ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್ ಸಂಭ್ರಮಕ್ಕೆ ಬಿರಿಯಾನಿ ಘಮ

Last Updated 10 ಮೇ 2019, 19:31 IST
ಅಕ್ಷರ ಗಾತ್ರ

ಫಿಶ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು:
ನೆನೆಸಿಡಲು: ಮೀನು – ಅರ್ಧ ಕೆ.ಜಿ., ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – 1ಟೇಬಲ್ ಚಮಚ, ಕೆಂಪು ಮೆಣಸಿನ ಪುಡಿ – 1/2 ಚಮಚ, ಬಿರಿಯಾನಿ ಮಸಾಲಾ – 1/2 ಚಮಚ, ಅರಿಸಿನ – ಚಿಟಿಕೆ, ನಿಂಬೆರಸ – 1 , 1/2ಚಮಚ, ಉಪ್ಪು – ರುಚಿಗೆ

ಮಸಾಲೆಗೆ: ದಾಲ್ಚಿನ್ನಿ ಎಲೆ – 1, ದಾಲ್ಚಿನ್ನಿ – 1ಇಂಚು, ಬಿರಿಯಾನಿ ಹೂ – 1, ಲವಂಗ – 5, ಏಲಕ್ಕಿ – 3, ಸೋಂಪು – 1/2 ಚಮಚ
ಬಿರಿಯಾನಿ ಗ್ರೇವಿ ತಯಾರಿಸಲು: ಎಣ್ಣೆ – 3 ಚಮಚ, ಹೆಚ್ಚಿದ ಈರುಳ್ಳಿ – 3/4 ಕಪ್‌

ಚಿಕ್ಕ ಟೊಮೆಟೊ – 1, ಜಾಪತ್ರೆ – 1 ಚಿಕ್ಕದು, ಶುಂಠಿ– ಬೆಳ್ಳುಳ್ಳಿ ಪೇಸ್ಟ್‌ – 1/4 ಚಮಚ, ಬಿರಿಯಾನಿ ಮಸಾಲ – 1 ಚಮಚ, ಕೊತ್ತಂಬರಿ ಪುಡಿ – 1/2 ಚಮಚ, ಕೆಂಪುಮೆಣಸಿನ ಪುಡಿ – 1/2 ಚಮಚ, ಮೊಸರು – 3/4 ಕಪ್‌, ಪುದಿನ – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ

ಬಿರಿಯಾನಿ ರೈಸ್‌ಗೆ: ಬಾಸುಮತಿ ಅಕ್ಕಿ – 1 1/2 ಕಪ್‌, ಉಪ್ಪು – ರುಚಿಗೆ, ಎಣ್ಣೆ – 1 ಟೇಬಲ್ ಚಮಚ

ಬಿರಿಯಾನಿ ತಯಾರಿಸಲು: ಮೀನನ್ನು ಹೊರತುಪಡಿಸಿ ಮೇಲೆ ನೆನೆಸಿಡಲು ತಿಳಿಸಿದ ಎಲ್ಲಾ ಪದಾರ್ಥಗಳನ್ನು ಪಾತ್ರೆಯೊಂದರಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಆ ಪೇಸ್ಟ್‌ನಲ್ಲಿ ಮೀನನ್ನು ಸೇರಿಸಿ ನೆನೆಸಿಡಿ. ಅನ್ನ ಮಾಡಿಕೊಳ್ಳುವ ಮೊದಲು ಹದವಾಗಿ ನೀರು, ಉಪ್ಪು, ಎಣ್ಣೆ ಸೇರಿಸಿ. ಅನ್ನ ಉದುರುದುರಾಗಿರಲಿ.

ಪ್ಯಾನ್ ಒಂದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೀನು ಹಾಗೂ ಮಸಾಲಾ ಚೆನ್ನಾಗಿ ಬೇಯುವವರೆಗೂ ಫ್ರೈ ಮಾಡಿ. ನಂತರ ಪಾತ್ರೆಯೊಂದರಲ್ಲಿ ಎಣ್ಣೆ ಹಾಕಿ ಅದಕ್ಕೆ ಮೇಲೆ ಹೇಳಿದ ಮಸಾಲೆ ಪದಾರ್ಥಗಳನ್ನು ಸೇರಿಸಿ ಹುರಿಯಿರಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ವಾಸನೆ ಹೋಗುವವರೆಗೂ ಹುರಿಯಿರಿ. ನಂತರ ಟೊಮೆಟೊ ಸೇರಿಸಿ ನುಣ್ಣಗೆ ಪೇಸ್ಟ್ ಆಗುವವರೆಗೂ ಮಿಕ್ಸ್ ಮಾಡುತ್ತಿರಿ. ಅದಕ್ಕೆ ಬಿರಿಯಾನಿ ಮಸಾಲೆ, ಕೊತ್ತಂಬರಿ ಪುಡಿ, ಕೆಂಪುಮೆಣಸಿನ ಪುಡಿ ಸೇರಿಸಿ ಸ್ವಲ್ಪ ಹುರಿದು ಕೆಳಗಿಳಿಸಿ. ನಂತರ ಮೊಸರು ಹಾಗೂ ತೆಂಗಿನಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಚೆನ್ನಾಗಿ ಕುದಿಸಿ ಒಂದೆಡೆ ಇರಿಸಿಕೊಳ್ಳಿ. ನಂತರ ಪಾತ್ರೆಯೊಂದರಲ್ಲಿ ಮೊದಲು ಸ್ವಲ್ಪ ಬಿರಿಯಾನಿ ನಂತರ ಕುದಿಸಿಟ್ಟುಕೊಂಡ ಗ್ರೇವಿ, ನಂತರ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಹಾಗೂ ಪುದಿನ, ಅದರ ಮೇಲೆ ಹುರಿದಿಟ್ಟುಕೊಂಡ ಮೀನು, ಹೀಗೆ 3 ಲೇಯರ್ ತಯಾರಿಸಿ. ನಂತರ ಇದನ್ನು 2 ನಿಮಿಷ ಜೋರಾದ ಉರಿಯಲ್ಲಿ ಹಾಗೂ 10 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಈಗ 15 ನಿಮಿಷ ಬಿಟ್ಟು ರಾಯಿತದೊಂದಿಗೆ ಮೀನಿನ ಬಿರಿಯಾನಿ ಸರ್ವ್ ಮಾಡಿ.

ಖೀಮಾ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಬಾಸುಮತಿ – 1/2 ಕೆ.ಜಿ., ಮೊಸರು – 3 ಟೇಬಲ್ ಚಮಚ, ಶುಂಠಿ – ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ, ತುಪ್ಪ – 100 ಗ್ರಾಂ, ಕೇಸರಿ – 1 ಟೀ ಚಮಚ, ಕಪ್ಪು ಏಲಕ್ಕಿ – 3, ಕೆಂಪುಮೆಣಸಿನ ಪುಡಿ – 1 ಟೇ ಚಮಚ, ನಿಂಬೆರಸ – 1 ಟೇಬಲ್ ಚಮಚ, ಚಿಕನ್ ತುಂಡುಗಳು – 400 ಗ್ರಾಂ, ದೊಡ್ಡ ಈರುಳ್ಳಿ – 1, ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ, ಹಾಲು – 1/2 ಕಪ್‌, ದಾಲ್ಚಿನ್ನಿ – 1/2 ತುಂಡು, ಲವಂಗ – 4, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ಉಪ್ಪು, ನೀರು ಸೇರಿಸಿ ಅರ್ಧ ಬೇಯಿಸಿಟ್ಟುಕೊಳ್ಳಿ. ನಂತರ ನೀರನ್ನು ಬಸಿದು, ಕೇಸರಿ ನೀರು ಸೇರಿಸಿ ಬದಿಗಿರಿಸಿ. ಪಾತ್ರೆಯೊಂದರಲ್ಲಿ ತುಪ್ಪ ಹಾಕಿ, ಅದು ಬಿಸಿಯಾದ ಮೇಲೆ ಹೆಚ್ಚಿದ ಈರುಳ್ಳಿ ಸೇರಿಸಿ, ಹುರಿಯಿರಿ. ನಂತರ ಎಲ್ಲಾ ಮಸಾಲೆ ಪದಾರ್ಥಗಳನ್ನು ಸೇರಿಸಿ, ಮಿಕ್ಸ್ ಮಾಡಿ. ಆ ಮಿಶ್ರಣಕ್ಕೆ ಚಿಕನ್‌ ಮಾಂಸ ಹಾಗೂ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಿಕ್ಸ್ ಮಾಡಿ. ನಂತರ ಅದನ್ನು 6ರಿಂದ 7 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ಅದಕ್ಕೆ ಉಪ್ಪು ಸೇರಿಸಿ. ನಾವು ಮೊದಲೇ ಅನ್ನಕ್ಕೆ ಉಪ್ಪು ಸೇರಿಸಿದ್ದೇವೆ ಎಂಬುದು ತಲೆಯಲ್ಲಿ ಇರಲಿ. ಈಗ ಮಿಶ್ರಣ ಚೆನ್ನಾಗಿ ಬೆಂದು, ಪರಿಮಳ ಬರುತ್ತಿದೆ ಎಂದಾಗ ಮೊಸರು ಹಾಗೂ ಮೆಣಸಿನ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ 3ರಿಂದ 4 ನಿಮಿಷ ಕುದಿಸಿ. ಖೀಮಾ ಚೆನ್ನಾಗಿ ಕುದಿದು ಹಸಿ ವಾಸನೆ ಹೋಗಬೇಕು. ನಂತರ ಅದನ್ನು ಕೆಳಗಿರಿಸಿ ಪಾತ್ರೆಯೊಂದನ್ನು ತೆಗೆದುಕೊಂಡು ಅರ್ಧ ಬೇಯಿಸಿದ ಅನ್ನವನ್ನು ಹಾಕಿ ಅದರ ಮೇಲೆ ತಯಾರಿಸಿಟ್ಟುಕೊಂಡ ಖೀಮಾ ಹಾಕಿ. ನಂತರ ಸ್ವಲ್ಪ ಕೇಸರಿ ನೀರು ಹಾಗೂ ನಿಂಬೆರಸ ಚುಮುಕಿಸಿ. ನಂತರ ಮತ್ತೊಂದು ಲೇಯರ್ ಅನ್ನ, ನಿಂಬೆರಸ, ಕೇಸರಿ ನೀರು ಹೀಗೆ ಮೂರು ಲೇಯರ್ ಸೇರಿಸಿ ನಂತರ ಇದನ್ನು ಮಧ್ಯಮ ಉರಿಯಲ್ಲಿ 15 ನಿಮಿಷಗಳ ಕಾಲ ಬೇಯಿಸಿ. ಈಗ ಖೀಮಾ ಬಿರಿಯಾನಿ ಸವಿಯಲು ಸಿದ್ಧ.

ಸಿಗಡಿ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಸಿಗಡಿ – 1/2 ಕಪ್‌, ಅಕ್ಕಿ – 1ಕಪ್‌, ಈರುಳ್ಳಿ – 1, ಟೊಮೆಟೊ – 1‌, ಕೆಂಪು ಮೆಣಸಿನ ಪುಡಿ – 1 ಟೀ ಚಮಚ, ಕೊತ್ತಂಬರಿ ಪುಡಿ – 1/2 ಟೀ ಚಮಚ, ಗರಂ ಮಸಾಲಾ– 1/2 ಟೀ ಚಮಚ, ಮೊಸರು – 2 ಚಮಚ, ಎಣ್ಣೆ – 1 ಚಮಚ.

ರುಬ್ಬಿಕೊಳ್ಳಲು: ಪುದೀನ – 1/4 ಕಪ್‌, ಕೊತ್ತಂಬರಿ ಸೊಪ್ಪು – 1/4 ಕಪ್‌, ಹಸಿಮೆಣಸು – 1

ಮಸಾಲೆಗೆ: ದಾಲ್ಚಿನ್ನಿ ಎಲೆ – 1, ನಕ್ಷತ್ರ ಮೊಗ್ಗು – 1, ಲವಂಗ – 1, ಚಕ್ಕೆ – 1, ಏಲಕ್ಕಿ – 1‌, ಸೋಂಪು – 1/4 ಟೀ ಚಮಚ

ತಯಾರಿಸುವ ವಿಧಾನ: ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷ ನೀರಿನಲ್ಲಿ ನೆನೆಸಿಡಿ. ಕೊತ್ತಂಬರಿ ಸೊಪ್ಪು, ಪುದೀನ, ಟೊಮೆಟೊ, ಈರುಳ್ಳಿ ಕತ್ತರಿಸಿ ಒಂದೆಡೆ ಇರಿಸಿಕೊಳ್ಳಿ. ಸಿಗಡಿಯನ್ನು ತೊಳೆದು ಇರಿಸಿಕೊಳ್ಳಿ. ನಂತರ ಪುದೀನ, ಕೊತ್ತಂಬರಿ, ಹಸಿಮೆಣಸು ಸೇರಿಸಿ ನೀರು ಹಾಕದೇ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಕುಕ್ಕರ್‌ಗೆ ಎಣ್ಣೆ ಹಾಕಿ ಮಸಾಲೆ ಸಾಮಗ್ರಿ ಹಾಗೂ ಈರುಳ್ಳಿ ಸೇರಿಸಿ ಹುರಿಯಿರಿ. ನಂತರ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ನಂತರ ಅದಕ್ಕೆ ರುಬ್ಬಿಕೊಂಡ ಮಿಶ್ರಣ ಸೇರಿಸಿ ಕೈಯಾಡಿಸಿ. ಅದಕ್ಕೆ ಟೊಮೆಟೊ, ಕೆಂಪು ಮೆಣಸಿನಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ. ಟೊಮೆಟೊ ಬೇಯುವವರೆಗೂ ಕೈಯಾಡಿಸಿ. ಟೊಮೆಟೊ ಚೆನ್ನಾಗಿ ಬೆಂದ ಮೇಲೆ ಸಿಗಡಿ ಸೇರಿಸಿ ಮಿಕ್ಸ್ ಮಾಡಿ, ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಕುದಿಸಿ. ಈ ಎಲ್ಲವೂ ಚೆನ್ನಾಗಿ ಮಿಕ್ಸ್ ಆದ ಮೇಲೆ ನೆನೆಸಿಟ್ಟ ಅಕ್ಕಿಯನ್ನು ಸೇರಿಸಿ, ಬೇಕಾದಷ್ಟು ನೀರು ಹಾಕಿ. ಕುಕ್ಕರ್‌ನಲ್ಲಿ 3 ವಿಷಲ್ ಹಾಕಿಸಿ. ಈಗ ಸಿಗಡಿ ಬಿರಯಾನಿ ತಿನ್ನಲು ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT