ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಹಳ್ಳಿ ‘ಫಿಶ್‌ ತವಾ ಫ್ರೈ’ ರುಚಿ ನೋಡಿದ್ದೀರಾ?

ಬೆಂಗಳೂರು, ಮೈಸೂರಿನಿಂದ ಬರುವ ಗ್ರಾಹಕರು, ತಾಜಾ ಮೀನೂಟಕ್ಕೆ ಹೆಸರುವಾಸಿ ಹಳ್ಳಿ
Last Updated 6 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ಎಲ್ಲಾ ಊರುಗಳಲ್ಲೂ ಮೀನು ಊಟ ದೊರೆಯುತ್ತದೆ, ಮೀನಿನ ಥರಾವರಿ ತಿನಿಸುಗಳು ಸಿಗುತ್ತವೆ. ಆದರೆ ಮದ್ದೂರು ತಾಲ್ಲೂಕು, ದೇಶಗಳ್ಳಿ ಗ್ರಾಮದ ಮೀನೂಟ ಅಂದರೆ ಎಲ್ಲರ ಬಾಯಲ್ಲೂ ನೀರು ಜಿನುಗುತ್ತದೆ. ಅದರಲ್ಲೂ ‘ಫಿಶ್‌ ತವಾ ಫ್ರೈ’ ಸವಿಯಲು ಜನ ದೇಶಹಳ್ಳಿಯನ್ನೇ ಹುಡುಕಿಕೊಂಡು ಬರುತ್ತಾರೆ.

ದೇಶಹಳ್ಳಿ ಗ್ರಾಮದ ಪ್ರಮುಖ ಬೀದಿಯಲ್ಲಿ ಎಂಟತ್ತು ಫಿಶ್‌ಲ್ಯಾಂಡ್‌ಗಳಿವೆ. ಮೈಸೂರು, ಬೆಂಗಳೂರು, ರಾಮನಗರ, ತುಮಕೂರು ಜನ ಕೂಡ ದೇಶಹಳ್ಳಿ ಮೀನೂಟದ ರುಚಿ ಹುಡುಕಿಕೊಂಡು ಬರುತ್ತಾರೆ. ಗ್ರಾಮವು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಕೇವಲ 3 ಕಿ.ಮೀ ದೂರುವಿದ್ದು ರುಚಿ ನೋಡಿದವರು ಇಲ್ಲಿಗೆ ತಪ್ಪದೇ ಭೇಟಿ ಕೊಡುತ್ತಾರೆ.

ಮಧ್ಯಾಹ್ನವಾಗುತ್ತಿದ್ದಂತೆ ಗ್ರಾಮದಲ್ಲಿ ಮೀನಿನ ಘಮಲು ಮೂಗಿಗೆ ಬಡಿಯತ್ತದೆ. ಬೆಸಗರಹಳ್ಳಿ ಮುಖ್ಯರಸ್ತೆಯಲ್ಲಿ ಓಡಾಡುವವರು ಇಲ್ಲಿಯ ಪರಿಮಳಕ್ಕೆ ಮನಸೋತು, ರುಚಿ ನೋಡಿ ತೆರಳುತ್ತಾರೆ. ಮಂಡ್ಯ ನಗರದಲ್ಲೂ ಅಪಾರ ಮೀನೂಟ ಹೋಟೆಲ್‌ಗಳಿವೆ, ದೊಡ್ಡ ರೆಸ್ಟೋರೆಂಟ್‌ಗಳಲ್ಲೂ ಮೀನಿನ ತಿನಿಸುಗಳು ದೊರೆಯುತ್ತವೆ. ಆದರೂ ನಗರದ ಜನರು ದೇಶಹಳ್ಳಿಗೆ ತೆರಳಿ ಮೀನೂಟ ಸವಿಯುತ್ತಾರೆ.

ಇಲ್ಲಿಯ ಫಿಶ್‌ಲ್ಯಾಂಡ್‌ಗಳು ಸುಸಜ್ಜಿತವಾದ ರೆಸ್ಟೋರೆಂಟ್‌ಗಳೇನೂ ಅಲ್ಲ, ಸಣ್ಣ ಕ್ಯಾಂಟೀನ್‌ಗಳಷ್ಟೇ. ಆದರೆ ಬಾಣಸಿಗರ ಕೈರುಚಿ ಜನರಿಗೆ ಇಷ್ಟವಾಗಿದೆ. ಕುಟುಂಬ ಸಮೇತರಾಗಿ ಅಲ್ಲಿಗೆ ತೆರಳಿ ಊಟ ಸವಿಯುತ್ತಾರೆ. ಹೋಟೆಲ್‌ ಹಿಂಭಾಗದಲ್ಲಿರುವ ತೋಟದಲ್ಲಿ ಕುಳಿತು ರುಚಿ ಸವಿಯಬಹುದು. ಕೆಲವರು ರಸ್ತೆಯಲ್ಲೇ ನಿಂತು ರುಚಿ ನೋಡುತ್ತಾರೆ. ಹಲವರು ಕಾರುಗಳಲ್ಲಿ ಕುಳಿತುಕೊಂಡೇ ಸವಿಯುತ್ತಾರೆ.

‘ದೇಶಹಳ್ಳಿಯಲ್ಲಿ ಸಿಗುವ ರುಚಿಕರವಾದ ಫಿಶ್‌ ತವಾ ಫ್ರೈ ಯಾವ ಸ್ಟಾರ್‌ ಹೋಟೆಲ್‌ಗಳಲ್ಲೂ ದೊರೆಯುವುದಿಲ್ಲ. ಬಹಳ ವಿಶೇಷವಾಗಿ ಮೀನು ಕರಿದು ಕೊಡುತ್ತಾರೆ. ದೇಶಹಳ್ಳಿ ಮೀನೂಟದ ನೆನಪು ಮಾಡಿಕೊಂಡರೂ ಬಾಯಲ್ಲಿ ನೀರು ಬರುತ್ತದೆ. ಪ್ರತಿ ಭಾನುವಾರ ದೇಶಹಳ್ಳಿ ತವಾ ಫ್ರೈ ತಪ್ಪಿಸಿಕೊಳ್ಳುವುದಿಲ್ಲ’ ಎಂದು ಮಂಡ್ಯದ ಸೋಮಶೇಖರ್‌ ಹೇಳಿದರು.

‘ದೇಶಹಳ್ಳಿ ಮೀನಿನ ರುಚಿ ಬಾಯಿಯಿಂದ ಬಾಯಿಗೆ ಹರಡಿದೆ. ರಾಷ್ಟ್ರೀಯ ಹೆದ್ದಾರಿಗೆ ಹತ್ತಿರವಿರುವ ಕಾರಣ ಹೆಚ್ಚಿನ ಜನರು ಇಲ್ಲಿಗೆ ಬರುತ್ತಾರೆ. ಗ್ರಾಮೀಣ ಪರಿಸರ ಸುಂದರವಾಗಿದ್ದು ಇದೂ ಜನರಿಗೆ ಇಷ್ಟವಾಗಿದೆ’ ಎಂದು ಬೆಂಗಳೂರಿನ ಗ್ರಾಹಕ ಅರುಣ್‌ ಹೇಳಿದರು.

ದೇಶಹಳ್ಳಿ ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ಮುದ್ದೆ ಮೀನೂಟ ದೊರೆಯುತ್ತದೆ. ಸಂಜೆ ತವಾ ಫ್ರೈ, ಫಿಶ್‌ ಸ್ಲೈಸ್‌ಗೆ ಅಪಾರ ಬೇಡಿಕೆ ಇದೆ.

ದೇಶಹಳ್ಳಿ ಕೆರೆ

ದೇಶಹಳ್ಳಿಯಲ್ಲಿ ಮೀನೂಟ ಪ್ರಸಿದ್ಧಿಗೆ ಬರಲು ಇಲ್ಲಿಯ ಕೆರೆ ಪ್ರಮುಖ ಕಾರಣ. ಸಾವಿರ ಎಕರೆಯ ಕೆರೆಯಲ್ಲಿ ಸದಾಕಾಲ ಮೀನು ಕೃಷಿ ನಡೆಯುತ್ತದೆ. ಕಾಟ್ಲಾ, ಜಿಲೇಬಿ ಜಾತಿಯ ಮೀನುಗಳು ಇಲ್ಲಿ ಪ್ರಸಿದ್ಧಿ ಪಡೆದಿವೆ.

‘ಹೊರಗೆ ಫಿಸ್‌ಕಬಾಬ್‌ ಹೆಚ್ಚಾಗಿ ಮಾಡುತ್ತಾರೆ. ಆದರೆ ನಮ್ಮ ಹೋಟೆಲ್‌ಗಳಲ್ಲಿ ಕಬಾಬ್‌ ಹೆಚ್ಚು ಮಾರಾಟವಾಗುವುದಿಲ್ಲ. ತವಾ ಫ್ರೈ, ಸ್ಲೈಸ್‌ ನಮ್ಮಲ್ಲಿ ಪ್ರಸಿದ್ಧಿ. ವಿಶೇಷ ಮಸಾಲೆ ಮೂಲಕ ಗುಣಮಟ್ಟಕ್ಕೆ ಆದ್ಯತೆ ನೀಡಿದ್ದೇವೆ’ ಎಂದು ಮದ್ದೂರಮ್ಮ ಫಿಶ್‌ಲ್ಯಾಂಡ್‌ನ ನಾಗೇಂದ್ರ ತಿಳಿಸಿದರು.

*****

ಮೀನುಗಾರರೇ ಬಾಣಸಿಗರು

ದೇಶಹಳ್ಳಿಯಲ್ಲಿ ಫಿಶ್‌ಲ್ಯಾಂಡ್‌ ನಡೆಸುವ ಬಹುತೇಕ ಮಂದಿ ಮೀನುಗಾರರೇ ಆಗಿದ್ದಾರೆ. ತಾಜಾ ಮೀನು ಹಿಡಿದು ತಂದು ಅಡುಗೆ ತಯಾರಿಸುತ್ತಾರೆ, ಅವರೇ ಬಾಣಸಿಗರಾಗಿದ್ದಾರೆ. ಇಲ್ಲಿಯ ಮೀನೂಟ ಜನರಿಗೆ ಇಷ್ಟವಾಗಲು ಇದು ಪ್ರಮುಖ ಕಾರಣವಾಗಿದೆ.

‘ನಾವು ಮೀನು ಸಂಗ್ರಹ ಮಾಡಿ ಅಡುಗೆ ತಯಾರಿಸುವುದಿಲ್ಲ. ಅಂದು ಹಿಡಿದ ಮೀನುಗಳನ್ನು ಅಂದೇ ಅಡುಗೆ ಮಾಡಿ ಮಾರಾಟ ಮಾಡುತ್ತೇವೆ’ ಎಂದು ಹೋಟೆಲ್‌ ಮಾಲೀಕರು ತಿಳಿಸಿದರು.

ಬೆಲೆ ವಿವರ (₹ ಗಳಲ್ಲಿ)

ಫಿಶ್‌ ತವಾ ಫ್ರೈ (1ಕ್ಕೆ): ₹ 60
ಫಿಶ್‌ ಸ್ಲೈಸ್‌ (ಪ್ಲೇಟ್‌): ₹ 40
ಮುದ್ದೆ ಊಟ: ₹ 90

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT