ಶುಕ್ರವಾರ, ಸೆಪ್ಟೆಂಬರ್ 17, 2021
31 °C

ಮೋದಿಗೆ ಹೊಡೆಯುತ್ತೇನೆ ಎಂದು ಮಮತಾ ಹೇಳಲಿಲ್ಲ, ಹೇಳಿಕೆ ತಿರುಚಿದ್ದು ಮಾಧ್ಯಮಗಳು! 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ತೃಣಮೂಲ ಕಾಂಗ್ರೆಸ್ ಪಕ್ಷವನ್ನು ನರೇಂದ್ರ ಮೋದಿ ಟೋಲಾಬಾಜ್ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮೋದಿಗೆ ಕಪಾಳಮೋಕ್ಷ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಹಲವಾರು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.

ಲೋಕಸಭಾ ಚುನಾವಣೆಯ ಪ್ರಚಾರದ ನಡುವೆ ಆರೋಪ -ಪ್ರತ್ಯಾರೋಪಗಳಲ್ಲಿ ಇದೀಗ ಕಪಾಳಮೋಕ್ಷವೂ ಸ್ಥಾನ ಪಡೆದುಕೊಂಡಿದೆ.

ಕಳೆದ ಫೆಬ್ರುವರಿಯಲ್ಲಿ ಟಿಎಂಸಿ ವಿರುದ್ಧ ವಾಗ್ದಾಳಿ ಮಾಡಿದ್ದ  ಪ್ರಧಾನಿ ಟಿ ಎಂದರೆ ತೃಣಮೂಲ, ಟೋಲಾಬಾಜಿ ಮತ್ತು ಟ್ಯಾಕ್ಸ್ ಎಂದಿದ್ದರು. ಟೋಲಾಬಾಜಿ ಎಂದರೆ ಬಂಗಾಳಿಯಲ್ಲಿ ಸುಲಿಗೆ ಮಾಡುವವರು ಎಂಬ ಅರ್ಥವೂ ಇದೆ.

ಮೋದಿಯವರ ಈ ಹೇಳಿಕೆಗೆ 2019, ಮೇ.7ರಂದು ಪುರುಲಿಯದಲ್ಲಿ ನಡೆದ ರ‍್ಯಾಲಿಯಲ್ಲಿ ಮಮತಾ ಪ್ರತಿಕ್ರಿಯೆ ನೀಡಿದ್ದಾರೆ.

ಮಮತಾ ಹೇಳಿದ್ದೇನು?

ಹಣದ ಬಗ್ಗೆ ನನಗೆ ಸಮಸ್ಯೆ ಅಲ್ಲ, ಆದರೆ ನರೇಂದ್ರ ಮೋದಿ ಬಂಗಾಳಕ್ಕೆ ಬಂದು ಮಮತಾ ಬ್ಯಾನರ್ಜಿ ಅವರ ಪಕ್ಷ ಬರೀ ಸುಲಿಗೆ ಮಾಡುತ್ತದೆ ಎಂದಾಗ ಅವರಿಗೆ ಪ್ರಜಾಪ್ರಭುತ್ವದ ಹೊಡೆತ ನೀಡಬೇಕು ಎಂದು ನಾನು ಬಯಸುತ್ತೇನೆ. ಹೀಗೆ ಹೇಳುವಾಗ ಅವರು ಹೊಡೆಯುವ ರೀತಿಯಲ್ಲಿ ಬಲಗೈಯನ್ನೂ ಎತ್ತಿದ್ದರು.

ಪ್ರಜಾಪ್ರಭುತ್ವದ ಹೊಡೆತ ಎಂಬುದು ಬರೀ ಹೊಡೆತ ಎಂದು ಸುದ್ದಿಯಾದಾಗ...
ಪ್ರಮುಖ ಸುದ್ದಿವಾಹಿನಿಗಳಾದ ಎಬಿಪಿ ನ್ಯೂಸ್, ನ್ಯೂಸ್18 ಮತ್ತು ಆಜ್ ತಕ್ ಮಮತಾ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಸುದ್ದಿ ಮಾಡಿದ್ದವು.

ಸಾಮಾಜಿಕ ಮಾಧ್ಯಮಗಳಲ್ಲಿಯೂ ಮಮತಾ ಮೋದಿಗೆ ಹೊಡೆಯುವುದಾಗಿ ಹೇಳಿದ್ದಾರೆ ಎಂಬ ಪೋಸ್ಟ್‌ಗಳು ಹರಿದಾಡಿದ್ದವು.

ಫ್ಯಾಕ್ಟ್‌ಚೆಕ್
ಮೋದಿಗೆ ಹೊಡೆಯುತ್ತೇನೆ ಎಂದು ಮಮತಾ ಹೇಳಿದ್ದಾರೆಯೇ? ಎಂಬುದರ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್‌ಚೆಕ್ ಮಾಡಿದೆ.

ಮಮತಾ ಬ್ಯಾನರ್ಜಿ ಅವರ ಇಡೀ ಭಾಷಣ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಆಗಿದೆ. ಈ ಭಾಷಣದ ವಿಡಿಯೊದಲ್ಲಿ 13 ನಿಮಿಷದಿಂದ ನಂತರ 31 ಸೆಕೆಂಡ್‌ವರೆಗೆ ವೀಕ್ಷಿಸಿದರೆ ಅಲ್ಲಿ ಮಮತಾ ಈ ರೀತಿ ಹೇಳಿರುವುದು ಇದೆ .

ಇಲ್ಲಿ ಮೋದಿಗೆ ಹೊಡೆಯುತ್ತೇನೆ ಎಂದು ಮಮತಾ ಹೇಳಿಲ್ಲ. ಮೋದಿಗೆ ಪ್ರಜಾಪ್ರಭುತ್ವದ ಹೊಡೆತ ಬೀಳಬೇಕು ಎಂದು ನಾನು ಬಯಸುತ್ತೇನೆ ಎಂದಿದ್ದಾರೆ ಅವರು. 

ಆದಾಗ್ಯೂ, ಮಮತಾ ಮಾತಿನಲ್ಲಿ ಗಣತಂತ್ರ ಅಥವಾ ಪ್ರಜಾಪ್ರಭುತ್ವ ಎಂಬ ಪದವನ್ನು ಬಿಟ್ಟು ಹೇಳಿಕೆಯನ್ನು ವರದಿ ಮಾಡಿದ್ದ ಕೆಲವು ಸುದ್ದಿ ಮಾಧ್ಯಮಗಳು ಆಮೇಲೆ ಆ ಸುದ್ದಿಯನ್ನು ತಿದ್ದಿ ಸರಿಪಡಿಸಿಕೊಂಡಿವೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು