ಸೋಮವಾರ, ಮೇ 23, 2022
30 °C
ಕೈಗಾರಿಕಾ ಸಂಬಂಧಗಳ ಸಂಹಿತೆಗೆ ಕಾರ್ಮಿಕ ಸಂಘಟನೆಗಳ ಆಕ್ಷೇಪ

ಆಳ–ಅಗಲ: ಕಾರ್ಮಿಕ ಸಂಹಿತೆಯ ಸುತ್ತಮುತ್ತ

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

ಕಾರ್ಮಿಕ ಸಂಹಿತೆಯನ್ನು ವಿರೋಧಿಸಿ 2020ರ ಜನವರಿ 8ರಂದು ಬಿಹಾರದ ಪಟ್ನಾದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರು.

ನಾಲ್ಕೂ ಕಾರ್ಮಿಕ ಸಂಹಿತೆಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ವರ್ಷದ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿದ್ದವು. 2019ರ ಚಳಿಗಾಲದ ಅಧಿವೇಷನದಲ್ಲಿ ಈ ಸಂಹಿತೆಯನ್ನು ಮಂಡಿಸಿದ್ದಾಗ ವಿಪಕ್ಷಗಳಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. 2020ರ ಜನವರಿ 8ರಂದು ದೇಶದಾದ್ಯಂತ ಪ್ರತಿಭಟನೆಯನ್ನೂ ನಡೆಸಿದ್ದವು. ಆರ್‌ಎಸ್‌ಎಸ್‌ನ ಕಾರ್ಮಿಕ ಘಟಕ ಭಾರತೀಯ ಮಜ್ದೂರ್ ಸಂಘವು ಈ ಸಂಬಂಧ ಕೇಂದ್ರ ಸರ್ಕಾರದ ಪ್ರತಿನಿಧಿಗಳ ಜತೆ ದೆಹಲಿಯಲ್ಲಿ ದೀರ್ಘಾವಧಿಯ ಚರ್ಚೆ ನಡೆಸಿತ್ತು. ಕೇಂದ್ರ ಸರ್ಕಾರ ತರಲು ಹೊರಟಿರುವ ನಾಲ್ಕೂ ಕಾರ್ಮಿಕ ಸಂಹಿತೆಯನ್ನು ಭಾರತೀಯ ಮಜ್ದೂರ್ ಸಂಘ ಧಿಕ್ಕರಿಸಿತ್ತು. ತೀವ್ರ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದ ಸಂದರ್ಭದಲ್ಲೇ ಕೋವಿಡ್ ಬಂದ ಕಾರಣ ಪ್ರತಿಭಟನೆಗಳು ಸ್ಥಗಿತವಾಗಿದ್ದವು. ಮೇ 20ರಂದು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದರೂ, ಪ್ರತಿಭಟನೆಗೆ ಅವಕಾಶ ದೊರೆತಿರಲಿಲ್ಲ. ಈಗ ಕಾರ್ಮಿಕ ಸಂಘಟನೆಗಳು ಮತ್ತೆ ಹೋರಾಟ ನಡೆಸಲು ಸಿದ್ಧತೆ ನಡೆಸಿವೆ.

ಕಾರ್ಮಿಕರಿಗೆ ಸಂಬಂಧಿಸಿದ ವಿವಿಧ ಕಾಯ್ದೆಗಳನ್ನು ಒಗ್ಗೂಡಿಸಿ ನಾಲ್ಕು ಸಂಹಿತೆಗಳು ರಚನೆಯಾಗಲಿವೆ. ಅದಕ್ಕೆ ಸಂಬಂಧಿಸಿದ ಮೂರು ಮಸೂದೆಗಳಿಗೆ ಸಂಸತ್ತಿನ ಮುಂಗಾರು ಅಧಿವೇಶನವು ಒಪ್ಪಿಗೆ ನೀಡಿದೆ. ಒಂದು ಮಸೂದೆಯು ಕಳೆದ ವರ್ಷವೇ ಅನುಮೋದನೆ ಪಡೆದಿದೆ. ‘ಕೈಗಾರಿಕಾ ಸಂಬಂಧಗಳ ಸಂಹಿತೆ, 2020’ ಈ ಮಸೂದೆಗಳಲ್ಲಿ ಒಂದು. ಈಗ ಅಂಗೀಕಾರ ಆಗಿರುವ ಮೂರು ಮಸೂದೆಗಳ ಪೈಕಿ ಇದು ಮಹತ್ವದ್ದು ಎನ್ನಲಾಗುತ್ತಿದೆ. ಈ ಮಸೂದೆಗಳಿಗೆ ಕಾರ್ಮಿಕ ಸಂಘಟನೆಗಳ ವಿರೋಧವೂ ವ್ಯಕ್ತವಾಗಿದೆ.

ಕೈಗಾರಿಕೆಗಳು, ಅವುಗಳ ಸ್ಥಾಪನೆ, ವ್ಯಾಜ್ಯಗಳು, ಕಾರ್ಮಿಕ ಸಂಘಟನೆಗಳು, ಪ್ರತಿಭಟನೆಯ ಹಕ್ಕು ಮೊದಲಾದವುಗಳಿಗೆ ಸಂಬಂಧಿಸಿದ ನಿಯಮಗಳನ್ನು ‘ಕೈಗಾರಿಕಾ ಸಂಬಂಧಗಳ ಸಂಹಿತೆ–2020’ ಒಳಗೊಂಡಿದೆ. 1926ರ ಕಾರ್ಮಿಕ ಸಂಘಟನೆಗಳ ಕಾಯ್ದೆ, 1947ರ ಕೈಗಾರಿಕಾ ವ್ಯಾಜ್ಯಗಳ ಕಾಯ್ದೆ ಮತ್ತು 1946ರ ಕೈಗಾರಿಕಾ ಉದ್ಯೋಗಗಳ ಕಾಯ್ದೆಯನ್ನು ಒಟ್ಟುಗೂಡಿಸಿ ‘ಕೈಗಾರಿಕಾ ಸಂಬಂಧಗಳ ಸಂಹಿತೆ–2020’ ಅನ್ನು ರೂಪಿಸಲಾಗಿದೆ.

ಈ ಮೂರೂ ಕಾಯ್ದೆಗಳಲ್ಲಿ ಇಲ್ಲದೇ ಇದ್ದ ಹಲವಾರು ಅಂಶಗಳನ್ನು ನೂತನ ಸಂಹಿತೆಯಲ್ಲಿ ಸೇರಿಸಲಾಗಿದೆ. ಕಾರ್ಮಿಕರ ಹಕ್ಕುಗಳಿಗೆ ಸಂಬಂಧಿಸಿದಂತೆ ಮಾಲೀಕರು ಅಥವಾ ಆಡಳಿತ ಮಂಡಳಿ ಜತೆ ಕಾರ್ಮಿಕರು ನೇರವಾಗಿ ಮಾತುಕತೆ ನಡೆಸುವುದಕ್ಕೆ ಈ ಸಂಹಿತೆ ಅವಕಾಶ ಮಾಡಿಕೊಡುವುದಿಲ್ಲ. ಕಾರ್ಮಿಕ ಸಂಘಟನೆ ಮಾತ್ರವೇ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸುವ ಹಕ್ಕು ಪಡೆಯುತ್ತದೆ. ಕಾರ್ಮಿಕ ಸಂಘಟನೆಗೆ ಸಂಸ್ಥೆಯ ಮಾಲೀಕ/ಆಡಳಿತ ಮಂಡಳಿ ಮಾನ್ಯತೆ ನೀಡಿದರೆ ಮಾತ್ರ, ಮಾತುಕತೆ ನಡೆಸುವ ಹಕ್ಕು ಕಾರ್ಮಿಕ ಸಂಘಟನೆಗೆ ದೊರೆಯುತ್ತದೆ.

300ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಸಂಸ್ಥೆ/ಉದ್ದಿಮೆ/ಕೈಗಾರಿಕೆಗಳಿಗೆ ಸರ್ಕಾರದ ಅನುಮತಿ ಪಡೆಯದೇ ಕಾರ್ಮಿಕರನ್ನು ತೆಗೆದುಹಾಕುವ ಮತ್ತು ಉದ್ದಿಮೆಯನ್ನು ಮುಚ್ಚುವ ಅಧಿಕಾರ ವನ್ನು ಈ ಸಂಹಿತೆ ನೀಡುತ್ತದೆ. ಈವರೆಗೆ 100ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಉದ್ದಿಮೆಗಳಿಗೆ ಮಾತ್ರವೇ ಇಂತಹ ಅಧಿಕಾರ ಇತ್ತು. ಈಗ ಕಾರ್ಮಿಕರ ಮಿತಿಯನ್ನು 300ಕ್ಕೆ ಹೆಚ್ಚಿಸಲಾಗಿದೆ. ಈ ಮಿತಿಯನ್ನು ಬದಲಿಸಲು ರಾಜ್ಯ ಸರ್ಕಾರಗಳಿಗೂ ಈ ಸಂಹಿತೆ ಅಧಿಕಾರ ನೀಡುತ್ತದೆ.

ಮುಷ್ಕರಕ್ಕೆ ನಿಯಂತ್ರಣ
ಖಾಸಗಿ ವಲಯದ ಉದ್ದಿಮೆ ಮತ್ತು ಕೈಗಾರಿಕೆಗಳ ಕಾರ್ಮಿಕರು ಮುಷ್ಕರ ನಡೆಸುವುದಕ್ಕೆ ಸಂಬಂಧಿಸಿ ‘ಕೈಗಾರಿಕಾ ಸಂಬಂಧಗಳ ಸಂಹಿತೆ, 2020’ ಕೆಲವು ನಿಯಮಗಳನ್ನು ರೂಪಿಸಿದೆ. ಈವರೆಗೆ, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮತ್ತು ಕೈಗಾರಿಕೆಗಳಿಗೆ ಈ ಸ್ವರೂಪದ ನಿಯಮಗಳು ಅನ್ವಯವಾಗುತ್ತಿದ್ದವು. ನೂತನ ಕಾರ್ಮಿಕ ಸಂಹಿತೆಯ ಮೂಲಕ ಈ ನಿಯಮಗಳನ್ನು ಖಾಸಗಿ ವಲಯಕ್ಕೂ ವಿಸ್ತರಿಸಲಾಗಿದೆ.

* ಉದ್ಯೋಗದಾತರಿಗೆ, ಮಾಲೀಕರಿಗೆ, ಆಡಳಿತ ಮಂಡಳಿಗೆ ನೋಟಿಸ್ ನೀಡದೆ ಯಾವುದೇ ಕಾರ್ಮಿಕನೂ/ಳೂ ಮುಷ್ಕರ ನಡೆಸುವಂತಿಲ್ಲ

* ಈ ಸ್ವರೂಪದ ನೋಟಿಸ್ ನೀಡಿದ 14 ದಿನದ ಒಳಗೆ ಮುಷ್ಕರ ನಡೆಸುವಂತಿಲ್ಲ

* ಸಂಧಾನದ ಅಧಿಕಾರಿಯ ಎದುರು ಪರಿಹಾರ–ರಾಜಿ ಮಾತುಕತೆಗಳು ನಡೆಯುತ್ತಿರುವ ಅವಧಿಯಲ್ಲಿ ಮುಷ್ಕರ ನಡೆಸುವಂತಿಲ್ಲ. ಪರಿಹಾರ ಮಾತುಗಳು ಅಂತಿಮವಾದ ನಂತರದ ಏಳು ದಿನಗಳಲ್ಲಿ ಮುಷ್ಕರ ನಡೆಸುವಂತಿಲ್ಲ

* ಕೈಗಾರಿಕಾ ವ್ಯಾಜ್ಯ ಪರಿಹಾರ ಮಂಡಳಿ, ರಾಷ್ಟ್ರೀಯ ಕೈಗಾರಿಕಾ ವ್ಯಾಜ್ಯ ಪರಿಹಾರ ಮಂಡಳಿಯಲ್ಲಿ ಸಂಬಂಧಿತ ವಿಷಯದ ಬಗ್ಗೆ ವಿಚಾರಣೆ ನಡೆಯುತ್ತಿರುವ ಅವಧಿಯಲ್ಲಿ ಮುಷ್ಕರ ನಡೆಸುವಂತಿಲ್ಲ. ಸಂಬಂಧಿತ ವಿಚಾರಣೆ ಪೂರ್ಣಗೊಂಡು, ಪ್ರಕರಣ ಅಂತಿಮವಾದ 60 ದಿನಗಳ ಒಳಗೆ ಮುಷ್ಕರ ನಡೆಸುವಂತಿಲ್ಲ

* ಪರಿಹಾರ ಒಪ್ಪಂದ ಮಾಡಿಕೊಂಡಿದ್ದಲ್ಲಿ, ಒಪ್ಪಂದದಲ್ಲಿ ಸೂಚಿಸಲಾದ ಅವಧಿಯಲ್ಲಿ ಮುಷ್ಕರ ನಡೆಸುವಂತಿಲ್ಲ. ಈ ಅವಧಿಯಲ್ಲಿ ಒಪ್ಪಂದದಲ್ಲಿ ಸೂಚಿಸಲಾಗಿರುವ ವಿಷಯಗಳಿಗೆ ಸಂಬಂಧಿಸಿದಂತೆ ಮುಷ್ಕರ ನಡೆಸುವಂತಿಲ್ಲ

* ಮೇಲೆ ಹೇಳಲಾದ ನಿಯಮಗಳನ್ನು ಉಲ್ಲಂಘಿಸಿ ನಡೆಸುವ ಮುಷ್ಕರ ಕಾನೂನುಬಾಹಿರ ಎನಿಸಿಕೊಳ್ಳುತ್ತದೆ. ಕಾನೂನುಬಾಹಿರ ಮುಷ್ಕರವನ್ನು ಆರಂಭಿಸುವ ಅಥವಾ ಮುಂದುವರಿಸುವ ಕಾರ್ಮಿಕನಿಗೆ ₹ 1 ಸಾವಿರದಿಂದ ₹ 10 ಸಾವಿರದವರೆಗೆ ದಂಡ ವಿಧಿಸಬಹುದು. ಇಲ್ಲವೇ 1 ತಿಂಗಳ ಜೈಲುವಾಸದ ಶಿಕ್ಷೆ ನೀಡಬಹುದು. ದಂಡ ಮತ್ತು ಜೈಲುವಾಸದ ಶಿಕ್ಷೆ ಎರಡನ್ನೂ ವಿಧಿಸಲು ಅವಕಾಶವಿದೆ

* ಕಾನೂನುಬಾಹಿರ ಮುಷ್ಕರವನ್ನು ಆರಂಭಿಸುವಂತೆ ಅಥವಾ ಮುಂದುವರಿಸುವಂತೆ ಇತರರನ್ನು ಉತ್ತೇಜಿಸುವ ಕಾರ್ಮಿಕ/ವ್ಯಕ್ತಿಗೆ ₹ 10,000ದಿಂದ ₹ 50,000ರದವರೆಗೆ ದಂಡ ವಿಧಿಸಬಹುದು. ಒಂದು ತಿಂಗಳ ಜೈಲುವಾಸವನ್ನು ವಿಧಿಸಬಹುದು. ದಂಡ ಮತ್ತು ಜೈಲುವಾಸ ಎರಡನ್ನೂ ವಿಧಿಸಲು ಅವಕಾಶವಿದೆ

* ‘ಕೈಗಾರಿಕಾ ಸಂಬಂಧಗಳ ಸಂಹಿತೆ, 2020’ಯ ಅಡಿಯಲ್ಲಿ ಮಾಡಿಕೊಳ್ಳಲಾದ ಒಪ್ಪಂದಗಳು/ಪರಿಹಾರ ಒಪ್ಪಂದಗಳನ್ನು ವ್ಯಕ್ತಿಗೆ ₹ 20 ಸಾವಿರದಿಂದ ₹ 2 ಲಕ್ಷದವರೆಗೆ ದಂಡವಿಧಿಸಲು ಅವಕಾಶವಿದೆ. ಮೂರು ತಿಂಗಳು ಜೈಲುಶಿಕ್ಷೆ ವಿಧಿಸಲು ಅವಕಾಶವಿದೆ. ಅಥವಾ ದಂಡ ಮತ್ತು ಜೈಲು ಶಿಕ್ಷೆ ಎರಡನ್ನೂ ವಿಧಿಸಲು ಅವಕಾಶವಿದೆ.

‘ಕಾರ್ಮಿಕ ಸಂಘಟನೆ, ಬಲವಿದ್ದರಷ್ಟೇ ಹಕ್ಕು’

* ಕೈಗಾರಿಕೆ/ಉದ್ಯಮಗಳಲ್ಲಿ ಕಾರ್ಮಿಕರ ಹಕ್ಕುಗಳು, ವೇತನ, ಕೆಲಸದ ಸ್ಥಳದಲ್ಲಿನ ಸವಲತ್ತುಗಳೂ ಸೇರಿದಂತೆ ಕಾರ್ಮಿಕರ ಹಿತಾಸಕ್ತಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಜತೆ ಒಂದು ಕಾರ್ಮಿಕ ಸಂಘಟನೆ ಮಾತ್ರವೇ ಮಾತುಕತೆ ನಡೆಸುವ ಅರ್ಹತೆ ಪಡೆಯುತ್ತದೆ

* ಒಂದೇ ಉದ್ದಿಮೆಯಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಮಿಕ ಸಂಘಟನೆಗಳು ಇದ್ದರೆ, ಒಟ್ಟು ಕಾರ್ಮಿಕರಲ್ಲಿ ಶೇ 51 ಮತ್ತು ಅದಕ್ಕಿಂತಲೂ ಹೆಚ್ಚು ಜನರ ಸದಸ್ಯತ್ವ ಹೊಂದಿರುವ ಸಂಘಟನೆ ಮಾತ್ರವೇ ಈ ಅರ್ಹತೆ ಪಡೆಯುತ್ತದೆ. ಈ ಅರ್ಹತೆ ಪಡೆದ ಕಾರ್ಮಿಕ ಸಂಘಟನೆ ಮಾತ್ರವೇ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸುವ ಏಕೈಕ ಏಜೆಂಟ್ ಆಗಿರುತ್ತದೆ.

* ಅದೇ ಉದ್ದಿಮೆಯಲ್ಲಿ ಅಸ್ತಿತ್ವದಲ್ಲಿ ಇರುವ, ಆದರೆ ಕಡಿಮೆ ಪ್ರಮಾಣದ ಕಾರ್ಮಿಕರ ಸದಸ್ಯತ್ವ ಹೊಂದಿರುವ ಕಾರ್ಮಿಕ ಸಂಘಟನೆಗೆ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸುವ ಹಕ್ಕು ದೊರೆಯುವುದಿಲ್ಲ.

* ಒಂದು ಉದ್ದಿಮೆಯಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಮಿಕ ಸಂಘಟನೆಗಳು ಇದ್ದು, ಯಾವ ಸಂಘಟನೆಗೂ ಶೇ 51ರಷ್ಟು ಕಾರ್ಮಿಕರ ಸದಸ್ಯತ್ವದ ಬಲ ಇಲ್ಲದಿದ್ದರೆ ಯಾವ ಸಂಘಟನೆಗೂ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸುವ ಹಕ್ಕು ದೊರೆಯುವುದಿಲ್ಲ.

* ಕಾರ್ಮಿಕ ಸಂಘಟನೆಗಳಿಗೆ ಆಡಳಿತ ಮಂಡಳಿ ಜತೆ ‘ಮಾತುಕತೆ ನಡೆಸುವ ಏಕೈಕ ಏಜೆಂಟ್’ ಸ್ಥಾನ ದೊರೆಯದೇ ಇದ್ದರೆ, ‘ಮಾತುಕತೆ ಮಂಡಳಿ’ಯನ್ನು ರಚಿಸಲಾಗುತ್ತದೆ. ಸರ್ಕಾರದ ಸಂಬಂಧಿತ ಪ್ರಾಧಿಕಾರದ ಅಧಿಕಾರಿಯು ಈ ‘ಮಾತುಕತೆ ಮಂಡಳಿ’ಯನ್ನು ರಚಿಸುವ ಅಧಿಕಾರ ಹೊಂದಿರುತ್ತಾರೆ.

* ಒಟ್ಟು ಕಾರ್ಮಿಕರ ಸಂಖ್ಯೆಯಲ್ಲಿ ಶೇ 20ಕ್ಕಿಂತಲೂ ಕಡಿಮೆ ಜನರ ಸದಸ್ಯತ್ವ ಹೊಂದಿರುವ ಕಾರ್ಮಿಕ ಸಂಘಟನೆಗೆ ಮಾತುಕತೆ ಮಂಡಳಿಯಲ್ಲಿ ಪ್ರಾತಿನಿಧ್ಯ ಇರುವುದಿಲ್ಲ.

* ಮಾತುಕತೆ ಮಂಡಳಿಯಲ್ಲಿ ಆಡಳಿತ ಮಂಡಳಿ ಸದಸ್ಯರ ಸಂಖ್ಯೆ ಮತ್ತು ಕಾರ್ಮಿಕರ ಪ್ರತಿನಿಧಿಗಳ ಸಂಖ್ಯೆ ಸಮನಾಗಿರಬೇಕು. ಕಾರ್ಮಿಕ ಸಂಘಟನೆಗಳ ಪ್ರತಿ ಶೇ 20ರಷ್ಟು ಸದಸ್ಯರಿಗೆ ಒಬ್ಬ ಪ್ರತಿನಿಧಿಯನ್ನು ಆಯ್ಕೆಮಾಡಿಕೊಳ್ಳಬಹುದು.

* ಮಾತುಕತೆ ವೇಳೆ ಕಾರ್ಮಿಕರ ಪ್ರತಿನಿಧಿಗಳ ಬಹುಮತದ ಅಭಿಪ್ರಾಯ ಅಂತಿಮವಾಗುತ್ತದೆ.

* ಈ ಮಂಡಳಿಯ ಅಧಿಕಾರಾವಧಿ ಮೂರು ವರ್ಷಗಳಾಗಿರುತ್ತದೆ. ಐದು ವರ್ಷಗಳವೆರೆಗೆ ಇದನ್ನು ವಿಸ್ತರಿಸಲೂ ಅವಕಾಶವಿದೆ

* ಕಾರ್ಮಿಕ ಸಂಘಟನೆಗಳ ಸದಸ್ಯತ್ವ ಶುಲ್ಕವನ್ನು ಸರ್ಕಾರವು ನಿರ್ಧರಿಸಬಹುದು

ಅಸಂಘಟಿತ ವಲಯಕ್ಕೂ ನಿಯಮ
ಅಸಂಘಟಿತ ವಲಯದ ಕಾರ್ಮಿಕರ ಸಂಘಟನೆಗಳ ರಚನೆಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ‘ಕೈಗಾರಿಕಾ ಸಂಬಂಧದ ಸಂಹಿತೆ’ಯಲ್ಲಿ ಸೇರಿಸಲಾಗಿದೆ. ಅಸಂಘಟಿತ ವಲಯದ ಕೈಗಾರಿಕೆಗಳು ಮತ್ತು ಉದ್ದಿಮೆಗಳ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಲ್ಲಿ ಅರ್ಧದಷ್ಟು ಜನರು, ಅದೇ ಉದ್ದಿಮೆಯಲ್ಲಿ ಉದ್ಯೋಗದಲ್ಲಿ ಇರಬೇಕು ಎಂದು ಹೊಸ ನಿಯಮ ಹೇಳುತ್ತದೆ. ಆ ಉದ್ದಿಮೆ ಅಥವಾ ಕೈಗಾರಿಕೆಯಿಂದ ನಿವೃತ್ತರಾದವರು, ಕಾರ್ಮಿಕ ಸಂಘಟನೆಯಲ್ಲಿ ಪದಾಧಿಕಾರಿಗಳ ಹುದ್ದೆ ಹೊಂದಬಹುದು ಎಂದು ನೂತನ ನಿಯಮ ಹೇಳುತ್ತದೆ.

ನಿಗದಿತ ಅವಧಿಯ ಉದ್ಯೋಗ
ಕೈಗಾರಿಕಾ ಸಂಬಂಧಗಳ ಸಂಹಿತೆಯಲ್ಲಿ ‘ನಿಗದಿತ ಅವಧಿಯ ಉದ್ಯೋಗ (ಫಿಕ್ಸ್ಡ್‌ ಟರ್ಮ್ ಎಂಪ್ಲಾಯ್ಮೆಂಟ್)’ ಎಂದು ಪರಿಕಲ್ಪನೆಯನ್ನು ಸೇರಿಸಲಾಗಿದೆ. ಕೈಗಾರಿಕೆ ಅಥವಾ ಉದ್ದಿಮೆಯ ಆಡಳಿತ ಮಂಡಳಿಯು ಉದ್ಯೋಗಾರ್ಥಿಯ ಜತೆ ನೇರವಾಗಿ ಲಿಖಿತ ಒಪ್ಪಂದ ಮಾಡಿಕೊಂಡು, ನಿಗದಿತ ಅವಧಿಯ ಉದ್ಯೋಗ ನೀಡಬಹುದು. ಅದು ಕೆಲವು ವಾರಗಳ ಅವಧಿ ಆಗಿರಬಹುದು, ಕೆಲವು ತಿಂಗಳ ಅವಧಿಯಾಗಿರಬಹುದು ಅಥವಾ ಕೆಲವು ವರ್ಷಗಳ ಅವಧಿಯಾಗಿರಬಹುದು. ಪೂರ್ಣಾವಧಿ ಕಾರ್ಮಿಕರಿಗೆ ದೊರೆಯುವಷ್ಟೇ ವೇತನ, ಭತ್ಯೆಗಳು, ಸವಲತ್ತುಗಳು ನಿಗದಿತ ಅವಧಿಯ ಉದ್ಯೋಗಿಗಳಿಗೆ ದೊರೆಯಬೇಕು. ಆದರೆ, ಕಾಯಂ ಕಾರ್ಮಿಕರಿಗೆ ಅನ್ವಯವಾಗುವ ನೋಟಿಸ್‌ ಅವಧಿ ಇವರಿಗೆ ಅನ್ವಯವಾಗುವುದಿಲ್ಲ. ಈ ಸ್ವರೂಪದ ಒಪ್ಪಂದದ ಅಡಿ ಒಂದು ವರ್ಷ ಕೆಲಸ ಮಾಡಿದ ನೌಕರ/ಕಾರ್ಮಿಕರು ಗ್ರಾಚುಯಿಟಿ ಪಡೆಯಲು ಅರ್ಹರಾಗುತ್ತಾರೆ.

ನಿಗದಿತ ಅವಧಿಯ ಉದ್ಯೋಗಕ್ಕೆ ಸಂಬಂಧಿಸಿದ ಒಪ್ಪಂದದಲ್ಲಿ ಉಲ್ಲೇಖಿಸಲಾದ ಅವಧಿ ಮುಗಿದ ಕೂಡಲೇ ಉದ್ಯೋಗವು ಕೊನೆಯಾಗುತ್ತದೆ. ಒಪ್ಪಂದವನ್ನು ನವೀಕರಿಸಿಕೊಳ್ಳುವ ಮೂಲಕ ಉದ್ಯೋಗವನ್ನು ಮುಂದುವರಿಸಬಹುದು. ಕೆಲವು ಕಾಲದ ಬಿಡುವಿನ ನಂತರ ಹೊಸದಾಗಿ ಒಪ್ಪಂದ ಮಾಡಿಕೊಂಡು, ಉದ್ಯೋಗವನ್ನು ಕೊಡಬಹುದು.

ಈ ಸ್ವರೂಪದ ನಿಗದಿತ ಅವಧಿಯ ಉದ್ಯೋಗ ಈಗ ಜವಳಿ ಮತ್ತು ಸಿದ್ಧ ಉಡುಪು ಕಾರ್ಖಾನೆ ವಲಯದಲ್ಲಿ ಮಾತ್ರವೇ ಜಾರಿಯಲ್ಲಿದೆ. ಇದನ್ನು ಖಾಸಗಿ ವಲಯದ ಎಲ್ಲಾ ಕೈಗಾರಿಕೆಗಳು ಮತ್ತು ಉದ್ಯಮಗಳಿಗೆ ವಿಸ್ತರಿಸಲಾಗುತ್ತಿದೆ.

ಸಂಹಿತೆ ವಾಪಸ್ ಪಡೆಯಿರಿ ಬಿಎಂಎಸ್‌ ಒತ್ತಾಯ
ನವದೆಹಲಿ(ಪಿಟಿಐ):
ಕೈಗಾರಿಕಾ ಸಂಬಂಧಗಳ ಮಸೂದೆಯನ್ನು ಸರ್ಕಾರವು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಆರ್‌ಎಸ್‌ಎಸ್‌ನ ಕಾರ್ಮಿಕ ಘಟಕ, ಭಾರತೀಯ ಮಜ್ದೂರ್‌ ಸಂಘ (ಬಿಎಂಎಸ್‌) ಒತ್ತಾಯಿಸಿದೆ.

‘ಕಾರ್ಮಿಕ ಸುಧಾರಣೆಯ ಹೆಸರಿನಲ್ಲಿ ಕೈಗಾರಿಕೆಗಳ ಎಲ್ಲಾ ಹೊಣೆಗಳನ್ನು ಕಾರ್ಮಿಕರ ಮೇಲೆ ಹೊರಿಸಲಾಗುತ್ತಿದೆ. ಕೈಗಾರಿಕಾ ಸಂಬಂಧಗಳ ಸಂಹಿತೆಯನ್ನು ಸರ್ಕಾರ ತಕ್ಷಣವೇ ವಾಪಸ್ ಪಡೆಯಬೇಕು. ಈ ಸಂಹಿತೆಯು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ಸಂಹಿತೆಯನ್ನು ತಕ್ಷಣವೇ ವಾಪಸ್ ಪಡೆದು, ಸಂಸದೀಯ ಸಮಿತಿಯ ಪರಿಶೀಲನೆಗೆ ಕಳುಹಿಸಬೇಕು. ಸಂಹಿತೆಯನ್ನು ಪರಿಷ್ಕರಿಸಬೇಕು’ ಎಂದು ಬಿಎಂಎಸ್‌ ಒತ್ತಾಯಿಸಿದೆ.

‘ಈ ಸಂಹಿತೆಯ ಹಲವು ಅಂಶಗಳು ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆ ತರುತ್ತವೆ. ಇದು ಕೈಗಾರಿಕಾ ವಲಯದಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಬಲವನ್ನು ಬಳಸಿಕೊಂಡು ಕಾರ್ಮಿಕರ ಬೇಡಿಕೆಗಳನ್ನು, ಮುಷ್ಕರಗಳನ್ನು ಹತ್ತಿಕ್ಕಲು ಈ ಸಂಹಿತೆ ಅವಕಾಶ ಮಾಡಿಕೊಡುತ್ತದೆ’ ಎಂದು ಬಿಎಂಎಸ್‌ ಆಕ್ಷೇಪ ವ್ಯಕ್ತಪಡಿಸಿದೆ.

‘ಕೈಗಾರಿಕೆಗಳು ಮತ್ತು ಕಾರ್ಮಿಕ ಸಂಘಟನೆಗಳ ಮಧ್ಯೆ ಸರ್ಕಾರ ಮೂಗು ತೂರಿಸಲು ಅವಕಾಶ ಮಾಡಿಕೊಡುತ್ತದೆ. ಕಾರ್ಮಿಕ ಸಂಘಟನೆಯ ಸದಸ್ಯತ್ವದ ಶುಲ್ಕವನ್ನು ನಿಗದಿ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ಕೊಡುತ್ತದೆ. ಕಾರ್ಮಿಕ ಸಂಘಟನೆಗಳಲ್ಲಿ ಹೊರಗಿನ ವ್ಯಕ್ತಿಗಳು ಪದಾಧಿಕಾರಿಗಳು ಆಗದಂತೆ ನಿರ್ಬಂಧ ಹೇರುತ್ತದೆ. ಇವೆಲ್ಲವೂ ಕಾರ್ಮಿಕ ಸಂಘಟನೆಗಳ ಆಂತರಿಕ ವಿಚಾರ. ಇವುಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸಬಾರದು‘ ಎಂದು ಬಿಎಂಎಸ್‌ ಒತ್ತಾಯಿಸಿದೆ.

ಈ ಸಂಹಿತೆ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಸಂಘಟನೆ ಹೇಳಿದೆ.

ಆಕ್ಷೇಪಗಳು
* ನೂತನ ಕಾರ್ಮಿಕ ಕಾನೂನುಗಳು ಕಾರ್ಮಿಕ ಸ್ನೇಹಿ ಅಲ್ಲ. ಬದಲಿಗೆ ಬಂಡವಾಳಶಾಹಿಗಳನ್ನು ಓಲೈಸುತ್ತದೆ

* 300ಕ್ಕಿಂತ ಕಡಿಮೆ ಕೆಲಸಗಾರರು ಇರುವ ಸಂಸ್ಥೆಯು, ಅವರನ್ನು ಕೆಲಸದಿಂದ ತೆಗೆಯಲು ಸರ್ಕಾರದ ಅನುಮತಿ ಪಡೆಯಬೇಕಿಲ್ಲ ಎಂದು ನೂತನ ಕಾನೂನು ಹೇಳುತ್ತದೆ. ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮತ್ತು ಕೆಲಸದಿಂದ ತೆಗೆಯುವ ಪ್ರಕ್ರಿಯೆಯನ್ನು ಸುಲಭ ಮಾಡಲಾಗಿದೆ. ಇದು ಉದ್ಯೋಗ ಭದ್ರತೆಗೆ ಧಕ್ಕೆ ತರುತ್ತದೆ

* ಮುಷ್ಕರ ನಡೆಸುವ ಮತ್ತು ಪ್ರತಿಭಟನೆ ನಡೆಸುವ ಕಾರ್ಮಿಕರ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ನೋಟಿಸ್ ನೀಡಿ 14 ದಿನ ಕಳೆಯುವಷ್ಟರಲ್ಲಿ ಮುಷ್ಕರ ನಡೆಯದಂತೆ ಒತ್ತಡ ಹೇರುವ, ಕಾರ್ಮಿಕರ ಒಗ್ಗಟ್ಟನ್ನು ಮುರಿಯುವ ಅಪಾಯವಿದೆ

* ಮುಷ್ಕರನಿರತ ಕಾರ್ಮಿಕರನ್ನು, ಕಾರ್ಮಿಕ ನಾಯಕರನ್ನು ಸುಲಭವಾಗಿ ಜೈಲಿಗೆ ಕಳುಹಿಸಲು ನೂತನ ಕಾನೂನು ಅವಕಾಶ ಮಾಡಿಕೊಡುತ್ತದೆ. ಮುಷ್ಕರ ನಡೆಸದ ಕಾರ್ಮಿಕರಿಗೆ ರಕ್ಷಣೆ ನೀಡಲು ಅವಕಾಶವಿದೆ. ಈ ಮೂಲಕ ಕಾರ್ಮಿಕರಲ್ಲೇ ಒಡಕು ಮೂಡಿಸಲು ಈ ಸಂಹಿತೆಯು ದಾರಿ ಮಾಡಿಕೊಡುತ್ತದೆ

* ಅಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಅದೇ ಉದ್ಯೋಗದಲ್ಲಿ ಇರಬೇಕು ಎಂಬುದು ಅವೈಜ್ಞಾನಿಕ ನಿಯಮ. ಅಸಂಘಟಿತ ವಲಯದಲ್ಲಿ ಅನಕ್ಷರಸ್ಥರೇ ಹೆಚ್ಚು. ಈ ವಲಯದಲ್ಲಿ ಕಾನೂನು ಅರಿವು ಇರುವ ಹೊರಗಿನ ವ್ಯಕ್ತಿಗಳು, ಕಾರ್ಮಿಕರ ಅವಶ್ಯಕತೆ ಇದ್ದೇ ಇರುತ್ತದೆ. ಇದನ್ನು ಈ ಕಾನೂನು ನಿರಾಕರಿಸುತ್ತದೆ

* ಯಾವ ಕಾರ್ಮಿಕ ಸಂಘಟನೆಯೂ ಶೇ 51ಕ್ಕಿಂತ ಹೆಚ್ಚು ಕಾರ್ಮಿಕರ ಸದಸ್ಯತ್ವವನ್ನು ಹೊಂದಿರುವುದು ಕಷ್ಟ ಸಾಧ್ಯ. ಶೇ 20ಕ್ಕಿಂತ ಕಡಿಮೆ ಕಾರ್ಮಿಕರ ಸದಸ್ಯತ್ವ ಇರುವ ಸಂಘಟನೆಗಳಿಗೆ ‘ಮಾತುಕತೆ ಮಂಡಳಿ’ಯಲ್ಲಿ ಪ್ರಾತಿನಿಧ್ಯವೇ ಇರುವುದಿಲ್ಲ. ಇದು ಕಾರ್ಮಿಕ ಸಂಘಟನೆಗಳನ್ನೇ ನಾಶ ಮಾಡುವ ಹುನ್ನಾರ

ಆಧಾರ: ಪಿಟಿಐ, ಬಿಎಂಎಸ್‌, ಎಐಟಿಯುಸಿ, ಐಎನ್‌ಟಿಯುಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು