ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಪಶ್ಚಿಮ ಬಂಗಾಳದಲ್ಲಿ ರಕ್ತದೋಕುಳಿ

Last Updated 17 ಡಿಸೆಂಬರ್ 2020, 19:45 IST
ಅಕ್ಷರ ಗಾತ್ರ
ADVERTISEMENT
""
""

2019ರ ಲೋಕಸಭಾ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರುತ್ತಿದೆ. ಅದರ ಜತೆಯಲ್ಲೇ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ಮತ್ತೆ ತೀವ್ರಗೊಂಡಿದೆ. ಬಿಜೆಪಿ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಮತ್ತು ಎಡಪಕ್ಷಗಳ ಹಲವು ನಾಯಕರು ಮತ್ತು ಕಾರ್ಯಕರ್ತರ ಹತ್ಯೆ ನಡೆದಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 42 ಕ್ಷೇತ್ರಗಳ ಪೈಕಿ 18 ಕಡೆಬಿಜೆಪಿ ಗೆಲುವು ಸಾಧಿಸಿತ್ತು. ಈ ಪ್ರಮಾಣದ ಗೆಲವನ್ನು ಬಿಜೆಪಿ ಸಹ ನಿರೀಕ್ಷಿಸಿರಲಿಲ್ಲ. ಹೀಗಾಗಿ ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಮುಂದಾಯಿತು. ಹಲವರು ಸ್ವಯಂಪ್ರೇರಿತರಾಗಿ ಬಿಜೆಪಿ ಸೇರಿದರು. ಇದರ ಮಧ್ಯೆಯೇ ಟಿಎಂಸಿಯ ಪ್ರಮುಖ ಮುಖಂಡರು ಪಕ್ಷ ತೊರೆದು, ಬಿಜೆಪಿ ಸೇರಲು ಆರಂಭಿಸಿದರು. ಗ್ರಾಮ ಪಂಚಾಯಿತಿ ಮಟ್ಟದ ಮುಖಂಡರಿಂದ ರಾಜ್ಯದ ಸಂಪುಟ ದರ್ಜೆಯ ಸಚಿವರವರೆಗೆ ಹಲವು ಮುಖಂಡರು ಟಿಎಂಸಿ ತೊರೆದು ಬಿಜೆಪಿ ಸೇರಿದ್ದಾರೆ. ಇದು ಸಹಜವಾಗಿಯೇ ಬಿಜೆಪಿಯ ಬಲದ ಜತೆಗೆ ಟಿಎಂಸಿಯ ಸಿಟ್ಟನ್ನೂ ಹೆಚ್ಚಿಸಿದೆ. 2019ರ ಲೋಕಸಭಾ ಚುನಾವಣೆಗೂ ಎರಡು ವರ್ಷ ಮೊದಲೇ ಟಿಎಂಸಿ ಪ್ರಭಾವಿ ಮುಖಂಡ ಮುಕುಲ್‌ ರಾಯ್ ಬಿಜೆಪಿ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯಲ್ಲಿ ರಾಯ್ ಅವರ ಪತ್ರವೂ ದೊಡ್ಡದಿದೆ. ಅದಾದ ನಂತರ ಟಿಎಂಸಿಯ ಹಲವು ನಾಯಕರು ಬಿಜೆಪಿ ಸೇರಿದ್ದಾರೆ.

ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಹಲವು ರಾಜಕೀಯ ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಉತ್ತರ 24 ಪರಗಣ, ಪೂರ್ವ ಮೇದಿನಿಪುರ ಅಥವಾ ಮಿಡ್ನಾಪುರ ಮತ್ತು ಪಶ್ಚಿಮ ಬಂಗಾಳದ ಉತ್ತರ ಭಾಗದ ಹಲವೆಡೆ ಹಿಂಸಾಚಾರ ನಡೆದಿದೆ. ಬಿಜೆಪಿ ಈಗ ಪ್ರಬಲವಾಗುತ್ತಿರುವ ಮತ್ತು ಟಿಎಂಸಿ ಪ್ರಬಲವಾಗಿರುವ ಜಿಲ್ಲೆಗಳಲ್ಲಿ ಈ ಸ್ವರೂಪದ ಹಿಂಸಾಚಾರ ನಡೆಯುತ್ತಿದೆ. ಬಿಜೆಪಿ ಪ್ರಬಲವಾಗಿರುವ ಕಡೆ ಟಿಎಂಸಿ, ಟಿಎಂಸಿ ಪ್ರಬಲವಾಗಿರುವ ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷ ಸಂಘಟನೆ ಚಟುವಟಿಕೆಗಳನ್ನು ಚುರುಕುಗೊಳಿಸಿವೆ. ಇಂತಹ ಜಿಲ್ಲೆಗಳಲ್ಲಿಯೇ ಹಿಂಸಾಚಾರ ಮತ್ತು ರಾಜಕೀಯ ಹತ್ಯೆಗಳು ನಡೆಯುತ್ತಿವೆ.

2019ರ ಜೂನ್‌ನಲ್ಲಿ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಮನೀಶ್ ಶುಕ್ಲಾ ಅವರ ಹತ್ಯೆ ನಡೆದಿತ್ತು. ಅದಾದ ಕೆಲವೇ ದಿನಗಳಲ್ಲಿ ದಿಂಜಾಪುರ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ದೇವೇಂದ್ರನಾಥ್ ರಾಯ್ ಅವರ ಹತ್ಯೆಯಾಯಿತು. ಇದರ ಬೆನ್ನಲ್ಲೇ ನದಿಯಾ ಜಿಲ್ಲೆಯಲ್ಲಿ ಟಿಎಂಸಿ ಶಾಸಕ ಸತ್ಯಜಿತ್ ಬಿಸ್ವಾಸ್ ಅವರ ಹತ್ಯೆ ನಡೆಯಿತು. ಅದೇ ತಿಂಗಳಲ್ಲಿ ಉತ್ತರ 24 ಪರಗಣ ಜಿಲ್ಲೆಯಲ್ಲಿ ಟಿಎಂಸಿಯ ಮುಖಂಡ ನಿರ್ಮಲ್ ಕುಂದು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆನಂತರ ರಾಜಕೀಯ ಹತ್ಯೆಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಆದರೆ, ಬಿಹಾರ ಚುನಾವಣೆಯ ಗೆಲುವಿನ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪಕ್ಷ ಸಂಘಟನೆ ಚಟುವಟಿಕೆಗಳನ್ನು ಹೆಚ್ಚಿಸಿದೆ. ಇದರ ಹಿಂದೆಯೇ ರಾಜಕೀಯ ಹಿಂಸಾಚಾರಗಳು ಮತ್ತು ಹತ್ಯೆಗಳು ಮತ್ತೆ ಆರಂಭವಾಗಿವೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರ ಕಾರು ಮತ್ತು ನಿಯೋಗದ ಮೇಲೆ ಅಲಿದರಪುರದಲ್ಲಿ ಈಚೆಗೆ ದಾಳಿ ನಡೆದಿತ್ತು. ಆದರೆ ಈ ದಾಳಿ ನಡೆಯುವುದಕ್ಕೂ ಕೆಲವು ದಿನ ಮೊದಲೇ ಘೋಷ್ ಅವರು, ‘ಟಿಎಂಸಿ ಕಾರ್ಯಕರ್ತರು ನಮ್ಮ ಹಾದಿಗೆ ಅಡ್ಡ ಬರಬಾರದು. ಅಡ್ಡಬಂದರೆ ಅವರು ಒಂದೋ ಆಸ್ಪತ್ರೆಗೆ ಹೋಗುತ್ತಾರೆ ಇಲ್ಲವೇ ಸ್ಮಶಾನಕ್ಕೆ ಹೋಗುತ್ತಾರೆ’ ಎಂದು ಹೇಳಿಕೆ ನೀಡಿದ್ದರು.

ಘೋಷ್ ಮೇಲೆ ನಡೆದಿದ್ದ ದಾಳಿಯನ್ನು ಟಿಎಂಸಿಯ ನಾಯಕರೂ ಸಮರ್ಥಿಸಿಕೊಂಡಿದ್ದರು. ‘ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು ಎಂಬುದು ಗೊತ್ತಿಲ್ಲದೇ ಇರುವವರು ಇಂತಹ ದಾಳಿಯನ್ನು ಎದುರಿಸಬೇಕಾಗುತ್ತದೆ’ ಎಂದು ಟಿಎಂಸಿಯ ಅನುವ್ರತ ಮಂಡಲ್ ಅವರು ಹೇಳಿಕೆ ನೀಡಿದ್ದರು.

ಇದೇ ತಿಂಗಳಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕಾರಿನ ಮೇಲೆ ದಾಳಿ ನಡೆದಿದೆ. ನಂತರದ ಕೆಲವೇ ದಿನಗಳಲ್ಲಿ ಟಿಎಂಸಿ ಪ್ರಾಬಲ್ಯದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿದೆ.

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸಚಿವ ಸುವೇಂದು ಅಧಿಕಾರಿ ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬುಧವಾರವಷ್ಟೇ ಅವರು ತಮ್ಮ ಶಾಸಕನ ಸ್ಥಾನ ಮತ್ತು ಟಿಎಂಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿ ಸೇರುವ ನಿರೀಕ್ಷೆ ಇದೆ. ಸುವೇಂದು ಅವರ ತವರು ಜಿಲ್ಲೆ ಪೂರ್ವ ಮೇದಿನಿಪುರದಲ್ಲಿಯೂ ಕಳೆದ ವಾರ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂಸಾಚಾರಗಳ ಬಗ್ಗೆಈಚೆಗೆ ಮಾತನಾಡಿದ್ದರು. ‘ಟಿಎಂಸಿಯು ಹಿಂಸಾಚಾರದ ಮೂಲಕ ಮತಗಳಿಸಲು ಮುಂದಾಗಿದೆ. ಟಿಎಂಸಿಯು ಪ್ರಜಾಪ್ರಭುತ್ವದ ಹಾದಿಗಳನ್ನು ತೊರೆದು, ಹಿಂಸಾಚಾರದ ಮೂಲಕ ಬಿಜೆಪಿ ಕಾರ್ಯಕರ್ತರನ್ನು ನಿರ್ನಾಮ ಮಾಡುತ್ತಿದೆ. ಇದು ಹೆಚ್ಚುದಿನ ನಡೆಯುವುದಿಲ್ಲ. ಹಿಂಸಾಚಾರದಿಂದ ಮತಗಳು ದೊರೆಯುವುದಿಲ್ಲ’ ಎಂದು ಹೇಳಿದ್ದಾರೆ. ಈಗ ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.

ದಶಕಗಳ ಹಿಂಸಾಕಣ
ಪಶ್ಚಿಮ ಬಂಗಾಳದ ರಾಜಕೀಯ ಹಿಂಸಾಚಾರಕ್ಕೆ ಹಲವು ದಶಕಗಳ ಇತಿಹಾಸವಿದೆ. ರಾಜ್ಯದ ಮಟ್ಟಿಗೆ ಹೊಸ ಸಿದ್ಧಾಂತದ ರಾಜಕೀಯ ಪಕ್ಷ ಮುನ್ನೆಲೆಗೆ ಬರುವಾಗಲೆಲ್ಲಾ ಪಶ್ಚಿಮ ಬಂಗಾಳದ ರಾಜಕಾರಣವು ಹಿಂಸೆಗೆ ಸಾಕ್ಷಿಯಾಗಿದೆ. ಬಿಜೆಪಿ ನೆಲೆ ವಿಸ್ತರಿಸಲು ಯತ್ನಿಸುತ್ತಿರುವ ಈ ಸಂದರ್ಭದಲ್ಲಿಯೂ ಇದೇ ಸ್ವರೂಪದ ಹಿಂಸಾಚಾರ ನಡೆಯುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವುದರಿಂದ ಬಿಜೆಪಿಗೆ ಈಗ ಹೆಚ್ಚಿನ ಬಲವೂ ಇದೆ. ಭಿನ್ನ ರಾಜಕೀಯ ಸಿದ್ಧಾಂತಗಳ ಬಿಜೆಪಿ ಮತ್ತು ಟಿಎಂಸಿ ಎರಡೂ ಪ್ರಬಲ ಪಕ್ಷಗಳಾಗಿರುವುದರಿಂದ ಹಿಂಸಾಚಾರದ ತೀವ್ರತೆ ಹೆಚ್ಚಾಗಿದೆ.

ತೆಭಾಗಾ ಚಳವಳಿ: 1946–48ರ ಅವಧಿಯಲ್ಲಿ ಭೂರಹಿತರು–ಜಮೀನ್ದಾರರ ನಡುವೆ ದಿನಾಜ್‌ಪುರದಲ್ಲಿ ಆರಂಭವಾದ ಹೋರಾಟ ರಾಜ್ಯದಾದ್ಯಂತ ವ್ಯಾಪಿಸಿತು. ಫಸಲಿನಲ್ಲಿ ಮೂರನೇ ಎರಡರಷ್ಟು ಪಾಲಿಗೆ ಗೇಣಿದಾರರು ಬೇಡಿಕೆ ಇಟ್ಟಿದ್ದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು. ಪೊಲೀಸರು ಸಂಘರ್ಷ ಕಡಿಮೆ ಮಾಡುವ ಬದಲು ಹೋರಾಟವು ರಕ್ತಸಿಕ್ತ ಚಳವಳಿಯಾಗಿ ಮಾರ್ಪಾಡಾಗಲು ಕಾರಣರಾದರು.

ಏಕ್ ಪೈಸಾ ಆಂದೋಲನ: 1953ರಲ್ಲಿ ಟ್ರಾಮ್‌ ಸೇವೆಯ (ನಗರ ರೈಲುಸಾರಿಗೆ ಎನ್ನಬಹುದು) ದರವನ್ನು ಒಂದು ಪೈಸೆ ಹೆಚ್ಚಿಸಿದ್ದು ದೊಡ್ಡ ಆಂದೋಲನದ ರೂಪುತಾಳಿತು. ಕೋಲ್ಕತ್ತ ಅಕ್ಷರಶಃ ಹೊತ್ತಿ ಉರಿಯಿತು. ಹಳಿಗಳನ್ನು ಕೀಳಲಾಯಿತು, ಬಾಂಬ್‌ ಎಸೆಯಲಾಯಿತು. ಪೊಲೀಸರ ಗುಂಡಿನ ದಾಳಿಗೆ ಹತ್ತಾರು ಜನರು ಬಲಿಯಾದರು. ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್‌ಗೆ ದಿಕ್ಕುತೋಚದಾಯಿತು. ಆದರೆ ಇದರ ಲಾಭ ಆಗಿದ್ದು ಕಮ್ಯುನಿಸ್ಟ್ ಚಳವಳಿಗೆ. ರಾಜಕೀಯ ದೃಷ್ಟಿಕೋನದಿಂದ ಇದು ಮಹತ್ವದ ಚಳವಳಿ ಎನಿಸಿದೆ.

ಆಹಾರ ಚಳವಳಿ: ಸರ್ಕಾರದ ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಯಡಿ ಸಬ್ಸಿಡಿಯಲ್ಲಿ ಧಾನ್ಯಗಳನ್ನು ಪೂರೈಸಬೇಕು ಎಂದು ಆಗ್ರಹಿಸಿ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆ ಮತ್ತೊಂದು ಅಧ್ಯಾಯ. 1959ರಲ್ಲಿ ಶುರುವಾದ ಚಳವಳಿ ಹಲವು ವರ್ಷಗಳವರೆಗೆ ಸಾಗಿ, ಐತಿಹಾಸಿಕ ಎನಿಸಿತು. ಕಾಂಗ್ರೆಸ್ ಅನ್ನು ಎಡಪಕ್ಷಗಳು ತರಾಟೆಗೆ ತೆಗೆದುಕೊಂಡವು. ಸರ್ಕಾರದ ಹಿಂಸಾತ್ಮಕ ಪ್ರತಿರೋಧ, ಜನರಿಗೆ ಕಡಿಮೆ ದರದ ಆಹಾರ ಪೂರೈಸಲಾರದ ಸರ್ಕಾರದ ನೀತಿ ಟೀಕೆಗೊಳಗಾದವು.

ನಕ್ಸಲ್‌ಬಾರಿ ಚಳವಳಿ: 1960ರಲ್ಲಿ ಶುರುವಾದ ನಕ್ಸಲ್‌ಬಾರಿ ಚಳವಳಿಯು ಹಿಂಸಾಚಾರಕ್ಕೆ ತಿರುಗಿತು. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಜತೆ ನಕ್ಸಲರು ಮುಖಾಮುಖಿಯಾದರು. 1967ರ ನಂತರ ಇದು ತೀವ್ರಗೊಂಡಿತು. ಬಾಂಬ್ ದಾಳಿಗಳು, ಎನ್‌ಕೌಂಟರ್‌ಗಳು, ನಕ್ಸಲ್ ಹಣೆಪಟ್ಟಿ ಕಟ್ಟಿ ನೂರಾರು ಯುವಕರ ಬಂಧನ, ನಕ್ಸಲರು ಎಂಬ ಆಪಾದನೆ ಮೇಲೆ ನಡೆದ ಸಾಮೂಹಿಕ ಹತ್ಯೆಗಳಿಗೆ ರಾಜ್ಯ ಸಾಕ್ಷಿಯಾಯಿತು. ಬಾರಾನಗರ, ಕೋಸಿಪೋರ್ (ಕಾಶಿಪುರ), ಬರಸತ್ ಹತ್ಯಾಕಾಂಡಗಳಲ್ಲಿ ನೂರಾರು ಯುವಕರು ಪೊಲೀಸರ ಗುಂಡಿಗೆ ಬಲಿಯಾದರು.

ಅಮಿತ್‌ ಶಾ

ರಾಜಕೀಯ ಪ್ರೇರಿತ ದಾಳಿ

1971ರಲ್ಲಿ ಫಾರ್ವರ್ಡ್‌ ಬ್ಲಾಕ್‌ನಿಂದ ಸ್ಪರ್ಧಿಸಿದ್ದ ಹೇಮಂತ ಬಸು ಹತ್ಯೆ ಇಂದಿಗೂ ನಿಗೂಢ. ಕಾಂಗ್ರೆಸ್–ಸಿಪಿಎಂ ಪರಸ್ಪರ ಬೊಟ್ಟು ಮಾಡಿದವು. ಬಸು ಬಳಿಕ ಅಭ್ಯರ್ಥಿಯಾದ ಅಜಿತ್ ಕುಮಾರ್ ಬಿಸ್ವಾಸ್ ಕೂಡ ಬಲಿಯಾದರು. ಇದು ಆ ಕಾಲದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ಪ್ರಕರಣ.

ಟಾರ್ಗೆಟ್ ಮಮತಾ: 90ರ ದಶಕದಲ್ಲಿ ಡೆಮಾಕ್ರಟಿಕ್ ಯೂತ್ ಫೆಡರೇಷನ್‌ನ ಸದಸ್ಯರು ಮಮತಾ ಬ್ಯಾನರ್ಜಿ ಅವರ ಮೇಲೆ ಬರ್ಬರ ಹಲ್ಲೆ ನಡೆಸಿದ್ದರು. ತಲೆಗೆ ರಾಡ್, ಕಟ್ಟಿಗೆಯಿಂದ ಥಳಿಸಿದ್ದರು. ಈ ಘಟನೆಯು ಮಮತಾ ಬ್ಯಾನರ್ಜಿ ರಾಜಕೀಯ ಶಕ್ತಿಯಾಗಿ ಉದಯಿಸಲು ಅನುವು ಮಾಡಿಕೊಟ್ಟಿತು. ಅವರು ಮುಂದೆ ಕಾಂಗ್ರೆಸ್‌ನಿಂದ ಹೊರಬಂದು ತೃಣಮೂಲ ಕಾಂಗ್ರೆಸ್ ಪಕ್ಷ ಕಟ್ಟಿ ಸ್ವಂತ ಶಕ್ತಿಯಾಗಿ ಬೆಳೆದರು.

ಇದಕ್ಕೂ ಮುನ್ನ 1996ರಲ್ಲಿ ಮಮತಾ ನಡೆಸುತ್ತಿದ್ದ ರ‍್ಯಾಲಿಯು ನಿಷೇಧಾಜ್ಞೆ ಉಲ್ಲಂಘಿಸಿ ಮುನ್ನಡೆಯಿತು. ಪೊಲೀಸರ ಗುಂಡೇಟಿಗೆ 13 ಯುವಕರು ಸತ್ತುಬಿದ್ದರು. ಇದು ಬಂಗಾಳದ ಇತಿಹಾಸದಲ್ಲಿ ಬರ್ಬರ ಘಟನೆ ಎಂದು ದಾಖಲಾಯಿತು.

ಸಿಪಿಎಂ–ತೃಣಮೂಲ ಜಟಾಪಟಿ: ಸಿಂಗೂರಿನಲ್ಲಿ ಟಾಟಾ ಕಂಪನಿಯ ನ್ಯಾನೊ ಕಾರು ತಯಾರಿಕಾ ಘಟಕ ನಿರ್ಮಾಣಕ್ಕೆ ಭೂಸ್ವಾಧೀನ ವಿಚಾರವಾಗಿ ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್ ಮುಖಾಮುಖಿಯಾದವು. 2006–08ರಲ್ಲಿ ನಂದಿಗ್ರಾಮ ಭೂಸ್ವಾಧೀನ ಹೋರಾಟವೂ ಸೇರಿಕೊಂಡಿತು. ಹಲವರು ಘರ್ಷಣೆಗೆ ಬಲಿಯಾದರು. 2009ರಲ್ಲಿ ಇದು ಮೇದಿನಿಪುರ ಪಕ್ಕದ ಲಾಲ್‌ಘಡಕ್ಕೂ ವಿಸ್ತರಣೆಯಾಯಿತು. ಚತ್ರಧರ್ ಮಹತೋ ನೇತೃತ್ವದಲ್ಲಿ ಮಾವೊವಾದಿ ಬೆಂಬಲಿತ ಪೀಪಲ್ಸ್ ಕಮಿಟಿಯು ಪೋಲಿಸ್ ದೌರ್ಜನ್ಯದ ವಿರುದ್ಧ ಬಂಡೆದ್ದಿತು. ಪೊಲೀಸರ ವಿರುದ್ಧ ಸರಣಿ ದಾಳಿ ನಡೆಸಿತು. ತಿಂಗಳಲ್ಲಿ 70 ಮಂದಿ ಬಲಿಯಾದರು ಎಂದು ಹೇಳಲಾಗುತ್ತದೆ.

ಈಗ, ಹಿಂಸಾತ್ಮಕ ಸಂಘರ್ಷದ ಭಾಗವಾಗುವ ಸರದಿ ಬಿಜೆಪಿಯದ್ದಾಗಿದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 2014ರ ಸಂಸತ್ ಚುನಾವಣೆಯಲ್ಲಿ 7 ಜನರು ಮೃತಪಟ್ಟು, 740 ಜನರು ಗಾಯಗೊಂಡಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಅಸಾನ್ಸೋಲ್ ಮತ್ತು ಮುರ್ಷಿದಾಬಾದ್‌ನಲ್ಲಿ 3 ಹತ್ಯೆಗಳು ನಡೆದಿದ್ದವು. 2015ರ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ 4 ಮಂದಿ ಹತ್ಯೆಯಾಗಿ, 462 ಜನ ಗಾಯಗೊಂಡಿದ್ದರು. ಕಳೆದ ವರ್ಷದ ನಡೆದ ಪಂಚಾಯಿತಿ ಚುನಾವಣೆಯಲ್ಲಿ 13 ಜನರು ಪ್ರಾಣಬಿಟ್ಟಿದ್ದರು.

ವರದಿ: ಜಯಸಿಂಹ ಆರ್‌., ಅಮೃತಕಿರಣ್‌ ಬಿ.ಎಂ. ಆಧಾರ: ಪಿಟಿಐ, ಟಿಎಂಸಿ ಮತ್ತು ಬಿಜೆಪಿ ನಾಯಕರ ಟ್ವೀಟ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT