ. ಪಾಟೀಲ ನಿರ್ದೇಶನ ನೀಡಿದ್ದಾರೆ. ಮೂಲ ಯೋಜನೆಯಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯ ಸೇರಿರಲಿಲ್ಲ. ಈ ಸೌಲಭ್ಯ ಕಲ್ಪಿಸಲು ₹ 12 ಕೋಟಿ ಹೆಚ್ಚುವರಿ ಬೇಕಾಗಿದೆ. ಇಲ್ಲಿಂದ ವಿಮಾನ ಹಾರಾಟ ಆರಂಭವಾದರೆ, ಈ ಭಾಗದಲ್ಲಿ ಆಮದು-ರಫ್ತು ವ್ಯವಹಾರ, ವ್ಯಾಪಾರ ವಹಿವಾಟು, ಸರಕು-ಸಾಗಣೆ ವ್ಯವಸ್ಥೆ ಅಭಿವೃದ್ದಿಗೆ ಅನುಕೂಲವಾಗಲಿದೆ.

ಕಲಬುರಗಿ ವಿಮಾನ ನಿಲ್ದಾಣ:‌

ವರ್ಷದ ಹಿಂದೆಯಷ್ಟೇ ವೇಗದ ಬೆಳವಣಿಗೆಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕಲಬುರಗಿ ವಿಮಾನ ನಿಲ್ದಾಣ ಪಾತ್ರವಾಗಿತ್ತು. ವಿಮಾನಗಳ ಹಾರಾಟ ಸೇವೆಯ ಕಡಿತದಿಂದ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ. ಈ ವರ್ಷದ ಏಪ್ರಿಲ್‌ನಲ್ಲಿ ವಿಮಾನ ಹಾರಾಟ ಬೆಳವಣಿಗೆಯು ಶೇ 25.8ರಷ್ಟು ಹಾಗೂ ಪ್ರಯಾಣಿಕರ ಓಡಾಟವು ಶೇ 38.3ರಷ್ಟು ಕುಸಿದಿದೆ.

2019ರ ನವೆಂಬರ್‌ 22ರಂದು ಕಲಬುರಗಿಯಲ್ಲಿ ವಿಮಾನ ಸೇವೆ ಆರಂಭಗೊಂಡಿತ್ತು. ವಿಜಯಪುರ, ಯಾದಗಿರಿ ಜಿಲ್ಲೆಗಳು ಸೇರಿ ನೆರೆಯ ಮಹಾರಾಷ್ಟ್ರ, ತೆಲಂಗಾಣದ ಗಡಿ ಜಿಲ್ಲೆಗಳ ಜನರಿಗೂ ಅನುಕೂಲವಾಗಿ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಬುನಾದಿ ಹಾಕಿತ್ತು. ಸಮೀಪದ ಬೀದರ್ ಮತ್ತು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಆರ್‌ಜಿಐಎ) ಕಲಬುರಗಿ ನಿಲ್ದಾಣದ ಪ್ರಗತಿಗೆ ಅಡ್ಡಿಯಾಗುತ್ತಿವೆ.

ಆರ್‌ಜಿಐಎ: ಆರ್‌ಜಿಐಎ ವಿಮಾನ ನಿಲ್ದಾಣವು ಸಮೀಪದಲ್ಲಿ ಇರುವುದರಿಂದ ಬೆಂಗಳೂರು, ಮುಂಬೈ, ಅಹಮದಾಬಾದ್‌ನಂಥ ಮೆಟ್ರೊ ನಗರದಿಂದ ಕಲಬುರಗಿಗೆ ವಿಮಾನ ಕಾರ್ಯಾಚರಣೆಗೆ ಅನುಮತಿಸುತ್ತಿಲ್ಲ ಎಂಬ ಮಾತೂ ಇದೆ. ಒಂದು ವಿಮಾನ ನಿಲುಗಡೆಯಾದರೆ ಆರ್‌ಜಿಐಎಗೆ ಲಕ್ಷಾಂತರ ರೂಪಾಯಿ ನಷ್ಟ ಆಗುತ್ತದೆ ಎಂಬ ಲೆಕ್ಕಚಾರದಿಂದ ನೈಟ್‌ ಲ್ಯಾಂಡಿಂಗ್ ಅನುಮತಿ ಸಿಕ್ಕರೂ ಕಲಬುರಗಿಯಲ್ಲಿ ರಾತ್ರಿ ವಿಮಾನ ಕಾರ್ಯಾಚರಣೆಗೆ ಸೇವಾ ಸಂಸ್ಥೆಗಳು ಮುಂದೆ ಬರುತ್ತಿಲ್ಲ.

‘ಈಚೆಗೆ ರಾತ್ರಿ ವಿಮಾನ ನಿಲುಗಡೆ ಸೇವೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದೆ. ಅದರ ಸೇವೆ ಪಡೆಯಲು ವಿಮಾನಯಾನ ಸಂಸ್ಥೆಗಳನ್ನು ಆಹ್ವಾನಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ನಾಗರಿಕ ವಿಮಾನಯಾನ ಸಚಿವರ ಮೇಲೆ ಒತ್ತಡ ತಂದು ನೈಟ್‌ ಲ್ಯಾಂಡಿಂಗ್‌ ಸೇವೆ ಸದ್ಬಳಕೆ ಮಾಡಿಕೊಳ್ಳಬೇಕು’ ಎನ್ನುತ್ತಾರೆ ಕಲಬುರಗಿಯ ನಿವೃತ್ತ ಎಂಜಿನಿಯರ್ ವೆಂಕಟೇಶ್ ಮುದಗಲ್.

ಹುಬ್ಬಳ್ಳಿ ವಿಮಾನ ನಿಲ್ದಾಣ:

ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರ‌ ಹುಬ್ಬಳ್ಳಿಯಲ್ಲಿ 1989ರಲ್ಲಿ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಗೊಂಡಿತು. ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಿದು. ಆರಂಭದಲ್ಲಿ ಖಾಸಗಿ ಕಂಪನಿ ನಿರ್ವಹಿಸಿತ್ತು. 1994ರಲ್ಲಿ ಎಎಐ‌ ವಹಿಸಿಕೊಂಡಿತು. ಇಲ್ಲಿಂದ ಬೆಂಗಳೂರು, ನವದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್‌ ಹಾಗೂ ಪುಣೆಗೆ ವಿಮಾನ ಸೇವೆ ಇದೆ. ರಾತ್ರಿ ವೇಳೆ ಹಾರಾಟಕ್ಕೂ ವ್ಯವಸ್ಥೆ ಇದೆ. ನಿಲ್ದಾಣದಲ್ಲಿ ₹ 43 ಕೋಟಿ ವೆಚ್ಚದಲ್ಲಿ ಎಂಟು ಮೆಗಾ ವಾಟ್‌ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯದ ಘಟಕ ಸ್ಥಾಪಿಸಲಾಗಿದ್ದು, ವಿಮಾನ ನಿಲ್ದಾಣಕ್ಕೆ ವಿದ್ಯುತ್‌ ಪೂರೈಸಲಾಗುತ್ತಿದೆ.

‘ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ದರ್ಜೆಗೇರಿಸಲು ಸರ್ಕಾರ ಒಪ್ಪಿಗೆ ನೀಡಿದೆ. 20 ಸಾವಿರ ಚದರ ಮೀಟರ್‌ ವಿಸ್ತಾರದ ಆಡಳಿತ ಕಚೇರಿ ಕಟ್ಟದ ನಿರ್ಮಾಣ ಮುಂದಿನ ಫೆಬ್ರುವರಿ ವೇಳೆಗೆ ಪೂರ್ಣಗೊಳ್ಳಲಿದೆ. 2025ರ ವೇಳೆಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ರೂಪುಗೊಳ್ಳಲಿದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ್‌ ಠಾಕ್ರೆ ಹೇಳಿದರು. ಈ ನಿಲ್ದಾಣ ಪ್ರಗತಿಯ ಪಥದಲ್ಲಿದೆ.

ಮೈಸೂರು ವಿಮಾನ ನಿಲ್ದಾಣ:

ಬೆಂಗಳೂರು–ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಯ ಬಳಿಕ, ಈ ನಗರಗಳ ಮಧ್ಯೆ ವಿಮಾನ ಬಳಕೆದಾರರ ಸಂಖ್ಯೆ ಇಳಿಕೆಯಾಗಿದೆ. ಹೆದ್ದಾರಿ ಮೂಲಕ ಬೆಂಗಳೂರಿಗೆ ಎರಡು ತಾಸಿನಲ್ಲಿ ಪ್ರಯಾಣಿಸಬಹುದು. ಬೆಂಗಳೂರು ನಗರದಿಂದ ಕೆಂಪೇಗೌಡ ವಿಮಾನನಿಲ್ದಾಣಕ್ಕೆ ಪ್ರಯಾಣಿಸಲು ಒಂದೂವರೆ ಗಂಟೆ ವ್ಯಯಿಸಬೇಕು!

ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣದಿಂದ ಚೆನ್ನೈ, ಹೈದರಾಬಾದ್‌ ಹಾಗೂ ಗೋವಾಗೆ ವಿಮಾನಗಳ ಹಾರಾಟ ನಡೆಯುತ್ತಿದೆ. ನಿತ್ಯ ಮೂರು ವಿಮಾನಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಬಳಕೆದಾರರ ಸಂಖ್ಯೆಯು 2022–23ರ ಅವಧಿಯಲ್ಲಿ ಶೇ 80.3ರಷ್ಟು ಏರಿಕೆಯಾಗಿದೆ.

‘2022ರ ಅಕ್ಟೋಬರ್‌ನಿಂದ ಕೊಚ್ಚಿಗೆ ತೆರಳುತ್ತಿದ್ದ ಎರಡು ವಿಮಾನ, ಬೆಳಗಾವಿಗೆ ತೆರಳುತ್ತಿದ್ದ ‘ಟ್ರೂಜೆಟ್‌’ ವಿಮಾನ  ರದ್ದಾಗಿದೆ. ಮಂಗಳೂರಿಗೆ ವಿಮಾನ ಸೇವೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಇದರ ಹೊರತಾಗಿಯೂ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ’ ಎನ್ನುತ್ತಾರೆ ವಿಮಾನ ನಿಲ್ದಾಣದ ನಿರ್ದೇಶಕ ಜೆ.ಆರ್‌.ಅನೂಪ್‌.

3.5 ಕಿ.ಮೀ.ನಷ್ಟು ರನ್‌ವೇ ವಿಸ್ತರಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಕೆಐಎಡಿಬಿ ಮೂಲಕ 91 ಎಕರೆ ಭೂಮಿ ಗುರುತಿಸಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರವು ಕೆಐಎಡಿಬಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಅಧಿಸೂಚನೆ ಹೊರಡಿಸುವ ಕೆಲಸಗಳು ನಡೆಯಲಿವೆ.

‘2.75 ಕಿ.ಮೀ. ರನ್‌ ವೇ ವಿಸ್ತರಿಸಲು ಮೂಲ ಯೋಜನೆಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಅದಕ್ಕಾಗಿ 240 ಎಕರೆ ಭೂಮಿ ಬೇಕೆಂದು ಅಂದಾಜಿಸಲಾಗಿತ್ತು. ಅದರಲ್ಲಿ 160 ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಟರ್ಮಿನಲ್ ನಿರ್ಮಾಣಕ್ಕಾಗಿ ಗುರುತಿಸಿದ್ದ 46 ಎಕರೆ ಭೂಮಿ ಸ್ವಾಧೀನಕ್ಕೆ ಅಗತ್ಯವಿರುವ ಅನುದಾನಕ್ಕಾಗಿ ಸಂಬಂಧಿಸಿದ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’  ಎಂದು ಅವರು ವಿವರಿಸುತ್ತಾರೆ.

ಹಾಸನ ವಿಮಾನ ನಿಲ್ದಾಣ:

ವಿಮಾನ ನಿಲ್ದಾಣ ಕಾಮಗಾರಿಗೆ 1996ರಲ್ಲಿ ಎಚ್.ಡಿ. ದೇವೇಗೌಡ ಅವರು ಭೂಮಿಪೂಜೆ ನಡೆಸಿದ್ದರು. ನಂತರ 2012ರಲ್ಲಿ ಯೋಜನೆಯನ್ನು ಪರಿಷ್ಕರಿಸಲಾಗಿದ್ದು, 2021ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ, ವಿಮಾನ ನಿಲ್ದಾಣಕ್ಕೆ ₹ 193 ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. ಒಟ್ಟು ₹193.65 ಕೋಟಿ ಅಂದಾಜು ವೆಚ್ಚದ ಯೋಜನೆ ತಯಾರಿಸಲಾಗಿದೆ. ಅದರಲ್ಲಿ ರನ್‌ ವೇ, ಟರ್ಮಿನಲ್‌ ಬಿಲ್ಡಿಂಗ್‌, ಎಟಿಸಿ ಬಿಲ್ಡಿಂಗ್‌, ಕಾಂಪೌಂಡ್‌ ಮತ್ತು ಹೈಟೆನ್ಷನ್‌ ವಿದ್ಯುತ್‌ ಲೈನ್‌ ಸ್ಥಳಾಂತರ ಸೇರಿವೆ.‌ ಈವರೆಗೆ ₹ 40 ಕೋಟಿ ಬಿಡುಗಡೆಯಾಗಿದೆ. ಹೈಟೆನ್ಷನ್ ವಿದ್ಯುತ್‌ ಲೈನ್‌ ಸ್ಥಳಾಂತರ ಕೆಲಸವೂ ನಡೆಯುತ್ತಿದೆ.

ವಿಮಾನ ನಿಲ್ದಾಣದ ರನ್‌ವೇ 2,200 ಮೀ ಉದ್ದವಿದ್ದು, ಏರ್‌ಬಸ್‌ 320 ವಿಮಾನ ಇಳಿಯಲು 3 ಸಾವಿರ ಮೀಟರ್‌ವರೆಗೂ ರನ್‌ವೇ ವಿಸ್ತರಿಸಲು ಅವಕಾಶ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಎಟಿಆರ್‌ ಮಾದರಿ ವಿಮಾನ ಇಳಿಯಲು 2,200 ಮೀಟರ್‌ ರನ್‌ ವೇ ನಿರ್ಮಾಣವಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಹಾಗೂ ಬಿಜೆಪಿ ಮಧ್ಯೆ ಸಮರ ನಡೆಯುತ್ತಿದೆ. ಈ ಮಧ್ಯೆ, ಹಾಸನ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿಕೆ ನೀಡಿದ್ದಾರೆ.

2023 ರ ಡಿಸೆಂಬರ್ ಅಂತ್ಯದ ವೇಳೆಗೆ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಷ್ಟರಲ್ಲಿ ಕಾಮಗಾರಿ ಮುಗಿಯುವ ಸಾಧ್ಯತೆ ಕಡಿಮೆ ಎನ್ನುವುದು ಉದ್ಯಮಿಗಳ ಮಾತು.

ಬೆಳಗಾವಿ ವಿಮಾನ ನಿಲ್ದಾಣ:

ಬೆಳಗಾವಿಯ ಸಾಂಬ್ರಾದಲ್ಲಿರುವ ವಿಮಾನ ನಿಲ್ದಾಣ ಹೆಚ್ಚು ಸಕ್ರಿಯವಾಗಿದೆ. ಕೈಗಾರಿಕೆಗಳು, ಸಕ್ಕರೆ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಇರುವ ಕಾರಣಕ್ಕೆ ‌ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಬೆಂಗಳೂರು, ನವದೆಹಲಿ, ಪುಣೆ, ಸೂರತ್, ಅಹಮದಾಬಾದ್, ಜೋಧಪುರ, ಮುಂಬೈ, ನಾಸಿಕ್, ನಾಗ್ಪುರ, ಇಂದೋರ್, ತಿರುಪತಿ ಹಾಗೂ ಹೈದರಾಬಾದ್‌ಗೆ ವಿಮಾನಯಾನ ಸಂಪರ್ಕವಿದೆ.

‘ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಹಿಂದಿನ ಸರ್ಕಾರ ನಿರ್ಧರಿಸಿತ್ತು. ಇದಕ್ಕಾಗಿ 100 ಎಕರೆ ಜಮೀನು ಅಗತ್ಯ ಎಂದು ಅಂದಾಜಿಸಲಾಗಿದೆ. ಅಗತ್ಯವಿದ್ದರೆ ಅದಕ್ಕಿಂತ ಹೆಚ್ಚೂ ಆಗಬಹುದು. ಈ ಬಗ್ಗೆ ಕೆಐಎಡಿಬಿ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆ ಬಾಕಿ ಇದೆ’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದ್ದಾರೆ.

ಟೇಕಾಫೇ ಆಗಿಲ್ಲ!:

ಬಳ್ಳಾರಿ ನಗರದಿಂದ 15 ಕಿ.ಮೀ ದೂರದಲ್ಲಿರುವ ಚಾಗನೂರು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣ 13 ವರ್ಷ ಕಳೆದರೂ ಟೇಕಾಫ್ ಆಗಿಲ್ಲ. ಸುಮಾರು 892 ಎಕರೆ ಕೃಷಿ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿದೆ. ಖಾಲಿ ಬಿದ್ದ ಜಮೀನು ಬಿಟ್ಟರೆ ಇಲ್ಲಿ ಯಾವ ಕಟ್ಟಡವೂ ತಲೆ ಎತ್ತಿಲ್ಲ. ವಿಮಾನ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು 2010ರ ಆಗಸ್ಟ್‌ 6ರಂದು ಚೆನ್ನೈ ಮೂಲದ ‘ಮಾರ್ಗ್‌’ ಸಂಸ್ಥೆ ಜತೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಈ ಸಂಸ್ಥೆ ನಿರ್ಮಾಣ ಕಾರ್ಯ ಆರಂಭಿಸದ ಕಾರಣ ಒಪ್ಪಂದವನ್ನು ರದ್ದುಗೊಳಿಸಿ, ಸ್ಪರ್ಧಾತ್ಮಕ ಬಿಡ್‌ ಪ್ರಕ್ರಿಯ ಪ್ರಕಾರ ಇಪಿಸಿ (ಎಂಜಿನಿಯರಿಂಗ್, ಪ್ರೊಕ್ಯುರ್‌ಮೆಂಟ್ ಆ್ಯಂಡ್ ಕನ್‌ಸ್ಟ್ರಕ್ಷನ್‌) ಮಾದರಿಯಲ್ಲಿ ಕೆಎಸ್‌ಐಐಡಿಸಿ ಮೂಲಕ ಅನುಷ್ಠಾನಗೊಳಿಸಲು 2022ರ ನ. 16ರಂದು ಆದೇಶ ನೀಡಲಾಗಿದೆ.

ಇನ್ನು ಕೊಪ್ಪಳ ತಾಲ್ಲೂಕಿನ ಟಣಕನಕಲ್‌ ಗ್ರಾಮದ ಬಳಿ ಹೊಸ ವಿಮಾನ ನಿಲ್ದಾಣಕ್ಕೆ ಜಿಲ್ಲಾಡಳಿತ 605 ಎಕರೆ ಜಾಗ ಗುರುತಿಸಿದೆ. ಈ ಬಗ್ಗೆ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಇಲ್ಲಿ ವಿಮಾನ ನಿಲ್ದಾಣವಾದರೆ ಐತಿಹಾಸಿಕ ಆನೆಗೊಂದಿ, ಅಂಜನಾದ್ರಿ ಪರ್ವತ, ಹುಲಿಗೆಮ್ಮ ದೇವಸ್ಥಾನ, ಗವಿ ಸಿದ್ಧೇಶ್ವರ ಮಠ, ತುಂಗಭದ್ರಾ ಜಲಾಶಯ, ಹಂಪಿಯತ್ತ ಪ್ರವಾಸಿಗರು ಬರಬಹುದು, ಕೈಗಾರಿಕೆ, ಆಟಿಕೆ ಕ್ಲಸ್ಟರ್‌ ಅಭಿವೃದ್ಧಿ ಆಗಬಹುದು ಎನ್ನುವುದು ಈ ಭಾಗದ ಜನರ ನಿರೀಕ್ಷೆ.

ಕಲಬುರ್ಗಿ, ಮೈಸೂರು, ಬೆಳಗಾವಿ, ಹುಬ್ಬಳ್ಳಿಯಂತಹ ಕೆಲ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳ ಮೇಲ್ದರ್ಜೆಗೆ ಏರಿಸುವ ಕೆಲಸವನ್ನಾದರೂ ಆದ್ಯತೆಯ ಮೇಲೆ ಪೂರ್ಣಗೊಳಿಸಿದರೆ ಕೈಗಾರಿಕೆ, ಐ.ಟಿ ಬೆಳವಣಿಗೆ, ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿ ಆರ್ಥಿಕ ಬೆಳವಣಿಗೆ ಹೆಚ್ಚಾಗುತ್ತದೆ.

ಶಿವಮೊಗ್ಗ ವಿಮಾನ ನಿಲ್ದಾಣದ ನೋಟ
ಶಿವಮೊಗ್ಗ ವಿಮಾನ ನಿಲ್ದಾಣದ ನೋಟ
ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ    ಚಿತ್ರ: ರಾಜು ಢವಳಗಿ (ಪುಟ 1ಕ್ಕೆ)
ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ    ಚಿತ್ರ: ರಾಜು ಢವಳಗಿ (ಪುಟ 1ಕ್ಕೆ)

ರಾಜ್ಯದಲ್ಲಿ ವಿಮಾನ ನಿಲ್ದಾಣ ಯೋಜನೆಗಳ ಪ್ರಗತಿ

ಒಳನೋಟ: ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಏರ್‌ಪೋರ್ಟ್ ಟೇಕಾಫ್‌ಗೇ ಗ್ರಹಣ

ಕಾಮಗಾರಿಯಲ್ಲಿ ವಿಳಂಬವಿಲ್ಲ: ಎಂ.ಬಿ.ಪಾಟೀಲ

* ರಾಜ್ಯದಲ್ಲಿ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಆಮೆಗತಿಯಲ್ಲಿದೆ. ಯಾಕೆ? ಇದು ತಪ್ಪು ಅಭಿಪ್ರಾಯ. ನಿರೀಕ್ಷೆ ಪ್ರಕಾರ ಯಾವುದೇ ವಿಳಂಬ ಇಲ್ಲದೆ ಕಾಮಗಾರಿಗಳು ಪ್ರಗತಿಯಲ್ಲಿವೆ. ನಾನು ಅಧಿಕಾರ ವಹಿಸಿಕೊಂಡ ಎರಡು ತಿಂಗಳಲ್ಲೇ ನಾಲ್ಕು ಸಭೆಗಳನ್ನು‌ ಮಾಡಿದ್ದೇನೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿವೆ.

* ಕೈಗಾರಿಕೆ ಪ್ರವಾಸೋದ್ಯಮ ವಲಯಕ್ಕೆ ಉತ್ತೇಜನ ನೀಡಲು ವಿಮಾನ ಯಾನ ಸೌಲಭ್ಯ ಪೂರಕ ಅಲ್ಲವೇ? ಇದು ನಿಜ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೂರಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಎಲ್ಲಿ ವಿಮಾನ ನಿಲ್ದಾಣ ಮಾಡಿದರೆ ಹೇಗೆ ಅನುಕೂಲ ಆಗುತ್ತದೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡೇ ವಿಮಾನ ನಿಲ್ದಾಣಗಳ ಏರ್‌ಸ್ಟ್ರಿಪ್‌ಗಳ ನಿರ್ಮಾಣ ನಡೆಯುತ್ತಿದೆ.

* ಶಿವಮೊಗ್ಗ ವಿಮಾನ ನಿಲ್ದಾಣ ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿ ವಿಮಾನ ನಿಲ್ದಾಣಗಳ ಕಾಮಗಾರಿ ವಿಳಂಬವಾಗಲು ಕಾರಣಗಳೇನು? ವಿಜಯಪುರ ಮತ್ತು ಹಾಸನ ವಿಮಾನ ನಿಲ್ದಾಣಗಳ ಕಾಮಗಾರಿ ಯೋಜನೆ ಪ್ರಕಾರ ನಡೆಯುತ್ತಿದೆ. ವಿಜಯಪುರದಲ್ಲಿ ಡಿಸೆಂಬರ್ ವೇಳೆಗೆ ಪೂರ್ಣ ಆಗಲಿದೆ. ನಂತರ ಹಾರಾಟಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕಾಗುತ್ತದೆ. ಹಾಸನ‌ದಲ್ಲಿಯೂ ಕಾಮಗಾರಿ ಪ್ರಗತಿಯಲ್ಲಿದೆ. ರಾಯಚೂರು ವಿಮಾನ ನಿಲ್ದಾಣದ್ದು ಪ್ರಾಥಮಿಕ ‌ಹಂತದಲ್ಲಿದೆ.

* ಧರ್ಮಸ್ಥಳ ಕೊಡಗು ಚಿಕ್ಕಮಗಳೂರಿನಲ್ಲಿ ಏರ್‌ಸ್ಟ್ರಿಪ್ ನಿರ್ಮಿಸುವ ಬಗ್ಗೆ? ಈ ಬಾರಿಯ ಬಜೆಟ್‌ನಲ್ಲಿ ಇವು ಘೋಷಣೆಯಾಗಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಕೆಎಸ್‌ಐಐಡಿಸಿ ಅಧಿಕಾರಿಗಳು ಪತ್ರ ಬರೆದಿದ್ದು ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಕೋರಲಾಗಿದೆ. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 49 ಎಕರೆ ಜಾಗ ಗುರುತಿಸಿದ್ದು ಇನ್ನೂ 110 ಎಕರೆ ಹೆಚ್ಚುವರಿಯಾಗಿ ಕೇಳಲಾಗಿದೆ. ಧರ್ಮಸ್ಥಳದಲ್ಲೂ ಜಾಗ ಗುರುತಿಸಿದ್ದು ಅರಣ್ಯ ಇಲಾಖೆ ಹಂತದಲ್ಲಿ ಚರ್ಚೆಗಳು ನಡೆಯುತ್ತಿವೆ.

‘ರನ್‌ ವೇ ವಿಸ್ತರಣೆಯಿಂದ ವೆಚ್ಚ ದುಪ್ಪಟ್ಟು...’

‘ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೂರು ಕಿ.ಮೀ ಉದ್ದ 45 ಮೀಟರ್‌ ಅಗಲದ ರನ್‌ ವೇ ನಿರ್ಮಾಣಕ್ಕೆ ₹ 270 ಕೋಟಿ ಖರ್ಚು ತೋರಿಸಲಾಗಿದೆ. ಪ್ರತೀ ಕಿ.ಮೀಗೆ ₹ 90 ಕೋಟಿ ವ್ಯಯಿಸಲಾಗಿದೆ. ಅದರಲ್ಲಿ ಇನ್ನೂ ₹ 21.85 ಕೋಟಿ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಬೇಕಿದೆ. ವಿಮಾನ ನಿಲ್ದಾಣದ ಕಟ್ಟಡಕ್ಕೆ ₹ 40 ಕೋಟಿ ವೆಚ್ಚ ಮಾಡಲಾಗಿದೆ. ವಿಮಾನ ನಿಲ್ದಾಣದ ನಿರ್ಮಾಣಕ್ಕೆ ನಿಗದಿತ ವೆಚ್ಚಕ್ಕಿಂತ ದುಪ್ಪಟ್ಟು ವ್ಯಯಿಸಲಾಗಿದೆ. ಹೊಸ ರನ್‌ವೇಗೆ ಅತೀ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಈ ಬಗ್ಗೆ ತನಿಖೆ ಆಗಬೇಕು’ ಎಂದು ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಮಂಜುನಾಥ ಭಂಡಾರಿ ಅಧಿವೇಶನದಲ್ಲಿ ಆಗ್ರಹಿಸಿದ್ದಾರೆ. ‘ಹಳೆಯ ರನ್ ವೇಯನ್ನು ಎಟಿಆರ್-72 ಮಾದರಿ ವಿಮಾನಗಳ ಹಾರಾಟಕ್ಕೆ ಅನುವಾಗುವಂತೆ 2050 ಮೀಟರ್‌ ಉದ್ದ 30 ಮೀಟರ್ ಅಗಲಕ್ಕೆ ವಿನ್ಯಾಸಗೊಳಿಸಲಾಗಿತ್ತು. ನಂತರ ಬೋಯಿಂಗ್‌ ವಿಮಾನ ಇಳಿಯಲು ಅನುಕೂಲವಾಗುವಂತೆ 45 ಮೀ. ಅಗಲ 3050 ಮೀ. ಉದ್ದಕ್ಕೆ ಬದಲಿಸಲಾಗಿದೆ. ಹೀಗಾಗಿ ವೆಚ್ಚದಲ್ಲಿ ಏರಿಕೆಯಾಗಿದೆ. ಅವ್ಯವಹಾರ ಆರೋಪದ ತನಿಖೆ ನಡೆಸಲಾಗುವುದು’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT