ಶುಕ್ರವಾರ, ಸೆಪ್ಟೆಂಬರ್ 24, 2021
21 °C

Explainer | ಚೀನಾ ಹೆಣೆದ 'ಮುತ್ತಿನಮಾಲೆ': ಭಾರತದ ಪಾಲಿಗೆ ಮಗ್ಗುಲಿನ ಕೆಂಡ

ಪ್ರಜಾವಾಣಿ ವೆಬ್‌ಡೆಸ್ಕ್ Updated:

ಅಕ್ಷರ ಗಾತ್ರ : | |

ಭಾರತದ ಸುತ್ತಲೂ ಮಿಲಿಟರಿ (ನೌಕಾನೆಲೆ) ನೆಲೆಗಳನ್ನು ಸ್ಥಾಪಿಸುವ ಚೀನಾದ ‘ಮುತ್ತಿನಮಾಲೆ’ (ಸ್ಟ್ರಿಂಗ್ ಆಫ್ ಪರ್ಲ್ಸ್‌) ಹುನ್ನಾರದ ಬಗ್ಗೆ ಹತ್ತಾರು ವರ್ಷಗಳಿಂದ ಪ್ರಸ್ತಾಪವಾಗುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ಭಾರತವೂ ಅಗತ್ಯ ಕ್ರಮಗಳನ್ನು ಆರಂಭಿಸಿ ಚೀನಾವನ್ನು ಕಟ್ಟಿಹಾಕಲು ಮುಂದಾಗಿದೆ ಎಂಬ ವಿಶ್ಲೇಷಣೆಗಳೂ ಚಾಲ್ತಿಯಲ್ಲಿವೆ. ಬಹುಕಾಲದಿಂದ ಚರ್ಚೆಯಾಗುತ್ತಿರುವ 'ಮುತ್ತಿನಮಾಲೆ' ಹುನ್ನಾರದ ವಿಚಾರ, ಇದೀಗ ಗಾಲ್ವಾನ್ ಕಣಿವೆ ಸಂಘರ್ಷದ ನಂತರ ಮತ್ತೆ ಮುನ್ನೆಲೆಗೆ ಬಂದಿದೆ.

ಹಿಂದೂಮಹಾಸಾಗರ ಪ್ರದೇಶದಲ್ಲಿ (ಇಂಡಿಯನ್ ಓಷನ್ ರೀಜನ್ - ಐಓಆರ್) ಭಾರತವನ್ನು ಸುತ್ತುವರಿಯುವ ಚೀನಾದ ಜಿಯೊಪಾಲಿಟಿಕ್ಸ್‌ಗೆ ರಾಜತಾಂತ್ರಿಕರು ಮತ್ತು ರಕ್ಷಣಾ ತಜ್ಞರು ನೀಡಿರುವ ಹೆಸರು ‘ಸ್ಟ್ರಿಂಗ್ ಆಫ್ ಪರ್ಲ್ಸ್‌’. ಅದನ್ನು ಕನ್ನಡದಲ್ಲಿ ನಾವು ಮುತ್ತಿನಮಾಲೆ ಎನ್ನಬಹುದು. ಇದರ ವಿಸ್ತಾರ ಎಷ್ಟು ದೊಡ್ಡದು ಗೊತ್ತೆ? ಚೀನಾದ ಮುಖ್ಯಭೂಮಿಯಿಂದ ಸುಡಾನ್‌ ದೇಶದ ಬಂದರಿನವರೆಗೆ ಈ ಮುತ್ತಿನ ಮಾಲೆಯ ವ್ಯಾಪ್ತಿ ಹರಡಿದೆ. ಭಾರತದ ಪಶ್ಚಿಮಕ್ಕಿರುವ ಅರಬ್ಬಿ ಸಮುದ್ರ, ದಕ್ಷಿಣಕ್ಕಿರುವ ಹಿಂದೂ ಮಹಾಸಾಗರ ಮತ್ತು ಪೂರ್ವಕ್ಕಿರುವ ಬಂಗಾಳಕೊಲ್ಲಿಯನ್ನು ಇದು ಆವರಿಸಿಕೊಳ್ಳುತ್ತದೆ.

ಗ್ವಾದರ್ ಬಂದರಿನಿಂದ ಚೀನಾವನ್ನು ಅಕ್ಷಯ್ ಚಿನ್ ಕಣಿವೆಯ ಮೂಲಕ ಸಂಪರ್ಕಿಸುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಹೆಸರಿನಲ್ಲಿ ಆರಂಭವಾದ ದೊಡ್ಡ ಯೋಜನೆಯು ನಂತರದ ದಿನಗಳಲ್ಲಿ ಒನ್ ಬೆಲ್ಟ್‌ ಒನ್ ರೋಡ್ (ಒಬಿಒರ್) ಎಂದು ತನ್ನ ವ್ಯಾಪ್ತಿ ಹಿಗ್ಗಿಸಿಕೊಂಡಿತು. ಈ ಯೋಜನೆಯಡಿ ಚೀನಾ ಹಲವು ಭೂ ಮಾರ್ಗ ಮತ್ತು ಸಮುದ್ರ ಮಾರ್ಗಗಳನ್ನು ರೂಪಿಸಲಿದೆ. ವ್ಯಾಪಾರದ ಹೆಸರಿನಲ್ಲಿ ರೂಪುಗೊಳ್ಳುವ ಈ ರಸ್ತೆಯು ನಂತರದ ದಿನಗಳಲ್ಲಿ ಚೀನಾದ ಬೃಹತ್ ಮಿಲಿಟರಿ ಮಹತ್ವಾಕಾಂಕ್ಷೆಯ ಭಾಗವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಲಡಾಖ್‌ನಲ್ಲಿ ಯುದ್ಧವಾದರೆ ಚೀನಾ ಸೋಲಬಹುದು ಎನ್ನುತ್ತವೆ ಅಧ್ಯಯನಗಳು


ಭಾರತಕ್ಕೆ ಸಾಗರ ದಿಗ್ಬಂಧನ ವಿಧಿಸುವ ಚೀನಾ ಯತ್ನ (Courtesy- EdgarFabiano - https://commons.wikimedia.org/w/index.php?curid=19198649)

ಭಾರತವು ಈಗಾಗಲೇ ಚೀನಾದ ಮಿಲಿಟರಿ ಮತ್ತು ವಾಣಿಜ್ಯ ಹಿತಾಸಕ್ತಿಯಿಂದ ಸುತ್ತುವರಿಯಲ್ಪಟ್ಟಿದೆ. ಪಾಕಿಸ್ತಾನದಲ್ಲಿ ಪೂರ್ಣ ಪ್ರಮಾಣದ ಚೀನಾದ ನೌಕಾನೆಲೆ ಕಾರ್ಯರಂಭ ಮಾಡಿದರೆ, ಅಲ್ಲಿಗೆ ಭಾರತವನ್ನು ಕಟ್ಟಿಹಾಕುವ ಮುತ್ತಿನಮಾಲೆ ಯತ್ನದ ಕೊನೆಯ ಗುರಿಯನ್ನು ಮುಟ್ಟಿದಂತೆ ಆಗುತ್ತದೆ.

ಜಪಾನ್ ಸೇರಿದಂತೆ ಅಮೆರಿಕದ ಇತರ ಮಿತ್ರರಾಷ್ಟ್ರಗಳ ಆಸುಪಾಸಿನಲ್ಲಿ ಮಿಲಿಟರಿ ಮತ್ತು ವಾಣಿಜ್ಯ ಹಿತಾಸಕ್ತಿಗಳನ್ನು ಚೀನಾ ವ್ಯಾಪಕವಾಗಿ ಹೆಚ್ಚಿಸಿಕೊಂಡಿದೆ. ನಮಗೆ ಭಾರತದ ಸುತ್ತಮುತ್ತ ಏನಾಗುತ್ತಿದೆ ಎಂಬುದು ಮುಖ್ಯವಾಗಿರುವ ಕಾರಣ ಇತರ ದೇಶಗಳ ವಿಚಾರವನ್ನು ಈ ಲೇಖನದಲ್ಲಿ ಹೆಚ್ಚು ಪ್ರಸ್ತಾಪಿಸಿಲ್ಲ. ಆದರೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಪ್ರಬಲವಾದರೆ ಭವಿಷ್ಯದಲ್ಲಿ ಭಾರತಕ್ಕೆ ಹೆಚ್ಚು ಅಪಾಯ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ಏನೆಲ್ಲಾ ನಡೆಯಿತು?


ಮಲಕ್ಕಾ ಜಲಸಂಧಿ (map courtesy- google maps)

ಮಲಕ್ಕಾ ಜಲಸಂಧಿ

ಮಧ್ಯಪ್ರಾಚ್ಯ ದೇಶಗಳಿಂದ ಕಚ್ಚಾ ತೈಲು ಹೊತ್ತ ಹಡಗುಗಳು ಚೀನಾವನ್ನು ಹಿಂದೂ ಮಹಾಸಾಗರದ ಮೂಲಕವೇ ತಲುಪಬೇಕು. ಚೀನಾದ ಶೇ 80ರಷ್ಟು ತೈಲ ವ್ಯವಹಾರ ಇದೇ ಸಾಗರ ಹಾದಿಯನ್ನು ಅವಲಂಬಿಸಿದೆ. ವಿಶ್ವದ ವಿವಿಧ ರಾಷ್ಟ್ರಗಳ ಒಟ್ಟು ವಹಿವಾಟಿನ ಶೇ 60ರಷ್ಟು ಪಾಲಿನ ಸರಕುಗಳೂ ಇದೇ ಹಾದಿಯಲ್ಲಿ ಸಾಗುತ್ತವೆ. ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವವರೆಗೆ ಮಲಕ್ಕಾ ಕೊಲ್ಲಿ (ಮಲಕ್ಕಾ ಸ್ಟ್ರೇಟ್‌) ಸಮುದ್ರ ಮಾರ್ಗವನ್ನು ಕಾಪಾಡಿಕೊಳ್ಳುವುದು ಚೀನಾಗೆ ಅನಿವಾರ್ಯ.

ಹೀಗಾಗಿಯೇ ಮಲಕ್ಕಾ ಜಲಸಂಧಿಯ ಸುತ್ತಲಿರುವ ದೇಶಗಳಾದ ಮಲೇಷಿಯಾ ಮತ್ತು ಸಿಂಗಪುರಗಳ ಜೊತೆಗಿನ ಗೆಳೆತನಕ್ಕಾಗಿ ಚೀನಾ ತುದಿಗಾಲಲ್ಲಿ ನಿಂತಿರುತ್ತೆ.

ಭಾರತಕ್ಕೆ ಮಲಕ್ಕಾ ಜಲಸಂಧಿಯ ಮೇಲೆ ಹಲವು ವರ್ಷಗಳಿಂದ ಬಿಗಿ ಹಿಡಿತವಿದೆ. 1971ರಲ್ಲಿ ಪಾಕಿಸ್ತಾನದೊಂದಿಗೆ ಭಾರತ ಸೆಣೆಸುತ್ತಿದ್ದಾಗ ಚೀನಾ ಮಧ್ಯಪ್ರವೇಶಿಸುವ ಸಾಧ್ಯತೆ ಇತ್ತು. ಇದನ್ನು ತಡೆಯಲು ಭಾರತವು ಮಲಕ್ಕಾ ಕೊಲ್ಲಿಯಲ್ಲಿ ಸಂಚಾರ ನಿರ್ಬಂಧಿಸುವ ಬೆದರಿಕೆ ಹಾಕಬೇಕಾಯಿತು.

1999ರ ಕಾರ್ಗಿಲ್ ಸೆಣೆಸಾಟದ ಸಂದರ್ಭದಲ್ಲಿಯೂ ಪಾಕಿಸ್ತಾನದ ಕರಾಚಿ ಬಂದರಿನ ಕಾರ್ಯನಿರ್ವಹಣೆಯನ್ನು ಭಾರತೀಯ ನೌಕಾಪಡೆ ಅಕ್ಷರಶಃ ನಿರ್ಬಂಧಿಸಿತ್ತು. ಇದೀಗ ಮಲಕ್ಕಾ ಜಲಸಂಧಿಗೆ ಸಮೀಪವಿರುವ, ಆಸ್ಟ್ರೇಲಿಯಾಕ್ಕೆ ಸೇರಿದ ಕೊಕೊಸ್ ಕೀಲಿಂಗ್ ದ್ವೀಪದಲ್ಲಿ ನೌಕಾನೆಲೆ ಸ್ಥಾಪಿಸಲು ಭಾರತ ಮುಂದಾಗಿದೆ. ಆಸ್ಟ್ರೇಲಿಯಾ ಸರ್ಕಾರದೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದವು ಕಾರ್ಯರೂಪಕ್ಕೆ ಬಂದರೆ ಹಿಂದೂ ಮಹಾಸಾಗರದಲ್ಲಿ ಭಾರತ ತನ್ನ ಪಾರಮ್ಯ ಉಳಿಸಿಕೊಳ್ಳಲು ನೆರವಾಗುತ್ತದೆ.

ಮ್ಯಾನ್ಮಾರ್

ಮ್ಯಾನ್ಮಾರ್‌ನ ಕ್ಯೌಪ್ಯು ಬಂದರಿನಲ್ಲಿ ಚೀನಾದ ಅಸ್ತಿತ್ವ ಎದ್ದು ಕಾಣುವಂತೆ ಇದೆ. ಬಂಗಾಳ ಕೊಲ್ಲಿಯಲ್ಲಿ ಚೀನಾಗೆ ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವ ಈ ಬಂದರು ಚೀನಾಗೆ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಇರುವ ದೊಡ್ಡ ಅಸ್ತ್ರ. ಸಂಘರ್ಷ ಸಂದರ್ಭಗಳಲ್ಲಿ ಈ ಬಂದರನ್ನು ಚೀನಾ ನೌಕಾನೆಲೆಯಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನೂ ಮುಕ್ತವಾಗಿರಿಸಿಕೊಂಡಿದೆ. ಮ್ಯಾನ್ಮಾರ್‌ನ ಕ್ಯುಕ್ಯು ಮತ್ತು ಚೀನಾದ ಕನ್ಮಿಂಗ್ ನಡುವಣ 2400 ಕಿ.ಮೀ. ಅಂತರದ ಅನಿಲ ಕೊಳವೆ ಮಾರ್ಗಕ್ಕಾಗಿ ಚೀನಾ ಭಾರಿ ಪ್ರಮಾಣದಲ್ಲಿ ಹೂಡಿಕೆಯನ್ನೂ ಮಾಡಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಕೊಕೊ ದ್ವೀಪಗಳಲ್ಲಿ ಚೀನಾ ಸುಸಜ್ಜಿತ ನೌಕಾನೆಲೆ ನಿರ್ಮಿಸಿದೆ. ಸಂಘರ್ಷದ ಸಂದರ್ಭಗಳಲ್ಲಿ ಇದು ಎರಡೂ ದೇಶಗಳಿಗೆ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಅತಿಮುಖ್ಯ ತಾಣ.

ಇದನ್ನೂ ಓದಿ: Explainer | ಭಾರತ–ಚೀನಾ ಗಡಿ ಸಮಸ್ಯೆಯತ್ತ ಒಂದು ನೋಟ


ಮ್ಯಾನ್ಮಾರ್‌ನ ಕ್ಯೌಪ್ಯುನಿಂದ ಕನ್ಮಿಂಗ್ ಪಟ್ಟಣದ ಸಂಪರ್ಕಕ್ಕೆ ಚೀನಾದ ಯತ್ನ (Courtesy: mapbox)

ಬಾಂಗ್ಲಾದೇಶ

ಬಂಗಾಳಕೊಲ್ಲಿಯ ಹೃದಯಭಾಗದಲ್ಲಿರುವ ಬಾಂಗ್ಲಾದೇಶದ ಚಿತ್ತಂಗಾಂಗ್ ಬಂದರನ್ನು ಚೀನಾ ಅಭಿವೃದ್ಧಿಪಡಿಸಿದೆ. ತನಗೆ ಅವಶ್ಯಕತೆ ಇರುವಾಗ ಯುದ್ಧನೌಕೆಗಳಿಗೆ ಈ ಬಂದರು ಬಳಸಲು ಬಾಂಗ್ಲಾದೊಂದಿಗೆ ಒಪ್ಪಂದವನ್ನೂ ಮಾಡಿಕೊಳ್ಳಲು ಯತ್ನಿಸುತ್ತಿದೆ. ಬಾಂಗ್ಲಾಕ್ಕೆ ಸಬ್‌ಮರೀನ್ ಘಟಕ, ಸೋಲಾರ್ ಘಟಕಗಳನ್ನು ನಿರ್ಮಿಸಿಕೊಟ್ಟಿರುವ ಚೀನಾಗೆ ಈವರೆಗೆ ತನ್ನ ಸಬ್‌ಮರೀನ್‌ಗಳಿಗೆ ಆ ದೇಶದಲ್ಲಿ ನೆಲೆ ಒದಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಾಗೆಂದು ಚೀನಾ ತನ್ನ ಪ್ರಯತ್ನ ಕೈಬಿಟ್ಟಿಲ್ಲ. ಒನ್‌ ಬೆಲ್ಟ್‌ ಒನ್‌ ರೋಡ್ (ಒಬಿಒಆರ್) ಉಪಕ್ರಮದ ಅಡಿಯಲ್ಲಿ ಬಾಂಗ್ಲಾ ಮತ್ತು ಮ್ಯಾನ್ಮಾರ್‌ಗಳಲ್ಲಿ ಚೀನಾ ದೊಡ್ಡಮಟ್ಟದ ಹೂಡಿಕೆ ಮಾಡಿದೆ. 

‘ಚೀನಾ ಮತ್ತು ಭಾರತಗಳ ನಡುವೆ ಪ್ರಾದೇಶಿಕ ಹಿಡಿತಕ್ಕಾಗಿ ಮೇಲಾಟ ನಡೆದಿರುವುದು ನಿಜ. ಆದರೆ ಬಾಂಗ್ಲಾ ಯಾರೊಂದಿಗೂ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. ನಮಗೆ ಇಬ್ಬರೂ ಬೇಕು, ಇಬ್ಬರಿಂದಲೂ ಲಾಭವಾಗಿದೆ. ಮುಂದೆಯೂ ಲಾಭವಾಗಲಿದೆ’ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅಲ್ಲಿನ ಸಂಸತ್ತಿನಲ್ಲಿ ಮಾಡಿದ ಭಾಷಣವೊಂದರಲ್ಲಿ ಇಣುಕಿದ ಅಭಿಪ್ರಾಯ. ಬಾಂಗ್ಲಾ ದೇಶದ ಎರಡು ಬಂದರುಗಳಲ್ಲಿ ಚೀನಾದ ಹಡಗುಗಳಿಗೆ ಲಂಗರು ಹಾಕಲು ಅವಕಾಶ ಸಿಕ್ಕಿದೆ.

ಶ್ರೀಲಂಕಾ

ಹಲವು ಶತಮಾನಗಳಿಂದ ಶ್ರೀಲಂಕಾದೊಂದಿಗೆ ಭಾರತಕ್ಕೆ ಉತ್ತಮ ಸಂಬಂಧವಿದೆ. ಆದರೆ ಇದೀಗ ಚೀನಾ ಸಹ ಶ್ರೀಲಂಕಾದ ನೆಲದಲ್ಲಿ ಕಾಲೂರಲು ಅವಕಾಶ ದಕ್ಕಿಸಿಕೊಂಡಿದೆ. ಶ್ರೀಲಂಕಾದ ಹಂಬಟೊಟ ಬಂದರನ್ನು ಚೀನಾದ ಕಂಪನಿಯೊಂದು ದೊಡ್ಡಮಟ್ಟದ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಿತು. ಸಾಲ ಮರುಪಾವತಿ ಸಾಧ್ಯವಾಗದಿದ್ದಾಗ ಬಂದರಿನ ನಿರ್ವಹಣೆ ಹಕ್ಕನ್ನು ದೀರ್ಘಾವಧಿಗೆ ಬಿಟ್ಟುಕೊಟ್ಟಿತು. ಈ ಮೂಲಕ ಚೀನಾ ನೌಕೆಗಳಿಗೆ ಶ್ರೀಲಂಕಾದಲ್ಲಿ ಲಂಗರು ಹಾಕಲು ತಾಣವೊಂದು ದೊರೆತಂತೆ ಆಯಿತು.

ಶ್ರೀಲಂಕಾದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸಿರಿಸೇನಾ ಸರ್ಕಾರಕ್ಕೆ ಭಾರತದೊಂದಿಗೆ ಸೌಹಾರ್ದ ಸಂಬಂಧವಿತ್ತು. ಆದರೆ ಈಗ ಅಧಿಕಾರದಲ್ಲಿರುವ ರಾಜಪಕ್ಸೆ ಸರ್ಕಾರಕ್ಕೆ ಚೀನಾ ಜತೆಗೆ ಒಡನಾಟ ಹೆಚ್ಚು. ಮೊದಲಿನ ಸೌಹಾರ್ದ ಕುದುರಿಸಿಕೊಳ್ಳಲು ಭಾರತ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಆದರೆ ಚೀನಾ ಸಹ ರಾಜತಾಂತ್ರಿಕ ಪ್ರಯತ್ನಗಳಲ್ಲಿ ಹಿಂದೆಬಿದ್ದಿಲ್ಲ. 

ಇದನ್ನೂ ಓದಿ: ಆಳ-ಅಗಲ | ಹಿಮನದಿ ಮೇಲೊಂದು ಸೇತುವೆ ಮಾಡಿ...


ಪಾಕಿಸ್ತಾನದ ಗ್ವಾದರ್ ಬಂದರು (ಚಿತ್ರಕೃಪೆ: wikipedia)

ಪಾಕಿಸ್ತಾನ

ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹೇಗಿದೆ ಎಂಬ ಬಗ್ಗೆ ಹೊಸದಾಗಿ ಏನನ್ನೂ ಹೇಳಬೇಕಿಲ್ಲ. ಪಾಕಿಸ್ತಾನವು ಚೀನಾದ ಪಾಲಿಗೆ ಸರ್ವಋತು ಗೆಳೆಯ. ಚೀನಾದ ಪಾಲಿಗೆ ಪಾಕಿಸ್ತಾನವೆಂದರೆ ಭಾರತವನ್ನು ಹದ್ದುಬಸ್ತಿನಲ್ಲಿಡಲು ಬೇಕಾದ ನಂಬಿಕಸ್ಥ ಅಸ್ತ್ರ. ಪಾಕಿಸ್ತಾನದ ಗ್ವಾದರ್ ಬಂದರನ್ನು ಚೀನಾ ದೊಡ್ಡಮಟ್ಟದಲ್ಲಿ ಅಭಿವೃದ್ಧಿಪಡಿಸಿದೆ. ತೈಲೋತ್ಪನ್ನಗಳೂ ಸೇರಿದಂತೆ ಇತರೆ ವಾಣಿಜ್ಯ ಸರಕನ್ನು ಅಕ್ಷಯ್‌ ಚಿನ್ ಪ್ರಾಂತ್ಯದ ಮೂಲಕ ನಿರ್ಮಿಸಿರುವ ಹೆದ್ದಾರಿ ಮೂಲಕ ತನ್ನ ದೇಶದೊಳಗೆ ಸಾಗಿಸುವ ಹೆಬ್ಬಾಗಿಲಂತೆ ಚೀನಾ ಗ್ವಾದರ್ ಬಂದರನ್ನು ಬಿಂಬಿಸುತ್ತಿದೆ. ಆದರೆ ಚೀನಾ-ಭಾರತ ನಡುವೆ ಸಂಘರ್ಷ ಏರ್ಪಟ್ಟರೆ ಇದೇ ಬಂದರು ಬಳಸಿಕೊಂಡು ಚೀನಾ ಮತ್ತು ಪಾಕಿಸ್ತಾನದ ನೌಕಾಪಡೆಗಳು ಭಾರತದ ಮೇಲೆ ದಾಳಿ ನಡೆಸುವ ಅಪಾಯವೂ ಎದ್ದು ಕಾಣುವಂತಿದೆ.

ಪಾಕಿಸ್ತಾನದಲ್ಲಿ ಚೀನಾ ಪೂರ್ಣ ಪ್ರಮಾಣದ ಬಂದರು ನಿರ್ಮಿಸಬಹುದು ಎಂದು ಅಮೆರಿಕ ಸೇನಾಧಿಕಾರಿಗಳು ಎಚ್ಚರಿಸಿದ್ದಾರೆ. ಇದು ಪರಿಸ್ಥಿತಿ ಎಷ್ಟು ಬಿಗಡಾಯಿಸಲಿದೆ ಎಂಬುದಕ್ಕೆ ಕೈಗನ್ನಡಿಯಂತಿದೆ.

ಹಿಂದೂ ಮಹಾಸಾಗರದಲ್ಲಿ ಚೀನಾ

ಭಾರತದ ಸುತ್ತಮುತ್ತಲಿರುವ ದೇಶಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವ ಸತತ ಪ್ರಯತ್ನವನ್ನು ಚೀನಾ ಮುಂದುವರಿಸಿದೆ. ಇದರ ಜೊತೆಜೊತೆಗೆ ಆಫ್ರಿಕಾದ ತೀರ ಮತ್ತು ಮಧ್ಯಪ್ರಾಚ್ಯಗಳಲ್ಲಿ ತನ್ನ ಅಸ್ತಿತ್ವ ಎದ್ದು ಕಾಣುವಂತೆ ಮಾಡಿದೆ. ಸುಡಾನ್ ಮತ್ತು ಕೀನ್ಯಾಗಳಲ್ಲಿಯೂ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿಕೊಂಡಿದೆ. ಮಧ್ಯಪ್ರಾಚ್ಯ ಮತ್ತು ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಪ್ರಭಾವಕ್ಕೆ ತಡೆಯೊಡ್ಡಲೆಂದು ಹಿಂದೆ ಫ್ರೆಂಚ್ ವಸಾಹತಾಗಿದ್ದ ಡ್ಜಿಬೌಟಿಯಲ್ಲಿ ಮಿಲಿಟರಿ ನೆಲೆ ಸ್ಥಾಪಿಸಲು ಮುಂದಾಗಿದೆ.

ಚೀನಾ ಕಟ್ಟಿಹಾಕಲು ಭಾರತದ ಅವಿರತ ಯತ್ನ

ಭಾರತದ ಪೂರ್ವಕ್ಕೆ ಇರುವ ದೇಶಗಳಿಗೆ ಹೆಚ್ಚು ಒತ್ತು ನೀಡುವ ‘ಲುಕ್ ಈಸ್ಟ್’ ನೀತಿಯನ್ನು ಭಾರತ ಅಳವಡಿಸಿಕೊಂಡಿದೆ. ಚೀನಾದ ಆಗ್ನೇಯಕ್ಕೆ ಇರುವ ದೇಶಗಳಾದ ತೈವಾನ್, ದಕ್ಷಿಣ ಕೊರಿಯಾ, ಪಿಲಿಪ್ಪೀನ್ಸ್ ಮತ್ತು ಜಪಾನ್‌ ದೇಶಗಳೊಂದಿಗೆ ಸಂಬಂಧ ವೃದ್ಧಿಗಾಗಿ ಭಾರತ ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಪೈಕಿ ಬಹುತೇಕ ಎಲ್ಲ ದೇಶಗಳೊಂದಿಗೆ ಚೀನಾ ಸಮುದ್ರ ಬಳಕೆ ವಿವಾದ ಹೊಂದಿದೆ.

ಮ್ಯಾನ್ಮಾರ್‌ನಲ್ಲಿ ಚೀನಾದ ಪ್ರಭಾವ ತಗ್ಗಿಸಲು ಭಾರತವು 1.75 ಶತಕೋಟಿ ಡಾಲರ್‌ ನೆರವು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ ಭೇಟಿ ನೀಡುವುದರ ಜೊತೆಗೆ ಬಾಂಗ್ಲಾ ಪ್ರಧಾನಿಯನ್ನೂ ಭಾರತಕ್ಕೆ ಸ್ವಾಗತಿಸಿದ್ದರು. ಸೊನಾಡಿಯಾ ಪ್ರದೇಶದಲ್ಲಿ ಅಳ ಸಮುದ್ರದ ಮಿಲಿಟರಿ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಚೀನಾ ಮುಂದಾಗಿವೆ.

ಪಾಕಿಸ್ತಾನದ ಗ್ವಾದರ್‌ನಲ್ಲಿ ಬಂದರು ನಿರ್ಮಿಸುವ ಚೀನಾದ ನಡೆಗೆ ಪ್ರತಿಯಾಗಿ ಭಾರತವು ಇರಾನ್‌ನ ಛಬಹರ್ ಬಂದರು ಅಭಿವೃದ್ಧಿಪಡಿಸಲು ಮುಂದಾಗಿದೆ. ಸೌದಿ ಅರೇಬಿಯಾ, ಇರಾನ್, ಕುವೈತ್, ಒಮಾನ್, ಕತಾರ್ ಮತ್ತು ಅರಬ್ ಸಂಯುಕ್ತ ಸಂಸ್ಥಾನಗಳಿಂದ ಕಚ್ಚಾ ತೈಲ ತುಂಬಿಕೊಂಡ ಹಡಗುಗಳು ಹಾದು ಹೋಗುವ ಹೊರ್ಮುಜ್ ಜಲಸಂಧಿಯ ಕೋಡಿನಲ್ಲಿ ಛಬಹರ್ ಬಂದರು ಇದೆ.

ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ತುರ್ಕಮೆನಿಸ್ತಾನ್, ಉಝ್ಬೆಕಿಸ್ತಾನ್, ಕಿರ್ಗಿಸ್ತಾನ್, ಕಜಕಸ್ತಾನ್ ಮತ್ತು ಮಂಗೋಲಿಯಾಗಳೊಂದಿಗೂ ರಾಜತಾಂತ್ರಿಕ ಸಂಬಂಧ ಸುಧಾರಿಸಿಕೊಳ್ಳಲು ಭಾರತ ಪರಿಶ್ರಮ ಹಾಕಿದೆ. ಜಪಾನ್, ದಕ್ಷಿಣ ಕೊರಿಯಾ ಮತ್ತು ರಷ್ಯಾಗಳೊಂದಿಗೆ ಭಾರತಕ್ಕೆ ಮೊದಲಿನಿಂದಲೂ ಉತ್ತಮ ಸಂಬಂಧವಿದ್ದೇ ಇದೆ.

ಬರಹ: ಡಿ.ಎಂ.ಘನಶ್ಯಾಮ

(ಮಾಹಿತಿ: reconnectingasia.csis.org, thediplomat.com, tfipost.com, indiatimes.com)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು