ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಕ್‌ ಪೂರಿಗೆ ನಾಟಿ ಕೋಳಿ ಸಾರು; ಸ್ಟಾರ್ಟರ್‌ಗೆ ಸಿಗಡಿ ಫ್ರೈ

Last Updated 21 ನವೆಂಬರ್ 2020, 7:11 IST
ಅಕ್ಷರ ಗಾತ್ರ
ADVERTISEMENT
""
""
""
""

ದೊನ್ನೆ ಬಿರಿಯಾನಿ ನಾನ್‌ವೆಜ್‌ ಪ್ರಿಯರ ಅತ್ಯಂತ ಜನಪ್ರಿಯ ಡಿಶ್‌. ಈ ಬಿರಿಯಾನಿಯಲ್ಲೂ ತರಾವರಿ ಇದೆ. ಅದರಲ್ಲಿ ದೊನ್ನೆ ಬಿರಿಯಾನಿಯನ್ನು ಕರ್ನಾಟಕದಲ್ಲಿ ಎಲ್ಲರೂ ಜಾಸ್ತಿ ಇಷ್ಟ ಪಡ್ತಾರೆ. ನಾಟಿ ಸ್ಟೈಲ್‌ನ ಈ ಬಿರಿಯಾನಿ ತಿನ್ನದವರು ದುರದೃಷ್ಟವಂತರು ಬಿಡಿ.

ದೊನ್ನೆ ಬಿರಿಯಾನಿ
ದೊನ್ನೆ ಬಿರಿಯಾನಿ ನಾನ್‌ವೆಜ್‌ ಪ್ರಿಯರ ಅತ್ಯಂತ ಜನಪ್ರಿಯ ಡಿಶ್‌. ಈ ಬಿರಿಯಾನಿಯಲ್ಲೂ ತರಾವರಿ ಇದೆ. ಅದರಲ್ಲಿ ದೊನ್ನೆ ಬಿರಿಯಾನಿಯನ್ನು ಕರ್ನಾಟಕದಲ್ಲಿ ಎಲ್ಲರೂ ಜಾಸ್ತಿ ಇಷ್ಟ ಪಡ್ತಾರೆ. ನಾಟಿ ಸ್ಟೈಲ್‌ನ ಈ ಬಿರಿಯಾನಿ ತಿನ್ನದವರು ದುರದೃಷ್ಟವಂತರು ಬಿಡಿ.

ಬೇಕಾಗುವ ಸಾಮಗ್ರಿಗಳು: ಚಿಕನ್ – 1 1/2ಕೆ.ಜಿ., ಖಾರದಪುಡಿ – 3ಚಮಚ, ಅರಿಸಿನ ಪುಡಿ – ಚಿಟಿಕೆ, ಉಪ್ಪು – ರುಚಿಗೆ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಮೊಸರು – 1ಕಪ್‌, ಚಕ್ಕೆ – ಸ್ವಲ್ಪ, ಲವಂಗ – 5, ಏಲಕ್ಕಿ – 5, ಜಾಪತ್ರೆ – 1 , ಅನಾನಸ್ ಹೂ – 1, ಶಾಹಿಜೀರಾ – ಸ್ವಲ್ಪ, ಬಿರಿಯಾನಿ ಎಲೆ – 2, ಕಸೂರಿಮೇಥಿ – ಸ್ವಲ್ಪ, ಕಾಳುಮೆಣಸು – 10, ಈರುಳ್ಳಿ – 3 (ದೊಡ್ಡದು), ಹಸಿಮೆಣಸು – 10 ರಿಂದ 12, ಪುದೀನಾ ಸೊಪ್ಪು, ಮೆಂತ್ಯೆಸೊಪ್ಪು, ಕೊತ್ತಂಬರಿ ಸೊಪ್ಪು – ತಲಾ 1 ಕಪ್‌, ತುಪ್ಪ – 2 ಚಮಚ

ನೆನೆಸಿಡಲು: ತೊಳೆದು ಸ್ವಚ್ಛ ಮಾಡಿಟ್ಟುಕೊಂಡ ಚಿಕನ್ ತುಂಡುಗಳನ್ನು ಪಾತ್ರೆಯಲ್ಲಿ ಹಾಕಿ ಅದಕ್ಕೆ ಖಾರದಪುಡಿ ಎರಡು ಚಮಚ, ಅರಿಸಿನ ಚಿಟಿಕೆ, ಸ್ವಲ್ಪ ಉಪ್ಪು, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಮೊಸರು ಸೇರಿಸಿ ಎಲ್ಲವನ್ನು ಮಿಶ್ರಣ ಮಾಡಿ 15ರಿಂದ 20 ನಿಮಿಷಗಳ ಕಾಲ ನೆನೆಯಲು ಬಿಡಿ.

ಮಸಾಲೆ ತಯಾರಿಸಿಕೊಳ್ಳಲು: ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆ ಬಿಸಿಮಾಡಿ. ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಕತ್ತರಿಸಿಕೊಂಡ ಈರುಳ್ಳಿ, ಹಸಿಮೆಣಸು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಅದು ತಣ್ಣದಾಗ ಮೇಲೆ ಮಿಕ್ಸಿಗೆ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ಇನ್ನೊಂದು ಪ್ಯಾನ್‌ನಲ್ಲಿ ಒಂದು ಚಮಚ ಎಣ್ಣೆ ಹಾಕಿ ಅದಕ್ಕೆ ಪುದಿನ ಸೊಪ್ಪು, ಮೆಂತ್ಯೆ ಸೊಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಅದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ದಪ್ಪ ತಳದ ಅಗಲವಾದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ. ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಜಾಪತ್ರೆ, ಅನಾನಸ್ ಹೂ, ಕಲ್ಲುಹೂ, ಶಾಹಿಜೀರಾ, ಬಿರಿಯಾನಿ ಎಲೆ, ಕಸೂರಿಮೇಥಿ ಹಾಗೂ ಸ್ವಲ್ಪ ಈರುಳ್ಳಿ ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಅರಿಸಿನ ಹಾಕಿ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಬೇಕು. ಅದಕ್ಕೆ ನೆನೆಸಿಟ್ಟುಕೊಂಡ ಚಿಕನ್ ಹಾಗೂ ರುಬ್ಬಿಟ್ಟುಕೊಂಡ ಮಸಾಲೆ ಪೇಸ್ಟ್ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಉಪ್ಪು ಸೇರಿಸಿ ಪಾತ್ರೆಯನ್ನು ಮುಚ್ಚಿ ಸ್ವಲ್ಪ ಹೊತ್ತು ಚಿಕನ್ ಬೇಯಿಸಿ. ಅದಕ್ಕೆ ರುಬ್ಬಿಕೊಂಡ ಸೊಪ್ಪಿನ ಮಿಶ್ರಣ ಸೇರಿಸಿ ಕಲೆಸಿ ಮತ್ತೆ ಬೇಯಿಸಿ.

ಎಲ್ಲವನ್ನು ಮಿಶ್ರಣ ಮಾಡಿ ಕಾಯಿಸಿಟ್ಟುಕೊಂಡ ನೀರನ್ನು ಹದಕ್ಕೆ ತಕ್ಕಂತೆ ಸೇರಿಸಿ ಮತ್ತೆ ಒಂದು ಕುದಿ ಬರಿಸಿ. ಅದಕ್ಕೆ ನಿಂಬೆರಸ ಸೇರಿಸಿ. ಹದಿನೈದು ನಿಮಿಷ ನೆನೆಸಿಟ್ಟುಕೊಂಡ ಅಕ್ಕಿಯನ್ನು ಸೇರಿಸಿ ದೊಡ್ಡ ಉರಿಯಲ್ಲಿ ಐದು ನಿಮಿಷ ಬೇಯಿಸಿ. ನಂತರ ಮುಚ್ಚಳ ಮುಚ್ಚಿ 20 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ಗ್ಯಾಸ್ ಆಫ್ ಮಾಡಿದ ಮೇಲೆ ತುಪ್ಪ ಸೇರಿಸಿ ಮಿಶ್ರಣ ಮಾಡಿ ಬಡಿಸಿ.

ನಾಟಿ ಕೋಳಿ ಸಾರು
ಹಳ್ಳಿಗಳಲ್ಲಿ ಭಾನುವಾರ ಅಂದ್ರೆ ನಾಟಿ ಕೋಳಿ ಸಾರು. ಬಹುತೇಕ ಎಲ್ಲಾ ಹಳ್ಳಿಗಳಲ್ಲೂ ಇದು ಸಾಮಾನ್ಯ ಖಾದ್ಯ, ಅಲ್ಲದೇ ಜನಪ್ರಿಯ ಕೂಡ ಹೌದು. ಇದು ರಾಗಿಮುದ್ದೆ ಜೊತೆಗೆ ಸೂಪರ್‌ ಕಾಂಬಿನೇಷನ್‌. ಅನ್ನದ ಜೊತೆಗೂ ಚೆನ್ನಾಗಿರುತ್ತದೆ. ಈ ನಾಟಿ ಕೋಳಿ ಸಾರಿನ ಗಮ್ಮತ್ತು ಇರೋದು ಅದರ ಮಸಾಲೆಯಲ್ಲಿ.

ಬೇಕಾಗುವ ಸಾಮಗ್ರಿಗಳು: ನಾಟಿಕೋಳಿ – 1 ಕೆ.ಜಿ., ಅರಿಸಿನ – ಚಿಟಿಕೆ, ಕಲ್ಲುಪ್ಪು – ಸ್ವಲ್ಪ,

ಮಸಾಲೆಗೆ: ಚಕ್ಕೆ – 3 ಇಂಚು ಗಾತ್ರದ್ದು, ಏಲಕ್ಕಿ – 6, ಲವಂಗ – 6, ದೊಡ್ಡ ಗಾತ್ರದ ಈರುಳ್ಳಿ – 4, ಗಸಗಸೆ – 2 ಚಮಚ, ತೆಂಗಿನತುರಿ – 1 ಕಪ್‌, ಖಾರದಪುಡಿ – 3 ಚಮಚ, ಕೊತ್ತಂಬರಿ ಪುಡಿ – 3 ಚಮಚ, ಅರಿಸಿನ – ಚಿಟಿಕೆ, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಕುಕ್ಕರ್‌ಗೆ ಚಿಕನ್ ತುಂಡುಗಳನ್ನು ಹಾಕಿ, ಅದಕ್ಕೆ ಚಿಟಿಕೆ ಅರಿಸಿನ, ಕಲ್ಲುಪ್ಪು ಹಾಗೂ ಮುಳುಗುವಷ್ಟು ನೀರು ಸೇರಿಸಿ 4 ವಿಷಲ್ ಕೂಗಿಸಿ. ಪ್ಯಾನ್‌ವೊಂದರಲ್ಲಿ 5 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಎರಡು ಚಮಚ ತುಪ್ಪ ಸೇರಿಸಿ. ಅದಕ್ಕೆ ಚಕ್ಕೆ, ಏಲಕ್ಕಿ, ಲವಂಗ, ಉದ್ದಕ್ಕೆ ಕತ್ತರಿಸಿಕೊಂಡ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ.

ಮಸಾಲೆ ತಯಾರಿಸಲು: ಪ್ಯಾನ್‌ನಲ್ಲಿ ಗಸೆಗಸೆ ಹುರಿದುಕೊಳ್ಳಿ. ಅದಕ್ಕೆ ತೆಂಗಿನತುರಿ ಸೇರಿಸಿಕೊಂಡು ಸ್ವಲ್ಪ ಹುರಿದುಕೊಳ್ಳಿ. ಹುರಿದು ತಣ್ಣಗಾದ ಈರುಳ್ಳಿಗೆ ಖಾರದಪುಡಿ, ಕೊತ್ತಂಬರಿ ಪುಡಿ ಸೇರಿಸಿ ಮಿಕ್ಸಿ ಜಾರಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ತೆಂಗಿನತುರಿ ಹಾಗೂ ಗಸೆಗಸೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಸೆಲೆಬ್ರಿಟಿ ಶೆಫ್‌ ಮುರಳಿ ಹಾಗೂ ಸುಚಿತ್ರಾ

ಈಗ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ 2 ಚಮಚ ತುಪ್ಪ ಹಾಕಿ. ಅದಕ್ಕೆ ಉಳಿದ ಈರುಳ್ಳಿ ಸೇರಿಸಿ ಹುರಿದುಕೊಳ್ಳಿ. ನಂತರ ರುಬ್ಬಿಕೊಂಡು ಮಿಶ್ರಣ ಸೇರಿಸಿ ಮಿಶ್ರಣ ಮಾಡಿ, ಅದಕ್ಕೆ ಬೇಯಿಸಿಕೊಂಡ ಚಿಕನ್ ತುಂಡು ಹಾಗೂ ನೀರು ಸೇರಿಸಿ ಕುದಿಸಿ. ಅದೇ ಮಿಶ್ರಣಕ್ಕೆ ರುಬ್ಬಿಕೊಂಡ ತೆಂಗಿನತುರಿ ಹಾಗೂ ಗಸೆಗಸೆ ಮಿಶ್ರಣ ಸೇರಿಸಿ. ಕುದಿಯಲು ಬಿಡಿ. ಚೆನ್ನಾಗಿ ಕುದಿಸಿ ಕೆಳಗಿಳಿಸಿದರೆ ನಾಟಿ ಕೋಟಿ ಸಾರು ಸವಿಯಲು ಸಿದ್ಧ.

ಪಾಲಕ್ ಪೂರಿ

ಬೇಕಾಗುವ ಸಾಮಗ್ರಿಗಳು: ಪಾಲಕ್ ಎಲೆ – 10 ರಿಂದ 15, ಹಸಿಮೆಣಸು – 2, ಗೋಧಿಹಿಟ್ಟು – 1 ಕಪ್‌, ಮೈದಾಹಿಟ್ಟು – 2 ಚಮಚ, ರವೆ – 1 ಚಮಚ, ಅಜ್ವಾನಾ – 1 ಟೀ ಚಮಚ, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದು ಸ್ವಚ್ಛ ಮಾಡಿಟ್ಟುಕೊಂಡ ಪಾಲಕ್ ಎಲೆಯನ್ನು ಹುರಿದುಕೊಳ್ಳಿ. ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಒಂದೆರಡು ಹಸಿಮೆಣಸು ಹಾಗೂ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಪಾತ್ರೆಯೊಂದರಲ್ಲಿ ಗೋಧಿಹಿಟ್ಟು, ಮೈದಾಹಿಟ್ಟು, ರವೆ, ಅಜ್ವಾನ, ಉಪ್ಪು, 1 ಚಮಚ ಎಣ್ಣೆ ಹಾಗೂ ರುಬ್ಬಿಕೊಂಡ ಪಾಲಕ್ ಮಿಶ್ರಣ ಸೇರಿಸಿ ಪೂರಿ ಹದಕ್ಕೆ ಕಲೆಸಿ. ಎಣ್ಣೆ ಕಾದ ಮೇಲೆ ಎಣ್ಣೆಯಲ್ಲಿ ಪೂರಿಯನ್ನು ಕರಿಯಿರಿ.

ಸಿಗಡಿ ಫ್ರೈ
ಕರಾವಳಿ ಭಾಗದ ಜನರು ಹೆಚ್ಚು ಇಷ್ಟ ಪಡುವ ಮಾಂಸಾಹಾರಗಳಲ್ಲಿ ಸಿಗಡಿಯೂ ಒಂದು. ಭಿನ್ನ ರುಚಿ ಹೊಂದಿರುವ ಸಿಗಡಿಯಿಂದ ಸುಕ್ಕ, ಸಾರು, ಫ್ರೈ ತಯಾರಿಸಬಹುದು. ಸ್ಟಾರ್ಟರ್‌ ರೂಪದಲ್ಲಿ ಸಿಗಡಿ ಫ್ರೈ ತಿನ್ನಲು ಚೆನ್ನಾಗಿರುತ್ತದೆ. ಕೊಂಚ ತುಪ್ಪ ಹಾಕಿ ಮಾಡಿದ ಸಿಗಡಿ ಫ್ರೈ ರುಚಿಯನ್ನು ತಿಂದೇ ನೋಡಬೇಕು.

ಬೇಕಾಗುವ ಸಾಮಗ್ರಿಗಳು: ನೆನೆಸಿಡಲು: ಸಿಗಡಿ – 1ಕೆ.ಜಿ., ಮೊಟ್ಟೆ – 2, ಮೈದಾಹಿಟ್ಟು – 3 ಚಮಚ, ಕಾರ್ನ್‌ಫ್ಲೋರ್‌ – 4 ಚಮಚ, ಅರಿಸಿನ – ಚಿಟಿಕೆ, ಮೆಣಸಿನಪುಡಿ – 1 ಚಮಚ, ಕಾಳುಮೆಣಸಿನ ಪುಡಿ – 1/2 ಟೀ ಚಮಚ, ಉಪ್ಪು – ರುಚಿಗೆ,

ಮಸಾಲೆಗೆ: ಈರುಳ್ಳಿ – 3 ಮಧ್ಯಮ ಗಾತ್ರದ್ದು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಅರಿಸಿನ – ಚಿಟಿಕೆ, ಖಾರದಪುಡಿ – 1 ಚಮಚ, ಕಾಶ್ಮೀರಿ ಖಾರದಪುಡಿ – 1/2 ಚಮಚ, ಹಸಿಮೆಣಸು - 5 ರಿಂದ 6, ಕರಿಬೇವು, ಉಪ್ಪು – ರುಚಿಗೆ, ಗರಂಮಸಾಲ – 1 ಚಮಚ, ಕೊತ್ತಂಬರಿ ಸೊಪ್ಪು, ತುಪ್ಪ – 1 ಚಮಚ

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದು ಸ್ವಚ್ಛ ಮಾಡಿಟ್ಟುಕೊಂಡ ಸಿಗಡಿಗೆ ಮೊಟ್ಟೆ ತಿರುಳು, ಮೈದಾಹಿಟ್ಟು, ಅಕ್ಕಿಹಿಟ್ಟು, ಚಿಟಿಕೆ ಅರಿಸಿನ, ಕಾಶ್ಮೀರಿ ಖಾರದಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ 20 ನಿಮಿಷಗಳ ಕಾಲ ನೆನೆಸಿಡಿ. ಪಾತ್ರೆಯಲ್ಲಿ ಎಣ್ಣೆ ಕಾಯಲು ಇಟ್ಟು ಬಿಸಿಯಾದ ಮೇಲೆ ನೆನೆಸಿಟ್ಟುಕೊಂಡ ಸಿಗಡಿಯನ್ನು ಅದರಲ್ಲಿ ಕರಿದು ತೆಗೆಯಿರಿ. ಮೊದಲೇ ಕಾಯಿಸಿಕೊಂಡ ಎಣ್ಣೆಯಲ್ಲಿ ಅರ್ಧದಷ್ಟನ್ನು ಬಸಿದು ಬೇರೆ ಪಾತ್ರೆಗೆ ಹಾಕಿ ಉಳಿದ ಎಣ್ಣೆಗೆ ಈರುಳ್ಳಿ, ಅರಿಸಿನ, ಖಾರದಪುಡಿ, ಕಾಶ್ಮೀರಿ ಖಾರದಪುಡಿ, ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ, ಅದಕ್ಕೆ ಕರಿದ ಸಿಗಡಿ ಸೇರಿಸಿ, ಅದರ ಮೇಲೆ ಗರಂಮಸಾಲೆ ಹಾಗೂ ಕೊತ್ತಂಬರಿ ಸೊಪ್ಪು ಉದುರಿಸಿ. ನಂತರ ಗ್ಯಾಸ್ ಆಫ್ ಮಾಡಿ ತುಪ್ಪ ಸೇರಿಸಿ ಮಿಶ್ರಣ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT