ಗುರುವಾರ , ಸೆಪ್ಟೆಂಬರ್ 23, 2021
27 °C

ಬೆಂಗಳೂರಿನ ಮೋದಿ ಮಸೀದಿಗೆ ಈ ಹೆಸರು ಬಂದಿದ್ದು ಪ್ರಧಾನಿ ಮೋದಿಯಿಂದಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರಿನಲ್ಲಿರುವ ಮುಸ್ಲಿಮರು ಮಸೀದಿಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಟ್ಟಿದ್ದಾರೆ. ಇದನ್ನು ನೋಡಿ ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ ಎಂಬ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮೋದಿ ಮಸೀದಿಯ ನಾಮಫಲಕ ಮತ್ತು ಮೋದಿ ಇಸ್ಲಾಮಿಕ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಫ್ಲೆಕ್ಸ್ ಅಂಟಿಸಿರುವ ಮಸೀದಿಯ ಒಳಾಂಗಣದ ಚಿತ್ರವನ್ನು ಈ ಟ್ವೀಟ್‌ನೊಂದಿಗೆ ಲಗತ್ತಿಸಲಾಗಿದೆ. ಆದರೆ ಬೆಂಗಳೂರಿನಲ್ಲಿರುವ ಮೋದಿ ಮಸೀದಿಗೆ ಈ ಹೆಸರು ಬಂದಿದ್ದು ಪ್ರಧಾನಿ ನರೇಂದ್ರ ಮೋದಿಯಿಂದಲ್ಲ!

ಫ್ಯಾಕ್ಟ್‌ಚೆಕ್
ಈ ವೈರಲ್ ಟ್ವೀಟ್‌ನಲ್ಲಿರುವ ಸಂಗತಿ ನಿಜವೇ ಎಂಬುದನ್ನು ಅರಿಯಲು ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ಮಾಡಿದೆ. Modi Masjid Bengaluru ಎಂದು ಗೂಗಲಿಸಿದಾಗ ಯೂಟ್ಯೂಬ್ ವಿಡಿಯೊವೊಂದು ಸಿಕ್ಕಿದೆ. ಮಸೀದಿಯ ಪುನರ್‌ನಿರ್ಮಾಣದ ನಂತರ ಉದ್ಘಾಟನಾ ಕಾರ್ಯಕ್ರಮದ ವಿಡಿಯೊ ಇದಾಗಿದೆ.

ಈ ವಿಡಿಯೊದಲ್ಲಿ ಮೋದಿ ಮಸೀದಿಯ ಅಧ್ಯಕ್ಷ  ಮೌಲಾನಾ ಸಯೀದ್ ಅಲ್ತಾಫ್ ಅಹಮದ್ ಮಾತನಾಡಿದ್ದು, ಈ ಮಸೀದಿ 170 ವರ್ಷಗಳಷ್ಟು ಹಿಂದಿನದ್ದು ಎಂದಿದ್ದಾರೆ. ಶ್ರೀಮಂತ ದಾನಿಯಾದ ಮೋದಿ ಅಬ್ದುಲ್ ಗಫೂರ್ ಅವರ ಹೆಸರನ್ನು ಈ ಮಸೀದಿಗಿಡಲಾಗಿದೆ.

ಮೌಲಾನಾ ಮಾತು
ಬೆಂಗಳೂರಿನ ಮೋದಿ ಮಸೀದಿ170 ವರ್ಷ ಪುರಾತನವಾದುದು. ಹಜರತ್ ಮೋದಿ ಅಬ್ದುಲ್ ಗಫೂರ್ ಅವರು ಈ ಮಸೀದಿ ನಿರ್ಮಾಣಕ್ಕೆ ಕೊಡುಗೆ ನೀಡಿದ್ದರು. ಆ ಕಾಲದಲ್ಲಿ 60-70 ಜನರಿಗೆ ಮಾತ್ರ ಇಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶವಿತ್ತು. ಹಜರತ್ ಮೋದಿ ಅಬ್ದುಲ್ ಗಫೂರ್ ಅವರಿಗೆ ಮೋದಿ ಎಂಬ ಹೆಸರನ್ನು ಬ್ರಿಟಿಷರು ನೀಡಿದ್ದರು. ಇತ್ತೀಚೆಗಷ್ಟೇ ಈ ಮಸೀದಿಯ ಪುನರ್‌ನಿರ್ಮಾಣ ನಡೆದಿದೆ.

ಟ್ವೀಟ್‌ನಲ್ಲಿ ಮೋದಿ ಮಸೀದಿಯ ಒಳಗೆ ನರೇಂದ್ರ ಮೋದಿಯವರ ಫ್ಲೆಕ್ಸ್ ಇರುವ ಫೋಟೊವೊಂದಿತ್ತು. ಈ ಬಗ್ಗೆ ಬೂಮ್ ತಂಡ ಸರ್ಚ್ ಮಾಡಿದಾಗ ಅದು ಇಂದೋರ್‌ನಲ್ಲಿರುವ ಸೈಫೀ ನಗರ್ ಮಸೀದಿಯದ್ದಾಗಿದೆ.

ಮೊದಲ ಮಹಡಿಯಿಂದ ಕೆಳಗೆ ಹಾಲ್‌ನ ಗೋಡೆಯಲ್ಲಿ ಮೋದಿ ಚಿತ್ರವಿರುವ ಫ್ಲೆಕ್ಸ್ ತೂಗು ಹಾಕಿದನ್ನು ಟ್ವೀಟ್ ಚಿತ್ರದಲ್ಲಿ ಕಾಣಬಹುದು. ಈ ಚಿತ್ರದಲ್ಲಿರುವವರು ಪ್ರಧಾನಿ ನರೇಂದ್ರ ಮೋದಿ ಮತ್ತು ಸಯ್ಯೆದ್‌ನ,

ಸೈಫೀ ನಗರ್ ಮಸೀದಿಯ ಹಾಲ್‌ನಲ್ಲಿ ಹೀಗೊಂದು ಫ್ಲೆಕ್ಸ್ ಇದೆ ಎಂದು ದಾವೂದಿ ಬೋರಾ ಸಮುದಾಯದ ಸದಸ್ಯರು ದೃಢೀಕರಿಸಿದ್ದಾರೆ. 

ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ ನರೇಂದ್ರ ಮೋದಿಯವರು  ಇಸ್ಲಾಮಿಕ್ ಪ್ರಚಾರಕ ಡಾ. ಸಯ್ಯದ್‌ನ ಮುಫಾದಲ್ ಸೈಫುದ್ದೀನ್ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ಚಿತ್ರಗಳನ್ನು ಮೋದಿ ಟ್ವೀಟ್ ಮಾಡಿದ್ದರು.
 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು