ಉತ್ತರ ಪ್ರದೇಶದ ಅಂಗಡಿಯೊಂದರಲ್ಲಿ ಇಡಲಾಗಿತ್ತೇ 300 ಇವಿಎಂ? ವೈರಲ್ ವಿಡಿಯೊ ನಿಜವೇ?

ಸೋಮವಾರ, ಜೂನ್ 17, 2019
28 °C

ಉತ್ತರ ಪ್ರದೇಶದ ಅಂಗಡಿಯೊಂದರಲ್ಲಿ ಇಡಲಾಗಿತ್ತೇ 300 ಇವಿಎಂ? ವೈರಲ್ ವಿಡಿಯೊ ನಿಜವೇ?

Published:
Updated:

ನವದೆಹಲಿ: ಸ್ಟ್ರಾಂಗ್‌ರೂಂನಿಂದ ಇವಿಎಂಗಳನ್ನು ಬೇರೆಡೆಗೆ ಕೊಂಡೊಯ್ಯಲಾಗುತ್ತಿದೆ ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊ ಪ್ರಕಾರ ಇವಿಎಂಗಳನ್ನು ಬಿಜೆಪಿ ನೇತಾರನ ಅಂಗಡಿಯೊಂದರಲ್ಲಿ ಇಡಲಾಗಿತ್ತು. ಬಿಜೆಪಿ ನಾಯಕರೊಬ್ಬರ ಅಂಗಡಿಯಲ್ಲಿ  ಅಕ್ರಮವಾಗಿ ಇಡಲಾಗಿದ್ದ 300 ಇವಿಎಂಗಳನ್ನು ಅಧಿಕಾರಿಗಳು ಸ್ಥಳೀಯರ ಸಹಾಯದಿಂದ ವಶ ಪಡಿಸಿಕೊಂಡಿದ್ದಾರೆ ಎಂಬ ಒಕ್ಕಣೆಯೊಂದಿಗೆ ಈ ವಿಡಿಯೊ ಹರಿದಾಡುತ್ತಿದೆ.

ಈ ವಿಡಿಯೊದಲ್ಲಿ ಹಲವಾರು ಇವಿಎಂಗಳನ್ನು ಸಾಗಿಸುತ್ತಿರುವ  ದೃಶ್ಯವಿದ್ದು, ಇದನ್ನು ಮೊಬೈಲ್‌ನಲ್ಲಿ ಶೂಟ್ ಮಾಡಲಾಗಿದೆ.
ಈ ವಿಡಿಯೊ ಬಗ್ಗೆ ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ನಡೆಸಿದ್ದು ವಿಡಿಯೊದಲ್ಲಿ ಹೇಳುವಂತೆ ಇದು ಅಂಗಡಿಯಲ್ಲ. ಚಂದೌಲಿಯ ನವೀನ್ ಮಂಡಿ ಸ್ಥಳ್‌ನಲ್ಲಿರುವ ಸ್ಟ್ರಾಂಗ್‌ರೂಂ ಆಗಿದೆ. ಇಲ್ಲಿ ಇವಿಎಂ ಸಾಗಿಸುತ್ತಿರುವವರು ಸ್ಥಳೀಯರಲ್ಲ ಸರ್ಕಾರಿ ನೌಕರರು.

ಫ್ಯಾಕ್ಟ್‌ಚೆಕ್


ವಿಡಿಯೊದ ಸ್ಕ್ರೀನ್‌ಶಾಟ್‌ ತೆಗೆದು ಜೂಮ್ ಮಾಡಿ ನೋಡಿದರೆ ಇವಿಎಂ ಇರಿಸಿದ ಕೋಣೆಯಲ್ಲಿ ಸ್ಟ್ರಾಂಗ್ ರೂಂ ಎಂದು ಹಿಂದಿಯಲ್ಲಿ ಬರೆದಿರುವುದು ಕಾಣುತ್ತದೆ. ಇನ್ನು ಕೆಲವು ವಿಡಿಯೊಗಳಲ್ಲಿ ಮೇ 19, 2019ರಂದು ಮತದಾನ ಮುಗಿದ ಲೋಕಸಭಾ  ಕ್ಷೇತ್ರಗಳಲ್ಲಿ ಇವಿಎಂ ಕೊಂಡೊಯ್ಯುತ್ತಿರುವ ದೃಶ್ಯಗಳಿದ್ದು, ಇವಿಎಂ ದುರ್ಬಳಕೆಯ ಆರೋಪ ಕೇಳಿ ಬಂದಿದೆ.

ಇದೇ ವಿಡಿಯೊ ಆಮ್ ಆದ್ಮಿ ಪಕ್ಷ, ಗುರುಗ್ರಾಮದ ಅಧಿಕೃತ ಪುಟದಲ್ಲಿಯೂ ಶೇರ್ ಆಗಿದೆ.ಅಂಗಡಿಯೊಂದರಲ್ಲಿ 300ಕ್ಕಿಂತಲೂ ಹೆಚ್ಚು ಇವಿಎಂಗಳು ಸಂಗ್ರಹ ಮಾಡಿರುವುದನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಲೇ ಇದೆ  ಎಂದು ವಿಡಿಯೊದ ಬಗ್ಗೆ ವಿವರಣೆ ನೀಡಲಾಗಿತ್ತು.

ಇದೇ ರೀತಿಯ ವಿವರಣೆಯೊಂದಿಗೆ ಈ ವಿಡಿಯೊ ಹಲವಾರು ಫೇಸ್‌ಬುಕ್ ಪುಟ ಮತ್ತು ಟ್ವಿಟರ್ ಖಾತೆಯಲ್ಲಿ ಶೇರ್ ಆಗಿದ್ದು ಉತ್ತರ ಪ್ರದೇಶದ ಚಂದೌಲಿಯಲ್ಲಿನ ಪ್ರಕರಣ ಎಂದು ಹೇಳಲಾಗಿದೆ.

ಚುನಾವಣಾ ಆಯೋಗ ಏನು ಹೇಳಿದೆ?
ಈ ಬಗ್ಗೆ ಬೂಮ್ ತಂಡ ಚಂದೌಲಿಯ ಜಿಲ್ಲಾ ಚುನಾವಣಾಧಿಕಾರಿ ನವನೀತ್ ಸಿಂಗ್ ಚಹಾಲ್ ಅವರನ್ನು ಭೇಟಿ ಮಾಡಿದಗ ವೈರಲ್ ವಿಡಿಯೊದಲ್ಲಿರುವ ಆರೋಪವನ್ನು ಅವರು ನಿರಾಕರಿಸಿದ್ದಾರೆ. ಆ ವಿಡಿಯೊ ನವೀನ್ ಮಂಡಿ ಸ್ಥಳ್ ಚಂದೌಲಿಯದ್ದಾಗಿದೆ. ಮತದಾನಕ್ಕೆ ಬಳಸದ ಕೆಲವು ಇವಿಎಂಗಳನ್ನು ಸಕಲ್ದಿಹಾ ಲೋಕಸಭಾಕ್ಷೇತ್ರದಿಂದ ಚಂದೌಲಿಗೆ ಸಾಗಿಸಲಾಗಿತ್ತು. ಕೆಲವೊಂದು ರಾಜಕೀಯ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮಧ್ಯಾಹ್ನದ ವೇಳೆ ಅದನ್ನು ಪ್ರತ್ಯೇಕ ಸ್ಟ್ರಾಂಗ್‌ರೂಂನಲ್ಲಿರಿಸಲಾಗಿದೆ.

ಚಹಾಲ್ ಮತ್ತು ಇತರ ಅಧಿಕಾರಿಗಳು ಆ ಸ್ಥಳಕ್ಕೆ ಹೋಗಿ ಅಲ್ಲಿ ಪ್ರತಿಭಟನೆ ಮಾಡುತ್ತಿದ್ದ ನಾಯಕರಿಗೆ ವಿಷಯಗಳನ್ನು ವಿವರಿಸಿದ್ದಾರೆ 
ಈ ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕಾಗಿ ನಾವು ಮತದಾನಕ್ಕೆ ಬಳಿಸಿದ ಇವಿಎಂನ್ನು ನವೀನ್ ಮಂಡಿ ಸ್ಥಳ್‌ನಲ್ಲಿದ್ದ ಸ್ಟ್ರಾಂಗ್‌ ರೂಂನಿಂದ ಜಿಲ್ಲಾಧಿಕಾರಿ ಕಚೇರಿಗೆ ಸಾಗಿಸಿದ್ದೇವೆ. ಆಗ ಸಂಜೆಯಾಗಿತ್ತು ಎಂದು ನವನೀತ್ ಸಿಂಗ್ ಚಹಾಲ್ ಹೇಳಿದ್ದಾರೆ. ಆದಾಗ್ಯೂ, ವಿಡಿಯೊದಲ್ಲಿ ಹೇಳಿದಂತೆ ಬಿಜೆಪಿ ನಾಯಕರೊಬ್ಬರ ಅಂಗಡಿಯಲ್ಲಿ ಈ ಇವಿಎಂ ಸಂಗ್ರಹಿಸಿಡಲಾಗಿಲ್ಲ.

ಅದೇ ಸ್ಥಳದಿಂದ ಇನ್ನೊಂದು ವಿಡಿಯೊ 

ಚಂದೌಲಿಯಿಂದಲೇ ಸೆರೆ  ಹಿಡಿದ ಇನ್ನೊಂದು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ಇದು ಮಧ್ಯಾಹ್ನದ ಹೊತ್ತು ತೆಗೆದ ವಿಡಿಯೊ ಆಗಿದೆ.  ಇದು ಯೋಗಿ ಸರ್ಕಾರದ ಗೂಂಡಾಗಿರಿ, ಜಿಲ್ಲಾಡಳಿತವು ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಇವಿಎಂಗಳನ್ನು ಬದಲಿಸುತ್ತಿದೆ. ಹಾಡಹಗಲೇ ಪ್ರಜಾಪ್ರಭುತ್ವದ  ಹತ್ಯೆಯಾಗುತ್ತಿದೆ. ವಿಪಕ್ಷಗಳು ಮತ್ತು ಮಾಧ್ಯಮಗಳು ಇಲ್ಲಿ ಮೂಕಪ್ರೇಕ್ಷಕರಾಗಿದ್ದರೆ. ನಾಚಿಕೆಗೇಡು ಎಂಬ ಬರಹದೊಂದಿಗೆ ಈ ವಿಡಿಯೊ ಶೇರ್ ಆಗಿದೆ. ಈ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿತ್ತು.

ವಿಡಿಯೊದಲ್ಲಿ ಏನಿದೆ? 
ಇದು ಹಗಲು ಹೊತ್ತು ಶೂಟ್ ಮಾಡಿದ ವಿಡಿಯೊ ಆಗಿದ್ದು, ನಾನು ವಿಡಿಯೊ ರೆಕಾರ್ಡ್ ಮಾಡುತ್ತಿದ್ದೇನೆ. ಇಲ್ಲಿ ಇವರು ಇವಿಎಂನ್ನು ಕೆಳಗಿಳಿಸುತ್ತಿದ್ದಾರೆ. ಇಲ್ಲಿ ಯಾರೂ ಇಲ್ಲ, ಇದರ ಬಗ್ಗೆ ಇಲ್ಲಿರುವವರು ಯಾರೂ ಏನೂ ಹೇಳುತ್ತಿಲ್ಲ. ರೂಂ.10-ಇಲ್ಲಿ  ಯಾವುದೇ ಪಕ್ಷದವರು ಇಲ್ಲ, ಇವಿಎಂಗಳನ್ನು ರೂಂ 10ಕ್ಕೆ ತರಲಾಗುತ್ತಿದೆ. 

ಈ ವಿಡಿಯೊ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯೇ ಇವಿಎಂನ್ನು ಹೊತ್ತು ತರುತ್ತಿರುವ ವ್ಯಕ್ತಿಯಲ್ಲಿ ಮಾತನಾಡಿಸಿ ಈ ಇವಿಎಂಗಳನ್ನು ಎಲ್ಲಿಂದ ತರುತ್ತಿದ್ದೀರಾ? ಎಂದು ಕೇಳುತ್ತಾರೆ. ಅದಕ್ಕೆ ಆ ವ್ಯಕ್ತಿ ಸಕಲ್ದಿಹಾ ಎಂದು ಉತ್ತರಿಸಿದ್ದಾರೆ.

ಉತ್ತರ ಪ್ರದೇಶದ ಚೌಂದಲಿ ಜಿಲ್ಲೆಯಲ್ಲಿ ಮೇ. 19ರಂದು ಮತದಾನ ನಡೆದಿತ್ತು. ಚಂದೌಲಿಗಿಂತ 10 ಕಿಮೀ ದೂರವಿರುವ ಲೋಕಸಭಾ ಕ್ಷೇತ್ರವಾಗಿದೆ ಸಕಲ್ದಿಹಾ.

ಇವಿಎಂ ಹೊತ್ತು ತರುತ್ತಿರುವ ವ್ಯಕ್ತಿಯೊಬ್ಬರು ಇದು ರಿಸರ್ವ್‌ಡ್ ಇವಿಎಂ ಎಂದು  ಹೇಳಿದ್ದು, ಸಕಲ್ದಿಹಾ ತಹಶೀಲ್ದಾರ್ ಅವರ ಅಣತಿಯಂತೆ  ಇವಿಎಂಗಳನ್ನು ಸಾಗಿಸಲಾಗುತ್ತಿದೆ ಎಂದಿದ್ದಾರೆ. ಹೀಗೆ ಹೇಳಿದ ವ್ಯಕ್ತಿ ಕ್ಲೀನರ್ ಆಗಿದ್ದಾರೆ.  ಆಮೇಲೆ ಬೂಮ್ ತಂಡ ಸಕಲ್ದಿಹಾ ತಹಶೀಲ್ದಾರ್ ನೂಪುರ್ ಸಿಂಗ್  ಅವರನ್ನು ಸಂಪರ್ಕಿಸಿದಾಗ ಈ ಇವಿಎಂಗಳು ರಿಸರ್ವ್‌ಡ್ ಇವಿಎಂಗಳಾಗಿದ್ದು  ನಾನೇ ಅನ್ನು ಸಾಗಿಸಲು ಆದೇಶಿಸಿದ್ದೆ ಎಂದಿದ್ದಾರೆ.

ಇವೆಲ್ಲವೂ ರಿಸರ್ವ್‌ಡ್ ಇವಿಎಂ ಆಗಿರುವುದರಿಂದ ಅದನ್ನು ಬೇರೆಡೆಗೆ ಸಾಗಿಸುವಂತೆ  ಸಹಾಯಕ ಚುನಾವಣಾ ಅಧಿಕಾರಿ ಹೇಳಿದರು ಎಂದಿದ್ದಾರೆ ನೂಪುರ್.

ಆಮೇಲೆ ಬೂಮ್ ತಂಡ  ಚಂದೌಲಿಯ ಉಪ ಚುನಾವಣಾ ಅಧಿಕಾರಿಯನ್ನು ಸಂಪರ್ಕಿಸಿದಾಗ ತಮ್ಮ ಆದೇಶದ ಮೇರೆಗೆ ಇವಿಎಂಗಳನ್ನು ಚಂದೌಲಿಯ ಸ್ಟ್ರಾಂಗ್ ರೂಂಗೆ  ಸಾಗಿಸಲಾಗಿತ್ತು ಎಂದಿದ್ದಾರೆ.ಹಾಗಾದರೆ ಮೇ. 19ಕ್ಕೆ  ಈ ಕಾರ್ಯವನ್ನು ಯಾಕೆ ಮಾಡಿಲ್ಲ ಎಂದು ಕೇಳಿದಾಗ ನಾವು ಮತದಾನಕ್ಕೆ ಬಳಸಿದ ಇವಿಎಂಗಳನ್ನು ಸೀಲ್ ಮಾಡುವುದು ಮತ್ತು ಇನ್ನಿತರ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದೆವು. ಹಾಗಾಗಿ ತಡವಾಯಿತು. ಈ ವಿಷಯವನ್ನು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ತಿಳಿಸಿದ್ದೆವು ಎಂದಿದ್ದಾರೆ.

ಏತನ್ಮಧ್ಯೆ, ಮತದಾನಕ್ಕೆ ಬಳಸಿದ್ದ ಎಲ್ಲ ಇವಿಎಂಗಳು ಸುರಕ್ಷಿತವಾಗಿವೆ ಎಂದು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿತ್ತು.
ಪ್ರಕಟಣೆ ಹೊರತಾಗಿ ಟ್ವೀಟ್ ಕೂಡಾ ಮಾಡಿದೆ.

ಚಂದೌಲಿಯಲ್ಲಿರುವ  ಸ್ಟ್ರಾಂಗ್‌ರೂಂಗೆ  ರಿಸರ್ವ್‌ಡ್ ಇವಿಎಂಗಳನ್ನು ಸಾಗಿಸುವ ಬಗ್ಗೆ ಚಂದೌಲಿ ಚುನಾವಣಾ  ಅಧಿಕಾರಿ, ಚುನಾವಣಾ ಆಯೋಗದ ಆಯುಕ್ತ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ.

ಮೇ 19, 2019ರಂದು ಏಳನೇ ಹಂತದ ಮತದಾನ  ಮುಗಿದ ಕೂಡಲೇ ಮತದಾನಕ್ಕೆ ಬಳಸಿದ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಡಬಲ್ ಸ್ಟ್ರಾಂಗ್‌ರೂಂನಲ್ಲಿಡಲಾಗಿದೆ, ಈ ಸ್ಟ್ರಾಂಗ್‌ರೂಂ ಸಿಆರ್‌ಪಿಎಫ್ ಯೋಧರ ಕಣ್ಗಾವಲಿನಲ್ಲಿದೆ. ಮೇ, 20ರಂದು ರಿಸರ್ವ್ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು 381- ಸಕಲ್ದಿಹಾದಲ್ಲಿಡಲಾಗಿತ್ತು,  ಮತದಾನದ ನಂತರ ಉಪ ಚುನಾವಣಾಧಿಕಾರಿಯವರು  ಚಂದೌಲಿಯ ನವೀನ್ ಮಂಡಿ ಸಮಿತಿಗೆ ಇವಿಎಂಗಳನ್ನು  ಸಾಗಿಸಿದ್ದಾರೆ, 
ಚಂದೌಲಿಯಲ್ಲಿರುವ ಪ್ರತ್ಯೇಕ ಸ್ಟ್ರಾಂಗ್‌ರೂಂನಲ್ಲಿ  ಇವಿಎಂಗಳನ್ನಿಡಲು ಸಿದ್ಧತೆ ನಡೆಸುತ್ತಿದ್ದಾಗ ಸಮಾಜವಾದಿ ಪಕ್ಷವು ಈ  ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಇತರ ಪಕ್ಷದ ಸದಸ್ಯರೂ ಪ್ರತಿಭಟನೆಗೆ ಕೈ ಜೋಡಿಸಿದ್ದರು, ಆದಾಗ್ಯೂ, ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ರಾಜಕೀಯ ನಾಯಕರಿಗೆ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.

ಸಮಾಜವಾದಿ ಪಕ್ಷದದ ಜಿಲ್ಲಾ ಮುಖ್ಯಸ್ಥ  ಸತ್ಯನಾರಾಯಣ್ ರಾಜ್‌ಬಹಾರ್  ಅವರು ಪಕ್ಷದ ಪರವಾಗಿ ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದು, ಅದರಲ್ಲಿ ಇವಿಎಂಗಳ ಬಗ್ಗೆ ಅಧಿಕಾರಿಗಳು ಕೈಗೊಂಡಿರುವ ಕ್ರಮದ ಬಗ್ಗೆ  ತೃಪ್ತಿ ಹೊಂದಿದ್ದೇವೆ ಎಂದಿದ್ದಾರೆ,  ಈ ಪತ್ರವನ್ನು ಚುನಾವಣಾ ಆಯೋಗದ ವಕ್ತಾರೆ ಶೇರ್ ಮಾಡಿದ್ದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 12

  Happy
 • 4

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !