ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್ ಚೆಕ್: ಉಕ್ರೇನ್ ಸುಂದರ ತಾಣಗಳೆಂದು ಬಿಂಬಿಸಿದ ವೈರಲ್ ವಿಡಿಯೊ ಚೀನಾದ್ದು

Last Updated 24 ಮಾರ್ಚ್ 2022, 10:11 IST
ಅಕ್ಷರ ಗಾತ್ರ

'ಉಕ್ರೇನ್‌ನ ಅತ್ಯಂತ ಸುಂದರ ತಾಣಗಳು' ಎಂಬ ತಲೆಬರಹದೊಂದಿಗೆ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಹಲವರು ಹಂಚಿಕೊಂಡಿದ್ದು, 'ತುಂಬಾ ಚೆನ್ನಾಗಿದೆ, ಯುದ್ಧದಿಂದಾಗಿ ಎಲ್ಲವೂ ಹಾಳಾಗುತ್ತಿದೆ' ಅಂತೆಲ್ಲ ಪ್ರತಿಕ್ರಿಯೆಗಳನ್ನೂ ಕೆಲವರು ಬರೆದಿದ್ದಾರೆ. ಇದರಲ್ಲಿ ಹಲವು ಸುಂದರ ದೃಶ್ಯಗಳಿದ್ದು, ಮನಸೂರೆಗೊಳ್ಳುವಂತಿದೆ.

ಈ ಕುರಿತು ಪ್ರಜಾವಾಣಿಯು ಫ್ಯಾಕ್ಟ್ ಚೆಕ್ ಮಾಡಿದಾಗ, ಇದು ಉಕ್ರೇನ್‌ನ ವಿಡಿಯೊ ಅಲ್ಲವೆಂಬುದು ದೃಢಪಟ್ಟಿದೆ. ಜೊತೆಗೆ ಇದು ಕನಿಷ್ಠ 8 ವಿಡಿಯೊ/ಫೊಟೊ ಕ್ಲಿಪ್‌ಗಳ ಸಂಚಯವಾಗಿದೆ ಮತ್ತು ಇವೆಲ್ಲವೂ ಚೀನಾದ ತಾಣಗಳ ಆಕರ್ಷಕ ದೃಶ್ಯಗಳು ಎಂಬುದು ಕೂಡ ಕಂಡುಬಂದಿದೆ.

ಫ್ಯಾಕ್ಟ್ ಚೆಕ್
ವೈರಲ್ ಆಗಿರುವ ವಿಡಿಯೊದ ಕೆಲವು ಚಿತ್ರಗಳನ್ನು ಸ್ಕ್ರೀನ್ ಶಾಟ್ ಮೂಲಕ ಪಡೆದುಕೊಂಡು ಹಾಗೂ ಇನ್‌ವಿಡ್ ಟೂಲ್ ಮೂಲಕ ಕೀಫ್ರೇಮ್‌ಗಳನ್ನು ಪಡೆದುಕೊಂಡು, ಗೂಗಲ್ ಹಾಗೂ ಯಾಂಡೆಕ್ಸ್ ಸರ್ಚ್ ತಾಣಗಳ ಮೂಲಕ ಹುಡುಕಲಾಯಿತು.

ಒಂದು ಕೀ ಫ್ರೇಮ್ ಅನ್ನು ರಷ್ಯನ್ ಸರ್ಚ್ ಎಂಜಿನ್ ಯಾಂಡೆಕ್ಸ್ ಮೂಲಕ ಹುಡುಕಿ, ರಷ್ಯನ್ ಭಾಷೆಯಲ್ಲಿದ್ದ ಮಾಹಿತಿಯನ್ನು ಭಾಷಾಂತರಿಸಿ ನೋಡಿದಾಗ, ಇದು ಉಕ್ರೇನ್‌ನದ್ದಲ್ಲ, ಬದಲಾಗಿ ಚೀನಾದ್ದು ಎಂದು ತಿಳಿಯಿತು. ಇದನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು ಹೊರಟಾಗ ಇತರ ಹಲವು ವೆಬ್ ತಾಣಗಳಲ್ಲಿ ಇದೇ ವಿಡಿಯೊ ಕ್ಲಿಪ್‌ಗಳು ಹಾಗೂ ಚಿತ್ರಗಳೂ ಕಂಡುಬಂದವು.

ಈ ದೃಶ್ಯವು ಉಕ್ರೇನ್‌ದ್ದಲ್ಲ ಎಂದು ದೃಢಪಟ್ಟ ಬಳಿಕ, ವಿಡಿಯೊದಲ್ಲಿರುವ ಇತರ ತಾಣಗಳ ಚಿತ್ರಗಳನ್ನು ಕೂಡ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿ ಮಾಹಿತಿ ಸಂಗ್ರಹಿಸಲಾಯಿತು. ಈ ವಿಡಿಯೊ ಹಲವು ವಿಡಿಯೊಗಳ ಕ್ಲಿಪ್ಪಿಂಗ್ ಸೇರಿಸಿ ರೂಪಿಸಿದ ವಿಡಿಯೊ ಆಗಿದ್ದು, ಉಕ್ರೇನ್‌ದ್ದಲ್ಲ, ಬದಲಾಗಿ ಚೀನಾದ ತಾಣಗಳಿವು ಎಂಬುದು ತಿಳಿಯಿತು.

ವಿಡಿಯೊದ ಆರಂಭದಲ್ಲಿ, ಗಾಜಿನ ಸೇತುವೆ ಮೇಲೆ ಕೆಲವು ಯುವತಿಯರು ನಿಂತಿದ್ದು, ಸುಂದರ ಮಾರ್ಗಗಳು ಹಾಗೂ ಬೆಟ್ಟಗಳನ್ನು ವೀಕ್ಷಿಸುವ ದೃಶ್ಯವಿದೆ. ಇದರ ಬಗ್ಗೆ ಪ್ರತ್ಯೇಕವಾಗಿ ಪರಿಶೀಲನೆ ನಡೆಸಿ, ಹುಡುಕಿದಾಗ ಇದು ಪ್ರೈಮ್‌ವಂಡರ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿದ್ದ ವಿಡಿಯೊದಿಂದ ತೆಗೆದದ್ದು ಎಂಬುದು ತಿಳಿಯಿತು. ಈ ಸುಂದರ ದೃಶ್ಯವು ಚೀನಾದ ಹುನಾನ್ ಪ್ರಾಂತ್ಯದಲ್ಲಿರುವ ಝಾಂಗ್‌ಜಿಯಾಜಿ ರಾಷ್ಟ್ರೀಯ ಅರಣ್ಯೋದ್ಯಾನದ ಟಿಯಾನ್ಮೆನ್ ಮೌಂಟೇನ್‌ಗೆ ಸಂಬಂಧಿಸಿದ್ದಾಗಿದೆ. ಪೂರ್ಣ ವಿಡಿಯೊ ಇಲ್ಲಿದೆ.

ಎರಡನೇ ದೃಶ್ಯದಲ್ಲಿ, ಆಕರ್ಷಕ ಜಲಪಾತವಿದೆ. ಇದರ ಕುರಿತು ಪ್ರಜಾವಾಣಿಯು ಸರ್ಚ್ ಮಾಡಿ ನೋಡಿದಾಗ, ಇದು ಚೀನಾದ ಲುವೋಜಿ ಹಿಲ್‌ನಲ್ಲಿರುವ ಜಲಪಾತವೆಂಬುದು ಗೊತ್ತಾಯಿತು. ಇದರ ಪೂರ್ಣ ವಿಡಿಯೊವನ್ನು ಚೀನಾದ ಪ್ರಮುಖ ಮಾಧ್ಯಮ ತಾಣ 'ಚೀನಾ ಡೈಲಿ'ಯ ಫೇಸ್‌ಬುಕ್ ಪುಟದಲ್ಲಿ ನೋಡಬಹುದು.

ಹೂವುಗಳಿಂದ ತುಂಬಿದ್ದ ಅತ್ಯಂತ ಸುಂದರ ಉದ್ಯಾನವು ಮೂರನೇ ದೃಶ್ಯದಲ್ಲಿದೆ. ಇದರ ಬಗ್ಗೆ ಪ್ರಜಾವಾಣಿ ಪರಿಶೀಲಿಸಿದಾಗ, 2019ರ ಡಿಸೆಂಬರ್ 11ರಂದು ನರ್ಸರಿಲೈವ್ ಎಂಬ ವೆರಿಫೈಡ್ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾದ ಪೂರ್ಣರೂಪದ ವಿಡಿಯೊ ದೊರೆಯಿತು. ಅದರ ಲಿಂಕ್ ಇಲ್ಲಿದೆ. ಅದರ ಅಡಿಬರಹದ ಮಾಹಿತಿಯ ಪ್ರಕಾರ, ಇದು ಟಿಬೆಟ್‌ನ ಪವಿತ್ರ ಪಗೋಡಾ ಉದ್ಯಾನದ ದೃಶ್ಯ. ಇಲ್ಲಿ ವಸಂತ ಕಾಲದಲ್ಲಿ ಅಜಿನಾಲ್ ಎಂಬ ಹೂವುಗಳು ಅರಳುತ್ತವೆ.

ವೈರಲ್ ವಿಡಿಯೊದ ನಾಲ್ಕನೇ ದೃಶ್ಯದಲ್ಲಿ, ದೊಡ್ಡ ಅಪಾರ್ಟ್‌ಮೆಂಟ್ ಕಟ್ಟಡದ ಮೇಲೆ ಸುಂದರವಾದ ಮರ ಗಿಡಗಳು ಕಾಣಸಿಗುತ್ತವೆ. ಚೀನಾದ ಮಾಧ್ಯಮ ಚೀನಾ ಪ್ಲಸ್ ಕಲ್ಚರ್ - ಇದರ ಫೇಸ್‌ಬುಕ್ ಪುಟದಲ್ಲಿ ಇದು 2021ರ ನವೆಂಬರ್ 24ರಂದು ಪ್ರಕಟವಾಗಿತ್ತು. ಅದರಲ್ಲಿರುವ ಮಾಹಿತಿಯ ಪ್ರಕಾರ, ಇದು ಚೀನಾದ ಸಿಚುವಾನ್ ಪ್ರಾಂತ್ಯದ ಚೆಂಗ್ಡು ನಗರದ ಸುಂದರ ದೃಶ್ಯ. ಈ ಬಗ್ಗೆ ಚೀನಾದ ಪ್ರಮುಖ ಮಾಧ್ಯಮ ಗ್ಲೋಬಲ್ ಟೈಮ್ಸ್ ತನ್ನ ಟ್ವಿಟರ್ ತಾಣದಲ್ಲಿ ಸಾಕಷ್ಟು ಚಿತ್ರಗಳನ್ನು ಹಂಚಿಕೊಂಡಿತ್ತು.

ಮುಂದಿನ ಭಾಗದಲ್ಲಿ, ದೊಡ್ಡ ಕಟ್ಟಡದಲ್ಲಿ ಎಲಿವೇಟರ್ ಸಾಗುವ ದೃಶ್ಯವಿದೆ. ಇದರ ಬಗ್ಗೆ ಹುಡುಕಿದಾಗ ಇದು ಚೀನಾದ ಝಾಂಗ್‌ಜಿಯಾಜಿ ಪಟ್ಟಣದ ವುಲಿಂಗ್‌ಯುವಾನ್ ಪ್ರದೇಶದ್ದು ಎಂಬುದು ತಿಳಿಯಿತು. 'ವಂಡರ್ ವರ್ಲ್ಡ್' ಯೂಟ್ಯೂಬ್ ಚಾನೆಲ್‌ನಲ್ಲಿ 2019ರ ಮೇ 17ರಂದು ಇದರ ವಿಡಿಯೊ ಪ್ರಕಟವಾಗಿತ್ತು.ಅದರಲ್ಲಿರುವ ಮಾಹಿತಿಯ ಅನುಸಾರ, ಇದು ಜಗತ್ತಿನಲ್ಲೇ ಅತಿ ಎತ್ತರದ ಹೊರಾಂಗಣ ಎಲಿವೇಟರ್ (ಲಿಫ್ಟ್).

ಆರನೇ ದೃಶ್ಯದಲ್ಲಿ ಸುಂದರ ವಾತಾವರಣದ ಗದ್ದೆಯಲ್ಲಿ ಕೆಲವರು ಭತ್ತ ಬೆಳೆಯುವ ನೋಟವಿದೆ. ಇದರ ಬಗ್ಗೆ ಪರಿಶೀಲಿಸಿದಾಗ ಇದು ಚೀನಾದ ಗುವಾಂಕ್ಸಿ ಪ್ರಾಂತ್ಯದ ಲಾಂಗ್‌ಜಿ ರೈಸ್ ಟೆರೇಸಸ್ ಎಂಬಲ್ಲಿನ ವಿಡಿಯೊ ಎಂಬುದು ದೃಢಪಟ್ಟಿತು. 2017ರ ಆಗಸ್ಟ್ 25ರಂದು ಇದರ ಬಗೆಗಿನ ವಿಡಿಯೊ ವೋಟೋಸೆಕ್ ಆರ್ಟ್ ಕಂಪನಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾಗಿತ್ತು.

ವೈರಲ್ ವಿಡಿಯೊದ ಏಳನೇ ದೃಶ್ಯವು ಕಲ್ಲುಬೆಟ್ಟಗಳಿಂದ ಕೂಡಿದ ಪರ್ವತ ಪ್ರದೇಶದ್ದು. ಇದು ಕೂಡ ಚೀನಾದ ಹುನಾನ್ ಪ್ರಾಂತ್ಯದ ವುಲಿಂಗ್‌ಯುವಾನ್‌ನ ವೂಲಿಂಗ್ ಪರ್ವತದ್ದು. ಈ ಕುರಿತು ಹುಡುಕಾಟ ನಡೆಸಿದಾಗ ಅಮೇಜಿಂಗ್ ಪ್ಲೇಸಸ್ ಆಫ್ ಅವರ್ ಪ್ಲಾನೆಟ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ 2018ರ ಜೂ.22ರಂದು ಪ್ರಕಟವಾದ ವಿಡಿಯೊ ದೊರೆಯಿತು.

ಕೊನೆಯ ದೃಶ್ಯದಲ್ಲಿ, ಎರಡು ಎತ್ತರದ ಪರ್ವತಗಳ ನಡುವೆ ಒಂದು ಪುಟ್ಟ ಸುರಂಗ ಮಾರ್ಗವು ಕಾಣಿಸುತ್ತದೆ. ಈ ವಿಡಿಯೊ ಭಾಗವನ್ನು ಪರಿಶೀಲನೆಗೊಳಪಡಿಸಿದಾಗ, ಇದು ಕೂಡ ಉಕ್ರೇನ್‌ದಲ್ಲ, ಬದಲಾಗಿ ಚೀನಾದ ಗುವೊಲಿಂಗ್ ಸುರಂಗದ ದೃಶ್ಯ ಎಂಬುದು ಖಚಿತವಾಯಿತು. ಈ ಸುರಂಗ ಮಾರ್ಗವು ಹ್ವಿಕ್ಸಿಯನ್, ಶಿಂಜಿಯಾಂಗ್, ಹೆನಾನ್ ಪ್ರಾಂತ್ಯಗಳನ್ನು ಬೆಸೆಯುತ್ತದೆ. ಶಾಕ್ ವೇವ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ 2017ರ ಡಿಸೆಂಬರ್ 22ರಂದು ಪ್ರಕಟವಾದ ವಿಡಿಯೊದಲ್ಲಿ ಇದರ ಮಾಹಿತಿ ಇದೆ.

ನಿರ್ಣಯ
ಇದನ್ನೆಲ್ಲ ಪರಿಶೀಲಿಸಿದಾಗ, ವೈರಲ್ ವಿಡಿಯೊಗೂ ಉಕ್ರೇನ್‌ಗೂ ಸಂಬಂಧವಿಲ್ಲ ಎಂಬುದು ಖಚಿತವಾಯಿತು. ಒಟ್ಟಿನಲ್ಲಿ ವೈರಲ್ ಆಗಿರುವ ವಿಡಿಯೊ ಉಕ್ರೇನ್‌ನ ಸುಂದರ ತಾಣಗಳಲ್ಲ, ಬದಲಾಗಿ ಇವೆಲ್ಲವೂ ಚೀನಾ ಮತ್ತು ಟಿಬೆಟ್ ಭಾಗದ ಕೆಲವು ಸುಂದರ ಪ್ರದೇಶಗಳ ವಿಡಿಯೊ.

ರೇಟಿಂಗ್: ವೈರಲ್ ಆಗಿರುವ ವಿಡಿಯೊ ದಾರಿ ತಪ್ಪಿಸುವ ಮಾಹಿತಿಯಿಂದ ಕೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT