ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ–ಸುದ್ದಿ: ದಿನಕ್ಕೆ 90 ಮಕ್ಕಳು ಅತ್ಯಾಚಾರಕ್ಕೆ ಬಲಿ

ಪೋಕ್ಸೊ ಪ್ರಕರಣಗಳಲ್ಲಿ ಭಾರಿ ಏರಿಕೆ
Last Updated 14 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ದೇಶದಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. 2021ರಲ್ಲಿ ದೇಶದಾದ್ಯಂತ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ– ಪೋಕ್ಸೊ’ ಅಡಿ 33,186 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ಪ್ರತಿದಿನ 90 ಮಕ್ಕಳು ಅತ್ಯಾಚಾರಕ್ಕೆ ಬಲಿಯಾಗಿದ್ದಾರೆ ಎನ್ನುತ್ತದೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊವಿನ ವರದಿ.

ದೇಶದಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. 2021ರಲ್ಲಿ ದೇಶದಾದ್ಯಂತ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ– ಪೋಕ್ಸೊ’ ಅಡಿ 33,186 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.2021ರಲ್ಲಿ ಪ್ರತಿದಿನ 90 ಮಕ್ಕಳು ಅತ್ಯಾಚಾರಕ್ಕೆ ಬಲಿಯಾಗಿದ್ದಾರೆ ಎನ್ನುತ್ತದೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊವಿನ ವರದಿ.

2017ಕ್ಕೆ ಹೋಲಿಸಿದರೆ 2021ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ ಶೇ 86ರಷ್ಟು ಏರಿಕೆಯಾಗಿದೆ. ದೇಶದಾದ್ಯಂತ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಇದು ಸೂಚಿಸುತ್ತದೆ.

2016ರಲ್ಲಿ ದೇಶದಾದ್ಯಂತ ಇಂತಹ ಒಟ್ಟು 19,920 ಪ್ರಕರಣಗಳು ದಾಖಲಾಗಿದ್ದವು. 2017ರಲ್ಲಿ ಇಂತಹ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿತ್ತು. ಆದರೆ, ನಂತರದ ವರ್ಷಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಸತತ ಏರಿಕೆಯಾಗಿದೆ. 2016ರಿಂದ 2021ರ ನಡುವೆ, 2017ರಲ್ಲೇ ಅತ್ಯಂತ ಕಡಿಮೆ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ.

ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳನ್ನು ಪೋಕ್ಸೊ ಕಾಯ್ದೆಯ 4 ಮತ್ತು 6ನೇ ಸೆಕ್ಷನ್‌ ಅಡಿ ದಾಖಲಿಸಲಾಗುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಈ ಪ್ರಕರಣಗಳನ್ನು ‘ವಿಶೇಷ ಕಾಯ್ದೆಗಳು ಮತ್ತು ಸ್ಥಳೀಯ ಕಾನೂನುಗಳು–ಎಸ್‌ಎಲ್‌ಎಲ್‌’ ವರ್ಗೀಕರಣದ ಅಡಿ, ಪಟ್ಟಿ ಮಾಡುತ್ತದೆ.

ಕರ್ನಾಟದಲ್ಲೂ ಏರಿಕೆ

ಪೋಕ್ಸೊ ಕಾಯ್ದೆಯ 4 ಮತ್ತು 6ನೇ ಸೆಕ್ಷನ್‌ ಅಡಿ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲೂ ಸತತ ಏರಿಕೆ ಕಂಡಿದೆ. 2017ರಲ್ಲಿ ರಾಜ್ಯದಲ್ಲಿ ಇಂತಹ 1,357 ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ ಇಂತಹ 2,093 ಪ್ರಕರಣಗಳು ದಾಖಲಾಗಿವೆ. 2017ಕ್ಕೆ ಹೋಲಿಸಿದರೆ 2021ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ
ಶೇ 54ರಷ್ಟು ಏರಿಕೆಯಾಗಿದೆ. 2020ಕ್ಕೆ ಹೋಲಿಸಿದರೆ 2021ರಲ್ಲಿ ಇಂತಹ ಪ್ರಕರಣಗಳ ಸಂಖ್ಯೆಯಲ್ಲಿ
ಶೇ 26ರಷ್ಟು ಏರಿಕೆಯಾಗಿದೆ.

ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಕರಣ

ದೇಶದಾದ್ಯಂತ ಪೋಕ್ಸೊ ಕಾಯ್ದೆಯ 4 ಮತ್ತು 6ನೇ ಸೆಕ್ಷನ್‌ ಅಡಿ ದಾಖಲಾದ ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲೇ ವರದಿಯಾಗಿವೆ. ದೇಶದಾದ್ಯಂತ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇ 21ರಷ್ಟು ಪ್ರಕರಣಗಳು ಈ ಎರಡು ರಾಜ್ಯಗಳಲ್ಲೇ ವರದಿಯಾಗಿವೆ.

* ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಗುಜರಾತ್‌ ರಾಜ್ಯಗಳಲ್ಲೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ

* ದೇಶದಾದ್ಯಂತ ದಾಖಲಾದ ಪ್ರಕರಣಗಳಲ್ಲಿ ಕರ್ನಾಟಕದ ಪ್ರಕರಣಗಳ ಪಾಲು ಶೇ 6.30ರಷ್ಟಿದೆ

* ರಾಜಸ್ಥಾನದಲ್ಲಿ ಪೋಕ್ಸೊ ಕಾಯ್ದೆಯ 4 ಮತ್ತು 6ನೇ ಸೆಕ್ಷನ್‌ ಅಡಿ, ಎಸ್‌ಎಲ್‌ಎಲ್‌ ವರ್ಗೀಕರಣದ ಅಡಿ ಒಂದೂ ಪ್ರಕರಣವನ್ನು ದಾಖಲಿಸಿಲ್ಲ. ಹಿಮಾಚಲ ಪ್ರದೇಶ, ಗೋವಾ, ಲಡಾಖ್‌ ಮತ್ತು ಚಂಡೀಗಡದಲ್ಲೂ ಇದೇ ಸ್ಥಿತಿ ಇದೆ

ಶೇ 21ರಷ್ಟು ಪ್ರಕರಣಗಳು ವಿಚಾರಣೆಗೆ ಬಾಕಿ

2021ರ ಅಂತ್ಯದ ವೇಳೆಗೆ, ಪೋಕ್ಸೊ ಕಾಯ್ದೆಯ ಅತ್ಯಾಚಾರ ಆರೋಪದ ಅಡಿ (ಸೆಕ್ಷನ್ 4 ಮತ್ತು 6) ದೇಶದಾದ್ಯಂತ 33,186 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಶೇ 2ರಷ್ಟು ಪ್ರಕರಣಗಳನ್ನು ವಿವಿಧ ಕಾರಣ ನೀಡಿ ವಜಾ ಮಾಡಲಾಗಿದೆ. ಸುಳ್ಳು ಪ್ರಕರಣ ಎಂಬುದಾಗಿಯೂ, ತಪ್ಪಾಗಿ ವರದಿ ಮಾಡಲಾಗಿದೆ ಎಂಬುದಾಗಿಯೂ ವಿವಿಧ ಕಾರಣಗಳನ್ನು ನೀಡಿ 676 ಪ್ರಕರಣಗಳಿಗೆ ಮುಕ್ತಾಯ ಹಾಡಲಾಗಿದೆ.

ಇದಲ್ಲದೇ, ಒಟ್ಟು ಪ್ರಕರಣಗಳ ಪೈಕಿ 478 ಪ್ರಕರಣಗಳಲ್ಲಿ ಸತ್ಯಾಂಶವಿರುವುದು ಗೊತ್ತಾಗಿದ್ದರೂ, ಅದನ್ನು ದೃಢಪಡಿಸುವ ಸಾಕ್ಷ್ಯಾಧಾರಗಳ ಕೊರತೆ ಕಂಡುಬಂದಿದೆ. ಅಂದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳು ಖುಲಾಸೆಯಾಗಿದ್ದು, ಈ ಪ್ರಕರಣಗಳನ್ನು ಕೈಬಿಡಲಾಗಿದೆ ಎಂದು ಎನ್‌ಸಿಆರ್‌ಬಿ ವರದಿ ಹೇಳುತ್ತದೆ. ಹೀಗಾಗಿಯೇ, 2021ರ ಅಂತ್ಯದ ವೇಳೆಗೆ ದಾಖಲಾದ ಒಟ್ಟು ಪ್ರಕರಣಗಳ ಪೈಕಿ 24,840 ಪ್ರಕರಣಗಳಲ್ಲಷ್ಟೇ ಪೊಲೀಸರು ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಲು ಸಾಧ್ಯವಾಗಿದೆ.

ಹಿಂದಿನ ವರ್ಷದ 22 ಪ್ರಕರಣಗಳನ್ನು ಪೊಲೀಸರು 2021ರಲ್ಲಿ ಮರು ತನಿಖೆಗೆ ಎತ್ತಿಕೊಂಡಿದ್ದಾರೆ. ಬೇರೆ ರಾಜ್ಯಗಳಿಗೆ ಸಂಬಂಧಿಸಿದ 104 ಪ್ರಕರಣಗಳನ್ನು ತನಿಖೆಗಾಗಿ ಆಯಾ ರಾಜ್ಯಗಳಿಗೆ ವರ್ಗಾವಣೆ ಮಾಡಲಾಗಿದೆ. ಪೊಲೀಸ್ ತನಿಖೆಯ ವೇಳೆ ಆರೋಪಿಗಳು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರಿಂದ 62 ಪ್ರಕರಣಗಳ ವಿಚಾರಣೆ ಸ್ಥಗಿತಗೊಂಡಿದೆ. ಒಟ್ಟಾರೆಯಾಗಿ, ಪೋಕ್ಸೊ ಕಾಯ್ದೆಯ ಅತ್ಯಾಚಾರ ಆರೋಪದ ಅಡಿಯಲ್ಲಿ ಶೇ 21ರಷ್ಟು (7,251) ಪ್ರಕರಣಗಳು ಸದ್ಯ ವಿಚಾರಣೆಗೆ ಬಾಕಿಯಿವೆ ಎಂದು ದತ್ತಾಂಶಗಳು ಹೇಳುತ್ತವೆ. ಈ ಪ್ರಕರಣಗಳ ವಿಚಾರಣೆ ತಡವಾಗುತ್ತಿರುವುದರಿಂದ, ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಬಾಲಕಿಯರಿಗೆ ಸಿಗಬೇಕಾದ ನ್ಯಾಯದಾನವೂ ವಿಳಂಬವಾಗುತ್ತಿದೆ.

ಆಧಾರ: ಎನ್‌ಸಿಆರ್‌ಬಿಯ ಭಾರತದಲ್ಲಿ ಅಪರಾಧ ವರದಿ–2021, 2020, 2019, 2018, 2017, 2016

ಪ್ರಜಾವಾಣಿ ಗ್ರಾಫಿಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT