ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಏಕತಾನತೆ ಕಳೆಯಲು ರಾಗಿಯ ಸಾಂಪ್ರದಾಯಿಕ ತಿನಿಸು

Last Updated 10 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಲಾಕ್‌ಡೌನ್ ಕಾರಣದಿಂದ ನಮಗೆ ಬೇಕಾದಂತಹ ಆಹಾರ ಸಾಮಗ್ರಿ ಖರೀದಿಸಿ, ಇಷ್ಟವಾಗುವ ಊಟ– ತಿನಿಸು ತಯಾರಿಸುವುದು ಕಷ್ಟ. ಮನೆಯಲ್ಲಿಯೇ ಲಭ್ಯವಿರುವ ಪದಾರ್ಥಗಳಿಂದ ‌ಸಿದ್ಧಪಡಿಸಿ ತಿನ್ನುವುದು ಅನಿವಾರ್ಯ. ಈ ನಡುವೆ ಹಲವರು ಸಾಂಪ್ರದಾಯಿಕ ಶೈಲಿಯ ತಿನಿಸುಗಳ ತಯಾರಿಯತ್ತ ಒಲವು ತೋರುತ್ತಿದ್ದಾರೆ. ರಾಗಿ, ಕೆಂಪಕ್ಕಿ, ನವಣೆ ಇವುಗಳ ತಿನಿಸುಗಳಿಗೆ ಮೊರೆ ಹೋಗುತ್ತಿದ್ದಾರೆ. ರಾಗಿಯಿಂದ ತಯಾರಿಸುವ ಕೆಲವು ಖಾದ್ಯಗಳ ಪರಿಚಯ ಇಲ್ಲಿದೆ. ಇವು ಮಕ್ಕಳಿಗೂ ಇಷ್ಟವಾಗಬಹುದು ಎನ್ನುತ್ತಾರೆ ರೇಷ್ಮಾ.

ರಾಗಿ ರೊಟ್ಟಿ

ಬೇಕಾಗುವ ಸಾಮ‌ಗ್ರಿಗಳು

ರಾಗಿಹಿಟ್ಟು – 2ಕಪ್‌, ಈರುಳ್ಳಿ – 2 ಮಧ್ಯಮ ಗಾತ್ರದ್ದು (ಚಿಕ್ಕದಾಗಿ ಹೆಚ್ಚಿಕೊಂಡಿದ್ದು), ಕೊತ್ತಂಬರಿ ಸೊಪ್ಪು ಅಥವಾ ಮೆಂತ್ಯೆ ಸೊಪ್ಪು– 1/2ಕಪ್‌ (ಚಿಕ್ಕದಾಗಿ ಹೆಚ್ಚಿಕೊಂಡಿದ್ದು)‌‌, ಹಸಿ ಮೆಣಸಿನಕಾಯಿ – 2 ರಿಂದ 3 (ಸಣ್ಣದಾಗಿ ಕತ್ತರಿಸಿಕೊಂಡಿದ್ದು), ಜೀರಿಗೆ – 1ಚಮಚ, ಉಪ್ಪು– ರುಚಿಗೆ, ಬಿಸಿ ನೀರು– 2 ಕಪ್‌, ತೆಂಗಿನತುರಿ (ಬೇಕಿದ್ದರೆ)

ತಯಾರಿಸುವ ವಿಧಾನ

ಮೊದಲು ಮೇಲೆ ಹೇಳಿದ ಸಾಮಗ್ರಿಗಳಲ್ಲಿ ನೀರನ್ನು ಹೊರತುಪಡಿಸಿ ಎಲ್ಲವನ್ನೂ ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಂತರ ಅದಕ್ಕೆ ಕುದಿ ನೀರು ಹಾಕಿ 5 ನಿಮಿಷ ಮುಚ್ಚಿಡಿ. ಈ ಮಿಶ್ರಣವನ್ನು ಸ್ವಲ್ಪ ಗಟ್ಟಿಯಾಗಿ ಕಲೆಸಿಕೊಳ್ಳಬೇಕು. ತೆಳ್ಳನೆಯ ಅಲ್ಯೂಮಿನಿಯಂ ಕೋಟ್‌ ಇರುವ ಶೀಟ್‌ ಮೇಲೆ ಅಥವಾ ಪೇಪರ್‌ ಪ್ಲೇಟ್‌ ಮೇಲೆ ಹಿಟ್ಟನ್ನು ಹಾಕಿ ತಟ್ಟಿ. ಶೀಟ್‌ ಇಲ್ಲದಿದ್ದರೆ ತವಾ ಬಿಸಿಯಾದ ಮೇಲೆ ಹಿಟ್ಟನ್ನು ತವಾದ ಮೇಲೆ ಹಾಕಿ ಕೈಯನ್ನು ನೀರಿನಲ್ಲಿ ಒದ್ದೆ ಮಾಡಿಕೊಂಡು ತಟ್ಟಬೇಕು. ರೊಟ್ಟಿಗೆ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಕೆಂಪಗಾಗುವವರೆಗೂ ಕಾಯಿಸಬೇಕು. ಇದನ್ನು ಚಟ್ನಿ, ತುಪ್ಪ ಅಥವಾ ಬೆಣ್ಣೆಯೊಂದಿಗೆ ತಿಂದರೆ ಚೆನ್ನಾಗಿರುತ್ತದೆ.

ರಾಗಿ ಇಡ್ಲಿ

ಬೇಕಾಗುವ ಸಾಮಗ್ರಿಗಳು

ಉದ್ದಿನಬೇಳೆ – 1 ಕಪ್‌, ಇಡ್ಲಿ ರವೆ – 2 ಕಪ್‌, ರಾಗಿಹಿಟ್ಟು – 2 ಕಪ್‌, ದಪ್ಪ ಅವಲಕ್ಕಿ – 2 ಚಮಚ
ಉಪ್ಪು – ರುಚಿಗೆ

ಒಗ್ಗರಣೆಗೆ

ಎಣ್ಣೆ – 2 ಟೇಬಲ್ ಚಮಚ, ಸಾಸಿವೆ – ಚಿಟಿಕೆ, ಜೀರಿಗೆ – ಚಿಟಿಕೆ, ಕರಿಬೇವು – 5 ರಿಂದ 6 ಎಸಳು, ಕಡಲೆಬೇಳೆ – ಸ್ವಲ್ಪ, ಗೋಡಂಬಿ (ಬೇಕಿದ್ದರೆ)

ತಯಾರಿಸುವ ವಿಧಾನ

ಉದ್ದಿನಬೇಳೆ ಹಾಗೂ ಅವಲಕ್ಕಿಯನ್ನು 6 ಗಂಟೆ ನೆನೆ ಹಾಕಿ. ನಂತರ ಈ ಎರಡನ್ನೂ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇಡ್ಲಿ ರವೆಯನ್ನು ತೊಳೆದು ಹದಿನೈದು ನಿಮಿಷ ನೆನೆ ಹಾಕಿಕೊಳ್ಳಿ. ನಂತರ ರುಬ್ಬಿದ ಮಿಶ್ರಣಕ್ಕೆ ರವೆ ಹಾಗೂ ರಾಗಿಹಿಟ್ಟು ಸೇರಿಸಿ. ರಾತ್ರಿ ಪೂರ್ತಿ ಹಿಟ್ಟನ್ನು ಹುದುಗು ಬರಲು ಬಿಡಿ. ಮರುದಿನ ಒಗ್ಗರಣೆ, ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಇಡ್ಲಿ ಪಾತ್ರೆಯಲ್ಲಿ ಇಡ್ಲಿ ತಯಾರಿಸಿ.

ರಾಗಿ ಅಂಬಲಿ

ಬೇಕಾಗುವ ಸಾಮಗ್ರಿಗಳು

ರಾಗಿಹಿಟ್ಟು – ಅರ್ಧ ಕಪ್‌, ಈರುಳ್ಳಿ – 1 ಮಧ್ಯಮ ಗಾತ್ರದ್ದು (ಸಣ್ಣಗೆ ಹೆಚ್ಚಿಕೊಂಡಿದ್ದು, ಹಸಿಮೆಣಸು – 1 (ಸಣ್ಣಗೆ ಹೆಚ್ಚಿದ್ದು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ, ಜೀರಿಗೆ ಪುಡಿ – 1 ಚಮಚ, ಮಜ್ಜಿಗೆ – 2 ಕಪ್‌, ನಿಂಬೆಹಣ್ಣು – 1, ನೀರು – ಅರ್ಧ ಲೀಟರ್

ತಯಾರಿಸುವ ವಿಧಾನ

ಒಂದು ಕಪ್ ನೀರಿನಲ್ಲಿ ಅರ್ಧ ಕಪ್ ರಾಗಿಹಿಟ್ಟನ್ನು ಹಾಕಿ ಗಂಟು ಬರದಂತೆ ಮಿಶ್ರಣ ಮಾಡಿ. ಮೂರು ಕಪ್ ನೀರನ್ನು ಕುದಿಸಿ ಅದರಲ್ಲಿ ತಯಾರಿಸಿಟ್ಟುಕೊಂಡ ರಾಗಿಹಿಟ್ಟಿನ ಮಿಶ್ರಣವನ್ನು ಸೇರಿಸಿ. ಅದನ್ನು ಚೆನ್ನಾಗಿ ಕುದಿಸಿ. ಉಂಡೆಯಾ‌ಗದಂತೆ ನೋಡಿಕೊಳ್ಳಿ. ಅದು ತಣ್ಣದಾಗ ಮೇಲೆ ಮಜ್ಜಿಗೆ, ಈರುಳ್ಳಿ, ಹಸಿಮೆಣಸು, ಕೊತ್ತಂಬರಿಸೊಪ್ಪು, ಉಪ್ಪು ಹಾಗೂ ಜೀರಿಗೆ ಪುಡಿ ಸೇರಿಸಿ ಮಿಶ್ರಣ ಮಾಡಿ. ನಂತರ ನಿಂಬೆರಸ ಸೇರಿಸಿ ಸೇವಿಸಿ.

ರಾಗಿ ಹಾಲ್ಬಾಯಿ

ರಾಗಿ – 1 ಕಪ್‌, ಬೆಲ್ಲ – ಒಂದೂವರೆ ಕಪ್‌, ಏಲಕ್ಕಿ – ಸ್ವಲ್ಪ, ತೆಂಗಿನತುರಿ – ಅರ್ಧ ಕಪ್‌

ತಯಾರಿಸುವ ವಿಧಾನ

ರಾಗಿಯನ್ನು ಚೆನ್ನಾಗಿ ತೊಳೆದು 8 ಗಂಟೆಗಳ ಕಾಲ ನೆನೆಹಾಕಿ. ಮಿಕ್ಸರ್ ಜಾರ್‌ಗೆ ಏಲಕ್ಕಿ, ತೆಂಗಿನತುರಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ನೆನೆದ ರಾಗಿಯನ್ನು ರುಬ್ಬಿ. ರುಬ್ಬಿಕೊಂಡ ಮಿಶ್ರಣವನ್ನು ಜರಡಿಯಿಂದ ಚೆನ್ನಾಗಿ ಸೋಸಿಕೊಳ್ಳಬೇಕು. (ಇದಕ್ಕೆ ಸಣ್ಣ ತೂತುಗಳಿರುವ ಜಾಲರಿ ಬಳಸಿ). ಬೇರೆ ಪಾತ್ರೆಯೊಂದರಲ್ಲಿ ಬೆಲ್ಲವನ್ನು ಕರಗಲು ಇಡಬೇಕು. ದಪ್ಪ ತಳದ ಪಾತ್ರೆಗೆ ಶೋಧಿಸಿದ ತೆಂಗಿನ ಹಾಲು ಮತ್ತು ರಾಗಿ ಮಿಶ್ರಣ, ಕರಗಿಸಿದ ಬೆಲ್ಲವನ್ನು ಜಾಲರಿಯಲ್ಲಿ ಸೋಸಿ ಹಾಕಿ. ನಂತರ್ ಗ್ಯಾಸ್ ಆನ್‌ ಮಾಡಿ ಆ ಪಾತ್ರೆಯಲ್ಲಿರುವ ಮಿಶ್ರಣವನ್ನು ಸೌಟ್‌ನಿಂದ ತಿರುಗಿಸುತ್ತಿರಿ. ಗಂಟಾಗದಂತೆ ತಿರುವುತ್ತಲೇ ಇರಬೇಕು. ಅದು ದಪ್ಪಗಾಗಿ ಒಂದು ಹದಕ್ಕೆ ಬಂದ ಮೇಲೆ ಪ್ಲೇಟ್‌ಗೆ ತುಪ್ಪ ಸವರಿ ಸುರಿಯಿರಿ. ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ತಿನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT