ಗುರುವಾರ , ಆಗಸ್ಟ್ 5, 2021
21 °C

ಏಡಿಯೂ ಸುಕ್ಕ ಚಟ್ನಿಯೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಳೆಗಾಲ ಬಂತೆಂದರೆ ಕರಾವಳಿ ಭಾಗದ ಗದ್ದೆ, ತೋಡುಗಳಲ್ಲಿ ಸಂಜೆ ವೇಳೆ ಟಾರ್ಚ್ ಬೆಳಕು ಮಿನುಗುತ್ತಿರುತ್ತದೆ. ಎಲ್ಲರೂ ಏಡಿ ಹಾಗೂ ಹೊಗೆಮೀನು ಹಿಡಿಯುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಅಪರೂಪಕ್ಕೆ ಸಿಗುವ ಮಳೆಗಾಲದ ಏಡಿ ಹಾಗೂ ಹೊಗೆಮೀನಿನ ರುಚಿಯನ್ನು ಸವಿದೇ ನೋಡಬೇಕು. ಅದರಲ್ಲೂ ಏಡಿ ಕರಾವಳಿ ಭಾಗದ ಬಹುಜನರ ನೆಚ್ಚಿನ ಮಾಂಸಾಹಾರಿ ಖಾದ್ಯ. ಏಡಿ ಚಟ್ನಿಯನ್ನು ವರ್ಷದಲ್ಲಿ ಒಮ್ಮೆಯಾದರೂ ತಿಂದೇ ತಿನ್ನುತ್ತಾರೆ. ಏಡಿಯ ಕರಿ, ಸುಕ್ಕ ಕೂಡ ಅತ್ಯಂತ ರುಚಿಕರ ಎನ್ನುತ್ತಾರೆ ರೇಷ್ಮಾ.

ಏಡಿ ಸುಕ್ಕಾ

ಬೇಕಾಗುವ ಸಾಮಗ್ರಿ: ಏಡಿ – 10, ಅರಿಸಿನ ಪುಡಿ – ಚಿಟಿಕೆ, ಸಾಸಿವೆ – 1 ಟೀ ಚಮಚ, ಮೆಂತ್ಯೆಕಾಳು – 1/2 ಟೀ ಚಮಚ, ಜೀರಿಗೆ – 1 ಟೀ ಚಮಚ, ಕೊತ್ತಂಬರಿ ಕಾಳು – 2 ಟೀ ಚಮಚ, ಕಾಳುಮೆಣಸು – 6 ಕಾಳು,  ಒಣಮೆಣಸು – 10, ಬೆಳ್ಳುಳ್ಳಿ – 10 ಎಸಳು, ಮಧ್ಯಮ ಗಾತ್ರದ, ಈರುಳ್ಳಿ – 2 (ಹೆಚ್ಚಿಟ್ಟುಕೊಂಡಿದ್ದು), ತೆಂಗಿನತುರಿ – 1 ಕಪ್‌, ಹುಣಸೆಹಣ್ಣು – ನಿಂಬೆಹಣ್ಣಿನ ಗಾತ್ರದ್ದು, ಉಪ್ಪು – ರುಚಿಗೆ, ತೆಂಗಿನೆಣ್ಣೆ – ಸ್ವಲ್ಪ 

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ತೆಂಗಿನೆಣ್ಣೆ ಬಿಸಿ ಮಾಡಿ ಒಣಮೆಣಸಿನ ಕಾಯಿಯನ್ನು ಹುರಿದುಕೊಳ್ಳಿ. ಅದಕ್ಕೆ ಮಂತ್ಯೆಕಾಳು ಹಾಗೂ ಸಾಸಿವೆ ಸೇರಿಸಿ ಹುರಿಯಿರಿ. ನಂತರ ಜೀರಿಗೆ, ಕೊತ್ತಂಬರಿ ಕಾಳು ಹಾಗೂ ಕಾಳುಮೆಣಸು ಸೇರಿಸಿ ಪರಿಮಳ ಬರುವವರೆಗೂ ಹುರಿಯಿರಿ. ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನೀರು ಹಾಕದೆ ರುಬ್ಬಿಕೊಳ್ಳಿ. ಪುಡಿ ಮಾಡಿಕೊಂಡ ಮಿಶ್ರಣಕ್ಕೆ ಹುಣಸೆಹಣ್ಣು ಸೇರಿಸಿ ಮತ್ತೆ ರುಬ್ಬಿಕೊಳ್ಳಿ. ಪಾತ್ರೆಗೆ ಮತ್ತೆ ಒಂದು ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ತೆಂಗಿನತುರಿಯನ್ನು ಹಾಕಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದನ್ನು ಬೇರೆ ಪಾತ್ರೆಗೆ ಹಾಕಿ ಮತ್ತೆ ಅದೇ ಪಾತ್ರೆಗೆ ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಅದಕ್ಕೆ ಅರಿಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಸ್ವಚ್ಛ ಮಾಡಿಟ್ಟುಕೊಂಡ ಏಡಿ ಸೇರಿಸಿ. ಪುಡಿ ಮಾಡಿಕೊಂಡ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ 15 ನಿಮಿಷಗಳ ಕಾಲ ಪಾತ್ರೆಯನ್ನು ಮುಚ್ಚಿ ಬೇಯಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ತೆಂಗಿನತುರಿ ಸೇರಿಸಿ ಮಿಶ್ರಣ ಮಾಡಿ ಮತ್ತೆ 2 ನಿಮಿಷ ಕುದಿಸಿ ಇಳಿಸಿ. 

ಕರಿ

ಬೇಕಾಗುವ ಸಾಮಗ್ರಿಗಳು: ಏಡಿ – 5 ರಿಂದ 6, ಬೆಳ್ಳುಳ್ಳಿ – 8 ಎಸಳು, ಈರುಳ್ಳಿ ದೊಡ್ಡದು – 1, ಜೀರಿಗೆ – 1 ಚಮಚ, ಸಾಸಿವೆ – ಸ್ವಲ್ಪ, ಕೊತ್ತಂಬರಿ ಬೀಜ – 2 ಚಮಚ, ತೆಂಗಿನತುರಿ – 1 ಕಪ್‌, ಹುಣಸೆಹಣ್ಣು – ನಿಂಬೆಹಣ್ಣಿನ ಗಾತ್ರದ್ದು, ಒಣಮೆಣಸು – 8, ಅರಿಸಿನ ಪುಡಿ – ಚಿಟಿಕೆ, ಎಣ್ಣೆ – ಸ್ವಲ್ಪ, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಏಡಿಯನ್ನು ಚೆನ್ನಾಗಿ ತೊಳೆದು ಕಾಲುಗಳನ್ನು ಬೇರ್ಪಡಿಸಿಕೊಳ್ಳಿ. ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಸ್ವಲ್ಪ ಈರುಳ್ಳಿ, ಜೀರಿಗೆ, ಕೊತ್ತಂಬರಿ ಬೀಜ, ಬೆಳ್ಳುಳ್ಳಿಯನ್ನು ಹುರಿದುಕೊಳ್ಳಿ. ಅದೇ ಪಾತ್ರೆಗೆ ಮೆಣಸು ಹಾಕಿ ಹುರಿದುಕೊಳ್ಳಿ. ಈ ಎಲ್ಲವನ್ನೂ ನುಣ್ಣಗೆ ರುಬ್ಬಿಕೊಳ್ಳಿ. ಪಾತ್ರೆಯೊಂದಕ್ಕೆ 3 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಹಾಕಿ ಹುರಿಯಿರಿ. ಅದಕ್ಕೆ ಏಡಿ ಸೇರಿಸಿ ಕೈಯಾಡಿಸಿ. ಸ್ವಲ್ಪ ಸಮಯ ಎಣ್ಣೆಯಲ್ಲಿ ಬೇಯಲು ಬಿಡಿ. ನಂತರ ಉಪ್ಪು ಹಾಗೂ ನೀರು ಸೇರಿಸಿ 5 ನಿಮಿಷ ಬೇಯಿಸಿಕೊಳ್ಳಿ. ಅದಕ್ಕೆ ರುಬ್ಬಿಕೊಂಡ ಮಿಶ್ರಣ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 10 ನಿಮಿಷ ಚೆನ್ನಾಗಿ ಕುದಿಸಿ. ಈಗ ರುಚಿಯಾದ ಏಡಿ ಕರಿ ಸಿದ್ಧ. 

ಚಟ್ನಿ

ಬೇಕಾಗುವ ಸಾಮಗ್ರಿಗಳು: ಏಡಿ – 3, ಹಸಿಮೆಣಸು – 6, ಜೀರಿಗೆ – ಸ್ವಲ್ಪ, ಕೊತ್ತಂಬರಿ – ಸ್ವಲ್ಪ, ಹುಣಸೆಹಣ್ಣು – ಅರ್ಧನಿಂಬೆ ಗಾತ್ರದ್ದು, ಬೆಳ್ಳುಳ್ಳಿ – 4 ಎಸಳು, ಈರುಳ್ಳಿ – 1 ಮಧ್ಯಮ ಗಾತ್ರದ್ದು, ತೆಂಗಿನತುರಿ – 1/2 ಕಪ್‌, ಉಪ್ಪು ರುಚಿಗೆ ‌

ತಯಾರಿಸುವ ವಿಧಾನ: ಏಡಿಯನ್ನು ಕೆಂಡದಲ್ಲಿ ಸುಟ್ಟುಕೊಳ್ಳಿ. ಗ್ಯಾಸ್‌ನ ಮೇಲೂ ಸುಟ್ಟುಕೊಳ್ಳಬಹುದು. ಆದರೆ ಒಲೆಯಲ್ಲಿ ಸುಟ್ಟ ಏಡಿ ರುಚಿ ಜಾಸ್ತಿ. ಏಡಿ ಹೊರತುಪಡಿಸಿ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಕುಟ್ಟಾಣಿಯಲ್ಲಿ ಅಥವಾ ರುಬ್ಬುಗಲ್ಲಿನಲ್ಲಿ ನೀರು ಹಾಕದೆ ಕುಟ್ಟಿಕೊಳ್ಳಿ. ಆ ಮಿಶ್ರಣಕ್ಕೆ ಸುಟ್ಟುಕೊಂಡ ಏಡಿಯನ್ನು ತುಂಡರಿಸಿ ಹಾಕಿ ಮಿಶ್ರಣ ಮಾಡಿ. ಈಗ ರುಚಿಯಾದ ಏಡಿ ಚಟ್ನಿ ರೆಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು