ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಗೋಧಿ ಕೊರತೆಯ ಭೀತಿ: ರಫ್ತಿಗೆ ಕತ್ತರಿ

Last Updated 15 ಮೇ 2022, 19:30 IST
ಅಕ್ಷರ ಗಾತ್ರ

ಜಗತ್ತಿನಲ್ಲಿಯೇ ಅತಿ ಹೆಚ್ಚು ಗೋಧಿ ಬೆಳೆಯುವ ಎರಡನೇ ದೇಶ ಎನಿಸಿಕೊಂಡಿರುವ ಭಾರತವು ಗೋಧಿ ರಫ್ತನ್ನು ನಿಷೇಧಿಸಿದೆ. ಜಾಗತಿಕ ಮಟ್ಟದಲ್ಲಿ ಆಹಾರ ಬಿಕ್ಕಟ್ಟು ತಲೆದೋರಿರುವ ಸಂದರ್ಭದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣ ಮತ್ತು ಈಗಲೂ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಆಹಾರ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಯುದ್ಧದಿಂದಾಗಿ 4.7 ಕೋಟಿ ಜನರು ಹಸಿವಿನ ಹೊಡೆತಕ್ಕೆ ಒಳಗಾಗಬಹುದು ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮವು ಹೇಳಿದೆ. ಭಾರತದಿಂದ ಗೋಧಿ ರಫ್ತು ನಿಷೇಧವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವಾಗಬಹುದು.

‘ಜಾಗತಿಕ ಮಟ್ಟದಲ್ಲಿ ಗೋಧಿಯ ಕೊರತೆ ಆಗಿರುವ ಸಂದರ್ಭದಲ್ಲಿ ಭಾರತದ ರೈತರು ಜಗತ್ತಿನ ಜನರಿಗೆ ಆಹಾರ ಒದಗಿಸಲು ಮುಂದಾಗಿದ್ದಾರೆ. ಮಾನವ ಕುಲಕ್ಕೆ ಬಿಕ್ಕಟ್ಟು ಎದುರಾದಾಗಲೆಲ್ಲ ಭಾರತವು ಪರಿಹಾರವನ್ನು ಕೊಟ್ಟಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇದೇ 9ರಂದು ಜರ್ಮನಿಯಲ್ಲಿ ಭಾರತ ಮೂಲದ ಜನರ ಜೊತೆಗಿನ ಸಂವಾದದಲ್ಲಿ ಹೇಳಿದ್ದರು. ಆದರೆ, ಅದಾಗಿ ಕೆಲವೇ ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ಗೋಧಿ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ. ಆಹಾರದ ತೀವ್ರ ಕೊರತೆ ಇರುವ ದೇಶಗಳ ಸರ್ಕಾರಗಳು ಸಂಪರ್ಕಿಸಿದರೆ ಗೋಧಿ ಪೂರೈಸುವ ಕುರಿತು ಯೋಚಿಸಲಾಗುವುದು ಎಂದು ಸರ್ಕಾರ ಹೇಳಿದೆ. ಗೋಧಿ ಪೂರೈಕೆಗಾಗಿ ಈಜಿಪ್ಟ್‌ ದೇಶವು ಭಾರತವನ್ನು ಸಂಪರ್ಕಿಸಿದೆ.

ತೀವ್ರ ಕೊರತೆ: ಕಳೆದ ಕೆಲವು ವರ್ಷಗಳಲ್ಲಿ, ಭಾರತದ ಗೋಧಿ ಇಳುವರಿ ದಾಖಲೆ ಮಟ್ಟದಲ್ಲಿ ಸತತವಾಗಿ ಏರಿಕೆಯಾಗಿದೆ. ಅದೇ ರೀತಿ ರಫ್ತು ಕೂಡ ಹೆಚ್ಚಳವಾಗಿದೆ. 2020–21ನೇ ಸಾಲಿನಲ್ಲಿ, ಅತಿ ಹೆಚ್ಚು ಗೋಧಿ ರಫ್ತು ಮಾಡುವ ನಾಲ್ಕನೇ ದೇಶ ಎನಿಸಿಕೊಂಡಿತ್ತು. ಕಳೆದ ಮೂರು ವರ್ಷಗಳಲ್ಲಿ ಪ್ರತಿ ವರ್ಷವೂ ಗೋಧಿ ಇಳುವರಿ 10 ಕೋಟಿ ಟನ್‌ ದಾಟಿದೆ. ಫೆಬ್ರುವರಿ–ಮಾರ್ಚ್‌ ಅವಧಿಯಲ್ಲಿ ಕಟಾವು ಮಾಡುವ ಬೆಳೆಯಲ್ಲಿಯೇ ಅತಿ ಹೆಚ್ಚು ಗೋಧಿ ಸಂಗ್ರಹ ಆಗುತ್ತದೆ. ಆದರೆ, ಈ ಬಾರಿ ಇದೇ ಅವಧಿಯಲ್ಲಿ ಬೀಸಿದ ತೀವ್ರವಾದ ಬಿಸಿ ಗಾಳಿಯು ಇಳುವರಿ ಕುಗ್ಗುವಂತೆ ಮಾಡಿದೆ. ಇದು ದೇಶದೊಳಗಿನ ಆಹಾರ ಭದ್ರತೆಗೆ ಸವಾಲಾಗಿ ಪರಿಣಮಿಸಬಹುದು ಎಂಬ ಕಳವಳ ಸರ್ಕಾರಕ್ಕೆ ಮೂಡಿದೆ.

ಜಗತ್ತಿಗೆ ಅತಿ ಹೆಚ್ಚು ಗೋಧಿ ರಫ್ತು ಮಾಡುವ ದೇಶಗಳಲ್ಲಿ ರಷ್ಯಾ ಕೂಡ ಒಂದು. 2020–21ರಲ್ಲಿ ಜಗತ್ತಿನ ಗೋಧಿ ಪೂರೈಕೆಯಲ್ಲಿ ಭಾರತ ಮತ್ತು ರಷ್ಯಾದ ಪಾಲು ಶೇ 22ಕ್ಕೂ ಹೆಚ್ಚು. ಅತಿ ಹೆಚ್ಚು ಗೋಧಿ ಪೂರೈಸುವ ಐದನೇ ದೇಶ ಉಕ್ರೇನ್‌. ಯುದ್ಧದ ಕಾರಣದಿಂದಾಗಿ ರಷ್ಯಾದ ಮೇಲೆ ಅಮೆರಿಕ ಮತ್ತು ಯುರೋಪ್‌ನ ದೇಶಗಳು ವಿವಿಧ ನಿರ್ಬಂಧಗಳನ್ನು ಹೇರಿವೆ. ಉಕ್ರೇನ್‌ ಯುದ್ಧದಿಂದಾಗಿ ನಲುಗಿ ಹೋಗಿದೆ. ಹಾಗಾಗಿ ಈ ಎರಡೂ ದೇಶಗಳಿಂದ ಫೆಬ್ರುವರಿ 24ರಿಂದ ಗೋಧಿ ರಫ್ತು ಆಗಿಯೇ ಇಲ್ಲ.

ರಷ್ಯಾ ಮತ್ತು ಉಕ್ರೇನ್‌ನಿಂದ ಮಧ್ಯ ಪ್ರಾಚ್ಯ ಮತ್ತು ಏಷ್ಯಾದ ರಾಷ್ಟ್ರಗಳಿಗೆ ಗೋಧಿ ರಫ್ತು ಆಗುತ್ತಿತ್ತು. ಈಗ ಈ ಎಲ್ಲ ದೇಶಗಳು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕಿದೆ. ಗೋಧಿಯ ಸಂಗ್ರಹ ಇದ್ದರೂ ಸಾಗಾಟದ ಸಮಸ್ಯೆಯಿಂದಾಗಿ ಈಗಿನ ಬಿಕ್ಕಟ್ಟು ಎದುರಾಗಿದೆ.

ರೈತರ ಲಾಭಕ್ಕೆ ಹೊಡೆತ: ಭಾರತದಲ್ಲಿ ಈ ಬಾರಿ ಗೋಧಿ ಬೆಳೆಯಲ್ಲಿ ಎಷ್ಟು ಕುಸಿತವಾಗಬಹುದು ಎಂಬುದರ ಅಂದಾಜು ಇನ್ನೂ ಇಲ್ಲ. ಪೂರೈಕೆ ಕೊರತೆಯಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿಯ ದರದಲ್ಲಿ ಶೇ 40ರವರೆಗೆ ಏರಿಕೆಯಾಗಿದೆ. ಇದರ ಪ್ರಯೋಜನ ಪಡೆಯುವ ಉದ್ದೇಶದಿಂದಲೇ ಭಾರತದಿಂದ ರಫ್ತು ಹೆಚ್ಚಳವಾಗಿದೆ. ಆದರೆ, ರಫ್ತು ನಿಷೇಧ ನಿರ್ಧಾರದಿಂದಾಗಿ ರೈತರಿಗೆ ದರ ಏರಿಕೆಯ ಪ್ರಯೋಜನ ದೊರೆಯದಂತಾಗಿದೆ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಆರೋಪಿಸಿವೆ. ಗೋಧಿ ರಫ್ತು ನಿಷೇಧ ತೆರವಿಗೆ ಒತ್ತಾಯಿಸಿವೆ. ಕೃಷಿಕರ ಸಂಘಟನೆ ಭಾರತ ಕಿಸಾನ್‌ ಸಮಾಜ ಕೂಡ ರಫ್ತು ನಿಷೇಧವನ್ನು ವಿರೋಧಿಸಿದೆ. ಇದು ರೈತರ
ಮೇಲೆ ಪರೋಕ್ಷ ತೆರಿಗೆ ಹೇರಿದಂತೆ ಎಂದು ಹೇಳಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿನ ದರ ಏರಿಕೆಯ ಲಾಭವನ್ನು ರೈತರು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ, ವಿಶ್ವಾಸಾರ್ಹ ವ್ಯಾಪಾರ ಪಾಲುದಾರ ಅಲ್ಲ ಎಂಬ ಹಣೆಪಟ್ಟಿಗೂ ಭಾರತ ಪಾತ್ರವಾಗಬಹುದು ಎಂದು ಭಾರತ ಕಿಸಾನ್‌ ಸಮಾಜ ಹೇಳಿದೆ.

ಅಂತರರಾಷ್ಟ್ರೀಯ ಒತ್ತಡ: ರಫ್ತು ನಿಷೇಧದ ನಿರ್ಧಾರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಭಾರತದ ಈ ನಿರ್ಧಾರದಿಂದಾಗಿ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳಲಿದೆ, ವಸ್ತುಗಳ ದರದಲ್ಲಿ ಇನ್ನಷ್ಟು ಏರಿಕೆ ಆಗಲಿದೆ ಎಂದು ಜಿ–7 ಗುಂಪಿನ ಕೃಷಿ ಸಚಿವರ ಸಭೆಯಲ್ಲಿ ಹೇಳಲಾಗಿದೆ.‘ಪ್ರತಿಯೊಬ್ಬರೂ ರಫ್ತು ನಿರ್ಬಂಧ ಹೇರಿದರೆ ಅಥವಾ ಮಾರುಕಟ್ಟೆ ಮುಚ್ಚಿದರೆ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುತ್ತದೆ’ ಎಂದು ಜರ್ಮನಿಯ ಕೃಷಿ ಸಚಿವ ಜೆಮ್‌ ಆಸ್ಡೆಮಿರ್‌ ಹೇಳಿದ್ದಾರೆ.

ಧಾನ್ಯ ರಫ್ತು ಮಾಡುವ ಇತರ ದೇಶಗಳು ಕೂಡ ಭಾರತವನ್ನು ಅನುಸರಿಸಿದರೆ ಜಾಗತಿಕ ಮಟ್ಟದಲ್ಲಿ ಭಾರಿ ಸಮಸ್ಯೆ ಆಗಬಹುದು ಎಂಬ ಕಳವಳನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ‘ಅಕ್ಕಿ ರಫ್ತು ಮಾಡುವವರು ಹೀಗೆ ಮಾಡಿದರೆ ಜಗತ್ತಿನ ಆಹಾರ ಭದ್ರತೆಯು ಶೋಚನೀಯ ಸ್ಥಿತಿಗೆ ತಲುಪಬಹುದು’ ಎಂದು ಇಂಧನ ಮತ್ತು ಸರಕುಗಳ ತಜ್ಞ ಜೇವಿಯರ್‌ ಬ್ಲಾಸ್‌ ಟ್ವೀಟ್‌ ಮಾಡಿದ್ದಾರೆ.

ರಫ್ತು ಏರಿಕೆಯ ಬರೆ

ದೇಶದಿಂದ ರಫ್ತಾಗುವ ಗೋಧಿಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಆದರೆ 2021–22ನೇ ಆರ್ಥಿಕ ವರ್ಷದಲ್ಲಿ ಗೋಧಿಯ ರಫ್ತು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ಸಹ ದೇಶೀಯ ಮಾರುಕಟ್ಟೆಯಲ್ಲಿ ಗೋಧಿಯ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ ಎಂದು ಅಂದಾಜಿಸಲಾಗಿದೆ.

2020–21ನೇ ಸಾಲಿನಲ್ಲಿ ಭಾರತವು 21 ಲಕ್ಷ ಟನ್‌ಗಳಷ್ಟು ಗೋಧಿಯನ್ನು ರಫ್ತು ಮಾಡಿತ್ತು. ಆದರೆ 2021–22ನೇ ಸಾಲಿನಲ್ಲಿ ಒಟ್ಟು 71 ಲಕ್ಷ ಟನ್‌ಗಳಷ್ಟು ಗೋಧಿಯನ್ನು ರಫ್ತು ಮಾಡಲಾಗಿದೆ. 2022–23ನೇ ಸಾಲಿನಲ್ಲಿ 1.4 ಕೋಟಿ ಟನ್‌ಗಳಷ್ಟು ಗೋಧಿಯನ್ನು ರಫ್ತು ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. ಜತೆಗೆ 2.1 ಕೋಟಿ ಟನ್‌ಗಳಷ್ಟು ಗೋಧಿ ರಫ್ತಾಗುವ ನಿರೀಕ್ಷೆ ಇತ್ತು.

ರಫ್ತಿಗೆ ಹೆಚ್ಚಿನ ಒತ್ತು ನೀಡಿದ ಕಾರಣ, ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಗೋಧಿಯ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬೆಲೆ ಏರಿಕೆಯಾಗಿದೆ. ಹಿಂದಿನ ಮೂರು ತಿಂಗಳಲ್ಲಿ ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆ ಶೇ 19–20ರಷ್ಟು ಏರಿಕೆಯಾಗಿದೆ.

ಈ ಬಾರಿ ಹೆಚ್ಚುವರಿ ಇಳುವರಿ ಅಸಾಧ್ಯ

ಈ ಹಿಂದಿನ ವರ್ಷಗಳಲ್ಲಿ ದೇಶೀಯ ಬಳಕೆಗೆ ಇದ್ದ ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದ ಗೋಧಿ ಉತ್ಪಾದನೆಯಾಗುತ್ತಿದ್ದ ಕಾರಣ, ಹೆಚ್ಚುವರಿ ಉತ್ಪಾದನೆಯನ್ನು ರಫ್ತು ಮಾಡಲಾಗುತ್ತಿತ್ತು. ರಫ್ತಿನ ಮೇಲೆ ಯಾವುದೇ ನಿರ್ಬಂಧವಿರಲಿಲ್ಲ. ಆದರೆ ಈ ಸಾಲಿನ ಬೆಳೆ ವರ್ಷದಲ್ಲಿ (2021ರ ಜುಲೈನಿಂದ 2022ರ ಜೂನ್‌ ಅಂತ್ಯದವರೆಗೆ) ಈ ಹಿಂದಿನ ಅಂದಾಜಿಗಿಂತ ಕಡಿಮೆ ಪ್ರಮಾಣದ ಇಳುವರಿ ದೊರೆಯಲಿದೆ ಎಂದು ಅಂದಾಜನ್ನು ಪರಿಷ್ಕರಿಸಲಾಗಿದೆ. ಇದರಿಂದ ದೇಶೀಯ ಬಳಕೆಗೆ ಅಗತ್ಯವಿರುವಷ್ಟು ಗೋಧಿಯನ್ನು ಪೂರೈಸುವುದೂ ಕಷ್ಟವಾಗಲಿದೆ.

ಈ ಹಿಂದಿನ ಬೆಳೆವರ್ಷದಲ್ಲಿ ದೇಶದಾದ್ಯಂತ 10.90 ಕೋಟಿ ಟನ್‌ಗಳಷ್ಟು ಗೋಧಿಯನ್ನು ಉತ್ಪಾದನೆ ಮಾಡಲಾಗಿತ್ತು. ದೇಶದ ಬಳಕೆಗೆ ಅಗತ್ಯವಿದ್ದ ಗೋಧಿ 10.3 ಕೋಟಿ ಟನ್‌ಗಳಷ್ಟು. ಈಗಿನ ಬೆಳೆ ವರ್ಷದಲ್ಲಿ ದೇಶೀಯ ಬಳಕೆಗೆ 10.42 ಕೋಟಿ ಟನ್‌ಗಳಷ್ಟು ಗೋಧಿಯ ಅವಶ್ಯಕತೆ ಇದೆ. ಈ ಮೊದಲು ಈ ಬೆಳೆ ವರ್ಷದಲ್ಲಿ 11.1 ಕೋಟಿ ಟನ್‌ ಇಳುವರಿಯನ್ನು ನಿರೀಕ್ಷಿಸಲಾಗಿತ್ತು. ಈಗ ಬಿಸಿಗಾಳಿ ಮತ್ತು ತಾಪಮಾನ ಹೆಚ್ಚಳದ ಕಾರಣ ಇಳುವರಿ ನಿರೀಕ್ಷೆಯನ್ನು 10.5 ಕೋಟಿ ಟನ್‌ಗಳಿಗೆ ಇಳಿಕೆ ಮಾಡಲಾಗಿದೆ. ಇದು ದೇಶೀಯ ಬಳಕೆಗೆ ಅಗತ್ಯವಿರುವಷ್ಟು ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ. ಆದರೆ, ಈ ಬೆಳೆ ವರ್ಷದಲ್ಲಿ ಈಗಾಗಲೇ66.61 ಲಕ್ಷ ಟನ್‌ಗಳಷ್ಟು ಗೋಧಿಯನ್ನು ರಫ್ತು ಮಾಡಲಾಗಿದೆ. ಇನ್ನೂ 31.7 ಲಕ್ಷ ಟನ್‌ಗಳಷ್ಟು ಗೋಧಿಯನ್ನು ರಫ್ತು ಮಾಡಲೇಬೇಕಿದೆ. ಈ ಲೆಕ್ಕಾಚಾರದಲ್ಲಿ, ಈ ಬೆಳೆ ವರ್ಷದಲ್ಲಿ 98.31 ಲಕ್ಷ ಟನ್‌ಗಳಷ್ಟು ಗೋಧಿ ರಫ್ತಾಗಲಿದೆ.

ಈ ಬೆಳೆ ವರ್ಷದಲ್ಲಿ ದೇಶಕ್ಕೆ 10.42 ಕೋಟಿ ಟನ್‌ಗಳಷ್ಟು ಗೋಧಿ ಅವಶ್ಯಕತೆ ಇದ್ದು, ದೇಶದಲ್ಲಿ 10.50 ಕೋಟಿ ಟನ್‌ಗಳಷ್ಟು ಗೋಧಿ ಉತ್ಪಾದನೆಯಾಗಲಿದೆ. ಆದರೆ ಇದರಲ್ಲಿ ಅಂದಾಜು 1 ಕೋಟಿ ಟನ್‌ಗಳಷ್ಟು ಗೋಧಿ ರಫ್ತಾಗಲಿರುವ ಕಾರಣ, ದೇಶೀಯ ಬಳಕೆಗೆ 90 ಲಕ್ಷ ಟನ್‌ಗಳಷ್ಟು ಗೋಧಿ ಕೊರತೆಯಾಗುವ ಭೀತಿ ಎದುರಾಗಿದೆ. ಭಾರತವು ಗೋಧಿಯನ್ನು ಆಮದು ಮಾಡಿಕೊಳ್ಳುತ್ತದೆಯಾದರೂ, ಅದು ದೇಶೀಯ ಬೇಡಿಕೆ ಮತ್ತು ಉತ್ಪಾದನೆಗೆ ಹೋಲಿಸಿದರೆ ತೀರಾ ಕಡಿಮೆ.

ದೇಶದ ಪಡಿತರ ವ್ಯವಸ್ಥೆ ಅಡಿ ವಿತರಿಸಲು ವಾರ್ಷಿಕ 2.5 ಕೋಟಿ ಟನ್‌ಗಳಷ್ಟು ಗೋಧಿಯ ಅವಶ್ಯಕತೆ ಇದೆ. 2021–22ನೇ ಆರ್ಥಿಕ ವರ್ಷದಲ್ಲಿ ಸರ್ಕಾರವು 4.33 ಕೋಟಿ ಟನ್‌ಗಳಷ್ಟು ಗೋಧಿಯನ್ನು ಈ ಉದ್ದೇಶಕ್ಕಾಗಿ ಖರೀದಿಸಿತ್ತು. 2022–23ನೇ ಸಾಲಿನಲ್ಲಿ 4.40 ಕೋಟಿ ಟನ್‌ಗಳಷ್ಟು ಗೋಧಿ ಖರೀದಿಸುವ ಗುರಿ ಹಾಕಿಕೊಂಡಿತ್ತು. ಆದರೆ ಈಗ ಇಳುವರಿ ಅಂದಾಜನ್ನು ಇಳಿಕೆ ಮಾಡಿರುವ ಕಾರಣ, ಗೋಧಿ ಖರೀದಿ ಗುರಿಯನ್ನೂ 1.85 ಕೋಟಿ ಟನ್‌ಗಳಿಗೆ ಕಡಿತ ಮಾಡಿದೆ. ಪಡಿತರ ವ್ಯವಸ್ಥೆ ಅಡಿ ಗೋಧಿಯ ಬದಲಿಗೆ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಚಿಂತನೆ ನಡೆಸಲಾಗುತ್ತಿದೆ.

ಆಧಾರ: ವಾಣಿಜ್ಯ ಸಚಿವಾಲಯದ ಆಮದು–ರಫ್ತು ದತ್ತಾಂಶ ಬ್ಯಾಂಕ್‌ ಮಾಸಿಕ ವರದಿಗಳು, ಪಿಟಿಐ, ರಾಯಿಟರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT