ಶನಿವಾರ, ಏಪ್ರಿಲ್ 1, 2023
23 °C

ಆಳ–ಅಗಲ: ಕೇರಳಕ್ಕೆ ಝೀಕಾ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌–19ರ ಒಂದನೇ ಅಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿದ್ದ ಕೇರಳ ರಾಜ್ಯದಲ್ಲಿ ಎರಡನೇ ಅಲೆ ನಿಯಂತ್ರಣಕ್ಕೇ ಬರುತ್ತಿಲ್ಲ. ಅದರ ನಡುವೆಯೇ ಝೀಕಾ ವೈರಸ್‌ ಹಾವಳಿ ಕೇರಳವನ್ನು ಕಂಗೆಡಿಸಿದೆ.

ಝೀಕಾ ವೈರಸ್‌ನ ಹೊಸ ಎರಡು ಪ್ರಕರಣಗಳು ಮಂಗಳವಾರ ಪತ್ತೆಯಾಗಿವೆ. ಹಾಗಾಗಿ, ಒಟ್ಟು ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಮೊದಲ ಪ್ರಕರಣ ಇದೇ 8ರಂದು ಪತ್ತೆಯಾಗಿತ್ತು. ತಿರುವನಂತಪುರ ಜಿಲ್ಲೆಯ 24 ವರ್ಷ ವಯಸ್ಸಿನ ಗರ್ಭಿಣಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯು ಇದೇ 7ರಂದು ಮಗುವಿಗೆ ಜನ್ಮ ನೀಡಿದ್ದರು. ಜ್ವರ, ತಲೆನೋವು ಜತೆಗೆ, ದೇಹದಲ್ಲಿ ಕೆಂಪು ದದ್ದುಗಳು ಮೂಡಿದ್ದ ಮಹಿಳೆಯನ್ನು ಜೂನ್‌ 7ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮಹಿಳೆಗೆ ಝೀಕಾ ಸೋಂಕು ದೃಢಪಟ್ಟಿತ್ತು.

ತಮಿಳುನಾಡು ಗಡಿ ಸಮೀಪದ ನಿವಾಸಿಯಾಗಿರುವ ಆ ಮಹಿಳೆಯು ಕೇರಳದಿಂದ ಹೊರಗೆ ಹೋಗಿಯೇ ಇರಲಿಲ್ಲ ಎಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಓದಿ: Explainer: ಏನಿದು ಝಿಕಾ ವೈರಸ್ ಸೋಂಕು, ಲಕ್ಷಣಗಳೇನು, ಹರಡದಂತೆ ತಡೆಯುವುದು ಹೇಗೆ?

ಹೆಚ್ಚು ಹೆಚ್ಚು ಪ್ರಕರಣಗಳು ಧೃಡಪಡುತ್ತಿದ್ದಂತೆಯೇ ಕೇರಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರ ಸರ್ಕಾರ ಕೂಡ ಝೀಕಾ ವೈರಸ್‌ ಅನ್ನು ಗಂಭೀರವಾಗಿ ಪರಿಗಣಿಸಿದೆ. ಕೇರಳಕ್ಕೆ ಏಮ್ಸ್‌ನ ಆರು ಸದಸ್ಯರು ಇರುವ ಪರಿಣತರ ತಂಡವೊಂದನ್ನು ಈಗಾಗಲೇ ಕಳುಹಿಸಿದೆ. 

ಝೀಕಾ ಪರೀಕ್ಷೆಗಾಗಿ 2,100 ಪರೀಕ್ಷಾ ಕಿಟ್‌ಗಳನ್ನು ಪುಣೆಯ ವೈರಾಣು ಸಂಸ್ಥೆಯಿಂದ ಕೇರಳಕ್ಕೆ ಕಳುಹಿಸಲಾಗಿದೆ. ತಿರುವನಂತಪುರ, ತ್ರಿಶ್ಶೂರು ಮತ್ತು ಕೋಯಿಕ್ಕೋಡ್‌ನ ವೈದ್ಯಕೀಯ ಕಾಲೇಜುಗಳು ಮತ್ತು ಆಲ‍‍ಪ್ಪುಳದಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಯ ಶಾಖೆಯಲ್ಲಿ ಪರೀಕ್ಷೆಯ ವ್ಯವಸ್ಥೆ ಮಾಡಲಾಗಿದೆ. 


ಝೀಕಾ ವೈರಸ್‌

ರಾಜ್ಯದ ಇತರ ಪ್ರಯೋಗಾಲಯಗಳಲ್ಲಿಯೂ ಪರೀಕ್ಷೆ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಒಟ್ಟು 27 ಸರ್ಕಾರಿ ಪ್ರಯೋಗಾಲಯಗಳಿದ್ದು, ಹೆಚ್ಚಿನವುಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ. ಝೀಕಾ ಲಕ್ಷಣಗಳು ಇದ್ದವರನ್ನು ವಿಶೇಷವಾಗಿ ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಕೇರಳದ ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ.

ಭಾರತಕ್ಕೆ ಹೊಸದಲ್ಲ

ವೈರಾಣು ಕುಟುಂಬಕ್ಕೆ ಸೇರಿದ ಝೀಕಾ ವೈರಸ್‌ ಸೊಳ್ಳೆಗಳಿಂದ ಮನುಷ್ಯರಿಗೆ ಹರಡುತ್ತದೆ. ಈಡಿಸ್ ಜಾತಿಯ ಸೊಳ್ಳೆಗಳು ಕಚ್ಚುವುದರಿಂದ ಮನುಷ್ಯನು ಸೋಂಕಿಗೆ ಒಳಗಾಗುತ್ತಾನೆ. ವ್ಯಕ್ತಿ ಸೋಂಕಿಗೆ ಒಳಗಾಗಿರುವುದು ತಕ್ಷಣಕ್ಕೆ ತಿಳಿಯುವುದಿಲ್ಲ. ವೈರಾಣುವಿಗೆ ಲಸಿಕೆ ಲಭ್ಯವಿಲ್ಲ.

ಈಡಿಸ್ ಈಜಿಪ್ಟಿ ಮತ್ತು ಈಡಿಸ್ ಅಲ್ಬೋಪಿಕ್ಟಸ್ ಎಂಬ ಜಾತಿಯ ಸೊಳ್ಳೆಗಳು ಈ ವೈರಸ್‌ನ ವಾಹಕಗಳು. ಇದೇ ಜಾತಿಯ ಸೊಳ್ಳೆಗಳು ಡೆಂಘಿ ಮತ್ತು ಚಿಕೂನ್‌ಗುನ್ಯ ಸೋಂಕನ್ನೂ ಹರಡುತ್ತವೆ. ಪ್ರಾಣಿಗಳ ಭಕ್ಷ್ಯಗಳು, ಕೊಳಗಳು, ಟೈರ್‌ಗಳು, ಬಕೆಟ್‌ಗಳು ಅಥವಾ ಸಸ್ಯ ಮತ್ತು ಹೂವಿನಕುಂಡಗಳಂತಹ ಸ್ಥಳಗಳಲ್ಲಿ, ನಿಂತ ನೀರಿನಲ್ಲಿ ಈ ಸೊಳ್ಳೆಗಳು ಮೊಟ್ಟೆಗಳನ್ನು ಇಡುತ್ತವೆ.

ಈಡಿಸ್ ಸೊಳ್ಳೆಗಳು ಒಳಾಂಗಣ ಮತ್ತು ಹೊರಾಂಗಣದಲ್ಲೂ ವಾಸಿಸುತ್ತವೆ. ಹಗಲಿನ ವೇಳೆಯಲ್ಲಿ ಜನರನ್ನು ಹೆಚ್ಚಾಗಿ ಕಚ್ಚುತ್ತವೆ. ಝೀಕಾ ಸೋಂಕಿಗೆ ಒಳಗಾದ ವ್ಯಕ್ತಿಯನ್ನು ಸೊಳ್ಳೆಯು ಕಚ್ಚಿದರೆ, ಆ ಸೊಳ್ಳೆಯೊಳಗೆ ಝೀಕಾ ವೈರಸ್‌ ಸೇರಿಕೊಳ್ಳುತ್ತದೆ. ಸೋಂಕುಪೀಡಿತ ಸೊಳ್ಳೆಯು ಆರೋಗ್ಯವಂತ ಮನುಷ್ಯನನ್ನು ಕಚ್ಚಿದಾಗ, ವೈರಾಣು ಸೊಳ್ಳೆಯಿಂದ ವ್ಯಕ್ತಿಗೆ ಹರಡುತ್ತದೆ.

ಸೋಂಕು ತಗಲಿರುವ ಶಂಕಿತ ವ್ಯಕ್ತಿಯ ರಕ್ತದ ಮಾದರಿ ಅಥವಾ ಮೂತ್ರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ದೃಢಪಡಿಸಿಕೊಳ್ಳಲಾಗುತ್ತದೆ. ಡೆಂಘಿ ಮತ್ತು ಚಿಕೂನ್‌ಗುನ್ಯಾಕ್ಕೆ ಅನುಸರಿಸುವ ರಕ್ತದ ಮಾದರಿ ಪರೀಕ್ಷೆಯ ರೀತಿಯಲ್ಲೇ ಇದನ್ನೂ ಪತ್ತೆಹಚ್ಚಲಾಗುತ್ತದೆ.

ಇದೀಗ ಕೇರಳದಲ್ಲಿ ಕಾಣಿಸಿಕೊಂಡಿರುವ ಝೀಕಾ ವೈರಸ್‌ಗೆ ಏಳು ದಶಕಗಳ ಹಿನ್ನೆಲೆಯಿದೆ. ಇದು ಮೊದಲಿಗೆ ಕಂಡುಬಂದಿದ್ದು ಉಗಾಂಡದಲ್ಲಿ. 1947ರಲ್ಲಿ ಪತ್ತೆಯಾದ ಈ ವೈರಸ್‌ಗೆ ಇಲ್ಲಿನ ಅರಣ್ಯವೊಂದರ ಹೆಸರನ್ನೇ ಇರಿಸ ಲಾಗಿದೆ. 1951-1981ರ ಅವಧಿಯಲ್ಲಿ ಈ ವೈರಸ್ ಆಫ್ರಿಕಾದ ಇತರ ದೇಶಗಳಿಗೆ ಹರಡಿತು.

1969-1983ರ ಅವಧಿಯಲ್ಲಿ ಭಾರತ, ಇಂಡೊನೇಷ್ಯಾ, ಮಲೇಷ್ಯಾ ಮತ್ತು ಪಾಕಿಸ್ತಾನ ಸೇರಿದಂತೆ ಏಷ್ಯಾಕ್ಕೆ ವಿಸ್ತರಿಸಿತು. 2007ರಲ್ಲಿ ಇಂಡೋ-ಪೆಸಿಫಿಕ್‌ನ ಯಾಪ್ ದ್ವೀಪದಲ್ಲಿ ಪತ್ತೆಯಾಯಿತು. ಉತ್ತರ ಮತ್ತು ದಕ್ಷಿಣ ಅಮೆರಿಕಾಕ್ಕೆ ಹರಡುತ್ತಲೇ ಇದೆ. ಬ್ರೆಜಿಲ್‌ನಲ್ಲಿ ಮೇ 2015ರಲ್ಲಿ ಮೊದಲ ಪ್ರಕರಣ ವರದಿಯಾಯಿತು.

ಭಾರತದಲ್ಲಿ 2017 ಮತ್ತು 2018ರಲ್ಲಿ ಝೀಕಾ ವೈರಸ್‌ ಪ್ರಕರಣಗಳು ಹೆಚ್ಚಾದವು. ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ನೂರಾರು ಸೋಂಕಿತರು ಕಂಡುಬಂದರು.

ಲಕ್ಷಣಗಳು ಮತ್ತು ತೆಗೆದುಕೊಳ್ಳಬೇಕಾದ ಎಚ್ಚರಿಕೆ

ಝೀಕಾ ವೈರಸ್‌ ಸೋಂಕಿತರಾದ ಬಹುತೇಕರಿಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಇದ್ದರೂ ಸೌಮ್ಯರೂಪದಲ್ಲಿರುತ್ತವೆ. ಜ್ವರ, ಚರ್ಮದ ಮೇಲೆ ಕೆಂಪು ದದ್ದು, ತಲೆನೋವು, ಕೀಲುನೋವು, ಕಣ್ಣು ಕೆಂಪಾಗುವಿಕೆ ಹಾಗೂ ಮಾಂಸಖಂಡಗಳ ಸೆಳೆತದಂಥ ಲಕ್ಷಣಗಳು ಕೆಲವು ದಿನಗಳಿಂದ ವಾರದವರೆಗೆ ಕಾಣಿಸಿಕೊಳ್ಳುತ್ತವೆ. ಸೊಳ್ಳೆ ಕಡಿತದಿಂದ ಬರುವ ಚಿಕೂನ್‌ ಗುನ್ಯ, ಡೆಂಘಿಯ ಲಕ್ಷಣಗಳೇ ಇಲ್ಲಿಯೂ ಸಾಮಾನ್ಯ.

ಝೀಕಾ ಸೋಂಕಿತರು ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮಟ್ಟಿಗೆ ಕಾಯಿಲೆ ಬೀಳುವುದಿಲ್ಲ. ಸಾವು ಸಂಭವಿಸುವುದೂ ಅಪರೂಪ. ಹೀಗಾಗಿ, ಬಹಳಷ್ಟು ಜನರಿಗೆ ತಾವು ಸೋಂಕಿಗೆ ಒಳಗಾಗಿರುವುದು ಕೂಡ ಅರಿವಿಗೆ ಬರುವುದಿಲ್ಲ.

ಗರ್ಭಿಣಿಯರಿಗೆ ಹೆಚ್ಚಿನ ಆತಂಕ

ಸೋಂಕಿತ ವ್ಯಕ್ತಿಯನ್ನು ಕಚ್ಚುವ ಈಡಿಸ್ ಸೊಳ್ಳೆ, ಈ ವೈರಸ್ ಹಬ್ಬಲು ಪ್ರಮುಖ ಕಾರಣ. ಹೀಗಾಗಿ ಸೋಂಕು ಹರಡಲು ಕಾರಣವಾದ ಸೊಳ್ಳೆಯಿಂದ ರಕ್ಷಣೆ ಪಡೆಯುವುದು ಸದ್ಯದ ಮೊದಲ ರಕ್ಷಣಾ ಕ್ರಮ. 

ಪ್ರತಿಯೊಬ್ಬರು ಅದರಲ್ಲೂ ವಿಶೇಷವಾಗಿ ಗರ್ಭಿಣಿಯರು ಹಾಗೂ ಬಾಣಂತಿಯರು ಹೆಚ್ಚಿನ ಕಾಳಜಿ ವಹಿಸಬೇಕು. ಸೋಂಕಿತ ಗರ್ಭಿಣಿಯು, ತನ್ನ ಗರ್ಭದಲ್ಲಿರುವ ಭ್ರೂಣ ಅಥವಾ ಮಗುವಿಗೂ ಸೋಂಕನ್ನು ದಾಟಿಸುತ್ತಾಳೆ. ಹೀಗಾಗಿ, ಇದು ಮಗುವಿನ ಬೆಳವಣಿಗೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಅವಧಿ ಪೂರ್ವ ಜನನ ಅಥವಾ ಗರ್ಭಪಾತ ಆಗುವ ಸಾಧ್ಯತೆಯ ಜೊತೆಗೆ, ಮಿದುಳಿನ ಬೆಳವಣಿಗೆ ಪೂರ್ಣಗೊಳ್ಳದ ಅಥವಾ ಹಾಗೂ ತಲೆ ಚಿಕ್ಕದಾಗಿರುವ ಶಿಶುಗಳು (ಮೈಕ್ರೊಸೆಫಲಿ) ಜನಿಸುವ ಅಪಾಯವಿದೆ. 

ಸೊಳ್ಳೆಗಳಿಗೆ ಆಶ್ರಯತಾಣವಾಗಬಹುದಾದ ಪರಿಸರವನ್ನು ಶುಚಿಗೊಳಿಸಬೇಕು. ಸುರಕ್ಷಿತವಾದ ಹಾಗೂ ಪರಿಣಾಮಕಾರಿಯಾದ ಸೊಳ್ಳೆ ಪರದೆ ಬಳಸುವುದಕ್ಕೆ ಆದ್ಯತೆ ನೀಡಬೇಕು.

ಲಕ್ಷಣ ರಹಿತ ಸೋಂಕಿತ ವ್ಯಕ್ತಿಯೊಂದಿಗಿನ ಅಸುರಕ್ಷಿತ ಲೈಂಗಿಕ ಸಂಪರ್ಕ ಅಥವಾ ಅಂಥ ವ್ಯಕ್ತಿಯಿಂದ ಪಡೆದ ರಕ್ತದ ಮೂಲಕವೂ ಸೋಂಕು ತಗುಲುವ ಸಾಧ್ಯತೆ ಇದೆ.

ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್‌ ಬಳಕೆ ಮಾಡುವುದು ಹಾಗೂ ರಕ್ತದಾನಕ್ಕೂ ಮೊದಲು ರಕ್ತ ದಾನಿಯ ಆರೋಗ್ಯ ತಪಾಸಣೆ, ಪರೀಕ್ಷೆಯ ಬಗ್ಗೆ ನಿಗಾ ವಹಿಸಬೇಕು.

ಲಕ್ಷಣಗಳಿಗೆ ಚಿಕಿತ್ಸೆ

ಝೀಕಾ ವೈರಸ್‌, ಸೋಂಕಿತ ವ್ಯಕ್ತಿಯ ರಕ್ತದಲ್ಲಿ ಸಾಮಾನ್ಯವಾಗಿ ಒಂದು ವಾರದವರೆಗೆ ಇರುತ್ತದೆ. ಹೀಗಾಗಿ, ಇಂಥ ಲಕ್ಷಣಗಳು ಕಂಡುಬಂದಲ್ಲಿ ಅಥವಾ ಈ ವೈರಸ್‌ ಕಾಣಿಸಿಕೊಂಡಿರುವ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಪ್ಪದೇ ವೈದ್ಯರಿಂದ ತಪಾಸಣೆಗೊಳಗಾಗಬೇಕು.

ರೋಗ ಲಕ್ಷಣಗಳನ್ನು ಆಧರಿಸಿ, ರಕ್ತ ಅಥವಾ ಮೂತ್ರ ಪರೀಕ್ಷೆ ನಡೆಸುವ ಮೂಲಕ ವ್ಯಕ್ತಿಯಲ್ಲಿ ಸೋಂಕು ಇದೆ ಅಥವಾ ಇಲ್ಲ ಎಂಬುದನ್ನು  ವೈದ್ಯರು ನಿರ್ಧರಿಸುತ್ತಾರೆ. ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಾದ ಮೇಲೂ ಝೀಕಾ ವೈರಸ್‌ ಪರೀಕ್ಷಾ ವರದಿಯನ್ನು ತಪ್ಪದೇ ಪರಿಶೀಲಿಸಬೇಕು.

ಈ ವೈರಸ್‌ಗೆ ಇದುವರೆಗೆ ಯಾವುದೇ ನಿರ್ದಿಷ್ಟ ಔಷಧಿ ಇಲ್ಲ. ಈ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ. ಹೀಗಾಗಿ, ಸದ್ಯಕ್ಕೆ ರೋಗ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ‌. ಇದರೊಂದಿಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಯಥೇಚ್ಛವಾಗಿ ನೀರು ಕುಡಿಯಬೇಕು. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಕಡ್ಡಾಯವಾಗಿ, ವೈದ್ಯರ ಸಲಹೆ ಪಡೆದೇ ಜ್ವರ ಹಾಗೂ ಮೈಕೈ ನೋವಿಗೆ ಮಾತ್ರೆಗಳನ್ನು ತೆಗೆದುಕೊಳ್ಳಬೇಕು.

ಒಮ್ಮೆ ಸೋಂಕಿಗೆ ಒಳಗಾದ ವ್ಯಕ್ತಿಗೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸೋಂಕು ತಗಲುವುದನ್ನು ತಪ್ಪಿಸಿಕೊಳ್ಳಲು ಜಾಗ್ರತೆ ವಹಿಸುವುದರೊಂದಿಗೆ ಇತರರಿಗೂ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು.

ಝೀಕಾ ಸೋಂಕಿನಿಂದ ರಕ್ಷಣೆ ಪಡೆಯಬೇಕಾದರೆ ಸೋಂಕಿತ ವ್ಯಕ್ತಿಯ ರಕ್ತ, ಮೂತ್ರ, ವಾಂತಿ ಇವುಗಳ ಸಂಪರ್ಕಕ್ಕೆ ಬರದಂತೆ ಎಚ್ಚರಿಕೆ ವಹಿಸಬೇಕು. ಸೋಂಕಿತನ ಸ್ಪರ್ಶದಿಂದ ದೂರವಿರಬೇಕು. ಅಂಥ ವ್ಯಕ್ತಿಯ ಆರೈಕೆ ಮಾಡುವವರು, ಅಗತ್ಯ ಸೇವೆ ಒದಗಿಸಿದ ಮೇಲೆ ಸಾಬೂನು ಮತ್ತು ನೀರಿನಿಂದ ಸ್ವಚ್ಛವಾಗಿ ಕೈತೊಳೆದುಕೊಳ್ಳಬೇಕು. ಧರಿಸಿದ್ದ ಬಟ್ಟೆಯನ್ನೂ ತಕ್ಷಣವೇ ತೊಳೆದುಹಾಕುವುದು ಒಳ್ಳೆಯದು, ಸೋಂಕಿತನು ಇರುವ ಪರಿಸರವನ್ನೂ ಶುಚಿಯಾಗಿ ಇರಿಸಬೇಕು.

ಕರ್ನಾಟಕ, ತಮಿಳುನಾಡು ಗಡಿಯಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ಝೀಕಾ ವೈರಸ್‌ ಪತ್ತೆಯಾಗಿರುವುದರಿಂದ ಪಕ್ಕದ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ವೈರಸ್ ಹರಡುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಕೇರಳ ಗಡಿಯತ್ತ ಗಮನ ಕೇಂದ್ರೀಕರಿಸಿದೆ. ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರದಲ್ಲಿ ಹೆಚ್ಚು ಜಾಗರೂಕರವಾಗಿ ಇರುವಂತೆ ನಿರ್ದೇಶನ ನೀಡಲಾಗಿದೆ. 

ಪ್ರಸಕ್ತ ಮುಂಗಾರು ಮಳೆಯು ಝೀಕಾ ವೈರಸ್ ಕಾಯಿಲೆ ಹರಡುವ ಸೊಳ್ಳೆಗಳ ಉತ್ಪತ್ತಿಯನ್ನು ವೇಗಗೊಳಿಸುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಸುತ್ತೋಲೆ ತಿಳಿಸಿದೆ.

ಈಡಿಸ್‌ ಈಜಿಪ್ಟಿ ತಳಿಯ ಸೊಳ್ಳೆಯು ಈಗಾಗಲೇ ರಾಜ್ಯದಲ್ಲಿ ಡೆಂಘಿ ಹಾಗೂ ಚಿಕೂನ್‌ಗುನ್ಯಾ ಹರಡಿದೆ. ಇದನ್ನು ಪರಿಗಣಿಸಿ, ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಮತ್ತು ಆರೋಗ್ಯ ಸಹಾಯಕರು ಕಟ್ಟುನಿಟ್ಟಾದ ಮೇಲ್ವಿಚಾರಣೆಯನ್ನು ಸಮರೋಪಾದಿಯಲ್ಲಿ ನಡೆಸಬೇಕು ಎಂದು ಸರ್ಕಾರ ಸೂಚಿಸಿದೆ.

ತಮಿಳುನಾಡು ಸರ್ಕಾರವು ಕೇರಳದ ಗಡಿಯಲ್ಲಿ ತಪಾಸಣೆ ತೀವ್ರಗೊಳಿಸಿದೆ. ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯನ್ ಅವರ ಪ್ರಕಾರ, ಇದುವರೆಗೆ ರಾಜ್ಯಕ್ಕೆ ಯಾವುದೇ ಝೀಕಾ ವೈರಸ್ ಪ್ರಕರಣ ಬಂದಿಲ್ಲ. ಆದರೆ, ಕೇರಳದಿಂದ ರಾಜ್ಯಕ್ಕೆ ಬರುವ ಜನರನ್ನು ವೈರಸ್‌ಗಾಗಿ ಪರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕೊಯಮತ್ತೂರು ಜಿಲ್ಲಾಡಳಿತವು ತಮಿಳುನಾಡು-ಕೇರಳ ಗಡಿಯಲ್ಲಿ ವಾಹನ ತಪಾಸಣೆ ತೀವ್ರಗೊಳಿಸಿದೆ. ಒಟ್ಟು 14 ಸ್ಥಳಗಳ  ಚೆಕ್‌ಪೋಸ್ಟ್‌ಗಳಲ್ಲಿ ಕಣ್ಗಾವಲು ಹಾಕಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು