ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಮಾವಿನ ರುಚಿಕರ ಅಡುಗೆ

Last Updated 11 ಜೂನ್ 2019, 8:51 IST
ಅಕ್ಷರ ಗಾತ್ರ

ಇದು ಕಾಡು ಮಾವಿನಕಾಯಿಯ ಋತು. ಕಾಡು ಮಾವಿನ ಹಣ್ಣು ಮೊದಲಿನಂತೆ ಈಗ ಸಿಗುವುದಿಲ್ಲ. ಕಾಡುಮಾವಿನ ಹಣ್ಣಿನ ಅಡುಗೆ ತಿಂದರೆ, ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಒಂದು ತುತ್ತು ಅನ್ನ ಜಾಸ್ತಿ ಹೊಟ್ಟೆಗೆ ಸೇರುತ್ತದೆ. ಕಸಿ ಮಾವಿನ ಹಣ್ಣಿನಂತೆ ಅಜೀರ್ಣದ ಸಮಸ್ಯೆ ಆಗದು.

ಕಾಡು ಮಾವಿನ ಹಣ್ಣಿನ ತೊಕ್ಕು

ಬೇಕಾಗುವ ವಸ್ತುಗಳು: 7-8 ಕಾಡು ಮಾವಿನ ಹಣ್ಣಿನ ರಸ, 2 ಚಮಚ ಕೆಂಪುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:ಕಾಡು ಮಾವಿನ ಹಣ್ಣಿನ ರಸ ತೆಗೆದು, ಉಪ್ಪು, ಕೆಂಪುಮೆಣಸಿನ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಇದು ಬೇಯುತ್ತಿದ್ದಂತೆ ಗಟ್ಟಿಯಾಗುತ್ತಾ ಬರುವಾಗ ಅಗಾಗ್ಗೆ ಸೌಟಿನಿಂದ ಕೈಯಾಡಿಸಿ. ಗಟ್ಟಿಯಾಗುತ್ತಾ ಬಂದಾಗ ಒಲೆಯಿಂದ ಕೆಳಗಿಳಿಸಿ. 2-3 ತಿಂಗಳು ಹಾಳಾಗದು. ಅನ್ನದ ಜೊತೆ ಹೆಚ್ಚಿದ ಈರುಳ್ಳಿ, ಎಣ್ಣೆ ಹಾಕಿ ತಿಂದರೆ ಬಲು ರುಚಿ.

ಕಾಡುಮಾವಿನ ಹಣ್ಣಿನ ಪಾಯಸ

ಬೇಕಾಗುವ ವಸ್ತುಗಳು: 10-12 ಕಾಡುಮಾವಿನ ಹಣ್ಣು, 6-7 ಅಚ್ಚು ಬೆಲ್ಲ, 4 ಕಪ್ ತೆಂಗಿನ ತುರಿ, 3-4 ಚಮಚ ಅಕ್ಕಿ ಹಿಟ್ಟು, ¼ ಚಮಚ ಉಪ್ಪು. (ಮಾವಿನ ಹಣ್ಣಿನ ಹುಳಿ ಗುಣ ನೋಡಿಕೊಂಡು ಬೆಲ್ಲ ಹಾಕಬೇಕು)

ಮಾಡುವ ವಿಧಾನ: ಕಾಡು ಮಾವಿನ ಹಣ್ಣಿನ ತೊಟ್ಟು ತೆಗೆದು ತೊಳೆದು ಸುಲಿಯಿರಿ. ಗೊರಟಿನಿಂದ ರಸವನ್ನು ಕಿವುಚಿ ಹಿಂಡಿ ತೆಗೆಯಿರಿ, ತೆಂಗಿನ ಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿ ದಪ್ಪ ಹಾಲು ಹಿಂಡಿ ತೆಗೆದು ಇಡಿ. ಸ್ವಲ್ಪ ನೀರು ಸೇರಿಸಿ ಪುನಃ ಹಿಂಡಿ ತೆಳು ಹಾಲು ತೆಗೆಯಿರಿ. ಇದನ್ನು ಮಾವಿನ ರಸಕ್ಕೆ ಬೆರೆಸಿ. ಬೆಲ್ಲ, ಉಪ್ಪು ಹಾಕಿ ಕುದಿಸಿ. 10 ನಿಮಿಷ ಕುದಿದ ನಂತರ ಅಕ್ಕಿ ಹಿಟ್ಟನ್ನು ನೀರಿನಲ್ಲಿ ಕದಡಿ ಪಾಯಸ ದಪ್ಪವಾಗುವುದಕ್ಕೆ ಬೇಕಾದಷ್ಟು ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕುದಿಸಿ. ಸೌಟಿನಿಂದ ಚೆನ್ನಾಗಿ ತೊಳಸಿ. ನಂತರ ದಪ್ಪ ಕಾಯಿಹಾಲು ಒಂದು ಕುದಿ ಕುದಿಸಿ.

ಕಾಡು ಮಾವಿನ ಹಣ್ಣಿನ ಜ್ಯಾಮ್

ಬೇಕಾಗುವ ವಸ್ತುಗಳು: 2 ಕಪ್ ಕಾಡು ಮಾವಿನ ಹಣ್ಣಿನ ರಸ, 2 ಕಪ್ ಸಕ್ಕರೆ.

ಮಾಡುವ ವಿಧಾನ:ಮಾವಿನ ಹಣ್ಣಿನ ತೊಟ್ಟು ತೆಗೆದು, ಚೆನ್ನಾಗಿ ತೊಳೆದು ನೀರು ಬಸಿಯಿರಿ. ನಂತರ ಸಿಪ್ಪೆ ಸುಲಿದು, ಗೊರಟು ಮತ್ತು ಸಿಪ್ಪೆಯಿಂದ ಬರುವ ರಸವನ್ನೆಲ್ಲಾ ಕಿವುಚಿ ತೆಗೆಯಿರಿ. ನಂತರ ರಸವನ್ನು ದೊಡ್ಡ ಕಣ್ಣಿನ ಜರಡಿಯಲ್ಲಿ ಹಾಕಿ ಸೋಸಿಕೊಳ್ಳಿ. ನಂತರ ಸ್ಟೀಲ್ ಪಾತ್ರೆಗೆ ಸಕ್ಕರೆ ಸ್ವಲ್ಪ ನೀರು ಹಾಕಿ ಕುದಿಸಿ. ಪಾಕ ಗಟ್ಟಿಯಾಗಿ ನೂಲು ಪಾಕವಾದಾಗ ಮಾವಿನ ಹಣ್ಣಿನ ರಸ ಹಾಕಿ ಕುದಿಸಿ. ಆಗಾಗ್ಗೆ ಸೌಟಿನಿಂದ ತೊಳಸುತ್ತಾ ಇರಿ. ಪಾಕ ದಪ್ಪವಾಗಿ ಜ್ಯಾಮ್‌ನಂತೆ ಆದಾಗ ಒಲೆಯಿಂದ ಇಳಿಸಿ. ಆರಿದ ನಂತರ ಬಾಟಲಿಗೆ ಹಾಕಿಡಿ. ದೋಸೆ, ಚಪಾತಿ, ಜೊತೆ ತಿನ್ನಲು ರುಚಿಯಾಗಿರುತ್ತದೆ.
ಕಾಡು ಮಾವಿನ ಹಣ್ಣಿನ ಶರಬತ್‌

ಬೇಕಾಗುವ ವಸ್ತುಗಳು: 2-3 ಕಾಡು ಮಾವಿನ ಹಣ್ಣು, ರುಚಿಗೆ ತಕ್ಕಷ್ಟು ಸಕ್ಕರೆ.

ಮಾಡುವ ವಿಧಾನ: ಕಾಡು ಮಾವಿನ ತೊಟ್ಟು ತೆಗೆದು, ಸುಲಿದು ರಸ ಹಿಂಡಿ. ½ ಕಪ್ ರಸಕ್ಕೆ 4 ಕಪ್ ನೀರು ಹಾಕಿ. ಸಿಪ್ಪೆಗೆ ಸ್ವಲ್ಪ ನೀರು ಹಾಕಿ ಮತ್ತೆ ರಸ ಹಿಂಡಿ. ರುಚಿಗೆ ತ್ಕಕ್ಕಷ್ಟು ಸಕ್ಕರೆ ಸೇರಿಸಿ ಚೆನ್ನಾಗಿ ಕದಡಿ. ಬೇಸಿಗೆಯಲ್ಲಿ ಈ ಶರಬತ್ ಕುಡಿಯುವುದರಿಂದ ದೇಹಕ್ಕೂ ಮನಸ್ಸಿಗೂ ಹಿತವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT