ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PV Web Exclusive | ಕೋವಿಡ್ ಕಾಲ; ಹೀಗಿರಲಿ ಆಹಾರ...

ಫಾಲೋ ಮಾಡಿ
Comments

ಬೆಳಗಾದರೆ ಸಾಕು; ಹೆಣ್ಣುಮಕ್ಕಳಿಗೆ ನಿತ್ಯ ಇಂದಿನ ನಾಸ್ಟಾ (ಉಪಹಾರ) ಏನು ಮಾಡಬೇಕು, ಮಧ್ಯಾಹ್ನ ಮತ್ತು ರಾತ್ರಿಗೆ ಯಾವ ಆಹಾರ ತಯಾರಿಸಬೇಕು ಎನ್ನುವುದೇ ಚಿಂತೆ. ಓಡುವ ಭರಕ್ಕೆ, ಅವಸರದಲ್ಲಿ ಏನು ಮಾಡಲು ಸಾಧ್ಯವೊ; ಅದನ್ನು ಮಾಡಿ ಬುತ್ತಿ ಕಟ್ಟಿ ಕಳುಹಿಸಿದರೆ ಬೆಳಿಗ್ಗೆಯ ಮಟ್ಟಿಗೆ ಸ್ವಲ್ಪ ನಿರಾಳ.

ಪತಿ ಕಚೇರಿ ಕೆಲಸ ಮುಗಿಸಿ ಬರುವುದು ಸಂಜೆಯೇ; ಆ ಮೇಲೆ ರಾತ್ರಿ ಊಟದ ಯೋಚನೆ ಮಾಡಿದರಾಯಿತು. ಮನೆಯಲ್ಲಿ ಮಕ್ಕಳಷ್ಟೆ ಇರುವುದಲ್ಲವೇ? ಇರುವುದರಲ್ಲಿಯೇ ಏನಾದರೂ ತಿಂದುಕೊಂಡು ಬಿಡೋಣ ಎಂದು ಗೃಹಿಣಿ ಲೆಕ್ಕಾಚಾರ ಹಾಕಿಕೊಂಡು ಅಂದಿನ ದಿನದ ಆಹಾರ ವೇಳಾಪಟ್ಟಿ ಮುಗಿಸುತ್ತಿದ್ದಳು. ಪತಿ ಹಾಗೂ ಪತ್ನಿ ಉದ್ಯೋಗಸ್ಥರಾಗಿದ್ದರೆ ಅಡುಗೆ ಕಾರ್ಯ ನಿತ್ಯದ ಸವಾಲು.

ಆದರೆ, ಈಗ ಕಾಲ ಮೊದಲಿನಿಂತಿಲ್ಲ. ಕೋವಿಡ್‌ ಬಂದ ಮೇಲಂತೂ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ಆಯ್ಕೆ ವಿಷಯದಲ್ಲಿ ಪ್ರತಿಯೊಬ್ಬರು ಸಾಕಷ್ಟು ಜಾಗರೂಕರಾಗಿದ್ದಾರೆ. ಬಿಸಿಬಿಸಿಯಾದ ಆಹಾರ ಸೇವನೆಗೆ ಒತ್ತುಕೊಡುತ್ತಿದ್ದಾರೆ. ಈಗ ರಾಜ್ಯದ ಬಹುತೇಕ ಕಡೆ ಮೋಡಕವಿದ ವಾತಾವರಣ, ಮಳೆ, ತಂಪು ಇದೆ. ಆದ್ದರಿಂದ ನಿತ್ಯದ ಆಹಾರದ ಆಯ್ಕೆ ವಿಷಯದಲ್ಲಿ ಸಾಕಷ್ಟು ಯೋಚಿಸುತ್ತಿದ್ದಾರೆ.

ಕೋವಿಡ್‌ ಕಾಲದಲ್ಲಿರುವ ನಮಗೆ ಸೋಂಕು ಯಾವಾಗ, ಹೇಗೆ ಬೇಕಾದರೂ ಅಂಟಿಕೊಳ್ಳಬಹುದು ಎನ್ನುವ ಭೀತಿಯಿದೆ. ಆದ್ದರಿಂದ ಪ್ರತಿ ಆಹಾರದ ಬಗ್ಗೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುವಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಸೋಂಕು ಅಂಟಿಕೊಂಡವರಿಗೆ ಬಹಳಷ್ಟು ಜನರಲ್ಲಿ ಬಾಯಿರುಚಿ ಇಲ್ಲದಿರುವುದು, ವಾಸನೆ ಗೊತ್ತಾಗದೆ ಇರುವ ಲಕ್ಷಣಗಳು ಸಹ ಇರುತ್ತವೆ. ಆದ್ದರಿಂದ ಆಸ್ಪತ್ರೆಗಳಲ್ಲಿ ನಿತ್ಯ ಒಂದೊಂದು ರೀತಿಯಲ್ಲಿ ಮತ್ತು ಆಯಾ ಆಸ್ಪತ್ರೆಗಳಲ್ಲಿ ಬೇರೆ ಬೇರೆ ರೀತಿಯ ಆಹಾರ ನೀಡಲಾಗುತ್ತಿದೆ.

ಸಾಮಾನ್ಯವಾಗಿ ರವಾ ಇಡ್ಲಿ, ಪೊಂಗಲ್, ಸೆಟ್ ದೋಸೆ, ಬಿಸಿ ಬೇಳೆಬಾತ್, ಉಪ್ಪಿಟ್ಟು, ಸಿರಾ, ಕಲ್ಲಂಗಡಿ ಹಣ್ಣ, ರಾಗಿ ಗಂಜಿ, ಪಪ್ಪಾಯ, ಪಾಲಕ್ ಸೂಪ್‌, ಕರ್ಬೂಜ, ರವಾ ಗಂಜಿ, ಟೊಮೆಟೊ ಸೂಪ್, ಪುಲ್ಕ, ಅನ್ನ, ದಾಲ್, ಸಾರು, ಮೊಸರು, ಏಲಕ್ಕಿ ಬಾಳೆಹಣ್ಣು, ಪ್ರೋಟಿನ್ ಬಿಸ್ಕತ್ತು, ಕರ್ಜೂರ ನೀಡಲಾಗುತ್ತಿದೆ. ಈ ಆಹಾರ ಪದ್ಧತಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ.

ಕೋವಿಡ್‌ ಎಚ್ಚರ ಮತ್ತು ಬದಲಾಗುವ ವಾತಾವರಣ ಎರಡಕ್ಕೂ ಹೊಂದಿಕೊಳ್ಳುವಂತೆ ಆಹಾರ ತಯಾರಿಸಬೇಕು. ಸೋಂಕಿತರ ಸಂಪರ್ಕಕ್ಕೆ ಬಂದು ಕ್ವಾರಂಟೈನ್‌ ಆದವರು ಕೂಡ ಯಾವ ರೀತಿಯ ಆಹಾರ ಸೇವಿಸಬೇಕು? ಎನ್ನುವ ವಿಷಯ ಹೆಚ್ಚು ಚರ್ಚೆಯಾಗುತ್ತಿದೆ.

ಈ ಕುರಿತು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ನಿವೃತ್ತ ಆರೋಗ್ಯಾಧಿಕಾರಿ ವಿ.ಬಿ. ನಿಟಾಲಿ ’ಮನೆಯಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರು ಮತ್ತು ಕ್ವಾರಂಟೈನ್‌ ಆದವರು ಕನಿಷ್ಠ 14 ದಿನಗಳ ಕಾಲ ಮನೆಯಲ್ಲಿರಬೇಕು. ಈ ವೇಳೆ ಹೆಚ್ಚು ದೈಹಿಕ ಚಟುವಟಿಕೆಗಳು ಇರುವುದಿಲ್ಲ. ಆದ್ದರಿಂದ ಮಿತವಾಗಿ ಆಹಾರ ಸೇವಿಸಬೇಕು, ಹಣ್ಣುಗಳನ್ನು ತಿನ್ನಲು ಹೆಚ್ಚು ಒತ್ತು ಕೊಡಬೇಕು’ ಎಂದು ಸಲಹೆ ನೀಡುತ್ತಾರೆ.

ವಾತಾವರಣದಲ್ಲಿ ಏರುಪೇರಾಗುವ ಕಾರಣ ಬಿಸಿ ನೀರು, ಬಿಸಿ ಆಹಾರ ಸೇವಿಸಬೇಕು. ನೀರಿನ ಅಂಶ ಹೆಚ್ಚಿರುವ ಹಣ್ಣುಗಳನ್ನು ತಿನ್ನಬೇಕು. ನಿಂಬೆಹಣ್ಣಿನ ಪಾನಕ, ಆರೇಂಜ್‌ ಜ್ಯೂಸ್‌ ಕುಡಿಯಬೇಕು. ಹಣ್ಣುಗಳು ಅಥವಾ ಹಣ್ಣುಗಳಿಂದ ಮಾಡಿದ ಜ್ಯೂಸ್‌ ಕುಡಿಯಬೇಕು. ಬೇಯಿಸಿದ ಕಾಯಿಪಲ್ಲೆ ತಿಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಸಾಧ್ಯವಾಗುತ್ತದೆ. ಮಧುಮೇಹ ಮತ್ತು ಬೇರೆ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ವಿಷಯದಲ್ಲಿ ವೈದ್ಯರ ಮಾರ್ಗದರ್ಶನ ಪಡೆಯುವುದು ಉತ್ತಮ ಎಂದು ಅವರು ಹೇಳಿದರು.

ಕೋವಿಡ್‌ ಆದವರು ವಿಟಮಿನ್‌ ’ಸಿ‘ ಅಂಶ ಇರುವ ಲಿಂಬೆಹಣ್ಣಿನ ಪಾನಕ ಕುಡಿಯುವುದು ಉತ್ತಮ. ಅಡುಗೆಯಲ್ಲಿ ಲಿಂಬೆಹಣ್ಣು ಸಾಧ್ಯವಾದಷ್ಟು ಹೆಚ್ಚು ಬಳಸಬೇಕು ಎಂದರು.

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಔಷಧೀಯ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಹಸಬಿ ’ಕೋವಿಡ್‌ ಕಾಲದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅಗತ್ಯವಿರುತ್ತದೆ. ಬಹುತೇಕ ಎಲ್ಲ ಹಣ್ಣುಗಳಲ್ಲಿ ಒಂದಲ್ಲ ಒಂದು ರೋಗ ನಿರೋಧಕ ಶಕ್ತಿ ಇದ್ದೇ ಇರುತ್ತದೆ. ಆದ್ದರಿಂದ ಹಣ್ಣುಗಳನ್ನು ತಿನ್ನುವುದು ಆದ್ಯತೆಯಾಗಿರಬೇಕು‘ ಎಂದು ಹೇಳಿದರು.

ಅಭಿಯಾನ: ಕೋವಿಡ್‌ ಬಂದರೂ ನಗರದ ಬಹಳಷ್ಟು ಜನ ಈಗಲೂ ಜಂಕ್‌ ಫುಡ್‌ಗಳನ್ನು ತಿನ್ನುವುದು ಬಿಟ್ಟಿಲ್ಲ. ಆದರೆ, ಗ್ರಾಮೀಣ ಪ್ರದೇಶಗಳ ಜನ ಎಂದಿನಂತೆ ಸಹಜವಾಗಿ ಜೋಳದ ರೊಟ್ಟಿ, ಚಪಾತಿ, ಮುದ್ದೆ ತಿಂದು ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ.

ಮುಖ್ಯವಾಗಿ ಯುವಕರು ನಮಗೆ ಏನೂ ಆಗುವುದಿಲ್ಲ ಎನ್ನುವ ಮನೋಭಾವದಿಂದ ಹೊರಗಡೆ ತಿನ್ನುತ್ತಿದ್ದಾರೆ. ಇಂಥವರಲ್ಲಿ ಅರಿವು ಮೂಡಿಸುವ ಸಲುವಾಗಿ ಬೆಳಗಾವಿ ಜಿಲ್ಲೆ ಮೂಡಲಗಿಯ ಸಿನಿಮಾ ಕಲಾವಿದ ಮಂಜುನಾಥ ರೇಳೆಕರ ಸಾವಯವ ಆಹಾರ ಸೇವನೆಯ ಅಗತ್ಯ ಕುರಿತು ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.

ಮಂಜುನಾಥ ಅವರ ಕಾರ್ಯಕ್ಕೆ ಬೇತಾಳ, ಕಲಿವೀರ ಮತ್ತು ಐ ಹೇಟ್‌ ಯು ಚಿತ್ರ ತಂಡಗಳು ಕೈ ಜೋಡಿಸಿದ್ದು, ’ಸಾವಯವ ಆಹಾರಗಳ ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿವಳಿಕೆ ಮೂಡಿಸಲು ವಿಡಿಯೊ ತುಣುಕುಗಳನ್ನು ಸಿದ್ಧಪಡಿಸಲಾಗಿದೆ. ಭಿತ್ತಿಪತ್ರಗಳ ಮೂಲಕವೂ ಅರಿವು ಮೂಡಿಸಲಾಗುತ್ತಿದೆ‘ ಎಂದು ಮಂಜುನಾಥ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT