ಶುಕ್ರವಾರ, ಜುಲೈ 1, 2022
23 °C
ಇದು ಬೀಜಗೊಬ್ಬರದ ಪಾಡು– ತಪ್ಪದ ರೈತರ ಹಾಡು

ಒಳನೋಟ: ಅನ್ನದಾತರ ಸುತ್ತ ಸಮಸ್ಯೆಗಳ ಸುಳಿ

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತಮ ಮುಂಗಾರಿನ ಸೂಚನೆಯಿಂದಾಗಿ ಕೃಷಿ ಕೈಹಿಡಿಯಬಹುದೆಂಬ ಕನಸು ನಾಡಿನ ಅನ್ನದಾತರಲ್ಲಿ ಚಿಗುರಿದೆ. ಆದರೆ, ಗ್ರಾಮ– ಗ್ರಾಮಗಳಿಗೂ ಕೋವಿಡ್‌ ಎರಡನೇ ಅಲೆ ಕಬಂಧ ಬಾಹುಗಳನ್ನು ಚಾಚಿದ್ದು ಆತಂಕವನ್ನೂ ತಂದಿದೆ. ಏತನ್ಮಧ್ಯೆಯೇ, ಕೃಷಿ ಚಟುವಟಿಕೆಗೆ ಪೂರಕ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ದರ ಏರಿಕೆ, ನಕಲಿ ಬಿತ್ತನೆ ಬೀಜಗಳ ಹಾವಳಿ, ರಸಗೊಬ್ಬರಕೃತಕ ಅಭಾವ ಸೃಷ್ಟಿಸುವ ಪ್ರಯತ್ನಗಳು ರೈತರನ್ನು ಕಂಗೆಡಿಸಿವೆ.

ಕೆಲವು ವರ್ಷಗಳ ಹಿಂದೆ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರಗಳ ಕೃತಕ ಅಭಾವ ಹಾಗೂ  ಅಸಮರ್ಪಕ ಪೂರೈಕೆಯ ಪರಿಣಾಮ ಗಲಭೆ– ಹಿಂಸಾಚಾರದಿಂದ ರಾಜ್ಯವೇ ತಲ್ಲಣಿಸಿತ್ತು. ರಸಗೊಬ್ಬರಕ್ಕೆ ಬೇವು ಲೇಪನ ಮಾಡಿ ಮಾರುಕಟ್ಟೆಗೆ ಬಿಡಲಾರಂಭಿಸಿದ ಬಳಿಕ ಉದ್ಯಮಗಳಿಗೆ  ಅಕ್ರಮವಾಗಿ ಪೂರೈಕೆ ಮಾಡುವ ಕಳ್ಳಾಟಕ್ಕೆ ಕಡಿವಾಣ ಬಿದ್ದಿತು. ಕೆಲವೊಮ್ಮೆ ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಆಗದೇ ರೈತರು ಸಮಸ್ಯೆ ಎದುರಿಸಿದ್ದರು. ಆದರೆ, ನಕಲಿ ಬಿತ್ತನೆ ಬೀಜ ಹಾವಳಿ ಮಾತ್ರ ಮಟ್ಟ ಹಾಕಲು ಇನ್ನೂ ಸಾಧ್ಯವಾಗಿಲ್ಲ.

ಕಳೆದ 15–20 ದಿನಗಳಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಬೆಳಗಾವಿ ಜಿಲ್ಲೆಯ ಕಿತ್ತೂರು, ಕೊಪ್ಪಳ ಜಿಲ್ಲೆಯ ಬಿ.ಹೊಸಹಳ್ಳಿ, ಕೊಡಗು ಜಿಲ್ಲೆಯ ಪೊನ್ನಂಪೇಟೆ, ಗಂಗಾವತಿ ಮತ್ತು ಇತರ ಕಡೆಗಳಲ್ಲಿ ಹಲವು ಬೀಜ ಮತ್ತು ರಸಗೊಬ್ಬರ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಸುಮಾರು ₹ 1 ಕೋಟಿ ಮೌಲ್ಯದಷ್ಟು ನಕಲಿ ಬಿತ್ತನೆ ಬೀಜ ಮತ್ತು ಅಕ್ರಮ ರಸಗೊಬ್ಬರ ದಾಸ್ತಾನನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಿಚಕ್ಷಣದಳವು ಈಗ ರಾಜ್ಯ ವ್ಯಾಪಿ ಹದ್ದಿನ ಕಣ್ಣಿಟ್ಟು, ಗದಾ ಪ್ರಹಾರ ಆರಂಭಿಸಿದೆ.

ಉತ್ತಮ ಮುಂಗಾರು: ಈ ವರ್ಷ ‘ಲಾ ನಿನಾ’ ಹವಾಮಾನದ ಪರಿಣಾಮ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಮುಂಗಾರು ಪೂರ್ವ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗೆ ಚಾಲನೆಯೂ ಸಿಕ್ಕಿದೆ. ಮುಂಗಾರು ರಾಜ್ಯಕ್ಕೆ ಕಾಲಿಡಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಸರಾಸರಿ ಮಳೆ ವಾಡಿಕೆಯ ಶೇ 93 ರಿಂದ ಶೇ 107 ರಷ್ಟು ಆಗಲಿದ್ದು, ಇದು ಕೃಷಿಗೆ ಹೇಳಿ ಮಾಡಿಸಿದ ಮುಂಗಾರು ಎಂಬುದು ತಜ್ಞರ ಅಭಿಪ್ರಾಯ.

ಈ ಮುಂಗಾರು ಹಂಗಾಮಿನಲ್ಲಿ 77 ಲಕ್ಷ ಹೆಕ್ಟೇರ್ ವಿಸ್ತೀರ್ಣ ಪ್ರದೇಶದಲ್ಲಿ ಆಹಾರ– ಧಾನ್ಯಗಳು ಮತ್ತು ಎಣ್ಣೆಕಾಳುಗಳ ಬಿತ್ತನೆ ಗುರಿ ಹೊಂದಲಾಗಿದೆ. ಒಟ್ಟು 101.38 ಲಕ್ಷ ಟನ್ ಆಹಾರ ಧಾನ್ಯ ಹಾಗೂ 10.85 ಲಕ್ಷ ಟನ್ ಎಣ್ಣೆಕಾಳುಗಳ ಉತ್ಪಾದನೆ ಗುರಿಯನ್ನು ಕೃಷಿ ಇಲಾಖೆ ನಿಗದಿ ಮಾಡಿದೆ.

ಗೊಬ್ಬರ, ಬೀಜ ದರ ಏರಿಕೆ: ಕೋವಿಡ್‌ ಮತ್ತು ಆರ್ಥಿಕ ಸಂಕಷ್ಟದ ಮಧ್ಯೆ ಕೆಲವು ಬಿತ್ತನೆ ಬೀಜಗಳ ದರ ಗಗನಮುಖಿಯಾಗಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆ ಪೈಕಿ ಸೋಯಾಬಿನ್‌, ಹೆಸರು, ಶೇಂಗಾ ಪ್ರಮುಖವಾದವು. ಕಳೆದ ವರ್ಷ ಬೇಳೆ– ಕಾಳುಗಳ ಕಟಾವಿನ ಸಂದರ್ಭದಲ್ಲಿ ವಿಪರೀತ ಮಳೆ ಮತ್ತು ಪ್ರವಾಹ ಬಂದ ಕಾರಣ ಫಸಲು ನಾಶವಾಗಿದ್ದೂ ಅಲ್ಲದೆ, ಬಿತ್ತನೆ ಬೀಜ ಉತ್ಪಾದನೆಯೂ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿತ್ತು.

ಇದರಿಂದಾಗಿ ಸೋಯಾಬಿನ್‌ ಬೀಜದ ದರ ವಿಪರೀತ ಏರಿಕೆಯಾಗಿದೆ. ಒಂದು ಕೆ.ಜಿ ಬಿತ್ತನೆ ಬೀಜದ ದರ ₹104 ರಿಂದ ₹110 ರವರೆಗೆ ತಲುಪಿದೆ. ಸಾಮಾನ್ಯವಾಗಿ ₹55 ರಿಂದ ₹65 ರವರೆಗೆ ಇರುತ್ತಿತ್ತು. ಎಂಎಸ್‌ಪಿ ಮತ್ತು ಮಾರುಕಟ್ಟೆ ದರದ ಆಧಾರದ ಮೇಲೆ ಬಿತ್ತನೆ ಬೀಜದ ದರ ನಿಗದಿ ಆಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಸೋಯಾಬಿನ್‌ ಬಿತ್ತನೆ ಬೀಜದ ಉತ್ಪಾದನೆ ಆಗಿಲ್ಲ. ಬೀದರ್‌ನಲ್ಲಿ ಸೋಯಾಬಿನ್ ಬಿತ್ತನೆ ಬೀಜ ತಯಾರಿಕೆ ಆಗುತ್ತಿತ್ತು. ಭಾರಿ ಮಳೆಯ ಕಾರಣ ಬಿತ್ತನೆ ಬೀಜ ಉತ್ಪಾದನೆಯೇ ನಿಂತು ಹೋಗಿದೆ. ಅಲ್ಲದೆ, ಇದರ ಬಿತ್ತನೆ ಬೀಜದ ಕೋಟ್‌ ಅತ್ಯಂತ ಸೂಕ್ಷ್ಮ. ಭತ್ತ ಅಥವಾ ರಾಗಿಯ ಬೀಜದಂತಲ್ಲ. ಹೆಚ್ಚು ನೀರು, ಹೆಚ್ಚು ತೇವ, ಹೆಚ್ಚು ಬಿಸಿಲು ಬಿದ್ದರೂ ಮೊಳಕೆ ಬರುವುದಿಲ್ಲ. ಹೀಗಾಗಿ ಇದರ ಬಿತ್ತನೆ ಬೀಜಕ್ಕೆ ಮಧ್ಯಪ್ರದೇಶವನ್ನೇ ಅವಲಂಬಿಸಲಾಗಿದೆ. ಆ ರಾಜ್ಯದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಬೀಜ ಉತ್ಪಾದನೆ ಆಗಿಲ್ಲ. ಇದರ ಪರಿಣಾಮ ಮಾರುಕಟ್ಟೆಯಲ್ಲೂ ಅದರ ದರ ಹೆಚ್ಚಾಗಿದೆ ಎಂದು ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿಯೊಬ್ಬರು ತಿಳಿಸಿದರು.

ಹೆಸರು ಕಾಳಿನ ಕಥೆಯೂ ಅಷ್ಟೇ; ಗದಗ, ಧಾರವಾಡ ಪ್ರದೇಶದಲ್ಲಿ ಹೆಸರು ಬಿತ್ತನೆ ಬೀಜ ಉತ್ಪಾದಿಸಲಾಗುತ್ತದೆ. ಕಳೆದ ವರ್ಷ ಕಟಾವು ಸಂದರ್ಭದಲ್ಲಿ ಅಧಿಕ ಮಳೆಯಿಂದ, ಹೆಸರುಕಾಳು ನೀರಿನಲ್ಲಿ ಒದ್ದೆಯಾಗಿ ಬೀಜ ಕಪ್ಪಾಯಿತು. ಬಿತ್ತನೆ ಬೀಜ ಸಿಕ್ಕಿದ್ದೂ ಅತ್ಯಲ್ಪ. ಗುಣಮಟ್ಟವೂ ಉತ್ತಮವಾಗಿರಲಿಲ್ಲ. ಹೀಗಾಗಿ ಬೇರೆ ಕಡೆಯಿಂದ ಹೆಚ್ಚು ದರಕ್ಕೆ ತರಿಸಬೇಕಾಯಿತು. ರಾಜ್ಯದಲ್ಲಿ ಉತ್ತಮ ಮಳೆಯಿಂದ ಇಳುವರಿ ಉತ್ತಮವಾಗಿದ್ದರೂ ಗುಣಮಟ್ಟದ ಬಿತ್ತನೆ ಬೀಜ ಅಭಾವ ಸೃಷ್ಟಿಯಾಯಿತು. ಭತ್ತದ ದರ ಕಳೆದ ವರ್ಷದಷ್ಟಿದ್ದರೆ, ರಾಗಿ ದರ ಕಳೆದ ವರ್ಷಕ್ಕಿಂತ ಕಡಿಮೆ ಆಗಿದೆ. ಶೇಂಗಾ ಮತ್ತು ಉದ್ದು ಕಳೆದ ವರ್ಷದಷ್ಟೇ ದರ ಇದೆ ಎಂದು ಅವರು ತಿಳಿಸಿದರು.

ಮತ್ತೊಂದೆಡೆ ರಸಗೊಬ್ಬರ ಬೆಲೆಯೂ ಏರಿದೆ. ವಿವಿಧ ಬಗೆಯ ರಸಗೊಬ್ಬಗಳ ಬೆಲೆ ಶೇ 14 ರಿಂದ ಶೇ 42 ರಷ್ಟು ಹೆಚ್ಚಿದೆ. ರಸಗೊಬ್ಬರಗಳ ತಯಾರಿಕೆಗೆ ಅಗತ್ಯ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಕಚ್ಚಾ ವಸ್ತುಗಳ ಬೆಲೆ ತೀವ್ರವಾಗಿ ಏರಿಕೆ ಆಗಿರುವುದರಿಂದ ಉತ್ಪಾದನಾ ವೆಚ್ಚವೂ ಏರಿಕೆಯಾಗಿದೆ. ಎಲ್ಲ ರಸಗೊಬ್ಬರ ಕಂಪನಿಗಳು ಬೆಲೆ ಏರಿಕೆ ಮಾಡಿವೆ. ಹಳೆ ದಾಸ್ತಾನನ್ನು ಹಳೇ ದರದಲ್ಲಿ ಮಾರಾಟ ಮಾಡಲು ಕಂಪನಿಗಳನ್ನು ಒಪ್ಪಿಸುವ ಕೆಲಸ ಕೇಂದ್ರ ಮಾಡಿದೆ.

ಕಳೆದ ವರ್ಷ ಭಾರಿ ಮಳೆ, ಕೋವಿಡ್‌ ಸಂಕಷ್ಟ, ಬೆಲೆ ಮತ್ತು ಬೇಡಿಕೆ ಕುಸಿತದಿಂದ ರೈತ ಹೈರಾಣಾಗಿದ್ದಾನೆ. ಹಲವು ರೈತರು ತಾವು ಬೆಳೆದ ಹಣ್ಣು ತರಕಾರಿಗಳಿಗೆ ಬೆಲೆ ಸಿಗದ ಕಾರಣ ಬೀದಿಗೆ ಎಸೆದಿದ್ದರು. ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ. ಉತ್ತಮ ಮಳೆ ಕೋಲ್ಮಿಂಚು ಬಿಟ್ಟರೆ, ಉಳಿದಂತೆ ರೈತನ ಪಾಲಿಗೆ ಕಗ್ಗತ್ತಲೆಯೇ ಆವರಿಸಿದೆ.

ಬಿತ್ತನೆ ಬೀಜ, ರಸಗೊಬ್ಬರ ವಾಸ್ತವ ಸ್ಥಿತಿ

ಇದೇ ಮುಂಗಾರು ಹಂಗಾಮಿಗೆ 6 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಮೇ ಅಂತ್ಯದವರೆಗೆ ಒಟ್ಟು 19,675 ಕ್ವಿಂಟಲ್‌ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ. 1,74,653 ಕ್ವಿಂಟಲ್‌ಗಳಷ್ಟು ದಾಸ್ತಾನು ಇದೆ. ರೈತರ ಅಗತ್ಯಕ್ಕೆ ತಕ್ಕಷ್ಟು ಬಿತ್ತನೆ ಬೀಜ ಪೂರೈಕೆ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅಲ್ಲದೆ, ರಾಜ್ಯದಲ್ಲಿ 26.47 ಲಕ್ಷ ಮೆಟ್ರಿಕ್‌ ಟನ್‌ ವಿವಿಧ ರೀತಿಯ ರಸಗೊಬ್ಬರಗಳಿಗೆ ಬೇಡಿಕೆ ಇದ್ದು, 7,97,662 ಮೆಟ್ರಿಕ್ ಟನ್ ರಸಗೊಬ್ಬರಗಳಿಗೆ ಬೇಡಿಕೆಯಿದ್ದು, ಮೇ ಅಂತ್ಯದವರೆಗೆ 5,67,239 ಮೆಟ್ರಿಕ್ ಟನ್‌ ರಸಗೊಬ್ಬರ ಸರಬರಾಜಾಗಿದೆ. ಒಟ್ಟು 12,38,600 ಮೆಟ್ರಿಕ್‌ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ವಿವರಿಸಿದರು.

ರಸಗೊಬ್ಬರ ದರ

ದರ ಏರಿಕೆ ಆಗಿದ್ದರೂ ಹಳೇ ದರದಲ್ಲಿ ಮಾರಾಟ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದರಿಂದ ರಸಗೊಬ್ಬರ ಕಂಪನಿಗಳು ಹಳೇ ದರದಲ್ಲಿ ಮಾರಾಟ ಮಾಡುತ್ತಿವೆ. ಬಹುತೇಕ ಎಲ್ಲ ರಸಗೊಬ್ಬರಗಳ ಒಂದೇ ರೀತಿ ಇದೆ. ಹಳೆ ದಾಸ್ತಾನು ಮಾರಾಟ ಆಗುವವರೆಗೆ ಹಳೇ ದರವೇ ಇರುತ್ತದೆ

ಚೀನಾದ ‘ಬೀಜ ಭಯೋತ್ಪಾದನೆ’

ಬೆಂಗಳೂರು: ಹಿಂದಿನ ವರ್ಷ ಗದಗ ಮತ್ತು ಶಿರಹಟ್ಟಿ ತಾಲ್ಲೂಕಿನ ಹಳ್ಳಿಯ ಕೆಲವು ರೈತರಿಗೆ ಅನಾಮಧೇಯ ಕಂಪನಿಯ ಬಿತ್ತನೆ ಬೀಜದ ‌ಪೊಟ್ಟಣಗಳ ಪಾರ್ಸೆಲ್‌ ಬಂದಿತ್ತು. ದೇಶದ ವಿವಿಧೆಡೆ ಇಂತಹದ್ದೇ ಪ್ರಕರಣಗಳು ವರದಿಯಾಗಿದ್ದವು. ಚೀನಾವೇ ಈ ‘ರಹಸ್ಯ’ ಬಿತ್ತನೆ ಬೀಜದ ರೂವಾರಿ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ‘ಜೈವಿಕ ಅಸ್ತ್ರ’ವಾಗಿ ಚೀನಾ ಬಿತ್ತನೆ ಬೀಜ ಕಳುಹಿಸುತ್ತಿದೆ ಎಂದು ಕೇಂದ್ರ ಎಲ್ಲಾ ರಾಜ್ಯಗಳಿಗೂ ಪತ್ರ ಬರೆದು ಎಚ್ಚರಿಸಿತ್ತು.

ಕೆಲವು ತಿಂಗಳ ಹಿಂದೆ ಅಮೆರಿಕ, ನ್ಯೂಜಿಲೆಂಡ್‌, ಜಪಾನ್‌ ಜೊತೆಗೆ ಬ್ರಿಟನ್‌ ಸೇರಿದಂತೆ ಯುರೋಪಿಯನ್‌ ದೇಶಗಳ ಹಲವು ರೈತರಿಗೆ ಮೂಲ ಇಲ್ಲದ ಬಿತ್ತನೆ ಬೀಜದ ಪಾರ್ಸೆಲ್‌ ರವಾನೆಯಾಗಿದೆ. ಸಾವಿರಾರು ಬೀಜಗಳ ಕಳ್ಳಸಾಗಣೆಯ ವ್ಯವಹಾರ ಇದು. ಇದನ್ನು ಅಮೆರಿಕ ‘ಬ್ರಶಿಂಗ್‌ ಸ್ಕ್ಯಾಮ್‌’, ‘ಅಗ್ರಿಕಲ್ಚರ್‌ ಸ್ಮಗ್ಲಿಂಗ್‌’ ಎಂದು ಕರೆದಿದೆ. ‘ಸೀಡ್‌ ಟೆರರಿಸಂ’(ಬೀಜ ಭಯೋತ್ಪಾದನೆ) ಎಂತಲೂ ಕರೆಯಲಾಗುತ್ತದೆ.

ರಾಷ್ಟ್ರಮಟ್ಟದಲ್ಲಿ ಇಂತಹ ಕಳ್ಳಸಾಗಣೆ ಮೇಲೆ ನಿಗಾ ಇಟ್ಟಿಲ್ಲ. ಸೀಡ್‌ ಆ್ಯಕ್ಟ್‌ ಅನ್ನು ಬಲಪಡಿಸಿಲ್ಲ. ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು, ಬಿತ್ತನೆ ಬೀಜ ಪ್ರಮಾಣೀಕೃತ ಸಂಸ್ಥೆಗಳು, ಬಿತ್ತನೆ ಬೀಜ ಉತ್ಪಾದನಾ ಕಂಪನಿಗಳು, ಬೀಜ ನಿಗಮಗಳು ಈ ಕುರಿತು ಅನ್ನದಾತರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿವೆ. ಇಂತಹ ಬೀಜಗಳ ಬಿತ್ತನೆಯಿಂದ ಹೊಸ ರೋಗ ಮತ್ತು ಕೀಟ ಬಾಧೆ ಕಂಡುಬರುವ ಸಾಧ್ಯತೆ ಹೆಚ್ಚು.

ಅಸ್ತಿತ್ವಕ್ಕೆ ಕಂಟಕ: ಈ ವಿದೇಶಿ ವೈರಿಗಳ ಜೊತೆಗೆ ಸ್ಪರ್ಧಿಸಲಾಗದೆ ಸ್ಥಳೀಯ ಸಸ್ಯಗಳು ಕಂಗೆಡುತ್ತವೆ. ಲಕ್ಷಾಂತರ ವರ್ಷಗಳಿಂದ ಈ ಮಣ್ಣಿನಲ್ಲಿ ವಿಕಸಿಸಿ ನೆಲೆ ಕಂಡುಕೊಂಡಿರುವ ಸ್ಥಳೀಯ ಸಸ್ಯಕೋಟಿಯ ಅಸ್ತಿತ್ವವನ್ನೇ ಇವು ನಾಶಗೊಳಿಸುತ್ತವೆ. ಸಸ್ಯ ನಂಬಿ ಬದುಕುವ ಜೀವಿಗಳಿಗೂ ಕಂಟಕ ತರಲಿವೆ. ಭೂಮಿ ಬಂಜರಾಗುವ ಸಾಧ್ಯತೆಯಿದೆ. ರಾಷ್ಟ್ರೀಯ ಭದ್ರತೆಗೂ ಅಪಾಯ ಕಟ್ಟಿಟ್ಟಬುತ್ತಿ.

ಅನಾಮಧೇಯ ಕಂಪನಿಗಳ ಮೂಲಕ ಪೋಸ್ಟ್‌, ಕೊರಿಯರ್‌ ಮೂಲಕ ಪಾರ್ಸೆಲ್‌ ಬರುವ ಬಿತ್ತನೆ ಬೀಜಗಳನ್ನು ರೈತರು ಸ್ವೀಕರಿಸಬಾರದು. ಒಂದು ವೇಳೆ ಸ್ವೀಕರಿಸಿದರೂ ಸುಟ್ಟು ಹಾಕಬೇಕು. ಇಲ್ಲವಾದರೆ ಕೃಷಿ ಇಲಾಖೆ ಅಥವಾ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಈ ಬಾರಿಯೂ ತುಮಕೂರು, ಕಲಬುರ್ಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ಚೀನಾದ ನಕಲಿ ಬೀಜಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಎಂಬ ವರದಿಗಳಿವೆ. ಇಂಥ ಬೀಜಗಳ ಬಗ್ಗೆ ಎಚ್ಚರವಿರಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಕೃಷಿಕ ಸಮುದಾಯವನ್ನು ಎಚ್ಚರಿಸಿದೆ.

ನಕಲಿ ಬೀಜಗಳ ವಿಷವರ್ತುಲ

ದಾವಣಗೆರೆ: ಬಿತ್ತನೆ ಬೀಜಗಳಿಗೆ ಹೆಸರುವಾಸಿಯಾಗಿರುವ ರಾಣೆಬೆನ್ನೂರಿನಲ್ಲಿ ಕಡಿಮೆ ಬೆಲೆಗೆ ಸಿಗುವ ಮೆಕ್ಕೆಜೋಳ ಬೀಜಗಳನ್ನು ಕೃಷಿಕರು ಖರೀದಿಸುತ್ತಿದ್ದಾರೆ. ಕೆಲವು ವರ್ತಕರು ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮಾರಾಟ ಮಾಡುವ ಮೂಲಕ ರೈತರನ್ನು ವಂಚಿಸುತ್ತಿದ್ದಾರೆ ಎಂಬ ದೂರು ಇದೆ.

ಕೃಷಿ ವಿಚಕ್ಷಣಾ ದಳವು ಈಚೆಗೆ ರಾಣೆಬೆನ್ನೂರಿನ ಶ್ರೀರಾಮ ಸೀಡ್ಸ್‌, ನಿಸರ್ಗ ಸೀಡ್ಸ್‌ ಮಾರಾಟ ಮಳಿಗೆ ಹಾಗೂ ಕ್ವಾಲಿಟಿ ಬೀಜ ಸಂಸ್ಕರಣ ಘಟಕದ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ್ದ ₹ 74.15 ಲಕ್ಷ ಮೌಲ್ಯದ 186 ಕ್ವಿಂಟಲ್‌ ಮೆಕ್ಕೆಜೋಳದ ಬಿತ್ತನೆ ಬೀಜವನ್ನು ವಶಪಡಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.

ಕೊರತೆ ಇಲ್ಲ, ತುಸು ದುಬಾರಿ: ಪೂರ್ವ ಮುಂಗಾರು ಮಳೆ ಬೀಳುತ್ತಿದ್ದಂತೆ ಮೆಕ್ಕೆಜೋಳ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ದಾವಣಗೆರೆ, ಬೆಳಗಾವಿ, ಶಿವಮೊಗ್ಗ, ಹಾವೇರಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳ ಮಳೆಯಾಶ್ರಿತ ಪ್ರದೇಶಗಳಲ್ಲಿ ಪ್ರಮುಖ ಬೆಳೆಯನ್ನಾಗಿ ಮೆಕ್ಕೆಜೋಳ ಬಿತ್ತನೆ ಮಾಡಲಾಗುತ್ತಿದೆ. 

ಕೃಷಿ ಇಲಾಖೆಯು ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿಕೊಂಡಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ವ್ಯವಸ್ಥೆ ಮಾಡಿಕೊಂಡಿದೆ. ಸದ್ಯಕ್ಕೆ ಬಿತ್ತನೆ ಬೀಜದ ಕೊರತೆ ಕಾಣಿಸಿಕೊಂಡಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆಯಲ್ಲಿ ತುಸು ಏರಿಕೆಯಾಗಿದೆ.

ಸೋಯಾ, ತೊಗರಿ ಬೀಜ ದುಬಾರಿ

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ತೊಗರಿಯ ಜೊತೆಗೆ ಕಡಿಮೆ ಅವಧಿಯಲ್ಲಿ ಬರುವ ಉದ್ದು, ಹೆಸರು, ಅಲಸಂದೆ ಧಾನ್ಯಗಳನ್ನೂ ಬೆಳೆಯಲಾಗುತ್ತದೆ. ಲಾಕ್‌ಡೌನ್‌ನಿಂದ ಜನರ ಬಳಿ ಹೊಲ ಹಸನು ಮಾಡಲು, ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿಸಲು ಹಣವಿಲ್ಲದಂತಾಗಿದೆ.

ಲಾಕ್‌ಡೌನ್ ಕಾರಣಕ್ಕೆ ಅಂಗಡಿಗಳು ಬಂದ್ ಆಗಿದ್ದು ರೈತರಿಗೆ ಅಗತ್ಯ ಕೃಷಿ ಉಪಕರಣ ಖರೀದಿಸಲು ಸಾಧ್ಯವಾಗದೆ ಜಮೀನು ಹದ ಮಾಡುವ ಪ್ರಕ್ರಿಯೆ ಚುರುಕುಗೊಂಡಿಲ್ಲ. ಕೃಷಿ ಸಂಬಂಧಿ ಅಂಗಡಿಗಳನ್ನು ತೆರೆಯುವುದಕ್ಕೆ ಅನುಮತಿ ನೀಡಬೇಕು ಎಂದು ರೈತರು ಕೋರುತ್ತಿದ್ದಾರೆ.

‘ಕಳೆದ ವರ್ಷ 5 ಕೆಜಿ ತೊಗರಿ ಬೀಜದ ಪ್ಯಾಕೆಟ್‌ ದರ ₹ 250 ಇತ್ತು. ಈ ವರ್ಷ ₹ 400ಕ್ಕೆ ಏರಿಕೆಯಾಗಿದೆ. ಬೀದರ್ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳ ಬಿತ್ತನೆ ಬೀಜ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ. ಆದರೆ, ಬೆಲೆ ಹೆಚ್ಚಳ ರೈತರನ್ನು ಆತಂಕಕ್ಕೀಡು ಮಾಡಿದೆ.

ಜಿಲ್ಲೆಯ ರೈತರು 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಬಿತ್ತನೆಗೆ ಮುಂದಾಗಿದ್ದಾರೆ. ಸೋಯಾ ಬೀಜದ ಕೊರತೆ ಇದ್ದು, ಪರ್ಯಾಯ ಬೆಳೆ ಬೆಳೆಸುವಂತೆ ಸರ್ಕಾರ ಸಲಹೆ ನೀಡುತ್ತಿದೆ ಎಂದು ರೈತರು ಹೇಳುತ್ತಾರೆ.

ಕಳೆದ ವರ್ಷ 30 ಕೆ.ಜಿ ಸೋಯಾ ಬೆಲೆ ₹ 1,260 ಇತ್ತು. ಈ ವರ್ಷ ₹2,370 ನಿಗದಿಪಡಿಸಲಾಗಿದೆ. ಶೇ 50 ರಿಯಾಯಿತಿ ದರದಲ್ಲಿ ಬೀಜ ಮಾರಾಟ ಮಾಡಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ ಒತ್ತಾಯಿಸಿದ್ದಾರೆ.

‘ಜಿಲ್ಲೆಗೆ 1.15 ಲಕ್ಷ ಕ್ವಿಂಟಲ್ ಸೋಯಾಬಿನ್‌ ಅಗತ್ಯವಿದೆ. 94 ಸಾವಿರ ಕ್ವಿಂಟಲ್‌ಗೆ ಬೇಡಿಕೆ ಸಲ್ಲಿಸಲಾಗಿದೆ. ಪ್ರಸ್ತುತ 76 ಸಾವಿರ ಕ್ವಿಂಟಲ್ ದಾಸ್ತಾನು ಇದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್‌. ತಿಳಿಸಿದ್ದಾರೆ.

ಮಾಹಿತಿ: ಚಂದ್ರಕಾಂತ ಮಸಾನಿ, ನಾಗರಾಜ ಚಿನಗುಂಡಿ, ಮನೋಜಕುಮಾರ್ ಗುದ್ದಿ, ಬಿ.ಜಿ. ಪ್ರವೀಣಕುಮಾರ

***
ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ ಬೀಜ

ಚಿತ್ರದುರ್ಗ: ಬೀಜೋತ್ಪಾದನೆ ಕುಸಿತ ಹಾಗೂ ಪೂರೈಕೆಯಲ್ಲಿ ಆಗುತ್ತಿರುವ ತೊಂದರೆಯಿಂದ ಈರುಳ್ಳಿ ಬಿತ್ತನೆ ಬೀಜದ ಬೆಲೆ ಗಗನಕ್ಕೇರಿದೆ.

ಸಾಮಾನ್ಯವಾಗಿ ಮೇ ಹಾಗೂ ಜೂನ್‌ ತಿಂಗಳಲ್ಲಿ ಈರುಳ್ಳಿ ಬಿತ್ತನೆ ನಡೆಯುತ್ತದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಬಿತ್ತನೆ ಆರಂಭವಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ಹೇರಿದ ಲಾಕ್‌ಡೌನ್‌ ನಡುವೆಯೇ ಬಿತ್ತನೆ ನಡೆಯುತ್ತಿರುವುದು ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ.

ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಸೇರಿ ಹಲವು ಜಿಲ್ಲೆಯಲ್ಲಿ ಈರುಳ್ಳಿ ಪ್ರಮುಖ ಬೆಳೆ. ಮಹಾರಾಷ್ಟ್ರದ ನಾಸಿಕ್‌, ಪುಣೆಯಿಂದ ಬಿತ್ತನೆ ಬೀಜ ಪೂರೈಕೆ ಆಗುತ್ತದೆ. ಲಾಕ್‌ಡೌನ್‌ ಇದಕ್ಕೆ ಅಡ್ಡಿಯಾಗಿದೆ. ಗದಗ, ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿಯೂ ಬಿತ್ತನೆ ಬೀಜದ ಉತ್ಪಾದನೆಯಾಗುತ್ತದೆ. ಜನವರಿ ಹಾಗೂ ಫೆಬ್ರುವರಿಯಲ್ಲಿ ಬಿದ್ದ ಅಕಾಲಿಕ ಮಳೆಯು ಬೀಜೋತ್ಪಾದನೆ ಮೇಲೆ ಪರಿಣಾಮ ಬೀರಿದೆ. ಈ ಅವಧಿಯಲ್ಲಿ ದಟ್ಟವಾದ ಮಂಜು ಕಾಣಿಸಿಕೊಂಡ ಪರಿಣಾಮ ಬೀಜದ ಇಳುವರಿ ಕಡಿಮೆಯಾಗಿದೆ.

ಮಹಾರಾಷ್ಟ್ರದಲ್ಲಿ ಮಾರ್ಚ್‌ ಅಂತ್ಯದಲ್ಲೇ ಮಾರುಕಟ್ಟೆ, ವಾಹನ ಸಂಚಾರದ ನಿರ್ಬಂಧ ವಿಧಿಸಿದ್ದರಿಂದ ಈರುಳ್ಳಿ ಬಿತ್ತನೆ ಬೀಜದ ಸರಬರಾಜಿಗೆ ತೊಡಕುಂಟಾಯಿತು. ಬೇಡಿಕೆಗಿಂತ ಕಡಿಮೆ ಪೂರೈಕೆ ಆಗಿರುವುದರಿಂದ ಬೀಜದ ಬೆಲೆ ಗಗನಮುಖಿಯಾಗಿದೆ. ವರ್ಷದ ಹಿಂದೆ ₹ 2 ಸಾವಿರಕ್ಕೆ ಲಭ್ಯವಾಗುತ್ತಿದ್ದ ಒಂದು ಕೆ.ಜಿ. ಈರುಳ್ಳಿ ಬೀಜದ ದರ ಈಗ ₹ 2,500ರಿಂದ ₹ 3,500ಕ್ಕೆ ಏರಿಕೆಯಾಗಿದೆ.

ರಾಗಿಗೆ ಬೆಂಬಲ ಬೆಲೆಯ ಶ್ರೀರಕ್ಷೆ

ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ರಾಗಿ ಖರೀದಿಸುತ್ತಿರುವುದು ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಯ ರೈತರ ಪಾಲಿಗೆ ವರದಾನವಾಗಿದೆ. ಬಯಲುಸೀಮೆಯ ಮಳೆಯಾಶ್ರಿತ ಬೆಳೆಯಯಾದ ರಾಗಿಯ ಕೃಷಿ, ಉಳಿದ ಬೆಳೆಗಳ ಬೇಸಾಯಕ್ಕಿಂತ ವಿಭಿನ್ನ. ಜೊತೆಗೆ, ಹೆಚ್ಚು ಶ್ರಮದಾಯಕವೂ ಹೌದು. ಆದರೆ, ಕಷ್ಟಕಾಲದಲ್ಲಿ ರಾಗಿ ರೈತರ ಕೈಬಿಟ್ಟಿಲ್ಲ.    

ಕೃಷಿ ಇಲಾಖೆಯು ರಾಗಿಯ ದೀರ್ಘಾವಧಿ ತಳಿಯಾದ ಎಂ.ಆರ್-1/6 ಬಿತ್ತನೆ ಬೀಜವನ್ನಷ್ಟೇ ಸಹಾಯಧನದಲ್ಲಿ ವಿತರಿಸುತ್ತದೆ. ಆದರೆ, ರೈತರು ಅಧಿಕ ಇಳುವರಿ ನೀಡುವ ಇಂಡಾಫ್‌–5 ಮತ್ತು ಇಂಡಾಫ್‌–9 ತಳಿಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ದೀರ್ಘಾವಧಿ ತಳಿಗಳಾದ ಎಂಆರ್‌–1, ಎಂಆರ್‌–6, ಕೆಎಂಆರ್‌–301, ಮಧ್ಯಮಾವಧಿ ತಳಿಗಳಾದ ಜಿಪಿಯು–66, ಎಂಎಲ್‌–365 ಹಾಗೂ ಅಲ್ಪಾವಧಿಯ ಜಿಪಿಯು–48 ತಳಿಯ ಬೀಜಗಳನ್ನೂ ಖರೀದಿ ಮಾಡುತ್ತಿದ್ದಾರೆ.

ಬರಹ- ಜಿ.ಬಿ.ನಾಗರಾಜ್‌

***
ಅದೇ ಹಾಡು, ಅದೇ ರಾಗ

ಹಾವೇರಿ: ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ರೈತರು ಪರದಾಡುವ ಪರಿಸ್ಥಿತಿ ದಶಕದಿಂದ ನಡೆದುಬಂದಿದೆ.

ಜೂನ್‌ 7ರವರೆಗೆ ‘ಪೂರ್ಣ ಲಾಕ್‌ಡೌನ್‌’ ಜಾರಿಯಲ್ಲಿರುವುದರಿಂದ ಮಂಗಳವಾರ, ಗುರುವಾರ, ಶನಿವಾರ ಮಾತ್ರ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಮತ್ತೊಂದೆಡೆ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಬಿತ್ತನೆ ಬೀಜ ಖರೀದಿಗಾಗಿ ರೈತರು ಬೆಳಗಿನ ಜಾವ 5 ಗಂಟೆಯಿಂದಲೇ ರೈತ ಸಂಪರ್ಕ ಕೇಂದ್ರಗಳ ಮುಂದೆ ಸಾಲಿನಲ್ಲಿ ಕಾದು ನಿಲ್ಲುತ್ತಿದ್ದಾರೆ.  

‘ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಕಾದ ಬಿತ್ತನೆ ಬೀಜಗಳು ದೊರೆಯುತ್ತಿಲ್ಲ. ಕೃಷಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಖಾಸಗಿ ಕಂಪನಿಗಳ ಜೊತೆ ಶಾಮೀಲಾಗಿ ತಮಗೆ ಬೇಕಾದ ಕಂಪನಿಯ ಬೀಜಗಳನ್ನು ತರಿಸುತ್ತಾರೆ. ಹೀಗಾಗಿ, ಎಕರೆಗೆ 28ರಿಂದ 30 ಕ್ವಿಂಟಲ್‌ ಇಳುವರಿ ಬರುವ ಮೆಕ್ಕೆಜೋಳದ ಬೀಜಗಳ ಬದಲಿಗೆ, ಎಕರೆಗೆ 18ರಿಂದ 20 ಕ್ವಿಂಟಲ್‌ ಇಳುವರಿ ಬರುವ ಬೀಜಗಳನ್ನೇ ಬಿತ್ತನೆ ಮಾಡುವಂತಾಗಿದೆ’ ಎಂದು ರೈತ ಮುಖಂಡ ಮಾಲತೇಶ ಪೂಜಾರ ಸಮಸ್ಯೆ ತೋಡಿಕೊಂಡರು. 

ಬರಹ: ಸಿದ್ದು ಆರ್‌.ಜಿ.ಹಳ್ಳಿ

***
ಆಲೂಗಡ್ಡೆಗೆ ಲಾಕ್‌ಡೌನ್‌ ಅಂಕುಶ

ಹಾಸನ: ಅಂಗಮಾರಿ ರೋಗ, ಬೆಲೆ ಕುಸಿತ, ಕಳಪೆ ಬಿತ್ತನೆ ಬೀಜ ಹಾಗೂ ಹವಾಮಾನ ವೈಪರೀತ್ಯ‌ದಿಂದ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಪ್ರದೇಶ ಕಡಿಮೆಯಾಗುತ್ತಿದೆ. ಈ ನಡುವೆಯೇ ಲಾಕ್‌ಡೌನ್‌ ಘೋಷಣೆಯಿಂದಾಗಿ ಬಿತ್ತನೆ ಆಲೂಗಡ್ಡೆ ಖರೀದಿಸಲು ರೈತರಿಗೆ ತೊಂದರೆಯಾಗಿದೆ.

ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಇಲ್ಲಿನ ಎಪಿಎಂಸಿಯಲ್ಲಿ ಬೆಳಿಗ್ಗೆ 6ರಿಂದ 10 ಗಂಟೆಯೊಳಗೆ ಬಿತ್ತನೆ ಆಲೂಗಡ್ಡೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಹಾಸನ ಮಾತ್ರವಲ್ಲದೇ ಚಿಕ್ಕಮಗಳೂರು ಮತ್ತು ಚಾಮರಾಜನಗರ ರೈತರೂ ಬಿತ್ತನೆ ಆಲೂಗಡ್ಡೆ ಖರೀದಿಸುವುದು ಇಲ್ಲಿಯೇ. ಬಿತ್ತನೆ ಬೀಜ ಸಿಗದ ಕಾರಣ ಆಲೂಗಡ್ಡೆ ಬಿತ್ತನೆ ಪ್ರದೇಶ ಕಡಿಮೆಯಾಗಿದೆ. ಈವರೆಗೆ ಶೇ 70ರಷ್ಟು ಬಿತ್ತನೆ ಆಗಬೇಕಿತ್ತು. ಆದರೆ, ಶೇ 20ರಷ್ಟು ಬಿತ್ತನೆಯಾಗಿದೆ.

ತಂಬಾಕು ಕೃಷಿ ಚುರುಕು: ಮೈಸೂರು ಜಿಲ್ಲೆಯ ಹುಣಸೂರು ಉಪ ವಿಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಮುಂಗಾರು ಮಳೆ ಶುರುವಾದ ಬೆನ್ನಲ್ಲೇ ಎಲ್ಲಾ ಕಡೆ ತಂಬಾಕು ಸಸಿ ನಾಟಿ ಕಾರ್ಯ ಚುರುಕುಗೊಂಡಿದೆ.

ಹಾಸನ ಜಿಲ್ಲೆಯ ರಾಮನಾಥಪುರ, ಕೊಡಗು ಜಿಲ್ಲೆಯ ಗಡಿಭಾಗದಲ್ಲೂ ತಂಬಾಕು ಬೆಳೆಯಲಾಗುತ್ತದೆ. ಸಸಿ ನಾಟಿಯಿಂದ ಹಿಡಿದು ಗೊಬ್ಬರ, ಔಷಧಿ ಸೇರಿದಂತೆ ಅಗತ್ಯ ಪರಿಕರಗಳನ್ನು ಕೆಲವು ತಂಬಾಕು ಉತ್ಪನ್ನ (ಸಿಗರೇಟ್‌) ಕಂಪನಿಗಳೇ ಬೆಳೆಗಾರರಿಗೆ ಪೂರೈಸುತ್ತಿವೆ.

ಬರಹ- ಕೆ.ಎಸ್‌.ಸುನಿಲ್‌

ಪೂರಕ ಮಾಹಿತಿ- ಎಚ್‌.ಎಸ್.ಸಚ್ಚಿತ್‌, ಮಹೇಶ ಭಗೀರಥ

***

ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಆ ಮಾತು ಹಾಗಿರಲಿ, ಅಸಲೇ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಕಣ್ಣೀರಿನಲ್ಲಿ ಕೈತೊಳೆಯುವ ಸ್ಥಿತಿ ಇದೆ

-ಕೃಷ್ಣ ಭೈರೇಗೌಡ, ಮಾಜಿ ಕೃಷಿ ಸಚಿವ

***

ನಕಲಿ ಬಿತ್ತನೆ ಬೀಜ ಮಾರಾಟ ಮತ್ತು ಅಕ್ರಮವಾಗಿ ರಸಗೊಬ್ಬರ ಸಂಗ್ರಹಿಸಿಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು
-ಬಿ.ಸಿ. ಪಾಟೀಲ, ಕೃಷಿ ಸಚಿವ

***

ಡಿಎಪಿ ಮತ್ತು ಪಿಕೆ ರಸಗೊಬ್ಬರ ಸಬ್ಸಿಡಿಯನ್ನು ಚೀಲವೊಂದಕ್ಕೆ ₹511 ರಿಂದ ₹1,211ಕ್ಕೆ ಹೆಚ್ಚಳ ಮಾಡಲಾಗಿದೆ. ಇದೇ ರೀತಿ ಇತರ ರಸಗೊಬ್ಬರಗಳಿಗೂ ಹೆಚ್ಚಿನ ಸಬ್ಸಿಡಿ ನಿಗದಿ ಮಾಡಲಾಗಿದೆ

-ಡಿ.ವಿ.ಸದಾನಂದಗೌಡ, ಕೇಂದ್ರ ರಾಸಾಯನಿಕ– ರಸಗೊಬ್ಬರಗಳ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು