ಬುಧವಾರ, ಆಗಸ್ಟ್ 12, 2020
21 °C
ಐಐಎಚ್‌ಆರ್‌ನ ಹೊಸ ಮೌಲ್ಯವರ್ಧಿತ ಉತ್ಪನ್ನಗಳು

ಹಾಗಲ ರಸ, ಬೆಣ್ಣೆ ಹಣ್ಣಿನ ಚಟ್ನಿ

ಆತ್ರೇಯ Updated:

ಅಕ್ಷರ ಗಾತ್ರ : | |

prajavani

ಹಾಗಲಕಾಯಿ ಎಂದರೆ ‘ಅದರಕ್ಕೆ ಕಹಿ, ಉದರಕ್ಕೆ ಸಿಹಿ’ ಎಂಬ ಮಾತಿದೆ. ಆದರೆ, ಈ ತರಕಾರಿ ರುಚಿಯಲ್ಲಿ ಕಹಿಯಾದರೂ, ಪೌಷ್ಟಿಕಾಂಶದ ವಿಚಾರದಲ್ಲಿ ಬಹಳ ಶ್ರೀಮಂತವಾಗಿದೆ. ಅದೇ ರೀತಿ ಬೆಣ್ಣೆಹಣ್ಣಿನಲ್ಲಿ ಕಡಿಮೆ ಸಕ್ಕರೆ ಅಂಶ ಮತ್ತು ಉತ್ತಮ ಕೊಬ್ಬಿನ ಅಂಶವಿದೆ. ಇದೇ ಕಾರಣಕ್ಕೆ ಈ ಹಣ್ಣಿನ ಜ್ಯೂಸ್ ಮತ್ತು ಸ್ಕ್ವಾಷ್‌ಗಳು ಬಹಳ ಜನಪ್ರಿಯವಾಗಿವೆ.

ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ(ಐಐಎಚ್‌ಆರ್‌) ವಿಜ್ಞಾನಿಗಳಾದ ಡಾ.ಐ.ಎನ್. ದೊರೆಯಪ್ಪ ಗೌಡ, ಡಾ.ರಂಜಿತಾ ಕೆ. ಮತ್ತು ಅವರ ಸಹದ್ಯೋಗಿಗಳು ಹಾಗಲಕಾಯಿಯಿಂದ ಸಿದ್ಧರೂಪದ ‘ಹಾಗಲರಸ’(ಅರ್ಕಾ ಹಾಗಲರಸ) ಹಾಗೂ ಬೆಣ್ಣೆಹಣ್ಣಿನಿಂದ ಚಟ್ನಿ(ಅರ್ಕಾ ಅವಕಾಡೊ ಚಟ್ನಿ) ಮತ್ತು ಫ್ರೂಟ್‌ ಸ್ಪ್ರೆಡ್‌ (ಅರ್ಕಾ ಬೆಣ್ಣೆಹಣ್ಣಿನ ಜಾಮ್‌‌‌) ತಯಾರಿಸಿದ್ದಾರೆ. ಈ ಹೊಸ ಉತ್ಪನ್ನಗಳು ಮತ್ತು ಅವುಗಳ ಮೌಲ್ಯವರ್ಧನೆಗಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಇತ್ತೀಚೆಗೆ ಐಐಎಚ್‌ಆರ್‌ ಆವರಣದಲ್ಲಿ ವಿಜ್ಞಾನಿಗಳು ಬಿಡುಗಡೆ ಮಾಡಿದರು.

ಅರ್ಕಾ ಹಾಗಲ ರಸ

ಸಾಮಾನ್ಯವಾಗಿ ಹಾಗಲಕಾಯಿಯಿಂದ ರಸ ತೆಗೆದು ಹಾಗೆ ಕುಡಿಯುವುದು ವಾಡಿಕೆ. ಈ ರಸ ತುಂಬಾ ಕಹಿಯಾಗಿರುತ್ತದೆ. ಆದರೆ, ಐಐಎಚ್‌ಆರ್ ಅಭಿವೃದ್ಧಿಪಡಿಸಿರುವ ಸಿದ್ಧರೂಪದ ‘ಅರ್ಕಾ ಹಾಗಲ ರಸ’ದಲ್ಲಿ ಕಹಿ ಪ್ರಮಾಣ ಕಡಿಮೆ. ಈ ಪಾನೀಯದಲ್ಲಿ ಹಾಗಲಕಾಯಿ ರಸದ ಜತೆಗೆ ಸೋರೆಕಾಯಿ, ನಿಂಬೆಹಣ್ಣಿನ ರಸವನ್ನೂ ಸೇರಿಸಲಾಗಿದೆ. ‘ಹಾಗಾಗಿ ಈ ಜ್ಯೂಸ್‌ ರುಚಿಯೂ ಉತ್ತಮವಾಗಿದ್ದು, ಕಹಿಯ ಪ್ರಮಾಣವೂ ಕಡಿಮೆ ಇರುತ್ತದೆ’ ಎನ್ನುತ್ತಾರೆ ವಿಜ್ಞಾನಿ ದೊರೆಯಪ್ಪಗೌಡ.

ಈ ಹಾಗಲರಸದಲ್ಲಿ ಹಾಗಲಕಾಯಿಯ ಎಲ್ಲ ಗುಣಗಳೂ ಇವೆ. ಜ್ಯೂಸ್‌ಗೆ ಯಾವುದೇ ರಾಸಾಯನಿಕ ಪ್ರಿಸರ್ವೇಟಿವ್ ಬಳಸಿಲ್ಲ. ಒಮ್ಮೆ ತಯಾರಿಸಿದ ಈ ಜ್ಯೂಸ್ ಅನ್ನು ಸಾಮಾನ್ಯ ವಾತಾವರಣದಲ್ಲಿ ಆರರಿಂದ ಎಂಟು ತಿಂಗಳು ಕಾಪಿಡಬಹುದು. ಫ್ರಿಜ್‌ನಲ್ಲಿಟ್ಟು ಬಳಸುವುದಾದರೆ ಒಂದು ವರ್ಷವರೆಗೂ ಇಡಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಬೆಣ್ಣೆಹಣ್ಣಿನ ಚಟ್ನಿ, ಫ್ರೂಟ್‌ ಸ್ಪ್ರೆಡ್‌ 

ಬೆಣ್ಣೆಹಣ್ಣು (ಆವಕಾಡೊ ಫ್ರೂಟ್) ಉತ್ತಮ ಕೊಬ್ಬು ಮತ್ತು ಹಲವಾರು ಪೋಷಕಾಂಶಗಳಿಂದ ಸಮೃದ್ಧವಾದ ರುಚಿಕರ ಹಣ್ಣು. ಇತ್ತೀಚಿನ ದಿನಗಳಲ್ಲಿ ಈ ಹಣ್ಣಿನ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚುತ್ತಿದೆ. ಅನೇಕ ರೈತರು ಈ ಹಣ್ಣಿನ ಬೆಳೆ ಬೆಳೆಯುತ್ತಿದ್ದಾರೆ. ಈ ಹಣ್ಣನ್ನು ನೇರವಾಗಿ ಮಾರಾಟ ಮಾಡುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ಮೌಲ್ಯವರ್ಧಿಸಿ ಉತ್ಪನ್ನಗಳಾಗಿ ತಯಾರಿಸಿದರೆ, ವರ್ಷಪೂರ್ತಿ ಬೆಣ್ಣೆಹಣ್ಣಿನ ರುಚಿ ಮತ್ತು ಪೋಷಕಾಂಶಗಳನ್ನು ಗ್ರಾಹಕರಿಗೆ ಉಣಿಸಬಹುದು. ಇದರಿಂದ ಹಣ್ಣು ಬೆಳೆಗಾರರಿಗೂ  ಅನುಕೂಲವಾಗುತ್ತದೆ. ಇದನ್ನು ಮನಗಂಡ ಐಐಎಚ್‌ಆರ್ ವಿಜ್ಞಾನಿಗಳು ಬೆಣ್ಣೆಹಣ್ಣನ್ನು ಮೌಲ್ಯವರ್ಧಿಸಿ ಚಟ್ನಿ ಮತ್ತು ಫ್ರೂಟ್‌ ಸ್ಪ್ರೆಡ್‌ ತಯಾರಿಸಿದ್ದಾರೆ. 

ಬೆಣ್ಣೆಹಣ್ಣಿನ ಪಲ್ಪ್‌ (ತಿರುಳು) ಜತೆಗೆ, ಅಡುಗೆ ಎಣ್ಣೆ, ಬೆಳ್ಳುಳ್ಳಿ–ಶುಂಠಿ ಪೇಸ್ಟ್‌, ರುಚಿಗೆ ತಕ್ಕ ಉಪ್ಪು ಹಾಕಿ ಚಟ್ನಿ ತಯಾರಿಸಿದ್ದಾರೆ. ಈ ಹಣ್ಣಿನ ತಿರುಳಿಗೆ, ಸಕ್ಕರೆ, ಪೆಕ್ಟಿನ್ ಎಂಬ ಪೌಡರ್‌ ಸೇರಿಸಿ ಫ್ರೂಟ್‌ ಸ್ಪ್ರೆಡ್ (ಜಾಮ್‌) ತಯಾರಿಸಿದ್ದಾರೆ. ಎರಡು ಕೆಜಿ ಬೆಣ್ಣೆ ಹಣ್ಣಿನಿಂದ ಒಂದು ಕೆ.ಜಿಯಷ್ಟು ಪಲ್ಪ್ ಸಿಗುತ್ತದೆ. ‘ಈ ಹಣ್ಣಿನಲ್ಲಿ ಸಕ್ಕರೆ ಅಂಶ ಕಡಿಮೆ. ಆದರೆ ಆರೋಗ್ಯಕರ ಕೊಬ್ಬು(ಗುಡ್‌ ಫ್ಯಾಟ್‌) ಇರುತ್ತದೆ. ಹೆಚ್ಚು ವಿಟಮಿನ್ ಮತ್ತು ಖನಿಜಾಂಶಗಳಿರುತ್ತವೆ. ಹೀಗಾಗಿ ಈ ಜಾಮ್ ಮತ್ತು ಚಟ್ನಿ ಮಧುಮೇಹಿ ಮತ್ತು ರಕ್ತದ ಒತ್ತಡದಿಂದ ಬಳಲುತ್ತಿರುವವರು ಉಪಯೋಗಿಸಲು ಶಿಫಾರಸು ಮಾಡಲಾಗುತ್ತದೆ. ಈ ಎರಡೂ ಉತ್ಪನ್ನಗಳಿಗೆ ಯಾವುದೇ ರಾಸಾಯನಿಕ ಪ್ರಿಸರ್ವೇಟಿವ್ ಬಳಸಿಲ್ಲ. ಜತೆಗೆ, ಆರರಿಂದ ಎಂಟು ತಿಂಗಳವರೆಗೆ ಕೆಡದಂತೆ ಕಾಪಿಟ್ಟು ಬಳಸಬಹುದು’ ಎನ್ನುವುದು ದೊರೆಯಪ್ಪಗೌಡ ಅಭಿಪ್ರಾಯ.

ತಂತ್ರಜ್ಞಾನದ ನೆರವು

ಹಾಗಲರಸ ಮತ್ತು ಬೆಣ್ಣೆಹಣ್ಣಿನ ಚಟ್ನಿ ಮತ್ತು ಫ್ರೂಟ್‌ ಸ್ಪ್ರೆಡ್‌(ಜಾಮ್‌) ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರು ಮಾಡಿ ಮಾರಾಟ ಮಾಡಬಹುದು. ಈ ಉತ್ಪನ್ನಗಳನ್ನು ತಯಾರಿಸಲು ದೊಡ್ಡ ಪ್ರಮಾಣದ ಅತ್ಯಾಧುನಿಕ ಯಂತ್ರಗಳೂ ಬೇಕಿಲ್ಲ. ಸಂಸ್ಕರಣಾ ಘಟಕಗಳ ಅವಶ್ಯಕತೆಯೂ ಇಲ್ಲ. ಆದ್ದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳಿಗೆ ಹಾಗೂ ನವೋದ್ಯಮಿಗಳು ಈ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಬಹುದು. 

‘ಈ ಮೂರು ಉತ್ಪನ್ನಗಳನ್ನು ತಯಾರಿಸಲು ಇಚ್ಛಿಸುವ ಉದ್ಯಮಿಗಳಿಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ತಂತ್ರಜ್ಞಾನದ ನೆರವನ್ನು ನೀಡಲು ಸಿದ್ಧವಿದೆ. ಮಾತ್ರವಲ್ಲ, ಉತ್ಪನ್ನಗಳ ತಯಾರಿಸಲು ತರಬೇತಿ, ಉದ್ಯಮ ರೂಪಿಸಿಕೊಳ್ಳಲು ಬೇಕಾದ ಸಲಹೆ ಮತ್ತು ಪರವಾನಗಿಯನ್ನೂ ನೀಡುತ್ತದೆ’ ಎನ್ನುತ್ತಾರೆ ಐಐಎಚ್‌ಆರ್ ನಿರ್ದೇಶಕ ಎಂ.ಆರ್. ದಿನೇಶ್.

ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಐಐಎಚ್‌ಆರ್, ಹೆಸರಘಟ್ಟ, ಬೆಂಗಳೂರು–560089, ದೂ: 080-28466471,28466353 – ಈ ವಿಳಾಸ ಮತ್ತು ದೂರವಾಣಿಯನ್ನು ಸಂಪರ್ಕಿಸಬಹುದು. ಇ–ಮೇಲ್‌ director.iihr@icar.gov.in

(ಪೂರಕ ಮಾಹಿತಿ: ಡಾ. ರಘು ಬಿ.ಆರ್, ನೋಡಲ್ ಅಧಿಕಾರಿ, ತಳಿ ಮತ್ತು ತಂತ್ರಜ್ಞಾನಗಳ ಮಾನ್ಯತಾ ಸಮಿತಿ, ಐಸಿಎಆರ್‌–ಐಐಎಚ್‌ಆರ್‌, ಬೆಂಗಳೂರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು