ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್ |ಭಾರತದಲ್ಲಿರುವ ಅಮೆರಿಕನ್ನರು ಸ್ವದೇಶಕ್ಕೆ ಹಿಂದಿರುಗಲು ನಿರಾಕರಣೆ

Last Updated 18 ಏಪ್ರಿಲ್ 2020, 1:15 IST
ಅಕ್ಷರ ಗಾತ್ರ

ತಪ್ಪು:‘ಭಾರತದಲ್ಲಿರುವ 800ಕ್ಕೂ ಹೆಚ್ಚು ಅಮೆರಿಕನ್ನರು, ಸ್ವದೇಶಕ್ಕೆ ಹಿಂದಿರುಗಲು ನಿರಾಕರಿಸಿದ್ದಾರೆ. ಅವರನ್ನು ಕರೆದೊಯ್ಯಲು ಬಂದಿದ್ದ ವಿಮಾನ, ವಾಪಸ್ ಹೋಗಿದೆ. 800 ಜನರಲ್ಲಿ ಹತ್ತು ಜನ ಮಾತ್ರ ಅಮೆರಿಕಕ್ಕೆ ಹೋಗಲು ಆಸಕ್ತಿ ವ್ಯಕ್ತಪಡಿಸಿದ್ದರು. ಉಳಿದವರು ಭಾರತದಲ್ಲೇ ಇರಲು ಇಚ್ಛಿಸಿದ್ದಾರೆ. ಡೊನಾಲ್ಡ್ ಟ್ರಂಪ್‌ ಆಡಳಿತದ ಅಮೆರಿಕದಲ್ಲಿ ಕೊರೊನಾವೈರಸ್ ಪರಿಸ್ಥಿತಿ ಬಿಗಡಾಯಿಸಿದೆ. ಆದರೆ, ನರೇಂದ್ರ ಮೋದಿ ಅವರ ಆಡಳಿತದ ಭಾರತದಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಹೀಗಾಗಿ, ಅಮೆರಿಕನ್ನರು ಮೋದಿಯವರ ಸುರಕ್ಷಿತ ಕೈಗಳ ಅಡಿ ಇರಲು ಬಯಸಿದ್ದಾರೆ’. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಈ ಸುದ್ದಿ ವೈರಲ್ ಆಗಿದೆ. ಈ ಸುದ್ದಿ ಕುರಿತ ಮೀಮ್‌ಗಳೂ ವೈರಲ್ ಆಗಿವೆ.

ಆದರೆ ಇದು ಸುಳ್ಳು ಸುದ್ದಿ. ಅಮೆರಿಕವಾಗಲೀ ಭಾರತವಾಗಲೀ ಈ ಸಂಬಂಧ ಅಧಿಕೃತವಾಗಿ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಈ ಸುದ್ದಿಯನ್ನು ಟಿಎಫ್ಐ ಪೋಸ್ಟ್‌ ಎಂಬ ಜಾಲತಾಣದಲ್ಲಿ ವರದಿ ಮಾಡಲಾಗಿದೆ. ಈ ಜಾಲತಾಣದಲ್ಲಿ 20ಕ್ಕೂ ಹೆಚ್ಚು ಸುಳ್ಳು ಸುದ್ದಿಗಳಿವೆ. ಈ ಎಲ್ಲಾ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಅವೆಲ್ಲವೂ ವೈರಲ್ ಆಗಿವೆ. ಇವುಗಳಲ್ಲಿ ಹಲವನ್ನು ಪಿಐಬಿ ಸಹ ಪರಿಶೀಲಿಸಿ, ಇವು ಸುಳ್ಳು ಸುದ್ದಿಗಳು ಎಂದು ಘೋಷಿಸಿದೆ.

***

ತಪ್ಪು:‘ಕೊರೊನಾವೈರಸ್ ಗಾಳಿಯ ಮೂಲಕವೂ ಹರಡುತ್ತದೆ ಎಂಬುದು ದೃಢಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸಬೇಕು’ ಎಂದು ಸಿಎನ್‌ಬಿಸಿ ವರದಿ ಮಾಡಿದೆ. ಆದ್ದರಿಂದ ಎಲ್ಲರೂ ಮಾಸ್ಕ್ ಧರಿಸಿ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಎನ್‌ಬಿಸಿ ಸುದ್ದಿತಾಣದ ಸ್ಕ್ರೀನ್‌ಶಾಟ್‌ ಸಹ ವೈರಲ್ ಆಗಿದೆ.

ಇದು ಸುಳ್ಳು ಸುದ್ದಿ. ‘ಕೊರೊನಾವೈರಸ್ ಗಾಳಿಯಿಂದ ಹರಡುವುದಿಲ್ಲ. ಸೋಂಕು ತಗುಲಿರುವ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ, ಆ ವ್ಯಕ್ತಿಯ ಬಾಯಿ/ಮೂಗಿನಿಂದ ಹೊರಕ್ಕೆ ಹಾರುವ ಕಣಗಳಿಂದ ಸೋಂಕು ಹರಡುತ್ತದೆ. ಈ ಕಣಗಳು ಹೆಚ್ಚು ಭಾರ ಇರುವ ಕಾರಣ, ಗಾಳಿಯಲ್ಲಿ ತೇಲುವುದಿಲ್ಲ. ಬದಲಿಗೆ ಕೆಳಗೆ ಬೀಳುತ್ತವೆ. ಇಲ್ಲವೇ ಹತ್ತಿರದ ವಸ್ತುಗಳ ಮೇಲೆ ಬೀಳುತ್ತವೆ. ಸೋಂಕಿತ ವ್ಯಕ್ತಿಗೆ ಒಂದು ಮೀಟರ್‌ಗಿಂತಲೂ ಹತ್ತಿರ ಇರುವ ವ್ಯಕ್ತಿಗೆ ಈ ಕಣಗಳು ತಗಲುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ ಅಂತರ ಕಾಯ್ದುಕೊಳ್ಳುವಿಕೆಯನ್ನು ಪಾಲಿಸಬೇಕು’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

‘ರೋಗಿಗಳನ್ನು ಉಪಚರಿಸುವ ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗಲುವ ಅಪಾಯವಿರುತ್ತದೆ. ಹೀಗಾಗಿ ಅವರು ಸುರಕ್ಷಾ ಕಿಟ್ ಧರಿಸಿರಬೇಕು ಎಂದು ಡಬ್ಲ್ಯುಎಚ್‌ಒ ಹೇಳಿದೆ’ ಎಂದು ಸಿಎನ್‌ಬಿಸಿ ವರದಿ ಮಾಡಿದೆ. ಈ ಸುದ್ದಿಯ ಸ್ಕ್ರೀನ್‌ಶಾಟ್‌ ತೆಗೆದು, ಅದನ್ನು ತಿರುಚಲಾಗಿದೆ. ನಂತರ ವೈರಲ್ ಮಾಡಲಾಗಿದೆ. ಆದರೆ, ಸರ್ಕಾರದ ಮಾರ್ಗಸೂಚಿ ಪ್ರಕಾರ, ಮನೆಯಿಂದ ಹೊರಹೋಗುವಾಗ ಮಾಸ್ಕ್‌ ಧರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT