ಗುರುವಾರ , ಏಪ್ರಿಲ್ 2, 2020
19 °C

ಕೊರೊನಾ ಪೀಡಿತರ ಮೇಲೆ ಪೊಲೀಸ್ ಪ್ರಹಾರ ; ವಿಡಿಯೊ ಹಾಂಗ್‌ಕಾಂಗ್ ಪ್ರತಿಭಟನೆಯದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Fact check

ಬೆಂಗಳೂರು: 'ನಾವು ಕೊರೊನಾ ವೈರಸ್ ಬಗ್ಗೆ ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿ ಜೋಕ್ ಮಾಡುತ್ತಾ ಕುಳಿತಿದ್ದೇವೆ. ಆದರೆ ಅದೆಷ್ಟು ಭಯಾನಕವಾದುದು ಎಂಬುದಕ್ಕೆ  ಚೀನಾದ ಈ ವಿಡಿಯೊ ನೋಡಿ. ಒಂದು ಬಾರಿ ಮಾತ್ರವಲ್ಲ, ಗಮನವಿಟ್ಟು ಎರಡು ಮೂರು ಬಾರಿ ನೋಡಿ. ಈ ಸೋಂಕು ಪೀಡಿತ ಜನರನ್ನು ಸೆರೆ ಹಿಡಿಯಲು ಪೊಲೀಸರಿಗೆ ಅದೆಷ್ಟು ಕಷ್ಟವಾಗುತ್ತಿದೆ ಎಂದು ನೋಡಿ. ಈ ವಿಡಿಯೊ ನೋಡಿದರೆ ನಿಮ್ಮ ಮನಸ್ಸು ಕರಗುತ್ತದೆ ಎಂದು ಹಿಂದಿಯಲ್ಲಿ ಬರೆದಿರುವ ಬರಹದೊಂದಿಗೆ ಫೇಸ್‌ಬುಕ್ ಪುಟವೊಂದರಲ್ಲಿ ವಿಡಿಯೊ ಶೇರ್ ಆಗಿದೆ. ಇದೇ ವಿಡಿಯೊ ಕೆಲವು ದಿನಗಳಿಂದ ಫೇಸ್‌ಬುಕ್ಟ್ವಿಟರ್‌ನಲ್ಲಿಯೂ ಹರಿದಾಡುತ್ತಿದೆ.

ಫ್ಯಾಕ್ಟ್ ಚೆಕ್

ಇನ್‌ವಿಡ್ ಬಳಸಿ ಆಲ್ಟ್ ನ್ಯೂಸ್ ಈ ವಿಡಿಯೊದ ಹಲವಾರು ಫ್ರೇಮ್‌ಗಳನ್ನು ಸೆರೆ ಹಿಡಿದು ಫ್ಯಾಕ್ಟ್ ಚೆಕ್ ಮಾಡಿದೆ . ಈ ಫ್ರೇಮ್‌ಗಳನ್ನು ಗೂಗಲ್‌ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದೇ ರೀತಿಯ ಫ್ರೇಮ್‌ಗಳಿರುವ ವಿಡಿಯೊ ಸಿಕ್ಕಿದೆ. 2019 ಸೆಪ್ಟೆಂಬರ್ 1ರಂದು ಟ್ವೀಟ್ ಮಾಡಿದ ವಿಡಿಯೊ ಇದಾಗಿದೆ. ವಿಡಿಯೊದಲ್ಲಿ #HongKongProtestors ಎಂಬ ಹ್ಯಾಶ್‌ಟ್ಯಾಗ್ ಕೂಡಾ ಇದೆ.

ಈ ಕೀವರ್ಡ್‌ ಬಳಸಿ ಗೂಗಲ್‌ನಲ್ಲಿ ಹುಡುಕಾಟ ಮಾಡಿದಾಗ ಹಾಂಗ್‌ಕಾಂಗ್‌ ಪ್ರತಿಭಟನೆಯ ಹಲವಾರು ವಿಡಿಯೊಗಳು ಸಿಕ್ಕಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಪ್ರತಿಭಟನೆಯ ವಿಡಿಯೊ ಇದಾಗಿತ್ತು. ಹಾಂಗ್‌ಕಾಂಗ್‌ನ ಎಂಟಿಆರ್ ನೆಟ್‌ವರ್ಕ್‌ನಲ್ಲಿ  ಪೊಲೀಸರು  ರೈಲು ಪ್ರಯಾಣಿಕರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ ಎಂಬ ಶೀರ್ಷಿಕೆಯಲ್ಲಿ ಚೀನಾದ ಮಾಧ್ಯಮ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ 2019 ಸೆಪ್ಟೆಂಬರ್ 1ರಂದು ವಿಡಿಯೊ ಪೋಸ್ಟ್ ಮಾಡಿತ್ತು.

ಪೊಲೀಸ್  ತಂತ್ರ ಪಡೆಯ ರ‌್ಯಾಪ್ಟರ್ ಸಿಬ್ಬಂದಿಗಳು ರೈಲಿನೊಳಗೆ ನುಗ್ಗಿ ಹಾಂಗ್ ಕಾಂಗ್ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ಪ್ರಿನ್ಸ್ ಎಡ್ವರ್ಡ್ ಸ್ಟೇಷನ್‌ನಲ್ಲಿ ಅಮಾನವೀಯವಾಗಿ ಥಳಿಸುತ್ತಿರುವ ವಿಡಿಯೊ ಇದಾಗಿದೆ. ಪೊಲೀಸರ ಪ್ರಕಾರ ಹಾಂಗ್‌ಕಾಂಗ್‌ನ ರೈಲ್ವೆ ಮಾಸ್ ಟ್ರಾನ್ಸಿಟ್ ರೈಲ್ವೆಯ  ಅನುಮತಿ ಪಡೆದು ಒಳಗೆ ನುಗ್ಗಿದ್ದಾರೆ. ಪ್ರತಿಭಟನಕಾರರು ಟಿಕೆಟ್ ನೀಡುವ ಯಂತ್ರ ಮತ್ತು ಕಂಟ್ರೋಲ್ ರೂಂ  ಹಾಳುಗೆಡವಿದ್ದಕ್ಕೆ ಈ ರೀತಿ ಪ್ರಹಾರ ಮಾಡಲಾಗಿತ್ತು. 

ಏನಿದು ಪ್ರತಿಭಟನೆ?
2109 ಏಪ್ರಿಲ್‌ನಲ್ಲಿ  ಹಾಂಗ್ ಕಾಂಗ್ ಸರ್ಕಾರ ಆರೋಪಿಗಳ (ಗಡಿಪಾರು) ಹಸ್ತಾಂತರ ಮಸೂದೆ ಮಂಡಿಸಿತ್ತು. ಈ ಕಾಯ್ದೆ ಪ್ರಕಾರ ಸ್ಥಳೀಯ ಅಧಿಕಾರಿಗಳು ಅಪರಾಧ ಪ್ರಕರಣಗಳಲ್ಲಿ ಬಂಧಿತಾದವರನ್ನು  ವಿಚಾರಣೆಗಾಗಿ ಚೀನಾಕ್ಕೆ ಗಡಿಪಾರು ಮಾಡಬಹುದಾಗಿದೆ.  ಹಾಂಗ್‌ಕಾಂಗ್‌ನಲ್ಲಿ ಈ ಕಾಯ್ದೆ ಜಾರಿಯಾದರೆ ಚೀನಾದಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ. ಹಾಗಾಗಿ ಗಡಿಪಾರು ಮಸೂದೆ ವಿರುದ್ಧ ಜೂನ್ ತಿಂಗಳಲ್ಲಿ ಜನರು ಬೀದಿಗಳಿದು ಪ್ರತಿಭಟಿಸಿದ್ದರು. ಅಕ್ಟೋಬರ್ ತಿಂಗಳಲ್ಲಿ ಈ ಮಸೂದೆಯನ್ನು ವಾಪಸ್ ಪಡೆದಿದ್ದರೂ ಪೂರ್ಣ ಸ್ವಾಯತ್ತೆ ನೀಡಬೇಕು ಎಂದು ಒತ್ತಾಯಿಸಿ ಜನರು ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದರು.

ಅಂದಹಾಗೆ ವೈರಲ್ ಆಗಿರುವ  ಈ ವಿಡಿಯೊಗೂ ಕೊರೊನಾ ಸೋಂಕಿಗೂ ಯಾವುದೇ ಸಂಬಂಧ ಇಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು