ಬುಧವಾರ, ಜೂನ್ 3, 2020
27 °C

ಫ್ಯಾಕ್ಟ್‌ಚೆಕ್ | ಪಿಎಂ ಪರಿಹಾರ ನಿಧಿ ಬಳಸಲು ಕಾಂಗ್ರೆಸ್ ಅಧ್ಯಕ್ಷರ ಸಹಿ ಅಗತ್ಯವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ ನಿರ್ವಹಣಾ ಸಮಿತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರೂ ಇದ್ದಾರೆ. ಈ ನಿಧಿಯಲ್ಲಿರುವ ಹಣವನ್ನು ಮಂಜೂರು ಮಾಡಲು ಕಾಂಗ್ರೆಸ್‌ ಅಧ್ಯಕ್ಷರ ಸಹಿ ಪಡೆಯುವುದು ಅನಿವಾರ್ಯ. ಸದಾ ಕಾಂಗ್ರೆಸ್‌ ಅಧ್ಯಕ್ಷರ ಎದುರು ಸಹಿಗಾಗಿ ಗೋಗರೆಯುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಕಿಲ್ಲ. ಹೀಗಾಗಿ ಅವರು ಹೊಸದಾಗಿ ಪಿಎಂ ಕೇರ್ಸ್‌ ಎಂಬ ನಿಧಿ ಸ್ಥಾಪನೆ ಮಾಡಿದ್ದಾರೆ. ಈ ನಿಧಿಯನ್ನು ಬಳಸಲು ಅವರು ಕಾಂಗ್ರೆಸ್‌ನ ಈಗಿನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಹಿ ಪಡೆಯುವ ಅವಶ್ಯಕತೆಯಿಲ್ಲ. ಇದು ಪ್ರಧಾನಿ ಮೋದಿ ಅವರ ಅಸಾಧಾರಣ ಕ್ರಮ’ ಎಂಬ ಸುದ್ದಿ ಮತ್ತು ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಸಂಸತ್ತಿನಲ್ಲಿ ಕಾಂಗ್ರೆಸ್‌ ಸದಸ್ಯರ ಸಂಖ್ಯೆ ಎಷ್ಟೇ ಇದ್ದರೂ, ಕಾಂಗ್ರೆಸ್‌ನ ಅಧ್ಯಕ್ಷರು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ ನಿರ್ವಹಣಾ ಸಮಿತಿಯ ಸದಸ್ಯರಾಗಿರುತ್ತಾರೆ. ಕಾಂಗ್ರೆಸ್ ಅಧ್ಯಕ್ಷರು ಇಲ್ಲದ ನಿಧಿ ಇರಬೇಕು ಎಂಬ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕೇರ್ಸ್ ನಿಧಿ ಸ್ಥಾಪಿಸಿದರು’ ಎಂದು ಆರ್‌ಎಸ್‌ಎಸ್‌ ಮುಖವಾಣಿ ಆರ್ಗನೈಸರ್ ಏಪ್ರಿಲ್ 9ರಂದು ಲೇಖನ ಪ್ರಕಟಿಸಿದೆ. ಇದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಆಳ ಅಗಲ | ಒಂದು ಗುರಿ, ಎರಡು ನಿಧಿ!

ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ನಿರ್ವಹಣಾ ಸಮಿತಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷರು, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಒಕ್ಕೂಟ (ಎಫ್‌ಐಸಿಸಿಐ) ಮತ್ತು ಟಾಟಾ ಸಂಸ್ಥೆಯ ಪ್ರತಿನಿಧಿಗಳು ಸದಸ್ಯರಾಗಿದ್ದರು ನಿಜ. ಆದರೆ, ಹಣ ಮಂಜೂರು ಮಾಡಲು ಪ್ರಧಾನಿ ಅವರು ಕಾಂಗ್ರೆಸ್ ಅಧ್ಯಕ್ಷರ ಸಹಿ ಪಡೆಯಬೇಕಿಲ್ಲ. ಈ ನಿಧಿಯಲ್ಲಿರುವ ಹಣವನ್ನು ಪ್ರಧಾನಿ ಅವರ ಆದೇಶದ ಮೇರೆಗೆ ಮಾತ್ರ ಮಂಜೂರು ಮತ್ತು ಬಿಡುಗಡೆ ಮಾಡಲಾಗುತ್ತದೆ. 1948ರಲ್ಲಿ ಈ ನಿಧಿಯನ್ನು ಸ್ಥಾಪಿಸಿದಾಗ ಹಣ ಮಂಜೂರು ಮಾಡಲು ಎಲ್ಲಾ ಸದಸ್ಯರ ಸಹಿ ಪಡೆಯುವುದು ಅಗತ್ಯವಾಗಿತ್ತು. ಆದರೆ, 1985ರಲ್ಲಿ ಈ ಸಮಿತಿಯ ಸದಸ್ಯರ ಸಹಿ ಪಡೆಯಬೇಕು ಎಂಬ ಷರತ್ತನ್ನು ದೆಹಲಿ ಹೈಕೋರ್ಟ್‌ ವಜಾ ಮಾಡಿತು. ಅಂದಿನಿಂದ ಈ ನಿಧಿಯ ಬಳಕೆಗೆ ಆದೇಶ ನೀಡುವ, ನಿರ್ದೇಶನ ನೀಡುವ ಅಧಿಕಾರ ಪ್ರಧಾನಿಯದ್ದು ಮಾತ್ರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು