ಇನ್ನೇನು ಚಳಿಗಾಲ ಶುರು ಆಗ್ತಾ ಇದೆ. ತ್ವಚೆಯ ಕಡೆಗೆ ನಮ್ಮೆಲ್ಲರ ಗಮನ ಇರುವ ಕಾಲ ಅದು. ಯುವತಿಯರಂತೂ ಬಹಳ ತಲೆಕಡೆಸಿಕೊಂಡು ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಕಷ್ಟಪಡುತ್ತಾರೆ. ಬ್ಯೂಟಿ ಪಾರ್ಲರ್‌ಗೆ ಹೋಗೋದು, ಮಾಯಿಶ್ಚರೈಸರ್, ಆ ಕ್ರೀಮು ಈ ಕ್ರೀಮು ಅಂತ ಅಂಗಡಿ ಅಂಗಡಿ ಸುತ್ತುತ್ತಾರೆ. ಆದರೆ, ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಬೇರೆ ಎಲ್ಲೂ ಹೋಗಿ ದುಡ್ಡು ಖರ್ಚು ಮಾಡಿಕೊಳ್ಳಬೇಕಾಗಿಲ್ಲ, ನಮ್ಮ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು.
ನೀರು ಸೇವನೆ ಕೂಡ ಮುಖ್ಯವಾದ ಪಾತ್ರ ವಹಿಸುತ್ತದೆ. ತ್ವಚೆ ಮಾತ್ರ ಅಲ್ಲ, ದೇಹದ ಆರೋಗ್ಯದಲ್ಲೂ ನೀರು ಮುಖ್ಯ ಭೂಮಿಕೆ ವಹಿಸುತ್ತದೆ. ದೇಹದ ತೂಕ ಇಳಿಸಿಕೊಳ್ಳಬಯಸುವವರೂ ಚೆನ್ನಾಗಿ ನೀರು ಕುಡಿಯಬೇಕು ಎನ್ನುತ್ತಾರೆ. ಅಂತೆಯೇ ತ್ವಚೆಯ ಸೌಂದರ್ಯ ವೃದ್ಧಿಗೂ ನೀರು ಅತ್ಯಗತ್ಯ. ಬೆಳಿಗ್ಗೆ ಎದ್ದ ಕೂಡಲೇ ಕನಿಷ್ಠ ಒಂದು ಲೀಟರ್ ನೀರು ಕುಡಿಯಬೇಕು ಎನ್ನುತ್ತಾರೆ ತಜ್ಞರು.
ಬಾಯಾರಿಕೆ ಆದಾಗ ಕೆಲವರು ಜ್ಯೂಸ್ ಕುಡಿಯುವುದನ್ನು ಇಷ್ಟಪಡುತ್ತಾರೆ. ಆದರೆ, ಅಂಗಡಿಯಲ್ಲಿ ಮಾಡಿ, ಫ್ರಿಡ್ಜ್‌ನಲ್ಲಿ ಶೇಖರಿಸಿ ಇಟ್ಟ ಜ್ಯೂಸ್‌ಗಿಂತ, ತಾಜಾ ಹಣ್ಣಿನ ಜ್ಯೂಸ್ ಕುಡಿದರೆ ಆರೋಗ್ಯದ ಜೊತೆಗೆ ತ್ವಚೆಗೂ ಉತ್ತಮ. ದಿನದಲ್ಲಿ ಎರಡು ಗ್ಲಾಸ್ ತಾಜಾ ಜ್ಯೂಸ್ ಕುಡಿದರೆ ಸಾಕು.
ನಿಂಬೆಹಣ್ಣಿನ ಬಳಕೆ ಕೂಡ ತ್ವಚೆಗೆ ಒಳ್ಳೆಯದನ್ನೇ ಮಾಡುತ್ತದೆ. ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಇದರ ಜ್ಯೂಸ್ ಅನ್ನು ಸಹ ಸೇವಿಸಬಹುದಾಗಿದೆ. ಅಡುಗೆಯಲ್ಲಿ ನಿಂಬೆಹಣ್ಣಿನ ಬಳಕೆ ಹೆಚ್ಚು ಮಾಡಬಹುದು.
ಬೇಗ ನಿದ್ದೆಗೆ ಹೋಗುವುದು ಕೂಡ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದರಿಂದ ಸೌಂದರ್ಯವೂ ವೃದ್ಧಿಯಾಗುತ್ತದೆ. ಕಚೇರಿ ಕೆಲಸ ಎಂದೆಲ್ಲಾ ರಾತ್ರಿ ತಡವಾಗಿ ಮಲಗುವುದು, ದೇಹಕ್ಕೆ ಬೇಕಾದಷ್ಟು ನಿದ್ದೆ ಆಗಿರದಿದ್ದರೆ, ತ್ವಚೆಯ ಸೌಂದರ್ಯ ಹಾಳಾಗಬಹುದು. ಆದ್ದರಿಂದ ದಿನದಲ್ಲಿ 7ರಿಂದ 8 ಗಂಟೆಗಳ ನಿದ್ದೆ ಅಗತ್ಯವಾಗಿದೆ.
ಅಕ್ರೂಟ್ ಬಳಕೆಯೂ ಸಹ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಒಮೆಗಾ 3 ಎನ್ನುವ ಫ್ಯಾಟಿ ಆ್ಯಸಿಡ್ ಇರುತ್ತದೆ. ಅದು ತ್ವಚೆಯ ಆರೋಗ್ಯಕ್ಕೆ ಉತ್ತಮವಾದುದು. ಇದರ ಎಣ್ಣೆಯನ್ನು ಕೂಡ ಚರ್ಮಕ್ಕೆ ಹಚ್ಚಿಕೊಳ್ಳಬಹುದು. ಮೀನಿನಲ್ಲಿ ಕೂಡ ಒಮೆಗಾ 3 ಇರುತ್ತದೆ.
ದಿನನಿತ್ಯ ಒಮ್ಮೆಯಾದರೂ ಗ್ರೀನ್ ಟೀ ಕುಡಿಯುವುದು ಉತ್ತಮ ರೂಢಿ. ಇದರಿಂದ ಚರ್ಮವು ಮೃದು ಆಗುತ್ತದೆ. ಟೊಮೆಟೊದ ಬಳಕೆ ಕೂಡ ಚರ್ಮಕ್ಕೆ ಒಳ್ಳೆಯದು. ಇದರ ಬಳಕೆಯಿಂದ ಚರ್ಮವು ಹೆಚ್ಚು ಕಾಂತಿಯುಕ್ತವಾಗಿ ಕಾಣುತ್ತದೆ.
ದಾಳಿಂಬೆ ಹಣ್ಣಿನ ಉಪಯೋಗ ಕೂಡ ತ್ವಚೆಯ ಸೌಂದರ್ಯ ವೃದ್ಧಿಗೆ ಉತ್ತಮ ಉಪಾಯ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಚರ್ಮಕ್ಕೆ ಆದ ಸಣ್ಣಪುಟ್ಟ ಗಾಯಗಳನ್ನು ಸರಿ ಮಾಡುತ್ತದೆ. ರಕ್ತಕ್ಕೂ ಸಹ ಇದರ ಸೇವನೆ ಒಳ್ಳೆಯದು. ಬೆಣ್ಣೆ ಹಣ್ಣಿನ ಸೇವನೆಯಿಂದ ಚರ್ಮಕ್ಕೆ ಕಾಂತಿ ಒದಗಿಸುತ್ತದೆ. ಮೊಟ್ಟೆ ಸೇವನೆ ಕೂಡ ಚರ್ಮದ ಆರೋಗ್ಯಕ್ಕೆ ಉತ್ತಮವಾದುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.