ಗುರುವಾರ , ಸೆಪ್ಟೆಂಬರ್ 23, 2021
28 °C

ಮೊಬೈಲ್‌ನಲ್ಲಿ ಮಾತನಾಡುತ್ತಾ ಮಗು ಮರೆತ ಮಹಿಳೆ: ವೈರಲ್ ಆಗಿದ್ದು ಶೂಟಿಂಗ್ ದೃಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೊಬೈಲ್‌ನಲ್ಲಿಮಾತನಾಡುತ್ತಾ ರಸ್ತೆಯಲ್ಲಿ ಸಾಗುತ್ತಿರುವ ಮಹಿಳೆ. ಹಿಂದಿನಿಂದ ವ್ಯಕ್ತಿಯೊಬ್ಬರು ಮಗುವನ್ನು ಎತ್ತಿಕೊಂಡು ಮೇಡಂ, ದಯವಿಟ್ಟು ನಿಲ್ಲಿ. ಯಾರಾದರೂ ಆಕೆಯನ್ನು ಕರೆಯಿರಿ ಎಂದು ಕೂಗುತ್ತಾ ಬಂದು ಮಗುವನ್ನು ಆಕೆಯ ಕೈಗೆ ನೀಡುತ್ತಾರೆ. ಮೊಬೈಲ್‌ನಲ್ಲಿ ಮಾತನಾಡುತ್ತಾ ಮಗುವನ್ನೇ ಮರೆತ ಮಹಿಳೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 

ಜೀನ್ಯೂಸ್,  ನವ್‌ಭಾರತ್ ಟೈಮ್ಸ್, ಪತ್ರಿಕಾ ಮತ್ತು ಪಂಜಾಬ್ ಕೇಸರಿ ಸುದ್ದಿ ಸಂಸ್ಥೆಗಳು ಇದೇ ವಿಡಿಯೊವನ್ನು ಪ್ರಕಟಿಸಿದ್ದವು.

ಎಬಿಪಿ ನ್ಯೂಸ್ ತಮ್ಮ ವೈರಲ್ ಖಬರ್ ಎಂಬ ಕಾರ್ಯಕ್ರಮದಲ್ಲಿ ಈ ವಿಡಿಯೊ ಪ್ರಸಾರ ಮಾಡಿತ್ತು.

ABP News broadcasts a video shoot as a real event from Alt News on Vimeo.

ಅಮಿತ್ ಎಂಬ ಹೆಸರಿನ ನೆಟ್ಟಿಗರೊಬ್ಬರು ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟಿಸಿದ್ದಾರೆ ಎಂದು ಈ ಎಲ್ಲ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು. 

ಮೊಬೈಲ್‌‌ನಿಂದಾಗಿ ತನ್ನ ಮಗುವನ್ನೇ  ಮರೆತಳು (ಮೊಬೈಲ್ ಕೆ ಚಕ್ಕರ್ ಮೇ ಅಪ್ನಿ ಬಚ್ಚೇ ಕೋ ಹೀ ಬೂಲ್ ಗಯೀ)  ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. Sonepat Breaking News ಎಂಬ ಫೇಸ್‌ಬುಕ್ ಪುಟದಲ್ಲಿ ಈ ವಿಡಿಯೊ ಅಪ್‌ಲೋಡ್ ಆಗಿದ್ದು 1225 ಮಂದಿ ಈ ವಿಡಿಯೊವನ್ನು ಶೇರ್  ಮಾಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಮಾತ್ರ ಅಲ್ಲ ಟ್ವಿಟರ್ , ಯೂಟ್ಯೂಬ್‌ನಲ್ಲಿಯೂ ಇದೇ ವಿಡಿಯೊ ಹರಿದಾಡಿದೆ.

ಫ್ಯಾಕ್ಟ್‌ಚೆಕ್
ಈ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿಡಿಯೊದ ಅಸಲಿಯತ್ತು ತಿಳಿಯುತ್ತದೆ. ವಿಡಿಯೊದ 0:07  ನಿಮಿಷದಲ್ಲಿ ವ್ಯಕ್ತಿಯೊಬ್ಬರು ಮಗುವನ್ನು ಎತ್ತಿಕೊಂಡು ಬರುತ್ತಿರುವಾಗ  ಅಕ್ಕ ಪಕ್ಕ ಜನರ ಗುಂಪು  ಕಾಣಿಸುತ್ತದೆ. ಅಲ್ಲಿ ಏನು ನಡೆಯುತ್ತಿದೆ ಎಂದು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದು ಇದು ಶೂಟಿಂಗ್ ಎಂಬುದು ತಿಳಿಯುತ್ತದೆ. ಇದಕ್ಕೆ ಪೂರಕವೆಂಬಂತೆ ಟ್ವೀಟಿಗ ಆಸಿಫ್ ತೊಡಿಯಾ ಎಂಬವರು ಶೂಟಿಂಗ್‌ನ ಇನ್ನೊಂದು ದೃಶ್ಯವನ್ನು ಟ್ವೀಟಿಸಿದ್ದಾರೆ.

@Amit_smiling ಎಂಬವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಹೇತಲ್ ಓಜಾ ಎಂಬವರು ಇದು ಸಿನಿಮಾವೊಂದರ ಶೂಟಿಂಗ್. ವಿಡಿಯೊದಲ್ಲಿರುವ ವ್ಯಕ್ತಿ ನಟ. ಗುಜರಾತಿ ರಂಗಭೂಮಿಯಲ್ಲಿ ಖ್ಯಾತರಾಗಿರುವ ಇವರು ತಾರಕ್ ಮೆಹ್ತಾ ಕೀ ಉಲ್ಟಾ ಚಶ್ಮಾ ಎಂಬ ಧಾರವಾಹಿಯಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದರೆ ಎಂದಿದ್ದರು.

ಈ ಆಧಾರದ ಮೇಲೆ ಆಲ್ಟ್‌ನ್ಯೂಸ್ ಆ ನಟ ಯಾರು ಎಂದು ಹುಡುಕಿದಾಗ ಅವರ ಹೆಸರು ಶರದ್ ಶರ್ಮಾ ಎಂದು ತಿಳಿದು ಬಂದಿದೆ. ಇವರು ಗುಜರಾತಿ ಸಿನಿಮಾ ಮತ್ತು ಶೋಗಳಲ್ಲಿ ನಟಿಸಿದ್ದಾರೆ. ವಿಡಿಯೊ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವುದಕ್ಕಾಗಿ ಆಲ್ಟ್ ನ್ಯೂಸ್, ಶರ್ಮಾ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು-   ಆ ವಿಡಿಯೊ ಶೂಟಿಂಗ್‌ನದ್ದಾಗಿದೆ. ಕಳೆದ ಸೋಮವಾರ ನಾಸಿಕ್‌ನಲ್ಲಿ ಶೂಟಿಂಗ್ ನಡೆದಿದ್ದು ನಾನು ರಿಕ್ಷಾ ಚಾಲಕನ ಪಾತ್ರ ನಿರ್ವಹಿಸಿದ್ದೆ. ಶೂಟಿಂಗ್ ವೇಳೆ ಅಲ್ಲಿ ನಿಂತಿದ್ದ ಪ್ರೇಕ್ಷಕರೊಬ್ಬರು ಆ ದೃಶ್ಯವನ್ನು ರೆಕಾರ್ಡ್  ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ. ನಾನು ಶೂಟ್ ಮಾಡಿದ ದೃಶ್ಯಗಳು ಬಿಡುಗಡೆಯಾದಾಗ ಅದರಲ್ಲಿ ಈ ದೃಶ್ಯಾವಳಿಗಳನ್ನು ನೀವು ಕಾಣಬಹುದು ಎಂದಿದ್ದಾರೆ.

ಶೂಟಿಂಗ್ ವೀಕ್ಷಿಸಿದ್ದ ವ್ಯಕ್ತಿಯೊಬ್ಬರು ದೃಶ್ಯಗಳನ್ನು ರೆಕಾರ್ಡ್ ಮಾಡಿ ತಪ್ಪಾದ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿರುವುದು  ಇಲ್ಲಿ  ತಿಳಿಯುತ್ತದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು