ಶುಕ್ರವಾರ, ಜುಲೈ 1, 2022
23 °C

ಸಿಗಡಿ ಘೀ ರೋಸ್ಟ್ ಅಂಜಲ್ ತವಾ ಫ್ರೈ

ಫಾತಿಮಾ ಇಶ್ರತ್‌ Updated:

ಅಕ್ಷರ ಗಾತ್ರ : | |

ಸಿಗಡಿ ಘೀ ರೋಸ್ಟ್

ಬೇಕಾಗುವ ಸಾಮಗ್ರಿಗಳು: ಸಿಗಡಿ - 1 ಕೆ.ಜಿ, ಖಾರದಪುಡಿ - 1 ಟೇಬಲ್ ಚಮಚ, ಅರಿಸಿನ ಪುಡಿ - 1 ಟೀ ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ - 1/2 ಟೇಬಲ್ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಹುಣಸೆಹಣ್ಣು ಅಥವಾ ಲಿಂಬೆರಸ - ಸ್ವಲ್ಪ, ಕರಿಬೇವು ಸೊಪ್ಪು - ಸ್ವಲ್ಪ, ಈರುಳ್ಳಿ - ದೊಡ್ಡದು ಒಂದು

ಮಸಾಲೆಗೆ: ಒಣಮೆಣಸು - 5-6, ಕೊತ್ತಂಬರಿ ಬೀಜ - 1/2 ಟೇಬಲ್ ಚಮಚ, ಸೋಂಪು - 1/2 ಟೇಬಲ್ ಚಮಚ, ಜೀರಿಗೆ - 1/2 ಟೇಬಲ್ ಚಮಚ, ಕಾಳುಮೆಣಸು - 1 ಟೀ ಚಮಚ, ಲವಂಗ - 4, ಏಲಕ್ಕಿ - 4, ಚಕ್ಕೆ - 1 ದೊಡ್ಡದು, ಸಾಸಿವೆ - 1/2 ಟೀ ಚಮಚ, ಮೆಂತ್ಯೆ - 1/2 ಟೀ ಚಮಚ.

ಮೇಲಿನ ಎಲ್ಲವನ್ನೂ ಒಂದು ಪ್ಯಾನ್‌ನಲ್ಲಿ ಹುರಿದು ಅದನ್ನು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಅದಕ್ಕೆ ಹುಣಸೆಹಣ್ಣು ಅಥವಾ ಲಿಂಬೆರಸ ಸೇರಿಸಿ ಮಸಾಲೆ ತಯಾರಿಸಿ.

ತಯಾರಿಸುವ ವಿಧಾನ: ಪಾತ್ರೆಯೊಂದಕ್ಕೆ ಸಿಗಡಿ, ಖಾರದಪುಡಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಅರಿಸಿನ, ಉಪ್ಪು ಸ್ವಲ್ಪ ಹಾಕಿ ಚೆನ್ನಾಗಿ ಕಲೆಸಿ 1 ಗಂಟೆ ಕಾಲ ನೆನೆಸಿಡಿ. ನಂತರ ಒಂದು ಪ್ಯಾನ್‌ಗೆ ಕಲೆಸಿಟ್ಟ ಸಿಗಡಿ ಹಾಕಿ ಅರ್ಧ ಬೇಯುವವರೆಗೂ ಬೇಯಿಸಿಕೊಂಡು ನೀರು ಮತ್ತು ಸಿಗಡಿಯನ್ನು ಬೇರೆ ಬೇರೆ ತೆಗೆದಿಡಿ. ಇನ್ನೊಂದು ಪ್ಯಾನ್‌ಗೆ 3 ಚಮಚ ತುಪ್ಪ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕೈ ಆಡಿಸಿ. ನಂತರ ಅರೆದ ಮಸಾಲೆ ಸೇರಿಸಿ ಚೆನ್ನಾಗಿ ಹುರಿಯಿರಿ. ಆಮೇಲೆ ಅರ್ಧ ಬೆಂದ ಸಿಗಡಿ ಹಾಕಿ ಹುರಿಯಿರಿ. ಅದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು, ಚಿಟಿಕೆ ಸಕ್ಕರೆ ಮತ್ತು ಕರಿಬೇವು ಸೇರಿಸಿ. ಬೆಂದ ನಂತರ 1 ಚಮಚ ತುಪ್ಪ ಹಾಕಿ ಬೆರೆಸಿ ಬಿಸಿ ಬಿಸಿಯಾಗಿದ್ದಾಗಲೇ ತಿನ್ನಲು ಕೊಡಿ. ಮಳೆಗಾಲದಲ್ಲಿ ಸಿಗಡಿ ಘೀ ರೋಸ್ಟ್‌ ಬಿಸಿಯಾಗಿ ತಿನ್ನಲು ತುಂಬಾ ಚೆನ್ನಾಗಿರುತ್ತದೆ.

**

ಅಂಜಲ್ ತವಾ ಫ್ರೈ

ಬೇಕಾಗುವ ಸಾಮಗ್ರಿಗಳು: ಅಂಜಲ್ ಮೀನು - ಅರ್ಧ ಕೆ.ಜಿ, ಒಣಮೆಣಸು - 10, ಕೊತ್ತಂಬರಿ ಬೀಜ - 1 ಟೇಬಲ್ ಚಮಚ,  ಈರುಳ್ಳಿ-ಅರ್ಧ, ಹುಣಸೆಹುಳಿ - ದೊಡ್ಡ ಲಿಂಬೆ ಗಾತ್ರ, ಕಾರ್ನ್‌ಫ್ಲೋರ್‌ – 1 ಚಮಚ, ಎಣ್ಣೆ – ಸ್ವಲ್ಪ.

ತಯಾರಿಸುವ ವಿಧಾನ: ಮೆಣಸು, ಕೊತ್ತಂಬರಿ ಬೀಜ, ಈರುಳ್ಳಿ, ಹುಣಸೆಹುಳಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಅದನ್ನು ಕಪ್‌ಗೆ ಹಾಕಿ ಅದಕ್ಕೆ ಉಪ್ಪು, ಕಾರ್ನ್‌ಫ್ಲೋರ್, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮೀನಿಗೆ ಸರಿಯಾಗಿ ಮಸಾಲೆ ಸವರಿ ಅರ್ಧ ಗಂಟೆ ಇಡಿ. ನಂತರ ಒಂದು ಪ್ಯಾನ್‌ಗೆ ತೆಂಗಿನೆಣ್ಣೆ ಹಾಕಿ ದೂರ ದೂರಕ್ಕೆ ಮಸಾಲೆ ಮೀನನ್ನು ಹರಡಿ. ಮೀನಿನ ಮೇಲೆ ಸ್ವಲ್ಪ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಚೆನ್ನಾಗಿ ಕಾಯಿಸಿ. ಮೇಲೆ ಕರಿಬೇವು ಹಾಕಿ 15 ನಿಮಿಷ ಚೆನ್ನಾಗಿ ಕಾಯಿಸಿದರೆ ಅಂಜಲ್ ತವಾ ಫ್ರೈ ಸವಿಯಲು ಸಿದ್ಧ.

**

ತಂದೂರಿ ಚಿಕನ್

ಬೇಕಾಗುವ ಸಾಮಗ್ರಿಗಳು: ಚಿಕನ್ - 1 ಕೆ.ಜಿ, ಕಾಶ್ಮೀರಿ ಮೆಣಸಿನ ಹುಡಿ - 2 ಟೇಬಲ್ ಚಮಚ, ಶುಂಠಿ ಪೌಡರ್ - 1 ಟೀ ಚಮಚ, ಬೆಳ್ಳುಳ್ಳಿ ಪೇಸ್ಟ್‌ - 1ಟೀ ಚಮಚ, ವಿನೆಗರ್ - 2 ಟೇಬಲ್ ಚಮಚ, ಜೀರಿಗೆ -1 ಟೀ ಚಮಚ, ಗೋಡಂಬಿ - 12, ಕಡ್ಲೆಹಿಟ್ಟು - 2 ಟೇಬಲ್ ಚಮಚ, ಗಟ್ಟಿ ಮೊಸರು - 1/4 ಕಪ್, ಕೊತ್ತಂಬರಿ ಪುಡಿ - 2 ಟೇಬಲ್ ಚಮಚ, ಗರಂ ಮಸಾಲೆ - 1 ಟೇಬಲ್ ಚಮಚ, ಜೀರಿಗೆ ಪುಡಿ - 1/2 ಟೀ ಚಮಚ, ಕಸೂರಿಮೇಥಿ - 1/4 ಟೀ ಚಮಚ, ಕೆಂಪು ಫುಡ್ ಕಲರ್ - 1 ಚಿಟಿಕೆ, ಎಣ್ಣೆ - 5 ಟೇಬಲ್ ಚಮಚ, ಉಪ್ಪು-ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ದೊಡ್ಡ ಚಿಕನ್‌ ತುಂಡಿಗೆ ಚಾಕುವಿನಿಂದ ಗೆರೆ ಎಳೆಯಿರಿ. ನೀರು ಒರೆಸಿ. ಬೌಲ್‌ನಲ್ಲಿ ಕಾಶ್ಮೀರಿ ಮೆಣಸಿನ ಪುಡಿ, ಶುಂಠಿ–‌ಬೆಳ್ಳುಳ್ಳಿ ಪೇಸ್ಟ್, ಉಪ್ಪು, ವಿನೆಗರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಚಿಕನ್‌ಗೆ ಸರಿಯಾಗಿ ಸವರಿ ಫ್ರಿಜ್‌ನಲ್ಲಿ ಇಟ್ಟು 15 ನಿಮಿಷಗಳ ನಂತರ ತೆಗೆಯಿರಿ. ಒಂದು ಪ್ಯಾನ್‌ಗೆ 2 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಜೀರಿಗೆ, ಕಡ್ಲೆಹಿಟ್ಟು, ಗೋಡಂಬಿ ಸೇರಿಸಿ ಸಣ್ಣ ಉರಿಯಲ್ಲಿ 3 ರಿಂದ 4 ನಿಮಿಷಗಳ ಕಾಲ ಹುರಿದುಕೊಳ್ಳಿ. ಅದು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಮೊಸರು, ಕೊತ್ತಂಬರಿ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಕಸೂರಿಮೇಥಿ, ಕೆಂಪು ಕಲರ್ ಪುಡಿ ಹಾಗೂ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಮಸಾಲೆ ಹಚ್ಚಿದ ಚಿಕನ್ ಮೇಲೆ ಸುರಿದು ಚೆನ್ನಾಗಿ ಮಿಶ್ರಣ ಮಾಡಿ ಮತ್ತೆ 15 ನಿಮಿಷಗಳ ಕಾಲ ಫ್ರಿಜ್‌ನಲ್ಲಿಡಿ. ಪ್ಯಾನ್‌ಗೆ ಬೆಣ್ಣೆ ಅಥವಾ ಎಣ್ಣೆ ಸವರಿ ಚಿಕನ್ ತುಂಡುಗಳನ್ನು ಇರಿಸಿ ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ. ನಂತರ ತಿರುಗಿಸಿ ಹಾಕಿ ಚಿಕನ್‌ನ ಇನ್ನೊಂದು ಬದಿಯನ್ನು ಚೆನ್ನಾಗಿ ಬೇಯಿಸಿ ರೋಸ್ಟ್ ಮಾಡಿ. ಈಗ ನಿಮ್ಮ ಮುಂದೆ ರುಚಿಯಾದ ಚಿಕನ್ ತಂದೂರಿ ಸವಿಯಲು ಸಿದ್ಧ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು