ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡ್ಡು ರಹಿತ ತಿನಿಸುಗಳು

Last Updated 25 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಬೇಸಿಗೆಗೆ ಹಿತವಾಗಿ, ಸುಲಭವಾಗಿ ತಯಾರಿಸಬಹುದಾದ, ಜಿಡ್ಡು ರಹಿತ ರುಚಿಕರ ತಿನಿಸುಗಳನ್ನು ತಯಾರಿಸಿ, ಮಕ್ಕಳಿಗೆ ಕೊಡಿ. ಅರೆ, ಅಂತ ತಿನಿಸುಗಳು ಯಾವುದಿದೆ ಅಂತ ಕೇಳ್ತೀರಾ? ಇಲ್ಲಿವೆ ನೋಡಿ, ಜಿಡ್ಡು ರಹಿತ ತಿನಿಸುಗಳ ರೆಸಿಪಿ.

***

ಪರೀಕ್ಷೆಗಳೆಲ್ಲ ಮುಗಿಯುತ್ತಿವೆ. ಒಂದೆರಡು ದಿನಗಳಲ್ಲೇ ಬೇಸಿಗೆ ರಜೆ ಆರಂಭವಾಗುತ್ತದೆ. ಮಕ್ಕಳು ಪಾಠಕ್ಕೆ ರಜೆ ಹೇಳಿ, ಆಟಕ್ಕಾಗಿ ಮೈದಾನಕ್ಕಿಳಿಯುತ್ತಾರೆ. ಆಟವಾಡಿ ದಣಿದು ಬಂದು, ‘ಅಮ್ಮಾ, ಹಸಿವು. ಏನಾದ್ರು ತಿನ್ನಲು ಕೊಡು’ ಎಂದು ದುಂಬಾಲು ಬೀಳುತ್ತಾರೆ. ಆಗ ತಕ್ಷಣಕ್ಕೆ ಏನು ಮಾಡಿಕೊಡಬೇಕೆಂಬ ಚಿಂತೆ ಶುರುವಾಗುತ್ತದೆ ಅಲ್ಲವಾ? ಅದರಲ್ಲೂ ಬೇಸಿಗೆ ಕಾಲದಲ್ಲಿ, ಏನೇನೋ ತಿಂಡಿ ಮಾಡಿಕೊಟ್ಟರೆ, ಆರೋಗ್ಯಕ್ಕೆ ತೊಂದರೆಯಾಗಬಹುದು ಎಂಬ ಹೆದರಿಕೆಯೂ ಮನಸ್ಸಲ್ಲಿರುತ್ತದೆ, ಹೌದಲ್ಲವಾ?

ಚಿಂತಿಸಬೇಡಿ. ಬೇಸಿಗೆಗೆ ಹಿತವಾಗಿ, ಸುಲಭವಾಗಿ ತಯಾರಿಸಬಹುದಾದ, ಜಿಡ್ಡು ರಹಿತ ರುಚಿಕರ ತಿನಿಸುಗಳನ್ನು ತಯಾರಿಸಿ, ಮಕ್ಕಳಿಗೆ ಕೊಡಿ. ಅರೆ, ಅಂತ ತಿನಿಸುಗಳು ಯಾವುದಿದೆ ಅಂತ ಕೇಳ್ತೀರಾ? ಇಲ್ಲಿವೆ ನೋಡಿ, ಜಿಡ್ಡು ರಹಿತ ತಿನಿಸುಗಳ ರೆಸಿಪಿ..

ಹೆಸರುಕಾಳು, ನೆಲ್ಲಿ ಚಾಟ್

ಬೇಕಾಗುವ ಸಾಮಗ್ರಿಗಳು:ಮೊಳಕೆ ಹೆಸರುಕಾಳು 1 ಕಪ್, ಡೆಲ್ಲಿ ಕ್ಯಾರಟ್ ತುರಿ - 1/2 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ 1/4 ಕಪ್,2 ಬೆಟ್ಟದನೆಲ್ಲಿ ಕಾಯಿ ತುರಿ,ಚಾಟ್ ಮಸಾಲ,ಉಪ್ಪು.

ತಯಾರಿಸುವ ವಿಧಾನ:ಮಿಕ್ಸಿಂಗ್ಬೌಲ್‌ನಲ್ಲಿ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ,. ರುಚಿಗೆ ತಕ್ಕಷ್ಟು ಚಾಟ್ ಮಸಾಲಪುಡಿ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. (ಡೆಲ್ಲಿ ಕ್ಯಾರಟ್ ಕೆಂಪು ಬಣ್ಣ ಹೊಂದಿದ್ದು, ಮಾಮೂಲಿ ಕ್ಯಾರೆಟ್ ಗಿಂತ ತೆಳ್ಳಗೆ, ಹೆಚ್ಚು ನೀರಿನಂಶ ಉಳ್ಳದ್ದು). ಈಗ ಹೆಸರುಕಾಳು – ನೆಲ್ಲಿ ಚಾಟ್‌ ಸವಿಯಲು ಸಿದ್ಧ. ಬೆಟ್ಟದ ನೆಲ್ಲಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. ಮೊಳಕೆ ಬಂದ ಹೆಸರು ಕಾಳು, ಕ್ಯಾರೆಟ್‌ ಇವೆರಡರಲ್ಲೂ ಪ್ರೊಟಿನ್, ವಿಟಮಿನ್‌ ಇರುತ್ತದೆ. ಹಾಗಾಗಿ ಈ ಚಾಟ್‌, ಆರೋಗ್ಯಕ್ಕೆ ಬೊಂಬಾಟ್‌.

ಬನ್ ಡ್ರೈ ಚಾಟ್

ಬೇಕಾಗುವ ಸಾಮಗ್ರಿಗಳು: ಸಿಹಿ ಬನ್ – 2, ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೊ – ತಲಾ 1/4 ಕಪ್, ಕೊತ್ತಂಬರಿ ಸೊಪ್ಪು – ಸ್ವಲ್ಪ,ಬೂಂದಿ ಕಾಳು(ಬೇಕಾದರೆ ಬಳಸಿ), ಕಾಳು ಮೆಣಸಿನಪುಡಿ – ಚಿಟಿಕೆ, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ : ಬನ್‌ನ ಹೊರಪದರ ತೆಗೆದು ಉಳಿದದ್ದನ್ನು ಕೈಯಲ್ಲಿ ಪುಡಿಮಾಡಿಕೊಳ್ಳಿ. ಇದಕ್ಕೆ ಮೇಲೆ ಕಾಣಿಸಿದ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಬನ್ ಡ್ರೈ ಚಾಟ್ ತಿನ್ನಲು ಸಿದ್ಧ. ಒಂದು ಕಿವಿಮಾತು, ಈಚಾಟ್ ತಾಜಾವಾಗಿದ್ದಾಗ ಸೇವಿಸಿದರೆ ಹೆಚ್ಚು ರುಚಿ.

ಗುಲ್ಕನ್ ಸಲಾಡ್

ಬೇಕಾಗುವ ಸಾಮಗ್ರಿಗಳು:ಸುಲಿದ ಚುಕ್ಕಿ ಬಾಳೆ ಹಣ್ಣು 1, ಸೇಬು 1 , ಒಣದ್ರಾಕ್ಷಿ, ಗೋಡಂಬಿ, ಅಂಜೂರದ ತುಂಡುಗಳು ತಲಾ 15 ರಿಂದ 20, ಗುಲ್ಕನ್ 2 ಚಮಚ.

ತಯಾರಿಸುವ ವಿಧಾನ: ಬಾಳೆ, ಸೇಬುಗಳನ್ನು ಸಣ್ಣಗೆ ಹೆಚ್ಚಿಕೊಂಡು, ಒಣಹಣ್ಣುಗಳೊಂದಿಗೆ ಸೇರಿಸಿ ನಂತರ ಗುಲ್ಕನ್ ಹಾಕಿ ಚೆನ್ನಾಗಿ ಬೆರೆಸಿ. ಗುಲ್ಕನ್‌ ಸಲಾಡ್‌ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT