ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌ ಸಂಭ್ರಮಕ್ಕೆ ಫ್ರೂಟ್‌ ಕೇಕ್‌

Last Updated 20 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಇನ್ನೇನು ಕ್ರಿಸ್‌ಮಸ್ ಸಮೀಪಿಸುತ್ತಿದೆ. ಈ ವರ್ಷದ ಕ್ರಿಸ್‌ಮಸ್ ಸಂಭ್ರಮವನ್ನು ನೀವೇ ಕೇಕ್ ತಯಾರಿಸುವ ಮೂಲಕ ಆಚರಿಸಬಹುದು. ಮನೆಯಲ್ಲಿಯೇ ಕೇಕ್ ತಯಾರಿಸಿ ಮಕ್ಕಳ ಕ್ರಿಸ್‌ಮಸ್ ರಜೆಯ ಖುಷಿಯನ್ನೂ ಹೆಚ್ಚಿಸಬಹುದು. ಜೊತೆಗೆ ಹಬ್ಬಕ್ಕೂ ರಂಗು ನೀಡಬಹುದು. ನೀವು ಮನೆಯಲ್ಲೇ ಕೇಕ್ ತಯಾರಿಸುವವರಾಗಿದ್ದು ಪ್ರತಿಬಾರಿ ಒಂದೇ ರೀತಿಯ ಕೇಕ್ ಮಾಡಿ ಬೇಸರವಾಗಿದೆಯೇ? ಹಾಗಿದ್ದರೆ ಈ ಕೆಳಗಿನ ಕೇಕ್‌ಗಳನ್ನು ತಯಾರಿಸಿ ನೋಡಿ. ಆದರೆ ಈ ಎಲ್ಲ ಕೇಕ್‌ಗಳ ತಯಾರಿಕೆಗೆ ಮೈಕ್ರೋ ಓವನ್ ಅಗತ್ಯವಿದೆ. ಸುಲಭದಲ್ಲಿ ತಯಾರಿಸಬಹುದಾದ ಕೆಲವೊಂದು ಕೇಕ್‌ಗಳ ರೆಸಿಪಿಗಳನ್ನು ಇಲ್ಲಿ ವಿವರಿಸಿದ್ದಾರೆ ಸವಿತಾ ಬೆಂಗಳೂರು

ಮಾವಿನ ಹಣ್ಣಿನ ಕೇಕ್‌

ಬೇಕಾಗುವ ಸಾಮಗ್ರಿಗಳು: ಸೂಜಿ ರವೆ – 2 ಕಪ್‌, ಏಲಕ್ಕಿ –1 ಚಮಚ, ಮಾವಿನ ಹಣ್ಣಿನ ರಸ – 1 ಕಪ್ ( ಮಾರ್ಕೆಟ್‌ನಲ್ಲಿ ಸಿದ್ಧ ದೊರೆಯುವ ಕೇಸರಿ ಮ್ಯಾಂಗೊ ರಸ ಕೂಡ ಬಳಸಬಹುದು), ಬೆಣ್ಣೆ –1/2 ಕಪ್, ಸಕ್ಕರೆ –1/2 ಕಪ್,ಅಡುಗೆ ಸೋಡಾ –1/2 ಚಮಚ,ವಾಲ್‌ನಟ್‌ – 1/2 ಕಪ್ ಪುಡಿ ಮಾಡಿದ್ದು,ಗೋಡಂಬಿ, ಒಣದ್ರಾಕ್ಷಿ
(ಗಮನಿಸಬೇಕಾದ ವಿಷಯ: ಮ್ಯಾಂಗೊ ರಸ ಹಳದಿ ಬಣ್ಣ ಮತ್ತು ಗಟ್ಟಿಯಾದ ರಸ ಆಗಿರಬೇಕು. ಕೆಲವು ಬ್ರಾಂಡ್‌ನ ಮ್ಯಾಂಗೊ ರಸ ಸ್ವಲ್ಪ ನೀರಾಗಿರುತ್ತದೆ. ಅಂತಹವನ್ನು ಕೊಂಡರೆ ಸೆಟ್ ಆಗಲು ತುಂಬಾ ಸಮಯ ಬೇಕಾಗುತ್ತದೆ)

ಕೇಕ್ ಮಾಡಲು ಕಲೆಸಿದ ಮಿಶ್ರಣ ಅಷ್ಟೇನೂ ಗಟ್ಟಿಯಾಗಿಲ್ಲವಾದರೆ ಸ್ವಲ್ಪ ಹೊತ್ತು ಇಡಿ. ಆಗ ಮಿಶ್ರಣ ಗಟ್ಟಿಯಾಗುವುದು. ಏಕೆಂದರೆ ಗಟ್ಟಿಯಾಗಿರದ ಮಿಶ್ರಣವನ್ನು ಮೈಕ್ರೊ ಓವನ್‌ನಲ್ಲಿ ಇಟ್ಟರೆ ಅದು ಗಟ್ಟಿಯಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು, ಕೇಕ್ ಕಂದು ಬಣ್ಣಕ್ಕೆ ತಿರುಗುವುದು. ಇದು ಸ್ವಲ್ಪ ಹಳದಿ ಬಣ್ಣದಲ್ಲಿ ಇದ್ದರೆ ರುಚಿ ಮತ್ತು ನೋಡಲು ಆಕರ್ಷಕವಾಗಿರುತ್ತದೆ. ಬೇಯಿಸುವಾಗ ಮಿಶ್ರಣವನ್ನು ಮಧ್ಯದ ಸ್ಟ್ಯಾಂಡ್‌ನಲ್ಲಿಡಿ. ರವೆಯನ್ನು ಹುರಿಯಬೇಕಾಗಿಲ್ಲ.

ತಯಾರಿಸುವ ವಿಧಾನ: ರವೆಯನ್ನು ಸಕ್ಕರೆ, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಮತ್ತು ಅಡುಗೆ ಸೋಡಾ ಹಾಕಿ ಮಿಶ್ರ ಮಾಡಬೇಕು. ಕರಗಿಸಿದ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಮಾವಿನ ಹಣ್ಣಿನ ರಸವನ್ನು ಹಾಕಿ ಮತ್ತೆ ಬಿಸಿ ಮಾಡಬೇಕು. ನಂತರ ಸೆಟ್ ಆಗಲು 10 ನಿಮಿಷ ಇಡಬೇಕು.

ಮಿಶ್ರಣವನ್ನು ಓವನ್‌ನಲ್ಲಿಟ್ಟು 30 – 35 ನಿಮಿಷ ಬೇಯಿಸಬೇಕು. ಆದರೆ 25 ನಿಮಿಷದ ನಂತರ ಬೆಂದಿದೆಯೆ ಎಂದು ಗಮನಿಸುತ್ತಾ ಇರಬೇಕು. ಚಮಚ ಅಥವಾ ಸೌಟಿನಿಂದ ಚುಚ್ಚಿ ಅದು ಸರಿಯಾಗಿ ಬೆಂದಿದೆಯೆ ಎಂದು ಪರೀಕ್ಷಿಸಬೇಕು. ಆಗ ಸೌಟಿಗೆ ಮಿಶ್ರಣ ಅಂಟಿ ಹಿಡಿಯದಿದ್ದರೆ ಬೆಂದಿದೆ ಎಂದು ಅರ್ಥ. ನಂತರ ಕೇಕ್ ಹೊರ ತೆಗೆದು ತಣ್ಣಗಾಗಲು ಇಡಬೇಕು. ನಂತರ ಕತ್ತರಿಸಿದರೆ ರುಚಿಕರವಾದ ಮ್ಯಾಂಗೊ ಕೇಕ್ ರೆಡಿ.

**


ಬಟರ್ ಸ್ಪಾಂಜ್ ವೆನಿಲ್ಲಾ ಕೇಕ್

ಬೇಕಾಗುವ ಸಾಮಗ್ರಿಗಳು: ಅಕ್ಕಿಹಿಟ್ಟು – 2 ಕಪ್ , ಹಾಲು ಅಥವಾ ಗಟ್ಟಿ ಮೊಸರು –2-3 ಕಪ್,ಬೆಣ್ಣೆ – 1 ಕಪ್, ಮೊಟ್ಟೆ –8-10, ಅಡುಗೆ ಸೋಡಾ –1 ಚಮಚ, ಸಕ್ಕರೆ – 2 ಕಪ್, ವೆನಿಲ್ಲಾ ಎಸೆನ್ಸ್ –2 ಚಮಚ, ಚಿಕ್ಕದಾಗಿ ಕತ್ತರಿಸಿದ ಬಾದಾಮಿ ಮತ್ತು ಗೋಡಂಬಿ

ತಯಾರಿಸುವ ವಿಧಾನ: ಮೊದಲು ಓವನ್ ಅನ್ನು 350 ಡಿಗ್ರಿಯಲ್ಲಿಟ್ಟು ಬಿಸಿ ಮಾಡಬೇಕು. ಬೆಣ್ಣೆ ಮತ್ತು ಸಕ್ಕರೆಯನ್ನು ಬೆರೆಸಿ ಮೃದುವಾಗುವವರೆಗೂ ಮಿಕ್ಸಿಯಲ್ಲಿ ಕಲೆಸಬೇಕು. ಮೊಟ್ಟೆ ಬೆರೆಸಿ ಚೆನ್ನಾಗಿ ಮತ್ತೆ ಮಿಕ್ಸಿಯಲ್ಲಿ ತಿರುಗಿಸಬೇಕು. ಈ ಮಿಶ್ರಣಕ್ಕೆ ಅಕ್ಕಿಹಿಟ್ಟು ಮತ್ತು ಮೊಸರನ್ನು ಹಾಕಿ ಚೆನ್ನಾಗಿ ನಾದಬೇಕು. ಬಾದಾಮಿ, ಗೋಡಂಬಿ, ವೆನಿಲ್ಲಾ ಎಸೆನ್ಸ್ ಹಾಕಿ ತುಪ್ಪ ಸವರಿದ ಬಟ್ಟಲಿಗೆ ಹಾಕಿ ಅದನ್ನು 50 ನಿಮಿಷ ಓವನ್‌ನಲ್ಲಿಡಬೇಕು. ಹೀಗೆ ಮಾಡಿದರೆ ಘಮಘಮಿಸುವ ಬಟರ್ ಸ್ಪಾಂಜ್ ವೆನಿಲ್ಲಾ ಕೇಕ್ ರೆಡಿ.

**

ಬಾಳೆಹಣ್ಣು-ಚಾಕೊಲೇಟ್ ಕೇಕ್‌

ಬೇಕಾಗುವ ಸಾಮಗ್ರಿಗಳು:
ಬೆಣ್ಣೆ – ಅರ್ಧ ಕಪ್, ಸಕ್ಕರೆ –ಅರ್ಧ ಕಪ್, ಮೊಟ್ಟೆ – 2, ವೆನಿಲ್ಲಾ ಎಕ್ಸಾಟ್ರಾಕ್ಟ್ –1 ಚಮಚ,ಹುಳಿ ಕ್ರೀಮ್ – ಅರ್ಧ ಕಪ್ (ಇದರ ಬದಲು ಕಿವಿ ಹಣ್ಣು ಹಾಕಬಹುದು), ಮೈದಾ –ಒಂದೂವರೆ ಕಪ್,ಅಡುಗೆ ಸೋಡಾ –ಮುಕ್ಕಾಲು ಚಮಚ, ಹಣ್ಣಾದ ಚೆನ್ನಾಗಿ ಹಿಸುಕಿದ ಬಾಳೆಹಣ್ಣು –1 ಕಪ್,3 ಕರಗಿಸಿದ ಚಾಕೊಲೇಟ್

ತಯಾರಿಸುವ ವಿಧಾನ: ಮೈಕ್ರೋ ಓವನ್ ಅನ್ನು 350 ಡಿಗ್ರಿ ಉಷ್ಣತೆಗೆ ಬಿಸಿ ಮಾಡಬೇಕು. 8 ಇಂಚಿನಷ್ಟು ಅಗಲವಿರುವ ತವಾಕ್ಕೆ ಸ್ವಲ್ಪ ಬೆಣ್ಣೆ ಸವರಬೇಕು. ಕ್ರೀಮ್, ಬೆಣ್ಣೆ, ಸಕ್ಕರೆಪಾಕ ಹಾಕಿ ಮಿಕ್ಸಿಯಲ್ಲಿ ಮಧ್ಯಮ ವೇಗದಲ್ಲಿ ಇಟ್ಟು ರುಬ್ಬಬೇಕು.

ಮೊಟ್ಟೆ ಹಾಗೂ ವೆನಿಲ್ಲಾ ಹಾಕಿ ಈ ಮಿಶ್ರಣವನ್ನು ಚೆನ್ನಾಗಿ ಕದಡಬೇಕು. ಮೈದಾ ಹಾಕಿ ಮಿಶ್ರಣ ಮಾಡಿ ಬೇಕಿಂಗ್ ಸೋಡಾ ಮತ್ತು ಚಾಕೊಲೇಟ್ ಹಾಕಬೇಕು, ನಂತರ ಇದಕ್ಕೆ ಚೆನ್ನಾಗಿ ಹಿಸುಕಿದ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು.

ಈ ಮಿಶ್ರಣವನ್ನು ತವಾಕ್ಕೆ ಸುರಿದು 30 ನಿಮಿಷ ಬೇಯಿಸಿ ನಂತರ ತಣ್ಣಗಾಗಲು ತಟ್ಟೆಗೆ ಹಾಕಬೇಕು. ಈ ರೀತಿ ಮಾಡಿದರೆ ಬಾಳೆಹಣ್ಣಿನ ಚಾಕೊಲೇಟ್ ಚಂಕ್ ಕೇಕ್ ರೆಡಿ.

**
ಬಾಳೆಹಣ್ಣು–ಚಾಕೊಲೇಟ್ ಚಿಪ್ಸ್ ಕೇಕ್‌

ಬೇಕಾಗುವ ಸಾಮಗ್ರಿಗಳು:
ಮೊಟ್ಟೆ – 1 , ಅಡುಗೆ ಸೋಡಾ –1/2 ಚಮಚ, ಹಿಸುಕಿದ ಬಾಳೆಹಣ್ಣು – 1 ಕಪ್, ಸಿಹಿ ಸ್ವಲ್ಪ ಕಡಿಮೆ ಇರುವ ಚಾಕೊಲೇಟ್ ಚಿಪ್ಸ್ – 3/4 ಕಪ್,ಕರಗಿಸಿದ ಬೆಣ್ಣೆ – 1/2 ಕಪ್, ಉಪ್ಪು –1/2 ಚಮಚ, ಸಕ್ಕರೆ – 1/2 ಕಪ್, ಹಾಲು –1/2 ಲೋಟ

ತಯಾರಿಸುವ ವಿಧಾನ: ದೊಡ್ಡ ಬಟ್ಟಲಿನಲ್ಲಿ ಮೈದಾ, ಸಕ್ಕರೆ, ಉಪ್ಪು ಮತ್ತು ಅಡುಗೆ ಸೋಡಾ, ಹಾಲು ಹಾಕಿ ಮಿಶ್ರ ಮಾಡಬೇಕು. ಮತ್ತೊಂದು ಬಟ್ಟಲಿನಲ್ಲಿ ಕರಗಿಸಿದ ಬೆಣ್ಣೆ, ಮೊಟ್ಟೆ ಮತ್ತು ಹಿಸುಕಿದ ಬಾಳೆಹಣ್ಣು ಹಾಕಿ ಮಿಶ್ರ ಮಾಡಬೇಕು. ಬಾಳೆಹಣ್ಣಿನ ಮಿಶ್ರಣವನ್ನು ಮೈದಾ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲೆಸಬೇಕು. ಇದಕ್ಕೆ ಚಾಕೊಲೇಟ್ ಚಿಪ್ಸ್ ಸೇರಿಸಬೇಕು.

ಮೈಕ್ರೋ ಓವನ್‌ಅನ್ನು 350 ಡಿಗ್ರಿ ಫ್ಯಾರನ್‌ಹೀಟ್‌ಗೆ ಮುಂಚಿತವಾಗಿ ಬಿಸಿಮಾಡಬೇಕು. ಕೇಕ್ ಮಿಶ್ರಣವನ್ನು ಬೇಯಿಸುವ ಪಾತ್ರೆಗೆ ಸ್ವಲ್ಪ ಬೆಣ್ಣೆ ಸವರಿ ಅದರಲ್ಲಿ ಹಾಕಿ 25- 30 ನಿಮಿಷ ಬೇಯಿಸಬೇಕು.

ಕೇಕ್ ಪಾತ್ರೆಯಿಂದ ಸುಲಭವಾಗಿ ಬರುವಂತೆ ಬೇಯಿಸಬೇಕು. ಕೇಕ್ ಬೆಂದ ಮೇಲೆ ಆರಲು ಬಿಡಬೇಕು. ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ.

**

ಪ್ಲಮ್ ಕೇಕ್‌

ಬೇಕಾಗುವ ಸಾಮಗ್ರಿಗಳು:ಪ್ಲಮ್ ಹಣ್ಣುಗಳು – ಒಂದು ಕಾಲು ಕಪ್, ಮೈದಾ – 1 ಬಟ್ಟಲು, ಮೊಟ್ಟೆ – 3, ಬೆಣ್ಣೆ – ಅರ್ಧ ಕಪ್, ಸಕ್ಕರೆ – ಅರ್ಧ ಕಪ್, ನಿಂಬೆ ಝೆಟ್ಸ್ – 1ಚಮಚ, ಬೇಕಿಂಗ್ ಪೌಡರ್– ಅರ್ಧ ಚಮಚ

ತಯಾರಿಸುವ ವಿಧಾನ: ಮೊಟ್ಟೆಯ ಬಿಳಿಯ ಭಾಗವನ್ನು ಬೀಟ್ ಮಾಡಿ ಲಿಂಬೆ ಎಸೆನ್ಸ್ ಸೇರಿಸಿ ಪಕ್ಕಕ್ಕಿಡಿ. ಬೆಣ್ಣೆ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಅದಕ್ಕೆ ಮೊಟ್ಟೆ ಮಿಶ್ರಣ ಸೇರಿಸಿ ನಂತರ ಮೈದಾ ಮತ್ತು ಬೇಕಿಂಗ್ ಪೌಡರ್ ಹಾಕಿ ಕಲಸಿ. ಪ್ಯಾನ್‌ನಲ್ಲಿ ಹಾಕಿ ಅದರ ಮೇಲೆ ಕತ್ತರಿಸಿಕೊಂಡ ಪ್ಲಮ್ ಹಣ್ಣುಗಳನ್ನು ಆಕರ್ಷಕವಾಗಿ ಅಲಂಕರಿಸಿ. ಈಗಾಗಲೇ 375 ಡಿಗ್ರಿ ಫ್ಯಾರನ್‌ಹೀಟ್ ಕಾದಿರುವ ಓವನ್‌ನಲ್ಲಿ ಅದನ್ನಿಟ್ಟು ಮತ್ತೆ 375 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ 40 ನಿಮಿಷ ಬೇಕ್ ಮಾಡಿ.

**

ಚಾಕೊಲೇಟ್ ಮಗ್ ಕೇಕ್

ಬೇಕಾಗುವ ಸಾಮಗ್ರಿಗಳು:
ಕೊಕೊ ಪೌಡರ್‌ – 2ಚಮಚ, ಮೈದಾ –4 ಚಮಚ, ಮೊಟ್ಟೆ– 1, ಎಣ್ಣೆ – 3 ಚಮಚ, ಸಕ್ಕರೆ – 4 ಚಮಚ, ಹಾಲು –3 ಚಮಚ, ಚಾಕೊಲೇಟ್ – ಚಿಪ್ಸ್ 3 ಚಮಚ, ವೆನಿಲ್ಲಾ ಎಕ್ಸ್‌ಟ್ರ್ಯಾಕ್ಟ್ ಅರ್ಧ ಚಮಚ.

ತಯಾರಿಸುವ ವಿಧಾನ: ದೊಡ್ಡ ಕಾಫಿ ಮಗ್‌ನಲ್ಲಿ ಮೈದಾ, ಕೋಕಾ, ಸಕ್ಕರೆ ಮತ್ತು ಚಾಕೊಲೇಟ್ ಚಿಪ್ಸ್ ಹಾಕಿಡಿ. ಮೊಟ್ಟೆಯ ಬಿಳಿಯ ಭಾಗವನ್ನು ಬೀಟ್ ಮಾಡಿಕೊಳ್ಳಿ. ಮಗ್‌ಗೆ ಹಾಲು, ಎಣ್ಣೆ, ವೆನಿಲಾ ಎಕ್ಸ್‌ಟ್ರ್ಯಾಕ್ಟ್ ಹಾಕಿ ಮಿಶ್ರಣ ಮಾಡಿ. ಈಗ ಮೊಟ್ಟೆ ಸೇರಿಸಿ ಕಲಕಿ. ಈಗಾಗಲೇ 350 ಡಿಗ್ರಿ ಉಷ್ಣತೆಯಲ್ಲಿ ಕಾದಿರುವ ಓವನ್‌ನಲ್ಲಿ ಕೇವಲ ಮೂರು ನಿಮಿಷ ಬೇಕ್ ಮಾಡಿದರೆ ಸಾಕು. ಚಾಕೊಲೇಟ್ ಮಗ್ ಕೇಕ್ ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT