ಬುಧವಾರ, ಮಾರ್ಚ್ 29, 2023
28 °C

ಆಳ-ಅಗಲ: ಮರಳು ಗಣಿಗಾರಿಕೆಗೆ ನೀತಿಯ ಅಂಕುಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರವು ನೂತನ ಮರಳು ನೀತಿಯನ್ನು ರೂಪಿಸಿದೆ. ಮರಳು ಗಣಿಗಾರಿಕೆ, ಸಂಗ್ರಹ, ಸಾಗಾಟ, ಮಾರಾಟ ಮತ್ತು ಬಳಕೆಯ ಸ್ವರೂಪವನ್ನು ಈ ನೂತನ ಮರಳು ನೀತಿಯಲ್ಲಿ ವಿವರಿಸಲಾಗಿದೆ. ಮರಳು ನೀತಿಯ ಅನುಷ್ಠಾನ ಮತ್ತು ಮರಳು ಗಣಿಗಾರಿಕೆ ಮೇಲ್ವಿಚಾರಣೆಗೆ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸಲು ಈ ನೀತಿಯು ಅವಕಾಶ ಮಾಡಿಕೊಡುತ್ತದೆ. ಈ ಸಮಿತಿಗಳ ಕಾರ್ಯವ್ಯಾಪ್ತಿ ಮತ್ತು ಅಧಿಕಾರವನ್ನು ಈ ನೀತಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ನೀತಿಯ ಪ್ರಮುಖ ಅಂಶಗಳು

l ಮರಳಿನ ದರವನ್ನು ರಾಜ್ಯ ಸರ್ಕಾರವು ನಿಗದಿ ಮಾಡಲಿದೆ ಮತ್ತು ಕಾಲಕಾಲಕ್ಕೆ ಪರಿಷ್ಕರಿಸಲಿದೆ

l ನದಿಗಳಲ್ಲಿ ದೋಣಿಗಳ ಮೂಲಕ ಮರಳು ತೆಗೆಯುವಾಗ ಯಂತ್ರಗಳನ್ನು ಬಳಸಲು ಅವಕಾಶವಿಲ್ಲ. ವ್ಯಕ್ತಿಗಳೇ ಮರಳನ್ನು ದೋಣಿಗೆ ತುಂಬಿಸಬೇಕು

l ಅಕ್ರಮವಾಗಿ ತೆಗೆಯಲಾದ ಮರಳನ್ನು ಜಿಲ್ಲೆ, ತಾಲ್ಲೂಕು ಮರಳು ಮೇಲ್ವಿಚಾರಣಾ ಸಮಿತಿಗಳು ಜಪ್ತಿ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಕಾಮಗಾರಿಗಳು, ಗ್ರಾಮ ಪಂಚಾಯಿತಿಗಳು ಕೈಗೊಳ್ಳುವ ಕಾಮಗಾರಿಗಳು ಮತ್ತು ನರೇಗಾ ಯೋಜನೆ ಅಡಿ ಕೈಗೊಳ್ಳಲಾದ ಕಾಮಗಾರಿಗಳಿಗೆ ರಾಜ್ಯ ಸರ್ಕಾರವು ಸೂಚಿಸಿದ ದರದಲ್ಲಿ ಈ ಮರಳನ್ನು ಪೂರೈಕೆ ಮಾಡಬೇಕು

l ಕುಡಿಯುವ ನೀರಿನ ಬಾವಿಯ 500 ಮೀಟರ್ ವ್ಯಾಸದ ಪ್ರದೇಶದಲ್ಲಿ ಮರಳು ಗಣಿಗಾರಿಕೆಗೆ ಅವಕಾಶವಿಲ್ಲ. ಹರಿಯುತ್ತಿರುವ ಹೊಳೆಗಳಲ್ಲಿ ಮರಳು ತೆಗೆಯುವಂತಿಲ್ಲ. ಪ್ರಮುಖ ಸೇತುವೆಗಳಿಂದ ಒಂದು ಕಿ.ಮೀ. ದೂರದವರೆಗೂ ಮರಳು ತೆಗೆಯುವಂತಿಲ್ಲ

l ಮರಳು ತೆಗೆಯುವ ಆಳವು 3 ಮೀಟರ್‌ ಮೀರುವಂತಿಲ್ಲ

l ಪರವಾನಗಿ ಪಡೆಯದೇ ಇರುವವರು ಮರಳನ್ನು ಸಂಗ್ರಹಿಸುವಂತಿಲ್ಲ

l ಮರಳು ಸಾಗಣೆಗೆ ಬಳಸುವ 3 ಟನ್‌ಗಿಂತ ಹೆಚ್ಚು ಸಾಮರ್ಥ್ಯದ ವಾಹನಗಳಲ್ಲಿ ಜಿಪಿಎಸ್ ಅಳವಡಿಸಬೇಕು. ಈ ವಾಹನಗಳನ್ನು ಜಿಲ್ಲಾ ಮರಳು ಮೇಲ್ವಿಚಾರಣಾ ಸಮಿತಿಗಳಲ್ಲಿ ನೋಂದಾಯಿಸಬೇಕು

l ಮರಳು ಗಣಿಗಾರಿಕೆಯಿಂದ ಸಂಗ್ರಹಿಸಲಾದ ರಾಜಧನದಲ್ಲಿ ಶೇ 25ರಷ್ಟನ್ನು ಬಜೆಟ್‌ ಅನುದಾನದ ರೂಪದಲ್ಲಿ ಸಂಬಂಧಿತ ಗ್ರಾಮ ಪಂಚಾಯಿತಿಗೆ ನೀಡಬೇಕು

l ಬೇರೆ ರಾಜ್ಯಗಳಿಂದ ತರಲಾಗುವ ಮರಳಿನ ಪ್ರತಿ ಟನ್‌ಗೆ ₹100ರಂತೆ ಶುಲ್ಕವನ್ನು ಸಾಗಣೆದಾರರು ರಾಜ್ಯ ಸರ್ಕಾರಕ್ಕೆ ಪಾವತಿ ಮಾಡಬೇಕು


ಜಿಲ್ಲಾ ಮರಳು ಮೇಲ್ವಿಚಾರಣಾ ಸಮಿತಿ

ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಈ ಸಮಿತಿಯು ಕಾರ್ಯನಿರ್ವಹಿಸಲಿದೆ. ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಹಣಾ ಅಧಿಕಾರಿ, ಪೊಲೀಸ್ ಆಯುಕ್ತ/ಪೊಲೀಸ್ ವರಿಷ್ಠಾಧಿಕಾರಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಹಣಾ ಎಂಜಿನಿಯರ್, ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್, ಅರಣ್ಯ ಸಂರಕ್ಷಣಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ, ಕಂದಾಯ ಉಪವಿಭಾಗೀಯ ಸಹಾಯಕ ಆಯುಕ್ತ, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್, ಖನಿಜ ಇಲಾಖೆಯ ಉಪ ನಿರ್ದೇಶಕರು ಈ ಸಮಿತಿಯ ಸದಸ್ಯರಾಗಿರುತ್ತಾರೆ. ರಾಜ್ಯ ಸರ್ಕಾರವು ಹೊರಡಿಸುವ ಆದೇಶಗಳನ್ನು ಜಾರಿಗೆ ತರುವ ಹೊಣೆ ಈ ಸಮಿತಿಯದ್ದಾಗಿದೆ 

l ಈ ಸಮಿತಿಯು ಕನಿಷ್ಠ ಎರಡು ತಿಂಗಳಿಗೆ ಒಮ್ಮೆ ಸಭೆ ನಡೆಸಬೇಕು

l ಮರಳು ಗಣಿಗಾರಿಕೆಗೆ ಕ್ವಾರಿಗಳು, ಕಿರುಜಲಾಶಯಗಳು, ಬ್ಯಾರೇಜ್‌ಗಳು, ಕೆರೆಗಳಲ್ಲಿ ಹೂಳೆತ್ತುವುದಕ್ಕೆ ಅನುಮತಿ ಮತ್ತು ಪರವಾನಗಿ ನೀಡುವ ಹೊಣೆ

l ಮರಳು ಗಣಿಗಾರಿಕೆಗೆ ನೀಡಬಹುದಾದ ಮೂಲಗಳ ಪರಿಶೀಲನೆ, ಗಣಿಗಾರಿಕೆ ನಡೆಯುತ್ತಿರುವ ಮೂಲಗಳ ಪರಿಶೀಲನೆಗಾಗಿ ಭೇಟಿ

l ತಾಲ್ಲೂಕು ಮರಳು ಮೇಲ್ವಿಚಾರಣಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಹೊಣೆ

l ಗಣಿಗಾರಿಕೆ ಮೂಲಕ ತೆಗೆಯಲಾದ ಮರಳನ್ನು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಬಳಕೆಗೆ ಮೀಸಲಿಡುವ ಅಧಿಕಾರ. ರಾಜ್ಯದ ಬಳಕೆಗೆ ಗುತ್ತಿಗೆದಾರರಿಗೆ ಮರಳು ತೆಗೆಯಲು ಅನುಮತಿ ನೀಡುವ ಅಧಿಕಾರ

l ಅಕ್ರಮ ಮರಳು ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಅಧ್ಯಯನಕ್ಕೆ ಪ್ರತ್ಯೇಕ ತಜ್ಞರ ಸಮಿತಿ ರಚಿಸುವ ಮತ್ತು ಪರಿಹಾರ ಕ್ರಮಗಳನ್ನು ಸೂಚಿಸುವ ಅಧಿಕಾರ

l ಮರಳು ಸಾಗಣೆ ಮೇಲೆ ನಿಗಾ ಇರಿಸಲು ಚೆಕ್‌ಪೋಸ್ಟ್‌ಗಳನ್ನು ರಚಿಸುವ ಅಧಿಕಾರ

l ಹೊಳೆ, ನದಿಗಳಲ್ಲಿ ಇರುವ ಮರಳಿನ ಪ್ರಮಾಣದ ಬಗ್ಗೆ ಪ್ರತೀ ವರ್ಷ ಲೆಕ್ಕಪರಿಶೋಧನೆ ನಡೆಸುವ ಹೊಣೆ


ತಾಲ್ಲೂಕು ಮರಳು ಮೇಲ್ವಿಚಾರಣಾ ಸಮಿತಿ

ತಾಲ್ಲೂಕು ಮಟ್ಟದಲ್ಲಿ ಮರಳು ಮೇಲ್ವಿಚಾರಣಾ ಸಮಿತಿ ರಚನೆಗೆ ಈ ನೀತಿಯಲ್ಲಿ ಅವಕಾಶ ನೀಡಲಾಗಿದೆ. ಜಿಲ್ಲೆಯ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸಂಬಂಧಿತ ತಾಲ್ಲೂಕಿನ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ, ಉಪ ಪೊಲೀಸ್ ವರಿಷ್ಠಾಧಿಕಾರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್, ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್, ತಾಲ್ಲೂಕು ಅರಣ್ಯ ಇಲಾಖೆಯ ರೇಂಜರ್, ತಾಲ್ಲೂಕು ಮೋಟಾರು ವಾಹನ ಪರಿಶೀಲನಾ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ, ಗಣಿ ಇಲಾಖೆಯ ಅಧಿಕಾರಿ, ರೆವೆನ್ಯೂ ಇನ್ಸ್‌ಪೆಕ್ಟರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈ ಸಮಿತಿಯಲ್ಲಿ ಇರುತ್ತಾರೆ.

l ಪ್ರತಿ ತಿಂಗಳು ಈ ಸಮಿತಿ ಸಭೆ ಸೇರಬೇಕು

l ತಮ್ಮ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆಯ ಮೂಲಗಳನ್ನು ಪರಿಶೀಲಿಸುವ ಮತ್ತು ಗುರುತಿಸುವ ಅಧಿಕಾರ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆಗೆಯಲಾದ ಮರಳನ್ನು ವಿಲೇವಾರಿ ಮಾಡಬೇಕು

l 1, 2 ಮತ್ತು 3ನೇ ವರ್ಗದ ಕ್ವಾರಿಗಳಲ್ಲಿ ತೆಗೆಯಬಹುದಾದ ಮರಳಿನ ಪ್ರಮಾಣವನ್ನು ಅಂದಾಜಿಸಬೇಕು. ಮರಳು ಗಣಿಗಾರಿಕೆಗೆ ಗುರುತಿಸಲಾದ ಸ್ಥಳದ ವಿವರವಾದ ನಕ್ಷೆಯನ್ನು ಸಿದ್ಧಪಡಿಸಬೇಕು

l ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸುವುದು ಮತ್ತು ಜಿಲ್ಲಾ ಮರಳು ಸಮಿತಿಗೆ ಶಿಫಾರಸು ಸಲ್ಲಿಸಬೇಕು

l ತನ್ನ ವ್ಯಾಪ್ತಿಯ ಎಲ್ಲಾ ಮರಳು ಕ್ವಾರಿಗಳನ್ನು ಪರಿಶೀಲಿಸುವ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕು

l ಜಿಲ್ಲಾ ಮರಳು ಮೇಲ್ವಿಚಾರಣಾ ಸಮಿತಿಯ ಆದೇಶ ಮತ್ತು ಸೂಚನೆಗಳನ್ನು ಅನುಷ್ಠಾನಕ್ಕೆ ತರುವ ಹೊಣೆ


ರಾಜ್ಯ ಸಮಿತಿ

ರಾಜ್ಯದ ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ರಾಜ್ಯ ಮರಳು ಮೇಲ್ವಿಚಾರಣಾ ಸಮಿತಿ ಕಾರ್ಯನಿರ್ವಹಿಸಲಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಸಾರಿಗೆ ಇಲಾಖೆ ಆಯುಕ್ತರು, ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕರು, ಗಣಿ ಇಲಾಖೆಯ ಆಯುಕ್ತ/ನಿರ್ದೇಶಕರು ಮತ್ತು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಈ ಸಮಿತಿಯ ಸದಸ್ಯರಾಗಿರುತ್ತಾರೆ. ರಾಜ್ಯದಲ್ಲಿನ ಮರಳು ಗಣಿಗಾರಿಕೆಯ ಪರಿಶೀಲನೆಗಾಗಿ ಈ ಸಮಿತಿಯು ವರ್ಷದಲ್ಲಿ ಎರಡು ಬಾರಿ ಸಭೆ ನಡೆಸಬಹುದು.

ಜಲಾಶಯ/ಬ್ಯಾರೇಜ್‌ಗಳಲ್ಲಿ ಮರಳು ಗಣಿಗಾರಿಕೆ

ಜಲಾಶಯಗಳು ಅಥವಾ ಬ್ಯಾರೇಜ್‌ಗಳಲ್ಲಿ ಹೂಳು ತೆಗೆಯಲು ಸರ್ಕಾರದ ಇಲಾಖೆ ಅಥವಾ ಸರ್ಕಾರಿ ನಿಗಮ ಮಂಡಳಿಗೆ ಮಾತ್ರ ಅವಕಾಶವಿದೆ. ಹೂಳು ತೆಗೆಯಬೇಕಿರುವ ಜಾಗದಲ್ಲಿ ಜಿಲ್ಲಾ ಮರಳು ಸಮಿತಿಯು ಸಮೀಕ್ಷೆ ನಡೆಸಬೇಕು. ಹಿರಿಯ ಭೂಗರ್ಭಶಾಸ್ತ್ರಜ್ಞ, ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್, ವಲಯ ಅರಣ್ಯಾಧಿಕಾರಿ ಹಾಗೂ ತಹಶೀಲ್ದಾರ್ ಅವರನ್ನೊಳಗೊಂಡ ತಂಡವು ಹೂಳು ತೆಗೆಯಬೇಕಾದ ಸ್ಥಳವನ್ನು ಗುರುತಿಸಬೇಕು. ಗೊತ್ತುಪಡಿಸಿದ ಜಾಗದಲ್ಲಿ ಎಷ್ಟು ಮರಳು ಸಿಗಬಹುದು ಎಂದು ಅಂದಾಜು ಮಾಡಬೇಕು.

ಸ್ಪಷ್ಟ ಶಿಫಾರಸಿನೊಂದಿಗೆ ಜಿಲ್ಲಾ ಮರಳು ಸಮಿತಿಗೆ ವರದಿ ಸಲ್ಲಿಸಬೇಕು. ಜಿಲ್ಲಾ ಮರಳು ಸಮಿತಿಯ ಅನುಮತಿ ಸಿಕ್ಕ ಬಳಿಕ ಸಂಬಂಧಪಟ್ಟ ಇಲಾಖೆ ಅಥವಾ ಸರ್ಕಾರಿ ನಿಗಮ ಮಂಡಳಿಯು ಸರ್ಕಾರ ಗೊತ್ತುಪಡಿಸಿದ ದರವನ್ನು ಪಾವತಿಸಿ ಜಲಾಶಯ ಅಥವಾ ಬ್ಯಾರೇಜ್‌ನಲ್ಲಿ ಹೂಳು ತೆಗೆಯಬಹುದು. ಮರಳು ಸಾಗಿಸಲು ಅನುಮತಿಯನ್ನು ಪಡೆದುಕೊಳ್ಳಬೇಕು. ದಾಸ್ತಾನು ಪರಿಶೀಲನೆ ನಡೆಸಲು ಜಿಲ್ಲಾ ಅಥವಾ ತಾಲ್ಲೂಕು ಮರಳು ಸಮಿತಿಯ ಅಧಿಕಾರಿಗಳಿಗೆ ಅನುವು ಮಾಡಿಕೊಡಬೇಕು. 

ನಿಯಮ 21 ಯು ಪ್ರಕಾರ, ‘ಮರಳು ಮಿತ್ರ’ ಆ್ಯಪ್‌ ಮೂಲಕ ಮರಳು ಖರೀದಿಗೆ ನೋಂದಣಿ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬೇಕು. ಸರ್ಕಾರದ ಮಾನದಂಡದ ಪ್ರಕಾರ, ಮರಳು ಗಣಿಗಾರಿಕೆ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಗಣಿಗಾರಿಕೆಯಲ್ಲಿ ಹೊರತೆಗೆದ ಮರಳಿನ ಪ್ರಮಾಣ, ಸಾಗಣೆ ಮಾಡಿದ ಪ್ರಮಾಣ, ಮಾರಾಟ ಮಾಡಿದ ಪ್ರಮಾಣ ಹಾಗೂ ದಾಸ್ತಾನು ಪ್ರಮಾಣದ ಕುರಿತು ಪ್ರತೀ ತಿಂಗಳು ಪ್ರಕಟಣೆ ಹೊರಡಿಸಬೇಕು.


ಗುತ್ತಿಗೆದಾರರ ಜವಾಬ್ದಾರಿಗಳು

l ಮರಳು ಗಣಿಗಾರಿಕೆ ಗುತ್ತಿಗೆ ಪಡೆದವರು ಕರ್ನಾಟಕ ಉಪಖನಿಜ (ತಿದ್ದುಪಡಿ) ನಿಯಮಗಳು 2021 ಅನ್ನು ಪಾಲಿಸಬೇಕು

l ಸರ್ಕಾರ ಗೊತ್ತುಪಡಿಸಿದ ರಾಜಧನ ಪಾವತಿಸಬೇಕು

l ಗುತ್ತಿಗೆದಾರರು ಸುಸಜ್ಜಿತ ಕಚೇರಿ, ವೇ ಬ್ರಿಜ್ ಹೊಂದುವುದು ಕಡ್ಡಾಯ

l ದಾಸ್ತಾನು ಜಾಗದಲ್ಲಿ ಭದ್ರತಾ ಸಿಬ್ಬಂದಿ ನೇಮಿಸಬೇಕು

l ಹೂಳು ತೆಗೆದ ಪ್ರಗತಿಯ ವರದಿಯನ್ನು ಪ್ರತೀ ಮೂರು ತಿಂಗಳು, ಆರು ತಿಂಗಳು, ವರ್ಷಕ್ಕೊಮ್ಮೆ (ಯಾವುದು ಅನ್ವಯವೋ ಅದು) ಜಿಲ್ಲಾ ನಿರ್ದೇಶಕರು ಅಥವಾ ಹಿರಿಯ ಭೂಗರ್ಭಶಾಸ್ತ್ರಜ್ಞರಿಗೆ ಸಲ್ಲಿಸಬೇಕು

l ನಿಯಮಗಳನ್ನು ಉಲ್ಲಂಘಿಸಿದ ಗುತ್ತಿಗೆದಾರರಿಗೆ ಸಕ್ಷಮ ಪ್ರಾಧಿಕಾರ ನೋಟಿಸ್ ನೀಡಬಹುದು. ಉಲ್ಲಂಘನೆ ಮುಂದುವರಿದಲ್ಲಿ ಗುತ್ತಿಗೆಯನ್ನು ರದ್ದುಪಡಿಸುವ ಹಾಗೂ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸುವ ಅವಕಾಶವಿದೆ

ಮರಳು ಉತ್ಪಾದನೆ ಮಿತಿ

ವಾರ್ಷಿಕವಾಗಿ ಮರಳು ಹೊರತೆಗೆಯಲು ಅನುಮತಿ ನೀಡಿರುವ ಪ್ರಮಾಣದ ಶೇ 50ರಷ್ಟು ಮರಳನ್ನು ಗುತ್ತಿಗೆದಾರರು ಹೊರತೆಗೆದು ಸಾಗಣೆ ಮಾಡುವುದು ಕಡ್ಡಾಯ. ತಪ್ಪಿದರೆ, ಹೆಚ್ಚುವರಿ ರಾಜಧನ ಪಾವತಿಸಬೇಕು ಎಂದು ನಿಯಮ ಹೇಳುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಇದರಿಂದ ವಿನಾಯಿತಿ ಇದೆ. 

ಗುತ್ತಿಗೆ ರದ್ದತಿ

ಗುತ್ತಿಗೆದಾರರು ತಮ್ಮ ಗಣಿಗಾರಿಕೆ ಗುತ್ತಿಗೆಯನ್ನು ಸರ್ಕಾರಕ್ಕೆ ಮರಳಿ ಒಪ್ಪಿಸಲು ನಿರ್ಧರಿಸಿದಲ್ಲಿ, 90 ದಿನ ಮುಂಚಿತವಾಗಿ ಮಾಹಿತಿ ನೀಡಬೇಕು. ಗುತ್ತಿಗೆದಾರರು ಅರ್ಜಿ ಸಲ್ಲಿಸಿದ 90 ದಿನದಲ್ಲಿ, ನಿಯಮಗಳನ್ನು ಗುತ್ತಿಗೆದಾರರು ಪಾಲಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಿದ ಬಳಿಕ ಹಿರಿಯ ಭೂಗರ್ಭ ವಿಜ್ಞಾನಿ ಅಥವಾ ಉಪನಿರ್ದೇಶಕರು ಒಪ್ಪಿಗೆ ನೀಡಬೇಕು. ಗುತ್ತಿಗೆದಾರರು ಕ್ವಾರಿಯನ್ನು ಮತ್ತೊಬ್ಬರಿಗೆ ಹಸ್ತಾಂತರ ಮಾಡುವಂತಿಲ್ಲ.

ಪಟ್ಟಾ ಜಮೀನಿನಲ್ಲಿ ನಿಷಿದ್ಧ

l ನಿರ್ದಿಷ್ಟ ಕಾರಣಗಳು ಇಲ್ಲದ ಹೊರತು ಪಟ್ಟಾ ಜಮೀನಿನಲ್ಲಿ ಸಾಮಾನ್ಯ ಮರಳು ಗಣಿಗಾರಿಕೆ ನಡೆಸುವಂತಿಲ್ಲ

l ನದಿ ಸಕ್ರಿಯವಾಗಿರುವ ತೀರದ ಸಮೀಪದ ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆ ನಿಷಿದ್ಧ

l ಸ್ಪಷ್ಟ ಕಾರಣ ನೀಡಿದ ಬಳಿಕ, ನದಿತೀರದಿಂದ 50 ಮೀಟರ್ ದೂರದಲ್ಲಿರುವ ಪಟ್ಟಾ ಜಮೀನಿಗೆ ಅನುಮತಿ ನೀಡಬಹುದು

l ಮರಳು ಗಣಿಗಾರಿಕೆ ಅವಧಿ ಗರಿಷ್ಠ 5 ವರ್ಷಗಳು ಅಥವಾ ಮರಳು ಮುಗಿಯುವವರೆಗೆ. ಯಾವುದು ಮೊದಲೋ ಅದು ಅನ್ವಯ 

l ಕರಾವಳಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವವರು ಶೇ 50ರಷ್ಟು ಹೆಚ್ಚುವರಿ ರಾಜಧನ ನೀಡಬೇಕು 

l 3, 4 ಮತ್ತು ಅದಕ್ಕೂ ಹೆಚ್ಚಿನ ವರ್ಗದ ಕ್ವಾರಿಗಳಲ್ಲಿ ನದಿಪಾತ್ರದಿಂದ 50 ಮೀಟರ್ ದೂರದಲ್ಲಿ ಅಥವಾ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮರಳು ದಾಸ್ತಾನು ಮಾಡಲು ಅವಕಾಶವಿದೆ. ಈ ವರ್ಗದ ಕ್ವಾರಿಗಳಲ್ಲಿ ತೆಗೆದ ಮರಳನ್ನು ರಾಜ್ಯದ ಯಾವ ಭಾಗಕ್ಕಾದರೂ ಸಾಗಣೆ ಮಾಡಬಹುದು 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು