ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ಸಾಂಪ್ರದಾಯಿಕ ಶಿಕ್ಷಣವೇ ಸರಿ

Last Updated 9 ಜೂನ್ 2020, 1:34 IST
ಅಕ್ಷರ ಗಾತ್ರ

ನಾಡಿನ ಮೂಲೆ ಮೂಲೆಗಳಲ್ಲಿ ಬೋಧನೆ, ಸಂಶೋಧನೆ ಮಾಡುತ್ತಿರುವ ಹತ್ತಾರು ಪ್ರಾಧ್ಯಾಪಕರು ಉನ್ನತ ಶಿಕ್ಷಣದಲ್ಲಿ ಆನ್‌ಲೈನ್ ತರಗತಿಯ ಅನುಕೂಲ ಹಾಗೂ ಅನನುಕೂಲದ ಕುರಿತಂತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಆನ್‌ಲೈನ್ ಪಾಠ ಮಾಡುವಾಗ ಪೋಷಕರು, ಪ್ರಾಧ್ಯಾಪಕರ ಪಾಠ ಶೈಲಿ, ಉಚ್ಛಾರ ದೋಷಗಳಂತಹ ವಿಷಯಗಳನ್ನು ಎತ್ತಿ ಟೀಕಿಸುವ ಪ್ರಮೇಯ ಇದೆ. ಮೊಬೈಲ್‌ ಕ್ಯಾಮೆರಾದ ಮುಂದೆ ಪಾಠ ಮಾಡುವ ಕಲೆ ಹಲವರಿಗೆ ಇನ್ನೂ ಸಿದ್ಧಿಸಿಲ್ಲ. ಗ್ರಾಮೀಣ ಭಾಗದಲ್ಲಿ ಅದೆಷ್ಟೂ ಪೋಷಕರು ಹುಡುಗಿಯರಿಗೆ ಸ್ಮಾರ್ಟ್ ಫೋನ್ ಕೊಡುತ್ತಿಲ್ಲ. ಸ್ಮಾರ್ಟ್ ‌ಫೋನ್‌ಗೆ ಡೇಟಾ ಹಾಕಿಸುವ ತಾಕತ್ತು ಹಲವರಿಗೆ ಇಲ್ಲ. ಕೊರೊನಾ ತಂದಿತ್ತ ಈ ಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಮಾತ್ರ ಆನ್‌ಲೈನ್ ತರಗತಿ ಇರಲಿ, ಇದನ್ನೇ ಮುಂದುವರಿಸಬಾರದು. ಸಾಂಪ್ರದಾಯಿಕ ತರಗತಿ ನಡೆಸದೆ ಹೋದರೆ ಬಹುಪಾಲು ವಿದ್ಯಾರ್ಥಿಗಳು ಬಹಳ ಮಹತ್ವದ ಶೈಕ್ಷಣಿಕ ಮಜಲುಗಳನ್ನು ಕಳೆದುಕೊಳ್ಳುವ ಭೀತಿ ಇದೆ ಎಂಬ ಅಭಿಪ್ರಾಯ ಅವರಿಂದ ವ್ಯಕ್ತವಾಗಿದೆ.

ಪೋಷಕರಿಗಿದು ಬಿಸಿತುಪ್ಪ

ಶೈಕ್ಷಣಿಕ ವಲಯವು ಸಂಪೂರ್ಣ ಸ್ತಬ್ಧಗೊಳ್ಳುವಂತಹ ಇಂತಹ ಆಘಾತವನ್ನು ಎಂದಿಗೂ ಊಹಿಸಿರಲಿಲ್ಲ. ಕೊರೊನಾ ಬಿಕ್ಕಟ್ಟು ಎದುರಾದ ತಕ್ಷಣವೇ ನಮ್ಮ ವಿದ್ಯಾಸಂಸ್ಥೆಗಳು ತಂತ್ರಜ್ಞಾನದ ಮೊರೆ ಹೋದವು. ನಮ್ಮ ಕುಟುಂಬದಲ್ಲಿಯೇ ಮೂರುವರ್ಷದ ಮಗುವಿನಿಂದ ಹಿಡಿದು ಎಂಜಿನಿಯರಿಂಗ್ ಓದುವ ಹುಡುಗರ ತನಕ ಎಲ್ಲರಿಗೂ ಈಗ ಆನ್‍ಲೈನ್ ತರಗತಿಗಳು!

ಇದರಿಂದ ಅವರ ಮೇಲೆ ಮಾತ್ರವಲ್ಲ; ಅವರ ಪೋಷಕರ ಮೇಲೂ ಒತ್ತಡ ಬೀಳುತ್ತಿದೆ. ಮೂರು ಹೊತ್ತೂ ಮೊಬೈಲ್ ಅಥವಾ ಲ್ಯಾಪ್‍ಟಾಪ್‌ನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ಈಗ ಗದರಿಸುವಂತಿಲ್ಲ; ಬದಲಿಗೆ ಅವರಿಗೆ ಇದನ್ನು ಒದಗಿಸುವುದಕ್ಕಾಗಿ ಪೋಷಕರು ಯೋಜನೆ ಹಾಕಿಕೊಳ್ಳಬೇಕಾಗಿದೆ. ಈಗವರು ಇವುಗಳ ಮುಂದೆ ಪ್ರತಿಷ್ಠಾಪನೆ ಮಾಡಿಕೊಳ್ಳುವುದು ಅಧಿಕೃತವಾಗಿದೆ. ಪಾಪ! ನನ್ನ ತಮ್ಮನ ಮೂರು ವರ್ಷದ ಮಗಳು ದಿನಾ ಹತ್ತುಗಂಟೆಗೆ ಆರಂಭವಾಗುವ ತರಗತಿಯನ್ನು ನೋಡುತ್ತಾ ನೋಡುತ್ತಾ ಅವಳ ತಂದೆಯ ಲ್ಯಾಪ್‍ನ ಟಾಪ್‌ನಲ್ಲಿ ಹಾಗೇ ನಿದ್ದೆ ಹೋಗುತ್ತಾಳೆ. ತರಗತಿಯನ್ನು ಅಪ್ಪ ನೋಡುತ್ತಾ ಕೂರಬೇಕು.

ಇನ್ನು ಪದವಿ ಮಕ್ಕಳೋ, ಆಡಿಯೊ, ವಿಡಿಯೊ ಮ್ಯೂಟ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲೋ, ಫೇಸ್‍ಬುಕ್‌ನಲ್ಲೋ ಇನ್ನಾವುದರಲ್ಲೋ ಇರುತ್ತಾರೆ. ಅಧ್ಯಾಪಕರು ಕೊಡುವ ವಿಪರೀತ ಕೆಲಸಗಳಿಗೆ, ಅದನ್ನು ಮುಗಿಸಬೇಕಾದ ವೇಗಕ್ಕೆ ಈಗ ಪೋಷಕರು ತಲೆಕೊಡಬೇಕಾಗಿದೆ.
ಟೆಸ್ಟ್ ಇದ್ದರೆ ಎಷ್ಟು ಫೋನ್ ಬರ್ತವೆ – ಉತ್ತರಕ್ಕಾಗಿ. ನೀನು ಆ ಚಾಪ್ಟರ್ ನೋಡ್ಕೋ, ನಾನು ಈ ಚಾಪ್ಟರ್ ನೋಡ್ಕೊತೀನಿ ಎಂಬ ಈ ವ್ಯವಸ್ಥೆಯಲ್ಲಿ ಅವರು ಯಾವ ಚಾಪ್ಟರನ್ನೂ ನೆಟ್ಟಗೆ ಅರ್ಥ ಮಾಡಿಕೊಳ್ಳಲು ಹೋಗುವುದಿಲ್ಲ. ಇನ್ನು ಲ್ಯಾಬ್‌ ಕ್ಲಾಸ್‌ಗಳನ್ನಾಗಲೀ, ಇನ್ನಿತರ ಪ್ರಾಕ್ಟಿಕಲ್ ಕ್ಲಾಸ್‍ಗಳನ್ನಾಗಲೀ ಆನ್‍ಲೈನ್‍ನಲ್ಲಿ ಮಾಡಲು ಸಾಧ್ಯವೇ ಇಲ್ಲ.

ಮೊದಲೇ ಇಂದಿನ ಮಕ್ಕಳು, ಯುವಕರು ಹಗಲು ರಾತ್ರಿಯ ವ್ಯತ್ಯಾಸವಿಲ್ಲದೆ ತಾಂತ್ರಿಕ ಸಾಧನಗಳಲ್ಲಿ ಮುಳುಗಿ ಹೋಗುತ್ತಾರೆ ಎಂಬ ದುಃಖದಲ್ಲಿದ್ದ ಪೋಷಕರಿಗೀಗ ಇನ್ನೊಂದು ಸಂಕಟ. ಮಕ್ಕಳು ಕುಟುಂಬಗಳೊಳಗೆ, ಸಾಮಾಜಿಕ ವಲಯದೊಳಗೆ ಬೆರೆಯುವುದು ಇನ್ನಷ್ಟು ಕಡಿಮೆಯಾಗಬಹುದು. ಲಾಕ್‍ಡೌನ್ ಅವಧಿಯೇನೋ ಸರಿ. ಆಮೇಲೂ ಇದನ್ನೇ ಮುಂದಕ್ಕೆ ತಂದರೆ ಈ ಮಕ್ಕಳನ್ನು ಕಾಯುವುದು ದೊಡ್ಡ ತಲೆನೋವೇ ಆಗಬಹುದು. ಆನ್‍ಲೈನ್ ಪಾಠ ಆಗುತ್ತಿರುವಾಗಲೇ ಅಸಭ್ಯ ವಿಡಿಯೊ, ತಲೆಹರಟೆಗಳು ಪ್ರತ್ಯಕ್ಷ ಆಗಿರುವ ಅನುಭವ ಅಲ್ಲಲ್ಲಿ ಕಾಣುತ್ತಿದೆ. ಇದನ್ನು ನಿಯಂತ್ರಿಸುವುದು ಕಷ್ಟ.

ಯಾವ ಪಾಠವೂ ಅತ್ಯುತ್ತಮ ಟೀಚರ್ ನಮ್ಮೆದುರಿಗೇ ಮಾಡುವ ಪಾಠಕ್ಕೆ ಸಮವಾಗುವುದಿಲ್ಲ. ಗುಣಮಟ್ಟದ ಅಧ್ಯಾಪಕರೇ ಇಂದಿನ ಅವಶ್ಯಕತೆ. ಮುಖಾಮುಖಿ ಶಿಕ್ಷಣದಲ್ಲಿ ಅವರು ವಿದ್ಯಾರ್ಥಿಗಳ ಶಕ್ತಿ ಮತ್ತು ಮಿತಿ ಅರಿತು ತಿದ್ದುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರಜ್ಞಾನದ ಪ್ರಯೋಜನ ಪಡೆಯುವುದಾದರೆ ಆಗ ಅದು ಇನ್ನಷ್ಟು ಉಪಯುಕ್ತ ಆಗಬಹುದು.
ಎದುರಿಗೆ ವಿದ್ಯಾರ್ಥಿಗಳಿಲ್ಲದೆ ಅಧ್ಯಾಪಕರು ಗೋಡೆ ನೋಡಿಕೊಂಡು ಭಾವನೆಗಳಿಲ್ಲದೇ ಹೇಳುವ ಪಾಠ, ವಿದ್ಯಾರ್ಥಿಗಳನ್ನು ಶಿಕ್ಷಣದಿಂದಲೇ ಮುಖ ತಿರುಗಿಸುವಂತೆ ಮಾಡಿದರೂ ಆಶ್ಚರ್ಯವಿಲ್ಲ. ಪಾರಂಪರಿಕ ಬೋಧನೆಯ ಜೊತೆ ಆಧುನಿಕ ತಂತ್ರಜ್ಞಾನದ ಸಾಧ್ಯತೆಗಳನ್ನು ಮಿತವಾಗಿ ಬೆರೆಸಿದರೆ ಇಂದಿನ ವಿದ್ಯಾರ್ಥಿಗಳಿಗೆ ಅದು ಇಷ್ಟವೂ ಆಗಬಹುದು. ಆದರೆ ಚಿಕ್ಕ ಮಕ್ಕಳಿಗಂತೂ ಇದು ಬೇಕಾಗಿಲ್ಲ.

-ಡಾ. ಬೀನಾ ಪರಿಮಳ,ಲೇಖಕಿ: ಹತ್ತನೇ ತರಗತಿ ಹಾಗೂ ಎಂಜಿನಿಯರಿಂಗ್ ಓದುತ್ತಿರುವ ಮಕ್ಕಳ ಪೋಷಕಿ

***

ಮೊಬೈಲ್‌ಗೆ ಹಣ ಎಲ್ಲಿಂದ ತರೋಣ?

ಗ್ರಾಮೀಣ ಭಾಗದ ಬಡ ಕುಟುಂಬಗಳಲ್ಲಿ ಮೊಬೈಲ್‌ ಫೋನ್‌ ಇಲ್ಲ, ಇದ್ದರೂ ಬೇಸಿಕ್‌ ಸೆಟ್‌ಗಳಿರುತ್ತವೆ. ಈ ಕುಟುಂಬಗಳ ಮಕ್ಕಳು ಆನ್‌ಲೈನ್‌ನಲ್ಲಿ ಪಾಠ ಕೇಳುವುದಾದರೂ ಹೇಗೆ? ಕೂಲಿ ಮಾಡಿ ಹೊಟ್ಟೆ ಹೊರೆಯುವ ಕುಟುಂಬಗಳಿಗೆ ₹10 ಸಾವಿರ ಬೆಲೆಯ ಮೊಬೈಲ್ ಖರೀದಿಸಲು, ನೂರಾರು ರೂಪಾಯಿ ಖರ್ಚು ಮಾಡಿ ಇಂಟರ್‌ನೆಟ್‌ ಹಾಕಿಸಲು ಸಾಧ್ಯವೇ? ಮೊಬೈಲ್‌ ಸಿಗ್ನಲ್‌ಗಳ ಸಮಸ್ಯೆಯೂ ಇದೆ.
ಆನ್‌ಲೈನ್‌ ಶಿಕ್ಷಣ ಆರೋಗ್ಯಕ್ಕೂ ಒಳ್ಳೆಯದಲ್ಲ. ಮೊಬೈಲ್‌ಗಳನ್ನು ಸ್ವಲ್ಪ ಹೊತ್ತು ಬಳಸಿದರೂ ತಲೆ ನೋವು ಬರುತ್ತದೆ. ಹೀಗಿರುವಾಗ ಮಕ್ಕಳು ಇಡೀ ದಿನ ಮೊಬೈಲ್‌, ಕಂಪ್ಯೂಟರ್‌ ಎದುರು ಕೂರಲು ಸಾಧ್ಯವೇ? ಆನ್‌ಲೈನ್‌ ಪಾಠ ಶಾಲಾ ತರಗತಿಯ ವಾತಾವರಣ ಮೂಡಿಸದು.

- ಚಾಮರಾಜ, ಅಂಬಳೆ, ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ

***

ಸಮಸ್ಯೆಯೇ ಅಧಿಕ

ಆನ್‌ಲೈನ್‌ ಶಿಕ್ಷಣದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಸ್ಯೆಯೇ ಹೆಚ್ಚು. ಅದಕ್ಕೆ ಸ್ಮಾರ್ಟ್‌ಫೋನ್ ಖರೀದಿ ಹಾಗೂ ಇಂಟರ್‌ನೆಟ್‌ಗೆ ಹಣ ವ್ಯಯಿಸುವುದು ನಮ್ಮಂತಹವರಿಗೆ ದುಬಾರಿ. ನಗರ, ಪಟ್ಟಣಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕಡೆ ನೆಟ್‌ವರ್ಕ್‌ ಸಮಸ್ಯೆ ಇದೆ. ನಿಗದಿತ ಸಮಯದಲ್ಲಿ ಆನ್‌ಲೈನ್‌ ಪಾಠ ಕೇಳಲು ಮನೆಯ ಮಾಳಿಗೆ ಮೇಲೆ ಹತ್ತಬೇಕಾಗುತ್ತದೆ! ಔರಾದ್‌ ತಾಲ್ಲೂಕು ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಗೆ ಹೊಂದಿಕೊಂಡಿದೆ. ಇಲ್ಲಿ ಹತ್ತಾರು ಸಮಸ್ಯೆಗಳು. ಅದರ ನಡುವೆ ನಮ್ಮ ಮಕ್ಕಳಿಗೆ ಆನ್‌ಲೈನ್‌ ತರಗತಿಯಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಡಿಸಿ ಒಬ್ಬರನ್ನು ಕಾವಲು ಕಾಯಲು ಕೂರಿಸಬೇಕಾದ ಪರಿಸ್ಥಿತಿ ಬರಬಹುದೇನೋ?

- ಗುಂಡಪ್ಪ ಕುಂಬಾರ, ಪಾಲಕ, ಚೆಟ್ನಾಳ, ಔರಾದ್ ತಾಲ್ಲೂಕು, ಬೀದರ್‌ ಜಿಲ್ಲೆ.

***

ಇಲ್ಲಿ ಉತ್ತರದಾಯಿತ್ವ ಅಧಿಕ

ಸಂಕಷ್ಟ ಕಾಲದಲ್ಲಿ ಒದಗಿದ ಆಸರೆ ಆನ್‌ಲೈನ್‌ ತರಗತಿ. ಇಲ್ಲಿ ಉತ್ತರದಾಯಿತ್ವ ಅಧಿಕ. ಯಾಕೆಂದರೆ ಸಾರ್ವಜನಿಕರೂ ಇದನ್ನು ನೋಡುತ್ತಿರುತ್ತಾರೆ. ನೇರವಾಗಿ ಸಂವಾದ ನಡೆಸುವುದಕ್ಕೂ ಅವಕಾಶ ಇದೆ. ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದೇನೆ. ಗ್ರಾಮೀಣ ಭಾಗದಲ್ಲೂ ಮಕ್ಕಳ ಕೈಯಲ್ಲಿ ಸ್ಮಾರ್ಟ್‌ಫೋನ್ ಇರುವುದನ್ನು ಗಮನಿಸಿದ್ದೇನೆ. ಹೊಸ ತಲೆಮಾರು ಬಹಳ ವೇಗವಾಗಿ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ. ಆದರೂ ಎದುರಿಗೆ ಕುಳಿತು ಮಾಡುವ ಬೋಧನೆಗೆ ಇರುವ ಮಹತ್ವ ಇಲ್ಲಿ ಇಲ್ಲ. ತರಗತಿ ಪಾಠವೇ ಉತ್ತಮ ಎಂದು ಹಲವಾರು ವಿದ್ಯಾರ್ಥಿಗಳು ನನ್ನಲ್ಲಿ ಹೇಳಿದ್ದಾರೆ.

- ಡಾ.ನಟರಾಜ್‌ ಹುಳಿಯಾರ್, ಇಂಗ್ಲಿಷ್ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ

***
ಕ್ಯಾಂಪಸ್ ಜೀವಂತಿಕೆ ಇಲ್ಲಿಲ್ಲ

ಆನ್‌ಲೈನ್‌ ಶಿಕ್ಷಣ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧಕ್ಕೆ ಹೊಂದುವ ಮಾದರಿಯಲ್ಲ. ಕ್ಯಾಂಪಸ್‌ಗೆ ಒಂದು ಜೀವಂತಿಕೆ ಇದೆ. ಅಲ್ಲಿ ತರಗತಿ ಪಾಠದ ಹೊರತಾಗಿ ಚರ್ಚೆ, ಸಂವಾದ ನಡೆಯುತ್ತಿರುತ್ತದೆ. ಒಟ್ಟು ಕ್ಯಾಂಪಸ್‌ನ ಸಂಸ್ಕೃತಿಯಲ್ಲಿ ವಿದ್ಯಾರ್ಥಿಗಳು ಕಲಿಯುತ್ತಾರೆ. ದೇಶದಲ್ಲಿ ಇಂದು ಶೇ 100ರಷ್ಟು ಆನ್‌ಲೈನ್‌ ತರಗತಿ ನಡೆಸಲು ಸಾಧ್ಯವೇ ಇಲ್ಲ. ಅದಕ್ಕೆ ಬೇಕಾದ ಸೌಲಭ್ಯ ನಮ್ಮಲ್ಲಿ ಇಲ್ಲ. ಮಾನವಿಕ ವಿಷಯಗಳನ್ನು ಕಲಿಯುವ ಬಹುತೇಕ ಮಂದಿ ಬಡವರು, ತಳವರ್ಗದವರು. ಸ್ಮಾರ್ಟ್‌ಫೋನ್‌ಗಳನ್ನು ಕಷ್ಟಪಟ್ಟು ತೆಗೆದುಕೊಂಡರೂ, ಅದಕ್ಕೆ ಡೇಟಾ ಹಾಕಿಸುವ ಶಕ್ತಿ ಅವರಿಗಿಲ್ಲ. ಆನ್‌ಲೈನ್‌ ಶಿಕ್ಷಣ ತಾತ್ಕಾಲಿಕ ವ್ಯವಸ್ಥೆಯಾಗಬಹುದೇ ಹೊರತು ಶಾಶ್ವತ ಪರಿಹಾರವಾಗಲು ಸಾಧ್ಯವೇ ಇಲ್ಲ.

- ಪ್ರೊ.ಕಿರಣ್‌ ಎಂ.ಗಾಜನೂರು, ಸಹಾಯಕ ಪ್ರಾಧ್ಯಾಪಕ, ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

***
ಉದಾಸೀನದಿಂದ ದೊಡ್ಡಮಟ್ಟಿನ ನಷ್ಟ

ಇಂದು ವಿಚಿತ್ರ ಸನ್ನಿವೇಶ ಎದುರಾಗಿದೆ. ಆನ್‌ಲೈನ್ ಶಿಕ್ಷಣ ಬೇಕೇ ಬೇಡವೇ ಎಂದು ಕೇಳುವ ಸ್ಥಿತಿಯೇ ಇಲ್ಲ. ತರಗತಿಯಂತೆ ಪರಿಪೂರ್ಣವಾಗಿ ಪಾಠ ಮಾಡಲು ಆಗುವುದಿಲ್ಲ ಎಂದು ಹೇಳಿ ಆನ್‌ಲೈನ್ ಶಿಕ್ಷಣವನ್ನು ಕಡೆಗಣಿಸಿದರೆ ದೊಡ್ಡಮಟ್ಟಿನ ನಷ್ಟ ನಿಶ್ಚಿತ. ಈ ಹಂತದಲ್ಲಿ ನಾವು ತುಂಬ ಹೊಣೆಗಾರಿಕೆಯಿಂದ ಯೋಚಿಸಬೇಕು. ಉದಾಸೀನ ತೋರಿದರೆ ಹಿಂದುಳಿಯುತ್ತಲೇ ಹೋಗುತ್ತೇವೆ. ಪೋಷಕರೇ ಈಗ ಉಪನ್ಯಾಸಕರ ಪಾತ್ರ ವಹಿಸಬೇಕು. ಬೇರೆ ದಾರಿಯೇ ಇಲ್ಲ. ಮುಖಾಮುಖಿ ಸಂವಾದ ಇಲ್ಲದಿದ್ದರೆ ಬೋಧನೆ ಅಷ್ಟು ಪರಿಣಾಮಕಾರಿಯಲ್ಲ. ಆನ್‌ಲೈನ್ ಎಂಬುದು ತಾತ್ಕಾಲಿಕ. ಸಾಂಪ್ರದಾಯಿಕ ತರಗತಿಗಳು ಇರಲೇಬೇಕು. ಅದು ಇರುತ್ತದೆ ಕೂಡಾ. ಇದರಲ್ಲಿ ಯಾವುದೇ ಸಂಶಯ ಬೇಡ.

- ಪ್ರೊ.ಎಲ್‌.ನರೇಂದ್ರ ನಾಯಕ್‌, ಮುಖ್ಯಸ್ಥರು, ಎಕ್ಸ್‌ಪರ್ಟ್‌ ಪದವಿಪೂರ್ವ ಕಾಲೇಜು, ಮಂಗಳೂರು

***

ಮತ್ತೆ ಜೋಡಿಸಿ ಮಿಸ್ಸಿಂಗ್ ಲಿಂಕ್

ಉನ್ನತ ಶಿಕ್ಷಣದಲ್ಲಿ ಆನ್‌ಲೈನ್‌ ಎಂಬುದು ದ್ವಿತೀಯ ಪಠ್ಯ. ತರಗತಿಯಲ್ಲಿನ ಮುಖಾಮುಖಿ ಪಾಠ ಪ್ರಾಥಮಿಕ ಪಠ್ಯ. ಕೋವಿಡ್‌ ಬಿಕ್ಕಟ್ಟಿನ ಅವಧಿಯಲ್ಲಿ ಎರಡಕ್ಕೂ ಮಿಸ್ಸಿಂಗ್‌ ಲಿಂಕ್‌ ಆಗಿದೆ. ಸರ್ಕಾರ ಪ್ರಜೆಗಳ ಹಿತ ಕಾಯುವ ಹೊಣೆಗಾರಿಕೆಯನ್ನು ಹೊಂದಿದೆ. ಆದರೆ ಇಂದು ಯಾರಿಗೆ ಯಾರೂ ಜವಾಬ್ದಾರಿ ಅಲ್ಲ ಎಂಬಂತಹ ಸ್ಥಿತಿ ಇದೆ. ಉನ್ನತ ಶಿಕ್ಷಣಕ್ಕೆ ತಳ ಸಮುದಾಯದವರೂ ಬರುತ್ತಾರೆ. ಅವರು ತಮ್ಮ ವೈಯಕ್ತಿಕ ಜೀವನ, ಕುಟುಂಬದ ನಿರ್ವಹಣೆ, ಸಮಾಜದ ಹೊಣೆಗಾರಿಕೆಗಳನ್ನು ನಿಭಾಯಿಸಬೇಕು. ಆನ್‌ಲೈನ್‌ ಶಿಕ್ಷಣಕ್ಕೆ ಅವರು ಹೇಗೆ ಸಜ್ಜಾಗಬೇಕು? ವಿದ್ಯಾರ್ಥಿಗಳ ಅಗೋಚರ ಹಿಂಸೆಯನ್ನು ಆನ್‌ಲೈನ್ ಇನ್ನಷ್ಟು ಗಟ್ಟಿಗೊಳಿಸುತ್ತದೆ. ಲಾಕ್‌ಡೌನ್‌ ನಂತರ ಮೂರು ವಾರಗಳ ತರಗತಿ ಪಾಠಕ್ಕೆ ಅವಕಾಶ ಇದೆ ಎಂದು ಹೇಳಿದ್ದಾರೆ. ಆನ್‌ಲೈನ್‌ನಲ್ಲಿನ ನ್ಯೂನತೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಇದೆ ಎಂಬ ಸಮಾಧಾನದಲ್ಲಿ ನಾನಿದ್ದೇನೆ.

- ಪ್ರೊ.ಡಾಮಿನಿಕ್, ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ

***

ಪ್ರಜಾಪ್ರಭುತ್ವ ವಿರೋಧಿ

ವಿಶ್ವವಿದ್ಯಾಲಯಗಳು ಒಂದು ಸಮಾಜವಾಗಿ ಪರಸ್ಪರ ಮುಖಾಮುಖಿಯಾಗಿಯೇ ಅರಿವಿನ ವಿಸ್ತರಣೆಯಾಗಬೇಕು. ಆನ್‌ಲೈನ್ ಶಿಕ್ಷಣ ತಾತ್ಕಾಲಿಕವೇ ಹೊರತು ಪೂರ್ಣಕಾಲಿಕವಾದರೆ ಇದು ಪ್ರಜಾಪ್ರಭುತ್ವ ವಿರೋಧಿ.

-ಡಾ.ಅರುಣ್‌ ಜೋಳದಕೂಡ್ಲಿಗಿ, ಸಂಶೋಧಕ, ಕನ್ನಡ ವಿಶ್ವವಿದ್ಯಾಲಯ, ಹಂಪಿ

***

ಗೊಂದಲ ಕಾಡದೇ ಬಿಡುವುದಿಲ್ಲ

ಆನ್‌ಲೈನ್ ತರಗತಿಗಳಿಗೆ ಸಾಂಪ್ರದಾಯಿಕ ತರಗತಿಗಿಂತ ಮೂರು ಪಟ್ಟು ಅಧಿಕ ತಯಾರಿ ಬೇಕು. ಏಕಮುಖ ಬೋಧನೆಯಾದ್ದರಿಂದ ವಿದ್ಯಾರ್ಥಿಗಳಿಗೆ ಮನದಟ್ಟಾಗಿದೆಯೋ, ಇಲ್ಲವೋ ಎಂಬ ಗೊಂದಲ ಸದಾ ಕಾಡದೆ ಬಿಡುವುದಿಲ್ಲ. ಹೀಗಾಗಿ ಇದನ್ನು ತಾತ್ಕಾಲಿಕ ವ್ಯವಸ್ಥೆಯಾಗಿಯೇ ಇಟ್ಟುಕೊಳ್ಳುವುದು ಸೂಕ್ತ.

- ಆರತಿ ಪಟ್ರಮೆ, ಉಪನ್ಯಾಸಕಿ, ವಿದ್ಯಾನಿಧಿ ಪದವಿಪೂರ್ವ ಕಾಲೇಜು, ತುಮಕೂರು

***

ಅನಿವಾರ್ಯತೆಗೆ ಮಾತ್ರ

ಗುರು–ಶಿಷ್ಯ ನೇರ ಸಂಬಂಧ, ವಿಚಾರ ವಿನಿಮಯ ಹಾಗೂ ಬದುಕಿನ ಬಗೆಗಿನ ಶಿಕ್ಷಣ ತರಗತಿಯೊಳಗೆ ಮಾತ್ರ ದೊರಕಲು ಸಾಧ್ಯ. ಅನಿವಾರ್ಯವಾಗಿ ಪರೀಕ್ಷೆ ನಡೆಸಬೇಕಾದ ವಿದ್ಯಾರ್ಥಿಗಳಿಗೆ ಮಾತ್ರ ಈ ಶಿಕ್ಷಣ ಇರಲಿ, ಉಳಿದಂತೆ ತರಗತಿ ಕಲಿಕೆಯೇ ಮುಂದುವರಿಯಲಿ.

- ಡಾ.ಎಸ್.ಈಶ್ವರ ಭಟ್‌, ಸಹ ಪ್ರಾಧ್ಯಾಪಕರು, ಸಂತ ಅಲೋಶಿಯಸ್‌ ಕಾಲೇಜು, ಮಂಗಳೂರು

***

ಗ್ರಾಮೀಣ ವಿದ್ಯಾರ್ಥಿಗಳು ದೂರ

ಆನ್‌ಲೈನ್‌ ಶಿಕ್ಷಣದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೂರವೇ ಉಳಿಯುತ್ತಿದ್ದಾರೆ. ಈ ಹಿಂದೆ ಇಂಗ್ಲಿಷ್‌ ಕಲಿಕೆಗೆ ಸಂಬಂಧಿಸಿದಂತೆ ಯಾವ ರೀತಿಯ ಕೀಳರಿಮೆ ತಲೆದೋರಿತ್ತೋ, ಇಲ್ಲಿ ಮತ್ತೆ ಅದೇ ಪರಿಸ್ಥಿತಿ ಬರುವ ಅಪಾಯ ಇದೆ.

- ಪ್ರೊ.ಜಿ.ವಿ.ಆನಂದಮೂರ್ತಿ, ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT