ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವನ್ನು ಜಯಿಸೋಣ: ವ್ಯರ್ಥವಾಗದಿರಲಿ ಆಹಾರ ಪದಾರ್ಥಗಳು

ಇಂದು ವಿಶ್ವ ಆಹಾರ ದಿನ
Last Updated 16 ಅಕ್ಟೋಬರ್ 2019, 6:31 IST
ಅಕ್ಷರ ಗಾತ್ರ

1945ರಲ್ಲಿ ವಿಶ್ವಸಂಸ್ಥೆ ಸ್ಥಾಪಿಸಿದ ಆಹಾರ ಮತ್ತು ಕೃಷಿ ಸಂಘಟನೆ ನೆನಪಿಗಾಗಿ, ಆಹಾರ ಭದ್ರತೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್‌ 16ರಂದು ವಿಶ್ವ ಆಹಾರ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆ ಜತೆಗೆ, ‘ಅಂತರರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ’ಯಂತಹ ಹಲವು ಸಂಸ್ಥೆಗಳು ಸೇರಿ ಈ ದಿನವನ್ನು ಆಚರಿಸುತ್ತವೆ. 1979ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಪ್ರಸ್ತುತ 150ಕ್ಕೂ ಹೆಚ್ಚು ರಾಷ್ಟ್ರಗಳು ಆಚರಿಸುತ್ತಿವೆ. 1981ರಿಂದ ಪ್ರತಿ ವರ್ಷ ಒಂದು ‘ವಿಷಯವಸ್ತು’ (ಥೀಮ್‌) ಮೂಲಕ ಆಚರಿಸುತ್ತಾ ಜಾಗೃತಿ ಮೂಡಿಸಲಾಗುತ್ತಿದೆ.

ವಿಶ್ವದಾದ್ಯಂತ ಆಹಾರ ಭದ್ರತೆಗೆ ಕ್ರಮ ಕೈಗೊಳ್ಳುವುದು, ಈ ಬಗ್ಗೆ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವಿಶ್ವದಾದ್ಯಂತ ಯಾರೊಬ್ಬರೂ ಹಸಿವಿನಿಂದ ಮತ್ತು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲಬಾರದು ಎಂದು ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶ. ಈ ದಿನವನ್ನು ‘ಫುಡ್‌ ಎಂಜಿನಿಯರ್ಸ್ ಡೇ’ ಎಂದೂ ಕರೆಯುತ್ತಾರೆ.

ಆಧುನಿಕ ತಂತ್ರಜ್ಞಾನದಿಂದಾಗಿ ಆಹಾರ ಪದಾರ್ಥಗಳ ಶೇಖರಣೆ ಸಾಧ್ಯವಾಗುತ್ತಿದೆ. ಆದರೆ ಅತಿವೃಷ್ಟಿ, ಅನಾವೃಷ್ಟಿಯಂತಹ ಸಮಸ್ಯೆಗಳ ಜತೆಗೆ, ಆಹಾರ ಪದಾರ್ಥಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದರಿಂದ ಆಹಾರ ಪದಾರ್ಥಗಳು ಪೋಲಾಗುತ್ತಿರುವುದು ಆಹಾರ ಭದ್ರತೆಯ ಗಂಭೀರ ಸಮಸ್ಯೆ. ಶ್ರೀಮಂತ ರಾಷ್ಟ್ರಗಳಷ್ಟೇ ಅಲ್ಲ, ಬಡರಾಷ್ಟ್ರಗಳಲ್ಲೂ ಆಹಾರ ಪೋಲಾಗುತ್ತಿದೆ ಎಂದು ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ಹೇಳುತ್ತಿದೆ. ವಿಶ್ವದಾದ್ಯಂತ ಪ್ರತಿ ವರ್ಷ ಸುಮಾರು 130 ಕೋಟಿ ಟನ್‌ ಆಹಾರ ಪೋಲಾಗುತ್ತಿದೆ. ನಮ್ಮ ದೇಶದಲ್ಲಿ ಸೂಕ್ತ ಶೈತ್ಯಾಗಾರಗಳಲ್ಲಿದೇ ಅತಿಹೆಚ್ಚು ಪ್ರಮಾಣದಲ್ಲಿ ಆಹಾರ ವ್ಯರ್ಥ್ಯವಾಗುತ್ತಿದೆ. ಈ ರೀತಿ ವ್ಯರ್ಥವಾಗುವುದನ್ನು ತಪ್ಪಿಸುವುದಕ್ಕಾಗಿಯೇ ವಿಶ್ವದಾದ್ಯಂತ ಹಲವು ರಾಷ್ಟ್ರಗಳು ಶ್ರಮಿಸುತ್ತಿವೆ. ವಿವಿಧ ಯೋಜನೆಗಳನ್ನು ರೂಪಿಸುತ್ತಿವೆ.

ಆಹಾರ ವ್ಯರ್ಥವಾದಂತೆ ಎಚ್ಚರಿಕೆ ವಹಿಸುತ್ತಾ, ಮುಂದಿನ ಪೀಳಿಗೆಗೆ ಉತ್ತಮ ಆಹಾರ ದೊರೆಯುವಂತೆ ಮಾಡುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಈ ಬಗ್ಗೆ ಜಾಗೃತಿ ಮೂಡಿಸಿ ಆಹಾರ ಪದಾರ್ಥಗಳನ್ನು ಇನ್ನು ಮುಂದೆ ಪೋಲು ಮಾಡುವುದಿಲ್ಲ
ಎಂದು ಪ್ರತಿಜ್ಞೆ ಮಾಡೋಣ.

ಹಸಿವಿನ ಕೂಗು

* ನಿತ್ಯ 20 ಕೋಟಿ ಭಾರತೀಯರು ಹಸಿವಿನಿಂದಲೇ ಮಲಗುತ್ತಿದ್ದಾರೆ.

* 2018ರ ಅಂಕಿ ಅಂಶಗಳ ಪ್ರಕಾರ ಗ್ಲೋಬರ್ ಹಂಗರ್ ಇಂಡೆಕ್ಸ್‌ನ 119 ರಾಷ್ಟ್ರಗಳ ಪೈಕಿ ಭಾರತ 113ನೇ ಸ್ಥಾನದಲ್ಲಿದೆ.

* ರಾಜ್ಯದಲ್ಲಿ ಸುಮಾರು 12 ಲಕ್ಷ ಮಕ್ಕಳು ಪೌಷ್ಟಿಕಾಂಶಗಳ ಕೊರತೆ ಎದುರಿಸುತ್ತಿದ್ದಾರೆ. 2015ರಲ್ಲಿ ರಾಜ್ಯ ಸರ್ಕಾರವೇ ತಿಳಿಸಿತ್ತು.

* 14.5% – ದೇಶದ ಜನಸಂಖ್ಯೆಯಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವವರು

* 20.8% – ನಿಗದಿಗಿಂತ ಕಡಿಮೆ ತೂಕವಿರುವ ಮಕ್ಕಳು

* 37.9% – ಬೆಳವಣಿಗೆ ದೋಷಗಳಿರುವ ಐದು ವರ್ಷದೊಳಗಿನ ಮಕ್ಕಳು

* 51.4% –ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು

ವಾರ್ಷಿಕ ಆಹಾರ ಪೋಲು ವಿವಿರ

* ₹181.31 ಲಕ್ಷ ಕೋಟಿ – ವಿಶ್ವದಾದ್ಯಂತ ವ್ಯರ್ಥ್ಯವಾಗುತ್ತಿರುವ ಆಹಾರ ಪದಾರ್ಥಗಳ ಮೌಲ್ಯ

* ₹38,500 ಕೋಟಿ –ಭಾರತದಲ್ಲಿ ವ್ಯರ್ಥವಾಗುತ್ತಿರುವ ತರಕಾರಿಗಳ ಮೌಲ್ಯ

* 67 ಕೋಟಿ ಟನ್ – ಶ್ರೀಮಂತ ರಾಷ್ಟ್ರಗಳಲ್ಲಿ ವ್ಯರ್ಥವಾಗುತ್ತಿರುವ ಆಹಾರ ಪದಾರ್ಥಗಳು

* 63 ಕೋಟಿ ಟನ್ – ಬಡ ರಾಷ್ಟ್ರಗಲ್ಲಿ ವ್ಯರ್ಥವಾಗುತ್ತಿರುವ ಆಹಾರ ಪದಾರ್ಥಗಳು

* 330 ಕೋಟಿ ಟನ್ – ಆಹಾರ ಪದಾರ್ಥಗಳು ವ್ಯರ್ಥವಾಗುತ್ತಿರುವುದರಿಂದ ವಾತಾವರಣಕ್ಕೆ ಸೇರುತ್ತಿರುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ

* 250 ಕ್ಯೂಸೆಕ್‌ – ಆಹಾರ ಪದಾರ್ಥಗಳ ಪೋಲಿನಿಂದ ವ್ಯರ್ಥವಾಗುತ್ತಿರುವ ನೀರಿನ ಪ್ರಮಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT