ಶನಿವಾರ, ಅಕ್ಟೋಬರ್ 19, 2019
27 °C

ಮಡಹಾಗಲಕಾಯಿಯ ಖಾದ್ಯಗಳು

Published:
Updated:

ಮಡಹಾಗಲ ಮಜ್ಜಿಗೆಹುಳಿ

ಬೇಕಾಗುವ ಸಾಮಗ್ರಿಗಳು: ಮಡಹಾಗಲಕಾಯಿ – 8-10, ತೆಂಗಿನಕಾಯಿ – 1, ಒಣಮೆಣಸು – 4, ಮಜ್ಜಿಗೆ – 1/2 ಲೀ. ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಮಡಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಹೆಚ್ಚಿ, ಉಪ್ಪು ಹಾಕಿ ನೀರು ಹಾಕಿ ಬೇಯಿಸಬೇಕು. ನಂತರ ತೆಂಗಿಕಾಯಿ, ಒಣಮೆಣಸು ಹಾಕಿ ನುಣ್ಣಗೆ ರುಬ್ಬಿ ಬೇಯಿಸಿದ ಹೋಳಿಗೆ ಹಾಕಿ. ಸ್ವಲ್ಪ ಹುಳಿಮಜ್ಜಿಗೆ, ಸ್ವಲ್ಪ ಸಿಹಿಮಜ್ಜಿಗೆ ಹಾಕಿ ಒಲೆಯ ಮೇಲಿಟ್ಟು ಸೌಟಿನಿಂದ ತಿರುವುತ್ತಾ ಕುದಿಸಿ. ಪರಿಮಳಕ್ಕೆ ಎರಡು ಹಸಿಮೆಣಸು ಹಾಗೂ ಅರ್ಧ ಚಮಚ ಅರಿಸಿನವನ್ನು ಹಾಕಿ. ಕುದಿದಾಗ ಇಳಿಸಿ ಸಾಸಿವೆ ಕರಿಬೇವು ಸೊಪ್ಪಿನ ಒಗ್ಗರಣೆ ಕೊಡಿ.

ಮಡಹಾಗಲ ಸಾಂಬಾರು

ಬೇಕಾಗುವ ಸಾಮಗ್ರಿಗಳು: ಮಡಹಾಗಲಕಾಯಿ – 8-10, ಆಲೂಗೆಡ್ಡೆ – 1, ತೊಗರಿಬೇಳೆ – 1 ಕಪ್, ಹುಣಸೆಹಣ್ಣು – ಸ್ವಲ್ಪ, ತೆಂಗಿನಕಾಯಿ – ಅರ್ಧ, ಒಣಮೆಣಸು – 5-6, ಕೊತ್ತಂಬರಿ – 1 ಚಮಚ, ಉದ್ದಿನ ಬೇಳೆ – 1 ಚಮಚ, ಸಾಸಿವೆ, ಎಣ್ಣೆ, ಕರಿಬೇವು ಸ್ವಲ್ಪ. ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ತೊಗರಿಬೇಳೆಯನ್ನು ತೊಳೆದು ಬೇಯಿಸಿಟ್ಟುಕೊಂಡು ಮಡಹಾಗಲಕಾಯಿ ಹಾಗೂ ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು ಹೆಚ್ಚಿ ಉಪ್ಪು ಹಾಕಿ ಬೇಯಿಸಿ. ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಒಂದು ಚಮಚ ಎಣ್ಣೆ ಹಾಕಿ ಮೆಣಸಿನಕಾಯಿ, ಕೊತ್ತಂಬರಿ, ಉದ್ದಿನಬೇಳೆ, ಮೆಂತ್ಯ, ಜೀರಿಗೆ ಹಾಕಿ ಹುರಿದು ಕೆಂಪಗೆ ಆಗುವಾಗ ಇಳಿಸಿ. ತೆಂಗಿನತುರಿ ಮತ್ತು ಹುಣಸೆಹಣ್ಣಿನೊಂದಿಗೆ ರುಬ್ಬಿ. ಬೇಯಿಸಿಟ್ಟ ಬೇಳೆ ಹಾಗೂ ತರಕಾರಿಗೆ ಬೆರೆಸಿ. ಬಳಿಕ ಕುದಿಸಿ. ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಕೊಡಿ.

ಮಡಹಾಗಲಕಾಯಿ ಪೋಡಿ

ಬೇಕಾಗುವ ಸಾಮಗ್ರಿಗಳು:  ಮಡಹಾಗಲಕಾಯಿ – 5-6, ಕಡಲೆಹಿಟ್ಟು – 1 ಕಪ್, ಖಾರದ ಪುಡಿ – ಸ್ವಲ್ಪ‌, ಉಪ್ಪು – ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ

ತಯಾರಿಸುವ ವಿಧಾನ: ಮಡಹಾಗಲಕಾಯಿಯನ್ನು ಉರುಟಾಗಿ ಕತ್ತರಿಸಿ. ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಉಪ್ಪು, ಖಾರದಪುಡಿ ಹಾಕಿ ದೋಸೆಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ. ಕತ್ತರಿಸಿದ ಮಡಹಾಗಲಕಾಯಿ ಚೂರನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ.

 

ಮಡಹಾಗಲಕಾಯಿ ಬಾಳಕ

ಬೇಕಾಗುವ ಸಾಮಗ್ರಿಗಳು: ಮಡಹಾಗಲಕಾಯಿ 5-6, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಮಜ್ಜಿಗೆ

ತಯಾರಿಸುವ ವಿಧಾನ: ಮಡಹಾಗಲಕಾಯಿಯನ್ನು ತೊಳೆದು ಕತ್ತರಿಸಿ ಉಪ್ಪು, ಖಾರದಪುಡಿ ಹಾಕಿ ಬೇಯಿಸಿ. ಬಳಿಕ ಮಜ್ಜಿಗೆಯಲ್ಲಿ ಒಂದು ದಿನ ನೆನೆಹಾಕಿ ಬಿಸಿಲಿನಲ್ಲಿ ಗರಿಗರಿಯಾಗುವವರೆಗೆ ಒಣಗಿಸಿ. ನಂತರ ಡಬ್ಬಿಯಲ್ಲಿ ಶೇಖರಿಸಿ.

 


ಮಡಹಾಗಲಕಾಯಿ ಬೋಂಡ

ಬೇಕಾಗುವ ಸಾಮಗ್ರಿಗಳು: ಮಡಹಾಗಲಕಾಯಿ – 7-8, ಕಡಲೆಹಿಟ್ಟು – 2 ಕಪ್, ಒಣಮೆಣಸಿನ ಹುಡಿ – 1 ಚಮಚ, ತುಪ್ಪ – 2 ಚಮಚ, ಆಲೂಗೆಡ್ಡೆ – 2, ಬಟಾಣಿ – 1 ಕಪ್, ಈರುಳ್ಳಿ – 2, ಕೊತ್ತಂಬರಿ ಸೊಪ್ಪು, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ

ತಯಾರಿಸುವ ವಿಧಾನ: ಒಲೆಯ ಮೇಲೆ ಬಾಣಲೆಯನ್ನಿಟ್ಟು ಸಾಸಿವೆ ಒಗ್ಗರಣೆ ಮಾಡಿಕೊಂಡು ಸಣ್ಣಗೆ ಹೆಚ್ಚಿದ ತರಕಾರಿಗಳನ್ನು ಉಪ್ಪು ಹಾಕಿ ಪಲ್ಯ ಮಾಡಿಕೊಳ್ಳಿ. ಕೊತ್ತಂಬರಿ ಸೊಪ್ಪು, ಹಸಿಮೆಣಸನ್ನು ಸಣ್ಣಗೆ ಹೆಚ್ಚಿ ನಿಂಬೆಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ. ಕಡಲೆ ಹಿಟ್ಟನ್ನು ಮೆಣಸಿನ ಪುಡಿ ಹಾಕಿ ನೀರಿನೊಂದಿಗೆ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಒಲೆಯ ಮೇಲೆ ಬಾಣಲೆಯನ್ನಿಟ್ಟು ಎಣ್ಣೆ ಕಾದನಂತರ ಪಲ್ಯದ ಉಂಡೆಗಳನ್ನು ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕರಿಯಿರಿ.

Post Comments (+)