ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಲ್ಲಿ ನಿರೂರಿಸುವ ಶೇಂಗಾ ಖಾದ್ಯಗಳು: ಮಾಡುವ ಬಗೆ ಇಲ್ಲಿದೆ ತಿಳಿಯಿರಿ

ಬಾಯಲ್ಲಿ ನಿರೂರಿಸುವ ಶೇಂಗಾ ಖಾದ್ಯಗಳು: ಮಾಡುವ ಬಗೆ ಇಲ್ಲಿದೆ ತಿಳಿಯಿರಿ
Published 29 ಸೆಪ್ಟೆಂಬರ್ 2023, 21:14 IST
Last Updated 29 ಸೆಪ್ಟೆಂಬರ್ 2023, 21:14 IST
ಅಕ್ಷರ ಗಾತ್ರ

ಲೇಖನ– ನಳಿನ ಸೋಮಯಾಜಿ

–––

ಬಾದಾಮಿಯಲ್ಲಿ ಇರುವ ಎಲ್ಲಾ ಪೌಷ್ಟಿಕಾಂಶಗಳೂ ಕಡಲೆಕಾಯಿ (ನೆಲಗಡಲೆ, ಶೇಂಗಾ)ಯಲ್ಲಿದ್ದು ಸಿಗುವುದು ನಿಶ್ಚಿತ. ಮಹಾತ್ಮಗಾಂಧಿ  ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕರೆದಿದ್ದರು. ಬಹಳ ಸರಳವಾಗಿ ಮಾಡಬಹುದಾದ ಶೇಂಗಾ ಖಾದ್ಯಗಳನ್ನು ನಳಿನ ಸೋಮಯಾಜಿ ಅವರು ಪರಿಚಯಿಸಿದ್ದಾರೆ. 

ಕಡಲೆಕಾಯಿ - ರವೆ ಮಿಠಾಯಿ
ಬೇಕಾಗುವ ಸಾಮಗ್ರಿಗಳು:  ಕಡಲೆಕಾಯಿ 1 ಲೋಟ,  ಪುಡಿ ಮಾಡಿದ ಬೆಲ್ಲ ,  1 1/2 ಲೋಟ,  ಉಪ್ಪಿಟ್ಟು ರವೆ : 1 ದೊಡ್ಡಚಮಚೆ.
ತುಪ್ಪ: 1ಚಿಕ್ಕ ಚಮಚೆ.
ಮಾಡುವ ವಿಧಾನ.:  ಕಡಲೆಕಾಯಿ ಹುರಿದು, ಸಿಪ್ಪೆ ಬಿಡಿಸಿ ಪುಡಿ ಮಾಡಿ, ರವೆ ಬೆರೆಸಿಟ್ಟುಕೊಳ್ಳಿ. ಒಲೆಯ ಮೇಲೆ ಬಾಣಲೆ ಇಟ್ಟು ಬೆಲ್ಲ ಹಾಕಿ ಮುಳುಗುವಷ್ಟು ನೀರು ಹಾಕಿ ಬೆಲ್ಲ ಕರಗಿಸಿ. ಒಂದೆಳೆ ಪಾಕಕ್ಕಿಂತ ಚೂರು ಗಟ್ಟಿಯಾದಾಗ, ಕಡಲೆಕಾಯಿ -ರವೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಮೊಗಚಿ. ತಳ ಬಿಡಲು ಪ್ರಾರಂಭಿಸುತ್ತದೆ. ತುಪ್ಪ ಸೇರಿಸಿ. ಇನ್ನಷ್ಟು ಮೊಗಚಿ. ತುಪ್ಪ ಬಿಡಲು. ಪ್ರಾರಂಭಿಸಿದ ತಕ್ಷಣ, ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟು ಮಾಡಿ. ಸಂಪೂರ್ಣ ತಣ್ಣಗಾದ ಮೇಲೆ ಇದನ್ನು ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಕಡಲೆ ಮಿಠಾಯಿ ತಯಾರು. ( ರವೆ ಬೆರೆಸಿದ್ದರಿಂದ ಗಟ್ಟಿಯಾಗಲು ಹೆಚ್ಚು ಸಮಯ ಬೇಕಾಗುತ್ತದೆ).

ಕಡಲೆಕಾಯಿ ಮಿಠಾಯಿ

ಕಡಲೆಕಾಯಿ ಮಿಠಾಯಿ

ಕಡಲೆಕಾಯಿ - ನೆಲ್ಲಿಕಾಯಿ ಚಿತ್ರಾನ್ನ
ಬೇಕಾಗುವ ಪದಾರ್ಥಗಳು: 1/2 ಕಪ್ಪು ಕಡಲೆಕಾಯಿ, ನೆಲ್ಲಿಕಾಯಿ  2,  ಹಸಿ ಮೆಣಸು  5 ರಿಂದ 6,  ಶುಂಠಿ ಒಂದು ಇಂಚು,  ಬೆಳ್ತಿಗೆ ಅನ್ನ   ಒಂದು ಕಪ್ಪು,  ತೆಂಗಿನ ತುರಿ  ಒಂದು ಕಪ್ಪು,  ಉಪ್ಪು  ರುಚಿಗೆ ತಕ್ಕಷ್ಟು, ತುಪ್ಪ  ಒಂದು ದೊಡ್ಡ ಚಮಚೆ,  ಒಗ್ಗರಣೆಗೆ : ಉದ್ದಿನ ಬೇಳೆ   ಒಂದು ಚಮಚೆ, ಸಾಸಿವೆ ಒಂದು ಚಮಚೆ,  ಕರಿಬೇವು,  ಎಣ್ಣೆ: 2 ದೊಡ್ಡ ಚಮಚೆ,  ತುಪ್ಪ: 1ಚಮಚೆ.

ಮಾಡುವ ವಿಧಾನ: ಕಡಲೆಕಾಯಿ ನೆನೆಸಿ ತೊಳೆದು ನೆನೆಸಿ. (ನಾಲ್ಕು ಗಂಟೆ). ಮತ್ತೆ ತೊಳೆದು ಅದನ್ನು ಬೇಯಿಸಿಟ್ಟುಕೊಳ್ಳಿ. ಅನ್ನ ಮಾಡಿ ತಣ್ಣಗಾಗಲು ಬಿಡಿ.
ಶುಂಠಿ, ತೆಂಗಿನ ಕಾಯಿ, ನೆಲ್ಲಿಕಾಯಿಯನ್ನು ಬೇರೆ ಬೇರೆಯಾಗಿ ತುರಿದಿಡಿ. ಹಸಿಮೆಣಸು ತೊಳೆದು ಸಣ್ಣದಾಗಿ ಹೆಚ್ಚಿಡಿ. ಈಗ ಬಾಣಲೆ ಬಿಸಿ ಮಾಡಿ ಎಣ್ಣೆ ಮತ್ತು ತುಪ್ಪ ಹಾಕಿ. ತುಪ್ಪ ಕರಗಿದಾಗ ಉದ್ದಿನಬೇಳೆ, ಸಾಸಿವೆ ಹಾಕಿ. ಸಾಸಿವೆ ಹೊಟ್ಟೆಯಿಂದ ನಂತರ ‌ಹಸಿಮೆಣಸು ಸೇರಿಸಿ. ನಂತರ ಕರಿಬೇವು ಹಾಕಿ. ತುರಿದ ನೆಲ್ಲಿ ಕಾಯಿ ಸೇರಿಸಿ ಬಾಡಿಸಿ.
ಬೇಯಿಸಿದ ಕಡಲೆಕಾಯಿ ಹಾಕಿ.( ಬೇಯಿಸಿದಾಗ ನೀರಿದ್ದರೆ ಸೋಸಿ ತೆಗೆಯಿರಿ. ಇದಕ್ಕೆ ಸೇರಿಸಬಾರದು). ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಶಿನ ಸೇರಿಸಿ ಮಿಶ್ರ ಮಾಡಿ ಈಗ ತಣ್ಣಗಾದ ಅನ್ನ ಹಾಗೂ ತೆಂಗಿನ ತುರಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ. ಒಂದು ಮುಚ್ಚಳ ಮುಚ್ಚಿ. ಸಣ್ಣ ಉರಿಯಲ್ಲಿ ಒಂದು ನಿಮಿಷ ಇರಲಿ.
ನಂತರ ಮತ್ತೊಮ್ಮೆ ಮಿಶ್ರ ಮಾಡಿ ಬಡಿಸುವ ಪಾತ್ರೆಗೆ ಹಾಕಿ. ಮೊಸರಿನೊಂದಿಗೆ ತಿನ್ನಿ. ಕಡಲೆಕಾಯಿ - ನೆಲ್ಲಿಕಾಯಿ ಚಿತ್ರಾನ್ನ ಆರೋಗ್ಯಕರ ಹಾಗೂ ರುಚಿಯೂ ಹೌದು.

ಕಡಲೆಕಾಯಿ ಚಿತ್ರಾನ್ನ

ಕಡಲೆಕಾಯಿ ಚಿತ್ರಾನ್ನ

ಕಡಲೆಕಾಯಿ  ಪಡವಲಕಾಯಿ ರೋಲ್ 
ಬೇಕಾಗುವ ಸಾಮಗ್ರಿಗಳು: ಪಡವಲ ಕಾಯಿ: 1 (ಮಧ್ಯಮಗಾತ್ರದ್ದು).
ಮಸಾಲೆಗೆ : ಹುರಿದು ಪುಡಿಮಾಡಿದ ಕಡಲೆಕಾಯಿ: 1/2 ಕಪ್ಪು. ಸಾರಿನ ಪುಡಿ :1. ಚಮಚೆ, ಕಡ್ಲೆಬೇಳೆ -ಉದ್ದಿನಬೆಳೆ ಚಟ್ನಿಪುಡಿ. ( ಇಲ್ಲದಿದ್ದರೆ ಎರಡು ಬೇಳೆ ಒಂದೊಂದು ಚಮಚೆ ಹುರಿದು ಪುಡಿ ಮಾಡಿಕೊಳ್ಳಿ), ಗರಂ ಮಸಾಲೆ : 1/2 ಚಮಚೆ. ಕೊಬ್ಬರಿ ತುರಿ 1ಕಪ್ಪು, ಹುಣಿಸೆ ರಸ , 2 ರಿಂದ 3 ಚಮಚೆ,
ಉಪ್ಪು ಸ್ವಲ್ಪ. ಒಗ್ಗರಣೆಗೆ: ಎಣ್ಣೆ: ಎರಡರಿಂದ ಮೂರು ಚಮಚೆ,  ಸಾಸಿವೆ: ಒಂದು ಸಣ್ಣ ಚಮಚೆ, ಉದ್ದಿನ ಬೇಳೆ: ಒಂದು ಚಮಚೆ,  ಜೀರಿಗೆ: ಅರ್ಧ ಚಮಚೆ.
ಇಂಗು : ಸ್ವಲ್ಪ,  ಕರಿಬೇವು. ಎಂಟರಿಂದ ಹತ್ತು.
ಮಾಡುವ ವಿಧಾನ: ಪಡವಲ ಕಾಯಿಯನ್ನು ತೊಳೆದು ವೃತ್ತಾಕಾರದಲ್ಲಿ (ಸರ್ಕಲ್ ಹಾಗೆ) ಹೆಚ್ಚಿ ಸ್ವಲ್ಪ ಬೇಯಿಸಿಡಿ. ಒಂದು ಪಾತ್ರೆಯಲ್ಲಿ ಸಾರಿನ ಪುಡಿ, ಕಡಲೆಕಾಯಿ ಪುಡಿ, ಗರಂ ಮಸಾಲೆ ಪುಡಿ, ಕೊಬ್ಬರಿ ತುರಿ, ಉಪ್ಪು ಹಾಕಿ ಬೆರೆಸಿ. ಹುಣಿಸೆ ರಸ ಸೇರಿಸಿ ಗಟ್ಟಿಯಾಗಿ ಕಲೆಸಿ. ಬೇಯಿಸಿದ ಪಡವಲ ಕಾಯಿಯ ಒಂದು ಬದಿ ಸೀಳಿ ಅದರ ಒಳಭಾಗದಲ್ಲಿ ಮಾಡಿಟ್ಟ ಚಟ್ನಿಯನ್ನು ಚೆನ್ನಾಗಿ ಹಚ್ಚಿ. (ಕೆಸುವಿನ ಎಲೆಗೆ ಹಿಟ್ಟು ಹಚ್ಚಿದಂತೆ). ಇದನ್ನು ಸುರುಳಿಯಾಗಿ ಸುತ್ತಿ. ಹೀಗೆ ಎಲ್ಲ ಪಡವಲ ತುಂಡಿಗೂ ಮಸಾಲೆ ಹಚ್ಚಿ ಸುರುಳಿ ಮಾಡಿಟ್ಟುಕೊಳ್ಳಿ. ಒಂದು ಅಗಲದ ಬಾಣಲೆಗೆ ಮೂರು ಚಮಚೆ ಎಣ್ಣೆ ಹಾಕಿ ಬಿಸಿಮಾಡಿ. ಉದ್ದಿನ ಬೇಳೆ, ಸಾಸಿವೆ, ಜೀರಿಗೆ, ಇಂಗು ಹಾಗೂ ಕರಿಬೇವಿನ ಒಗ್ಗರಣೆ ಮಾಡಿ, ಸುರುಳಿ ಮಾಡಿಟ್ಟ ಪಡವಲದ ಸುರುಳಿಗಳನ್ನು ಒಂದೊಂದಾಗಿ ಜೋಡಿಸಿ ಸಣ್ಣ ಉರಿಯಲ್ಲಿ ಎರಡೂ ಬದಿ ಬೇಯಿಸಿ. ಬೇಯುವಾಗ ಚೂರು ನೀರು ಚಿಮುಕಿಸಿ. ಈಗ ತುಂಬಿದ ಪಡವಲ ಪಲ್ಯ ತಯಾರು. ಅನ್ನ ಚಪಾತಿಯೊಂದಿಗೆ ಸವಿಯಬಹುದು.

ಕಡಲೆಕಾಯಿ ಸಜ್ಜಪ್ಪ. (ಸಿಹಿ ಕಚೋರಿ).
ಬೇಕಾಗುವ ಸಾಮಗ್ರಿಗಳು: ಹೂರಣಕ್ಕೆ   ಹುರಿದು ಪುಡಿ ಮಾಡಿದ ಕಡಲೆಕಾಯಿ ಪುಡಿ : 1/2 ಕಪ್ಪು,  ಬೆಲ್ಲದ ಪುಡಿ : 1 ಕಪ್ಪು,  ಕೊಬ್ಬರಿ ತುರಿ : 1 ಕಪ್ಪು,  ರವೆ  1 ದೊಡ್ಡ ಚಮಚೆ, ಗಸಗಸೆ : 1ಸಣ್ಣಚಮಚೆ,  ಕಣಕ ಮಾಡಿಕೊಳ್ಳಲು ಗೋಧಿ ಹಿಟ್ಟು 1 ಕಪ್ಪು. ಸಣ್ಣ ರವೆ  1/4 ಕಪ್ಪು,  ಉಪ್ಪು : ರುಚಿಗೆ ತಕ್ಕಷ್ಟು, ಅರಿಶಿನ  ಚಿಟಿಕೆ.
ತುಪ್ಪ 1 ದೊಡ್ಡ ಚಮಚೆ.
ಮಾಡುವ ವಿಧಾನ: ಮೊದಲು ಬಾಣಲೆಗೆ ಬೆಲ್ಲ, ಕೊಬ್ಬರಿ ತುರಿ ಹಾಕಿ ಹುರಿಯಿರಿ. ಅದಕ್ಕೆ ಗಸಗಸೆ, ಕಡಲೆಕಾಯಿ ಪುಡಿ, ರವೆ ಹಾಕಿ ಹುರಿಯಿರಿ. ಬೆಲ್ಲ ಎಲ್ಲಾ ಸಾಮಗ್ರಿಗಳೊಂದಿಗೆ ಬೆರೆಯಲಿ. ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ ‍ಒಂದು ಬಟ್ಟಲಿಗೆ ಹಾಕಿ. ಈಗ ಒಂದು ಅಗಲದ ಪಾತ್ರೆಗೆ ಗೋದಿ ಹಿಟ್ಟು, ರವೆ, ತುಪ್ಪ, ಉಪ್ಪು ಮತ್ತು ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಗಟ್ಟಿ ಹಿಟ್ಟು ತಯಾರಿಸಿ. ಚೆನ್ನಾಗಿ ನಾದಿ ಕೊಳ್ಳಿ. ಒಂದು ಚಮಚೆ ಎಣ್ಣೆ ಮೇಲಿನಿಂದ ಹಾಕಿ. ಈಗ ಸಣ್ಣ ಸಣ್ಣ ಉಂಡೆ ಮಾಡಿ. ಸಣ್ಣ ಉಂಡೆಗಳನ್ನು ಪೂರಿಯಂತೆ ಲಟ್ಟಿಸಿ ಮಧ್ಯೆ ಒಂದು ದೊಡ್ಡ ಚಮಚೆ ಹೂರಣವಿಡಿ. ಲಟ್ಟಿಸಿದ ಪೂರಿಯ ತುದಿಗಳನ್ನು ಮಧ್ಯೆ ತಂದು ಪೂರಿಯನ್ನು ಮುಚ್ಚಿ ಮೆದುವಾಗಿ ಲಟ್ಟಿಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಕಾದ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಎರಡೂ ಬದಿ ಕಾಯಿಸಿ.
ಸಣ್ಣ ಉರಿಯಲ್ಲಿ ಕಾಯಿಸಿದಾಗ ಅದು ಕ್ರಿಸ್ಪಿ  ಆಗುವುದು.
 

ಕಡಲೆಕಾಯಿ ಸಜ್ಜಪ್ಪ
ಕಡಲೆಕಾಯಿ ಸಜ್ಜಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT