ಗುರುವಾರ , ಅಕ್ಟೋಬರ್ 22, 2020
22 °C
ಮದ್ರಾಸ್ ಐಐಟಿ ಸಂಶೋಧಕರ ಅಭಿವೃದ್ಧಿ

ಆಹಾರ ರಕ್ಷಿಸುವ, ಪರಿಸರದಲ್ಲಿ ಕರಗುವ ‘ಫುಡ್ ರ‍್ಯಾಪರ್‘ ಸಂಶೋಧಿಸಿದ ಮದ್ರಾಸ್ ಐಐಟಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸುತ್ತಿಟ್ಟ ಆಹಾರದಲ್ಲಿ ಬ್ಯಾಕ್ಟೀರಿಯಾ ಅಭಿವೃದ್ಧಿಯಾಗಿ ಹಾಳಾಗುವುದನ್ನು ತಪ್ಪಿಸುವ ಹಾಗೂ ಜೈವಿಕವಾಗಿ ಕರಗುವ ಹಾಳೆಯೊಂದನ್ನು (ಫುಡ್‌ ರ್‍ಯಾಪರ್) ಮದ್ರಾಸ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಈ ಫುಡ್ ರ‍್ಯಾಪರ್ (ಆಹಾರ ಸುತ್ತಿಕೊಡುವ ಹಾಳೆ) ಆಹಾರ ಹಾಳಾಗದಂತೆ ರಕ್ಷಿಸುತ್ತದೆ. ಜತೆಗೆ, ಯಾವುದೇ ವಾತಾವರಣದಲ್ಲಿ ಪರಿಸರದಲ್ಲಿ ಕರಗುತ್ತದೆ. ಇದು ಪರಿಸರದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಡಿತಗೊಳಿಸುತ್ತದೆ. ಇದಕ್ಕೆ ಪೇಟೆಂಟ್‌ ಪಡೆಯಲು ಸಂಶೋಧಕರ ತಂಡ ಮುಂದಾಗಿದೆ.

‘ನಾವು ಎರಡು ಪ್ರಮುಖ ಸಮಸ್ಯೆಗಳಿಗೆ ಪರಿಹಾರವಾಗಿ ಈ ಹಾಳೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಮೊದಲನೆಯದು ಹೆಚ್ಚುತ್ತಿರುವ ಘನತ್ಯಾಜ್ಯ ಉತ್ಪಾದನೆಗೆ ಕಡಿವಾಣ ಹಾಕುವುದು ಹಾಗೂ ಸಂಗ್ರಹಿಸಿಟ್ಟ ಆಹಾರದಲ್ಲಿ ಬ್ಯಾಕ್ಟೀರಿಯಾ ಅಭಿವೃದ್ಧಿಯಾಗದಂತೆ ರಕ್ಷಿಸುವುದು. ನಾವೀಗ ಅಭಿವೃದ್ಧಿಪಡಿಸಿರುವ ಈ ಹಾಳೆಯಲ್ಲಿ ಬ್ಯಾಕ್ಟೀರಿಯಾಗಳು ಉತ್ಪಾದನೆಯಾಗದಂತೆ ತಡೆಯುವ ‘ಬ್ಯಾಕ್ಟೀರಿಯಾ ವಿರೋಧಿ‘ ವಸ್ತುವನ್ನು ಬಳಸಿದ್ದೇವೆ. ಇದು ಆಹಾರ ಸಂಗ್ರಹಿಸಿಟ್ಟಾಗ ಅದರಲ್ಲಿ ಬ್ಯಾಕ್ಟೀರಿಯಾ ಉತ್ಪಾದನೆಯಾ ಗದಂತೆ ತಡೆಯುತ್ತದೆ. ಈ ಬ್ಯಾಕ್ಟೀರಿಯಾ ವಿರೋಧಿ ಸಂಯುಕ್ತದಿಂದ ಆಹಾರದಲ್ಲಿ ಯಾವುದೇ ರೀತಿಯ ನಂಜು ಬೆರೆಯುವುದಿಲ್ಲ. ಇದು ಸೇವಿಸಲು ಸುರಕ್ಷಿತವಾಗಿದೆ ಎಂದು ಸಂಬಂಧಿಸಿದ ಇಲಾಖೆ ಅನುಮತಿ ನೀಡಿದೆ‘ ಎಂದು ಐಐಟಿಯ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕ ಮುಖೇಶ್ ಡೊಬ್ಲೆ ತಿಳಿಸಿದ್ದಾರೆ.

‘ಆಹಾರವನ್ನು ಸುತ್ತಿಡುವ ಈ ಹಾಳೆಯು ವಿವಿಧ ಪರಿಸರದಲ್ಲಿ ಕರಗುತ್ತದೆ. ಈ ವಸ್ತು 21 ದಿನಗಳಲ್ಲಿ ಶೇ 4 ರಿಂದ ಶೇ 98ರಷ್ಟು ಕರಗುತ್ತದೆ. ಒಣ ವಲಯಕ್ಕೆ ಹೋಲಿಸಿದರೆ, ತೇವಾಂಶವಿರುವ ವಾತಾವರಣದಲ್ಲೂ ಈ ವಸ್ತು ವೇಗವಾಗಿ ಕರಗುತ್ತದೆ. ಹೀಗಾಗಿ ನಾವು ಅಭಿವೃದ್ಧಿಪಡಿಸಿರುವ ಆಹಾರ ಸುತ್ತಿಕೊಡುವ ಈ ಹಾಳೆ ಪರಿಸರ ಸ್ನೇಹಿಯಾಗಿದೆ. ಪರಿಸರದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯ ತಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ‘ ಎಂದು ಅವರು ಹೇಳಿದ್ದಾರೆ.

ಸಂಶೋಧಕರು ಈ ಪಾಲಿಮರ್ ಹಾಳೆಯನ್ನು, ಸ್ಟಾರ್ಚ್‌, ಪಾಲಿವಿನೈಲ್ ಅಲ್ಕೊಹಾಲ್, ಸೈಕ್ಲಿಕ್ ಬೇಟಾ ಗ್ಲೈಕಾನ್ಸ್‌(ಸಿಬಿಜಿ) ಮಿಶ್ರಣಗಳಿಂದ ತಯಾರಿಸಿದ್ದಾರೆ. ಪನೀರ್‌, ಮಾಂಸ, ಚಿಕನ್‌ನಂತಹ ಆಹಾರ ಪದಾರ್ಥಗಳನ್ನು ಈ ಹಾಳೆಯಲ್ಲಿ ಸುತ್ತಿಟ್ಟು ಇದರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗಿದೆ. ಹೀಗೆ ಸುತ್ತಿಟ್ಟ ಆಹಾರ ಪದಾರ್ಥವನ್ನು 4 ಡಿಗ್ರಿ ಮತ್ತು 30 ಡಿಗ್ರಿ ಸೆಲ್ಷಿಯಸ್‌ ವಾತಾವರಣದಲ್ಲಿ 10 ದಿನಗಳವರೆಗೆ ಇಟ್ಟು ಪರಿಕ್ಷಿಸಲಾಗಿದೆ. ಈ ಸಮಯದಲ್ಲಿ ಆಹಾರದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಕಡಿಮೆ ಮಾಡುವಲ್ಲಿ ಪಾಲಿಮರ್‌ ಹಾಳೆಯ ಲೇಪನದ ಪರಿಣಾಮವನ್ನು ಪರೀಕ್ಷಿಸಲಾಗಿದೆ‘ ಎಂದು ಐಐಟಿ ರೀಸರ್ಚ್‌ ಸ್ಕಾಲರ್‌ ಪೂಜಾ ಕುಮಾರಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು