ಗುರುವಾರ , ಜುಲೈ 7, 2022
23 °C

62 ಆಪ್ ಶಾಸಕರ ಪೈಕಿ 40 ಶಾಸಕರು ಅತ್ಯಾಚಾರ ಪ್ರಕರಣದ ಆರೋಪಿಗಳು ಎಂಬುದು ಸುಳ್ಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Fact Check

ನವದೆಹಲಿ: ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದಲ್ಲಿರುವ  62 ಶಾಸಕರ ಪೈಕಿ 40 ಶಾಸಕರು ಅತ್ಯಾಚಾರ ಪ್ರಕರಣದ ಆರೋಪಿಗಳು ಎಂದು ಜೆಡಿಯು ನಾಯಕ ಡಾ ಅಜಯ್ ಅಲೋಕ್ ಫೆಬ್ರುವರಿ 13ರಂದು ಟ್ವೀಟಿಸಿದ್ದರು. 

ಅವರ  ಈ ಟ್ವೀಟ್ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್  ಆಗಿದ್ದು, ಈ ಟ್ವೀಟ್‌ನ ಸತ್ಯಾಸತ್ಯತೆ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದೆ. 

ಫ್ಯಾಕ್ಟ್‌ಚೆಕ್ 
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ 70 ನೂತನ ಶಾಸಕರ ಪೈಕಿ 37 ಶಾಸಕರ ವಿರುದ್ಧ ಗಂಭೀರವಾದ ಅಪರಾಧ ಪ್ರಕರಣಗಳಿವೆ  ಎಂದು ಫೆಬ್ರುವರಿ 12 ರಂದು ಎಕನಾಮಿಕ್ ಟೈಮ್ಸ್ ಸುದ್ದಿ ಪ್ರಕಟಿಸಿತ್ತು. ಈ ವರದಿ ಪ್ರಕಾರ ಕೊಲೆ ಯತ್ನ ಮತ್ತು ಅತ್ಯಾಚಾರ ಪ್ರಕರಣದ ಆರೋಪಗಳು ಈ ಶಾಸಕರ ಮೇಲಿದೆ.  ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿ ಆಧರಿಸಿ ಈ ಸುದ್ದಿ ಪ್ರಕಟಿಸಲಾಗಿತ್ತು.

ಎಡಿಆರ್ ವರದಿ  ಪ್ರಕಾರ 62 ಶಾಸಕರ ಪೈಕಿ ಆಮ್ ಆದ್ಮಿ ಪಕ್ಷದ 33 ಶಾಸಕರ ಮೇಲೆ ಗಂಭೀರ ಅಪರಾಧ  ಪ್ರಕರಣ ಆರೋಪಗಳಿವೆ. 2015 ಮತ್ತು 2020ರಲ್ಲಿ ಶಾಸಕರು ಬಹಿರಂಗ ಪಡಿಸಿದ ಅಪರಾಧ ಪ್ರಕರಣಗಳ ಹೋಲಿಕೆಯನ್ನೂ  ಸುದ್ದಿಯಲ್ಲಿ ನೀಡಲಾಗಿತ್ತು. ವರದಿ ಪ್ರಕಾರ  2015ರಿಂದ ಅಪರಾಧ ಪ್ರಕರಣಗಳನ್ನು ಬಹಿರಂಗ ಪಡಿಸುವ ಅಭ್ಯರ್ಥಿಗಳ ಸಂಖ್ಯೆ ಜಾಸ್ತಿಯಾಗಿದೆ. 


ಎಡಿಆರ್ ವರದಿ

ಅಪರಾಧ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಗಳ ಪಕ್ಷವಾರು ವಿಂಗಡಣೆ ಇರುವ ಪುಟ 5ರಲ್ಲಿ ಈ ರೀತಿ ಮಾಹಿತಿ ಇದೆ.  
ಪ್ರಮುಖ ಪಕ್ಷಗಳಾದ ಆಮ್ ಆದ್ಮಿ ಪಕ್ಷದ  70 ಅಭ್ಯರ್ಥಿಗಳಲ್ಲಿ 42 (ಶೇ.60), ಬಿಜೆಪಿಯ  67 ಅಭ್ಯರ್ಥಿಗಳ ಪೈಕಿ 29 (ಶೇ.39), ಕಾಂಗ್ರೆಸ್‌ನ 66 ಅಭ್ಯರ್ಥಿಗಳ ಪೈಕಿ 18 (ಶೇ.27), ಬಿಎಸ್‌ಪಿಯ  66 ಅಭ್ಯರ್ಥಿಗಳ ಪೈಕಿ  12 (ಶೇ.18) ಮತ್ತು ಎನ್‌ಸಿಪಿಯ 5 ಅಭ್ಯರ್ಥಿಗಳ ಪೈಕಿ 3(ಶೇ.60) ಅಭ್ಯರ್ಥಿಗಳು ತಮ್ಮ ಅಫಿಡವಿಟ್‌ನಲ್ಲಿ ಅಪರಾಧ ಪ್ರಕರಣಗಳ ಬಗ್ಗೆ ಹೇಳಿಕೊಂಡಿದ್ದಾರೆ. 

6 ನೇ ಪುಟದಲ್ಲಿರುವ ಮಾಹಿತಿ ಹೀಗಿದೆ: ಪ್ರಮುಖ ಪಕ್ಷಗಳಾದ ಆಮ್ ಆದ್ಮಿ ಪಕ್ಷದ  70 ಅಭ್ಯರ್ಥಿಗಳಲ್ಲಿ 36 (ಶೇ.51), ಬಿಜೆಪಿಯ  67 ಅಭ್ಯರ್ಥಿಗಳ ಪೈಕಿ 17(ಶೇ.25), ಕಾಂಗ್ರೆಸ್‌ನ 66 ಅಭ್ಯರ್ಥಿಗಳ ಪೈಕಿ 13 (ಶೇ. 20), ಬಿಎಸ್‌ಪಿಯ  66 ಅಭ್ಯರ್ಥಿಗಳ ಪೈಕಿ 10 (ಶೇ.16) ಮತ್ತು ಎನ್‌ಸಿಪಿಯ 5 ಅಭ್ಯರ್ಥಿಗಳ ಪೈಕಿ 2(ಶೇ.40) ಅಭ್ಯರ್ಥಿಗಳು ತಮ್ಮ ಅಫಿಡವಿಟ್‌ನಲ್ಲಿ ಗಂಭೀರ ಅಪರಾಧ ಪ್ರಕರಣಗಳು ಇರುವುದರ ಬಗ್ಗೆ ಹೇಳಿಕೊಂಡಿದ್ದಾರೆ.

ಅದೇ ಪುಟದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಆರೋಪ ಪ್ರಕರಣದಲ್ಲಿರುವ ಅಭ್ಯರ್ಥಿಗಳು ಎಂಬ ಉಪ ಶೀರ್ಷಿಕೆಯಡಿಯಲ್ಲಿ 32 ಅಭ್ಯರ್ಥಿಗಳು ತಮ್ಮ ವಿರುದ್ಧ ಈ ರೀತಿಯ ಅಪರಾಧ ಪ್ರಕರಣಗಳಿವೆ ಎಂದು ಹೇಳಿಕೊಂಡಿದ್ದಾರೆ ಎಂದು ಇದೆ. ಇವರ ಪೈಕಿ ಒಬ್ಬ ಅಭ್ಯರ್ಥಿ ತನ್ನ ವಿರುದ್ಧ ಅತ್ಯಾಚಾರ ಪ್ರಕರಣ(ಐಪಿಸಿ  ಸೆಕ್ಷನ್376 ) ಇದೆ ಎಂದು ಹೇಳಿಕೊಂಡಿದ್ದಾರೆ.

ಅಪರಾಧ ಪ್ರಕರಣಗಳನ್ನು ಬಹಿರಂಗ ಪಡಿಸಿದ ಅಭ್ಯರ್ಥಿಗಳ ವಿವರಗಳು  ಪುಟ ಸಂಖ್ಯೆ 78 ನಂತರದ ಪುಟಗಳಲ್ಲಿವೆ. ರಿತಾಲಾ ವಿಧಾಸಭಾ  ಕ್ಷೇತ್ರದ ಮೊಹಿಂದರ್ ಗೋಯಲ್  ಎಂಬವರು ಅತ್ಯಾಚಾರ ಪ್ರಕರಣದ ಆರೋಪಿಗಳು ಎಂದು ಹೇಳಿರುವುದಾಗಿ ಪುಟ 122ರಲ್ಲಿ ಉಲ್ಲೇಖಿಸಲಾಗಿದೆ.  ಮಹಿಳೆಯ ಘನತೆಯನ್ನು ಅವಮಾನಿಸುವ ಪದ ಅಥವಾ ಚೇಷ್ಟೆ ಮಾಡಿದ ಆರೋಪ ಗೋಯಲ್ ಮೇಲಿದೆ. ಆದಾಗ್ಯೂ,  ಗೋಯಲ್ ವಿರುದ್ಧವಿರುವ ಪ್ರಕರಣಗಳಲ್ಲಿ ಅವರಿಗೆ ಶಿಕ್ಷೆಯಾಗಿಲ್ಲ ಎಂದು ವರದಿಯಲ್ಲಿದೆ.


ಗೋಯಲ್ ವಿವರ

ಗೋಯಲ್ ಅವರ ಪರಿಚಯ  ಪತ್ರವನ್ನು ಆಲ್ಟ್ ನ್ಯೂಸ್  ಮೈ ನೇತಾ ವೆಬ್‌ಸೈಟ್‌ನಲ್ಲಿ ಹುಡುಕಿದಾಗ ಗೋಯಲ್ ವಿರುದ್ದ ಒಂದೇ ಒಂದು ಗಂಭೀರ ಪ್ರಕರಣ ಇದೆ ಎಂಬುದು ತಿಳಿದುಬಂದಿದೆ.

ಎಡಿಆರ್ ವರದಿ ಪ್ರಕಾರ ಓಕ್ಲಾ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ  ಶಾಸಕ ಅಮಾನುತುಲ್ಲಾ ಖಾನ್, ದಿಯೊಲಿಯ  ಪ್ರಕಾಶ್,  ಲಕ್ಷ್ಮಿ ನಗರದ ಅಭಯ್  ವರ್ಮಾ, ತಿಲಕ್ ನಗರದ ಜರ್ನೈಲ್ ಸಿಂಗ್ , ಸಂಗಮ್ ವಿಹಾರ್‌ನ ದಿನೇಶ್ ಮೋಹನಿಯಾ ಅವರ ವಿರುದ್ಧ ಐಪಿಸಿ ಸೆಕ್ಷನ್ 354 ಅಡಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಘನತೆಗೆ ಧಕ್ಕೆಯನ್ನುಂಟು ಮಾಡಿದ ಆರೋಪ ಇವರ ಮೇಲಿದೆ. ಎಡಿಆರ್‌ ವರದಿಯನ್ನು ಪರಿಶೀಲಿಸಿದಾಗ ಗೋಯಲ್ ವಿರುದ್ಧ ಮಾತ್ರ ಒಂದು ಅತ್ಯಾಚಾರ ಪ್ರಕರಣವಿರುವುದು ತಿಳಿದುಬಂದಿದೆ.

ಹಾಗಾಗಿ ಡಾ. ಅಜಯ್ ಅಲೋಕ್ ಟ್ವೀಟ್‌ನಲ್ಲಿ ಹೇಳಿರುವುದು ಸುಳ್ಳು.  ಅಂದರೆ ಆಮ್ ಆದ್ಮಿ ಪಕ್ಷದ 62 ಶಾಸಕರಲ್ಲಿ 40 ಮಂದಿ ಮೇಲೆ ಅತ್ಯಾಚಾರದ ಆರೋಪ ಇಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು