ಗುರುವಾರ , ಜೂನ್ 4, 2020
27 °C

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ರತನ್ ಟಾಟಾರ ಸ್ಫೂರ್ತಿ ಸಂದೇಶ ಫೇಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

factcheck

ಮುಂಬೈ: ಕೊರೊನಾ ಕಾರಣದಿಂದಾಗಿ ಆರ್ಥಿಕತೆ ಭಾರೀ ಕುಸಿತ ಕಾಣಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಈ ತಜ್ಞರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಮನುಷ್ಯನ ಸ್ಫೂರ್ತಿ ಮತ್ತು ದೃಢ ನಿಶ್ಚಯದ ಪ್ರಯತ್ನಗಳ ಮೌಲ್ಯದ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ ಎಂದು ನನಗೆ ಖಚಿತವಾಗಿ ತಿಳಿದಿದೆ. 2 ನೇ ಮಹಾಯುದ್ಧದ ಸಂಪೂರ್ಣ ವಿನಾಶದ ನಂತರ ಜಪಾನ್‌ಗೆ ಭವಿಷ್ಯವಿಲ್ಲ ಎಂದೂ ತಜ್ಞರು ಹೇಳಿದ್ದು ನೆನಪಿರಬಹುದು. ಆದರೆ ಅದೇ ಜಪಾನ್ ಕೇವಲ 3 ದಶಕಗಳಲ್ಲಿ ಅಥವಾ ಅದಕ್ಕಿಂತಲೂ ಹೆಚ್ಚು ಸಮಯದಲ್ಲಿ ಮಾರುಕಟ್ಟೆಯಲ್ಲಿ ಅಮೆರಿಕ ಅಂಗಲಾಚುವಂತೆ ಮಾಡಿತು. ಕೊರೊನಾ ಬಿಕ್ಕಟ್ಟು ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಅದರ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ. ನಾವು ಕೊರೊನಾವನ್ನು ಸೋಲಿಸುತ್ತೇವೆ ಮತ್ತು ಭಾರತದ ಆರ್ಥಿಕತೆ ಮತ್ತೆ ಪುಟಿದೇಳಲಿದೆ ಎಂದು  ಟಾಟಾ ಗ್ರೂಪ್‌ನ ಮುಖ್ಯಸ್ಥ  ರತನ್ ಟಾಟಾ ಹೇಳಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

2020 ಏಪ್ರಿಲ್ 11ರಂದು ಬಾಲಿವುಡ್ ನಟ ಅರ್ಷಾದ್ ವಾರ್ಸಿ ಈ ಸಂದೇಶವಿರುವ ಪೇಪರ್‌ ತುಣುಕೊಂದನ್ನು ಟ್ವೀಟಿಸಿದ್ದರು. ಬರೀ ಬೇಸರದ ಸುದ್ದಿಗಳ ನಡುವೆ ಇಂಥಾದೊಂದು ಪ್ರೇರಣಾತ್ಮಕ ಸಂದೇಶ ಸಿಕ್ಕಿತು. ರತನ್ ಟಾಟಾ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಿತು ಎಂದು ಅರ್ಷಾದ್ ಟ್ವೀಟ್ ಮಾಡಿದ್ದು, ಈ ಟ್ವೀಟ್ 1700ಕ್ಕಿಂತಲೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಟ್ವಿಟರ್‌ನಲ್ಲಿ ಮಾತ್ರವಲ್ಲ ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿಯೂ ಈ ಸಂದೇಶ ಈಗಲೂ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್
ಸಂದೇಶ ವೈರಲ್ ಆಗುತ್ತಿದ್ದಂತೆ ಟ್ವೀಟ್ ಮಾಡಿದ ರತನ್ ಟಾಟಾ, ನಾನು ಆ ರೀತಿಯ ಸಂದೇಶವನ್ನು ಪೋಸ್ಟ್ ಮಾಡಿಲ್ಲ. ಆ ರೀತಿ ಬರೆದಿಲ್ಲ. ವಾಟ್ಸ್ಆ್ಯಪ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಪೋಸ್ಟ್‌ಗಳು ನಿಜವೇ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಿ. ನನಗೇನಾದರೂ ಹೇಳುವುದಿದ್ದರೆ ಅದನ್ನು ನಾನು ಅಧಿಕೃತ ಖಾತೆಯಲ್ಲಿಯೇ ಹೇಳುತ್ತೇನೆ. ನೀವು ಸುರಕ್ಷಿತವಾಗಿದ್ದೀರಿ ಎಂದು ಭಾವಿಸುತ್ತೇನೆ, ಹುಷಾರಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.

ರತನ್ ಟಾಟಾ ಅವರೇ ಮುಂದೆ ಬಂದು ಸ್ಪಷ್ಟೀಕರಣ ನೀಡಿರುವುದರಿಂದ ವೈರಲ್ ಪೋಸ್ಟ್ ಸತ್ಯಕ್ಕೆ ದೂರವಾದುದು ಎಂದು ತಿಳಿಯುತ್ತದೆ. ಇಷ್ಟೇ ಅಲ್ಲದೆ ಯಾವುದೇ ವೈರಲ್ ಪೋಸ್ಟ್ ನಿಜವೋ ಸುಳ್ಳೋ ಎಂದು ಸ್ವತಃ ಪರೀಕ್ಷಿಸಿಕೊಳ್ಳುವುದಾದರೆ ಆ ಪೋಸ್ಟ್‌ನ್ನು ಗಮನವಿಟ್ಟು ಓದಿ. ಅದನ್ನು ಮತ್ತೊಬ್ಬರಿಗೆ ಫಾರ್ವರ್ಡ್ ಮಾಡುವ ಮುನ್ನ ಅಥವಾ ಶೇರ್ ಮಾಡುವ ಮುನ್ನ ಅದು ಎಲ್ಲಿಂದ ಬಂತು? ಎಲ್ಲಿ ಹೇಳಿದ್ದು?  ಯಾವಾಗ, ಎಲ್ಲಿ ಪೋಸ್ಟ್ ಮಾಡಲಾಗಿದೆ? ಎಂಬುದರ ಬಗ್ಗೆಯೂ ಪರೀಕ್ಷಿಸಿಕೊಳ್ಳಿ. ಈ ಪ್ರಶ್ನೆಗೆ ಉತ್ತರವಿಲ್ಲ ಎಂದಾದರೆ ಆ ಪೋಸ್ಟ್ ಫೇಕ್ ಎಂಬುದು ಬಹುತೇಕ ಖಚಿತ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು