ಭಾನುವಾರ, ಜೂನ್ 7, 2020
22 °C
ಸ್ವಲ್ಪ ಯಾಮಾರಿದರೂ ಕಾದಿದೆ ದೊಡ್ಡ ಅಪಾಯ: ಮಳೆಗಾಲದಲ್ಲೂ ಸೋಂಕು ಹರಡುವ ಭೀತಿ

Explainer | ಕೊರೊನಾ ಕಂಟಕ ಯಾವಾಗ ಕೊನೆ?

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

‘ದೇಶದಲ್ಲಿ ಇನ್ನೂ 3–4 ತಿಂಗಳವರೆಗೆ ಕೊರೊನಾ ವೈರಸ್‌ ಹರಡುವ ಆತಂಕವಿದೆ. ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ (ಹಾಗೇನಾದರೂ ಅಪಾಯ ಎದುರಾದರೆ ಕೋಟ್ಯಂತರ ಜನ ಈ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ). ಆದರೆ, ಇಂತಹ ದೊಡ್ಡ ಅಪಾಯದ ಅಂದಾಜಿಲ್ಲದ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ...’

 –ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯವು ನವದೆಹಲಿಯ ದಿ ಸೆಂಟರ್‌ ಫಾರ್‌ ಡಿಸೀಸ್‌ ಡೈನಾಮಿಕ್ಸ್‌, ಎಕನಾಮಿಕ್ಸ್‌ ಆ್ಯಂಡ್‌ ಪಾಲಿಸಿ (ಸಿಡಿಡಿಇಪಿ) ಸಹಯೋಗದಲ್ಲಿ ದೇಶದಾದ್ಯಂತ ನಡೆಸಿದ ಸಮೀಕ್ಷೆಯ ಸಾರವಿದು.

ದೊಡ್ಡ ಕಂಟಕ ಹೊಸ್ತಿಲಲ್ಲೇ ಇದ್ದರೂ ಸರ್ಕಾರ ನಡೆಸಿರುವ ವೈದ್ಯಕೀಯ ಸಿದ್ಧತೆ ಏನೇನೂ ಸಾಲದು, ಅಗತ್ಯ ಪ್ರಮಾಣದ ವೆಂಟಿಲೇಟರ್‌ಗಳು ಸಹ ಇಲ್ಲ. ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯುವಲ್ಲಿ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ತಾಳಿದೆ ಎಂಬ ಸಂಗತಿಯತ್ತಲೂ ಸಮೀಕ್ಷಾ ವರದಿಯು ಬೊಟ್ಟು ಮಾಡಿದೆ. ದೇಶದಲ್ಲಿ ಅಪೌಷ್ಟಿಕತೆ ಸಮಸ್ಯೆ ಕೂಡ ಹೆಚ್ಚಾಗಿರುವುದರಿಂದ ಸೋಂಕು ಹರಡತೊಡಗಿದರೆ ಅದರ ಹೊಡೆತವನ್ನು ಗ್ರಾಮೀಣ ಭಾಗಗಳ ಮಕ್ಕಳು ತಡೆದುಕೊಳ್ಳುವುದು ಕಷ್ಟ ಎಂದು ಎಚ್ಚರಿಸಲಾಗಿದೆ.

ದೇಶವೀಗ ಬೇಸಿಗೆ ಕಾಲದತ್ತ ಮುಖ ಮಾಡಿರುವುದರಿಂದ ವಾತಾವರಣದಲ್ಲಿ ತಾಪಮಾನ ಏರುತ್ತಿದ್ದು, ಇದರಿಂದ ಸೋಂಕು ಮಂದವಾಗಿ ಹರಡುತ್ತಿದೆ. ಆದರೆ, ಮಳೆಗಾಲದ ಹೊತ್ತಿಗೆ ಈ ಸೋಂಕು ಮತ್ತೆ ಮಹಾಮಾರಿಯಾಗಿ ವ್ಯಾಪಿಸುವ ಭೀತಿಯಿದೆ ಎಂದೂ ವಿಶ್ಲೇಷಿಸಲಾಗಿದೆ.

ಕೊರೊನಾ ವೈರಸ್‌ ವಿರುದ್ಧ ದಕ್ಷಿಣ ಕೊರಿಯಾ ನಡೆಸಿದ ಹೋರಾಟ ಉಳಿದ ದೇಶಗಳಿಗೆ ಮಾದರಿಯಾಗಿದ್ದು, ಅಂತಹ ಕ್ರಮಗಳನ್ನು ಭಾರತದಲ್ಲೂ ಕೈಗೊಳ್ಳುವುದು ಅಗತ್ಯ ಎಂದು ವರದಿಯಲ್ಲಿ ಪ್ರತಿಪಾದಿಸಲಾಗಿದೆ. 

ಸಮೀಕ್ಷೆ ಹೇಳುವುದೇನು?

ಎಲ್ಲ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ತುಂಬಾ ಅಗತ್ಯ. ಅದರಲ್ಲೂ ಹಿರಿಯ ನಾಗರಿಕರಿಗೆ ಮೂರು ವಾರಗಳ ಪ್ರತ್ಯೇಕವಾಸ ಅಪೇಕ್ಷಿತ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಪರಿಪಾಟವನ್ನು ಮುಂದುವರಿಸಿದಷ್ಟೂ ಒಳ್ಳೆಯದು. ಇದರಿಂದ ಜುಲೈ ತಿಂಗಳ ನಂತರ ಸೋಂಕು ಹರಡದಂತೆ ನಿಯಂತ್ರಿಸುವುದು ಸಾಧ್ಯವಾಗಬಹುದು

ಸೋಂಕಿತ ವ್ಯಕ್ತಿಗಳು ಆಸ್ಪತ್ರೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ದಾಖಲಾಗುವುದರಿಂದ ಆ ಆಸ್ಪತ್ರೆಗಳಿಂದಲೇ ಕೊರೊನಾ ವೈರಾಣು ಹರಡುವ ಸಾಧ್ಯತೆ ಹೆಚ್ಚು. ಸೋಂಕು ಪೀಡಿತರ ನಿರ್ವಹಣೆಗಾಗಿ ಮುಂದಿನ ಮೂರು ತಿಂಗಳಲ್ಲಿ ದೊಡ್ಡಗಾತ್ರದ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಬೇಕು (ಚೀನಾದಲ್ಲಿ ಕ್ರೀಡಾಂಗಣಗಳನ್ನೇ ಆಸ್ಪತ್ರೆಗಳನ್ನಾಗಿ ಮಾರ್ಪಡಿಸಲಾಗಿದೆ). ಆಗ ಹಾಲಿ ಇರುವ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಆಸ್ಪತ್ರೆಗಳಲ್ಲಿ ದಟ್ಟಣೆ ಹೆಚ್ಚಿದರೆ ಸೋಂಕು ಕ್ಷಿಪ್ರವಾಗಿ ಹರಡುವ ಅಪಾಯವಿದೆ

ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸುವುದು ಅವಶ್ಯ. ಹಿರಿಯರಿಗೆ ರೋಗಲಕ್ಷಣಗಳ ಪೂರ್ವಭಾವಿ ಪರೀಕ್ಷೆಯನ್ನು ತಕ್ಷಣ ಸಮರ್ಪಕವಾಗಿ ಮಾಡುವುದರಿಂದ ಸಾವಿನ ಅಪಾಯವನ್ನು ತಡೆಯಬಹುದು

ಸಾಂಕ್ರಾಮಿಕ ರೋಗ ಯಾವ, ಯಾವ ಹಂತದಲ್ಲಿ ಹರಡುತ್ತಿದೆ ಎಂಬುದರ ಮೇಲೆ ನಿಗಾ ಇಡಲು ನಿರಂತರ ಸಮೀಕ್ಷೆಗಳು ಹಾಗೂ ವೈದ್ಯಕೀಯ ಪರೀಕ್ಷೆಗಳು ಅಗತ್ಯ. ಆದರೆ, ಈ ವಿಷಯದಲ್ಲಿ ವ್ಯವಸ್ಥೆ ಸಂಪೂರ್ಣ ಕುರುಡಾಗಿದೆ

ಆರೋಗ್ಯ ಸಿಬ್ಬಂದಿಯ ಮರಣ ಪ್ರಮಾಣವು ಸಾಮಾನ್ಯ ಜನರ ಸಾವಿನ ಹೆಚ್ಚಳಕ್ಕೆ ಕಾರಣವಾಗಬಹುದು. ಹೀಗಾಗಿ ಆರೋಗ್ಯ ಸೇವಾ ಕಾರ್ಯಕರ್ತರು ಮುಖಗವಸು, ಕೈಗವಸುಗಳನ್ನು ಬಳಸಿ ತಮ್ಮನ್ನು ರಕ್ಷಿಸಿಕೊಳ್ಳುವುದು ಅತ್ಯಗತ್ಯ. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದಿದ್ದಲ್ಲಿ, ಆರೋಗ್ಯ ಸಿಬ್ಬಂದಿಯ ಕೊರತೆ ಉಂಟಾಗಬಹುದು

ಏನು ಮಾಡಬೇಕು?

* ರೋಗ ಪರೀಕ್ಷೆಯಲ್ಲಿ ವಿಳಂಬವಾದಷ್ಟೂ ರೋಗದಿಂದ ರಕ್ಷಿಸಿಕೊಳ್ಳುವ ಜನರ ಸಾಮರ್ಥ್ಯ ಕಡಿಮೆ ಆಗುತ್ತದೆ. ಹೀಗಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಅಧಿಕೃತ ಮಾಹಿತಿಯು ಜನರಿಗೆ ನಿರಂತರವಾಗಿ ಲಭ್ಯವಾಗುತ್ತಿದ್ದರೆ ಅವರಲ್ಲಿ ಎಚ್ಚರ ಮೂಡುತ್ತದೆ. ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರವನ್ನು ಅವರು ಗಂಭೀರವಾಗಿ ಪರಿಗಣಿಸುತ್ತಾರೆ

* ರಾಷ್ಟ್ರದಾದ್ಯಂತ ಲಾಕ್‌ಡೌನ್‌ನಿಂದ ಗಂಭೀರವಾಗಿ ಆರ್ಥಿಕ ಹಾನಿ ಆಗಬಹುದು. ಹಸಿವು ಹೆಚ್ಚಾಗಬಹುದು, ಜನರ ತಾಳ್ಮೆಯ ಕಟ್ಟೆ ಒಡೆಯಬಹುದು. ಆದರೆ, ಹೆಚ್ಚು ಸೋಂಕಿತರು ಇರುವ ರಾಜ್ಯಗಳಲ್ಲಿ ಲಾಕ್‌ಡೌನ್‌ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅನಿವಾರ್ಯ. ಇಲ್ಲದಿದ್ದಲ್ಲಿ ಸೋಂಕು ಹರಡುವಿಕೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಇಂತಹ ರಾಜ್ಯಗಳಲ್ಲಿ ರೋಗ ತಪಾಸಣಾ ವ್ಯವಸ್ಥೆಯನ್ನೂ ಇನ್ನಷ್ಟು ಬಲಗೊಳಿಸಬೇಕು

* ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಈ ಹಂತದಲ್ಲಿ ಅಗತ್ಯ. ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಕ್ಸಿಜನ್‌ ಸಿಲಿಂಡರ್‌ಗಳು, ಮಾಸ್ಕ್‌ಗಳು, ವೆಂಟಿಲೇಟರ್‌ಗಳು ಮುಂತಾದವುಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು

* ಐದು ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ವೃದ್ಧರ ಆರೋಗ್ಯದ ಕುರಿತು ಹೆಚ್ಚಿನ ನಿಗಾ ವಹಿಸಬೇಕು

* ಜುಲೈ ವೇಳೆಗೆ ಏನಾಗಬಹುದು ಎಂಬುದನ್ನಷ್ಟೇ ಅರಿಯುವ ಪ್ರಯತ್ನ ಇಲ್ಲಿದೆ. ಇದಾದ ನಂತರವೂ ಹೆಚ್ಚಿನ ಪ್ರಕರಣಗಳು ಮತ್ತು ಇನ್ನಷ್ಟು ಸಾವುಗಳು ಸಂಭವಿಸುವ ಸಾಧ್ಯತೆ ಇಲ್ಲದಿಲ್ಲ

ಎರಡು ಸಾಧ್ಯತೆ: ನಾಲ್ಕು ಕಾರಣ

ಸಾಧ್ಯತೆ ಒಂದು: ಕೋವಿಡ್‌–19 ವಿಷಯದಲ್ಲಿ ಭಾರತ ಇತರ ರಾಷ್ಟ್ರಗಳಿಗಿಂತ ಉತ್ತಮ ಸ್ಥಿತಿಯಲ್ಲಿ ಇರುವುದಾದರೆ ಅದಕ್ಕೆ ಕಾರಣಗಳೇನು?

* ಇತರ ದೇಶಗಳಿಗಿಂತ ಇಲ್ಲಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ

* ಋತುಮಾನದಲ್ಲಿ ಆಗುವ ಬದಲಾವಣೆಯಿಂದ (ತಾಪಮಾನ ಹೆಚ್ಚಳ) ಮುಂದಿನ ದಿನಗಳಲ್ಲಿ ಸೋಂಕು ಹರಡುವ ವೇಗ ತಗ್ಗಬಹುದು

ಸಾಧ್ಯತೆ ಎರಡು: ಕೋವಿಡ್‌–19 ವಿಷಯದಲ್ಲಿ ಭಾರತ ಇತರ ರಾಷ್ಟ್ರಗಳಿಗಿಂತ ಹೆಚ್ಚಿನ ಅಪಾಯ ಎದುರಿಸುವ ಸಾಧ್ಯತೆ ನಿರ್ಮಾಣವಾದರೆ ಅದಕ್ಕೆ ಕಾರಣಗಳೇನು?

* ಚೀನಾ, ಇಟಲಿಗೆ ಹೋಲಿಸಿದರೆ ಭಾರತದ ಯುವ ಸಮುದಾಯದಲ್ಲಿ ಪೌಷ್ಟಿಕತೆಯ ಕೊರತೆ ಹೆಚ್ಚು. ಈ ಸಮಸ್ಯೆಯು ಮಕ್ಕಳ ಆರೋಗ್ಯದ ಮೇಲೆ ಎಂತಹ ಪರಿಣಾಮವನ್ನೂ ಬೀರಬಹುದು

* ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇಲ್ಲಿ ತುಂಬಾ ಕಷ್ಟವಾಗಬಹುದು. ಪರಿಣಾಮ ಸೋಂಕು ಹರಡುವ ಸಾಧ್ಯತೆ ಹೆಚ್ಚು

ದಕ್ಷಿಣ ಕೊರಿಯಾ ಮಾದರಿ

ಕೊರೊನಾ ವೈರಸ್‌ ಹರಡದಂತೆ ತಡೆಗಟ್ಟುವಲ್ಲಿ ದಕ್ಷಿಣ ಕೊರಿಯಾ ನಡೆಸಿದ ಹೋರಾಟ ಒಂದು ಉತ್ತಮ ಮಾದರಿ. ಅಲ್ಲಿ, ಸೋಂಕು ತೀವ್ರವಾಗಿ ಹರಡಿದರೂ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಸೋಂಕು ಪರೀಕ್ಷಾ ವ್ಯವಸ್ಥೆಯನ್ನು ಆ ದೇಶದಲ್ಲಿ ಕ್ಷಿಪ್ರವಾಗಿ ಬಲಪಡಿಸಲಾಗಿದೆ. ನಿತ್ಯ 20 ಸಾವಿರ ಸೋಂಕು ಪೀಡಿತರ ಪರೀಕ್ಷೆಗೆ ಅಲ್ಲಿ ಸೌಲಭ್ಯಗಳಿದ್ದು, ಸೋಂಕಿನ ತೀವ್ರತೆ ಹೆಚ್ಚಿದ್ದಾಗ ಪ್ರತಿದಿನ 12 ಸಾವಿರ ಜನರ ಪರೀಕ್ಷೆ ಮಾಡಿಸಲಾಗಿತ್ತು. ಸೋಂಕಿತರನ್ನು ತಕ್ಷಣ ತಪಾಸಣೆಗೆ ಒಳಪಡಿಸಿ, ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿತ್ತು. ಸೋಂಕು ಪತ್ತೆಗಾಗಿ ತಪಾಸಣಾ ಟೆಂಟ್‌ಗಳನ್ನು ಹಾಕಲಾಗಿತ್ತು, ಮನೆಯಲ್ಲೂ ತಪಾಸಣಾ ಸಾಧನಗಳನ್ನು ಪೂರೈಸಲಾಗಿತ್ತು. ದಕ್ಷಿಣ ಕೊರಿಯಾವು ಸೋಂಕನ್ನು ಎದುರಿಸಿದ ರೀತಿಗೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಎರಡು ಪ್ರತಿಪಾದನೆಗಳು

ಉಷ್ಣಾಂಶದಲ್ಲಿ ಆಗುವ ಏರಿಕೆಯು ಸೋಂಕು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಹಾಯಕವಾಗಲಿದೆ ಎಂಬ ಪ್ರತಿಪಾದನೆ ಇದೆ. ಆದರೆ, ಇದು ‘ಸಾಧ್ಯತೆ’ ಮಾತ್ರ, ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಉಷ್ಣಾಂಶದಲ್ಲಿ ಇಳಿಕೆ ಆದರೆ, ಸೋಂಕು ಹರಡುವಿಕೆ ಕಡಿಮೆಯಾಗುತ್ತದೆ ಎಂಬ ಮತ್ತೊಂದು ಪ್ರತಿಪಾದನೆಯೂ ಇದೆ. ಆದರೆ ಇದಕ್ಕೂ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಕೊರೊನಾವೈರಸ್ ಮಳೆಗಾಲಕ್ಕೆ ಹೇಗೆ ಸ್ಪಂದಿಸುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಲಾಕ್‌ಡೌನ್ ಇದ್ದರೂ, ಅದನ್ನು ಅನುಸರಿಸದೇ ಇದ್ದರೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇದ್ದರೆ, ಪರಿಸ್ಥಿತಿ ಈ ಮಟ್ಟಕ್ಕೆ ಹೋಗಬಹುದು

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇದ್ದರೆ, ಕೊರೊನಾ ವೈರಾಣು ಒಬ್ಬರಿಂದ ಒಬ್ಬರಿಗೆ ವ್ಯಾಪಕವಾಗಿ ಹರಡುವ ಅಪಾಯ ಅಧಿಕವಾಗಿರುತ್ತದೆ. ಈ ಸ್ವರೂಪದ ಹರಡುವಿಕೆ ಆರಂಭವಾದರೆ, ಸೋಂಕು ಯಾರಿಂದ ಯಾರಿಗೆ ಹರಡಿತು ಎಂಬುದನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇದು ಅತ್ಯಂತ ಅಪಾಯಕಾರಿ ಹಂತ. ಆಗ ಸೋಂಕು ಯಾರಿಗೆ ಬರಲಿದೆ ಎಂಬುದನ್ನೂ ಅಂದಾಜು ಮಾಡಲು ಸಾಧ್ಯವಿಲ್ಲ. ಈ ಹಂತ ಮುಟ್ಟಿದ ಮೇಲೆ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡುವುದಷ್ಟೇ ಉಳಿಯಲಿರುವ ಏಕೈಕ ಪರಿಹಾರ. ಈ ಪರಿಸ್ಥಿತಿ ಈ ಹಂತಕ್ಕೆ ಹೋದರೆ, ಅದು ಜುಲೈವರೆಗೂ ಇರುವ ಸಾಧ್ಯತೆ ಅಧಿಕವಾಗಿದೆ. ಈ ಪರಿಸ್ಥಿತಿ ಇದ್ದರೆ, ಅಂದಾಜು 25 ಕೋಟಿ ಜನರಿಗೆ ಸೋಂಕು ತಗಲುವ ಅಪಾಯವಿದೆ.

ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ಅನುಸರಿಸಿದರೆ ಮತ್ತು ಉಷ್ಣಾಂಶ ಮತ್ತು ತೇವಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ ಈ ಪರಿಸ್ಥಿತಿ ಇರಲಿದೆ 

ವಿದೇಶ ಪ್ರಯಾಣ ಮಾಡಿದವರ ಸಂಪರ್ಕ ಇಲ್ಲದವರಿಗೂ ಸೋಂಕು ತಗಲಿರುವ ಪ್ರಕರಣಗಳು ವರದಿಯಾಗಿವೆ. ಇದು ಸೋಂಕು ಸಾಮುದಾಯಿಕ ಆಗುತ್ತಿದೆ ಎಂಬುದರ ಮೊದಲ ಸುಳಿವು. ಈ ಪರಿಸ್ಥಿತಿ ಇದ್ದು, ಉಷ್ಣಾಂಶದಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ, ಲಾಕ್‌ಡೌನ್‌ನಿಂದ ವ್ಯಾಪಕ ಪರಿಣಾಮವೇನೂ ಆಗುವುದಿಲ್ಲ. ಸೋಂಕಿನ ಜಾಡುಪತ್ತೆ ಸಾಧ್ಯವಿಲ್ಲದ ಕಾರಣ, ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಸುಮಾರು 19 ಕೋಟಿ ಜನರಿಗೆ ಸೋಂಕು ತಗಲುವ ಅಪಾಯವಿದೆ. ಸೆಪ್ಟೆಂಬರ್‌ವರೆಗೂ ಈ ಪರಿಸ್ಥಿತಿ ಇರುವ ಸಾಧ್ಯತೆ ಇದೆ.

ಉಷ್ಣಾಂಶದಲ್ಲಿ ಬದಲಾವಣೆ ಆದರೆ, ಸೋಂಕು ಹರಡುವಿಕೆಯಲ್ಲಿ ಬದಲಾವಣೆ ಆದರೆ ಈ ಪರಿಸ್ಥಿತಿ ಇರಲಿದೆ. ಆದರೆ, ಈ ಸಾಧ್ಯತೆ ಅತ್ಯಂತ ಕಡಿಮೆ. ಉಷ್ಣಾಂಶದಲ್ಲಿ ಬದಲಾವಣೆಯಾಗಿ, ವೈರಾಣು ಹರಡುವಿಕೆ ಕಡಿಮೆಯಾದರೂ ಸುಮಾರು 13 ಕೋಟಿ ಜನಕ್ಕೆ ಸೋಂಕು ತಗುಲಲಿದೆ ಎಂದು ಅಂದಾಜಿಸಲಾಗಿದೆ. ಸೆಪ್ಟೆಂಬರ್‌ವರೆಗೂ ಈ ಪರಿಸ್ಥಿತಿ ಇರುವ ಸಾಧ್ಯತೆ ಇದೆ.

ಪ್ರತಿದಿನ ದೃಢಪಟ್ಟ ಪ್ರಕರಣಗಳು

ಕೋವಿಡ್‌–19ಪ್ರಕರಣಗಳ ಸಂಖ್ಯೆಯನ್ನು ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ತಂಡವು ದಾಖಲಿಸಿದೆ. ಮಾರ್ಚ್‌ ಮೊದಲ ಎರಡು ವಾರಗಳಲ್ಲಿ ಪ್ರತಿದಿನ ದೃಢಪಡುವ ಪ್ರಕರಣಗಳ ಸಂಖ್ಯೆ 1–20ರ ನಡುವೆ ಇದೆ. ಆದರೆ, ಮೂರು ಮತ್ತು ನಾಲ್ಕನೇ ವಾರಗಳಲ್ಲಿ ಇವುಗಳ ಸಂಖ್ಯೆ ಎರಡುಪಟ್ಟು ಏರಿಕೆ ಆಗಿದೆ. ಈ ಪ್ರಮಾಣವು ಇನ್ನಷ್ಟು ಏರಿಕೆ ಆಗುವ ಅಪಾಯವಿದೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಸೋಂಕು ಹರಡುವಿಕೆ ಅಂದಾಜು

(ದೃಢಪಟ್ಟು ಆಸ್ಪತ್ರೆಗೆ ದಾಖಲಾದ ಪ್ರಕರಣಗಳು+ಸೋಂಕಿನ ಲಕ್ಷಣಗಳಿರುವ ಪ್ರಕರಣಗಳು+ ಲಕ್ಷಣಗಳು ಕಾಣಿಸದೇ ಇರುವ ಪ್ರಕರಣಗಳು ಸೇರಿ, ಏಪ್ರಿಲ್‌ 24ರ ಪರಿಸ್ಥಿತಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು