ಆಷಾಢಮಾಸ ಕಾಲಿಡುವ ಹೊತ್ತಿನಲ್ಲಿ, ನಾನು ದಕ್ಷಿಣ ಕನ್ನಡದಿಂದ ಕೊಡಗಿಗೆ ಮದುವೆಯಾಗಿ ಬಂದವಳು. ಈಗಿನಂತೆ ಆಗಲೂ ಜಡಿಗುಟ್ಟುವ ಮಳೆ. ದಕ್ಷಿಣ ಕನ್ನಡದವರು ಆಷಾಢ ಮಾಸಕ್ಕೆ ‘ಆಟಿ’ ಎಂದು ಕರೆದರೆ, ಕೊಡಗಿನವರು ‘ಕಕ್ಕಡ’ ಎನ್ನುತ್ತಾರೆ. ಆದರೆ ಇದು ಮಲೆನಾಡು ಹಾಗೂ ಇತರ ಪ್ರದೇಶಗಳ ಭೌಗೋಳಿಕ ಪರಿಸರ, ಸನ್ನಿವೇಶಗಳಿಗೆ ಪೂರಕವಾಗಿ ವರ್ಷಂಪ್ರತಿ ತಾರೀಕಿನಲ್ಲಿ ಕೊಂಚ ವ್ಯತ್ಯಾಸ ಹೊಂದಿರುತ್ತದೆ. ಜುಲೈ ಮಧ್ಯಭಾಗದಿಂದ ಆಗಸ್ಟ್ ಮಧ್ಯಭಾಗದವರೆಗೆ ಕಕ್ಕಡ ಮಾಸವಾಗಿದೆ. ಕಕ್ಕಡ ಎಂಬ ಪದವು ಕರ್ಕಾಟಕದಿಂದ ಕರ್ಕಾಟವಾಗಿ ಕಕ್ಕಡವಾಗಿದೆ.

ಕಕ್ಕಡ ಮಾಸವು ಕೊಡಗಿನವರಿಗೆ ವಿಶಿಷ್ಟವಾದ ತಿಂಗಳು. ಕೊಡಗು ಕೃಷಿ ಪ್ರಧಾನವಾದ ಜಿಲ್ಲೆ. ಈ ತಿಂಗಳಿನಲ್ಲಿ ಭತ್ತದ ನಾಟಿ ಮುಗಿದಿರುತ್ತದೆ. ವರ್ಷದ 11 ತಿಂಗಳು ದುಡಿಯುವ ರೈತರಿಗೆ ಕೊಂಚ ವಿಶ್ರಾಂತಿ ಸಿಗುವುದು ಈ ತಿಂಗಳಿನಲ್ಲಿ ಮಾತ್ರ. ಕಕ್ಕಡ ಮಾಸದಲ್ಲಿ ಬಿಡದೆ ಮಳೆ ಸುರಿಯುವುದರಿಂದ ಕೃಷಿ ಕೆಲಸ ಮಾಡಲೂ ಸಾಧ್ಯವಾಗುವುದಿಲ್ಲ.

ಕಕ್ಕಡ ತಿಂಗಳಿನ ಒಂದು ದಿನ ನನ್ನ ತೋಟದ ಕೆಲಸದವಳು ‘ಅಕ್ಕಾ, ಇವತ್ತು ಕಕ್ಕಡ (ಆಟಿ) ಹದಿನೆಂಟು. ಆಟಿ ಪಾಯಸ ಮಾಡಲಿಲ್ವಾ?’ ಎಂದು ಕೇಳಿದಳು. ಅದುವರೆಗೂ ನಾನು ಆ ಹೆಸರನ್ನೇ ಕೇಳಿರಲಿಲ್ಲ. ದಕ್ಷಿಣ ಕನ್ನಡದವರಿಗೆ ಆಷಾಢಮಾಸದಲ್ಲಿ ಮರಕೆಸುವಿನ ಪತ್ರೊಡೆಯೇ ವಿಶೇಷ ಖಾದ್ಯ. ಅದನ್ನು ನಾನು ಮಾಡಿ ತಿಂದಿದ್ದೆ, ಎಲ್ಲರಿಗೂ ಹಂಚಿದ್ದೆ.

‘ಕಡ್ಲೆಬೇಳೆ ಪಾಯಸ, ಹೆಸ್ರುಬೇಳೆ ಪಾಯಸ, ಅಕ್ಕಿ ಪಾಯಸ ಗೊತ್ತು. ಅದು ಯಾವುದು ಆಟಿ ಪಾಯಸ’ ಕೇಳಿದೆ. `ಅದು ಮದ್ದು ಸೊಪ್ಪು ಅಥವಾ ಆಟಿ ಸೊಪ್ಪು ಎಂಬ ಸಸ್ಯದಿಂದ ಮಾಡುವ ಪಾಯಸ. ಕಕ್ಕಡ 18ರಂದು ಈ ಪಾಯಸವನ್ನು ಕುಡಿಯಲೇಬೇಕು ಎಂಬ ನಂಬಿಕೆ ಹಿಂದಿನಿಂದಲೂ ನಡೆದುಬಂದಿದೆ. ಕಕ್ಕಡ ಹದಿನೆಂಟಕ್ಕೆ ಈ ಸೊಪ್ಪಿಗೆ 18 ಔಷಧಿಗಳು ಬಂದು ಸೇರಿಕೊಳ್ಳುತ್ತವಂತೆ. ಇಂದು ಕೊಡಗಿನ ಎಲ್ಲರ ಮನೆಗಳಲ್ಲೂ ಆಟಿ ಪಾಯಸ ಮಾಡಿಯೇ ಮಾಡುತ್ತಾರೆ. ನಾನು ಸೊಪ್ಪು ತರುತ್ತೇನೆ, ನೀವು ಪಾಯಸ ಮಾಡಿ’ ಎನ್ನುತ್ತಾ ಹೊರಗೋಡಿದಳು. ಸ್ವಲ್ಪ ಹೊತ್ತಿನಲ್ಲಿ ಎಲ್ಲಿಂದಲೋ ದಂಟಿನಿಂದ ಕೂಡಿದ ಸೊಪ್ಪಿನ ದೊಡ್ಡ ಕಟ್ಟು ತಂದಳು. ‘ದಂಟಿನ ಸಮೇತ ಸೊಪ್ಪನ್ನು ನೀರಲ್ಲಿ ಕುದಿಸಿ, ಸೊಪ್ಪನ್ನು ಸೋಸಿ ತೆಗೆದು, ಆ ನೀರಲ್ಲೇ ಅಕ್ಕಿ ಬೇಯಿಸಿ ತೆಂಗಿನ ಹಾಲು, ಬೆಲ್ಲ ಸೇರಿಸಿ ಕುದಿಸಿದರೆ ಪಾಯಸ ರೆಡಿ. ತಿನ್ನುವಾಗ ತುಪ್ಪ ಮತ್ತು ಜೇನು ಬೆರೆಸಿದರೆ ಇನ್ನೂ ರುಚಿ’ ಎಂದಳು.

ಅವಳು ಹೇಳಿದಂತೆ ಪಾಯಸ ಮಾಡಿದೆ. ಆಶ್ಚರ್ಯವೆಂದರೆ, ಸೊಪ್ಪಿನ ರಸದಿಂದ ಮಾಡಿದ್ದರೂ ಪಾಯಸ ಹಸಿರಾಗಿ ಇರದೆ ಕಡು ನೇರಳೆ ಬಣ್ಣದಿಂದ ಕೂಡಿತ್ತು. ಆಗ ತಾನೇ ಕಾಯಿಸಿದ ಘಮಘಮ ತುಪ್ಪ, ನಮ್ಮದೇ ತೋಟದ ಜೇನು ಬೆರೆಸಿ ಮನೆಮಂದಿಯೆಲ್ಲ ಸವಿದೆವು. ಅದ್ಭುತ ಸ್ವಾದ! ಅಂಥ ರುಚಿಯ ಪಾಯಸವನ್ನೇ ನಾನು ಕುಡಿದಿರಲಿಲ್ಲ. ಅಂದು ರಾತ್ರಿ ಮತ್ತು ಮರುದಿನ ನಾನು ಮೂತ್ರ ಮಾಡಿದಾಗ ಅದು ಕೆಂಪು ಬಣ್ಣಕ್ಕೆ ತಿರುಗಿದ್ದನ್ನು ಗಮನಿಸಿದೆ. ಡಾಕ್ಟರ್ ಹತ್ತಿರ ಹೋಗುವುದಾ ಎಂದು ವಿಚಾರ ಮಾಡುತ್ತಿರುವಾಗ ಕೆಲಸದವಳು ಬಂದಳು. ಅವಳಲ್ಲಿ ವಿಷಯ ಹೇಳಿದೆ. ‘ಓ! ಅದಾ, ಹೇಳಲು ಮರೆತಿದ್ದೆ. ಆಟಿ ಪಾಯಸ ತಿಂದರೆ ಮೂತ್ರದ ಬಣ್ಣ ಕೆಂಪಾಗುತ್ತದೆ. ಅದು ಸಹಜ. ಹೆದರುವ ಅಗತ್ಯವಿಲ್ಲ’ ಎಂದಳು.

ಇದಾಗಿ ಈಗ ಮೂವತ್ತು ವರ್ಷಗಳೇ ಕಳೆದಿವೆ. ಈಗಲೂ ಕೊಡಗಿನ ಮನೆ ಮನೆಗಳಲ್ಲಿ ಕಕ್ಕಡ ಮಾಸದ 18ನೇ ದಿನ ಆಟಿ ಪಾಯಸ ಮಾಡುತ್ತಾರೆ. ದೂರದ ಊರಿನಲ್ಲಿರುವವರು ಆಟಿ ಪಾಯಸ ಸೇವಿಸಲೆಂದೇ ಅಂದು ಮನೆಗೆ ಬರುತ್ತಾರೆ. ಕೊಡಗಿನ ಹೋಮ್ಸ್ಟೇಗಳಲ್ಲಿ, ಕೆಲವೊಂದು ಹೋಟೆಲ್ಗಳಲ್ಲೂ ಈ ದಿನ ಆಟಿ ಪಾಯಸ ಲಭ್ಯ. ಕಕ್ಕಡ 17ರ ದಿನವೇ ಮಾರುಕಟ್ಟೆಗಳಲ್ಲಿ, ಸಂತೆಗಳಲ್ಲಿ, ಬೀದಿ ಬದಿಯಲ್ಲಿ ಆಟಿ ಸೊಪ್ಪಿನ ದೊಡ್ಡ ಗುಡ್ಡೆ ಹಾಕಿ ಮಾರಾಟ ಮಾಡುವುದನ್ನು ಕಾಣಬಹುದು. ಆಟಿ ಸೊಪ್ಪಿನ ಗಿಡದ ವೈಜ್ಞಾನಿಕ ಹೆಸರು ‘ಜಸ್ಟಿಸಿಯ ವೈನಾಡೆನ್ಸಿಸ್’ (Justicia wynaadensis).

ಆಶ್ಚರ್ಯವೆಂದರೆ, ಕಕ್ಕಡ ಹದಿನೆಂಟರ ಆಸುಪಾಸು ಹೊರತು ಪಡಿಸಿದರೆ ಬೇರೆ ದಿನಗಳಲ್ಲಿ ಈ ಸೊಪ್ಪಿನಿಂದ ತೆಗೆದ ನೀರಿಗೆ ವಿಶೇಷ ಪರಿಮಳವಾಗಲಿ, ನೇರಳೆ ಬಣ್ಣವಾಗಲಿ ಇರುವುದಿಲ್ಲ. ಇದು ಈ ಗಿಡದ ವೈಶಿಷ್ಟ್ಯ. ಕಕ್ಕಡ ತಿಂಗಳ ಮೊದಲ ದಿನದಿಂದ ಹದಿನೆಂಟನೇ ದಿನದ ತನಕ ಹದಿನೆಂಟು ಬಗೆಯ ಔಷಧೀಯ ಗುಣಗಳು ಇದರಲ್ಲಿ ಸೇರುತ್ತವೆ ಎಂಬುದು ಪ್ರತೀತಿ. ಅಲ್ಲದೆ ಕಕ್ಕಡ 18 ಕಳೆದ ನಂತರ ಈ ಸಸ್ಯದಲ್ಲಿ ಔಷಧೀಯ ಗುಣಗಳು ಒಂದೊಂದಾಗಿ ಕಡಿಮೆಯಾಗುತ್ತಾ ಬರುತ್ತವೆ ಎಂದು ಹಿರಿಯರು ಹೇಳುತ್ತಾರೆ. ಆಟಿ ಸೊಪ್ಪಿನಲ್ಲಿ ರೋಗನಿರೋಧಕ ಶಕ್ತಿ ಇರುವುದನ್ನು ಹಿರಿಯರು ಮನಗಂಡಿದ್ದರು.

ಅಂದಹಾಗೆ ಕಕ್ಕಡ ಮಾಸದ ಉಳಿದ ದಿನವೂ ಆಟಿ ಸೊಪ್ಪಿನಿಂದ ಪಾಯಸ ಮಾಡಿ ಕುಡಿಯಹುದು. ಕುಡಿಯುತ್ತಾರೆ ಕೂಡ. ಆದರೆ ಸೊಪ್ಪಿಗೆ 18ನೇ ದಿನಕ್ಕಿರುವ ಔಷಧೀಯ ಗುಣ ಉಳಿದ ದಿನ ಇರುವುದಿಲ್ಲ ಎಂಬುದು ಹಿರಿಯರ ಮಾತು.

ಕೊಡಗಿನ ಹೆಣ್ಣುಮಕ್ಕಳು ಇತ್ತೀಚಿನ ದಿನಗಳಲ್ಲಿ ಪಾಯಸ ಮಾತ್ರವಲ್ಲದೆ ಸೊಪ್ಪು ಕುದಿಸಿದ ನೀರನ್ನು ಬಳಸಿ ಹಲ್ವ, ತಟ್ಟೆಪುಟ್ಟು, ಇಡ್ಲಿ ಹೀಗೆ ಬಗೆಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಕಕ್ಕಡ ಹದಿನೆಂಟನ್ನು (ಪದ್ನೆಟ್ಟ್) ಕೊಡಗಿನವರು ಹಬ್ಬವಾಗಿ ಆಚರಣೆ ಮಾಡುತ್ತಾರೆ. ಧೋ ಎಂದು ಮಳೆ ಸುರಿಯುವ ಆಷಾಢ ಮಾಸದಲ್ಲಿ ಥಂಡಿ ಹವೆಯ ಕಾರಣವಾಗಿ ಜ್ವರ, ಶೀತ, ಕೆಮ್ಮಿನಂತಹವುಗಳಿಂದ ಮುಕ್ತಿ ಪಡೆಯಲು ರೋಗನಿರೋಧಕ ಶಕ್ತಿಯುಳ್ಳ ಆಹಾರವನ್ನು ಸೇವಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಇದನ್ನು ಆಚರಿಸಲಾಗುತ್ತದೆ. ಕೊಡಗಿನ ಬೆಟ್ಟಗುಡ್ಡಗಳು, ತೋಟಗಳು, ಮನೆಯಂಗಳದಲ್ಲಿ ಈ ಸಸ್ಯ ಯಾವ ಆರೈಕೆಯೂ ಇಲ್ಲದೆ ಬೆಳೆಯುತ್ತದೆ.

ಜುಲೈ 17ರಿಂದ ಕಕ್ಕಡ ಒಂದರ ಲೆಕ್ಕಾಚಾರದಂತೆ ಈ ಸಾರಿ ನಾಳೆ (ಆ. 3) ಕಕ್ಕಡ ಹದಿನೆಂಟರ ದಿನ. ಅಂದು, ಕೊಡಗಿನ ಮನೆ ಮನೆಯಲ್ಲೂ ಘಮಘಮಿಸುವ ಆಟಿ ಪಾಯಸದ ಪರಿಮಳ. ನಾನೂ ಮಾಡುವವಳಿದ್ದೇನೆ. ನೀವು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.