ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರದ ವಿಶೇಷ: ‘ಸ್ಮಾರ್ಟ್‌ ಸಿಟಿ’ಗೆ ಗ್ರಹಣ

Last Updated 26 ಸೆಪ್ಟೆಂಬರ್ 2020, 21:18 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಸಮಗ್ರ ಮೂಲಸೌಕರ್ಯಗಳುಳ್ಳ, ಸ್ವಚ್ಛ ಮತ್ತು ಸುಸ್ಥಿರ ನಗರಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ರಾಜ್ಯದಲ್ಲಿ ‘ಗ್ರಹಣ’ ಹಿಡಿದಿದೆ. ಐದು ವರ್ಷಗಳ ಅವಧಿಯ ಯೋಜನೆ ಆರಂಭವಾಗಿ ನಾಲ್ಕು ವರ್ಷಗಳು ಕಳೆದರೂ ಶೇಕಡ 25ರಷ್ಟೂ ಪ್ರಗತಿಯಾಗಿಲ್ಲ. ಅತಿಯಾದ ಭ್ರಷ್ಟಾಚಾರ, ಪಾಲಿಕೆಗಳು ಮತ್ತು ಸ್ಮಾರ್ಟ್‌ ಸಿಟಿ ಕಂಪನಿಗಳ ನಡುವಿನ ತಿಕ್ಕಾಟ, ಯೋಜನಾ ನಿರ್ವಹಣಾ ಘಟಕಗಳ ಅಸಮರ್ಥತೆಯಿಂದ ಯೋಜನೆ ಕುಂಟುತ್ತಾ ಸಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಬೆಳಗಾವಿ ಮತ್ತು ದಾವಣಗೆರೆ ನಗರಗಳನ್ನು 2016ರ ಜನವರಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿತ್ತು. 2016ರ ಅಕ್ಟೋಬರ್‌ನಲ್ಲಿ ಹುಬ್ಬಳ್ಳಿ– ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ನಗರಗಳನ್ನು ಎರಡನೇ ಹಂತದಲ್ಲಿ ಆಯ್ಕೆ ಮಾಡಲಾಗಿತ್ತು. 2017ರ ಜೂನ್‌ನಲ್ಲಿ ಬೆಂಗಳೂರು ನಗರವೂ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿತ್ತು.

ಮೊದಲ ಹಂತದ ನಗರಗಳಲ್ಲಿ ಯೋಜನೆ ಅನುಷ್ಠಾನ ಆರಂಭವಾಗಿ ನಾಲ್ಕು ವರ್ಷಗಳು ಕಳೆದಿವೆ. ಕಾಮಗಾರಿಗಳಿಗಾಗಿ ಅಗೆದ ಬಹುತೇಕ ರಸ್ತೆಗಳು ವರ್ಷದಿಂದ ಹಾಗೆಯೇ ಇವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ, ಸ್ಥಳೀಯ ಸಂಸ್ಥೆಗಳ ಪಾಲುದಾರಿಕೆ ಕಾಮಗಾರಿಗಳು ಹಾಗೂ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಯೋಜನೆಗಳು ಸೇರಿದಂತೆ ಏಳು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ₹ 12,565.86 ಕೋಟಿ ವೆಚ್ಚದ 564 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಪೈಕಿ ₹ 701.86 ಕೋಟಿ ವೆಚ್ಚದ 122 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಬೆಂಗಳೂರಿನಲ್ಲಿ 15 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇದುವರೆಗೆ ಒಂದೂ ಪೂರ್ಣಗೊಂಡಿಲ್ಲ.

₹ 7,499.51 ಕೋಟಿ ವೆಚ್ಚದ 283 ಕಾಮಗಾರಿಗಳು ಆರಂಭವಾಗಿದ್ದು, ತೆವಳುತ್ತಾ ಸಾಗುತ್ತಿವೆ. ₹ 2047.7 ಕೋಟಿ ವೆಚ್ಚದ 87 ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದ್ದರೆ, ₹ 2,132.79 ಕೋಟಿ ವೆಚ್ಚದ 65 ಕಾಮಗಾರಿಗಳ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದೆ. ₹ 184 ಕೋಟಿ ವೆಚ್ಚದ 7 ಕಾಮಗಾರಿಗಳು ಇನ್ನೂ ಪರಿಕಲ್ಪನೆಯ ಹಂತದಲ್ಲೇ ಇವೆ.

ಹೆಜ್ಜೆ ಹೆಜ್ಜೆಗೂ ತಡೆ: ಯೋಜನೆ ಜಾರಿಯಲ್ಲಿರುವ ಎಲ್ಲ ನಗರಗಳಲ್ಲಿ ಕಾಮಗಾರಿಗಾಗಿ ರಸ್ತೆ ಅಗೆದು ವರ್ಷ ಕಳೆದರೂ ಕೆಲಸ ಮುಗಿದಿಲ್ಲ. ಕೋವಿಡ್‌ ಪಿಡುಗು ಕಾಣಿಸಿಕೊಳ್ಳುವ ಮೊದಲೇ ಹಲವು ಗುತ್ತಿಗೆದಾರರು ಕೆಲಸ ಮಾಡಲಾಗದೇ ಕೈಚೆಲ್ಲಿ ಕುಳಿತಿದ್ದರು. ಚುನಾಯಿತ ಪ್ರತಿನಿಧಿಗಳ ಹಸ್ತಕ್ಷೇಪದ ಕಾರಣ ನೀಡಿ ಹಲವರು ಕಾಮಗಾರಿಯನ್ನೇ ಸ್ಥಗಿತಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ ಕಾಮಗಾರಿ ಇದಕ್ಕೆ ಉದಾಹರಣೆ.

‘ಅಭಿವೃದ್ಧಿಯನ್ನು ವಿಸ್ತರಿಸುವ ಸದುದ್ದೇಶದಿಂದ ಸ್ಮಾರ್ಟ್‌ ಸಿಟಿ ಯೋಜನೆ ರೂಪುಗೊಂಡಿತ್ತು. ಆದರೆ, ಕರ್ನಾಟಕದಲ್ಲಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಎಂಬ ಕಂಪನಿಗಳ ಮೂಲಕ ಜನರ ಸಹಭಾಗಿತ್ವ ಇಲ್ಲದೆಯೇ ಕೆಲಸ ಮಾಡಲಾಗುತ್ತಿದೆ. ಹಣ ಖರ್ಚು ಮಾಡುವುದು ಮತ್ತು ಲೂಟಿ ಹೊಡೆಯುವುದರ ಬಗ್ಗೆಯೇ ಎಲ್ಲರಿಗೂ ಹೆಚ್ಚು ಆಸಕ್ತಿ ಇದೆ. ಇದರಿಂದಾಗಿಯೇ ಸ್ಮಾರ್ಟಿ ಸಿಟಿ ಯೋಜನೆ ರಾಜ್ಯದಲ್ಲಿ ಬಹುತೇಕ ವೈಫಲ್ಯದತ್ತ ಸಾಗಿದೆ’ ಎಂದು ಆರೋಪಿಸುತ್ತಾರೆ ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಸಂಚಾಲಕ ಪೃಥ್ವಿ ರೆಡ್ಡಿ.

ಟೆಂಡರ್‌ನಲ್ಲೇ ವಿಳಂಬ: ‘ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಟೆಂಡರ್‌ ಹಂತದಲ್ಲಿ ಅತಿಯಾದ ವಿಳಂಬವಾಗುತ್ತಿದೆ. ಬಹುತೇಕ ಕಾಮಗಾರಿಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಟೆಂಡರ್‌ ನಡೆಸಲಾಗಿದೆ. ಬೆಳಗಾವಿ, ಹುಬ್ಬಳ್ಳಿ– ಧಾರವಾಡ, ದಾವಣಗೆರೆ, ಶಿವಮೊಗ್ಗ ನಗರಗಳಲ್ಲಿ ಟೆಂಡರ್‌ ಪೂರ್ಣಗೊಂಡಿದ್ದರೂ ಗುತ್ತಿಗೆದಾರರಿಗೆ ಒಪ್ಪಿಗೆ ಪತ್ರ (ಎಲ್‌ಒಎ) ನೀಡದೇ ವರ್ಷಕ್ಕೂ ಹೆಚ್ಚು ಕಾಲದಿಂದ ಸತಾಯಿಸುತ್ತಿರುವ ಪ್ರಕರಣಗಳಿವೆ’ ಎನ್ನುತ್ತಾರೆ ಈ ಯೋಜನೆಯ ಹಲವು ಟೆಂಡರ್‌ಗಳಲ್ಲಿ ಭಾಗಿಯಾಗಿರುವ ಗುತ್ತಿಗೆದಾರರೊಬ್ಬರು.

ಟೆಂಡರ್‌ ಮುಗಿದು ಕೆಲಸ ಆರಂಭಿಸಿದ ತಕ್ಷಣವೇ ಮಹಾನಗರ ಪಾಲಿಕೆ ಸದಸ್ಯರು, ಸ್ಥಳೀಯ ಶಾಸಕರಿಂದ ಸಚಿವರವರೆಗೆ ಎಲ್ಲ ಹಂತದಲ್ಲೂ ಹಸ್ತಕ್ಷೇಪ ಆರಂಭವಾಗುತ್ತಿದೆ. ಕೆಲವು ಕಡೆ ಮಹಾನಗರ ಪಾಲಿಕೆಗಳೇ ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಗೆ ನೇರವಾಗಿ ಅಡ್ಡಿಪಡಿಸುತ್ತಿವೆ ಎಂದು ದೂರುತ್ತಾರೆ ಅವರು.

ತ್ವರಿತ ಕಾಮಗಾರಿಗೆ ಸೂಚನೆ
‘ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಉದ್ದೇಶದ ಘಟಕಗಳ ನೋಂದಣಿ ತಡವಾಗಿತ್ತು. ಇದು ಕಾಮಗಾರಿಗಳ ವಿಳಂಬಕ್ಕೆ ಮುಖ್ಯ ಕಾರಣ. ಕೇಂದ್ರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಕೂಡ ಕಾಮಗಾರಿ ನಿಧಾನವಾಗಲು ಕಾರಣ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಪ್ರತಿಕ್ರಿಯಿಸಿದರು.

‘ಸ್ಮಾರ್ಟ್ ಸಿಟಿ ಅನುಷ್ಠಾನವಾಗುತ್ತಿರುವ ಎಲ್ಲ ನಗರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕಾಮಗಾರಿ ತ್ವರಿತಗೊಳಿಸಲು ನಿರ್ದೇಶನ ನೀಡಲಾಗಿದೆ. ಭ್ರಷ್ಟಾಚಾರದ ಕುರಿತು ಯಾವುದೇ ದೂರು ನನ್ನ ಗಮನಕ್ಕೆ ಬಂದಿಲ್ಲ. ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಅಸಮರ್ಥ ಪಿಎಂಸಿಗಳಿಂದ ತೊಡಕು
‘ರಾಜ್ಯದಲ್ಲಿ ಬಹುತೇಕ ಸ್ಮಾರ್ಟ್‌ ಸಿಟಿ ಕಂಪನಿಗಳು 2017ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಕೇಂದ್ರದ ಮಾರ್ಗಸೂಚಿ ಪ್ರಕಾರ 2021ರವರೆಗೂ ಅವಧಿ ಇದೆ. ಮೊದಲ ಒಂದು ವರ್ಷ ಯೋಜನೆಗಳನ್ನು ರೂಪಿಸಲು ಬೇಕಾಯಿತು. ಕೋವಿಡ್‌ ಕಾರಣದಿಂದ ಆರು ತಿಂಗಳಿಂದ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿವೆ. ಅನುಭವವಿಲ್ಲದ ಸಂಸ್ಥೆಗಳಿಗೆ ಯೋಜನಾ ನಿರ್ವಹಣಾ ಘಟಕಗಳ ಜವಾಬ್ದಾರಿ ನೀಡಿರುವುದು ಕೆಲವು ಕಾಮಗಾರಿಗಳು ವಿಳಂಬವಾಗಲು ಕಾರಣ’ ಎಂದು ರಾಜ್ಯದ ಸ್ಮಾರ್ಟ್‌ ಸಿಟಿ ಯೋಜನೆಯೊಂದರ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

**
ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ ಮತ್ತು ಆಡಳಿತಶಾಹಿಯ ಅಸಹಕಾರದಿಂದ ಅನುಷ್ಠಾನ ವಿಳಂಬವಾಗುತ್ತಿದೆ. ಗುತ್ತಿಗೆದಾರರು ಹೈರಾಣಾಗಿದ್ದಾರೆ.
-ಸುದರ್ಶನ್‌ ಎಸ್‌.ಬಿ., ಗುತ್ತಿಗೆದಾರರು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT